Poem

ಗುಪ್ತಗಾಮಿನಿ

ನೆನಪಿದೆಯಾ ನಿನಗೆ
ನಾಳೆಗಳ ನೆಲದಲ್ಲಿ ಬಿತ್ತಿದ್ದ
ಅದೆಷ್ಟು ಕನಸುಗಳ ರಾಶಿ
ಮಾಡಿದ್ದೆವು ನಾವಿಬ್ಬರೂ ಕೂಡಿ

ನೆಳಲು ಬೆಳಕಿನ ಕ್ಯಾನ್ವಾಸಿನ ಮೇಲೆ
ನಮ್ಮ ಬದುಕಿನ ಚಿತ್ರ ಮೂಡಿಸಿದ್ದೆ
ನಿನ್ನ ಕುಂಚದಲ್ಲಿ ನನ್ನ ತಿದ್ದಿ ತೀಡಿ
ಬರೆದು ಚಂದ ಮಾಡಿ
ನೋಡಿಕೊಳ್ಳುವೆ ಎಂದು ಮಾತು ಕೊಟ್ಟಿದ್ದಿ
ತಿಳಿದಿರಲಿಲ್ಲ ನೋಡು ಇದಕೆಲ್ಲ
ಈ ನನ್ನ ಗುಂಡಿಗೆಯ
ಈಡುಗಾಯಿ ಒಡೆದು
ಮೊದಲು ಮಾಡುವಿಯೆಂದು

ನನ್ನ ಬಗ್ಗೆ ಏನಾದರು
ಆಲೋಚನೆ ಇದ್ದರೆ...
ಊಹೂಂ ಬೇಡ ಖಂಡಿತವಾಗಿ
ಯಾವುದೇ ಕಹಿಯಿಲ್ಲ ನನಗೆ

ತಿಳಿದಿದೆ
ನೀನು ನಿನ್ನ ದಾರಿಯ ಹುಡುಕಾಟದಲಿ
ಮತ್ತೆ ಇದೆಲ್ಲ ಸಹಜ ಅಲ್ಲವೇ
ಯಾವುದೋ ಒಂದು ಪಡೆಯಬೇಕಾದಾಗ
ಏನೋ ಒಂದು ...!

ಒಂದಂತೂ ದಿಟ
ಪ್ರೇಮದ ಚಾಳೀಸು ಧರಿಸದ ಹೊರತು
ಈ ಲೋಗರ ಕಣ್ಣಿಗೆ ಕಾಣುವುದಿಲ್ಲ
ನಮ್ಮಿಬ್ಬರ ನಡುವೆ ಹರಿವ
ಈ ಗುಪ್ತಗಾಮಿನಿ

ಅನುಮಾನವೇ ಇಲ್ಲ
ನಾವಿಬ್ಬರೂ ಅಗದಿ
ಸರಿಯಾದ ಸಮಯದಲ್ಲೇ ಭೇಟಿ ಅಗೀವಿ
ಯಾವ ತಕರಾರಿಲ್ಲ ಬಿಡು
ಈ ಲೋಕದಲ್ಲಿ ಘಟಿಸುವುದೆಲ್ಲವೂ
ಆಯಾ ಕಾಲದ ಸತ್ಯ
ಅಷ್ಟೇ

ಚೈತ್ರಾ ಶಿವಯೋಗಿಮಠ

ವಿಡಿಯೋ
ವಿಡಿಯೋ

ಚೈತ್ರಾ ಶಿವಯೋಗಿಮಠ

ಕವಯತ್ರಿ ಚೈತ್ರಾ ಶಿವಯೋಗಿಮಠ ಮೂಲತಃ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದವರು. ಪ್ರಸ್ತುತ ಬೆಂಗಳೂರಿನ ವಾಸವಿದ್ದಾರೆ.  ವಿಟಿಯು ವಿಶ್ವವಿದ್ಯಾಲಯದಿಂದ ಎಂಟೆಕ್ ಪದವೀಧರರು. ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಓದು ಬರಹ, ನಿರೂಪಣೆ ಅವರ ಹವ್ಯಾಸ. ನಾಡಿನ ಮುದ್ರಣ ಹಾಗೂ ಡಿಜಿಟಲ್ ಪ್ರತ್ರಿಕೆಗಳಲ್ಲಿ ಇವರ ಕವನ-ಬರಹಗಳು ಪ್ರಕಟವಾಗಿವೆ. 

 

More About Author