Poem

ಬೆಸೆದ ಸೃಷ್ಟಿಯ ಬೆಸುಗೆ

ಬನದ ಪುಷ್ಪವೇ ಮೌನದಿ ಬಿರಿಯುತ
ಎನ್ನೆದೆ ವೀಣೆಯ ಮೀಟಿದೆಯಾ
ಮನದ ಮಾಮರದ ಕೋಗಿಲೆ ಗಾನಕೆ
ಭಾವದ ಮಹಲಲಿ ತೇಲಿದೆಯಾ..||

ಸಂಜೆ ಮಲ್ಲಿಗೆ ಘಮವನು ಸವಿಯುತ
ಮನವದು ಮರೆಯಿತು ಜಗವನ್ನೇ
ಮಂಜು ಮಣಿಗಳ ನೋಡುತ ಕಂಗಳು
ಸವಿದಿದೆ ಸೃಷ್ಟಿಯ ಸೊಬಗನ್ನೇ..||

ತಂಪಿನ ಗಾಳಿಗೆ ಸೊಂಪಿನ ಹೂಗಳು
ನಾಚುತ ಬಳುಕಿದೆ ಜೊತೆಯಾಗಿ
ಇಂಪಿನ ಗಾಯನ ಕೇಳುತ ವಾಹಿನಿ
ಹರಿದಳು ಲಾಸ್ಯದಿ ನವಿರಾಗಿ..||

ಎಲ್ಲಿಯ ಆಗಸ ಎಲ್ಲಿಯ ಧರಣಿಯೋ
ಅಲ್ಲಿಯೇ ಬೆಸೆದಿದೆ ಸಂಬಂಧ
ನಿಲ್ಲದ ಬಾಳಿನ ಸುಂದರ ಪಯಣಕೆ
ಬೇಕಿದೆ ಪ್ರೀತಿಯ ಅನುಬಂಧ..||

ಚಿಲಿಪಿಲಿ ಕಲರವ, ಹೂವಿನ ಗಂಧವು
ಮೋಡಿಯ ಮಾಡಿದೆ ಎನಗಿಲ್ಲಿ
ಸುಳಿಯುವ ನೆನಪಿನ ಲಹರಿಯ ಸೇರಿ
ದೂರಕೆ ಸಾಗುವೆ ಮೌನದಲಿ..||

- ಆಶಾ ಮಯ್ಯ

ಆಶಾ ಮಯ್ಯ

ಪುತ್ತೂರು ನಿವಾಸಿ ಶಿವಪ್ರಸಾದ್ ಮಯ್ಯ ಅವರ ಪತ್ನಿ ಆಶಾ ಮಯ್ಯ ಅವರು ಗೃಹಿಣಿ. ಆದರೆ ಕಥೆ, ಕವನಗಳನ್ನು ಬರೆಯುವುದು, ಛಂದೋಬದ್ಧ ಷಟ್ಪದಿಗಳಲ್ಲೂ ರಚನೆ ಮಾಡುವುದು ಇವರ ಹವ್ಯಾಸ. ಅನ್ಯರ ಸಂಪಾದಕತ್ವದಲ್ಲಿ ಹೊರಬಂದ ಕೃತಿಗಳಲ್ಲೂ, ಕಥೆ, ಕವನ, ಲೇಖನಗಳು ಮುದ್ರಣವಾಗಿರುತ್ತವೆ ಪತ್ರಿಕೆಗಳಲ್ಲೂ ಕವನಗಳು ಪ್ರಕಟವಾಗಿವೆ.

ಕೃತಿ: ಕಾವ್ಯ ಸಿಂಧು (ಕವನ ಸಂಕಲನ 2021)

ಪ್ರಶಸ್ತಿ : ಸಜ್ಜನ ಚಂದನ ಸದ್ಭಾವನಾ ಪ್ರಶಸ್ತಿ 2020

More About Author