Poem

ಅನುಭವ ಮಂಟಪ

ಅಣ್ಣಾ ಬಸವಣ್ಣ ಇಲ್ಲಣ್ಣ ಇಲ್ಲವೇ ಇಲ್ಲಣ್ಣ.
ಅತ್ತ ಇತ್ತ ಸುತ್ತಮುತ್ತ ಎತ್ತ ಹುಡುಕಿದರೂ
ವೇದ ಶಾಸ್ಥ್ಯ ಆಗಮ ಪುರಾಣಗಳಿಗೆ ನಿನ್ನಂತೆ
ಒರೆಕಟ್ಟಿದ ಧೀರ ವಿಚಾರರು ಇಲ್ಲವೇ ಇಲ್ಲಣ್ಣ

ಎಲ್ಲಿ ನೋಡಿದರೂ ಸನಾತನ ಬಾಲಂಗೋಚಿಗಳು
ಬಹುತ್ವಗಳ ಕೊಂದು ತಿನ್ನುವ ಭೋಜನಪ್ರಿಯದಾಸರು
ಏಕತೆಯ ಹೆಸರಿನಲ್ಲಿ ಶರಣತತ್ವಕ್ಕೆ ಕೊಡಲೀ ಪೆಟ್ಟು
ಕಾಯಕದ ನೀತಿನೇಮಕೆ ಎರವು ಮೇಲುಕೀಳಿನಾ ಪಟ್ಟು

ದಯವೇ ಧರ್ಮದ ಮೂಲವು ಅಸಮಾನತೆಯ ಶೂಲವು
ದೀನರಲ್ಲಿ ದೇವನಿಹನು ದೇವನೊಬ್ಬ ನಾಮ ಹಲವು
ನೊಂದ ಜನರ ಬೆಂದ ಮನರ ಬದುಕಿನೆಡೆಗೆ ನಿನ್ನದಾರಿ
ಇಂದು ಹಿಂದು ಎಲ್ಲರೊಂದೆ ಎಂದು ಬರಿಯಕೂಗುಮಾರಿ

ಕರ್ಮಲತೆಯ ದಾರಕಿತ್ತೆ ಮಾದಾರ ಮಗನ ಜನ್ಮ ತೊಟ್ಟೆ
ಹೊಲೆಯ ಹಾರುವ ಭಿನ್ನಕಳೆದು ಕಲ್ಯಾಣವ ನಡೆಸಿಕೊಟ್ಟೆ
ಅನುಭವಮಂಟಪವ ಕಟ್ಟಿ ಅನುಭಾವದಡಿಗೆ ಮಾಡಿ
ದಾಸೋಹದ ದಾರಿಯಲ್ಲಿ ಜೀವ ಭಾವನ ತಣಿಸಿಬಿಟ್ಟೆ.

ಇಂದು ನಿನ್ನ ಅನುಭವಮಂಟಪಕ್ಕೆ ಸನಾತನದ ಲಗ್ಗೆ
ಪುರಾಣಪುಂಡರ ಗೋಷ್ಠಿ ವೇದಾಗಮಗಳ ಬುಗ್ಗೆ
ಶುಭ ಮುಹೂರ್ತದಲ್ಲಿ ಪುರೋಹಿತರ ಮಂತ್ರಪಠಣ
ಯಾಜ್ಞವಲ್ಕ ಋತ್ವಿಕರ ಹೋಮಾಗ್ನಿಯ ಹೂರಣ

ಉಪಸಂಹಾರ
ಎಲ್ಲಿಗೆ ಬಂತೋ ಸಂಗಯ್ಯ
ಶರಣರ ಕ್ರಾಂತಿಯು ಲಿಂಗಯ್ಯ
ಹನ್ನೆರಡೆಂಬುದು ಕ್ರಾಂತಿಯ ಶತಕ
ಇಪ್ಪತ್ತೊಂದು ವಿಗತಿಯ ದಶಕ

ಶರಣರ ಕನ್ನಡ ಕಾಣೆಯಾಯಿತೋ
ಸಕ್ಕದವದುವೇ ಮಿಕ್ಕು ಮೆರೆಯಿತೋ
ಕಮತಿಗ ಕಬ್ಬಿಲ ಕುಂಬಾರ ಜಬ್ಬಿಲ
ಕಾಯಕರೆಲ್ಲರ ಬಾಳುವಗೆಟ್ಟಿತೋ,

- ಜಿ.ಎಸ್. ಸಿದ್ಧರಾಮಯ್ಯ

ಎಸ್.ಜಿ. ಸಿದ್ಧರಾಮಯ್ಯ

ಹಿರಿಯ ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ. ತಂದೆ-ಗುರುಭಕ್ತಯ್ಯ, ತಾಯಿ-ರೇವಮ್ಮ. ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದ ಅವರು  ಪ್ರೌಢಶಾಲೆ ಚಿಕ್ಕನಾಯಕನಹಳ್ಳಿ ಪೂರ್ಣಗೊಳಿಸಿದರು. ಕಾಲೇಜು ವಿದ್ಯಾಭ್ಯಾಸವನ್ನು ತುಮಕೂರಿನಲ್ಲಿ ಆರಂಭಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಆನಂತರ ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ಮಡಿಕೇರಿ, ಸಿಂಧನೂರು, ತುಮಕೂರು, ಕೊರಟಗೆರೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ತುಮಕೂರು, ಚಿಕ್ಕನಾಯಕನ ಹಳ್ಳಿ, ಹೊಸದುರ್ಗ, ಮಧುಗಿರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಹುದ್ದೆ ನಿರ್ವಹಿಸಿದ್ದಾರೆ. ಅಲ್ಲದೇ ದುಃಸ್ಥಿತಿಯಲ್ಲಿದ್ದ ಕಾಲೇಜುಗಳಿಗೆ ಶೈಕ್ಷಣಿಕ ಕಾಯಕಲ್ಪ ಕಲ್ಪಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ವಾಚನಾಭಿವೃದ್ಧಿಗಾಗಿ ಹಲವು ಕಮ್ಮಣಗಳನ್ನು ನಡೆಸಿದ್ದಾರೆ. ಜೊತೆಗೆ ವನಮಹೋತ್ಸವದಂತಹ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಾವಿರಾರು ಸಸಿಗಳನ್ನು ನೆಟ್ಟಿದ್ದಾರೆ. ಜೊತೆಗೆ ರಾಷ್ಟ್ರೀಯ ಸೇವಾಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯದತ್ತ ಆಸಕ್ತರಾಗಿದ್ದ ಅವರಿಗೆ ಮೊದಲಿನಿಂದಲೂ ನಾಟಕ ರಚನೆಯಲ್ಲಿ ವಿಶೇಷ ಒಲವು. ಕರ್ಣನಂತಹ ದುರಂತ ಪಾತ್ರಗಳಲ್ಲಿ ತಲ್ಲೀನತೆ. ವಿದ್ಯಾರ್ಥಿಯಾಗಿದ್ದಾಗಲೇ ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡಿದ್ದ ಅವರಿಗೆ ಎಚ್.ಜಿ. ಸಣ್ಣಗುಡ್ಡಯ್ಯ ಮುಂತಾದವರ ಮಾರ್ಗದರ್ಶನ ದೊರೆತಿತ್ತು. ‘ಗಾಲ್ ಉಬ್ಬಿನ ಮೇಲೆ’, ‘ಕಾಡುವ ಬೇಲಿ ಹೂ’, ‘ಅವಳೆದೆಯ ಜಂಗಮ’, ‘ಸೊಲ್ಲು ಫಲವಾಗಿ’, ‘ಮರು ಜೇವಣಿ’, ‘ಕರೆಬಳಗ’ ಕಾವ್ಯ ಸಂಕನಗಳು. ಸಾಲಾವಳಿ, ಕೇಡಿಲ್ಲವಾಗಿ, ಎಡೆಕುಂಟೆ ಗೆಣೆಸಾಲು, ನಿಶ್ಯಬ್ದದ ಜಾಡು, ಅಂಬಿಗರ ಚೌಡಯ್ಯ ಒಂದು ಅಧ್ಯಯನ ಎಂಬ ವಿಮರ್ಶಾಕೃತಿಗಳು. ದಂಡೆ, ನೆತ್ತಮನಾಡಿ ಎಂಬ ನಾಟಕಗಳನ್ನು ರಚಿಸಿರುವ ಅವರು ಕುರುಬರ ಮದುವೆಯ ಪದಗಳು ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ 1996 ಮತ್ತು 2000ದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಸೊಲ್ಲು ಫಲವಾಗಿ ಕೃತಿಗೆ ಪು.ತಿ.ನ ಕಾವ್ಯ ಪ್ರಶಸ್ತಿ, ಕರೆಬಳಗ ಕೃತಿಗೆ ಜಿ.ಎಸ್.ಎಸ್ ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂಧಿವೆ. ಅಲ್ಲದೇ 2016ರಿಂದ 2019ರವರೆಗೆ ಕನ್ನಡ ಅಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

More About Author