Poem

ಅಪ್ಪ...ಕೊನೆಗೂ ಅರ್ಥವಾಗಲೇ ಇಲ್ಲ

ಅವನೆಂದೂ ಅತ್ತಿದ್ದೇ ನೆನಪಿಲ್ಲ
ಒಳಗೊಳಗೇ ಸತ್ತರೂ ಅವನೆಂದೂ‌ ಅತ್ತಿದ್ದು ಕಾಣಲಿಲ್ಲ
ಅಳುವೆಂದರೆ ಹೆಣ್ಣೆಂದ ನಮಗೆ
ಅವನ‌ ಆಂತರ್ಯದ ಬವಣೆ ಕೊನೆಗೂ ಕಾಣಲಿಲ್ಲ..

ಬದುಕ ನೊಗ ಹೊತ್ತ ಬೆನ್ನು ಬಾಗಿದ್ದು ಕಾಣಲಿಲ್ಲ
ಸಂಸಾರಕ್ಕಾಗಿ ಕನಸ ಬದಿಗೊತ್ತಿದ್ದೂ ಗಮನಿಸಲಿಲ್ಲ,
ನಿಜವಾಗಿ ಅನ್ಯಾಯವಾದರೂ ಅವನ ಪರ ಯಾರು ವಾದಿಸಿದ್ದೂ ನೆನಪಿಲ್ಲ
ಹರಿದ ಚಪ್ಪಲಿ ಹೊಲೆಯುವಾಗಲೂ ಅವನು ಬಿಕ್ಕಳಿಸಲಿಲ್ಲ...

ಬಿರುಕುಬಿಟ್ಟ ಪಾದಗಳಿಗೆ ಔಷಧಿಯ ಮುಟ್ಟಿಸಲೂ ಇಲ್ಲ
ಕೊನೆವರೆಗೂ ಸರೀಕರ ಎದುರು ತಲೆ ಎತ್ತಿ ಬದುಕಬೇಕೆಂಬ
ಛಲವ ಬಿಡಲೂ ಇಲ್ಲ
ಇಷ್ಟಾದರೂ ಅವನೆಂದು ಮೌನ ಮುರಿದದ್ದೂ ಇಲ್ಲ...

ಬದುಕಿನಲ್ಲಿ ಬಿರುಗಾಳಿ ಎದ್ದಾಗಲೂ
ತಂಗಾಳಿಯಂತೇ ಇದ್ದುಬಿಟ್ಟನಲ್ಲ
ಒಳಗೊಳಗೇ ನೋವುಂಡು
ಖುಷಿಯ ಅರ್ಥವೇ ತಾನೆಂಬಂತೆ ನಗು ಹಂಚಿದ ನನ್ನಪ್ಪ
ಕೊನೆಗೂ ಅರ್ಥವಾಗಲೇ ಇಲ್ಲ...

ಪ್ರಣಿತ ತಿಮ್ಮಪ್ಪ ಗೌಡ

ಲೇಖಕಿ ಪ್ರಣಿತ ತಿಮ್ಮಪ್ಪ ಗೌಡ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದವರು. ಕನ್ನಡದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವೀಧರರು. ಭರತನಾಟ್ಯದಲ್ಲಿ ಸೀನಿಯರ್ ಹಂತವನ್ನು ಪೂರ್ಣಗೊಳಿಸಿದ್ದಾರೆ. ಓದುವ ಹವ್ಯಾಸದೊಂದಿಗೆ ಇನ್ನೂರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿರುವ ಇವರು 100 ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ದ್ವಿತೀಯ ಪಿ.ಯು.ಸಿ ಯಲ್ಲಿ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಕ್ಕಾಗಿ ಕರ್ನಾಟಕ ಸರ್ಕಾರವು ಕನ್ನಡ ಮಾಧ್ಯಮ ಪ್ರಶಸ್ತಿ  ಹಾಗೂ ಜ್ಞಾನ ಮಂದಾರ ಟ್ರಸ್ಟ್ ‘ಜ್ಞಾನಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

More About Author