Poem

ದಾಂಪತ್ಯ 

ನಾನು ನಿನ್ನೊಡನೆ
ಬೆಳದಿಂಗಳ ಬಿಳುಪಿನ ಬಗೆಗೆ
ಮಾತನಾಡುತ್ತಿದ್ದೆ.
ನೀನು ಸೌರವ್ಯೂಹಗಳ ಕುರಿತು
ಉಪಗ್ರಹಗಳ ಕುರಿತು ಕಲಿಸಿದೆ.

ನಾನು ನಿನಗೆ
ನದಿಯ ನಿರ್ಮಲತೆಯನ್ನು ತೋರಿಸಿದೆ.
ನೀನು ನನಗೆ ನದಿಗಳು ಎದುರಿಸುವ
ಸಮಸ್ಯೆಗಳ ಕುರಿತ
ಪ್ರಬಂಧವನ್ನು ವಾಚಿಸಿ ಕೇಳಿಸಿದೆ.

ನಾನು ನಿನ್ನೊಡನೆ
ಕಡಲ ಉಸುಕಿನ ನೈರ್ಮಲ್ಯದ ಬಗೆಗೆ
ಮಾತನಾಡುತ್ತಿದ್ದೆ
ನೀನು ನನಗೆ ಆಳ ಕಡಲಿನ
ಅಂತರ್ಗತಗಳ
ಕಾಪಟ್ಯಗಳನ್ನು ಮನವರಿಕೆ ಮಾಡಿದೆ.

ಒಂದೇ ಗುರಿಯೆಡೆಗೆ
ವಿರುದ್ಧ ಧ್ರುವಗಳಿಂದ
ನಾವು ಹರಿಯುತ್ತಿದ್ದೆವು.
ನನಗೆ ಒಮ್ಮೆಯಾದರೂ ನಿನ್ನ ಜೊತೆಗೂ
ನಿನಗೆ ಒಮ್ಮೆಯಾದರೂ ನನ್ನ ಜೊತೆಗೂ
ಸೇರಲಾಗದಿದ್ದರೂ...

ಬೇಸಿಗೆಯ ಬೇಗೆಯಲ್ಲಿ ಬಳಲಿ
ಬಸವಳಿದು ನಾನು
ಕೆಲ ಹಳ್ಳಗಳಲ್ಲಿ ಉರುಳಿದ್ದಾಗ
ನಿನ್ನ ಚೈತನ್ಯ ನನಗಿತ್ತು ಕಾಪಾಡಿದೆ
ಭೀಕರ ಬಿರುಮಳೆಯಲ್ಲಿ ನೀನು
ಗುರಿತಪ್ಪಿ ದಿಕ್ಕರಿಯದಾದಾಗ
ನಿನಗಾಗಿ ನಾನು ಸರಿದಾರಿ ಅಣಿಮಾಡಿದೆ

ಪರಸ್ಪರ ಜೊತೆಗೂಡುತ್ತ
ದಾಂಪತ್ಯ ಮಹನೌಕೆ
ಯೌವನದ ಗೃಹಸ್ಥಾಶ್ರಮದಿಂದ
ವಾರ್ಧಕ್ಯದ ವಾನಪ್ರಸ್ಥದೆಡೆಗೆ...

- ಮಂಜುಳಾ ಹಿರೇಮಠ

ಮಂಜುಳಾ ಹಿರೇಮಠ

ಲೇಖಕಿ ಮಂಜುಳಾ ಹಿರೇಮಠ ಮೂಲತಃ ದಾವಣಗೆರೆಯವರು. ಎಂಎಸ್ಸಿ, ಬಿಇಡಿ, ಪದವೀಧರೆ. ನಾಗನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕಿ.  `ಗಾಯಗೊಂಡವರಿಗೆ'- ಇವರ ಮೊದಲ ಕವಿತಾ ಸಂಕಲನ. ಈ ಕೃತಿಗೆ 2019ನೇ ಸಾಲಿನ ಮುಂಬೈನ ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲ ಸೀತಾರಾಮಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ ಲಭಿಸಿದೆ. ಇವರ ಕವಿತೆ, ಪ್ರಬಂಧ ಮತ್ತು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

More About Author