Poem

ಹೆಣ್ಣು ಹೇಗಿರಬೇಕು 

ಹೇಗಿರಬೇಕು ಇವಳು ಹೇಗಿರಬೇಕು
ಹೇಗಿರಬೇಕು ಎನ್ನುವರುಕೆಲವರು
ಹೀಗೆಯೇ ಇರಬೇಕೆನ್ನುವರು ಹಲವರು
ಹೇಗಿದ್ದರೂ ಸುಮ್ಮನೆ ಬಿಡಲೊಲ್ಲರು
ಇವರು ಯಾವುದಕ್ಕೂ ಸಲ್ಲರು,

ಹೆಣ್ಣೆಂದರೆ ಹೀಗಿರಬೇಕು
ಮೈತುಂಬಾ ಸೆ ರ ಗೊದ್ದು
ಕೈತುಂಬಾ ಬಳೆತೊಟ್ಟು
ಕಾಸಗಲ
ಸಿಂಗಾರ ವಿಟ್ಟು
ಗಂಡನ ಕಣ್ಣುಗಾವಲಿನಲಿ
ಸದಾ ಅವನಿಂದೆ
ಎಲ್ಲರೂಳು ಇದ್ದು ಇಲ್ಲದಂತೆ
ಸದ್ದಿಲ್ಲದೆ ಮನದೊಳು ಗುದ್ದಾಡುತಾ
ಮೌನದೊಳು ಮಾತುಗಳನ್ನು ನುಂಗಿ
ಆಸೆ ಕನಸುಗಳನ್ನು
ಮಣ್ಣಲ್ಲಿ ಹೂತಿಟ್ಟು...
ನಾ ಸಹಧರ್ಮಿಣಿ
ಎನ್ನುವಳು ಎಲ್ಲರೆದುರು

ಹೆಣ್ಣೆಂದರೆ ಹೀಗಿರಬೇಕು
ಸ್ವಂತಿಕೆಯ ಕೊಲ್ಲುತ್ತ
ಪರರಿಚ್ಚೆಯ ಫಲಿಸುತ್ತ
ಆಸ್ತಿತ್ವವ ಮರೆಯುತ್ತ
ಸಮಾಜದ ಬಿಗಿ ಸರಪಣಿಯೂಳು ಬಂಧಿಯಾಗಿ
ಸ್ವಪ್ರತಿಭೆಯ ಹೃದಯದೊಳು ಬಚ್ಚಿಟ್ಟು
ನಾನು ಹೆಣ್ಣು ಸಂಸಾರ ದ ಕಣ್ಣು ಎನ್ನುವಳು,

ಹೆಣ್ಣೆಂದರೆ ಹೀಗಿರಬೇಕು
ಸೋಲೊಪ್ಪಿ ಕೊಳ್ಳಬೇಕು,
ನೋವೆಂಬ ಕಹಿಯನ್ನು ಇಷ್ಟವಿಲ್ಲದೆ
ಸಹಿಸಿಕೊಳ್ಳಬೇಕು,
ಅನ್ಯಾಯದ ವಿರುದ್ಧ ಎತ್ತಿದರೆ ಧ್ವನಿ
ಗಯ್ಯಾಳಿ ಎಂಬ ಬಾಣ,
ಸತ್ಯ ನಿರೂಪಿಸಲು ಹೋದರೆ
ವಿಚ್ಛೇ ಧನ ಎಂಬ ಅಸ್ತ್ರ,
ಕಣ್ಣೀರು ಹಾಕಿದರೆ
ನಾಟಕ ವಾಡುವಳು ಎಂಬ ಅಣಕು ಶಾಸ್ತ್ರ,

ಹೆಣ್ಣೆಂದರೆ ಹೀಗಿರಬೇಕು
ಕರುಣೆ ಪ್ರೀತಿ ಮಮತೆ ಎಲ್ಲವೂ ಅಮ್ಮನ
ತೋಳ್ತೆಕ್ಕೆ ಯಲ್ಲಿ ಮಾತ್ರ,
... ಗಂಡನ ಮನೆಯಲ್ಲಿ ಎಲ್ಲವೂ ನೆಪಮಾತ್ರ

ಆದರೂ ಕುಟುಂಬ ದಲ್ಲಿ ನಿರ್ವಹಿಸುವಳು
ಹಲವಾರು ಪಾತ್ರ,
ಆದರೂ ಇವಳಿಗಿನ್ನೂ ಸಿಕ್ಕಿಲ್ಲ...
ಯಾವುದರಲ್ಲೂ ಸ್ವಾತಂತ್ರ್ಯ
ಹೆಣ್ಣೆಂದರೆ ಹೇಗಿರಬೇಕು?
ಹೀಗಿರಬೇಕೆ?

✍️ ಕೀರ್ತಿ ಕಿರಣ್ ಕುಮಾರ್
ಜಂಭರಡಿ

ಕೀರ್ತಿ ಕಿರಣ್ ಕುಮಾರ್

ಕೀರ್ತಿ ಕಿರಣ್ ಕುಮಾರ್ ಸಕಲೇಶಪುರದವರು. ಇವರು 1984 ಫೆಬ್ರವರಿ 13 ರ ರಲ್ಲಿ ಕೊಡಗು ಜಿಲ್ಲೆ , ಸೋಮವಾರ ಪೇಟೆ ತಾಲ್ಲೂಕಿನ, ಹಾರಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಎನ್. ಎನ್. ಧರ್ಮಪ್ಪ ಮತ್ತು ತಾಯಿ ಸುಶೀಲ. ಬಿ. ಎಸ್ಸಿ. ಬಿ. ಎಡ್. ತರಬೇತಿ ಯನ್ನು ಜೆ. ಎಸ್ . ಎಸ್. ಶಿಕ್ಷಣ ಸಂಸ್ಥೆ ಯಲ್ಲಿ ಪಡೆದು ಕೆಲವು ವರ್ಷ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕಳೆದ ನಾಲ್ಕು ವರ್ಷ ಗಳಿಂದ ನಾಡಿನ ಪತ್ರಿಕೆ ಗಳಿಗೆ, ಕಾಯಂ ಲೇಖಕಿಯಾಗಿ, ಸಂದರ್ಶಕಿಯಾಗಿ, ವರದಿಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಲಲಿತ ಪ್ರಭಂದ, ಕವಿತೆ, ಸಣ್ಣ ಕಥೆ, ಬರೆಯುವುದು ಇವರ ಪ್ರಮುಖ ಹವ್ಯಾಸಗಳಾಗಿವೆ,. ನಿಯತಕಾಲಿಕೆಗಳಲ್ಲಿ ಇವರ ಕಥೆ ಮತ್ತು ಕವಿತೆಗಳು ನಿರಂತವಾಗಿ ಪ್ರಕಟಣೆಗೊಂಡು ಜನಮನ್ನಣೆ ಗಳಿಸಿವೆ. ಸಾಕಷ್ಟು ಸಾಹಿತ್ಯಕ ಕಾರ್ಯಕ್ರಮ ಗಳಲ್ಲಿ ನಿರೂಪಣೆ, ನೃತ್ಯ, ಭಾವಾಗೀತೆ, ಜಾನಪದ ಗೀತೆ ಹಾಡುವುದರ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. 

ಕೃತಿಗಳು: ನೆನಪಿನ ದೋಣಿಯಲಿ, ಬೆಳ್ಳಕ್ಕಿ ಹಾಡಿತು

More About Author