Poem

ಅವಳ ಅಂತರಂಗ

ಕಾರ್ಮೋಡ ಕವಿಯುತಿದ್ದ ಸಂಜೆ ಹೊತ್ತು
ಕಾಮನಬಿಲ್ಲು ಕಣ್ಣೆದುರೇ ಕರಗುತಿತ್ತು
ನೀರವ ಆಶ್ರಮದಿ ಗಾಳಿಗೂ ಬೇಸರಿಕೆ
ಸುತ್ತಲ ಧಗೆಗೆ ಮೈ ಬೆವರ ಬುಗ್ಗೆ……..
ಮೊಳೆತ ಕೊಂಬಿನ ತುರಿಕೆಗೆ ಒಡಲೊಡ್ಡಿ
ತುಂಬು ಬಸಿರು ಜೋಲು ಮೋರೆ ಧರಿಸಿ
ಏನನ್ನೊ ಧೇನಿಸುತ್ತಾ ಏದುಸಿರು ಬಿಡುತಿತ್ತು
ಪಾರಿಜಾತದ ಕೆಳಗೆ ವಿರಹಿ ಜಿಂಕೆ………

ಕಳ್ಳಬೆಕ್ಕಿನ ಹೆಜ್ಜೆ ಇಡುತ
ಬಂದಿತಲ್ಲಿಗೆ ಮುದಿಗರಡಿ
ನಾನು ಮೈಮರೆತು ಕುಳಿತಿರಲಿಲ್ಲ!
ಒಮ್ಮೆ ಮೈ-ಮರೆತದ್ದೇ ಜೀರ್ಣವಾಗದೆ
ಪುರಾಣೇತಿಹಾಸ ವರ್ತಮಾನಕೂ ಮಿಕ್ಕಿ ಹಳಸುವಷ್ಟಿತ್ತು
ರೋಮ ರೋಮಗಳು ಈಗ ಕಣ್ಣಾಗಿದ್ದವು!
ಬೆವರಮಣಿಗಳು ಸಾಲುಗಟ್ಟಿದ್ದ
ಅವಯವಗಳ ಮಾಂಸಲವ
ಕಣ್ಣಲ್ಲೇ ಚಪ್ಪರಿಸುತ್ತಾ ಹಲ್ಕಿರಿದ…..
ʼದೊಡ್ಡವರು ಆಶ್ರಮದಲ್ಲಿಲ್ಲʼ
ʼಸಾಕು ನೀನಿರುವೆಯಲ್ಲಾʼ
ಧಡ್ಡನೆದ್ದು ಕುಟೀರದ ಬಾಗಿಲಿಕ್ಕಿದೆ ಮುಖಕ್ಕೆ ಹೊಡೆದಂತೆ
ನಡುಗಿದವು ನರಿಕೆತಟ್ಟಿಗಳು ತಲ್ಲಣಿಸಿದವು ಹೂಬಳ್ಳಿಗಳು….!!

ದುಡುಕಿದೆನೆ !?
ಸಹನೆಯ ಮಾಲಿನಿ ಬಗ್ಗಡಗೊಂಡು ಪ್ರಕ್ಷುಬ್ಧೆಯಾಗಿದ್ದಳು…..
ಎದೆ ಮೊಗ್ಗಾದ ದಿನದಿಂದಲೂ
ತುಡುಗು ದುಂಬಿಗಳ ದಾಳಿ ಮಾಮೂಲಿಯಾಗಿತ್ತು
ಎಳೆಗರಿಕೆಯ ಮೇಯಲು ಈ ಮುದಿ ಎತ್ತು
ಏನಾದರು ನೆವಹೂಡಿ ಇತ್ತ ಬರುತ್ತಲೇ ಇತ್ತು
ಅದರಲ್ಲೂ ಹೆಚ್ಚಾಗಿ ಕಣ್ವರಿಲ್ಲದ ಹೊತ್ತು!

ಅಪ್ಸರೆಯ ಭೋಗಿಸಿದ ವಿಶ್ವಾಮಿತ್ರನ ಭಾಗ್ಯವ ನೆನೆದು
ಕರುಬದಿಹ ಋಷಿಮುನಿಗಳೇ ಕಡಿಮೆ!
ನನ್ನ ಕಂಡಾಗಲೆಲ್ಲಾ ಅವರ ಸುಪ್ತ ಬಯಕೆ
ನಾಲಿಗೆ ಸವರುತಿತ್ತು ಅವಕಾಶಕ್ಕೆ ಬಾಯ್ತೆರೆದು
ಈ ಹಪ್ಪಿಡಿದ ದೂರ್ವಾಸ ಒಂದು ಕೈ ಮುಂದು
ಬಾಲೆ ಬಾಲೆ ಎನ್ನುತ್ತಲೆ ಸಲುಗೆಯಲಿ
ಮೈ ಮೂಲೆಮೂಲೆಗಳ ಚಿವುಟುತಿದ್ದ…….
ನಾನು ಮುಗ್ಧೆ ಎಂದುಕೊಂಡಿರಬೇಕು
ಅಪ್ಪನ ಸ್ನೇಹಕ್ಕಂಜಿ ನಂಜು ನುಂಗಿಕೊಳ್ಳುತಿದ್ದೆನಷ್ಟೆ!

ಗೌತಮಿಗಿದೆಲ್ಲ ತಿಳಿದರೂ ತುಟಿಬಿಚ್ಚಳು;
ಉಪ್ಪು ಮುಪ್ಪರಿಗೊಂಡ ಶಾಂತಕಡಲು
ಪಾಳುಬಿದ್ದ ಫಲವತ್ತಾದ ಭೀಳು
ಹೂಳುತುಂಬಿ ಮಡುಗಟ್ಟಿ ನಿಂತ ಬಾಳು
ಹುಳಿಯುಂಡೂ ಮುಖ ಹಿಂಡದೆ ನಸುನಗುವ ಗೀಳು…..
ಆಶ್ರಮದ ದೀರ್ಘವಾಸ ಅಭ್ಯಾಸ ಮಾಡಿಸಿರಬೇಕು!

ಅಂದೂ ಇಂತದ್ದೇ ಇಳಿಹೊತ್ತು
ರವಿಯ ತುಂಬುಗೆನ್ನೆ ರಂಗೇರಿತ್ತು
ಸಾಕಿದ ಜಿಂಕೆ ಕದ್ದು ಕಾಡುಮಿಗವ ಕೂಡಿರಲು
ಬಿಲ್ಲಿಗೆ ಹೆದೆ ಏರಿಸಿದ ಭೇಟೆಗಾರ
ಬೆದೆಗೊಂಡ ಮಿಗಗಳ ಬೆನ್ನಟ್ಟಿದ…….
ಹೂಬನದಲ್ಲಿದ್ದ ನನ್ನ ಸೆರಗಲಿ ಅವಿತು
ಸಖಿ ಹರಿಣಿ ಪ್ರಾಣರಕ್ಷೆಯ ಬೇಡಿತು
ಹೂಡಿದನು ಹೂಬಾಣ ನೇರ ನನ್ನೆದೆಗೆ
ಬಿರಿಯಿತು ಮೊಗ್ಗು ತುಳುಕಿತು ಮಕರಂದ
ಮಿಂದೆದ್ದು ಮುಕ್ಕಳಿಸಿದ ದೊರೆಮಗ
ʼರಾಜಬೀದಿಗೆ ರತ್ನಗಂಬಳಿ ಹಾಸಿ
ಪಲ್ಲಕ್ಕಿ ಕಳಿಸುವೆ ನೀ ಪಟ್ಟದರಸಿʼ
ತುಪ್ಪಸವರಿ ಬಿಟ್ಟೆದ್ದು ನಡೆದನವಸರದಿ…..!

ಎಷ್ಟು ಹೊತ್ತು ಹೊರಗೆ ಮುನಿ
ಮುನಿದು ನಿಂತಿದ್ದನೋ ದುರುಗುಟ್ಟುತ್ತ
ಅಪರಿಚಿತ ಅರಸುವಿಗೆ ನಾನರಳಿದ ಗುಸುಗುಸು
ಆಶ್ರಮದಿ ಅಸೂಯೆಯ ತಾಂಬೂಲವಾಗಿತ್ತು
ಎಟುಕದ ದ್ರಾಕ್ಷಿಯ ಹುಳಿಗಟ್ಟಿಸಲು
ಬುಸುಗುಟ್ಟುತ್ತಾ ನಡೆದನು ರಾಜಧಾನಿಗೆ
ಒಲವ ಕೆಚ್ಚಲನು ಬಚ್ಚಿಸಲು
ಕಕ್ಕಿದನು ವಿಷವ ದುಶ್ಯಂತನೆದೆಗೆ…….

ಅವನಿಗು ಅಷ್ಟೇ ಸಾಕಾಗಿತ್ತೇನೊ!
ನಿಪುಣ ನಿಷಾಧನನಿಗೆ ಹರಿಣಿಗಳು ಬರವೆ?
ಧರೆಯಾಳ್ವ ದೊರೆಗೆ ತರುಣಿಯರು ತುಟ್ಟಿಯೆ?
ಒಮ್ಮೆ ಕಚ್ಚುಗುಳಿದ ಹಣ್ಣನು
ಮತ್ತೆ ಮೆಲ್ಲುವುದೆ ಅರಗಿಣಿ!?
ಎಷ್ಟಾದರೂ ಅದು ಯಯಾತಿಯ ಸಂತತಿಯಲ್ಲವೇ…..!!

ಸಗ್ಗದ ಸೂಳೆಯ ಮಗಳು ಪಟ್ಟದರಸಿಯಾದೊಡೆ;
ವಂಶದ ಬೆಳ್ಗೊಡೆಗೆ ಕಪ್ಪುಚುಕ್ಕೆ
ಗುರುಹಿರಿಯರ ವರಕ್ಕೆ ಕುತ್ತು
ಋಷಿಮುನಿಗಳ ಕೋಪಕೆ ತುತ್ತು
ದೇಶಕೋಶಗಳಿಗೆ ಮಹಾವಿಪತ್ತು……….
ಬೊಬ್ಬೆಹಬ್ಬಿಸಿ ಸಭಾಹಿತರ ಕಂಗೆಡಿಸಿ
ನನ್ನಾಗಮನವ ನಿಷೇಧಿಸಿ ಫರ್ಮಾನು ಹೊರಡಿಸಿ
ತೃಪ್ತಿಗೊಂಡಿರಬೇಕು ಮುನಿಯ ತಪ್ತಮನ
ನೆರೆಗಡ್ಡವ ನೀವಿಕೊಳ್ಳುತ್ತಾ……!

ಮರುಳು ನಾಟಕಕಾರ
ತನ್ನ ನೆರಳು-ಬೆಳಕಿನಾಟಕ್ಕೆ
ಮರೆವು-ನೆನಪಿನ ರೂಪಕಕ್ಕೆ
ಶಾಪ-ಉಂಗುರದ ಪ್ರಸಂಗವ
ಪ್ರಯಾಸದಿ ನೇಯ್ದು
ಸಮಾಗಮದ ಮಂಗಳ ಹಾಡಿಸಿದ
ಅನಾಯಾಸವಾಗಿ!

ಲೋಕಪ್ರಸಿದ್ಧಳು ಅಭಿಜ್ಞಾನ ಶಾಕುಂತಲೆ

ದಿಟದ ಶಕುಂತಲೆ!? ಅವಳ ಅಂತರಂಗ!?
ಹೆಣ್ತನದ ಘಾಸಿಗೆದ್ದ ಸುನಾಮಿಯ ತರಂಗ…..?!
ರವಿ ಕಾಣದ್ದನ್ನು ಕವಿಯೂ ಕಾಣದೆ ಹೋದ!!

-ರತ್ನಾಕರ ಸಿ ಕುನುಗೋಡು.

ರತ್ನಾಕರ ಸಿ. ಕುನುಗೋಡು

ಡಾ.ರತ್ನಾಕರ ಸಿ. ಕುನುಗೋಡು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಎರೆಕೊಪ್ಪದವರು. ತಾಯಿ-ನಿಂಗಮ್ಮ, ತಂದೆ- ಚನ್ನಬಸಪ್ಪ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಸ್ತುತ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸ.ಪ್ರ.ದ.ಕಾಲೇಜು, ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿನಿಂದಲೂ ಸಾಹಿತ್ಯ, ರಂಗಭೂಮಿ, ಸಂಘಟನೆ, ಸಾಮಾಜಿಕ ಪರಿವರ್ತನೆಗಳತ್ತ ಒಲವು ಮೂಡಿಸಿಕೊಂಡು ಕ್ರಿಯಾಶೀಲರಾಗಿರುವ ಅವರು ಕವಿತೆಗಳು ಮತ್ತು ಸಂಶೋಧನಾ ಲೇಖನಗಳ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಪಿಹೆಚ್ ಡಿ ಗಾಗಿ ಬೇರು ಬಿಳಲು ಎಂಬ ಸಂಶೋಧನಾ ಮಹಾಪ್ರಬಂಧವನ್ನು ರಚಿಸಿ ಪ್ರಕಟಿಸಿದ್ದಾರೆ.

More About Author