Poem

ಹೆಣ್ಣವಳು ಅಷ್ಟೇ ಹೆಚ್ಚೇನಿಲ್ಲ

ಅವಳೆಂದರೆ ಹಾಗೆ
ಕಾರ್ಗತ್ತಲ ಮರೆಯಲ್ಲಿ ಸದ್ದಿಲ್ಲದಂತೇ ಬಿಕ್ಕಳಿಸುವವಳು
ಮುಂಜಾನೆ ಮುಸುಕಲ್ಲಿ ಮತ್ತದೇ ಮಂದಹಾಸದ ಒಡತಿಯವಳು
ಪ್ರತಿಫಲದ ಅಪೇಕ್ಷೆ ಇರದ ಅವನಿಯಂತವಳು

ತಲೆದಿಂಬಿಗಷ್ಟೇ ಬದುಕ ಕಥೆ ಹೇಳಿದವಳು
ತುಂಬಿ ಬಂದ ಕಂಬನಿಗೂ ಗಪ್ ಚುಪ್ ಎಂದವಳು
ಮನದ ದುಗುಡಗಳತ್ತ ದುರುಗುಟ್ಟಿ ನೋಡುವವಳು
ಮತ್ತದೇ ದುಃಖವ ತಬ್ಬುವವಳು

ಚಂಚಲಚಿತ್ತೆ ಅವಳು, ಧೃಢ ಸಂಕಲ್ಪದ ಸ್ತ್ರೀಯವಳು
ನಗರದ ಮಿಂಚಿನ ನೀರೆ ಅವಳು
ಹಳ್ಳಿ ಸೊಬಗಿನ ಸ್ನಿಗ್ಧ ಸುಂದರಿ ಅವಳು
ಒಲವ ಚಿಲುಮೆ ಅವಳು, ಕೆಂಡಗಣ್ಣಿನ ಕುವರಿ ಅವಳು

ನೀ ಬಿಟ್ಟು ಹೋದ ಎಲ್ಲಾ ಕಥೆಗಳ ಮೂಕಸಾಕ್ಷಿ ಅವಳು
ಒಮ್ಮೆ ಕಳೆದು ಹೋದರೆ ಮತ್ತೆ ಸಿಗದ ಸಮಯದಂತವಳು
ಸಂಬಳವಿಲ್ಲದ ಕೆಲಸಕ್ಕೆ ಅವಿರೋಧ ಆಯ್ಕೆಯವಳು
ಹಾ ...ಅಷ್ಟೇ ಅಷ್ಟೇ ...ಹೆಚ್ಚೇನಿಲ್ಲ ಹೆಣ್ಣವಳು.....

ಪ್ರಣಿತ ತಿಮ್ಮಪ್ಪ ಗೌಡ

ಲೇಖಕಿ ಪ್ರಣಿತ ತಿಮ್ಮಪ್ಪ ಗೌಡ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದವರು. ಕನ್ನಡದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವೀಧರರು. ಭರತನಾಟ್ಯದಲ್ಲಿ ಸೀನಿಯರ್ ಹಂತವನ್ನು ಪೂರ್ಣಗೊಳಿಸಿದ್ದಾರೆ. ಓದುವ ಹವ್ಯಾಸದೊಂದಿಗೆ ಇನ್ನೂರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿರುವ ಇವರು 100 ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ದ್ವಿತೀಯ ಪಿ.ಯು.ಸಿ ಯಲ್ಲಿ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಕ್ಕಾಗಿ ಕರ್ನಾಟಕ ಸರ್ಕಾರವು ಕನ್ನಡ ಮಾಧ್ಯಮ ಪ್ರಶಸ್ತಿ  ಹಾಗೂ ಜ್ಞಾನ ಮಂದಾರ ಟ್ರಸ್ಟ್ ‘ಜ್ಞಾನಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

More About Author