Story

’ಭೂಮಿ ಗುಂಡಗಿದೆ; ಅವಳು ಸಿಕ್ಕೇ ಸಿಗತಾಳೆ’

2022ನೇ ಸಾಲಿನ ಬುಕ್ ಬ್ರಹ್ಮ ಸ್ವಾತಂತ್ಯ್ರೋತ್ಸವ ಕಥಾಸ್ಪರ್ಧೆಯ ಸಮಾಧಾನಕರ ಬಹುಮಾನ ಪಡೆದ ಮೌನೇಶ ಬಡಿಗೇರ ಅವರ ‘‌ಒಂಟಿ ಓಲೆಯ ಮುತ್ತು’ ಕತೆ ನಿಮ್ಮ ಓದಿಗಾಗಿ..

ಈಗ ಹತ್ತುಹದಿನೈದು ವರ್ಷಗಳ ಹಿಂದೆ ಬೆಂಗಳೂರಿನ ಮೆಜೆಸ್ಟಿಕ್ಕಿನಿಂದ ಚಂದಾಪುರ, ಅತ್ತಿಬೆಲೆಗೆ ಹೋಗುವ ಬಸ್ಸಿನಲ್ಲಿ ನೀವು ನಿಯಮಿತವಾಗಿ ಪ್ರಯಾಣಿಸಿದ್ದೇ ಆದರೆ, ಬಹುಶಃ ನಿಮಗೆ ‘ಅಂಕಲ್ ಮುತ್ತಣ್ಣ’ ಸಿಕ್ಕಿರುವ ಸಾಧ್ಯತೆಯಿದೆ; ಈಗಂತೂ ಆ ರೂಟಿಗೆ ಐದುನಿಮಿಷಗಳಿಗೊಂದೊಂದು ಬಸ್ಸಿರುವುದರಿಂದ ನಿಮಗೆ ಮುತ್ತಣ್ಣ ಸಿಗದೆ ಇರುವ ಸಾಧ್ಯತೆಯೂ ಇದೆ. ತನ್ನ ಸರ್ವೀಸಿನ ಮುಕ್ಕಾಲು ಭಾಗ ಇದೇ ರೂಟಿನಲ್ಲಿ ಕಂಡಕ್ಟರನಾಗಿ ಓಡಾಡಿದ ಮುತ್ತಣ್ಣನನ್ನು ಮುತ್ತಣ್ಣ ಅಥವಾ ‘ಕಂಡಕ್ಟರ್ ಮುತ್ತಣ್ಣ’ ಎಂದರೆ ಯಾರಿಗೂ ಅಷ್ಟು ಪತ್ತೆಹತ್ತುವುದಿಲ್ಲ; ಬದಲಾಗಿ ‘ಅಂಕಲ್ ಮುತ್ತಣ್ಣ’ ಎಂದರೆ ಎಲ್ಲೋ ಏನೋ ತಾಗಿದಂತಾಗಿ ಕಣ್ಣರಳಬಹುದು. ಅಬಾಲವೃದ್ಧರಾದಿಯಾಗಿ ಎಲ್ಲರನ್ನೂ ಅಂಕಲ್, ಆಂಟಿ ಎಂದು ಸಂಬೋಧಿಸುತ್ತ ಲವಲವಿಕೆಯಿಂದ ರೈಟು ಹೇಳುತ್ತಿದ್ದ ಮುತ್ತಣ್ಣ ಇನ್ನೂ ಅದೇ ರೂಟಿನಲ್ಲೇ ಇದ್ದಾನೋ ಇಲ್ಲಾ, ಎಲ್ಲಾ ರೂಟುಗಳಿಂದಲೂ ರೈಟು ಹೇಳಿದ್ದಾನೋ; ಅಥವಾ ನಿವೃತ್ತನಾಗಿ ಸುಂಕದಕಟ್ಟೆಯ ಬೀದಿ ಬೀದಿಯಲ್ಲಿ ‘ಎತ್ತಲೋ ಮಾಯವಾದ ಮುತ್ತಿನ ಮೂಗುತಿ; ನೀನು ಎತ್ತಿ ತಂದೆ ಎಲ್ಲಿಂದ ರಾಯ? ಮುತ್ತೆತ್ತರಾಯ’ ಎಂದು ಹಾಡಿಕೊಂಡು ಅಲೆಯುತ್ತಿದ್ದಾನೋ ಗೊತ್ತಿಲ್ಲ. ಅವನೇ ಹೇಳಿಕೊಂಡ ಅವನ ಬದುಕಿನಲ್ಲಾದ ಎರಡು ಪ್ರಮುಖ ಘಟನೆಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

1.

ಮುತ್ತಣ್ಣ ಬೆಂಗಳೂರಿಗೆ ಸಮೀಪದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಯವನು. ನಾಲ್ಕು ಗಂಡುಮಕ್ಕಳಲ್ಲಿ ಕೊನೆಯವನಾಗಿ ಹುಟ್ಟಿದ ಮುತ್ತಣ್ಣ ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡ. ಬಾಲ್ಯದಿಂದಲೂ ಮುತ್ತಣ್ಣನಿಗೆ ತಾಯಿಯಿಲ್ಲದ ತನ್ನ ಮನೆ, ಊರು, ಅಪ್ಪ, ಅಣ್ಣಂದಿರು, ಅತ್ತಿಗೆಯಂದಿರು, ಅವರ ಮಕ್ಕಳು ಯಾರೂ ತನ್ನವರು ಎಂದು ಅನಿಸಲೇಯಿಲ್ಲ. ಹತ್ತನೇ ವಯಸ್ಸಿಗೆ ಬರುವ ಹೊತ್ತಿಗೆ ಅಪ್ಪನೂ ತೀರಿಕೊಂಡನು. ಇನ್ನುಳಿದ ಅಣ್ಣಂದಿರಿಗೋ, ಅವರಿಗವರದೇ ಲೋಕ. ಹೆಂಡತಿ-ಮಕ್ಕಳು-ಹೆಂಡ-ಸಂಸಾರ-ಜೂಜು-ಜಮೀನು, ಇತ್ಯಾದಿ. ಹೇಗೋ ಬೆಳೆದು, ಹಾಗೂ ಹೀಗೂ ಓದಿ ಎಸ್ಸೆಸ್ಸೆಲ್ಸಿ ಪಾಸು ಮಾಡಿಕೊಂಡಿದ್ದ ಮುತ್ತಣ್ಣ ಒಂದು ದಿನ ಮುತ್ತತ್ತಿ ಹನುಮಂತರಾಯನ ತಾಯತ ಕಟ್ಟಿಕೊಂಡು ಉಟ್ಟಬಟ್ಟೆಯಲ್ಲೇ ಊರುಬಿಟ್ಟು ಬೆಂಗಳೂರಿಗೆ ಬಂದುಬಿಟ್ಟ. ಅವನನ್ನು ಹುಡುಕುವ ಪ್ರಯತ್ನವನ್ನೂ ಅಣ್ಣಂದಿರು ಮಾಡಲಿಲ್ಲ. ಕಲಾಸಿಪಾಳ್ಯದ ಬಾಳೆಮಂಡಿಯಲ್ಲಿ ಕೆಲಸಕ್ಕಿದ್ದ ಮುತ್ತಣ್ಣ ಯಾರೋ ಪುಣ್ಯಾತ್ಮರ ಕಣ್ಣಿಗೆ ಬಿದ್ದು ‘ಓದಿರೋ ಹುಡುಗ ನೀನು ಸರ್ಕಾರಿ ಕೆಲಸ ಮಾಡಬೇಕು ಕಣಯ್ಯ. ಕಂಡಕ್ಟರ್ ಪೋಸ್ಟ್ಗೆ ಅರ್ಜಿ ಕರೆದಿದ್ದಾರೆ. ಒಂದು ಅರ್ಜಿ ಗುಜರಾಯಿಸಿ ನೋಡು, ಏನಂತೆ?’ ಎಂದು ಹೇಳಿದಂತೆ ಅರ್ಜಿ ಹಾಕಿದ್ದ. ಸುದೈವದಿಂದ ಸಿಕ್ಕೇಬಿಟ್ಟ ಕಂಡಕ್ಟರ್ ಕೆಲಸ ಮುತ್ತಣ್ಣನಿಗೆ ತನ್ನ ತಾಯಿಯೇ ಮತ್ತೆ ಸಿಕ್ಕಷ್ಟು ಸಂತೋಷವಾಗಿಬಿಟ್ಟಿತು. ದಿಕ್ಕೆಟ್ಟು ಹರಿಯುವ ಈ ಬದುಕೆಂಬ ಪ್ರವಾಹದಲ್ಲಿ ಬಸ್ಸೆಂಬ ದಿಮ್ಮಿ ಸಿಕ್ಕಂತಾಗಿ ತನ್ನ ಸರ್ವಸ್ವವನ್ನೂ ಅದಕ್ಕೆ ಅರ್ಪಿಸಿಕೊಂಡುಬಿಟ್ಟ.

ತಮ್ಮ ಸರ್ಕಾರಿ ಕೆಲಸ ಹಿಡಿದಿದ್ದಾನೆಂದು ತಿಳಿದ ಬಳಿಕ ಉಕ್ಕಿಬಂದ ಹುಸಿ ಅಭಿಮಾನದಿಂದ ಅಣ್ಣಂದಿರು ಅವರ ಮಕ್ಕಳ ಸಮೇತ ಬೆಂಗಳೂರಿಗೆ ಬಂದು ಮುತ್ತಣ್ಣನ ಒಡನಾಟಕ್ಕೆ ಹಾತೊರೆಯುತ್ತಿದ್ದರು. ಎರಡನೇ ಅಣ್ಣನ ಹೆಂಡತಿಯಂತೂ ಊರಲ್ಲಿದ್ದಾಗ ಮುಖ ಸಿಂಡರಿಸುತ್ತಿದ್ದವಳು ಈಗ ಗಂಡ ಮತ್ತು ಮಕ್ಕಳನ್ನು ಮುಂದುಮಾಡಿ ಮದುವೆಯಾಗದೇ ಇರುವ ತನ್ನ ಕಡೆಯ ತಂಗಿಗೆ ಮುತ್ತಣ್ಣನನ್ನು ತಂದುಕೊಳ್ಳುವ ಉದ್ದೇಶದಿಂದ ಬೆಂಗಳೂರಿಗೆ ಅಟ್ಟುತ್ತಿದ್ದಳು. ಮುತ್ತಣ್ಣ ಮದುವೆಯಿರಲಿ, ಮತ್ತೆ ತನ್ನೂರಿಗೂ ಕಾಲಿಡಲಿಲ್ಲ; ಬೆಂಗಳೂರಿನಲ್ಲಿ ತನ್ನ ರೂಮು ಎಲ್ಲಿದೆ ಎಂದೂ ಸುಳಿವು ಬಿಟ್ಟುಕೊಡಲಿಲ್ಲ. ನಿರಂತರವಾಗಿ ಹರಿವ ಜನಸಾಗರದ ಸಂಗಮದಂತಿರುವ ಮೆಜೆಸ್ಟಿಕ್ಕೆಂಬ ನಿಲ್ದಾಣದಲ್ಲೇ ಅವರನ್ನೆಲ್ಲ ಭೆಟ್ಟಿಯಾಗಿ, ಮಾತನಾಡಿಸಿ, ಒಂದಷ್ಟು ಮಿಠಾಯಿ, ಬ್ರೆಡ್ಡು, ಬಿಸಕತ್ತುಗಳನ್ನು ಕೊಡಿಸಿ ಸಾಗಹಾಕಿಬಿಡುತ್ತಿದ್ದ. ಆದರೆ ತನಗೆ ಮನಸು ಬಂದಾಗ ಮಾತ್ರ ಹೇಳದ ಕೇಳದೆ ಮುತ್ತತ್ತಿಯ ಹನುಮಂತರಾಯನ ದರ್ಶನಕ್ಕೆ ರಾತ್ರೋ ರಾತ್ರಿ ಹೋಗಿಬಿಡುತ್ತಿದ್ದ. ಡಾ. ರಾಜಕುಮಾರರು ಹಾಡಿರುವ ‘ಎತ್ತಲೋ ಮಾಯವಾದ ಮುತ್ತಿನ ಮೂಗುತಿ; ನೀನು ಎತ್ತಿ ತಂದೆ ಎಲ್ಲಿಂದ ರಾಯ? ಮುತ್ತೆತ್ತರಾಯ’ ಹಾಡು ಕೇಳಿದಾಗಲೆಲ್ಲ ತನ್ನೂರಿನ ತನ್ನ ಕುಲದೈವದ ಬಗ್ಗೆ ರಾಜಕುಮಾರರು ಎಷ್ಟು ಭಕ್ತಿಪರವಶರಾಗಿ ಹಾಡಿದ್ದಾರಲ್ಲ ಎಂದು ಹೆಮ್ಮೆಪಡುತ್ತಿದ್ದ. ಅವನ ದಿನ ಆರಂಭವಾಗುತ್ತಿದ್ದದ್ದೇ ಟೇಪ್‌ರೆಕಾರ್ಡರಿನಲ್ಲಿನ ಈ ಹಾಡಿನಿಂದ.

2.

ಮುತ್ತಣ್ಣ ಸ್ವಭಾವತಃ ಬಹಳ ಲವಲವಿಕೆಯ ಆಸಾಮಿ. ಇನ್ನು ನಿರೀಕ್ಷಿಸದೇ ಇದ್ದ ಕಂಡಕ್ಟರ್ ಕೆಲಸ ಸಿಕ್ಕು ಅವನ ಲವಲವಿಕೆಯು ದುಪ್ಪಟ್ಟಾಗಿತ್ತು. ಝಗಮಗ ಲೈಟುಗಳನ್ನು ಹಾಕಿಕೊಂಡು ಮಂಡ್ಯ, ಮಳವಳ್ಳಿಯಿಂದ ರೊಯ್ಯನೆ ತಮ್ಮೂರಿಗೆ ಬರುತ್ತಿದ್ದ ‘ಮಾರುತಿ ಟ್ರಾವೆಲ್ಸ್’ ಬಸ್ಸಿನಲ್ಲಿ ಚೀಟೀಕೊಡುತ್ತಿದ್ದ ಬೋರೇಗೌಡನೇ ಕಣ್ಣಮುಂದೆ ಬರುತ್ತಿದ್ದನು. ಮುತ್ತಣ್ಣ ಕೆಲಸಕ್ಕೆ ಸೇರಿದ ಹೊಸತರಲ್ಲಿ ಅವನನ್ನು ಇನ್ನಿಲ್ಲದಂತೆ ನೆನೆಸಿಕೊಳ್ಳುತ್ತಿದ್ದನು. ಎಂಭತ್ತರ ಆಸುಪಾಸಿನಲ್ಲಿದ್ದರೂ ಲವಲವಿಕೆಯಿಂದ ಬಸ್ಸಿನಲ್ಲಿ ಹಿಂದೆ ಮುಂದೆ ಓಡಾಡುತ್ತ, ಕಿವಿರುಮ್ಮೆನ್ನುವಂತೆ ವಿಸೀಲು ಹಾಕುತ್ತಿದ್ದ, ಗಂಟಲಿಂದ ಹೊಮ್ಮುವ ಕರ್ಕಶಮಾಡಿಕೊಂಡು ರೈಟ್ ಹೇಳುತ್ತಿದ್ದ, ಬಸ್ಸು ನಿಂತಕಡೆಯಲ್ಲೆಲ್ಲ ಚಂಗನೆ ಜಿಗಿದು ಬೀಡೀಕಚ್ಚುತ್ತಿದ್ದ, ಕೆಳಗೆ ನಿಂತೇ ರೈಟು ಹೇಳಿ ಬಸ್ಸು ಇನ್ನೇನು ಹೊರಟೇ ಹೋಯಿತು ಎನ್ನುವಾಗ ಅದ್ಯಾವ ಮಾಯದಲ್ಲೋ ಚಂಗನೆ ಹತ್ತಿಕೊಂಡು ದಂಗುಬಡಿಸುತ್ತಿದ್ದ ಬೋರೇಗೌಡನೇ ಮುತ್ತಣ್ಣನಿಗೆ ಸ್ಫೂರ್ತಿಯಾಗಿದ್ದನು. ಎಷ್ಟೋ ವಿಷಯಗಳಲ್ಲಿ ಅವನನ್ನು ಅನುಕರಿಸುತ್ತಿದ್ದನು ಕೂಡ. ಒಂದು ಬಗೆ ರಾಗವಾಗಿ ರೈಟ್ ಹೇಳುವ ರೀತಿಯಲ್ಲಿರಬಹುದು ಅಥವಾ ಬಸ್ಸು ಪ್ರಯಾಣಿಸುವ ಮಾರ್ಗಗಳ ಹೆಸರುಗಳನ್ನು ರಾಗವಾಗಿ ಕೂಗಿ ಪ್ರಯಾಣಿಕರನ್ನು ಆಹ್ವಾನಿಸುವುದಿರಬಹುದು ಹೀಗೆ ಹಲವಾರು ವಿಷಯಗಳಲ್ಲಿ ಮುತ್ತಣ್ಣ ಬೋರೇಗೌಡನನ್ನು ಅನುಕರಿಸುತ್ತಿದ್ದನು. ಆದರೆ ಬೆಂಗಳೂರಿನ ಜನಸಾಗರದ ಬದುಕಿನಲ್ಲಿ ಸ್ವತಃ ಮುತ್ತಣ್ಣನಿಗೆ ಮುತ್ತಣ್ಣನೇ ಅನಾಮಿಕನೆನಿಸಿಬಿಡುವಾಗ ಇನ್ನು ಬೋರೇಗೌಡನಾದರೂ ಎಷ್ಟು ಕಾಲ ನೆನಪಿನಲ್ಲುಳಿಯಬಲ್ಲನು? ಹಾಗೆ ಹೊಸದಾಗಿ ಕಂಡುಕೊಂಡದ್ದಾವುದು, ಬೋರೇಗೌಡನಿಂದ ಕಲಿತದ್ದಾವುದು ಒಂದೂ ತಿಳಿಯದ ಗೋಜಲಿನಲ್ಲಿ ಉತ್ಕಟವಾಗಿ ನಿತ್ಯಕರ್ಮದಲ್ಲಿ ತೊಡಗಿಕೊಳ್ಳುತ್ತಿದ್ದನು ಮುತ್ತಣ್ಣ. ಬದುಕಿನ ಎಲ್ಲಾ ಗೋಜಲುಗಳನ್ನು, ಕೊರತೆಗಳನ್ನೂ ಒಂದೇ ಟ್ರಿಪ್ಪಿನಲ್ಲಿ ನೀಗಿಕೊಳ್ಳುವವನಂತೆ ಬಸ್ಸಿನಲ್ಲಿ ತನ್ನನ್ನು ತಾನು ತೇದುಕೊಳ್ಳುತ್ತಿದ್ದನು. ಅವನು ಒಂದು ಕ್ಷಣ ಬಸ್ಸಿನಲ್ಲಿ ಉಸ್ಸಪ್ಪ ಎಂದು ಕುಂತ ಚಿತ್ರವನ್ನು ನೋಡಿದವರು ಅತಿವಿರಳ. ದಿನದ ಟ್ರಿಪ್ಪುಗಳಲ್ಲಿ ಎಷ್ಟೋ ವೇಳೆ ಸೀಟುಗಳು ಖಾಲಿಯಿದ್ದಾಗಲೂ ಕೂಡ ಅವನೆಂದೂ ಕೂತವನಲ್ಲ. ಸದಾ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತ ‘ಚೀಟೀ ಯಾರಂಕಲ್ ಚೀಟಿ ನೋಡಿ ಇಲ್ಲಿ... ಚೀಟೀ ತೊಗೊಂಡು ಪ್ರಯಾಣ ಮಾಡಿ..’ ಎಂದುಕೊಂಡೋ ಅಥವಾ ಹಿಂದಿನ ಬಾಗಿಲಿನ ಮೆಟ್ಟಿಲಿನ ಮೇಲೆ ನಿಂತು ಕಂಭಕ್ಕೆ ಒರಗಿಕೊಂಡು ತನ್ನ ಪುಟ್ಟ ಅಲ್ಯುಮಿನಿಯಮ್ ಪ್ಯಾಡಿನಲ್ಲಿ ಹಾಳೆಯನ್ನಿಟ್ಟುಕೊಂಡು ಟ್ರಿಪ್ಪಿನ ವಿವರಗಳನ್ನು ಬರೆದುಕೊಳ್ಳುತ್ತ ಕಳೆಯುತ್ತಿದ್ದನು.

ಆದರೆ ಮುತ್ತಣ್ಣನಿಗೆ ಈ ಎಲ್ಲರನ್ನೂ ಅಂಕಲ್ ಮತ್ತು ಆಂಟಿ ಎಂದು ಸಂಬೋಧಿಸುವ ವಿಚಿತ್ರ ಖಯ್ಯಾಲಿ ಎಲ್ಲಿಂದ ಬಂತೋ? ಯಾರಿಂದ ಬಂತೋ? ಒಂದೂ ಗೊತ್ತಿಲ್ಲ. ಮುತ್ತಣ್ಣ ಮಾತ್ರ ವಯಸ್ಸಿನ ಬೇಧವಿಲ್ಲದೆ ಬಸ್ಸಿಗೆ ಹತ್ತುವ ಪುಲ್ಲಿಂಗದ ಎಲ್ಲರನ್ನೂ ಅಂಕಲ್ ಎನ್ನುತ್ತಿದ್ದ; ಸ್ತ್ರೀಲಿಂಗದ ಎಲ್ಲರನ್ನೂ ಆಂಟಿ ಎನ್ನುತ್ತಿದ್ದ! ಹೊಸಬರಿಗೆ ಮುತ್ತಣ್ಣನ ಈ ವರಸೆ ಕಂಡು ‘ಈತನೇನು ತನ್ನನ್ನು ಗೇಲಿ ಮಾಡುತ್ತಿದ್ದಾನೇನೋ’ ಎಂದು ಸಂದೇಹ ಬರದೆ ಇರುತ್ತಿರಲಿಲ್ಲ. ಆದರೆ ಅವರ ಕಣ್ಣಮುಂದೆಯೇ ಮುತ್ತಣ್ಣ ಎಲ್ಲರನ್ನೂ ಅಂಕಲ್, ಆಂಟಿ ಎಂದು ನಿಸ್ಪೃಹವಾಗಿ ಸಂಬೋಧಿಸುವುದ ಕಂಡು ಸುಮ್ಮನಾಗಿಬಿಡುತ್ತಿದ್ದರು. ಶಾಲಾ ಕಾಲೇಜಿನ ಹುಡುಗ ಹುಡುಗಿಯರಿಗಂತೂ ಅಂಕಲ್ ಮುತ್ತಣ್ಣನ ಬಸ್ಸು ಹತ್ತಿದರೆ ಅದೆಂತದೋ ಖುಷಿ. ಕಾಲೇಜಿಗೆ ತಡ ಆದರೂ ಖೇರುಮಾಡದೆ ಕಾದು ಅಂಕಲ್ ಮುತ್ತಣ್ಣನ ಬಸ್ಸುಹತ್ತುವ ಹುಡುಗರಿದ್ದರು. ಮುತ್ತಣ್ಣನ ಬಾಯಿಂದ ‘ಅಂಕಲ್’ ಎಂದು ಕರೆಸಿಕೊಳ್ಳಬೇಕೆಂದೇ ಕಾದು ನಿಂತಿರುವವರಿದ್ದರು. ಅವರೆಲ್ಲಾ ಹೇಗಾದರೂ ಮಾಡಿ, ಕನಿಷ್ಟಪಕ್ಷ ಅವನ ಕೈಯ್ಯಿಂದ ‘ಅಯ್ಯೋ ತಿಕ ಮುಚ್ಕಂಡಿರಿ ಅಂಕಲ್’ ಎಂದು ಬೈಸಿಕೊಂಡಾದರೂ ತೀರಬೇಕೆಂದು ಬೇಕೆಂತಲೇ ಮೆಟ್ಟಿಲಿನ ಮೇಲೆ ನಿಲ್ಲುವುದು, ಬಸ್ಸಿನ ಹೊರಗೆ ಕೈಹಾಕುವುದು, ಡ್ರೈವರ್‌ನ ಸಮೀಪ ಹೋಗಿ ನಿಂತುಬಿಡುವುದು ಹೀಗೆ ಏನೇನೋ ಮಾಡಿ ಮಾಡಿ ಕಡೆಗೂ ಬೈಸಿಕೊಂಡು ನಕ್ಕು ಪಾವನರಾಗುತ್ತಿದ್ದರು!

“ಅಂಕಲ್ ಸ್ವಲ್ಪ ಒಳಗ್‌ಬನ್ನಿ ಅಂಕಲ್... ನಿಮ್ದು ನಿಮ್ಮ ಕೈಯಲ್ಲಿ ಹಿಡಕೊಂಡು ನಿಂತುಕೊಳ್ಳಿ ಅಂಕಲ್! ಪಾಸ್ನ. ಒಳಗ್ಹೋಗಿ ಆಂಟಿ ಜಾಗಯಿದೆ. ಇದ್ಯಾಕೆ ಹಿಂಗ್ ಡ್ರೈವರ್ ಅಂಕಲ್ ಹಿಂದೆ ಸೆಕ್ಯುರಿಟಿ ಗಾರ್ಡ್ ನಿಂತಂಗ್ ನಿಂತಿದ್ದೀರಿ ಒಳಗೆ ಹೋಗಿ ಆಂಟಿ...”

-ಹೀಗೆ ಅವನ ಬಾಯಿಂದ ಪ್ರತಿ ಸಾರಿ ಅಂಕಲ್, ಆಂಟಿ ಎಂಬ ಪದಗಳು ಹೊರಡುತ್ತಿದ್ದಂತೆ ಇಡೀ ಬಸ್ಸಿನಲ್ಲಿದ್ದ ಎಲ್ಲಗಂಟುಮುಖಗಳೂ ಒಮ್ಮೆ ಸಡಿಲಗೊಂಡು ಬಸ್ಸೇ ನಕ್ಕಿತೇನೋ ಎಂಬಂತೆ ಕಿಲಕಿಲ ಕುಲುಕುತ್ತಿತ್ತು. ಬದುಕಿನ ನೂರಾಎಂಟು ಗೋಜಲುಗಳಿಂದ ಬಸವಳಿದು ಬಸ್ಸುಹತ್ತುವ ಗಂಟುಮುಖಗಳೆಲ್ಲವೂ ಮುತ್ತಣ್ಣನ ದೆಸೆಯಿಂದ ನೋಡನೋಡುತ್ತಿದ್ದಂತೆ ಹಿತಕರವಾದ ಆಶ್ಚರ್‍ಯ, ನಗು, ತಮಾಷೆಯನ್ನು ಹೊತ್ತ ಅರಳುಮೊಗಗಳಾಗಿ ಇಳಿಯುತ್ತಿದ್ದ ಪವಾಡದ ಅರಿವು ಮಾತ್ರ ಸ್ವತಃ ಮುತ್ತಣ್ಣನಿಗೇ ಇರಲಿಲ್ಲ! ಮುತ್ತಣ್ಣ ಮಾತ್ರ ಯಾವ ಮುಲಾಜೂ ಇಲ್ಲದೆ ಆಡುವ ಮಕ್ಕಳಿಂದ ಹಿಡಿದು ಮುದುಕ-ಮುದುಕಿಯರವರೆಗೆ ‘ಅಂಕಲ್’ ‘ಆಂಟಿ’ ಎಂದು ಚೀಟಿ ಹರಿಯುತ್ತ ಮುಂದಿನಿಂದ ಹಿಂದಕ್ಕೆ, ಹಿಂದಿನಿಂದ ಮುಂದಕ್ಕೆ ಓಡಾಡುತ್ತಿರುತ್ತಿದ್ದನು. ಓಡಾಡುವ ಭರದಲ್ಲಿ ಅಕಸ್ಮಾತ್ ಯಾರ ಕಾಲು ತುಳಿದರೂ ತಕ್ಷಣ ‘ಸಾರಿ ಅಂಕಲ್... ಸ್ವಲ್ಪ ಸೈಡಿಗ್ ನಿಂತುಕೊಳ್ಳಿ’ ಎನ್ನುವನು. ತುಳಿಸಿಕೊಂಡವರಿಗೆ ತುಳಿಸಿಕೊಂಡ ನೋವಿಗಿಂತ ತನ್ನನ್ನು ಇಷ್ಟುದೊಡ್ಡ ಬೆಳೆದ ಮನುಷ್ಯನೊಬ್ಬನು, ಏನಿಲ್ಲವೆಂದರೂ ನಲವತ್ತೈದು ವರ್ಷ ತೂಗುವ ವ್ಯಕ್ತಿಯೊಬ್ಬ ‘ಅಂಕಲ್’ ಎಂದು ಸಂಬೋಧಿಸುತ್ತಿರುವುದರ ಅನೌಚಿತ್ಯದ ಕುರಿತ ವಿಚಿತ್ರ ನಲಿವೇ ಮೊದಲಾಗಿ ಮುಗುಳ್ನಕ್ಕುಬಿಡುವರು; ಅಥವಾ ‘ಹೋಗಲಿ ಬಿಡಿ ಅಂಕಲ್’ ಎಂದು ಪ್ರತ್ಯುತ್ತರ ಕೊಟ್ಟುಬಿಡುವರು!

ಮುತ್ತಣ್ಣನ ಪ್ರೀತಿ, ಕೋಪ, ತಾಪ, ಬೈಗುಳ, ಹೊಗಳಿಕೆ ಎಲ್ಲವೂ ಅಂಕಲ್, ಆಂಟಿಯಲ್ಲೇ ಪ್ರಕಟವಾಗುತ್ತಿದ್ದವು. ಯಾರಾದರೂ ಮಹಿಳೆಯರಿಗೆ ಮೀಸಲಿಟ್ಟ ಸೀಟಿನಲ್ಲಿ ಕೂತಿದ್ದರೆ ಅವರಿಗೆ ನಯವಾಗಿ ಮತ್ತಷ್ಟೇ ತೀಕ್ಷ್ಣವಾಗಿ ತಾಗುವಂತೆ ಬೈದು ಎಬ್ಬಿಸಲೂ ‘ಅಂಕಲ್’ ಪದವೇ ಬಳಕೆಯಾಗುತ್ತಿತ್ತು. ಚಿಲ್ಲರೆಯ ಲೆಕ್ಕ ತಪ್ಪಿದಾಗ ಕ್ಷಮೆಯ ಕೇಳಲೂ, ಮುಂದೆಮುಂದೆ ಬಂದು ಹೆಣ್ಣುಮಕ್ಕಳ ಅಂಗಾಂಗಗಳ ಸ್ಪರ್ಶಕ್ಕೆ ಹಾತೊರೆಯುವ ಕಾಮಬುರುಕರಿಗೆ, ಕಿಸೆಯ ಪರ್ಸನ್ನು ಹಾರಿಸಲೆತ್ನಿಸುವ ಕಳ್ಳಬುರುಕರಿಗೆ ನಾಲ್ಕು ತದುಕಲೂ ಅವೇ ಪದವೇ ಬಳಕೆಯಾಗುತ್ತಿದ್ದವು. ಅವವೇ ಪದಗಳು; ಆದರೆ ಸನ್ನಿವೇಷ ಮತ್ತು ಭಾವಕ್ಕೆ ತಕ್ಕ ವಾಗ್ರೂಪ ಪಡೆದುಕೊಳ್ಳುತ್ತಿದ್ದವು.

3.

ಮುತ್ತಣ್ಣನ ಅಂಕಲ್ ಆಂಟಿ ಸಂಬೋಧನೆಯಷ್ಟೆ ನಿಗೂಢವಾದದ್ದು ಮತ್ತು ಅಬೇಧ್ಯವಾದದ್ದು ಅವನ ದಿರಿಸು. ನಸುಗೆಂಪು ಮೈಬಣ್ಣದ ಮುತ್ತಣ್ಣ ಯಾವಾಗಲೂ ಇನ್‌ಶರ್ಟ್ ಮಾಡದ ಪೂರ್ತಿ ತೋಳಿನ ಡಿಪಾರ್ಟ್ಮೆಂಟಿನ ಯುನಿಫಾರ್ಮ್ ಕಾಕಿ ಅಂಗಿಯನ್ನು ತೊಡುತ್ತಿದ್ದನು. ಅದೇ ಬಣ್ಣದ ಪ್ಯಾಂಟು. ಇವೆರಡಕ್ಕೂ ಸಂಬಂಧವೇ ಇರದ ಒಂದು ಬಿಳಿ, ಕೆಂಪು, ಹಸಿರು ಹೀಗೆ ಮುರ‍್ನಾಕು ಬಣ್ಣಗಳ ಮಿಶ್ರಣದ ಶೂಸು. ಕುತ್ತಿಗೆಗೆ ಯಾವಾಗಲೂ ಬಿಗಿದ ಒಂದು ಕರವಸ್ತ್ರ ಮತ್ತು ತಲೆಗೆ ಒಂದು ಕೆಂಪು ಹಳದಿ ಮಿಶ್ರಿತ ಕ್ಯಾಪು. ಅವನು ಧರಿಸುತ್ತಿದ್ದ ಬಣ್ಣದ ಬೂಟಾಗಲೀ, ಕುತ್ತಿಗೆಗೆ ಬಿಗಿದ ಚೌಕಳಿ ಕರವಸ್ತ್ರವಾಗಲಿ ಮತ್ತು ಇದೆಲ್ಲಕ್ಕಿಂತ ಮುಖ್ಯವಾಗಿ ತಲೆಗೆ ಹಾಕಿಕೊಂಡ ಕರ್ನಾಟಕ ಧ್ವಜದಂಥಾ ಟೋಪಿಯಾಗಲೀ ಎಂದೂ ಅವನಿಂದ ಬೇರ್ಪಟ್ಟಿದ್ದೇಇಲ್ಲ. ಟೋಪಿ, ಬೆವರಿನ ಕರವಸ್ತ್ರ, ಬಣ್ಣದ ಬೂಟುಗಳಿಲ್ಲದೇ ಮುತ್ತಣ್ಣನೇ ಬಂದು ತಾನು ಮುತ್ತಣ್ಣ ಎಂದು ಹೇಳಿದರೂ ಜನರು ಮಾತ್ರ ಖಂಡಿತಾ ನಂಬಲಾರರು. ಮಳೆಗಾಲವಿರಲಿ, ಚಳಿಗಾಲವಿರಲಿ, ಬೇಸಿಗೆಯಿರಲಿ ಈ ವೇಷದಲ್ಲಿ ಏನೂ, ಯಾವೊಂದೂ ಬದಲಾವಣೆಯಾಗುತ್ತಿರಲಿಲ್ಲ.

ಮುತ್ತಣ್ಣನನ್ನು ಹಲವು ಬಾರಿ ಹಲವು ಜನಗಳು ಈ ವಿಷಯವಾಗಿ ಕೇಳಲು ಪ್ರಯತ್ನಿಸಿದ್ದಾರೆ. ಆದರೆ ಇವನ್ನೆಲ್ಲ ಸ್ವತಃ ಮುತ್ತಣ್ಣನೇ ಎಂದೂ ಬಿಡಿಸಿ ನೋಡಿಕೊಂಡವನಲ್ಲ; ಯೋಚಿಸಿದವನಲ್ಲ. ‘ಯಾವುದೋ ಒಂದು ಕಾಲದಲ್ಲಿ ಇದೇ ತನ್ನ ವೇಷ ಎಂದು ಅನಿಸಿದೆ ಹಾಗಾಗಿ ತೊಟ್ಟೂ ತೊಟ್ಟೂ ಕಡೆಗೆ ಅದೇ ಖಾಯಮ್ಮಾಗಿದೆ. ಅಷ್ಟೆ ಬಿಟ್ಟರೆ ಮತ್ತೇನಿಲ್ಲ ಅಂಕಲ್’ ಎನ್ನುತ್ತಿದ್ದನು.

“ಯಾಕೆ ಮುತ್ತಣ್ಣ ಎಲ್ಲರಿಗೂ ನೀನು ಅಂಕಲ್ ಆಂಟಿ ಅಂತೀಯಾ?” ಎಂದರೆ,

“ಏನೋ ಯಾರಿಗ್ಗೊತ್ತು ಅಂಕಲ್? ನಾವು ಸರ್ಕಾರಿ ಕೆಲಸದಲ್ಲಿರೋರು, ಸರ್ಕಾರ ಸಂಬಳ ಕೊಡುತ್ತೆ. ಸರ್ಕಾರದ ಸಂಬಳ ಬರೋದು ದಿವಸಾ ನಮ್ಮ ಬಸ್ಸಲ್ಲಿ ಓಡಾಡೋ ನಿಮ್ಮಂಥವರಿಂದ ಅಲ್ವ ಅಂಕಲ್?”

“ಅದಕ್ಕೇ?”

“ಅದಕ್ಕೇ, ನಿಮಗೆ ರೆಸ್ಪೆಕ್ಟ್ ಕೊಡಬೇಕಲ್ಲ ಅಂಕಲ್? ಅದಕ್ಕೆ.” ಎನ್ನುತ್ತಿದ್ದ.

ನಿಜವಾಗಿಯೂ ಪ್ರಶ್ನೆ ಕೇಳಿದ ಯಾರಿಗೂ ಅವನ ತರ್ಕವೇ ಅರ್ಥವಾಗುತ್ತಿರಲಿಲ್ಲ. ಇನ್ನೇನೋ ಕೇಳಬೇಕೆನ್ನುವಷ್ಟರಲ್ಲಿ ಮತ್ಯಾರಿಗೋ ಚೀಟಿ ಕೊಡಲು ಹೋಗಿಬಿಡುತ್ತಿದ್ದನು; ಹದಿನೈದಿಪ್ಪತ್ತು ಅಡಿಯ ಬಸ್ಸಿನಲ್ಲಿ ಯಾರ ಕೈಗೂ ಸಿಗದೆ ಪಾದರಸದಂತೆ ಓಡಾಡುತ್ತಿದ್ದನು ಮುತ್ತಣ್ಣ.

ಮುತ್ತಣ್ಣ ಯಾವ ಪ್ರಯಾಣಿಕರಿಗೂ ಅವರ ಚಿಲ್ಲರೆ ಹಣವನ್ನು ಹಿಂದಿರುಗಿಸದೆ ಬಿಡುತ್ತಿರಲಿಲ್ಲ; ಎಷ್ಟೋ ವೇಳೆ ಪ್ರಯಾಣಿಕರೇ ಚಿಲ್ಲರೆ ಪಡೆಯದೆ ಮರೆತು ಇಳಿದು ಹೋಗಿದ್ದರೂ, ಬಸ್ಸು ನಿಲ್ಲಿಸಿ ಇವನೇ ಓಡಿ ಹೋಗಿ ಅವರ ಚಿಲ್ಲರೆ ಹಣವನ್ನು ಮರಳಿಸಿ ಬರುತ್ತಾನೆ. ಪ್ರತಿ ಸ್ಟಾಪು ಬರುವ ಮುಂಚೆ ‘ಯಾರಿಗೆ ಚಿಲ್ಲರೆ ಬಾಕಿ ಇದೆ ನೋಡಿ ಅಂಕಲ್, ಆಂಟಿ ನೋಡಿ; ಕೇಳಿ ಇಸಗೊಳ್ರಿ’ ಎಂದು ಕೂಗುತ್ತ ಓಡಾಡುತ್ತಾನೆ. ಅಷ್ಟಾಗಿಯೂ ದಿನದ ಅಂತ್ಯದಲ್ಲಿ ಅಕಸ್ಮಾತ್ತಾಗಿ ಉಳಿಯುವ ಹೆಚ್ಚಿನ ಹಣವನ್ನು ಬಸ್ಸಿನಲ್ಲೇ ಇರುವ ಒಂದು ಸಣ್ಣ ಗಾಜಿನ ಪೆಟ್ಟಿಗೆಯಲ್ಲಿ ಹಾಕುತ್ತಾನೆ. ಅದು ತುಂಬಿದಾಗ ಅದನ್ನು ಪ್ರವಾಹ ಸಂತ್ರಸ್ತರ ನೆರವಿಗೋ, ದೇಶ ಕಾಯುವ ಯೋಧರ ನೆರವಿನ ನಿಧಿಗೋ ಅಥವಾ ರೈತರ ಸಂಕಷ್ಟ ಪರಿಹಾರ ಕೇಂದ್ರಕ್ಕೋ ಹೀಗೆ ಆಯಾ ಸಂದರ್ಭದಲ್ಲಿ ಯಾವುದರ ಅಗತ್ಯ ಇರುತ್ತದೆಯೋ ಅಲ್ಲಿಗೆ ಸ್ವತಃ ಹೋಗಿ ತಲುಪಿಸುತ್ತಾನೆ ಮುತ್ತಣ್ಣ. ಮುತ್ತಣ್ಣನ ಈ ಉದ್ದೇಶವನ್ನು ಅರಿತ ಹಲವು ಪ್ರಯಾಣಿಕರು ದಿನವೂ ತಾವು ಬಸ್ಸಿನಿಂದ ಇಳಿಯುವಾಗ ಜೇಬಿನಲ್ಲಿದ್ದ ಚಿಲ್ಲರೆಯಲ್ಲಿ ಕೆಲವನ್ನು ಈ ಡಬ್ಬಿಗೆ ಹಾಕಿ ಹೋಗುತ್ತಾರೆ; ಆ ಮೂಲಕ ಮುತ್ತಣ್ಣ ಮಾಡುವ ಅಳಿಲು ಸೇವೆಗೆ ತಮ್ಮದೂ ಒಂದು ಮರಳಿನ ಕಣವನ್ನು ಸೇರಿಸುತ್ತಾರೆ.

ಮುತ್ತಣ್ಣನ ರೂಟು ಅಂದರೆ ಇಲಾಖೆಯ ಅಧಿಕಾರಿಗಳಿಗೆ ಚಿಂತೆಯೇಯಿಲ್ಲ. ಒಂದೇಒಂದು ಕಪ್ಪುಚುಕ್ಕೆಯಿಲ್ಲದಂತೆ ತನ್ನ ವೃತ್ತಿಜೀವನದ ಇಪ್ಪತ್ತು ವರ್ಷಗಳನ್ನು ಕಳೆದಿದ್ದರಿಂದ ಮುತ್ತಣ್ಣನ ಬಸ್ಸಿಗೆ ಯಾವಾಗಲೂ ಹೊಸಹೊಸ ಡ್ರೈವರ್‌ಗಳನ್ನು ಹಾಕುತ್ತಿದ್ದರು. ಅವರಿಗೆ ಮುತ್ತಣ್ಣ ತನ್ನದೇ ಆದ ರೀತಿಯಲ್ಲಿ ತರಬೇತಿ ಕೊಡುತ್ತಿದ್ದನು. ಅವರನ್ನೂ ಅಂಕಲ್ ಎಂದೇ ಕರೆಯುತ್ತಿದ್ದನೆಂದು ಬೇರೆ ಹೇಳಬೇಕಿಲ್ಲ.

4.

ಇಂಥ ಮುತ್ತಣ್ಣನ ಬದುಕಿನಲ್ಲಿ ಒಂದು ದಿನ ವಿಚಿತ್ರವಾದ ಹಾಗೂ ಘೋರವಾದ ಸನ್ನಿವೇಶವೊಂದು ಎದುರಾಯಿತು. ಆಗಷ್ಟೆ ಟ್ರೇನಿಂಗು ಮುಗಿಸಿದ ಇನ್ನೂ ಇಪ್ಪತ್ತಾರು ದಾಟಿರದ ಕಲಬುರ್ಗಿಯ ಹುಡುಗ ಫಾರೂಕ್‌ನನ್ನು ಒಂದಷ್ಟು ದಿನ ಬೆಂಗಳೂರಿನ ಟ್ರಾಫಿಕ್ಕಿಗೆ ಪಳಗಲಿ ಎಂದು ಮುತ್ತಣ್ಣನ ರೂಟಿಗೆ ಹಾಕಿದರು. ಮಡಿವಾಳ ದಾಟಿ ಎಲೆಕ್ಟ್ರಾನಿಕ್ ಸಿಟಿಯ ಕಡೆಗೆ ಸಾಗುತ್ತಿದ್ದ ಬಸ್ಸು ಇದ್ದಕ್ಕಿದ್ದಂತೆ ರಸ್ತೆಬಿಟ್ಟು ಫುಟ್‌ಪಾತ್ ಕಡೆಗೆ ಚಲಿಸತೊಡಗಿತು. ಪ್ರಯಾಣಿಕರು ಇದನ್ನು ಗಮನಿಸುವ ಮೊದಲೇ ಬಾಗಿಲಿನ ಮೆಟ್ಟಿಲುಗಳ ಬಳಿ ನಿಂತಿದ್ದ ಮುತ್ತಣ್ಣನಿಗೆ ತಿಳಿದು ಚಂಗನೆ ಹಾರಿ ಡ್ರೈವರ್ ಕೈಲಿದ್ದ ಸ್ಟೇರಿಂಗ್‌ಅನ್ನು ಕಸಿದುಕೊಂಡು ಮತ್ತೆ ರಸ್ತೆಗೆ ತಂದು ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿ ನೋಡುತ್ತಾನೆ- ಡ್ರೈವರ್ ಫಾರೂಕನು ನಿಶ್ಚಲನಾಗಿ ಸೀಟಿನಿಂದ ಬೀಳುತ್ತಿದ್ದಾನೆ; ಅವನ ಮುಖ, ಅಂಗಿ, ಎಲ್ಲವೂ ಬೆವರುತ್ತಿದೆ. ಫಾರೂಕನಿಗೆ ಹೃದಯಾಘಾತವಾಗಿರುವುದರ ಅಂದಾಜು ಸಿಕ್ಕಿಬಿಟ್ಟಿತು ಮುತ್ತಣ್ಣನಿಗೆ. ಪ್ರಯಾಣಿಕರ ಸಹಾಯ ಪಡೆದು ಫಾರೂಕನನ್ನು ಕೆಳಗಿಳಿಸಿ ಮಲಗಿಸಿ ತನ್ನ ಎರಡೂ ಅಂಗೈಗಳಿಂದ ಅವನ ಹೃದಯದ ಭಾಗವನ್ನು ಒತ್ತತೊಡಗಿದನು ಮುತ್ತಣ್ಣ. ಸುಮಾರು ಬಾರಿ ಒತ್ತಿ, ತುರ್ತು ಪರಿಸ್ಥಿತಿಯಲ್ಲಿ ಮಾಡುವಂತೆ ಅವನ ಬಾಯಿಗೆ ಬಾಯಿ ಹಚ್ಚಿ ಉಸಿರನ್ನು ಊದತೊಡಗಿದನು. ಹಲವು ಬಾರಿ ಪ್ರಯತ್ನ ಮಾಡಿದ ಬಳಿಕ ಕಡೆಗೂ ಫಾರೂಕನಿಗೆ ಹೋದ ಪ್ರಾಣ ವಾಪಸ್‌ಬಂದಿತ್ತು. ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ವಿಷಯವನ್ನು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದನು ಮುತ್ತಣ್ಣ. ಪ್ರಯಾಣಿಕರೆಲ್ಲರ ಮುಖದಲ್ಲೂ ಸಮಾಧಾನದ ನಿಟ್ಟುಸಿರು. ಮುತ್ತಣ್ಣ ಬರೀ ಫಾರೂಕನ ಪ್ರಾಣವನ್ನಷ್ಟೆ ಅಲ್ಲ ಅವನ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಐವತ್ತಕ್ಕೂ ಮಿಕ್ಕ ಪ್ರಯಾಣಿಕರೂ ಹಾಗೂ ಫುಟ್‌ಪಾತಿನಲ್ಲಿ ಓಡಾಡುತ್ತಿದ್ದ ಸುಮಾರು ಸಾರ್ವಜನಿಕರ ಪ್ರಾಣವನ್ನೂ ಉಳಿಸಿದ್ದ.

ಮಾಮೂಲಿ ದಿನಗಳಲ್ಲಾಗಿದ್ದರೆ ಒಂದು ಸಣ್ಣ ಸುದ್ದಿಯಾಗಿ ಮರೆಯಾಗಿಬಿಡಬಹುದಾಗಿದ್ದ ಈ ಸುದ್ದಿ ಅಯೋಧ್ಯೆಯ ರಾಮಮಂದಿರದ ಕುರಿತಾದ ಸುರ್ಪೀಂಕೋರ್ಟ್ ತೀರ್ಪು ಇನ್ನೇನು ಪ್ರಕಟವಾಗುವುದರಲ್ಲಿದ್ದ ಈ ಹೊತ್ತಿನಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಂಡುಬಿಟ್ಟಿತು. ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಎಲ್ಲಾ ಟೀವಿ ಚಾನಲ್‌ಗಳಲ್ಲಿ ಬ್ರೇಕಿಂಗ್ ನ್ಯೂಸ್ ಬರತೊಡಗಿತು. ಅನೇಕ ನ್ಯೂಸ್ ಚಾನಲ್‌ಗಳಿಂದ ನೇರವಾಗಿ ಘಟನೆನಡೆದ ಸ್ಥಳಕ್ಕೆ ಟೀವಿ ವಾಹಿನಿಗಳ ಗಾಡಿಗಳು ಬಂದು ಅಲ್ಲಿದ್ದ ಪ್ರಯಾಣಿಕರಿಗೆ, ಪ್ರತ್ಯಕ್ಷದರ್ಶಿಗಳಿಗೆ ಹಾಗೂ ಮುತ್ತಣ್ಣನಿಗೆ ಅವಗಡದ ಕುರಿತು ಕೇಳಿದ್ದೇ ಕೇಳತೊಡಗಿದರು.

‘ಏನನಸ್ತು ನಿಮಗೆ ಮುತ್ತಣ್ಣ ಅವರೆ ಆ ಕ್ಷಣ?’

‘ಈಗ ಏನನಿಸ್ತಾ ಇದೆ ನಿಮಗೆ?’

‘ಡ್ರೈವರ್ ಫಾರೂಕ್ ಅವರು ಉಳೀತಾರೆ ಅಂತ ಅನಿಸಿತ್ತಾ ನಿಮಗೆ?’

‘ಆ ಟ್ರಿಪ್ ಶುರು ಮಾಡೋ ಮೊದಲು ಹೇಗಿದ್ರು ಡ್ರೈವರ್ ಫಾರೂಕ್ ಅವರು? ಅಂದ್ರೆ ಎದೆನೋವು ಅಂತ ಏನಾದ್ರೂ ನಿಮ್ಮ ಬಳಿ ಹೇಳಿಕೊಂಡಿದ್ರಾ?’

‘ನಿಮಗೆ ಗೊತ್ತಿತ್ತಾ ಡ್ರೈವರ್ ಒಬ್ಬ ಮುಸಲ್ಮಾನ ಅಂತ?’

‘ಆದರೂ ನೀವು ಅವರನ್ನು ನಿಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಾಪಾಡಿದೀರಲ್ಲ! ಇದನ್ನೇ ನಾವು ಗ್ರೇಟ್ ಅನ್ನೋದು.’

ಹೀಗೆ ತಲೆಗೊಂದೊಂದರಂತೆ ಪ್ರಶ್ನೆಗಳನ್ನು ಕೇಳತೊಡಗಿದರು. ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರ ಬಾಯಲ್ಲೂ ಬರೀ ಮುತ್ತಣ್ಣನ ಸಾಹಸದ್ದೇ ಮಾತು! ಆದರೆ ಮುತ್ತಣ್ಣ ಮಾತ್ರ ಏನೂ ಮಾತನಾಡದೆ ಮುಗುಮ್ಮಾಗಿಬಿಟ್ಟಿದ್ದ! ಅವರು ಕೇಳುವ ಪ್ರಶ್ನೆಗಳಿಗೆಲ್ಲ ಏನು ಉತ್ತರಿಸಬೇಕು ಎಂದೇ ಅವನಿಗೆ ತೋರದೆ ‘ನನ್ನ ಬಸ್ಸಿನ ಪ್ರಯಾಣಿಕರ ಕ್ಷೇಮ ನನ್ನ ಕರ್ತವ್ಯ; ಹಾಗಾಗಿ ನನ್ನ ಡ್ಯೂಟಿ ನಾನು ಮಾಡಿದ್ದೀನಿ ಅಷ್ಟೆ, ಇದರಲ್ಲಿ ಅಂಥ ವಿಶೇಷವಾದ್ದು ಏನೂ ಇಲ್ಲ’ ಎಂದು ಹೇಳುತ್ತಿದ್ದ. ಸ್ಟೋರಿಯನ್ನು ಎಷ್ಟು ಸಾಧ್ಯವೋ ಅಷ್ಟು ಲಂಭಿಸಬೇಕು; ಟಿಆರ್‌ಪಿ ಎತ್ತರಿಸಬೇಕು ಎಂದು ವಿಧವಿಧವಾಗಿ ತಿಣುಕಾಡಿದರೂ ಮುತ್ತಣ್ಣನಿಂದ ಅಂಥ ರೋಚಕತೆ ಕಾಣದೆಹೋದಾಗ ಯಾರು ಉತ್ಪ್ರೇಕ್ಷೆಯಿಂದ ಮಾತನಾಡಬಲ್ಲರೋ ಅವರನ್ನೇ ನಿಲ್ಲಿಸಿಕೊಂಡು ತಾಸುಗಟ್ಟಲೆ ತೌಡು ಕುಟ್ಟತೊಡಗಿದರು.

ಮರುದಿನದ ಎಲ್ಲಾ ಪತ್ರಿಕೆಗಳಲ್ಲೂ ಮುತ್ತಣ್ಣನ ಸಾಹಸವನ್ನು ಹಲವು ಬಗೆಯಲ್ಲಿ ಬಣ್ಣಿಸಲಾಗಿತ್ತು. ಪ್ರತ್ಯಕ್ಷದರ್ಶಿಗಳು, ಪ್ರಯಾಣಿಕರು ಹಾಗೂ ಸ್ವತಃ ಹೃದಯಾಘಾತಕ್ಕೆ ಈಡಾಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಫಾರೂಕ್ ಹಾಗೂ ಅವನ ಕುಟುಂಬವನ್ನು ವಾಹಿನಿಯ ಸ್ಟುಡಿಯೋಗಳಿಗೆ ಕರೆಸಿ ಸಾರಿಗೆ ಇಲಾಖೆಯ ಬಗ್ಗೆ, ಡ್ರೈವರ್‌ಗಳಿಗೆ ಕೊಡುವ ವೈಧ್ಯಕೀಯ ಸವಲತ್ತುಗಳ ಬಗ್ಗೆ, ಅವರ ಬಿಡುವಿರದ ಕೆಲಸದ ಒತ್ತಡದ ಬಗ್ಗೆ ಹಾಗೂ ಒಟ್ಟೂ ನಿನ್ನೆ ಆದ ಅವಗಡಗಳ ಬಗ್ಗೆ ಗಂಟೆಗಟ್ಟಳೆ ಚರ್ಚೆಯನ್ನು ಮಾಡತೊಡಗಿದರು. ಆ ಎಲ್ಲಾ ಚರ್ಚೆಗಳಲ್ಲೂ ಇಡೀ ಪ್ರಕರಣದ ಹೀರೋ ಆದ ಮುತ್ತಣ್ಣನ ಮಾತು ಎಲ್ಲರ ಬಾಯಲ್ಲೂ ಬಂದೇ ಬರುತ್ತಿತ್ತು. ಆದರೆ ಅವನೇ ಇಲ್ಲದ ಈ ಚರ್ಚೆಗಳೆಲ್ಲ ಯಾಕೋ ಸಪ್ಪೆ ಎನಿಸಿ ಅನೇಕ ವಾಹಿನಿಯವು ಮುತ್ತಣ್ಣನಿಗೆ ಕರೆಮಾಡಿ ಕಾರ‍್ಯಕ್ರಮಕ್ಕೆ ಆಹ್ವಾನಿಸಿದರು; ಆದರೆ ಯಾರು ಕರೆಮಾಡಿದರೂ ಬಾರದೆ ‘ತಾನು ತನ್ನ ಡ್ಯೂಟಿ ಮಾಡಿದ್ದೇನೆ ಅಷ್ಟೆ; ಮತ್ತೇನಿಲ್ಲ ನನಗೆ ಕೆಲಸ ಇದೆ’ ಎಂದು ಫೋನ್ ಕಟ್ ಮಾಡಿಬಿಡುತ್ತಿದ್ದ. ಸಾರಿಗೆ ಇಲಾಖೆಯ ಆಯುಕ್ತರನ್ನೇ ಸಂಪರ್ಕಿಸಿದ ವಾಹಿನಿಯ ಮುಖ್ಯಸ್ಥರು ರಾಮಮಂದಿರದ ತೀರ್ಪು ಇನ್ನೇನು ಸನಿಹದಲ್ಲೇ ಇರುವಾಗ ಮುಂದೆ ದೇಶದಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ಹಿನ್ನೆಲೆಯಲ್ಲಿ, ಧರ್ಮಸಾಮರಸ್ಯವನ್ನು ಸಾರುವ ಮುತ್ತಣ್ಣ ಹಾಗೂ ಫಾರೂಕ್‌ರ ಇಂತಹ ಸ್ಟೋರಿಗಳು ಎಷ್ಟು ಮಹತ್ವವಾದವು ಎಂದು ಅವರಿಗೆ ವಿವರಿಸಿ ಮುತ್ತಣ್ಣ ಎಂಬ ಕಂಡಕ್ಟರ್ ಕಾರ‍್ಯಕ್ರಮಕ್ಕೆ ಬರುವಂತೆ ಆದೇಶ ನೀಡಬೇಕೆಂದು ವಿನಂತಿಸಿದರು. ಅದರಂತೆ ಆಯುಕ್ತರೇ ಮುತ್ತಣ್ಣನ ಫೋನ್ ನಂಬರ್ ಪಡೆದುಕೊಂಡು ಅವನಿಗೆ ಕರೆಮಾಡಿ ‘ಮುತ್ತಣ್ಣ ನೀವು ಆ ಟೀವಿ ಕಾರ‍್ಯಕ್ರಮಗಳಿಗೆಲ್ಲ ಹೋಗಿ ಮಾತಾಡಿ ಬನ್ನಿ; ನಮ್ಮ ಇಲಾಖೆಯಲ್ಲೂ ನಿಮ್ಮಂತ ನಿಷ್ಠಾವಂತ ಕೆಲಸಗಾರರು ಇರುತ್ತಾರೆ ಎಂದು ಎಲ್ಲರಿಗೂ ಗೊತ್ತಾಗಲಿ’ ಎಂದು ಹೇಳುತ್ತಿದ್ದವರಿಗೆ ಮತ್ತೇನೋ ಕಾರಣ ಹೇಳಬೇಕು ಎನ್ನುವಷ್ಟರಲ್ಲಿ ಮುತ್ತಣ್ಣನ ಮಾತನ್ನು ತುಂಡರಿಸಿದ ಆಯುಕ್ತರು, ‘ಇದು ಬಹಳ ಒಳ್ಳೆಯ ಅವಕಾಶ ಇದನ್ನು ಬಳಸಿಕೊಂಡು ಇಲಾಖೆಗೂ ಒಂದು ಒಳ್ಳೆಯ ಹೆಸರು ತಂದುಕೊಡಿ ಮುತ್ತಣ್ಣ. ಇಂದಿನಿಂದ ಒಂದು ವಾರ ರಜೆ ತೆಗೆದುಕೊಳ್ಳಿ’ ಎಂದು ಹೇಳಿ ಫೋನ್ ಇಟ್ಟುಬಿಟ್ಟರು.

ಆಯುಕ್ತರ ಆದೇಶ ಕಾರಣವೋ ಅಥವಾ ಅವರು ಕರೆಮಾಡಿದ ಕೆಲವೇ ಕ್ಷಣಗಳ ಬಳಿಕ ಕರೆಮಾಡಿದ ವಾಹಿನಿಯೊಂದರ ವಾರ್ತಾವಾಚಕಿ ಸೀತಾ ಸಾಹುಕಾರ್ ಎಂಬುವವಳ ಸಿಹಿದನಿಯ ಆಹ್ವಾನ ಕಾರಣವೋ, ಕಡೆಗೂ ಒಂದು ವಿಶೇಷ ಕಾರ‍್ಯಕ್ರಮಕ್ಕೆ ತೆರಳಲು ಮುತ್ತಣ್ಣ ಒಪ್ಪಿಕೊಂಡನು.

5.

ಅದಾಗಲೇ ಘಟನೆ ನಡೆದು ಎರಡು ದಿನ ಕಳೆದಿತ್ತು. ಮುತ್ತಣ್ಣನ ಮುಖ ಹಾಗೂ ಹೆಸರು ಎಲ್ಲಾ ಟೀವೀ ವಾಹಿನಿಗಳಲ್ಲೂ, ಪತ್ರಿಕೆಗಳಲ್ಲೂ ಹೆಸರುವಾಸಿಯಾಗಿತ್ತು. ಮುತ್ತಣ್ಣನ ಸ್ವಂತ ಊರಾದ ಮುತ್ತತ್ತಿಯಲ್ಲಿ ಎಲ್ಲರ ಬಾಯಲ್ಲಿ ಮುತ್ತಣ್ಣನ ಕುರಿತೇ ಮಾತು! ಅದಾಗಲೇ ಅನೇಕ ಜನರು, ತನ್ನ ಇಲಾಖೆಯವರು, ಮೇಲಧಿಕಾರಿಗಳು ಹೀಗೆ ಎಲ್ಲರೂ ಅವನಿಗೆ ಫೋನ್ ಮಾಡಿ ಅಭಿನಂದನೆ ಸಲ್ಲಿಸತೊಡಗಿದ್ದರು. ಈಗ “ಸಾರಿಗೆ ಇಲಾಖೆಯ ಸರದಾರ; ಅಂಕಲ್ ಮುತ್ತಣ್ಣ” ಎಂಬ ಶೀರ್ಷಿಕೆಯೊಂದಿಗೆ ಸುಮಾರು ಒಂದೂವರೆ ತಾಸುಗಳ ವಿಶೇಷ ಕಾರ‍್ಯಕ್ರಮವನ್ನು ಮಾಡಿದರು. ಸೀತಾ ಸಾಹುಕಾರ್ ಎಂಬ ವಾರ್ತಾವಾಚಕಿ ಮಾಡಿದ ಸಂದರ್ಶನದಲ್ಲಿ ಮುತ್ತಣ್ಣ ತನಗೇ ಗೊತ್ತಿಲ್ಲದೆ ತನ್ನ ಬದುಕಿನ ಅನೇಕ ಪ್ರಶ್ನೆಗಳಿಗೆ ಉತ್ತರಿಸಿಬಿಟ್ಟಿದ್ದ!

‘ನಮಸ್ಕಾರ ಮುತ್ತಣ್ಣ ಅವರೆ, ಹೇಳಿ ನಿಮ್ಮ ಪರಿಚಯ ಮಾಡಿಕೊಳ್ಳಿ- ನಿಮ್ಮ ಉರ‍್ಯಾವುದು?’

‘ನಮಸ್ಕಾರ ಮೇಡಮ್ ನನ್ ಹೆಸರು ಮುತ್ತಣ್ಣ ಅಂತ. ಎಲ್ಲ ನನ್ನ ಅಂಕಲ್ ಮುತ್ತಣ್ಣ ಅಂತ ಕರೀತಾರೆ ನನ್ನ ಊರು ಮುತ್ತತ್ತಿ. ಇಪ್ಪತ್ತೆರಡು ವರ್ಷ ಆಯ್ತು ನಾನು ಬೆಂಗಳೂರಲ್ಲಿ ಸರ್ವೀಸ್ ಮಾಡ್ತಾ, ಈಗ ನಂಗೆ ನಲವತ್ತಾರು ವರ್ಷ.’

‘ಮುತ್ತಣ್ಣ ಅವರೆ ನಿಮಗೆ ಗೊತ್ತಾ ನೀವು ಎಂಥಾ ಸಾಹಸವನ್ನು ಮಾಡಿದ್ದೀರಿ ಅಂತ? ಸುಮಾರು ಐವತ್ತು ಅರವತ್ತು ಜನರ ಪ್ರಾಣ ಉಳಿಸಿದ್ದೀರಿ. ಏನನಸ್ತಾ ಇದೆ?’

‘ಏನು ಇಲ್ಲ ಮೇಡಮ್! ನಾನು ಅವತ್ತು ಅದೇ ಹೇಳಿದ್ದೆ; ಇವತ್ತೂ ಅದೇ ಹೇಳ್ತಾ ಇದೀನಿ, ನಾನು ನನ್ನ ಡ್ಯೂಟಿ ಮಾಡಿದ್ದೀನಿ ಅಷ್ಟೆ ಅದನ್ನ ಬಿಟ್ರೆ ಮತ್ತೇನೂ ಇಲ್ಲ. ಈಗ ನೋಡಿ ನಿಮ್ ಆಫೀಸಲ್ಲೇ ನಿಮ್ಮನ್ನು ಚಂದಾಗಿ ತೋರುಸ್ತಾರಲ್ಲ ಕ್ಯಾಮರಾಮ್ಯಾನು ಅವರಿಗೇನಾದ್ರೂ ಆದ್ರೆ ನೀವು ನೋಡ್ಕೊಂಡು ಸುಮ್ನೆ ಕೂತಿರತೀರಾ? ಇಲ್ಲ ತಾನೆ? ಹಂಗೇ ನಾನೂ ನನ್ನ ಕರ್ತವ್ಯ ಮಾಡಿದ್ದೀನಿ ಅಷ್ಟೆ. ಮತ್ತೇನಿಲ್ಲ.’

‘ಡ್ರೈವರ್ ಫಾರೂಕ್ ಹಾಗೂ ನಿಮ್ಮ ಸಂಬಂಧ ಹೇಗಿತ್ತು?’

‘ಇದೇನ್ ಪ್ರಶ್ನೆ ಮೇಡಮ್? ಫಾರೂಕ್ ಪಾಪ ಇನ್ನೂ ಹೊಸಬ; ಬೆಂಗಳೂರೂ ಹೊಸದು ಅವನಿಗೆ, ಆದ್ರೆ ಒಳ್ಳೆ ಹುಡುಗ; ಗುಟಕಾ ಹಾಕೋದು ಬಿಟ್ರೆ ಇನ್ಯಾವ ದುರಭ್ಯಾಸ ಇಲ್ಲ ಪಾಪ. ಇಷ್ಟು ಸಣ್ಣ ವಯಸ್ಸಲ್ಲಿ ಹಾರ್ಟ್ ಅಟ್ಯಾಕ್ ಆಗುತ್ತಲ್ಲ ಮೇಡಮ್! ನೀವೆ ಯೋಚನೆ ಮಾಡಿ ಎಷ್ಟು ಒತ್ತಡದಲ್ಲಿ ನಾವು ಬಸ್ ಕಂಡಕ್ಟರ್‌ಗಳು ಡ್ರೈವರ್‌ಗಳು ಕೆಲಸ ಮಾಡತೀವಿ ಅಂತ.’

‘ಅಲ್ಲ ಮುತ್ತಣ್ಣ, ಫಾರೂಕ್ ಒಬ್ಬ ಮುಸ್ಲಿಮ್ ವ್ಯಕ್ತಿ ಅಂತ ನಿಮಗೆ ಅನಿಸಲಿಲ್ಲವೇ ಅವರ ಬಾಯಿಗೆ ಬಾಯಿ ಹಚ್ಚಿ ಗಾಳಿ ಊದುವಾಗ?’

‘ಮೇಡಮ್ ನಾನು ವರ್ಷದಲ್ಲಿ ಎರಡು ಸಾರಿ ರಕ್ತ ದಾನ ಮಾಡತೀನಿ ಮೇಡಮ್, ಪ್ರತೀ ಸಾರಿ ಅವರು ನನ್ ರಕ್ತ ತೊಗೊಂಡಮೇಲೆ ಅದರ ಮೇಲೆ ಇದು ‘ಕಂಡಕ್ಟರ್ ಮುತ್ತಣ್ಣನ ರಕ್ತ’ ಅಂತ ಬರದಿಡಲ್ಲ ಮೇಡಮ್, ಏ ಪಾಸಿಟಿವ್ ಅಂತ ಬರದಿಟ್ಕೋತಾರೆ, ಮುಂದೆ ಯಾರಿಗಾದ್ರೂ ಆ ಗುಂಪಿನ ರಕ್ತ ಬೇಕಾದ್ರೆ ಕೊಡತಾರೆ; ಅವನು ಹಿಂದೂನೋ... ಮುಸ್ಲಿಮೋ... ರಕ್ತ ಕೊಟ್ಟ ನಂಗೂ ಗೊತ್ತಾಗಲ್ಲ; ರಕ್ತ ತೊಗೋಳೋ ಅವನಿಗೂ ಗೊತ್ತಾಗಲ್ಲ. ರಕ್ತದಲ್ಲಾದ್ರೆ ಒಂದಷ್ಟು ಗುಂಪೈದವೆ; ಆದ್ರೆ ಗಾಳಿ? ಉಸಿರಾಡೋ ಗಾಳಿಗೆ ಯಾವ ಜಾತಿ ಐತೆ ಮೇಡಮ್ ನೀವೆ ಹೇಳಿ? ನೀವು ಕುಡುದು ಬಿಟ್ಟಿದ್ದು ನಾನು ಕುಡೀತೀನಿ; ನಾನು ಕುಡುದು ಬಿಟ್ಟಿದ್ದು ನೀವು ಕುಡೀತೀರಿ; ಬಡವ ಶ್ರೀಮಂತ ಎಲ್ಲಾ ಒಂದೇ ಅದರಲ್ಲಿ. ಅಂತದ್ರಲ್ಲಿ ಪಾಪ ಗಾಳಿ ಇಲ್ಲದೆ ಒದ್ದಾಡತಿದ್ದ ಫಾರೂಕನಿಗೆ ಗಾಳಿ ಕೊಡೋಕೆ ಅವನ ಜಾತಿ ಯಾಕೆ ನೋಡಲಿ ಮೇಡಮ್? ಅದೂ ಅಲ್ಲದೇ ಗಾಳಿ ಆಂಜನೇಯ ನಮ್ಮ ಮನೆದೇವರು!’

ಚಪ್ಪಾಳೆ ತಟ್ಟಿ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ನಿರೂಪಕಿ,

‘ಇದೆ ಇದನ್ನೇ ನಾನು ನಿಮ್ಮಿಂದ ನಿರೀಕ್ಷೆ ಮಾಡತಾ ಇದ್ದಿದ್ದು ಮುತ್ತಣ್ಣ ಅವರೆ, ನಿಮ್ಮ ಈ ಸರ್ವಜನಾಂಗಗಳ ಕುರಿತು ಇರುವ ಇಂಥ ಆಲೋಚನೆಗಳು ನಿಮ್ಮಂತೆಯೇ ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಅನೇಕರಿಗ ಸ್ಫೂರ್ತಿ ಆಗುತ್ತೆ. ನಮ್ಮ ಧರ್ಮ, ಜಾತಿಯೇ ಶ್ರೇಷ್ಟ, ಮತ್ತೊಬ್ಬರದು ಕನಿಷ್ಟ ಅಂತ ಕಿತ್ತಾಡ್ತಾ ಇರೋ ಈ ಹೊತ್ತಿನಲ್ಲಿ ಯು ಆರ್ ರಿಯಲಿ ಗ್ರೇಟ್! ಮುತ್ತಣ್ಣ.’

‘ಏ... ಇದ್ಯಾವ ದೊಡ್ಡ ಮಹಾ, ಎಲ್ರಿಗೂ ಗೊತ್ತಿರೋದೆ ಅಲ್ವಾ ಆಂಟಿ?’

‘ಹಾಂ!!! ಅದೇ ಅನ್ಕೋತಾ ಇದ್ದೆ ಮುತ್ತಣ್ಣ ಅವರ ಬಾಯಿಂದ ಯಾಕೆ ಇನ್ನೂ ಅಂಕಲ್ ಆಂಟಿ ಅಂತ ಬರಲಿಲ್ಲ ಅಂತ!’

‘ಹಾ ಹಾ ಹಾಂ, ಸ್ಸಾರಿ ಮೇಡಮ್, ಅದು ಅಭ್ಯಾಸಬಲ ಬಂದುಬಿಡತು.’

‘ವೀಕ್ಷಕರೆ ನಾವು ನಿಮಗೆ ಈಗಾಗಲೇ ಹೇಳಿರುವಂತೆ ನಮ್ಮ ಮುತ್ತಣ್ಣ ಮೆಜೆಸ್ಟಿಕ್ಕಿನಿಂದ ಚಂದಾಪುರ, ಅತ್ತಿಬೆಲೆ ಮಾರ್ಗದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡತಾ ಇದ್ದಾರೆ ಮತ್ತು ಆ ರೂಟಲ್ಲಿ ಓಡಾಡೋ ಎಲ್ಲರಿಗೂ ಅಂಕಲ್ ಮುತ್ತಣ್ಣ ಅಂದ್ರೆ ಸಾಕು ಅಷ್ಟು ಪ್ರೀತಿ. ಎಲ್ಲಾ ಪ್ರಯಾಣಿಕರನ್ನೂ ಅಂಕಲ್ ಆಂಟಿ ಅಂತ ಕರಿಯೋದೇ ಮುತ್ತಣ್ಣ ಅವರ ಸ್ಪೆಶಾಲಿಟಿ! ಹೇಳಿ ಮುತ್ತಣ್ಣ ನಿಮಗೆ ಈ ಅಭ್ಯಾಸ ಹೇಗೆ ಬಂತು? ಎಲ್ಲಿಂದ ಬಂತು? ‘

‘ಅಂಥ ವಿಶೇಷ ಏನಿಲ್ಲ ಮೇಡಮ್, ಹಾಗೆ ಸುಮ್ನೆ ತಮಾಷೆಗೆ ಅಂತ ಅಷ್ಟೆ.’

‘ಇಲ್ಲ ಮುತ್ತಣ್ಣ, ನಾನ್ ಈ ಮಾತನ್ನ ನಂಬಲ್ಲ. ಬರೀ ತಮಾಷೆಗೆ ಆದ್ರೆ ಒಮ್ಮೆ ಯಾರನ್ನಾದ್ರೂ ಹಾಗೆ ಕರೆದು ಸುಮ್ಮನಾಗಿಬಿಡತೀವಿ, ಆದ್ರೆ ನೀವು ಸುಮಾರು ಇಪ್ಪತ್ತು ವರ್ಷಗಳಿಂದ ಎಲ್ಲರನ್ನೂ ಹೀಗೇ ಕರೀತಾ ಬಂದಿದ್ದೀರಾ ಅಂತ ನಮಗೆ ತಿಳಿದುಬಂದಿದೆ; ಇದರ ಹಿಂದೆ ಇರೋ ಆ ಕತೆ ಏನು? ಇವತ್ತು ನೀವು ನಮ್ಮ ಮುಂದೆ ಅದನ್ನ ಹೇಳಲೇಬೇಕು.’

‘ಅಯ್ಯೋ ಅದೊಂದು ದೊಡ್ಡ ಕತೆ ಮೇಡಮ್ ಅದೆಲ್ಲ ಯಾಕಿವಾಗ?’

‘ಕಮ್ಮಾನ್... ನೀವಿವತ್ತು ಆ ಕತೆ ಹೇಳಲೇಬೇಕು ಮುತ್ತಣ್ಣ; ಅಂಕಲ್ ಮುತ್ತಣ್ಣ!’

ಮುತ್ತಣ್ಣನ ಕೆನ್ನೆಗಳು ತಂತಾನೆ ಕೆಂಪೇರತೊಡಗಿದವು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದ, ಯಾರಿಗೂ ಮನಸ್ಸು ಬಿಚ್ಚಿ ಹೇಳದ ಘಟನೆಯೊಂದನ್ನು ಈಗ ಟೀವಿ ವಾಹಿನಿಯಲ್ಲಿ ಕೂತು ಇಡೀ ಲೋಕಕ್ಕೇ ಹೇಳತೊಡಗಿದ ಮುತ್ತಣ್ಣ!

6.1

ಮುತ್ತಣ್ಣ ಕೆಲಸಕ್ಕೆ ಸೇರಿದ ಹೊಸದರಲ್ಲಿ, ಆಗಿನ್ನೂ ಅವನಿಗೆ ಇಪ್ಪತ್ನಾಕೋ ಇಪ್ಪತೈದರದೋ ಪ್ರಾಯ; ಅಂಥ ಒಂದು ದಿನ ರಾತ್ರಿ ಕಡೇ ಟ್ರಿಪ್ಪಿಗೆ ಬಸ್ಸು ಮೆಜೆಸ್ಟಿಕ್ಕಿಗೆ ಬಂದಿತು. ತುಂಬಿ ಬಂದಿದ್ದ ಬಸ್ಸು ಒಂದು ಕಡೆ ಮೆಜೆಸ್ಟಿಕ್ಕಿನಲ್ಲಿ ಎಲ್ಲರನ್ನೂ ಬರಬರನೆ ಇಳಿಸುತ್ತಿದ್ದರೆ; ಮತ್ತೊಂದು ಕಡೆ ಕಡೆಯ ಬಸ್ಸಿಗೆ ಕಾದು ಕುಳಿತಿದ್ದ ಜನ ಮುಕ್ಕರಿಸಿ ಹತ್ತಲು ಹವಣಿಸುತ್ತಿದ್ದರು. ಮುತ್ತಣ್ಣ ಹತ್ತುವವರನ್ನು ಅಲ್ಲೇ ತಡೆದು ನಿಲ್ಲಿಸಿ ಇಳಿಯುವವರನ್ನು ಬೇಗಬೇಗ ಇಳಿಸುತ್ತಿದ್ದ. ಇನ್ನೇನು ಬಸ್ಸು ಪೂರ ಖಾಲಿ ಆಯಿತು, ಹತ್ತುವವರಿಗೆ ಬಾಗಿಲು ತೆರೆಯಬೇಕು ಎನ್ನುವಾಗ ಬಸ್ಸಿನ ಒಳಗೆ ಇನ್ನೂ ಯಾರೋ ಇರುವುದು ಕಾಣಿಸಿತು ಮುತ್ತಣ್ಣನಿಗೆ. ಹತ್ತಲು ಸಿದ್ಧರಾಗಿ ನಿಂತಿದ್ದ ಪ್ರಯಾಣಿಕರು ರೇಸಿಗೆ ನಿಂತವರಂತೆ ಸೀಟುಹಿಡಿಯಲು ನೂಕಾಡುತ್ತಿದ್ದರು. ಅವರನ್ನೆಲ್ಲ ತಡೆದು ನಿಲ್ಲಿಸಿದ್ದ ಮುತ್ತಣ್ಣನಿಗೆ ಇನ್ನೂ ಒಳಗೇ ಇದ್ದ ಹುಡುಗಿಯ ಮೇಲೆ ಸಿಟ್ಟು ಬಂದು ‘ಬೇಗ ಬೇಗ ಇಳಿಯಮ್ಮಾ ಎಷ್ಟೊತ್ತು ಮಾಡ್ತಿಯಾ?’ ಎಂದು ಜಬರಿಸಿದ. ಅಳುತ್ತ ಅಳುತ್ತ ಆ ಹುಡುಗಿ ಬಸ್ಸಿನ ಒಳಗೆಲ್ಲ ಏನನ್ನೋ ಹುಡುಕುತ್ತಿದ್ದಳು. ಮುತ್ತಣ್ಣ ಜಬರಿಸಿದ ಕೂಡಲೆ ಅವಳ ಅಳು ತಾರಕಕ್ಕೆ ಏರಿಬಿಟ್ಟಿತು. ಮುತ್ತಣ್ಣನಿಗೆ ಒಂದು ಕಡೆ ಆಶ್ಚರ್‍ಯ; ಮತ್ತೊಂದು ಕಡೆ ‘ಇದೇನಿದು ಈ ಹುಡುಗಿಯ ಅವಸ್ಥೆ’ ತಿಳಿಯುವ ಕುತೂಹಲ. ಆದರೆ ಮೆಜೆಸ್ಟಿಕ್ಕಿನ ಆ ಜನಜಂಗುಳಿಯಲ್ಲಿ ಇದ್ಯಾವುದಕ್ಕೂ ಸ್ಥಳವಿರಲಿಲ್ಲ. ಆದರೂ ಮುತ್ತಣ್ಣ ಡ್ರೈವರನಿಗೆ ಬಾಗಿಲು ಬಂದ್ ಮಾಡಲು ಹೇಳಿ ಅವಳ ಬಳಿ ಹೋಗಿ ‘ಏನಮ್ಮಾ ಏನಾಯ್ತು?’ ಎಂದು ಸ್ವಲ್ಪ ಅಸಹನೆಯಿಂದಲೇ ಕೇಳಿದ. ಅವನು ಕೇಳಿದ್ದಕ್ಕೂ ಆ ಹುಡುಗಿಯ ದುಃಖ ಮತ್ತೂ ಉಮ್ಮಳಿಸಿ ಬಂದು ‘ನನ್ನ ಒಂದು ಕಿವಿ ಓಲೆ ಎಲ್ಲೋ ಬಿದ್ದೋಗೈತೆ ಅಂಕಲ್! ಚಂದಾಪುರದಲ್ಲಿ ನಮ್ಮ ಫ್ರೆಂಡೊಬ್ಬಳದು ಮದುವೆ ಇತ್ತು. ಅದಕ್ಕೆ ನಮ್ಮಮ್ಮ ಬ್ಯಾಡ ಬ್ಯಾಡಾ ಅಂದ್ರೂ ಇದನ್ನು ಹಾಕ್ಕೊಂಡ್ ಬಂದಿದ್ದೆ’ ಎಂದು ಸೀಟು ಕೆಳಗೆಲ್ಲ ಹುಡುಕೇ ಹುಡುಕಿದಳು. ಮುತ್ತಣ್ಣನಿಗೆ ಒಮ್ಮೆಲೇ ವಾತ್ಸಲ್ಯ ಉಕ್ಕಿಬಂದಂತಾಗಿ ‘ಎಲ್ಲೋಗುತ್ತೆ ಇಲ್ಲೇ ಎಲ್ಲರ ಇರತೈತೆ ಇರಮ್ಮ ಹುಡುಕನ; ರೀ ಪಾಟೀಲರೇ ನೀವು ಬರ‍್ರಿ ಇಲ್ಲಿ’ ಎಂದು ಡ್ರೈವರನ್ನೂ ಕರೆದು ಮೂರೂ ಜನ ಬಸ್ಸಿನ ಮೂಲೆ ಮೂಲೆಯನ್ನೂ ಹುಡುಕಾಡತೊಡಗಿದರು. ಇತ್ತ ಹೊರಗೆ ಕಾಯುತ್ತಿದ್ದ ಪ್ರಯಾಣಿಕರ ಅಸಹನೆ ಹೆಚ್ಚಾಗಿ ಬಾಗಿಲು ಬಡಿಯುತ್ತ ಬೈದಾಡತೊಡಗಿದರು. ವಿಧಿಯಿಲ್ಲದೆ ಮುತ್ತಣ್ಣ ಆ ಹುಡುಗಿಗೆ ‘ನಾನು ಹುಡುಕ್ತಿನಿ ಬಿಡಮ್ಮ, ಈ ಬಸ್ಸಲ್ಲೇ ಬಿದ್ದಿದ್ರೆ ಸಿಕ್ಕೇ ಸಿಕ್ತೈತೆ, ಈಗ ಲಾಸ್ಟ್ ಟ್ರಿಪ್ಪಿದು ಜನ ಗಲಾಟೆ ಮಾಡ್ತಾ ಔರೆ ಇಳಿಯಮ್ಮ’ ಎಂದು ಅವಳನ್ನು ಇಳಿಸಲು ಮುಂದಾದೊಡನೆ ‘ಅಯ್ಯೋ ನಮ್ಮಮ್ಮಾ ನನ್ನ ಸಾಯಸೇ ಬಿಡತಾಳೆ; ಹುವ್ವ ಮಾರಿ ಕಷ್ಟಪಟ್ಟು ನನ್ನ ಮದುವೆಗೆ ಅಂತ ಮಾಡ್ಸಿಟ್ಟಿದ್ಳು ಈಗ ನಾನೆಂಗ್ ಮನೆಗ್ ಹೋಗ್ಲಿ? ನಾನು ಮನೇಗೇ ಹೋಗಲ್ಲ’ ಎಂದು ಇನ್ನೂ ಜೋರಾಗಿ ಅಳತೊಡಗಿದಳು. ಅಷ್ಟರಲ್ಲಿ ಪ್ರಯಾಣಿಕರೆಲ್ಲ ಸೇರಿ ಅಲ್ಲೇ ಇದ್ದ ಅಧಿಕಾರಿಗಳನ್ನು ಕರೆತಂದು ‘ಕಡೆಯ ಬಸ್ಸಿದು, ಈಗಾಗಲೇ ಅರ್ಧಗಂಟೆ ತಡವಾಗಿ ಬಂದಿದೆ; ಸಾಲದ್ದಕ್ಕೆ ಅದ್ಯಾವುದೋ ಹುಡುಗಿ ಏನೋ ಕಳಕೊಂಡು ಹುಡಕ್ಕೊಂಡು ನಿಂತಿದೆ, ಮೊದಲು ಬಾಗಿಲು ತೆಗಿಸ್ರಿ’ ಎಂದು ಕಂಪ್ಲೇಂಟ್ ಮಾಡಿ ಅಧಿಕಾರಿ ಬಂದು ಬಾಗಿಲು ತೆಗೆಸಿ ಆ ಹುಡುಗಿಯನ್ನು ಬಲವಂತದಿಂದ ಕೆಳಗಿಳಿಸಿ ಪ್ರಯಾಣಿಕರನ್ನು ಹತ್ತಿಸಿ ಸೀಟಿ ಊದಿ ಬಸ್ಸನ್ನು ನಿಲ್ದಾಣದಿಂದ ಸಾಗಹಾಕಿದ. ಬಸ್ಸು ಹೊರಟುಹೋಗುತ್ತಿರುವಂತೆ ಅದರ ಕಡೆಗೇ ಕೈತೋರಿಸಿಕೊಂಡು ‘ಅಯ್ಯೋ ನನ್ನ ಓಲೆ...’ ಎಂದು ವೇದನೆಯಿಂದ ಅಳುತ್ತ ನಿಂತಿದ್ದ ಆ ಹುಡುಗಿಯನ್ನು ಬಸ್ಟ್ಯಾಡಿನ ತಿರುವಿನವರೆಗೂ ಮುತ್ತಣ್ಣ ನೋಡುತ್ತಲೇ ಇದ್ದ.

6.2

ಆ ಕಡೆಯ ಟ್ರಿಪ್ಪನ್ನು ಮುಗಿಸಿ ಶಾಂತಿನಗರದ ಡಿಪೋ ಸೇರುವಷ್ಟರಲ್ಲಿ ರಾತ್ರಿ ಹನ್ನೆರಡೂವರೆಯಾಗಿತ್ತು. ಮುತ್ತಣ್ಣ ಡಿಪೋದಿಂದ ಮನೆಗೆ ಹೋಗುವ ಮೊದಲೂ ಸಹ ಅರ್ಧ ತಾಸು ಮತ್ತೆ ಬಸ್ಸನ್ನೆಲ್ಲ ಟಾರ್ಚ್ ಬಿಟ್ಟುಕೊಂಡು ಜಾಲಾಡಿದ. ಆದರೆ ಎಷ್ಟು ಹುಡುಕಿದರೂ ಆ ಹುಡುಗಿಯ ಒಚಿಟಿ ಓಲೆ ಸಿಗಲೇಇಲ್ಲ. ನಿರಾಶನಾಗಿ ಸೈಕಲ್ ತೆಗೆದುಕೊಂಡು ಆಡುಗೋಡಿಯಲ್ಲಿದ್ದ ತನ್ನ ರೂಮಿಗೆ ಬಂದು ಮಲಗಿದ.

ಆ ಹುಡುಗಿಯ ಚಿತ್ರವೇ ಮುತ್ತಣ್ಣನ ಕಣ್ಣಮುಂದೆ ಬರುತ್ತಿತ್ತು. ಸುಮಾರು ಇಪ್ಪತ್ತು ವರ್ಷ ವಯಸ್ಸಿರಬಹುದು. ನಸುಗಪ್ಪು ಮೈ; ಬಡವರ ಮನೆಯ ಹುಡುಗಿ. ಗುಲಾಬಿ ಬಣ್ಣದ ಒಂದು ಸಾದಾ ಚೂಡಿದಾರನ್ನು ತೊಟ್ಟಿದ್ದಾಳೆ. ಕೈಗಳಿಗೆ ಬಣ್ಣಬಣ್ಣದ ಬಳೆತೊಟ್ಟಿದ್ದಾಳೆ. ಕುತ್ತಿಗೆಗೆ ಯಾರಿಂದಲೋ ಎರವಲು ತಂದ ನೆಕ್‌ಲೇಸನ್ನು ಹಾಕಿಕೊಂಡಿದ್ದಾಳೆ; ತೊಟ್ಟಚಪ್ಪಲಿಯೂ ಸಹ ಅವಳ ಪಾದಕ್ಕಿಂತ ಸ್ವಲ್ಪ ದೊಡ್ಡದಿದೆ; ಬಹುಶಃ ಅಕ್ಕಪಕ್ಕದ ಮನೆಯವರಲ್ಲಿ ಕೇಳಿ ಮದುವೆಗೆಂದು ಹಾಕಿಕೊಂಡು ಬಂದಿದ್ದಾಳೆ. ಸಣ್ಣ ವ್ಯಾನಿಟಿಬ್ಯಾಗನ್ನು ನೇತುಹಾಕಿಕೊಂಡಿದ್ದಾಳೆ. ಈ ಯಾವ ಆಡಂಬರವಿಲ್ಲದಿದ್ದರೂ ಆ ಹುಡುಗಿಯ ಚಲುವು ಕವಡೆಯಷ್ಟೂ ಕಡಿಮೆಯಾಗುತ್ತಿರಲಿಲ್ಲ ಎನಿಸಿತು. ಆದರೆ ಓಲೆಯನ್ನು ಮಾತ್ರ ಯಾಕೆ ಬಂಗಾರದ್ದು ಹಾಕಿಕೊಂಡು ಬಂದಳೋ... ಪಾಪ. ಅವಳ ಕಿವಿಯಲ್ಲಿದ್ದ ಆ ಒಂಟಿ ಓಲೆಯನ್ನು ನೋಡಿದರೆ ಕನಿಷ್ಟಪಕ್ಷ ಮೂರು ಗ್ರಾಮ್ ತೂಕ ತೂಗಬಹುದು; ಎರಡೂ ಕಿವಿಯದ್ದು ಸೇರಿ ಆರೇಳು ಗ್ರಾಮ್ ತೂಕದ ಓಲೆ. ಹೂ ಹೂವನ್ನು ಪೋಣಿಸಿ ಪೋಣಿಸಿ ಗಳಿಸಿದ ಓಲೆ. ಆ ತಾಯಿಗೆ ಅದು ಹೇಗೆ ಮುಖತೋರಿಸುತ್ತಾಳೋ? ಏನು ಸಬೂಬು ಹೇಳುತ್ತಾಳೋ? ಆ ತಾಯಿಯ ಕೈಲಿ ಇನ್ನೆಷ್ಟು ಪೆಟ್ಟುಗಳನ್ನು ತಿನ್ನುತ್ತಾಳೋ? ಮುತ್ತಣ್ಣ ಊಹಿಸಿಕೊಂಡು ಮೌನನಾದ.

ರಾತ್ರಿ ಒಂದು ಹೊತ್ತಿನಲ್ಲಿ ಎಚ್ಚರಾದವನಿಗೆ ‘ಅರೆ! ಅಕಸ್ಮಾತ್ ಆ ಹುಡುಗಿ ತನ್ನ ತಾಯಿಗೆ ಹೆದರಿ ಮನೆಗೇ ಹೋಗಿರದಿದ್ದರೆ ಏನು ಗತಿ?’ ಎಂಬ ಆಲೋಚನೆ ಬಂತು! ಅಷ್ಟು ಸುಂದರವಾದ ಹುಡುಗಿ ಮನೆಗೆ ಹೋಗದೆ ರಾತ್ರಿಯೆಲ್ಲ ಮೆಜೆಸ್ಟಿಕ್ ಬಸ್‌ಸ್ಟ್ಯಾಡಿನಲ್ಲಿ ಅಳುತ್ತಾ ಕುಳಿತಿರುವ ಚಿತ್ರವನ್ನು ಕಲ್ಪಿಸಿಕೊಂಡು ಅಧೀರನಾದ. ಮರುಗಳಿಗೆಯೇ, ‘ದಿನಾ ಬಸ್ಸಿನಲ್ಲಿ ನೂರಾರು ಮಂದಿ ಓಡಾಡುತ್ತಾರೆ; ಆದರೆ ತಾನ್ಯಾಕೆ ಆ ಅನಾಮಿಕ ಹುಡುಗಿಯ ಬಗ್ಗೆ ಇಲ್ಲದ್ದನ್ನೆಲ್ಲಾ ಕಲ್ಪಿಸಿಕೊಂಡು ಇಷ್ಟು ವ್ಯಾಕುಲಗೊಂಡಿದ್ದೇನೆ?’ ಎಂದು ಯೋಚಿಸಿ ಯೋಚಿಸಿ ಏನೂ ಹೊಳೆಯದೆ ಸುಮ್ಮನಾದ. ಕಣ್ಣಿಗೆ ನಿದ್ದೆಯೇ ಹತ್ತುತ್ತಿಲ್ಲ. ನಿರ್ಜನ ಮೆಜೆಸ್ಟಿಕ್ಕಿನ ಕಲ್ಲುಬೆಂಚಿನ ಮೇಲೆ ಅಳುತ್ತ ಕುಳಿತಿದ್ದ ಆ ಹುಡುಗಿ, ಬಡತನದ ಬೇಗುದಿಯೇ ಅಳುವಾಗಿ ಹರಿಯುತ್ತಿದ್ದ ಆ ಹುಡುಗಿಯ ಕಣ್ಣುಗಳು- ಇವೇ ಅವನ ಕಣ್ಣಮುಂದೆ ಬರುತ್ತಿತ್ತು. ಅದೇನನ್ನಿಸಿತೋ ಆಡುಗೋಡಿಯ ತನ್ನ ರೂಮಿನಿಂದ ಉಟ್ಟ ಲುಂಗಿಯಲ್ಲೇ ಸೈಕಲ್ ತೆಗೆದುಕೊಂಡು ಆ ಸರಿರಾತ್ರಿಯಲ್ಲಿ ಮೆಜೆಸ್ಟಿಕ್ಕಿಗೆ ತುಳಿಯತೊಡಗಿದ!

6.3

ಅದಾಗಲೇ ರಾತ್ರಿ ಎರಡಾಗಿತ್ತು. ಎಲ್ಲಾ ಬಸ್ ಸಂಚಾರವೂ ನಿಂತು ಪೂರಾ ಮೆಜೆಸ್ಟಿಕ್ ನಿದ್ರಿಸುತ್ತಿತ್ತು. ಚಂದಾಪುರದ ಬಸ್ಸುಗಳು ನಿಲ್ಲುವ ಪ್ಲಾಟ್‌ಫಾರ್ಮಿಗೆ ಸೈಕಲ್ಲಿನಲ್ಲೇ ಬಂದ ಮುತ್ತಣ್ಣ ಕಲ್ಲುಬೆಂಚಿನ ಮೇಲೆ ಮುಸುಕು ಹಾಕಿಕೊಂಡು ಮಲಗಿರುವ ಎಲ್ಲ ಹೆಂಗಸರ ಮುಸುಕುಗಳನ್ನು ತೆಗೆತೆಗೆದು ನೋಡತೊಡಗಿದ. ದೂರದಿಂದ ಇದನ್ನು ಗಮನಿಸಿದ ಸಾರಿಗೆ ಅಧಿಕಾರಿಯೊಬ್ಬ ಸೀಟಿ ಹೊಡೆಯುತ್ತ ಮುತ್ತಣ್ಣ ಇರುವಲ್ಲಿ ಬಂದ. ಮುತ್ತಣ್ಣ ತನ್ನ ಗುರುತಿನ ಚೀಟಿ ತೋರಿಸಿದ್ದೇ ‘ಓಹೋ ಮುತ್ತಣ್ಣನಾ? ಏನ್ ಮುತ್ತಣ್ಣ ಸಮಾಚಾರ? ಡ್ಯೂಟಿ ಮುಗುದ್ರೂ ಬಂದಿದ್ದೀ ಇಷ್ಟೊತ್ತಲ್ಲಿ?’ ಎಂದು ಕೇಳಿದ. ಮುತ್ತಣ್ಣ ಹೀಗೆ ಹೀಗೆ, ಓಲೆ ಕಳೆದುಕೊಂಡು ಅಳುತ್ತ ಕುಳಿತಿದ್ದ ಹುಡುಗಿಯ ಕುರಿತು ಹೇಳಿದ್ದೇ ಆ ಅಧಿಕಾರಿ ‘ಹೌದು ಒಂದು ಹುಡುಗಿ ಓಲೆ ಕಳೆದುಕೊಂಡು ಅಳಕಂತ ಸುಮಾರು ಹನ್ನೆರಡೂವರೆವರಗೂ ಇಲ್ಲೇ ಕುಂತಿತ್ತು. ಕಡೆಗ್ ನಾನೇ ವಿಚರ‍್ಸಿ ಕಳಿಸಿದೆ; ಆದರೆ ಆ ಹುಡುಗಿಗೆ ಹೋಗೋ ಮನಸೇ ಇರಲಿಲ್ಲ.’

‘ಯಾವ ಏರಿಯಾಗ್ ಹೋದಳು? ಯಾವ ಬಸ್ ಹತ್ತಿಸಿದ್ರಿ?’

‘ಮನೆ ಎಲ್ಲಿ ಅಂತ ಕೇಳಿದೆ; ಸುಂಕದಕಟ್ಟೆ ಅಂತು. ಅದಕ್ಕೆ ನೋಡು ಅಲ್ಲೈತಲ್ಲಾ, ಲಾಸ್ಟ್ ಬಸ್ ಅದು. ಸುಂಕದಕಟ್ಟೆ ಕಡೆ ಹೋಗೋದು, ಅದು ಬಿಟ್ರೆ ಇನ್ನು ಬೆಳಿಗ್ಗೆ ಆರೂವರೆವರಗೂ ಬಸ್ಸಿಲ್ಲ ನೋಡು; ಅಂತ ನಾನೇ ಕಳಿಸಿದೆ. ಅವಳು ಹೋಗೋಕೆ ತಯ್ಯಾರಿರಲಿಲ್ಲ; ನಿಮಗೇ ಗೊತ್ತಲ್ಲ ಪಾಪ ಹರೇದ ಹುಡುಗಿ ಒಬ್ಬಳೇ ಇಲ್ಲಿ ಇರೋದು ಎಷ್ಟು ಡೇಂಜರ್ ಅಂತ.’

‘ಅವಳ ಹೆಸರೇನು ಕೇಳಿದಿರಾ?’

‘ಹೆಸರೆಲ್ಲ ಕೇಳಲಿಲ್ಲ ಮುತ್ತಣ್ಣ. ಯಾಕೆ ಏನಾಯ್ತು?’

‘ಏನಿಲ್ಲ ಸಾರ್, ಅದು ಚಂದಾಪುರದಿಂದ ನನ್ ಬಸ್ಸಲ್ಲೇ ಬಂತು. ಇಲ್ಲಿ ಬಂದು ಕಿವಿನೋಡಕೊಂಡು ಅತ್ತಕೊಂಡು ಬಸ್ಸೆಲ್ಲ ಹುಡುಕ್ತಿತ್ತು. ಹಂಗಾಗಿ ವಿಚಾರಸಣ ಅಂತ ಬಂದೆ.’

‘ಅಯ್ಯೋ ಪಾಪ. ಏನದೇ ಬಿದ್ದೋಯ್ತೋ ಇಲ್ಲಾ ಯಾರಾದ್ರು ಕಳ್ಳ ನಮ್ಲಕ್ಳು ಬಿಚ್ಕೊಂಡ್ರೋ ಏನ್ ಕತೆನೋ ಮುತ್ತಣ್ಣ, ಕಾಲ ಕೆಟ್ಟೋಯ್ತು.’ ಎನ್ನುತ್ತ ದೂರದಲ್ಲಿ ಯಾವುದೋ ಗಲಾಟೆ ನೋಡಿ ಸೀಟಿ ಹೊಡೆಯುತ್ತ ಅತ್ತ ಹೊರಟು ಹೋದ ಆ ಅಧಿಕಾರಿ.

ಮುತ್ತಣ್ಣನಿಗೆ ಮನಸ್ಸು ಸಮಾಧಾನವೇ ಆಗಲಿಲ್ಲ. ಸುಮ್ಮನೆ ಬಂದು ಬಸ್ಸು ತಪ್ಪಿಸಿಕೊಂಡೋ, ಮನೆಯಿಂದ ತಪ್ಪಿಸಿಕೊಂಡೋ ಅಥವಾ ಮೆಜೆಸ್ಟಿಕ್ಕನ್ನೇ ಮನೆಯನ್ನಾಗಿ ಮಾಡಿಕೊಂಡೋ, ಗೊರಕೆ ಹೊಡೆಯುತ್ತಿದ್ದವರ ಕಡೆ ಬಂದು ಕಲ್ಲುಬೆಂಚಿನ ತುದಿಯಲ್ಲಿ ಕುಳಿತ. ‘ತನ್ನ ಉದ್ದೇಶ ಏನು ಎಂಬುದು ತನಗೇ ತಿಳಿದಿಲ್ಲ. ಸುಮ್ಮನೆ ಸೈಕಲ್ ಹೊಡೆದುಕೊಂಡು ಈ ಅಪರಾತ್ರಿಯಲ್ಲಿ ಇಲ್ಲಿಗೆ ಬಂದಿದ್ದೇನೆ. ಇಷ್ಟಕ್ಕೂ ಆ ಹುಡುಗಿ ಇಲ್ಲೇ, ಇದೇ ಕಲ್ಲುಬೆಂಚಿನ ಮೇಲೆ ಅಳುತ್ತ ಕುಳಿತಿರುತ್ತಿದ್ದರೂ ತಾನೇನು ಮಾಡಬಲ್ಲವನಾಗಿದ್ದೆ? ಅವಳ ಕಳೆದುಹೋದ ಓಲೆಯೇನಾದರೂ ತನಗೆ ಸಿಕ್ಕಿದ್ದರೆ ಅದನ್ನು ವಾಪಸ್ ಮಾಡಲು ಬಂದಿದ್ದೇನೆ ಎಂದುಕೊಳ್ಳಬಹುದಿತ್ತು. ಆದರೆ ಈಗ ತಾನೇನು ಮಾಡಲು ಬಂದಿದ್ದೇನೆ? ಆ ಅಧಿಕಾರಿ ಹೇಳಿದಂತೆ ಅವಳು ಇಷ್ಟುಹೊತ್ತಿಗೆ ಸುಂಕದಕಟ್ಟೆಯ ಕಡೆಯ ಬಸ್ಸು ಹತ್ತಿಕೊಂಡು ತನ್ನ ಮನೆ ಸೇರಿರುತ್ತಾಳೆ. ಇನ್ನೇನೇ ಅವಗಡ ನಡೆಯುವುದಿದ್ದರೂ ಅದು ಸುಂಕದಕಟ್ಟೆಯ ಆ ಹುಡುಗಿಯ ಮನೆಯಲ್ಲಿ. ಆ ಮನೆ ತನಗೆ ಗೊತ್ತಿಲ್ಲ.’ ಎಂದುಕೊಳ್ಳುತ್ತ ತನ್ನನ್ನು ಹೀಗೆ ಸುಖಾಸುಮ್ಮನೆ ಎಳೆದುಕೊಂಡು ಬಂದ ಆ ಹುಡುಗಿಯ ಕಣ್ಣುಗಳನ್ನು ನೆನೆದು ತಾನೇ ಆಶ್ಚರ್‍ಯಗೊಂಡ.

6.4

ಮರುಕ್ಷಣವೇ ಅವನಿಗೆ ಮತ್ತೊಂದು ವಿಚಿತ್ರವಾದ ಆಲೋಚನೆ ಬಂತು. ‘ಅಕಸ್ಮಾತ್ ತಾನು ಕಳೆದುಕೊಂಡ ಓಲೆಯನ್ನು ಮರಳಿ ಕೊಂಡುಕೊಳ್ಳಲು ಸುಲಭವಾಗಿ ಹಣಗಳಿಸುವ ಸಲುವಾಗಿ ಏನಾದರೂ.....’ ಬಿರಬಿರನೆ ಅಲ್ಲಿಂದ ಎದ್ದವನೇ ಸೈಕಲ್ ಏರಿ ಸೂಳೆಯರು ನಿಲ್ಲುತ್ತಿದ್ದ ರೈಲ್ವೆ ಸ್ಟೇಷನ್ನಿನ ಸುರಂಗ ಮಾರ್ಗಗಳ ಕಡೆ ಹೊರಡುತ್ತಿದ್ದಂತೆ ದೂರದಿಂದ ‘ಅಂಕಲ್, ಅಂಕಲ್’ ಎಂದು ಕೂಗುವ ಹುಡುಗಿಯ ದನಿ ಕೇಳಿತು. ತಕ್ಷಣ ಸೈಕಲ್ ನಿಲ್ಲಿಸಿ ಹಿಂದೆ ತಿರುಗಿ ನೋಡುತ್ತಾನೆ- ಆ ಕತ್ತಲಲ್ಲಿ ಆ ಅದೇ ಹುಡುಗಿ ಓಡೋಡಿ ಬರುತ್ತಿದೆ!

‘ಅಂಕಲ್ ನೀವೇ ಅಲ್ವಾ ಚಂದಾಪುರ ಬಸ್ ಕಂಡಕ್ಟರ್?’ ಏದುಸಿರು ಬರುತ್ತ ಕೇಳಿದಳು.

‘ಹೌದಮ್ಮಾ ನಾನೇ. ನಿನ್ನೇ ಹುಡಕ್ತಾ ಇದ್ದೆ.’

‘ಹಾಗಾದ್ರೆ ನನ್ನ ಓಲೆ ಸಿಕ್ಕಿಬಿಡ್ತಾ ಅಂಕಲ್?’ ಎಂದು ಖುಷಿಯಿಂದ ಕೇಳಿದಳು. ತನಗಿಂತ ಏಳೆಂಟು ವರ್ಷ ಸಣ್ಣವಳಾದ ಹುಡುಗಿಯೊಬ್ಬಳು, ಅದರಲ್ಲೂ ತನಗೆ ಗೊತ್ತಿಲ್ಲದೆ ತನ್ನನ್ನು ಈ ಅಪರಾತ್ರಿಯಲ್ಲಿ ಇಲ್ಲಿಯವರೆಗೂ ಸೆಳೆದುಕೊಂಡು ಬಂದ ಹುಡುಗಿಯೊಬ್ಬಳು ತನಗೆ ‘ಅಂಕಲ್’ ಎಂದು ಕರೆದಿದ್ದರಿಂದ ಸ್ವಲ್ಪ ಕಸಿವಿಸಿಯಾದರೂ ಅದನ್ನು ತೋರಗೊಡದೆ,

‘ಅದೂ... ಇಲ್ಲಮ್ಮಾ, ನಂಗೆ ಇಲ್ಲಿ ಬೇರೆ ಏನೋ ಕೆಲಸ ಇತ್ತು ಅದಕ್ಕೆ ಬಂದಿದ್ದೆ.’

‘ಇಲ್ಲಾ ನೀವು ಸುಳ್ಳು ಹೇಳತಾ ಇದೀರಾ. ನಿಮಗೆ ನನ್ನ ಓಲೆ ಸಿಕ್ಕಿದೆ; ಅದನ್ನ ಕೊಡೋಕೆ ಇಲ್ಲಿಗೆ ಬಂದಿದ್ದೀರಾ. ನಂಗ್ ಗೊತ್ತಿಲ್ಲ ನನ್ನ ಓಲೆ ನಂಗೆ ಕೊಟ್ಟುಬಿಡಿ ಅಂಕಲ್’ ಎಂದು ಅಳತೊಡಗಿದಳು.

‘ಅಳಬಾರದಮ್ಮ, ಬಾ ಬಾಯಿಲ್ಲಿ ಕೂತಕೋ ಬಾ ಮೊದಲು.’ ಎಂದು ಕರೆದುಕೊಂಡು ಬಂದು ಕಲ್ಲುಬೆಂಚಿನ ಮೇಲೆ ಕೂರಿಸಿ ಅವಳ ಕಣ್ಣೀರು ವರೆಸಿ ಸಣ್ಣ ಮಗುವನ್ನು ಸಮಾಧಾನ ಮಾಡುವಂತೆ ಮಾಡತೊಡಗಿದ.

‘ನಿನ್ನ ಇನ್ನೊಂದು ಓಲೆ ಎಲ್ಲಿ ಹೋಯ್ತು?’ ಎಂದು ಬೋಳುಬೋಳಾಗಿದ್ದ ಮತ್ತೊಂದು ಕಿವಿಯನ್ನು ನೋಡಿ ಕೇಳಿದ.

‘ಅದನ್ನು ಬಿಚ್ಚಿ ಜೋಪಾನವಾಗಿ ಬ್ಯಾಗಲ್ಲಿ ಇಟ್ಟುಕೊಂಡಿದ್ದೀನಿ.’ ಬಿಕ್ಕುತ್ತಾ ಹೇಳಿದಳು.

‘ಇಷ್ಟು ಮಧ್ಯರಾತ್ರಿಯಲ್ಲಿ ಒಬ್ಬಳೇ ಹೀಗೆ ಅಳತಾ ಬಸ್‌ಸ್ಟ್ಯಾಂಡಲ್ಲಿ ಕೂತಿದ್ರೆ ನೋಡಿದೋರೆಲ್ಲ ಏನಂದ್ಕೋತಾರಮ್ಮಾ? ಏನು ನಿನ್ನ ಹೆಸರು? ಹಾಂ?’

‘ಸೀತಾ.’

ಆ ಹೆಸರು ಕೇಳಿದ್ದೆ ಮುತ್ತಣ್ಣನ ಮೈಯಲ್ಲಿ ಒಮ್ಮೆ ವಿದ್ಯುತ್‌ಸಂಚಾರವಾದಂತಾಯಿತು. ತನ್ನೂರಿನಲ್ಲಿ ತನ್ನ ಬಳಗದಲ್ಲಿ ಈ ಹೆಸರಿನ ಯಾವ ಹೆಣ್ಣನ್ನೂ ಅವನು ಕಂಡಿಲ್ಲ. ಹಾಗಾಗಿ ಆ ಹೆಸರಿನೊಂದಿಗೆ ಅವನಿಗೆ ಯಾವ ಪೂರ್ವಪೀಡಿತ ವ್ಯಕ್ತಿಗಳೂ ಕಾಣಲಿಲ್ಲ. ಅವನಿಗೆ ಅದರಲ್ಲಿ ಯಾವ ನೆನಪಿನ ಸೋಂಕೂ ಇಲ್ಲದಷ್ಟು ನಿರ್ಮಲವಾಗಿ ಅವಳ ಆಕೃತಿಯಷ್ಟೆ ಅವನ ಕಣ್ಣುಕಟ್ಟುತ್ತಿತ್ತು. ಅಲ್ಲೇ ಇದ್ದ ಅಂಗಡಿಯಲ್ಲಿ ಅವಳಿಗೆ ಬನ್ನು ಹಾಗೂ ಬಾದಾಮಿಹಾಲನ್ನು ಕೊಡಿಸಿದ. ‘ತಾನು ಬಸ್ಸನ್ನೆಲ್ಲಾ ಹುಡುಕಿದೆ ಎಲ್ಲೂ ನಿನ್ನ ಓಲೆ ಸಿಗಲಿಲ್ಲ’ ಎಂದು ಹೇಳಿ ಇದಕ್ಕೆ ತನ್ನ ಬಳಿ ಒಂದು ಉಪಾಯ ಇದೆ ಎಂದು ಅದನ್ನು ಅವಳಿಗೆ ಹೇಳಿದ. ಅವಳಿಗೂ ಆ ಉಪಾಯವು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಒಳ್ಳೆಯ ಮಾರ್ಗವೇ ಎಂದು ತಿಳಿದು ಒಪ್ಪಿದಳು. ಇಡೀ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಸಮಯ ಆಗಲೇ ಎರಡರ ಹತ್ತಿರ ಬಂದಿತ್ತು. ಅತ್ತೂ ಅತ್ತೂ ಸೊರಗಿಹೋಗಿದ್ದ ಹುಡುಗಿ ಮುತ್ತಣ್ಣನ ತೊಡೆಯ ಮೇಲೇ ತನ್ನ ಚಿಕ್ಕ ಬ್ಯಾಗನ್ನು ಅವುಚಿಕೊಂಡು ಹಗಲಿಗಾಗಿ ಮಲಗಿದಳು.

6.5

ಇನ್ನೇನು ಸೂರ‍್ಯ ಕಣ್ತೆರೆಯುವ ಸಮಯಕ್ಕೆ ಇಬ್ಬರೂ ಮೆಜೆಸ್ಟಿಕ್ಕಿನಿಂದ ಹೊರಟರು. ಹಿಂದಿನ ಕ್ಯಾರಿಯರ್‌ನಲ್ಲಿ ಸೀತಾ ಕುಳಿತಳು ಮುತ್ತಣ್ಣ ಸೈಕಲ್‌ಅನ್ನು ಆಡುಗೋಡಿಯ ತನ್ನ ರೂಮಿನ ಕಡೆ ತುಳಿಯತೊಡಗಿದ. ರೂಮಿಗೆ ಬಂದವನೇ ಸೀತಾಳನ್ನು ಒಳಗೆ ಬಿಟ್ಟು ತಾನು ಹಾಲು ತರಲು ಹೋದನು. ಸೀತಾ ಬೆದರಿದ ಜಿಂಕೆಯಂತೆ ರೂಮಿನ ಒಳಗೆ ಬಂದು ಚಾಪೆಯ ಮೇಲೆ ಮುದುರಿ ಕುಳಿತುಕೊಂಡಳು. ಮುತ್ತಣ್ಣ ಹಾಲು ತಂದವನೇ ಕಾಯಿಸಿ ಹಾರ್ಲಿಕ್ಸ್ ಬೆರಸಿ ಅವಳಿಗೆ ಕೊಟ್ಟನು; ಮೊದಮೊದಲು ಬೇಡ ಎಂದರೂ ಹಾಲು ಕುಡಿದಳು. ಸ್ಟೌ ಮೇಲೆ ಸ್ನಾನಕ್ಕೆ ನೀರಿಟ್ಟು ‘ನೀರು ಕಾದ ಮೇಲೆ ಸ್ನಾನ ಮಾಡಿ ರೆಡಿ ಆಗು ನಾನು ಅಷ್ಟರಲ್ಲಿ ಟಿಫನ್ ಏನಾದರೂ ತರುತ್ತೇನೆ’ ಎಂದು ಹೇಳಿ ಮುತ್ತಣ್ಣ ಅಲ್ಲಿಂದ ಹೊರಟುಹೋದನು. ಸೀತಾ ಸ್ನಾನ ಮಾಡಿ ರೆಡಿಯಾಗಿ ಒಂದು ಸಣ್ಣ ನಿದ್ದೆ ಮಾಡಿದ ನಂತರ ಮುತ್ತಣ್ಣ ಕಟ್ಟಿಸಿಕೊಂಡು ಬಂದಿದ್ದ ಬಿಸಿಬಿಸಿ ಇಡ್ಲಿಯನ್ನು ತಿನ್ನುತ್ತಾ ‘ಥ್ಯಾಂಕ್ಸ್ ಅಂಕಲ್’ ಎಂದು ಎರಡು ಮೂರು ಬಾರಿ ಹೇಳಿದಳು. ಮುತ್ತಣ್ಣ ತಾನೂ ಇಡ್ಲಿ ತಿನ್ನುತ್ತ ‘ಅಂಕಲ್ ಅಂತ ಕರೀಬೇಡಾ ಸೀತಾ, ನನ್ನ ಹೆಸರು ಮುತ್ತು, ಮುತ್ತು ಅಂತಾನೇ ಕರಿ.’ ಎಂದು ಹೇಳಿದ. ಅದಕ್ಕೆ ಸೀತಾ, ‘ಎಲ್ಲಾದರೂ ಉಂಟೆ’ ಎಂಬಂತೆ ಬೇಗಬೇಗ ತಿಂಡಿ ತಿನ್ನತೊಡಗಿದಳು.

ಸೀತಾಳನ್ನು ಮುತ್ತಣ್ಣ ತನಗೆ ಪರಿಚಯವಿರುವ ಆಚಾರಿಯ ಅಂಗಡಿಗೆ ಕರೆದುಕೊಂಡು ಬಂದನು. ಸೀತಾಳ ಕತೆಯನ್ನೆಲ್ಲ ವಿವರಿಸಿ ಅವಳ ಬಳಿ ಇದ್ದ ಚಿನ್ನದ ಒಂಟಿ ಓಲೆಯನ್ನು ತೋರಿಸಿ ಇಂಥದ್ದೇ ನಕಲಿ ಓಲೆಯನ್ನು ಈಗಲೇ ಅರ್ಜಂಟಾಗಿ ಮಾಡಿಕೊಡಬೇಕೆಂದು ವಿನಂತಿಸಿದ. ಓಲೆಯನ್ನು ಕೂಲಂಕುಶವಾಗಿ ನೋಡಿದ ಆಚಾರಿ ‘ಮಾಡಬಹುದು ಆದರೆ ಅರ್ಜಂಟಲ್ಲಿ ಆಗಲ್ಲವಲ್ಲ ಮುತ್ತಣ್ಣ...’ ಎಂದ. ಸೀತಾ ಗಾಭರಿಯಿಂದ ಆಚಾರಿಯ ಮುಖವನ್ನೂ ಮುತ್ತಣ್ಣನ ಮುಖವನ್ನೂ ನೋಡತೊಡಗಿದಳು. ‘ಸರಿ ಹೆಂಗಾದ್ರೂ ಮಾಡಿ ಮದ್ಯಾಹ್ನದೊಳಗೆ ಮಾಡಿ ಕೊಡಿ ಆಚರ‍್ರೆ’ ಎಂದ ಮುತ್ತಣ್ಣ ಅದಕ್ಕೆ ಆಚಾರಿ ಮುಖ ಕಿವುಚಿಕೊಂಡು ‘ನಾಳೆ ಮದ್ಯಾಹ್ನ ಇಲ್ಲ ಸಾಯಂಕಾಲ ಆಗುತ್ತೆ ಮುತ್ತಣ್ಣ ಹೇಳಕ್ ಬರಲ್ಲ, ಮಾರ್ಕೆಟ್‌ಗೆ ಬೇರೆ ಹೋಗಬೇಕು...’ ‘ಅಯ್ಯೋ ಹಂಗನಬೇಡ್ರಿ ಆಚರ‍್ರೆ ಇವತ್ತು ಸಾಯಂಕಾಲ ಹೆಂಗಾದ್ರೂ ಮಾಡಿ ಮಾಡಿಕೊಡಿ ತೊಗೊಳ್ಳಿ ಅಡ್ವಾನ್ಸ್ ಇಟ್ಕೊಳ್ಳಿ’ ಎಂದು ಇನ್ನೂರು ರುಪಾಯಿಯನ್ನು ಕೊಟ್ಟ. ‘ಅಸಲಿ ಓಲೆ ಬೇಕಾಗುತ್ತ?’ ಎಂದು ಕೇಳಿದ್ದಕ್ಕೆ ‘ಕೊಟ್ಟುಹೋದ್ರೆ ಒಳ್ಳೇದು ಅದೇಥರ ಡಿಟ್ಟೂ ಮಾಡಬೋದು’ ಎಂದ ಆಚಾರಿ. ಆದರೆ ಈಗಾಗಲೇ ಒಂದು ಓಲೆ ಕಳೆದುಕೊಂಡಿರುವ ಸೀತಾಳಿಗೆ ಇರುವ ಅಸಲಿ ಓಲೆಯನ್ನು ಆಚಾರಿಯ ಬಳಿ ಬಿಟ್ಟುಹೋಗುವ ಮನಸ್ಸಿರಲಿಲ್ಲ. ಇದನ್ನು ಅರಿತ ಮುತ್ತಣ್ಣ ‘ಏ ಸರಿಯಾಗ್ ನೋಡಕೊಳ್ಳಿ ಆಚರ‍್ರೆ, ನಿಮಗೇನು ಹೊಸದಾ ಇದು? ಹಿಂಗ್ ಕಣ್ಣಿಂದ ಒಂದುಸರಿ ನೋಡಿದ್ದು ಹಂಗೆ ಮಾಡತೀರಂತೆ.’ ಎಂದು ಹುರಿದುಂಬಿಸಿದ. ಅದಕ್ಕೆ ಉಬ್ಬಿಹೋದ ಆಚಾರಿ ಓಲೆಯನ್ನು ಮತ್ತೊಮ್ಮೆ ಕೂಲಂಕುಶವಾಗಿ ನೋಡಿ ‘ತೊಗೊಳ್ಳಿ ನಿಮ್ ಓಲೆ ಯಾರಿಗ್ ಬೇಕು, ಸಾಯಂಕಾಲ ಒಂದ್‌ಸರಿ ಬನ್ನಿ ಆಗಿದ್ರೆ ಕೊಟ್ಟುಬಿಡತೀನಿ’ ಎಂದು ಹೇಳಿ ಕಳಿಸಿದ.

‘ಮೊದಲು ನಿಮ್ಮ ತಾಯಿಗೆ ಫೋನ್ ಮಾಡಿ ಮಾತಾಡು’ ಎಂದು ಹೇಳಿ ಎಸ್‌ಟಿಡಿ ಬೂತಿಗೆ ಕರಕೊಂಡು ಬಂದನು ಮುತ್ತಣ್ಣ. ತನ್ನ ಪುಟ್ಟಬ್ಯಾಗಿನಲ್ಲಿ ಇದ್ದ ಸಣ್ಣ ಡೈರಿಯಲ್ಲಿ ಬರಕೊಂಡಿದ್ದ ತನ್ನ ಮನೆಯ ಪಕ್ಕದ ಮನೆಯವರ ಫೋನ್ ನಂಬರಿಗೆ ಮಾಡಿ ತನ್ನ ತಾಯಿಯನ್ನು ಕರೆಯಲು ಹೇಳಿ ಮಾತಾಡಿದಳು ಸೀತಾ. ‘ಗಾಯತ್ರಿ ಬಿಡಲೇ ಇಲ್ಲ ಹಂಗಾಗಿ ನಿನ್ನೆ ಬರೋಕಾಗಲಿಲ್ಲ, ಇವತ್ತು ಸಂಜೆ ಹೊತ್ತಿಗೆ ಬರತೀನಿ’ ಎಂದು ಹೇಳಿದಳು. ಅತ್ತ ಕಡೆಯಿಂದ ಸೀತಾಳ ತಾಯಿ ಗೊಣಗುತ್ತ ‘ಕಿವಿಯಲ್ಲಿರೋವು ಹುಷಾರು’ ಎಂದು ಮತ್ತೆ ಮತ್ತೆ ಒತ್ತಿ ಹೇಳಿದ್ದು ಸೀತಾಳಿಗೆ ಇನ್ನೂ ದುಃಖವನ್ನು ತಂದಿತು. ಅವಳು ಮಾತಾಡಿದ ಬಳಿಕ ಮುತ್ತಣ್ಣ ತಾನೂ ಡಿಪೋಗೆ ಫೋನ್ ಮಾಡಿ ‘ಇವತ್ತು ಕೆಲಸಕ್ಕೆ ಬರಲಿಕ್ಕೆ ಆಗೋದಿಲ್ಲ’ ಎಂದು ಹೇಳಿ ರಜಾ ಪಡೆದುಕೊಂಡು ಇಬ್ಬರೂ ಮತ್ತೆ ರೂಮಿನ ಕಡೆ ಬಂದರು.

6.6

ರೂಮಿಗೆ ಬಂದವನೇ ಟೇಪ್‌ರೆಕಾರ್ಡರಿನಲ್ಲಿ ತನ್ನ ನೆಚ್ಚಿನ ಹಾಡನ್ನು ಹಾಕಿ ತಾನು ಬರುವಾಗ ಕೊಂಡು ತಂದಿದ್ದ ಪತ್ರಿಕೆಯನ್ನು ಬಿಡಿಸಿ ಓದತೊಡಗಿದನು. ‘ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು’ ಹಾಡು ಬಂದಾಗ ತಾನೂ ಅದರ ಜೊತೆ ಗುನುಗುಡುತ್ತ ಪೇಪರ್ ಓದುತ್ತಿದ್ದ ಮುತ್ತಣ್ಣನಿಗೆ ಸಂಜೆವರೆಗೂ ಏನು ಮಾಡೋದು ಎಂಬ ಯೋಚನೆ ಶುರುವಾಯಿತು. ಪೇಪರಿನಲ್ಲಿ ಅಂದು ‘ಯಾರೇ ನೀನು ಚೆಲುವೆ’ ಸಿನಿಮಾ ರಿಲೀಸ್ ಆಗಿದ್ದ ಪೋಸ್ಟರ್ ಬಂದಿತ್ತು; ಮತ್ತದು ತನ್ನ ರೂಮಿನ ಹತ್ತಿರದ ಚಿತ್ರಮಂದಿರದಲ್ಲೇ ನಾಲ್ಕು ಪ್ರದರ್ಶನವಿತ್ತು. ‘ಸೀತಾ ಹೇಗಿದ್ರೂ ಆಚಾರಿ ಓಲೆ ಮಾಡಿ ಕೊಡೋಕೆ ಸಂಜೆ ಆಗುತ್ತೆ, ಅಲ್ಲೀವರಗೂ ರೂಮಲ್ಲಿ ಕೂತು ಏನು ಮಾಡೋದು? ಸಿನಿಮಾಗಾದ್ರೂ ಹೋಗಿ ಬರೋಣವಾ?’ ಎಂದು ತುಸು ಸಂಕೋಚದಿಂದಲೇ ಕೇಳಿದ. ಸೀತಾ ಮುತ್ತಣ್ಣನ ಆಲೋಚನೆಯನ್ನು ಅನುಮಾನದಿಂದ ನೋಡಿ ಹಾಂ ನೂ ಅನ್ನದೆ ಹೂಂನೂ ಅನ್ನದೆ ಸುಮ್ಮನೆ ಕೂತುಬಿಟ್ಟಳು. ‘ಸರಿ ನಿನಗೆ ಇಷ್ಟ ಇಲ್ಲ ಅಂದರೆ ನೀನು ಇಲ್ಲೇ ಇರು, ನಾನು ಹೋಗಿ ಬರತೇನೆ’ ಎಂದು ಮುತ್ತಣ್ಣ ಹೊರಡುತ್ತಿರುವಾಗ ಸೀತಾ ‘ತಾನೂ ಬರುವುದಾಗಿ ಹೇಳಿ’ ಇಬ್ಬರೂ ಹೊರಟರು.

ಮುತ್ತಣ್ಣನಿಗೂ ಹೀಗೆ ಒಂದು ಹುಡುಗಿಯ ಜೊತೆಗೆ ಅದೂ ಥೇಟರಿನಲ್ಲಿ ಕೂತು ಸಿನಿಮಾ ನೋಡುವುದು ಹೊಸತು; ಹಾಗೆಯೇ ಸೀತಾಳಿಗೂ. ಸಿನಿಮಾ ವಿರಾಮದಲ್ಲಿ ಪಾಪ್‌ಕಾರ್ನ್ ಪ್ಯಾಕೆಟನ್ನು ತಂದು ಕೊಟ್ಟು ಮುತ್ತಣ್ಣ ‘ಸೀತಾ ನನ್ನ ಅಂಕಲ್ ಅಂತ ಕರೀಬೇಡ’ ಎಂದು ಹೇಳಿದನು. ಅದಕ್ಕೆ ಸೀತಾ ‘ಇಲ್ಲಪ್ಪಾ, ನೀವು ನನಗಿಂತ ದೊಡ್ಡವರು ನಿಮ್ಮನ್ನ ಹಂಗೆಲ್ಲ ಹೆಸರಿಟ್ಟು ಕರೆಯೋಕೆ ನಂಗಿಷ್ಟ ಇಲ್’ ಎಂದು ನಸುನಕ್ಕಳು. ‘ಸರಿ ನಿಂಗ್ ನನ್ನ ಮುತ್ತು ಅಂತ ಕರೆಯೋಕೆ ಇಷ್ಟ ಇಲ್ಲ ಅಂದ್ರೆ ತೊಂದರೆ ಇಲ್ಲ; ಆದರೆ ಅಂಕಲ್ ಅಂತ ಮಾತ್ರ ಕರೀಬೇಡ; ಇಲ್ಲಾಂದ್ರೆ ನಾನೂ ನಿನ್ನ ಆಂಟಿ ಅಂತ ಕರೀತೀನಿ ನೋಡು’ ಎಂದು ಬೆದರಿಸಿದ. ಅದಕ್ಕೆ ಸೀತಾ ಅಷ್ಟೆ ಸಲೀಸಾಗಿ ‘ಕರೀರಿ ನಂಗೇನೂ ಬೇಜಾರಿಲ್ಲ’ ಎಂದು ಪಾಪ್‌ಕಾರ್ನ್ ತಿನ್ನತೊಡಗಿದಳು.

ಸಿನಿಮಾ ಮುಗಿಸಿ ಮಧ್ಯಾಹ್ನ ಜನತಾ ಹೋಟೆಲಿನಲ್ಲಿ ಊಟಮಾಡುವಾಗ, ವಾಪಸ್ ಬರುವಾಗ ಹೀಗೆ ಎಲ್ಲೆಲ್ಲಿ ಸಂದರ್ಭ ಸಿಗುತ್ತದೆಯೋ ಅಲ್ಲೆಲ್ಲಾ ಸೀತಾಳನ್ನು ಮುತ್ತಣ್ಣ ‘ಆಂಟಿ’ ಎಂದು ಒತ್ತಿಒತ್ತಿ ಕರೆಯತೊಡಗಿದ; ಸೀತಾ ಅದನ್ನು ಲಕ್ಯ್ಷಕ್ಕೇ ತೆಗೆದುಕೊಳ್ಳದೆ ನಗಾಡುತ್ತ ಪ್ರತಿಯಾಗಿ ‘ಅಂಕಲ್’ ಎಂದು ಮೇಲಿಂದ ಮೇಲೆ ಸಂಬೋಧಿಸತೊಡಗಿದಳು.

6.7

ಸಂಜೆಯವರೆಗೂ ಹೇಗೋ ಸಮಯ ಕಳೆದು ಇಬ್ಬರೂ ಮತ್ತೆ ಆಚಾರಿಯ ಅಂಗಡಿಗೆ ಹೋದರು. ಆದರೆ ಆಚಾರಿ ‘ಇವತ್ತು ಓಲೆ ಕೊಡಲು ಸಾಧ್ಯವೇ ಇಲ್ಲ ನಾಳೆ ಬೆಳಿಗ್ಗೆ ಬನ್ನಿ’ ಎಂದು ಹೇಳಿ ಸಾಗಹಾಕಿದನು. ಮುತ್ತಣ್ಣ ಮತ್ತೊಮ್ಮೆ ಸೀತಾಳನ್ನು ಎಸ್‌ಟಿಡಿ ಬೂತಿಗೆ ಕರಕೊಂಡು ಹೋಗಿ ತನ್ನ ತಾಯಿಗೆ ಕರೆಮಾಡಿ ನಾಳೆ ಬರುವುದಾಗಿ ಹೇಗಾದರೂ ಕಾರಣ ಹೇಳಲು ಹೇಳಿದನು. ಅಳುಕುತ್ತ ಫೋನ್ ಮಾಡಿದ ಸೀತಾ ಅಮ್ಮನೊಂದಿಗೆ ಮತ್ತೊಮ್ಮೆ ಗಾಯತ್ರಿ ಮದುವೆಯ ವಿಚಾರ ತೆಗೆದು ‘ಗಾಯತ್ರಿ ಇವತ್ತೊಂದು ದಿನ ಇದ್ದು ಹೋಗು ಎಂದು ಬಲವಂತ ಮಾಡುತ್ತಿರುವುದಾಗಿ ಹೇಳುತ್ತಿದ್ದಾಳೆ’ ಎಂದು ಕಾರಣ ಹೇಳಿದಳು. ಅದಕ್ಕೆ ಅವರಮ್ಮ ಮತ್ತೆ ಮತ್ತೆ ‘ಕಿವಿಯೋಲೆ ಹುಷಾರು ಬಂಗಾರದ್ವು ಅವು’ ಎಂದು ಎಚ್ಚರಿಕೆ ನೀಡಿ ಫೋನಿಟ್ಟರು. ಅಮ್ಮನ ಬಾಯಿಂದ ಓಲೆಯ ಕುರಿತು ಮಾತು ಬಂದಾಗಲೆಲ್ಲ ಸೀತಾಳಿಗೆ ಪಾಪಪ್ರಜ್ಞೆ ಉಕ್ಕಿಬಂದು ಕಾಡುತ್ತಿತ್ತು. ಕಷ್ಟು ಪಟ್ಟು ತನ್ನ ಮದುವೆಗಾಗಿ ಸಂಗ್ರಹಿಸಿದ್ದ ಬೆಳೆಬಾಳುವ ಏಕೈಕ ಉಡುಗೊರೆಯನ್ನು ತಾನು ಹೀಗೆ ಅನಾಯಾಸವಾಗಿ ಕಳೆದುಕೊಂಡು, ನಕಲಿ ಓಲೆ ಮಾಡಿಸಿಕೊಳ್ಳುವ ಸಲುವಾಗಿ ಹೀಗೆ ಯಾವುದೋ ಅಪರಿಚಿತ ವ್ಯಕ್ತಿಯ ಜೊತೆ ಇರುವುದು ಅವಳನ್ನು ಮತ್ತೂ ಖಿನ್ನಳನ್ನಾಗಿ ಮಾಡಿತ್ತು.

ರೂಮಿನ ಗೋಡೆಯ ಒಂದು ಮಗ್ಗುಲಿಗೆ ಚಾಪೆ ಹಾಸಿಕೊಂಡು ಸೀತಾ ಮಲಗಿದರೆ, ಮತ್ತೊಂದು ಗೋಡೆಯ ಮಗ್ಗುಲಿಗೆ ಮುತ್ತಣ್ಣ ಮಲಗಿದನು. ಟೇಪ್‌ರೆಕಾರ್ಡರಿನಲ್ಲಿ ಮತ್ತೆ ಅದೇ ರಾಜಕುಮಾರರು ಹಾಡಿರುವ ತನ್ನ ಮನೆದೇವರ ಹಾಡುಗಳ ಕ್ಯಾಸೆಟ್ಟನ್ನು ಸಣ್ಣಗೆ ಹಾಕಿದನು. ಹಾಡು ಕೇಳುತ್ತ ಕೇಳುತ್ತ,

‘ಯಾಕೆ ನೀವು ಬರೀ ಈ ಹಾಡುಗಳನ್ನು ಕೇಳತೀರಿ? ಅಂಕಲ್?’ ಎಂದು ಕೇಳಿದಳು ಸೀತಾ.

‘ನಮ್ಮ ಮನೆದೇವರು ಮುತ್ತೆತ್ತರಾಯ ಆಂಟಿ. ರಾಜಕುಮಾರ್ ನನ್ನ ನೆಚ್ಚಿನ ನಟ. ಅವರ ತಾಯಿ ಮುತ್ತತ್ತಿ ಹನುಮಂತರಾಯನಿಗೆ ಹರಕೆ ಹೊತ್ತಿದ್ದರಂತೆ; ‘ಆ ಹನುಮಂತನ ಕೃಪೆಯಿಂದ ಹುಟ್ಟಿದ ಮಗು ತಾನು’ ಎಂಬ ಅಭಿಮಾನದಿಂದ ರಾಜಕುಮಾರರು ಮುತ್ತತ್ತಿಯ ಹನುಮಂತನ ಹಾಡುಗಳನ್ನು ಯಾವ ದುಡ್ಡೂ ಪಡೆಯದ ಹಾಡಿದ್ದಾರಂತೆ.’

‘ಅದಕ್ಕೆ?

‘ನಮ್ಮವ್ವನೂ ಹರಕೆ ಹೊತ್ತಿದ್ರಂತೆ ಹೆಣ್ಣುಮಗು ಆಗಲಿ, ಹಿಂದಿಂದು ಮೂರೂ ಗಂಡೇ ಆಗ್ಯವೆ, ಇದೊಂದು ಹೆಂಗಾರ ಹೆಣ್ಣು ಕೊಡಪ್ಪಾ ಅಂತ. ನೋಡುದ್ರೆ ನಾನು ಹುಟ್ಟಿದೆ.’

ಸೀತಾ ನಗುತ್ತಾಳೆ. ‘ಓಹ್ ಹಾಗಾದ್ರೆ ನೀವೂ ರಾಜಕುಮಾರ್ ಥರಾ ದೊಡ್ಡ ಹೀರೋ ಆಗತೀರಾ ಅನ್ನಿ!’

‘ಅಯ್ಯೋ ಬಿಡಮ್ಮಾ ಅವರೆಲ್ಲಿ ನಾವೆಲ್ಲಿ?’ ಎಂದು ಜುಗುಪ್ಸೆಯ ನಗೆ ಬೀರಿ ಸ್ವಲ್ಪ ಹೊತ್ತಿನ ಬಳಿಕ ಮುತ್ತಣ್ಣ, ‘ನಾನು ಹುಟ್ಟುತ್ಲೆ ನಮ್ಮವ್ವ ತೀರಕೊಂಡ್ಳಂತೆ.’ ಎಂದು ಹೇಳಿ ಸುಮ್ಮನಾದ.

‘ಹತ್ತನೆ ವಯಸ್ಸಿಗೆ ಬರೋ ಹೊತ್ಗೆ ನಮ್ಮಪ್ಪನೂ ತೀರಿಕೊಂಡ. ಹತ್ತನೇ ಕ್ಲಾಸು ಮುಗಿಸಿ ನಾನು ಬೆಂಗಳೂರಿಗೆ ಬಂದು ಬಿಟ್ಟೆ. ಯಾರೋ ಪುಣ್ಯಾತ್ಮರು ಹೇಳಿದ್ದರಿಂದ ಈ ಕಂಟಕ್ಟರ್ ಪೋಸ್ಟ್ಗೆ ಅರ್ಜಿ ಹಾಕಿದೆ; ಸಿಕ್ಕೇಬಿಡುತು ಆಂಟಿ. ಊರಲ್ಲಿ ನನ್ನ ಅಣ್ಣಂದ್ರೂ, ಅತ್ತಿಗೆಯಂದ್ರು, ಅವರ ಮಕ್ಕಳು ಎಲ್ಲಾ ಇದಾರೆ; ಆದರೆ ಅವರ ಜೊತೆಗೆ ನನ್ನ ಬಾಂದವ್ಯ ಅಷ್ಟಕ್ಕಷ್ಟೆ.’

‘ಯಾಕೆ ಇನ್ನೂ ಮದುವೆ ಆಗಲಿಲ್ಲ ಅಂಕಲ್ ನೀವು?’

‘ಮದುವೆ! ಗೊತ್ತಿಲ್ಲ ಆಂಟಿ, ನಿನ್ ಥರ ಓಲೆ ಕಳಕೊಂಡು ಅಳೋ ಹುಡುಗಿ ಸಿಕ್ರೆ ಆಗಬೋದು; ಆದರೆ ಇನ್ನೂ ಅಂಥವಳು ಸಿಕ್ಕಿಲ್ಲವಲ್ಲ!’ ಎಂದು ಅವಳ ಕಡೆ ನೋಡಿ, ನೋಡಲಾರದೆ ನಾಚಿ, ‘ಅದರ ಬಗ್ಗೆ ನಾನು ಯೋಚನೆನೇ ಮಾಡಿಲ್ಲ ಆಂಟಿ.’ ಎಂದು ಸುಮ್ಮನಾಗಿಬಿಟ್ಟ. ಹೀಗೆ ಧಿಡೀರೆಂದು ಬಂದ ತನ್ನ ಕುರಿತಾದ ಇಂಥ ಮಾತನ್ನು ಕೇಳಿ ಇಂಥ ಸರಿರಾತ್ರಿಯಲ್ಲಿ ಅದೂ ಅವರದೇ ಮನೆಯಲ್ಲಿ, ಅವರ ಎದುರೇ ಮಲಗಿರುವ ಸೀತಾಳಿಗೆ ವಿಚಿತ್ರವಾದ ಇರಿಸುಮುರಿಸಾಗಿ ಉಸಿರಾಟ ಮೇಲೆಕೆಳಗೆ ಆಗತೊಡಗಿತು. ತನ್ನ ಮಾತಿನ ಪರಿಣಾಮವನ್ನು ತಕ್ಷಣ ಅರಿತ ಮುತ್ತಣ್ಣ,

‘ಸರಿ ನಿನ್ನ ಕತೆ ಹೇಳು ಆಂಟಿ. ಬರಿ ನನ್ನ ಕತೆ ಕೇಳತಾ ಇದ್ದೀಯಲ್ಲಾ?’ ಎಂದು ಪರಿಸ್ಥಿತಿಯನ್ನು ಸಪಾಟು ಮಾಡಲೆತ್ನಿಸಿದ. ತುಸುಹೊತ್ತು ಸುಮ್ಮನಿದ್ದವಳು ನಂತರ ಮಾತನಾಡತೊಡಗಿದಳು ಸೀತಾ.

‘ನನ್ನದೇನೂ ವಿಶೇಷವಾದ ಕತೆ ಏನಿಲ್ಲ ಅಂಕಲ್. ನಮ್ಮಮ್ಮ ಕಮಲಮ್ಮ ಅಂತ. ನಮ್ಮ ಊರು ಮಾಗಡಿ. ನಾನುಟ್ಟೋ ಮೊದಲು ತುಂಬ ಸಾವ್ಕರ‍್ರೇ ಆಗಿದ್ವಂತೆ; ನಾನು ಉಟ್ಟುದಮೇಲೆ ಅಪ್ಪಂಗೆ ವ್ಯವಾರದಲ್ಲಿ ಲಾಸ್ ಆಗಿ ಕುಡಿಯೋಕೆ ಶುರುಮಾಡ್ಕಂಡ್ನಂತೆ. ಅಮ್ಮ ಮನೆ ನಡಸೋಕೆ ಕಷ್ಟಪಟ್ಟು ರಾತ್ರಿಯೆಲ್ಲ ಹೂಕಟ್ಟಿ ನಸುಕೀಲೆ ಎದ್ದು ಮಾರಕೊಂಡು ಬರೋದು; ಅವಳು ದುಡಿದ ದುಡ್ಡನ್ನೆಲ್ಲ ಅಪ್ಪ ಕುಡಿಯೋಕೆ ಕಿತಗೊಂಡು ಹೋಗೋದು- ಬರೀ ಇದೇ ನಡೀತಾ ಇತ್ತು. ಒಂದಿನ ಜಾಸ್ತಿ ಕುಡಕೊಂಡು ಬಂದು ನಮ್ಮಪ್ಪ ಸತ್ತೋದ ಅಂಕಲ್.’ ಎಂದು ಬಿಕ್ಕಿಬಿಕ್ಕಿ ಅಳತೊಡಗಿದಳು.

‘ಅಳಬೇಡ ಸೀತಾ, ಸಮಾಧಾನ ಮಾಡಕೋ...’

‘ಅಂಕಲ್ ನಿಮಗೆ ಒಂದು ಸತ್ಯ ಹೇಳತೀನಿ; ಇದುವರಗೂ ಯಾರಿಗೂ ಹೇಳಿಲ್ಲ; ಇವತ್ತು ನಿಮ್ಮಮುಂದೆ ಹೇಳಬೇಕು ಅಂತನಸ್ತಾ ಐತೆ ಅಂಕಲ್. ನೀವೂ ಯಾರಿಗೂ ಹೇಳಬಾರದು. ಭಾಷೆ ಕೊಡಿ.’ ಎಂದು ಕೈಮುಟ್ಟಿ ಭಾಷೆ ಪಡೆದುಕೊಂಡಳು.

‘ಅವತ್ತು ರಾತ್ರಿ ಸಹ ಕುಡುಕೊಂಡು ಬಂದು ನಮ್ಮಪ್ಪ ಅಮ್ಮನ ಜೊತೆ ಜಗಳ ತೆಗೆದು ಹೊಡೆಯಕ್ ಶುರುಮಾಡದ. ಬಿಡಿಸಕ್ ಹೋದ ನನ್ನೂ ಎತ್ತಿ ದೂರ ನೂಕದ. ಎಷ್ಟೋ ಹೊತ್ತು ಅಮ್ಮನ್ನ ಚನ್ನಾಗಿ ಚಚ್ಚಿ ಕಡೆಗೆ ಹೋಗಿ ಬಿದ್ದುಕೊಂಡ. ಅಷ್ಟೆಲ್ಲ ಹೊಡೆಸಿಕೊಂಡಿದ್ದ ಅಮ್ಮನ ಮುಖದಲ್ಲಿ ದುಃಖದ ಬದಲು ಕೋಪದ ಕಿಚ್ಚು ಉರೀತಾಇತ್ತು. ಆ ಕಿಚ್ಚನ್ನು ಈಗ ನೆನಪಿಸಿಕೊಂಡರೂ ನನಗೆ ಭಯ ಆಗುತ್ತೆ ಅಂಕಲ್. ಅಮ್ಮನ ಅಂಥಾ ಅವತಾರನಾ ನಾನು ಅದುವರಗೂ ನೋಡೇಇರಲಿಲ್ಲ. ಅದೇನನ್ನುಸ್ತೋ ಮಲಗಿದ್ದ ಅಪ್ಪನ ಮುಖಕ್ಕೆ ಏಕಾಏಕಿ ದಿಂಬನ್ನು ಹಾಕಿ ಒತ್ತಕ್‌ಶುರುಮಾಡಿದಳು. ಅಪ್ಪ ಕೈಕಾಲು ಎತ್ತಿ ವಿಲ ವಿಲ ಒದ್ದಾಡತಿದ್ದ! ಅಮ್ಮ ನನ್ನ ಕಡೆಗ್ ಒಂದ್ ಸಾರಿ ತಿರುಗಿ ನೋಡುದ್ಲು. ನಾನು ಇದೆಲ್ಲ ನಮಗೆ ಮೊದಲಿಂದಲೂ ಗೊತ್ತಿರೋ ವ್ಯವಾರವೇ ಅನ್ನೋ ಹಂಗೆ ನಮ್ಮಪ್ಪನ ಕಾಲುಗಳನ್ನು ಗಟ್ಟಿಯಾಗಿ ಹಿಡಕೊಂಡೆ. ಒಂದೆರಡು ನಿಮಿಷ; ಅಷ್ಟೆ! ಎಲ್ಲ ಸಲೀಸಾಗಿಬಿಡ್ತು. ಅಪ್ಪ ಸತ್ತಿದ್ದು ಯಾರಿಗೂ ದುಃಖ ತರಲಿಲ್ಲ ಹಂಗಾಗಿ ಯಾರೂ ಏನೂ ಕೊಸರೆತ್ತಲಿಲ್ಲ;’ ಎಂದು ತಟಸ್ಥಳಾಗಿ ಕುಳಿತುಬಿಟ್ಟಳು.

ಮಲಗಿಕೊಂಡು ಕತೆ ಕೇಳುತ್ತಿದ್ದ ಮುತ್ತಣ್ಣ ಆ ಕತ್ತಲಲ್ಲಿ ಬೆವತುಹೋಗಿದ್ದ! ಏಳಬೇಕು ಎಂದು ಎನಿಸಿದರೂ ಏಳಲು ಆಗದ ವಿಚಿತ್ರ ತಾಟಸ್ಥ್ಯ ಅವನನ್ನು ಒಳಗೂ ಹೊರಗೂ ಬಾದಿಸುತ್ತಿತ್ತು.

‘ನಮ್ಮ ಮಾವಂದಿರು, ಅಂದ್ರೆ ನಮ್ಮ ಅಮ್ಮನ ಸ್ವಂತ ಅಣ್ಣಂದ್ರು ಕೋಟ್ಯಾಧೀಶರು ಅಂಕಲ್, ಆದರೆ ಅಪ್ಪ ಬದುಕಿರುವಾಗ ಅವರ ಜೊತೆಗಿದ್ದ ಬಾಂಧವ್ಯಾನೂ ಹಾಳು ಮಾಡಿಟ್ಟಿದ್ದ. ಅಪ್ಪ ಸತ್ತಮೇಲೆ ಅವರೇ ಬಂದು ಅಮ್ಮನಿಗೆ ಸಹಾಯ ಮಾಡಲು ಮುಂದಾದರೂ ನಮ್ಮಮ್ಮ ಬಿಲ್‌ಕುಲ್ ಒಪ್ಪಲಿಲ್ಲ; ಇದುವರೆಗೂ ಒಂದು ರುಪಾಯಿಗೂ ಅವರ ಮುಂದೆ ಕೈಒಡ್ಡಿಲ್ಲ. ನಮ್ಮಮ್ಮ ನನಗೋಸ್ಕರ ಪಟ್ಟ ಕಷ್ಟ ನೋಡುದ್ರೆ ನನ್ನ ಕಣ್ಣಲ್ಲಿ ನೀರಲ್ಲ; ರಕ್ತ ಬರುತ್ತೆ ಅಂಕಲ್ ರಕ್ತ ಬರುತ್ತೆ!’ ಎಂದು ಅಳತೊಡಗಿದಳು.

‘ಅಳಬೇಡಾ ಸೀತಾ, ಅಳಬೇಡ,’ ಎಂದು ಚಂಗನೆ ಎದ್ದವನೆ ಲೈಟ್ ಹಾಕಿ ಅವಳಿಗೂ ನೀರು ಕೊಟ್ಟು ತಾನೂ ಗಟಗಟ ಎಂದು ನೀರುಕುಡಿದು ನಿರುಮ್ಮಳನಾದ.

‘ದೇವರು ಒಳ್ಳೆಯವರಿಗೇ ಕಷ್ಟ ಕೊಡೋದು. ಚಿನ್ನ ಎಲ್ಲಿದ್ದರೂ ಬೆಲೆ ಅನ್ನೋ ಹಾಗೆ ಒಳ್ಳೆಯವರಿಗೆ ಎಷ್ಟು ಕಷ್ಟ ಕೊಟ್ರೂ ಅವರು ಒಳ್ಳೆಯವರಾಗೇ ಇರತಾರೋ ಇಲ್ಲಾ ಕೆಟ್ಟವರಾಗಿಬಿಡ್ತಾರೋ ಅಂತ ದೇವರು ಪರೀಕ್ಷೆ ಮಾಡತಿರತಾನೆ. ನಾವು ಸೋಲಬಾರದು ಸೀತಾ.’ ಎಂದು ಸಮಾಧಾನ ಮಾಡಿ ಮಲಗಿಸಿ, ಲೈಟ್ ಆರಿಸಿ ತಾನೂ ಬಂದು ಮಲಗಲು ಯತ್ನಿಸಿದ.

6.8

ಇಷ್ಟು ಹೊತ್ತೂ ಸೀತಾಳ ಬಗ್ಗೆ ಇದ್ದ ಒಂದು ನವಿರಾದ, ಸೌಮ್ಯ ಭಾವನೆಯು ಅವಳು ಹೇಳಿದ ಅವಳದೇ ಕಥೆಯಿಂದ ಈಗ ಭಯಾನಕ ಬೀಬತ್ಸತೆಗೆ ತಿರುಗಿತ್ತು! ಇಷ್ಟು ಮುಗ್ಧ ಹುಡುಗಿಯ ಒಳಗೆ ಒಬ್ಬ ಮನುಷ್ಯನನ್ನು ಕೊಲ್ಲಬಹುದಾದ ಪಾಶವೀ ಶಕ್ತಿಯೊಂದು ಮನೆ ಮಾಡಿತ್ತಲ್ಲ ಎಂದೇ ಅವನಿಗೆ ಆಶ್ಚರ್‍ಯವಾಗುತ್ತಿತ್ತು. ಆಚೆ ತಿರುಗಿ ಮಲಗಿದ; ಈಚೆ ತಿರುಗಿ ಮಲಗಿದ; ಹೇಗೆ ಮಲಗಿದರೂ ಅವನ ಕಣ್ಣಿಗೆ ನಿದ್ದೆಯೇ ಹತ್ತುತ್ತಿಲ್ಲ. ಕಡೆಗೆ ಕುಲದೇವರನ್ನು ಮನಸಿನಲ್ಲಿಯೇ ನೆನಸಿಕೊಂಡು ನಿದ್ದೆ ಹೋದ.

ಒಂದು ಹೊತ್ತಿನಲ್ಲಿ ಸೀತಾಳ ಕಿಲಕಿಲ ನಗು ಕೇಳಿ ಎಚ್ಚರಾಗುತ್ತದೆ ಅವನಿಗೆ; ನೋಡಿದರೆ ಸೀತಾ ಅವನಿಗೆ ಕಚಗುಳಿ ಇಡುತ್ತ ನಗುತ್ತಿದ್ದಾಳೆ; ಈಚೆ ಬದಿ ತಿರುಗಿದರೆ ಮತ್ತೊಂದು ಹೆಂಗಸು ದಿಂಬನ್ನ ತೆಗೆದುಕೊಂಡು ಸುಮ್ಮಸುಮ್ಮನೆ ಅವನಿಗೆ ಹೊಡೆಯುವಂತೆ ಮಾಡುತ್ತ ಅವಳೂ ನಗುತ್ತಿದ್ದಾಳೆ. ಆ ಹೆಂಗಸನ್ನು ಅವನು ಹಿಂದೆಂದೂ ನೋಡಿದ ನೆನಪಿಲ್ಲ; ಕಡೆಗೆ ಅವಳ ಮಗ್ಗುಲಲ್ಲೇ ಇದ್ದ ಹೂವಿನ ಬುಟ್ಟಿಯನ್ನು ನೋಡಿ ಓಹೋ ಇವಳೇ ಸೀತಾಳ ತಾಯಿ ಕಮಲಮ್ಮ ಎಂದು ಅವನಿಗೆ ತಿಳಿಯುತ್ತದೆ. ಇದ್ಯಾಕೆ ಇಬ್ಬರೂ ಹೀಗೆ ತನ್ನೊಂದಿಗೆ ಮಾಡುತ್ತಿದ್ದಾರೆ ಎಂದು ಯೋಚಿಸುತ್ತಿದ್ದಂತೆ ಸೀತಾಳ ತಾಯಿ ಆ ದಿಂಬನ್ನು ಅವನ ಮುಖಕ್ಕೆ ಹಾಕಿದವಳೇ ಅವನ ಎದೆಯ ಮೇಲೆ ಕುಳಿತು ಗಟ್ಟಿಯಾಗಿ ಅಮುಕತೊಡಗುತ್ತಾಳೆ. ಸೀತಾ ಕಚಗುಳಿ ಇಡುತ್ತಿದ್ದವಳು ಈಗ ಅವನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ನಗುತ್ತಿದ್ದಾಳೆ! ದಿಂಬನ್ನು ಅಮುಕುತ್ತಿದ್ದ ಸೀತಾಳ ತಾಯಿಯೂ ಈಗ ನಗುತ್ತಿದ್ದಾಳೆ; ಈಚೆ ಸೀತಾಳೂ ನಗುತ್ತಿದ್ದಾಳೆ! ಅವನಿಗೂ, ಒಂದು ಕಡೆ ನಗು ಬರುತ್ತಿದೆ; ಮತ್ತೊಂದು ಕಡೆ ಉಸಿರು ಕಟ್ಟಿ ಪ್ರಾಣ ಪಕ್ಷಿ ಹಾರಿಹೋಗುತ್ತಿದೆ! ಹೀಗೆ ಒಂದೆರಡು ನಿಮಿಷ ನಡೆದು ಅವನು ಸತ್ತುಹೋದನು ಎಂದು ಖಾತ್ರಿ ಮಾಡಿಕೊಂಡ ಬಳಿಕ ಒಮ್ಮೆ ದೀರ್ಘ ಉಸಿರು ತೆಗೆದುಕೊಂಡು ಇಬ್ಬರೂ ತಮ್ಮ ತಮ್ಮ ಮುಡಿಯನ್ನು ಸರಿಯಾಗಿ ಮತ್ತೊಮ್ಮೆ ಬಿಗಿದು ಕಟ್ಟಿಕೊಂಡು ನಿಧಾನವಾಗಿ ಅವನಿಗೆ ಮತ್ತೆ ಮೊದಲಿನಂತೆ ಕಚಗುಳಿ ಇಡಲು ಶುರುಮಾಡುತ್ತಾರೆ! ಕಚಗುಳಿ ಇಡುತ್ತಿದ್ದಂತೆ ನಿಶ್ಚಲನಾಗಿದ್ದವನು ಕಿಸಿಕಿಸಿ ನಗುತ್ತ ಒಮ್ಮೆಲೆ ಎಚ್ಚರಾಗುತ್ತಾನೆ! ಮತ್ತೆ ಅದೇ ಪುನರಾವರ್ತನೆ! ಹೀಗೆ ಎರಡು ಮೂರು ಬಾರಿ ಆದ ನಂತರ ಒಮ್ಮೆ ದಿಡೀರನೆ ಎಚ್ಚರಾಗುತ್ತಾನೆ.

ಎದ್ದವನಿಗೆ ಆಚೆ ಬದಿಯಲ್ಲಿ ಮಲಗಿರುವ ಸೀತಾ ಯಾವುದೋ ಲೋಕದ ರಾಕ್ಷಸಿಯಂತೆ ಕಾಣತೊಡಗಿದಳು; ಬೀದಿದೀಪದ ಬೆಳಕು ರೂಮಿನ ಮೇಲಿನ ಸಣ್ಣ ಕಿಟಕಿಯಿಂದ ಬಂದು ಅವಳ ಮೇಲೆ ಬಿದ್ದು, ನಿದ್ದೆಯಲ್ಲಿ ಅವಳ ನಿಮೀಲಿತ ನೇತ್ರಗಳು ಅವನಿಗೆ ಕರಾಳವಾಗಿ ಕಾಣತೊಡಗಿದವು. ತಕ್ಷಣ ಟೇಪ್‌ರೆಕಾರ್ಡರ್ ತೆಗೆದುಕೊಂಡು ಸಣ್ಣದಾಗಿ ರಾಜಕುಮಾರರ ‘ಎತ್ತಲೋ ಮಾಯವಾದ’ ಹಾಡನ್ನು ಹಾಕಿಕೊಂಡು ಮಲಗಲು ಯತ್ನಿಸಿ ಯತ್ನಿಸಿ ಆ ಯತ್ನದಲ್ಲೇ ನಿದ್ದೆಹೋದನು.

6.9

ಬೆಳಿಗ್ಗೆ ಎಚ್ಚರಾಗುವ ಹೊತ್ತಿಗೆ ಕಾಫಿಯ ಗಮಗಮ ಅವನ ಮೂಗಿಗೆ ಬಡಿಯುತ್ತಿದೆ. ಕಣ್ಣುಬಿಟ್ಟು ನೋಡಿದರೆ ಸೀತಾ ಆಗಲೆ ಎದ್ದು ರೆಡಿಯಾಗಿ ಹೊರಗೆ ಹೋಗಿ ಹಾಲು ತಂದು ಕಾಫಿ ಮಾಡುತ್ತಿದ್ದಾಳೆ! ತನ್ನೆಲ್ಲ ಗುಟ್ಟುಗಳನ್ನು ಹೇಳಿಕೊಂಡು ಹಗುರಾದವಳಂತೆ ಕಂಡ ಸೀತಾ ‘ಗುಡ್‌ಮಾರ್ನಿಂಗ್ ಅಂಕಲ್, ತೊಗೊಳ್ಳಿ ಬಿಸಿ ಬಿಸಿ ಕಾಫಿ ಎಂದು ಅವನ ಚಾಪೆಗೇ ಕಾಫಿ ತಂದು ಕೊಟ್ಟಳು. ಕಾಫಿಯ ಪರಿಮಳದ ಜೊತೆಗೆ ಆಗಷ್ಟೆ ಸ್ನಾನ ಮಾಡಿದ್ದ ಸೀತಾಳ ಮೈಯಿಂದ ಲೈಫ್‌ಬಾಯ್ ಸೋಪಿನ ಪರಿಮಳವೂ ಸೇರಿಕೊಂಡು ಅವನಿಗೆ ಒಂದು ನಮೂನಿಯ ಆಹ್ಲಾದವನ್ನು ಆ ಕ್ಷಣ ನೀಡಿತು. ರಾತ್ರಿ ಕಂಡ ಕನಸಿನ ಕಾಲುಭಾಗವೂ ಅವನಿಗೆ ನೆನಪಿರಲಿಲ್ಲ; ಟೇಪ್‌ರೆಕಾರ್ಡರು ಮಾತ್ರ ತನ್ನ ಮಗ್ಗುಲಲ್ಲಿ ಇದ್ದದ್ದು ಕಂಡು ತಾನೇ ಆಶ್ಚರ್‍ಯ ಪಡುತ್ತ ಕಾಫಿ ಹೀರುತ್ತಿದ್ದ.

ಆಚಾರಿ ಅಂಗಡಿಯ ಬಾಗಿಲು ತೆರೆಯುವುದಕ್ಕೂ ಇಬ್ಬರೂ ಅಲ್ಲಿಗೆ ಹೋಗುವುದಕ್ಕೂ ಸರಿಹೋಯಿತು. ಅವರನ್ನು ಅಲ್ಲೇ ಕೂರಿಸಿ ಒರಿಜಿನಲ್ ಓಲೆಯನ್ನು ಪಡೆದುಕೊಂಡು ಒಂದರ್ಧ ಗಂಟೆ ಕಾಲ ಮತ್ತೊಮ್ಮೆ ಅದನ್ನು ತಿಕ್ಕಿ, ಉಜ್ಜಿ ಮಾಡಿ ಕಡೆಗೂ ನಕಲಿ ಓಲೆಯನ್ನು ಕೈಗಿತ್ತ. ಆ ಎರಡು ಓಲೆಗಳಲ್ಲಿ ಯಾವುದು ನಕಲಿ ಯಾವುದು ಅಸಲಿ ಹೇಳಲು ಬಾರದಷ್ಟು ಒಂದೇ ಆಗಿದ್ದವು. ಅದರ ಬಾಕಿ ಹಣ ಕೊಟ್ಟು ಅಲ್ಲಿಂದ ಇಬ್ಬರೂ ಹೊರಟರು. ಸಮಯ ಆಗಲೆ ಹನ್ನೆರಡು ಗಂಟೆಯಾಗಿತ್ತು. ಮುತ್ತಣ್ಣನಿಗೆ ಎರಡು ಗಂಟೆಯ ಪಾಳಿ ಇದ್ದದ್ದರಿಂದ ‘ಜೋಪಾನವಾಗಿ ಹೋಗು, ಒಳ್ಳೆಯದಾಗಲಿ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿ ನಿಮ್ಮ ಅಮ್ಮನ್ನ ಚನ್ನಾಗಿ ನೋಡಕೋ’ ಎಂದು ಅವಳನ್ನು ಮೆಜೆಸ್ಟಿಕ್ ಬಸ್ ಹತ್ತಿಸಿದ. ಬಸ್ಸಿನಲ್ಲಿ ಕುಳಿತ ಸೀತಾ ‘ಅಂಕಲ್ ನೀವ್ಯಾರೋ ಏನೋ, ಒಳ್ಳೆ ಆಪದ್ಭಾಂದವರ ಥರ ನಂಗೆ ಸಿಕ್ರಿ, ಥ್ಯಾಂಕ್ಯು ಅಂಕಲ್.’ ಎಂದಳು. ಅದಕ್ಕೆ ಮುತ್ತಣ್ಣ ‘ಆಯ್ತು ಆಂಟಿ ಇರಲಿ ಬಿಡಿ; ಈಗ ಆರಾಮಾಗಿ ಹೋಗಿ...’ ಎಂದನು, ಅದಕ್ಕೆ ಅವಳು ‘ಆಂಟಿ ಅನಬೇಡಿ ನೀವು’ ಎಂದಳು; ‘ಮತ್ತೆ ನೀನು ಅಂಕಲ್ ಅಂತೀಯಲ್ಲಾ ನನ್ನಾ’ ಎಂದಿದ್ದಕ್ಕೆ ಒಳಗೊಳಗೆ ನಾಚಿದಳು. ಅಷ್ಟರಲ್ಲಿ ಬಸ್ಸು ಹೊರಟುನಿಂತಿತು. ಬಸ್ಸು ಮರೆಯಾಗುವವರೆಗೂ ಅವಳು ಕಿಟಕಿಯಿಂದ ತಲೆ ಹೊರಹಾಕಿ, ಇವನು ಕುತ್ತಿಗೆ ನಿಮಿರಿಸಿ ನಿಮಿರಿಸಿ ಒಬ್ಬರನ್ನೊಬ್ಬರು ನೋಡೇ ನೋಡಿದರು; ನೋಡೇ ನೋಡಿದರು.

7.

‘ಅಂದು ಅವಳನ್ನ ನಾನು ಆಂಟಿ ಅಂದು, ಅವಳು ನನ್ನನ್ನು ಅಂಕಲ್ ಎಂದು ಶುರುವಾದದ್ದು ಅದರ ನೆನಪನ್ನು ಹಸಿಯಾಗಿಟ್ಟುಕೊಳ್ಳಲು ಪ್ರಯಾಣಿಕರಿಗೆ ಅಂಕಲ್ ಆಂಟಿ ಎಂದು ಸಂಬೋಧಿಸತೊಡಗಿದೆ ಮೇಡಮ್. ಅದು ಆಶ್ಚರ್‍ಯಕರ ರೀತಿಯಲ್ಲಿ ಪ್ರಯಾಣಿಕರ ಪ್ರೀತಿಯನ್ನು ಗಳಿಸಲು ಅವರ ಮುಖದಲ್ಲಿ ಮಂದಹಾಸವನ್ನು ಮೂಡಿಸಲು ನೆರವಾಯಿತು. ಹಾಗಾಗಿ ಅದನ್ನು ಹಾಗೇ ಮುಂದುವರೆಸಿಕೊಂಡು ಬಂದೆ ಅಷ್ಟೆ. ಆವತ್ತು ಹಾಕಿಕೊಂಡಿದ್ದ ಬಟ್ಟೆಯನ್ನೇ ನನ್ನ ವ್ಯಕ್ತಿತ್ವದ ಗುರುತನ್ನಾಗಿ ಮಾಡಿಕೊಂಡೆ. ಮೇಡಮ್ ನಾನು ಹಿಂಗ್ ಅಂತೀನಿ ಅಂತ ನೀವು ಬೇಜಾರ್ ಮಾಡ್ಕೋಬಾರದು; ನಿಜವಾಗ್ಲೂ ನಾನು ನಿಮ್ಮ ಕಾರ‍್ಯಕ್ರಮಕ್ಕೆ ಬರೋಕೆ ಒಪ್ಕೊಂಡಿದ್ದು ನಿಮ್ಮ ಹೆಸರಲ್ಲೂ ಸೀತಾ ಅಂತ ಇದ್ದಿದ್ದರಿಂದಲೇ ಮೇಡಮ್!’

‘ಆಹಾ! ಮುತ್ತಣ್ಣೋರೇ ಏನು ಕತೆ ನಿಮ್ದು! ಯಾರಾದ್ರೂ ಸಿನಿಮಾ ಡೈರೆಕ್ಟ್ರರ್ ನಮ್ ಕರ‍್ಯಕ್ರಮ ನೋಡ್ತಾ ಇದ್ರೆ ಖಂಡಿತಾ ನಿಮ್ಮ ಕತೆನಾ ಸಿನಿಮಾ ಮಾಡಿಬಿಡತಾರೆ ನೋಡ್ತಾ ಇರಿ!’

‘ನಮ್ಮಂತೋರ ಹತ್ರ ಇರೋದೇ ಬರೀ ಕತೆಗಳಲ್ವಾ ಮೇಡಮ್.’

‘ಸಿನಿಮಾ ಎಲ್ಲ ನೋಡತೀರಾ ಮುತ್ತಣ್ಣ ನೀವು? ಯಾರು ನಿಮ್ಮ ಫೇವರೇಟ್ ಹೀರೋ?’

‘ಹೆಚ್ಚಾಗಿ ನೋಡಲ್ಲ ಮೇಡಮ್. ಆದ್ರೆ ರಾಜಕುಮಾರ್ ಅವರ ಅಷ್ಟೂ ಸಿನಿಮಾಗಳನ್ನೂ ನೋಡಿದೀನಿ. ಅವರ ದೊಡ್ಡ ಅಭಿಮಾನಿ ಮೇಡಮ್ ನಾನು.’

‘ಹಾಗಾದ್ರೆ ಅವರ ಸಿನಿಮಾದ ಯಾವುದಾದ್ರೂ ಡೈಲಾಗ್ ಹೇಳಿ ಮುತ್ತಣ್ಣ; ನಿಮಗೆ ಇಷ್ಟವಾದದ್ದು?’

‘ಡೈಲಾಗ್ ಎಲ್ಲ ಬರಲ್ಲ ಮೇಡಮ್, ಬೇಕಿದ್ರೆ ಹಾಡು ಬೇಕಾದ್ರೆ ಹಾಡ್ತೀನಿ,’ ಎಂದು- ‘ಎತ್ತಲೋ ಮಾಯವಾದ ಮುತ್ತಿನ ಮೂಗುತಿ; ನೀನು ಎತ್ತಿ ತಂದೆ ಎಲ್ಲಿಂದ ರಾಯ? ಮುತ್ತೆತ್ತರಾಯ’ ಇಡೀ ಹಾಡನ್ನು ಭಾವಪೂರ್ಣವಾಗಿ ಹಾಡಿದನು ಮುತ್ತಣ್ಣ.

‘ಆಹಾ ಎಷ್ಟು ಚನ್ನಾಗಿ ಹಾಡಿದ್ರಿ ಮುತ್ತಣ್ಣ. ಯಾಕೆ ನಿಮಗೆ ಈ ಹಾಡೇ ಇಷ್ಟ?’

‘ಈ ಹಾಡು ನಮ್ಮ ಮನೆದೇವರು ಮುತ್ತತ್ತಿಯ ಹನುಮಂತನನ್ನು ಕುರಿತಾಗಿ ಹಾಡಿದ ಹಾಡು ಮೇಡಮ್. ರಾಜ್‌ಕುಮಾರ್ ಅವರು ಹುಟ್ಟಿದ್ದು ಇದೇ ಮುತ್ತೆತ್ತರಾಯರ ಆಶೀರ್ವಾದದಿಂದ ಅಂತೆ. ನಮ್ಮವ್ವನೂ ಹರಕೆ ಹೊತ್ತಿದ್ಲಂತೆ ಹೆಣ್ಣುಮಗು ಆಗಲಿ ಅಂತ; ಆದ್ರೆ ನಾನು ಹುಟ್ಟಿಬಿಟ್ನಂತೆ ಮೇಡಮ್!’ ಎಂದು ನಗಾಡತೊಡಗಿದನು.

‘ನಮ್ಮೂರಲ್ಲಿ ಕಾವೇರಿ ನದಿ ಹರಿತೈತೆ ಮೇಡಮ್, ತ್ರೇತಾಯುಗದಲ್ಲಿ ಸೀತಮ್ಮನೋರು ವನವಾಸದಲ್ಲಿ ಇರುವಾಗ ಅದೇ ಕಾವೇರಿ ನದಿಯಲ್ಲಿ ಸ್ನಾನ ಮಾಡ್ತ ಇದ್ಳಂತೆ. ಆವಾಗ ಅವಳ ಮುತ್ತಿನ ಮೂಗುತಿ ನೀರಲ್ಲಿ ಬಿದ್ದೋಯ್ತಂತೆ. ಎಷ್ಟು ಹುಡುಕುದ್ರು ಸಿಗಲಿಲ್ವಂತೆ. ಆವಾಗ ಹನುಮಂತ ಬಂದು ನದಿ ಒಳಗೆಲ್ಲಾ ಜಾಲಾಡಿ ಸೀತಮ್ಮನ ಮೂಗುತಿನ ತಕ್ಕೊಟ್ನಂತೆ. ಅದಕ್ಕೆ ಅವನನ್ನು ಮುತ್ತೆತ್ತರಾಯ ಅಂತ ಕರಿಯೋದು ಮೇಡಮ್. ಅವನಿಂದಾನೇ ನಮ್ಮೂರಿಗೆ ಮುತ್ತತ್ತಿ ಅಂತ ಹೆಸರು. ಮೇಡಮ್ ನಿಮಗೆ ಇನ್ನೊಂದು ವಿಷಯ ಗೊತ್ತಾ?’-

‘ನನ್ನ ನಿಜವಾದ ಹೆಸರೂ ಕೂಡ ಮುತ್ತೆತ್ತರಾಯ ಅಂತ! ಆದರೆ ಶಾಲೆಗೆ ಹೆಸರು ಹಚ್ಚುವಾಗ ಆಗಲೇ ಅಲ್ಲಿ ಆರು ಮಂದಿ ಮುತ್ತೆತ್ತರಾಯ, ನಾಕು ಮಂದಿ ಹನುಮಂತರಾಯ ಅನ್ನೋ ಹೆಸರಿನ ಹುಡುಗರಿದ್ದರಂತೆ. ಅದಕ್ಕೆ ಅಲ್ಲಿನ ಟೀಚರ‍್ರೊಬ್ಬರು ನನ್ನ ತಂದೆಗೆ ಬೇರೆ ಯಾವುದಾದರೂ ಹೆಸರನ್ನು ಇಡಕೆ ಹೇಳದ್ರಂತೆ. ಅದಕ್ಕೆ ನಮ್ಮಪ್ಪ ‘ಅದೇನೋ ನೀವೆ ಒಂದು ಬರಕೊಂಡುಬಿಡಿ ಟೀಚರ್, ಆದರೆ ನಮ್ಮ ಕುಲದೇವರಾದ ಹನುಮಂತನ್ನ ನೆನಸೋ ಹಂಗಿರಬೇಕು ಅಷ್ಟೆ ಅಂದರಂತೆ. ಅದಕ್ಕೆ ಬಹಳ ಯೋಚನೆ ಮಾಡಿದ ಆ ಟೀಚರ‍್ರು ‘ಮುತ್ತು’ ಅಂತ ಬರಕೋತಿನಿ ನೋಡಿ. ‘ಮುತ್ತೆತ್ತರಾಯ ಅಂತ ಅಷ್ಟುದ್ದದ ಬದಲು ‘ಮುತ್ತು’ ಅಂತ ಇರಲಿ; ನಿಮ್ಮ ಕುಲದೇವರನ್ನೂ ನೆನಸಿದಹಾಗೆ ಆಗುತ್ತೆ ಏನಂತೀರಾ?’ ಅಂತ ಕೇಳಿದ್ರಂತೆ. ಅದಕ್ಕೆ ನಮ್ಮಪ್ಪನೂ ಹೂ ಅಂದು ಈ ಹೆಸರು ಇಟ್ಟಿದ್ದಂತೆ. ‘ಮುತ್ತು’ ಇದ್ದದ್ದು ಶಾಲೇಲಿ, ಊರಜನರ ಬಾಯಲ್ಲಿ ‘ಮುತ್ತಣ್ಣ’ ಅಂತಾಯ್ತು; ಇಲ್ಲಿ ಬಸ್ಸಲ್ಲಿ ಕೆಲಸ ಮಾಡ್ತಾ ಮಾಡ್ತಾ ‘ಅಂಕಲ್ ಮುತ್ತಣ್ಣ’ ಅಂತಾಯ್ತು ಮೇಡಮ್!’

‘ಏನ್ರಿ ಇದು ಮುತ್ತಣ್ಣ ನಿಮ್ಮ ಕಥೆ? ಆಹಾ! ಕೇಳತಾ ಇದ್ರೆ ಕೇಳತಾನೆ ಇರಬೇಕು ಅನಸುತ್ತೆ, ಸರಿ ಮುಂದೆ ನಿಮ್ಮ ಸೀತಾ ಕತೆ ಏನಾಯ್ತು?’

‘ಅಂಥದ್ದೇನೂ ಆಗಲಿಲ್ಲ ಮೇಡಮ್. ನಾನು ಆಗ ರಬ್ಬರ್‌ನಿಂದ ತಯಾರಿಸಿದ ಬಾಟ ಕಂಪನಿಯ ಬಕ್ಕಲ್ ಚಪ್ಪಲಿಗಳನ್ನು ಹಾಕಿಕೊಳ್ತಿದ್ದೆ. ಸೀತಾಳಿಗೆ ಆಚಾರಿಯ ಅಂಗಡಿಯಲ್ಲಿ ನಕಲಿ ಓಲೆಯನ್ನು ಮಾಡಿಸಿ ಕೊಟ್ಟು ಕಳಿಸಿದ ಎರಡೇ ದಿನಕ್ಕೆ ಅವಳ ಕಳೆದುಹೋಗಿದ್ದ ಅಸಲೀ ಓಲೆ ಆಶ್ಚರ್‍ಯಕರ ರೀತಿಯಲ್ಲಿ ನನಗೆ ಮತ್ತೆ ಸಿಕ್ಕಿತು ಮೇಡಮ್. ಊರೆಲ್ಲ ಹುಡುಕುತ್ತಿದ್ದ ಆ ಓಲೆ ನನ್ನ ರಬ್ಬರಿನ ಬಕ್ಕಲ್ ಚಪ್ಪಲಿಯ ತಳಕ್ಕೆ ಗಟ್ಟಿಯಾಗಿ ಕಚ್ಚಿಕೊಂಡಿತ್ತು!’

‘ಹೌದಾ?!!! ಹಾಗಾದ್ರೆ ಆ ಓಲೆಯನ್ನು ಸೀತಾಳಿಗೆ ವಾಪಸ್ ಕೊಟ್ರಾ ಮುತ್ತಣ್ಣ?’

‘ಇಲ್ಲ ಮೇಡಮ್, ಸುಮಾರು ಪ್ರಯತ್ನ ಮಾಡಿದೆ- ಕೆಲವು ತಿಂಗಳು ಸುಂಕದಕಟ್ಟೆ ರೂಟಿಗೆ ಹಾಕಿಸಿಕೊಂಡು ಕೆಲಸ ಮಾಡಿದೆ, ಯಾವುದಾದರೂ ಟ್ರಿಪ್ಪಿನಲ್ಲಿ ಸೀತಾ ಸಿಗಬಹುದಾ ಅಂತ! ಅವಳು ಫೋನ್ ಮಾಡಿದ್ದ ಎಸ್‌ಟಿಡಿ ಬೂತ್‌ಗೂ ಹೋಗಿ ಆ ನಂಬರ್‌ಗಳನ್ನೂ ಪ್ರಯತ್ನಿಸಿದೆ; ವಿಚಿತ್ರ ಅಂದ್ರೆ ಅವಳು ಅಂದು ಫೋನ್ ಮಾಡಿ ಮಾತನಾಡಿದ ಯಾವ ನಂಬರ‍್ರೂ ಸುಂಕದಕಟ್ಟೆಯ ವಿಳಾಸದ ನಂಬರುಗಳಾಗಿರಲಿಲ್ಲ! ಸುಮಾರು ಇಪ್ಪತ್ತು ವರ್ಷ ಆಯಿತು ಮೇಡಮ್. ಇಲ್ಲಿ ನೋಡಿ, ಆವತ್ತಿನಿಂದ ಈವತ್ತಿನವರೆಗೂ ಆ ಓಲೆ ನನ್ನ ಜೋಬಿನಲ್ಲೇ ಇದೆ.’

ಎಂದು ತನ್ನ ಜೇಬಿನೊಳಗಿಂದ ಜೋಪಾನವಾಗಿ ಇಟ್ಟುಕೊಂಡಿದ್ದ ಓಲೆ ಡಬ್ಬಿಯನ್ನು ತೆರೆದು ಓಲೆಯನ್ನು ತೋರಿಸಿದ!

‘ಎಂದಾದರೂ, ಯಾವುದಾದರೂ ಟ್ರಿಪ್ಪಿನಲ್ಲಿ ಸೀತಾ ಖಂಡಿತಾ ಸಿಕ್ತಾಳೆ ಅಂತ ನಂಗೆ ನಂಬಿಕೆ ಇದೆ ಮೇಡಮ್; ಆಗ ಅವಳ ಓಲೆ ಅವಳಿಗೆ ಕೊಟ್ಟುಬಿಟ್ರೆ ಅಷ್ಟೆ ಸಾಕು. ಭೂಮಿ ಗುಂಡಗಿದೆ; ಅವಳು ಸಿಕ್ಕೇ ಸಿಗತಾಳೆ ಏನಂತೀರಾ ಮೇಡಮ್?’ ಎಂದು ಮಂಜಾದ ಕಣ್ಣುಗಳನ್ನು ಹೊಳೆಯಿಸುತ್ತಾ ಕೇಳಿದ ಮುತ್ತಣ್ಣ.

ಮುತ್ತಣ್ಣನನ್ನ ಸಂದರ್ಶನ ಮಾಡುತ್ತಿದ್ದ ನಿರೂಪಕಿ ಸೀತಾ ಸಾಹುಕಾರ್‌ಳ ಕಣ್ಣೂ ಒದ್ದೆಯಾಗಿ ಕಾರ‍್ಯಕ್ರಮದ ನಿರ್ದೇಶಕ ಬಂದು ಅವಳನ್ನು ಸಮಾಧಾನ ಮಾಡಲು ಯತ್ನಿಸತೊಡಗಿದ.

8

ಟೀವಿಯಲ್ಲಿ ಮುತ್ತಣ್ಣನ ಕತೆ ಕೇಳಿದ ಎಲ್ಲರಿಗೂ, ಅದುವರೆಗೂ, ಒಬ್ಬ ಮುಸಲ್ಮಾನ ಡ್ರೈವರನ ಸಮೇತ, ಅಪಘಾತವಾಗುತ್ತಿದ್ದ ಬಸ್ಸಿನಲ್ಲಿದ್ದ ಐವತ್ತು ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ ‘ಸಾಹಸಿ ಕಂಡಕ್ಟರ್’ ಆಗಿದ್ದವನು ಈ ಕಾರ‍್ಯಕ್ರಮದ ಬಳಿಕ ಒಬ್ಬ ಅಮರ ಪ್ರೇಮಿಯಾಗಿ ಎಲ್ಲ ಪ್ರೇಮಿಗಳ ಮನಸ್ಸಿನಲ್ಲೂ ಶಾಶ್ವತವಾದ ಗೌರವಯುತವಾದ ಸ್ಥಾನವನ್ನು ಪಡೆದನು ಮುತ್ತಣ್ಣ. ಈ ಕಾರ‍್ಯಕ್ರಮದ ವಿಡಿಯೋ ತುಂಡುತುಂಡಾಗಿ ಎಲ್ಲಾ ಮಾಧ್ಯಮಗಳಲ್ಲೂ ವೈರಲ್ ಆಗಿ ಮುತ್ತಣ್ಣನಿಗೆ ಆ ವರ್ಷದ ರಾಷ್ಟ್ರಪತಿಗಳ ಕೈಯಿಂದ ನೀಡುವ ಶೌರ‍್ಯಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇಲಾಖೆಯಲ್ಲಿ ಹಾಗೂ ಹಲವುಕಡೆ ಅವನಿಗೆ ಸನ್ಮಾನಗಳನ್ನು ಮಾಡಿದರು. ಅವನ ಕೆಲಸದಲ್ಲಿ ಬಡ್ತಿ ಸಹ ನೀಡಲಾಯಿತು. ಫೆಬ್ರವರಿ 14ರ ಪ್ರೇಮಿಗಳ ದಿನದಂದು ಎಲ್ಲೆಲ್ಲೂ ಸ್ಮರಿಸುವ ಅಜರಾಮರ ಪ್ರೇಮಿಗಳ ಜೊತೆಗೆ ಮುತ್ತಣ್ಣ ಹಾಗೂ ಸೀತಾಳ ಹೆಸರನ್ನೂ ಹೆಮ್ಮೆಯಿಂದ ಸೇರಿಸಿದರು. ಆದರೆ ಮುತ್ತಣ್ಣ ಮಾತ್ರ,

‘ಹದಿನೆಂಟಿಪ್ಪತ್ತು ವರ್ಷ ಆಯ್ತು ನಾನು ಸೀತಾಳನ್ನು ನೋಡಿ. ಈಗ ಹೇಗಿದ್ದಾಳೋ? ಎಲ್ಲಿದ್ದಾಳೋ? ಅವಳ ಒಂದೇ ಒಂದು ಸಣ್ಣ ಸುಳಿವೂ ಇಲ್ಲ. ಎಷ್ಟೋ ಬಾರಿ ನನಗನ್ನಿಸುತ್ತೆ, ತ್ರೇತಾಯುಗದ ಸೀತಮ್ಮನೋರೇ ಈ ಮಹಾನಗರವೆಂಬ ಪ್ರವಾಹದಲ್ಲಿ ಬಂದು ತನ್ನ ಓಲೆಯನ್ನು ಕಳೆದುಕೊಂಡು ನನಗೆ ಹುಡುಕಿಕೊಡಲು ಹಚ್ಚಿ ಹೋದರೇನೋ... ಅಂತ! ಹಾಗಾಗಿ ನನ್ನ ಹಾಗೂ ಅವಳ ನಡುವೆ ಇದ್ದದ್ದು ಪ್ರೀತಿಯೋ, ಪ್ರೇಮವೋ, ಸ್ನೇಹವೋ, ದೇವಿ ಹಾಗೂ ಭಕ್ತನ ಭಾವವೋ ಅದ್ಯಾವ ಭಾವ ಎಂದು ಇದುವರೆಗೂ ನನಗೇ ನೋಡಿಕೊಳ್ಳಲು ಸಾಧ್ಯವಾಗಲಿಲ್ಲ; ಅದು ಬರೀ ನನ್ನ ಹಾಗೂ ಸೀತಾಳ ಎದೆಯೊಳಗೆ ಮಾತ್ರ ಇರುವಂಥದ್ದು’

ಎಂದು ಅವಳಿಗೆ ಎಂದಾದರೂ ಒಂದು ದಿನ ಮರಳಿ ಕೊಟ್ಟೇಕೊಡುತ್ತೇನೆಂದು ಜೇಬಲ್ಲಿ ಜೋಪಾನವಾಗಿ ಇಟ್ಟುಕೊಂಡಿದ್ದ ಒಂಟಿ ಓಲೆಯನ್ನು ಆಗಾಗ ಮುಟ್ಟೇಮುಟ್ಟಿಕೊಳ್ಳುತ್ತಿದ್ದ ಮುತ್ತಣ್ಣ.

ಮೌನೇಶ್ ಬಡಿಗೇರ್‌

ರಂಗನಿರ್ದೇಶಕ, ನಟ ಮೌನೇಶ್‌ ಬಡಿಗೇರ್‌ ಕತೆಗಾರ ಕೂಡ. ’ಮಾಯಾ ಕೋಲಾಹಲ’ ಪ್ರಕಟಿತ ಕತೆಗಳ ಸಂಕಲನ. ಸೂಜಿದಾರ’ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಮೌನೇಶ್‌ ಅಭಿನಯ ಕಲಿಕೆಯ ಕಾರ್ಯಾಗಾರ ನಡೆಸುತ್ತಿದ್ದಾರೆ. ʻಮಾಯಾಕೋಲಾಹಲʼ ಸಂಕಲನಕ್ಕೆ 2015ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಟೊಟೊ ಪುರಸ್ಕಾರ', 'ಡಾ. ಯು ಆರ್ ಅನಂತಮೂರ್ತಿ ಪುರಸ್ಕಾರ', `ಬಸವರಾಜ ಕಟ್ಟಿಮನಿ ಪುರಸ್ಕಾರ ಪಡೆದಿದ್ದಾರೆ. 

“ವಿಶಾಂಕೇ ಅರ್ಥಾತ್ ವಿಧ್ವಂಸಕ ಶಾಂತಿ ಕೇಂದ್ರ' ('ರಂಗಭೂಮಿ' ಉಡುಪಿ ನಡೆಸಿದ 'ಡಾ. ಹೆಚ್. ಶಾಂತಾರಾಮ್ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿ) ಹಾಗೂ 'ಟಪಾಲುಮನಿ'(ರವೀಂದ್ರನಾಥ ಠಾಕೂರರ ಡಾಕ್‌ಘರ್‌ ನಾಟಕದ ರೂಪಾಂತರ) ನಾಟಕಗಳು. 

ಇನ್ನು, ನೀನಾಸಮ್ ನಿರ್ಮಿಸಿದ 'ಕನ್ನಡ ಕಾವ್ಯ ಕನ್ನಡಿ'ಯಲ್ಲಿ ಕುವೆಂಪು ಹಾಗೂ ಚಂದ್ರಶೇಖರ ಕಂಬಾರರ ಪದ್ಯಗಳ ದೃಶ್ಯಕಾವ್ಯ ನಿರ್ದೇಶನ, ವಿವೇಕ ಶಾನಭಾಗರ ಕಥೆ ಆಧಾರಿತ 'ನಿರ್ವಾಣ' ಕಿರುಚಿತ್ರ, 'ಸೂಜಿದಾರ' 2019ರಲ್ಲಿ ರಾಜ್ಯಾದ್ಯಂತ ತೆರೆಕಂಡ ಕನ್ನಡ ಚಲನಚಿತ್ರವಾಗಿದೆ.  

 'ಪ್ರೇಮವೆಂಬ ಅವರ್ಗೀಯ ವ್ಯಂಜನʼ ಕೃತಿಯು ಇವರ ಇತ್ತೀಚಿನ ಪ್ರೇಮದ ಕುರಿತಾದ ಗ-ಪದ್ಯಗಳ ಸಂಕಲನವಾಗಿದೆ.  

ಹೀಗೆ ತಮ್ಮ ಬರಹದ ಜೊತೆ ಅಭಿನಯ ಶಿಕ್ಷಕನಾಗಿ ಗುರುತಿಸಿಕೊಂಡಿರುವ ಮೌನೇಶ ಬಡಿಗೇರ ಅವರಿಗೆ ಈ ಕ್ಷೇತ್ರದಲ್ಲಿ ಸುಮಾರು ಹದಿನಾರು ವರ್ಷಗಳಿಗೂ ಮಿಕ್ಕ ಅನುಭವವಿದೆ. 

More About Author