Poem

ಬರುವು..

ತೆರೆಯಬರುವ ಕರವ ಕಾದು
ಬಣ್ಣಗೆಟ್ಟ ಕದವಿದೆ;
ಮುಚ್ಚಿದಂಚೆಯ ಮೌನದೊಳಗೆ
ಓದದಿರುವ ಪದವಿದೆ.

ಬೀಗ ಜಡಿದ ಎದೆಯ ಹಿಂದೆ
ಜಾತ್ರೆಯ ಕಾಣದ ತೇರಿದೆ;
ಸಾಗಲಿದ್ದ ನೂರು ಯಾನ
ಅಲ್ಲೆ ನಿಂತು ಸವೆದಿದೆ.

ಯಾವ ಜೀವದೊಲುಮೆ ಕರೆಯೋ
ಪತ್ರವಾಗಿ ಬಂದಿದೆ;
ಓದದೋಲೆಯು ಒಳಗೆ ಉಳಿದು
ಕೀಲಿಯೆಲ್ಲೋ ಕಳೆದಿದೆ.

ಯಾರೂ ಇರದ ತಿರುವಿನಲ್ಲ
ಯಾರೋ ಬರುವ ಸುಳಿವಿದೆ;
ಇಂಥ ನೂರು ಭ್ರಮೆಗಳಲ್ಲೆ
ಸೋತ ಜೀವಕೆ ಉಳಿವಿದೆ.

ಬರುವರಾರೋ, ಬರೆವರಾರೋ
ಹೃದಯವಂತೂ ಕಾದಿದೆ;
ಹೊರಗೆ ಮುಚ್ಚಿದಂತೆ ನಟಿಸಿ
ಒಳಗೆ ತೆರೆದುಕೊಂಡಿದೆ..

-ವಿನಾಯಕ ಅರಳಸುರಳಿ.

ವಿನಾಯಕ ಅರಳಸುರಳಿ

ಶಿವಮೊಗ್ಗ ಜಿಲ್ಲೆ,ತೀರ್ಥಹಳ್ಳಿ ತಾಲ್ಲೂಕಿನ ಅರಳಸುರುಳಿ ಗ್ರಾಮದಲ್ಲಿ 1991, ಏಪ್ರಿಲ್ 19ರಂದು ಜನಿಸಿದ ವಿನಾಯಕ ಅರಳಸುರುಳಿಯವರು, ಕೃಷಿ ಕುಟುಂಬದ ಹಿನ್ನಲೆಯವರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಅರಳಸುರಳಿಯಲ್ಲಿ ಪಡೆದ ಇವರು, ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ 2011-12ನೆಯ ಸಾಲಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದರು. ನಂತರ ಎಂಟು ವರ್ಷಗಳ ಕಾಲ ಬೆಂಗಳೂರಿನ ಖಾಸಗೀ ಸಂಸ್ಥೆಗಳಲ್ಲಿ ಅಕೌಂಟ್ಸ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಹುಟ್ಟೂರಿನಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಹವ್ಯಾಸೀ ಬರಹಗಾರರಾಗಿದ್ದು, ಕವನ ಲಲಿತ ಪ್ರಬಂಧ ಹಾಗೂ ಸಣ್ಣಕತೆಗಳನ್ನು ಬರೆದಿದ್ದಾರೆ. ಮೈಸೂರು ಅಸೋಸಿಯೇಶನ್-ಮುಂಬೈ ಇವರು 2016ರಲ್ಲಿ ನಡೆಸಿದ ‘ಮಾಸ್ತಿ ಸ್ಮರಣಾರ್ಥ ನೇಸರು ಜಾಗತಿಕ ಸಣ್ಣಕತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಇದೇ ಸಂಸ್ಥೆಯವರು 2017ರಲ್ಲಿ ನಡೆಸಿದ ನೇಸರು ಜಾಗತಿಕ ಕನ್ನಡ ಕವನಗಳ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಕನ್ನಡ ಸಂಘ- ಸಿಂಗಾಪುರ ಇವರು 2017ರಲ್ಲಿ ನಡೆಸಿದ ಸಣ್ಣಕತೆಗಳ ಸ್ಪರ್ಧೆಯಲ್ಲಿ ಪ್ರತಮ ಬಹುಮಾನ ಸೇರಿದಂತೆ ಹಲವು ಬಹುಮಾನಗಳನ್ನು ಪಡೆದಿದ್ದಾರೆ.

More About Author