ವೈಫ್ ಆಫ್ ಪೋಯಟ್ ಅಲ್ಲ, ಲೈಫ್ ಆಫ್ ಪೋಯಟ್ ಆಗಿದ್ದವರು ಶಾಂತಾದೇವಿ ಕಣವಿ

Date: 23-05-2020

Location: ಧಾರವಾಡ


ಇತ್ತಿಚೆಗೆ ನಮ್ಮನ್ನಗಲಿದ ಲೇಖಕಿ, ಸಾಹಿತಿ ಶಾಂತಾದೇವಿ ಅವರಿಗೆ ಕವಿ ರಾಜಕುಮಾರ‌ ಮಡಿವಾಳರ‌ ಒಂದು ನೆನಪಿನ ಬರಹದ ಮೂಲಕ ಶ್ರದ್ದಾಂಜಲಿ ಅರ್ಪಿಸಿದ್ದು ಇಲ್ಲಿದೆ. 

ಶುದ್ಧ ಕನ್ನಡ ಜನಪದ ಹೃದಯದ, ಆಡು ಮಾತಿನ ಮಣ್ಣ ಕಥೆಗಾರ್ತಿ. ಎಷ್ಟೆಲ್ಲ ಹುಡುಕಿದಾಗಿಯೂ ಇವರದೊಂದು ಫೋಟೊ ಸಿಗಲಿಲ್ಲ. ಗೂಗಲ್ ತಡಕಿದಾಗ ಇದು ಸಿಕ್ಕಿತು. ಒಬ್ಬ ಪ್ರಮುಖ ಕಥೆಗಾರ್ತಿ, ಒಂದು ಭಾಷೆ, ನಾಡ ಸಂಸ್ಕೃತಿ ಬದುಕಿ, ಬರೆದವರ ಭಾವಚಿತ್ರ ಸಿಗುವುದರ 'ಹೇರಳತ್ವ’ ಕಂಡು ಬೇಸರವಾಯ್ತು.

ಜಾತ್ರೆ ಮುಗಿದಿತ್ತು, ಬಾಳೆಯ ದಿಂಡು ನನಗೆ ಅವರ ಕಥೆಗಳಲ್ಲಿ ತುಂಬ ಇಷ್ಟವಾದ ಕಥೆಗಳು, ಅವರು ಬರಹದಲ್ಲೂ ಕೂಡ ಕಥೆ ಹೇಳುತ್ತಿದ್ದರು, ಪ್ರತಿ ಪಾತ್ರ, ಹಳ್ಳಿಯ ಹೆಣ್ಣು ಮಕ್ಕಳ ನೈಜ ಮುಗ್ಧತೆ, ಕಷ್ಟ, ಸಂಕಷ್ಟ, ಹೆಚ್ಚು ಕನಸಿರದ ಇದ್ದೊಂದು ಕನಸೂ ಕೈಗೂಡದ, ಈಗಲೂ ಜೀವಂತ ಜೀವಂತ ಪ್ರಸ್ತುತ ಅನ್ನುವ ಕಥೆಗಳವು. ಕಥೆಯಲ್ಲಿನ ಸಾವಿತ್ರಿಗೆ ಪ್ರಾಯಶಃ ಸಾವೇ ಇಲ್ಲ, ಸಾವಿಲ್ಲದ ಒಂದು ಪಾತ್ರ ಬಿಟ್ಟು-ಕೊಟ್ಟು ಶಾಂತಮ್ಮ ಹೀಗೆ ಹೋಗಬಹುದೆ? ಸಧ್ಯ ವಯಸ್ಸಾಗಿತ್ತು, ಅವರ "ಚೆಂಬೆಳಕು" ಮನೆಗೆ ಭೇಟಿಕೊಟ್ಟವರು, ಇವರ ಕೈ ಚಹಾ ಕುಡಿಯದೆ ಬಂದಿರಲಿಕ್ಕಿಲ್ಲ.

ಕೊನೆಯದಾಗಿ ನನ್ನ ಮನದ ಒಂದು ಮಾತು, ಈ ಚಿತ್ರದಲ್ಲಿ ಶಾಂತಾದೇವಿಯವರ ಹೆಸರಿನ ಕೆಳಗೆ ಶ್ರೀಮತಿ ಕಣವಿ ವೈಫ್ ಆಫ್ ಪೋಯಟ್ ಅಂತ ಬರೆದಿದೆ, ಶಾಂತಾದೇವಿಯರು ಲೈಫ್ ಆಫ್ ಪೋಯಟ್ ಆಗಿದ್ದವರು ಮತ್ತು ಆ ಅಡಿಬರಹವಿಲ್ಲದೆಯೂ ಕನ್ನಡ ಸಾಹಿತ್ಯದಲ್ಲಿ ಪ್ರಖರವಾಗಿ ಗುರುತಿಸಿಕೊಳ್ಳಬಹುದಾದ ಸಾಮರ್ಥ್ಯ ತಮ್ಮ ಕೃತಿಗಳ ಮೂಲಕವೆ ಹೊಂದಿದ್ದರು.

ನೀವು ಹೊರಟು ನಿಂತ ಹೊತ್ತಲ್ಲಿ, ಇಲ್ಲಿ ಭರ್ಜರಿ ಮಳೆ, ದೊಡ್ಡವರು ಹೋಗುವಾಗಲೂ ಕೂಡ ಸುಖ ಕೊಟ್ಟು ಹೋಗುತ್ತಾರಂತೆ, ನಿಮ್ಮ ಧಾರವಾಡಕ್ಕೆ ಮುಂಗಾರ ಹರಿಸಿ, ತುಂಬ ಮುಂದೆ ಹೋಗಿಬಿಟ್ಟರಿ. ತಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅನ್ನುವುದು ಪ್ರಾರ್ಥನೆ, ಸ್ವತಃ ಶಾಂತಿಗೆ ದೇವಿ ನೀವು, ಶಾಂತಿ ನಿಮ್ಮ ಅಧಿನದಲ್ಲಿದ್ದದ್ದು ನೀವು ಇದ್ದಾಗ ಕಣ್ಣಾರೆ ಕಂಡಿದ್ದೇವೆ. ತಾಯಿ ಕೋಟಿ ಶರಣು.

ಹೋಗಿ ಬನ್ನಿ, ನನ್ನ ಕವಿಯ ಜೀವಕ್ಕೆ ಈ ಅಗಲಿಕೆ ತಡೆದುಕೊಳ್ಳುವ ಚೈತನ್ಯ ದೇವರು ಕರುಣಿಸಲಿ. ಕಲ್ಯಾಣನಗರ ಅಂದರೆ ಧಾರವಾಡದ ರಾಜಧಾನಿ, ಅಲ್ಲಿಗೆ ಬಂದು ಹೋಗುವರ ಸಂಖ್ಯೆ ಹೆಚ್ಚಿಸಿದವರು ನೀವು , ಆ ಬಂದು ಹೋಗುವ ಚೆಲುವಿಕೆಗೆ, ಚೆಂಬೆಳಕಿನಲ್ಲಿ ಸದಾ ಬೆಳಕಿರಲಿ.

ಲಲಿತ ಶೃಂಗಾರ ರಸಪೂರ್ಣೆ ಚಂದಿರವರ್ಣೆ

ದೃಷ್ಟಿ ತೆಗೆಯಲು ಒಂದು ಮುತ್ತನಿಡುವೆ;

ನಿನ್ನ ಸಕ್ಕರೆ ನಿದ್ದೆ ಸವಿಗನಸ ಕಥೆ ಹೇಳು

ಒಂದು ಚಣ ಜಗವನ್ನೇ ಮರೆತು ಬಿಡುವೆ...

-ಚೆನ್ನವೀರ ಕಣವಿ.

ಸಾಧ್ಯವಾದರೆ ನಮ್ಮ ಭಾಗ್ಯ ತೆರೆದು, ಈ ಸಾಲು ಸತ್ಯವಾಗಲಿ.

ರಾಜಕುಮಾರ‌ ಮಡಿವಾಳರ

MORE NEWS

ಅಸಂಖ್ಯ ಸ್ತ್ರೀಯರ ನೈಜ ಚಿತ್ರಣ ‘ನೋ...

04-07-2020 ಬೆಂಗಳೂರು

‘ಲೇಖಿಕಾ ಸಾಹಿತ್ಯ ವೇದಿಕೆ’ ಆಯೋಜಿಸಿದ್ದ ಪುಸ್ತಕಾವಲೋಕನದಲ್ಲಿ ಈ ಬಾರಿ ಲೇಖಕಿ ಡಿ. ಯಶೋದಾ ಅವರು ಬೇ...

ತಿರುಪತಿ ಭಂಗಿ ಅವರ ‘ಕೆಂಪರೋಡ್’ ಕೃ...

03-07-2020 ಬೆಂಗಳೂರು

ಕಥೆಗಾರ ಅಬ್ಬಾಸ್ ಮೇಲಿನಮನಿ ಹಾಗೂ ಸಾಹಿತಿ ಪ್ರಕಾಶ್ ಖಾಡೆ ಅವರು ತಿರುಪತಿ ಭಂಗಿ ಅವರ ‘ಕೆಂಪರೋಡ್’ ಕ...

ವಿವಿಧ ಅಕಾಡೆಮಿಗಳಿಗೆ ನೂತನ ಸದಸ್ಯರ...

02-07-2020 ಬೆಂಗಳೂರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಅ...

Comments

ಸ್ಪರ್ಧೆಯ ಕತೆಗಳು
ಸ್ಪರ್ಧೆಯ ಕವಿತೆಗಳು
Magazine
With us

Top News
Exclusive
Top Events