Poem

ಅಳಿ

ಎಳೆಯ ಬಿಕ್ಕುವಿನ
ದಟ್ಟಿ ಹರಿದು ಹೋಯಿತು.
ಬುದ್ಧಗುರುವನ್ನು ಮುಟ್ಟಿತು ತಲ್ಲಣ

'ಗುರುವೇ, ಹರಿದು ಹೋಯಿತು ದಟ್ಟಿ,
ಏನು ಮಾಡುವುದು?'

'ಹರಿದರೇನಾಯಿತು ಮಗೂ, ಹಾಸಿಮಲಗು'

ದಿನ ಉರುಳಿದವು
ಹಾಸಿ ಹಾಸಿ ಮಲಗಿ
ದಟ್ಟಿ ಇನ್ನಷ್ಟು ಜೀರ್ಣ

“ಗುರುವೇ, ಹಾಸಿ ಹಾಸಿ ದಟ್ಟಿ
ಮತ್ತೆಲ್ಲೆಲ್ಲೋ ಹಿಸಿಯಿತು...'

`ಹಿಸಿದರೇನು ಮಗೂ,
ನೆಲ ವರಸಲು ಬಳಸು...’

ದಿನ ಉರುಳಿದವು
ಕೊಳೆ ವರವರೆಸಿ
ದಟ್ಟಿ ಚಿಂದಿಚೂರು

ಕಳೆದುಕೊಳ್ಳುವುದ ಅರಿಯದ
ಎಳೆಸು ದನಿ
ಕ್ಷೀಣವಾಗಿ ಹೇಳಿತು,
ಗುರುವೇ, ವರೆಸಿದ ದಟ್ಟಿ
ನೂರು ತುಕುಡಾ ತುಂಡು...’

‘ತುಂಡು ಬಟ್ಟೆಯಾದರೇನು ಮಗೂ,
ಕಾಲು ವರೆಸಲು ಹಾಕು...’

ದಿನ ಉರುಳಿದವು
ಹೋಗಿ ಬರುವವರ ಪಾದಧೂಳಿ
ನೆತ್ತಿ ಮೇಲೆ ಹೊತ್ತೊತ್ತು
ದಟ್ಟಿ ಬಣ್ಣ ಸಮೇತ ಕರಗಿತು
ಕಷಾಯಕ್ಕೆ ಮಣ್ಣ ಬಣ್ಣ

ತಾನುಟ್ಟ ಮೊದಲ ವಸ್ತ್ರವಿಂದು
ಮಾಸಿದ ಹಿಂಜು ನೂಲಿನ ಗುಪ್ಪೆ
ಎಳೆಯ ಜೀವದ ಮರುಕ
ಕಣ್ಣ ಪಸೆಯಾಗಿ ಇಂಗತೊಡಗಿತು

ಆ ಇರುಳು
ಕಗ್ಗತ್ತಲಿಗೆ ಎಚ್ಚುವ ಎಳೆಯ ಬಿಕ್ಕು
‘ದುಗುಡವೇಕೆ ಮಗೂ?
ಅಗತ್ಯವೆಂದು ನಂಬಿದ್ದು ಅನಿವಾರ್ಯವಲ್ಲ

-ಅನುಪಮಾ ಎಚ್.ಎಸ್

ಆಡಿಯೋಟಟ

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ಬಿ. ಆರ್. ಅಂಬೇಡ್ಕರ್ ಜೀವನ ಚರಿತ್ರೆ, ನಾನು ಕಸ್ತೂರ್ – ಕಸ್ತೂರಬಾ ಜೀವನ ಕಥನ, ಜನ ಸಂಗಾತಿ ಭಗತ್ - ಜೀವನ ಚರಿತ್ರೆ ಸೇರಿದಂತೆ ಎಂಟು ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. 

ಜೊತೆಗೆ ಮಹಿಳೆ, ಸಂತಾನೋತ್ಪತ್ತಿ ಮತ್ತು ಮಾನಸಿಕ ಆರೋಗ್ಯ, ಮುಟ್ಟು – ವಿಜ್ಞಾನ, ಸಂಸ್ಕೃತಿ ಮತ್ತು ಅನುಭವ ಸೇರಿದಂತೆ ನಾಲ್ಕು ವೈದ್ಯಕೀಯ ಬರಹಗಳ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ನೈಲ್ ನದಿಯಗುಂಟ ಶರಾವತಿಯನರಸುತ್ತ - ಈಜಿಪ್ಟ್ ಪ್ರವಾಸ ಕಥನ’ ಅಂಡಮಾನ್: ಕಂಡ ಹಾಗೆ (ಪ್ರವಾಸ ಕಥನ), ಚೆಗೆವಾರನ ನೆಲದಲ್ಲಿ ಸೇರಿದಂತೆ ಮೂರು ಪ್ರವಾಸಕಥನ, ಬುದ್ಧ ಬೆಳಕಿನಲ್ಲಿ ಅಂಬೇಡ್ಕರ್ ಭಾರತ: ಲೇಖನ ಸಂಗ್ರಹ, ಸಂವಿಧಾನ ಮತ್ತು ಮಹಿಳೆ, ಹೆಣ್ಣು ಹೆಜ್ಜೆ (ಮಹಿಳಾ ಮಾದರಿ ಮತ್ತು ಮಾರ್ಗ) ಸೇರಿದಂತೆ 7 ಲೇಖನಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಇವುಗಳ ಜೊತೆಗೆ ಅನುವಾದ, ಸಂಪಾದನೆ, ಸಹಸಂಪಾದನೆ ಸೇರಿದಂತೆ ಒಟ್ಟು 53 ಕೃತಿಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಮಾಬಾಯಿ ಅಂಬೇಡ್ಕರ್ ಪುಸ್ತಕ ಬಹುಮಾನ, ಸಕಾಲಿಕ ಸಾಹಿತ್ಯ ಪ್ರಶಸ್ತಿ, ಎಚ್. ಶಾಂತಾರಾಂ ಪ್ರಶಸ್ತಿ, ಕುಂದಾಪುರ, ದೆಹಲಿ ಕರ್ನಾಟಕ ಸಂಘ ಪ್ರಶಸ್ತಿ, ರಾಜಲಕ್ಷ್ಮಿ ಬರಗೂರು ಪ್ರಶಸ್ತಿ, ಐಎಂಎ ಕನ್ನಡ ವೈದ್ಯ ಬರಹಗಾರರ ಸಂಘದ ಪ್ರಶಸ್ತಿ,  ಶಾಂತಾದೇವಿ ಕಣವಿ ಕಥಾ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. 

More About Author