Poem

ಅಜ್ಜಿ ಚಿಟ್ಟೆ

ರೆಕ್ಕೆ ಕತ್ತರಿಸಿದ ಅಜ್ಜಿ ಚಿಟ್ಟೆಯನ್ನು
ಮಾಯವಾಗಿಸಿದ್ದು
ಕಾಲದ ಜೋಪಡಿ ಮುಚ್ಚಿಹಾಕಿದೆ
ಹಾರಾಡುವ ಹದ್ದಿಗೂ
ಹುಡುಕಲು ಕ್ಷಣ ಪುರುಸೊತ್ತಿಲ್ಲ
ಸಾಲಾಗಿ ಎದ್ದಿವೆ ಅಂಗಡಿಯ ಮುಂಗಟ್ಟುಗಳು
ಆಟಿಕೆಯಾದವು ಇವು ಮಕ್ಕಳ ಬಾಯಲ್ಲೂ


ಸಪೂರ ನುಣಪಿನ
ಹೊಳೆವ ಮುಚ್ಚಟೆಯಲ್ಲಿ
ದುಂಡನೆ ಉದ್ದನೆ
ಬಣ್ಣದ ಚಾಕಲೇಟಿನ ಗುಳಿಗೆ
ಬಿಳಿ ಏಪ್ರಾನಿನ ಕೆಳಗೆ
ತತ್ಕಾಲದ ತಾತ್ಕಾಲಿಕ ಉಪಶಮನಕ್ಕೆ
ಅಗ್ಗವಾಗಿ ಲಭ್ಯ ಮಾರುಕಟ್ಟೆಯಲ್ಲಿ
ತೆರೆದ ಹೃದಯದಿ ನಿರ್ವಹಿಸುವವು
ತಮಗೆ ವಹಿಸಿದ ಪಾತ್ರ

 

 

 

 

 

 

 

 

 

 

 

 

ಕಲುಷಿತ ನೆತ್ತರನ್ನು ಶುದ್ಧೀಕರಿಸುವ
ಮಂದಾದ ರಕ್ತವನ್ನು ತಿಳಿಗೊಳಿಸುವ
ಗರ್ಭವನ್ನು ನಿರಾಳವಾಗಿ ಶುಚಿಗೊಳಿಸಿ
ರಕ್ತನಾಳವನ್ನು ಹಿಗ್ಗಿಸುವ
ಸಿಟ್ಟನ್ನು ಅಂಕೆಯಲ್ಲಿಟ್ಟು ಮಂದಹಾಸ ಬೀರುವ
ಶನಿಯುಂಗುರದ ಬೊಜ್ಜು ಕರಗಿಸಿ
ಮಾಂಸಖಂಡಗಳ ಛೇಧಿಸಿ
ನಿರ್ದಿಷ್ಟ ನರ ತಲುಪಿ ಕ್ರಿಯ ಮಾಡಿ
ವಾಯುವನ್ನೂ ಹೊಡೆದೋಡಿಸಿ
ಬದುಕಿಸಿ ಮಾನವೀಯತೆ ಮೆರೆಯುತ್ತವೆ


ಇವೆಲ್ಲವೂ ಉತ್ತಮ ಆ‘ರೋಗ’ಕ್ಕಾಗಿ
ಎಲ್ಲಾ ಹೀನತೆಯ ಮೀರುವ ಇವು
ಕಾಲು ಶತಮಾನದಿಂದ ಬಿಡುಗಡೆಗಂ‍ಟದ
ಜೀವದ್ರವ್ಯ
ಇಲ್ಲಿ ಗುಟ್ಟಾಗಿ ಅಡಗಿವೆ ನಿಮ್ಮ ನಿತ್ಯ ಚೇತನಾದಿಗಳು
ಅಕೋ ಇನ್ನೇಕೆ ತಡ ಬನ್ನಿ ಬನ್ನಿ ಕೊಂಡುಕೊಳ್ಳಿ
ಕೊಂಡು ನಿಧಾನವಾಗಿ ಸಾಯಿರಿ

ಎಡೆಯೂರು ಪಲ್ಲವಿ

ಎಡೆಯೂರು ಪಲ್ಲವಿ ಎಂಬ ನಾಮಾಂಕಿತ ಮೂಲಕ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಯುವ ಕತೆಗಾರ್ತಿ ಪಲ್ಲವಿ ಬಿ.ಎನ್. ಅವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಎಡೆಯೂರಿನವರು. ತಂದೆ ನಾಗರಾಜು ಬಿ.ಎನ್, ತಾಯಿ ಅನಸೂಯ.  ಫಾರ್ಮಸಿಯಲ್ಲಿ ಡಿಪ್ಲೊಮಾ, ಬಿ.ಎಸ್ಸಿ ಪದವೀಧರರು. ಪ್ರಸ್ತುತ ಬುಕ್ ಬ್ರಹ್ಮ ಡಿಜಿಟಲ್ ಸಂಸ್ಥೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ಕಥೆ, ಸಣ್ಣ ಕಥೆ, ಕವನ, ಲೇಖನಗಳು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ‘ಭೂಮ್ತಾಯಿ ಅಜ್ಜಿ ಆದ್ಲಾ?’ ಇವರ ಚೊಚ್ಚಲ ಕೃತಿ.

More About Author