Poem

ದೇವ -  ದಾನವ

ಒಳಿತಿಗೊಂದು ಕೆಡುಕು ಜಂಟಿ
ಪ್ರಕೃತಿಯ ನಿಯಮವಿದಲ್ಲ
ಅಲ್ಲಿರುವುದು ಹೊಸ ಸೃಷ್ಟಿ
ಬದಲಾಯಿಸಿದ್ದು ಮಾನವ ದೃಷ್ಟಿ

ಸಿಂಹದಂತೆ ಮೊಲವೂ
ಹುಲಿಯಂತೆ ಹರಿಣವೂ
ಆನೆಯಂತೆ ತೋಳವೂ
ನೀರು, ನೆರಳಿನಂತೆ ಸಹಜ
ಭಿನ್ನ ಭಿನ್ನ

ರಾಮನೆದುರು ರಾವಣ
ಮಾಡಿದಾಗ ಕದನ
ಸೋತಿದ್ದು ಕೆಡುಕೆ?
ಗೆದ್ದಿದ್ದು ಒಳಿತೆ?
ಯಾರದು ನಿರ್ಧಾರ, ಏಕೆ?

ಮಾವ ಕಂಸನದು
ಸಂಹಾರಿಯ ಮೇಲೆ ಪ್ರಹಾರ
ಕೊಲುವುದರಲ್ಲೂ
ಒಳಿತು - ಕೆಡುಕುಗಳ ಪ್ರಕಾರ
ಪಡೆಯಿತು ದೇವ - ದಾನವ ಆಕಾರ
ಕೊಟ್ಟವರ ಕರಾಮತ್ತು ಸಾಕಾರ

ಬಸವಣ್ಣಗೊಬ್ಬ ಬಿಜ್ಜಳ
ಕಾಯಕದೆದುರು ಕ್ರೌರ್ಯದ ತಾಳ
ಹಾಕುವ ಕೈಗಳು ಹಿರಿದು ಕತ್ತಿಗಳ
ತರಿದು ತಲೆಗಳ
ಮೆರೆಯುತ್ತವೆ ಅಲಲಾ!!
ಬೋಧಿಸುತ್ತವೆ ಧರ್ಮದ ತಿರುಳ

ಚಿಗುರು,ಹೀಚು,ಹೂ,ಕಾಯಿ,ಹಣ್ಣು
ದೇವನ ರುಜುವಾತು
ಹಿಡಿ-ಬಡಿ, ಕೊಚ್ಚು- ಕೊಲ್ಲು
ದಾನವನ ಹಿಕಮತ್ತು
ಯಾರು ದೇವ, ಯಾರು ದಾನವ
ಉತ್ತರವಿದೆಯೇ ಮಾನವ?

- ನೂತನ ದೋಶೆಟ್ಟಿ

ವಿಡಿಯೋ
ವಿಡಿಯೋ

ನೂತನ ಎಮ್. ದೋಶೆಟ್ಟಿ

ಕನ್ನಡದ ಪ್ರಮುಖ ಲೇಖಕಿಯಲ್ಲಿ ನೂತನ ಎಮ್. ದೋಶೆಟ್ಟಿ ಅವರು ಒಬ್ಬರು. ನೂತನ ಅವರು 1968 ಸೆಪ್ಟಂಬರ್ 6 ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜನಿಸಿದರು. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಕೆಲಸ ನಿರ್ವಹಿಸಿದ್ದಾರೆ. ’ಕಾಲವೆಂಬ ಮಹಾಮನೆ, ಭಾಗೀರತಿ ಉಳಿಸಿದ ಪ್ರಶ್ನೆಗಳ” ಅವರ ಪ್ರಮುಖ ಸಂಕಲನಗಳು. ’ಯಾವ ವೆಬ್‌ಸೈಟಿನಲ್ಲೂ ಉತ್ತರವಿಲ್ಲ’ ಅವರ ಮೊದಲ ಕಥಾ ಸಂಕಲನಗಳು. ಅವರ ಬರಹಗಳು ’ಕರ್ಮವೀರ, ಸುಧಾ, ತುಷಾರ, ಕಸ್ತೂರಿ, ದ ವೀಕ್, ಇಂಡಿಯಾ ಟುಡೆ, ಪ್ರಜಾವಾಣಿ, ಕನ್ನಡ ಪ್ರಭ, ಸುಮುಖ’ ಮತ್ತಿತರ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ’ಯಾವ ವೆಬ್ ಸೈಟಿನಲ್ಲೂ ಉತ್ತರವಿಲ್’, ಅವರ ಕತೆ ಕುವೆಂಪು ವಿಶ್ವವಿದ್ಯಾಲಯದ ಪದವಿಗೆ ಪಠ್ಯವಾಗಿತ್ತು.

ಕೃತಿಗಳು: ಮಾತೆಂದರೆ ಏನು ಗೂಗಲ್?(ಕವನ ಸಂಕಲನ), ಸ್ವರ್ಗದೊಂದಿಗೆ ಅನುಸಂಧಾನ(ಪ್ರವಾಸ ಕಥನ)

More About Author