Poem

ಕ್ರಿಸ್ತ ಅತ್ತ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯುವ ಬರಹಗಾರ್ತಿ ಕಾವ್ಯ ಕಡಮೆ ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಸೂಕ್ಷ್ಮ ಮನಸ್ಸಿನ ಕವಯತ್ರಿ ‘ಧ್ಯಾನಕೆ ತಾರೀಖಿನ ಹಂಗಿಲ್ಲ’, ‘ಜೀನ್ಸ್‌ ತೊಟ್ಟ ದೇವರು’ (ಕವನ ಸಂಕಲನ)ಗಳನ್ನು ಹಾಗೂ , ‘ಪುನರಪಿ’ (ಕಾದಂಬರಿ) ರಚಿಸಿದ್ದಾರೆ. ಪ್ರಚಲಿತ ವಿಷಯಗಳಿಗೆ ಕವಿತೆಗಳ ಮೂಲಕ ಸ್ಪಂದಿಸುವ ಯುವ ಬರಹಗಾರ್ತಿಯ ‘ಕ್ರಿಸ್ತ ಅತ್ತ’ ಕವಿತೆ ನಿಮ್ಮ ಓದಿಗಾಗಿ.

ಉಸಿರು ತೆಗೆಯದ ಮೂಳೆ ಚಕ್ಕಳ
ಉಟ್ಟ ನಿಲುವಂಗಿಯೂ ಕಳಚಿ ಗಾಳಿಗೆ
ಸರ್ವಸ್ವ ಪಾತಕ ನರಕ

ಬಲ ಪಕ್ಕೆಯಲಿ ಅವರು ಶೂಲವನು
ಚುಚ್ಚಿ ಇರಿದು ಹೊರ ತೆಗೆದ ಗಾಯ
ಕರುಳಲ್ಲಿ ಬಣಬಣ ಹಸಿವು

ಸ್ವಂತ ಶಿಲುಬೆ ಎತ್ತಿ ನಡೆದರೂ
ಹಸಿ ತೊಗಲಿಗೆ ಮೊಳೆ ಜಡಿದರೂ
ತ್ರಾಣವಿರದ ಅಕ್ಷಿಯಲ್ಲಿ ನೆತ್ತರೇ ಸುರಿದರೂ-

ಲೋಕ ಅಳಬಾರದೆಂದು ಬಯಸುತ್ತದೆ

ಸುತ್ತ ನಿಂತು ತಿವಿಯುವ ಸ್ತೋಮಕ್ಕೂ
ಸದ್ಗತಿ ತೋರೆಂದು ಲೋಕ
ಈ ಹಾಳು ನಾಲಗೆಯಲ್ಲಿ ನುಡಿಸುತ್ತದೆ

ಯಾವ ದೇವರು? ಯಾರವನ ಮಗ?
ಪಕ್ಕೆಯಲಿ ತಿವಿದ ಗಾಯ ನೋಯುತಿದೆ
ರಕ್ತ ನಾಳದಲಿ ಉಸಿರು ಕ್ಷೀಣಿಸಿ
ಈ ಕ್ಷಣದ ಸತ್ಯ ಗೋಚರಿಸಿದೆ

ಹುಬ್ಬಿನಲಿ ಚೈತನ್ಯವಿಲ್ಲ
ಬಾಡಿರದ ದೇಹವೂ ಭಾರವಾಗಿ
ಸೋತಲ್ಲಿ ಮಾಂಸ ಜೀಕುತ್ತಿದೆ

ಇದೊಂದೇ ಬಾರಿ
ನನಗಾಗಿ ಕಣ್ಣೀರು ಹಾಕುವೆನೆಂದರೆ
ನೀವು ಒಪ್ಪುವುದಿಲ್ಲ

ಹಳಬರಿಗೆ ನಿನ್ನೆಯ ಮಿತ್ರ
ಹೊಸಬರಿಗೆ ನಾಳಿನ ಶತ್ರು ಈ ದೇಹ
ದೇವರಾಗುವುದು ಬೇಡಾ ಹೆಸರಾಗಿ ಉಳಿಯುವುದು ಬೇಡಾ
ದೇಗುಲದಲಿ ನನ್ನೀ ಚಿತ್ರವ ವಿಜ್ರಂಭಿಸುವುದು ಬೇಡಾ
ಸಹನೆ ತ್ಯಾಗ ಮತ್ತೇನೇನೋ ಸುಡುಗಾಡು ಮನ್ನಣೆ ಬೇಡಾ

ಸಹಸ್ರ ವರ್ಷ ಸುತ್ತ ನಿಂತು
ಆಟ ನೋಡುವ ಕುಡಿಗಣ್ಣಲ್ಲೇ ಅರಳಿ ನಗುವ
ಸಂತಾಪ ಕಲ್ಪಿತ ಜನಸ್ತೋಮವೇ,

ಈ ಕ್ಷಣ-
ಒಣಗುತ್ತಿರುವ ಗಂಟಲಿಗೆ ಒಂದು ಬಟ್ಟಲು
ತಣ್ಣೀರ ತರುವಿರಾ?

ಕಾವ್ಯಾ ಕಡಮೆ ನಾಗರಕಟ್ಟೆ

ಯುವ ಬರಹಗಾರ್ತಿ ಕಾವ್ಯ ಕಡಮೆ ನಾಗರಕಟ್ಟೆ ಅಮೆರಿಕದಲ್ಲಿ ನೆಲೆಸಿದ್ದಾರೆ.  ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಹಾಗೂ ಅವರ ಜೀನ್ಸ್‌ ತೊಟ್ಟ ದೇವರು ಕವನ ಸಂಕಲನಕ್ಕೆ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ದೊರೆತಿದೆ.

More About Author