Poem

ಹಣತೆ

ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ

ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ ಆಸೆಯಿಂದಲ್ಲ
ಕತ್ತಲಿನಿಂದ ಕತ್ತಲಿಗೆ ತಡಕಾಡಿಕೊಂಡು ಬಂದಿವೆ
ಹೆಜ್ಜೆ ಶತಮಾನದಿಂದಲೂ

ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ, ದೀಪ ಮುಡಿಸಿದ್ದೇವೆ.
ವೇದ, ಶಾಸ್ತ್ರ , ಪುರಾಣ, ಇತಿಹಾಸ, ಕಾವ್ಯ , ವಿಜ್ಞಾನಗಳ
ಮತಾಪು, ಪಟಾಕಿ, ಸುರುಸುರು ಬತ್ತಿ , ಹೂ ಬಾಣ ಸುಟ್ಟಿದ್ದೇವೆ.
ತಮಸೋಮ ಜ್ಯೋತಿರ್ಗಮಯ
ಎನ್ನುತ್ತಾ ಬರೀ ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ.
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತಿಂದರೂ
ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ

ಆದರೆ ಹಣತೆ ಹಚ್ಚುತ್ತೇನೆ ನಾನೂ
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ
ಇರುವಷ್ಟು ಹೊತ್ತು ನಿನ್ನ ಮುಖ ನಾನು ನಿನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ
ಹಣತೆ ಆರಿದ ಮೇಲೆ, ನೀನು ಯಾರೋ? ಮತ್ತೆ
ನಾನು ಯಾರೋ?

- ಜಿ.ಎಸ್ . ಶಿವರುದ್ರಪ್ಪ
('ಗೋಡೆ' ಕವನ ಸಂಕಲನ 1972)

...

ಜಿ.ಎಸ್. ಶಿವರುದ್ರಪ್ಪ

ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರುವರಿ 7ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ (1949), ಸ್ವರ್ಣಪದಕದೊಂದಿಗೆ ಎಂ.ಎ. ಪದವಿ (1953) ಪಡೆದರು. ಮೈಸೂರಿನ ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾಗಿ (1949-1963) ಕಾರ್ಯ ನಿರ್ವಹಿಸಿದ ಅವರು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ (1963-66) ದುಡಿದರು. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ (1966-86) ಪ್ರಾಧ್ಯಾಪಕರಾಗಿ ನಿರ್ದೇಶಕರಾಗಿದ್ದರು.

ಇವರ ಸಾಹಿತ್ಯ ಸೇವೆಗೆ ಹತ್ತಾರು ಪುರಸ್ಕಾರ ಪ್ರಶಸ್ತಿಗಳು ದೊರೆತಿವೆ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ (1974), ಕರ್ನಾಟಕ ರಾಜ್ಯ ಸರಕಾರದ ಪುರಸ್ಕಾರ (1982), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1984), ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (1984), ಮದರಾಸ್ ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ (1986)), ದಾವಣಗೆರೆಯಲ್ಲಿ ನಡೆದ 61 ನೇ ಕನ್ನಡ ಸಾಹಿತ್ಯ ಸಮ್ಮೇಳನ (1992) ಅಧ್ಯಕ್ಷತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ (1987), ಪಂಪ ಪ್ರಶಸ್ತಿ (1998), ರಾಷ್ಟ್ರಕವಿ (2000) ಗೌರವ ಕುವೆಂಪು ವಿಶ್ವವಿದ್ಯಾಲಯ (2006) ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ (2003) ದೊರೆಯಿತು. ಅಧ್ಯಾಪಕರು, ವಿಮರ್ಶಕರು, ಆಡಳಿತಗಾರರು, ಸಂಘಟಕರು ಆಗಿರುವಂತೆಯೇ ಶ್ರೇಷ್ಠ ಬರಹಗಾರರೂ ಆಗಿದ್ದರು. 2013ರ ಡಿಸೆಂಬರ್ 23ರಂದು ನಿಧನರಾದರು.

ವಿಮರ್ಶಾ ಕೃತಿಗಳು : ವಿಮರ್ಶೆಯ ಪೂರ್ವಪಶ್ಚಿಮ (1961), ಸೌಂದರ್ಯ ತಿಬಿಂಬ (1969), ಕನ್ನಡ ಕವಿಗಳ ಕಾವ್ಯ ಕಲ್ಪನೆ (1989) ಇತ್ಯಾದಿ. ಪ್ರವಾಸ ಗ್ರಂಥಗಳು :ಮಾಸ್ಕೊದಲ್ಲಿ 22 ದಿನ (1973), ಗಂಗೆಯ ಶಿಖರಗಳಲ್ಲಿ, ಅಮೇರಿಕದಲ್ಲಿ ಕನ್ನಡಿಗ, ಇಂಗ್ಲೆಂಡಿನಲ್ಲಿ ಚತುರ್ಮಾಸ. ಕವನ ಸಂಗ್ರಹಗಳು: ಸಾಮಗಾನ (1951), ಚೆಲುವು-ಒಲವು (1953), ದೇವಶಿಲ್ಪ (1956), ದೀಪದ ಹೆಜ್ಜೆ (1959), ಕಾರ್ತೀಕ (1961), ತೀರ್ಥವಾಣಿ (1960), ಅನಾವರಣ (1963), ನನ್ನ ನಿನ್ನ ನಡುವೆ (1973), ವ್ಯಕ್ತ-ಮಧ್ಯ (1999) ಇತ್ಯಾದಿ.

ಇವರು 23-12-2013ರಂದು ನಿಧನರಾದರು.

 

More About Author