Poem

ಇರುಳ ಆಗಸ

ಇರುಳ ಆಗಸ
ಇರುಳ ಬಯಲ ತಂಗಾಳಿ ಸುಳಿದಿತ್ತು ಅತ್ತಿತ್ತ
ಸೆಳೆದಿತ್ತು ಚಿತ್ತ ಗಾಢ ನಭದತ್ತ

ಬೆರಗುಗೊಂಡಿತು ಮನವು ಆ ಅಗಾಧತೆ ಕಂಡು
ತಿಳಿದರೂ ಆಗಸವು ಬರಿ ಶೂನ್ಯವೆಂದು
ದಿಟ್ಟಿಸಿ ನೋಡಲೊಮ್ಮೆ ವಿಚಿತ್ರ ಚಿತ್ರಗಳು
ಯಾರೋ ಜೋಡಿಸಿಟ್ಟಂತೆ ಹೊಳೆವ ನಕ್ಷತ್ರಗಳು

ಚಿನ್ನದ ಹಣ್ಣಂತೆ ಹೊಳೆವ ಪೂರ್ಣ ಚಂದಿರ
ಸುತ್ತಲೂ ಕಾಮನ ಬಿಲ್ಲಿನ ಉಂಗುರ
ಕೈ ಚಾಚಿದರೆ ಹಿಡಿಗೆ ನಿಲುಕುವಷ್ಟು ಹತ್ತಿರ
ಮನಕೆ ತಾನೊಂಚೂರೂ ಸಿಗದಷ್ಟು ಎತ್ತರ

ಎಲ್ಲವೂ ಅಡಗಿದೆ ಈ ಖಾಲಿ ಬಾನಲ್ಲಿ
ಭೂಮಿಯೇ ಕಣವು ಮನುಜ ನಿಲ್ಲುವನೆಲ್ಲಿ
ವಿಸ್ಮಯದ ವಿಷಯವೀ ವಿಶ್ವದ ವಿಚಾರವು
ತಿರುಗುವ ಗ್ರಹಗಳೇ ಬದುಕ ಗ್ರಹಚಾರವು

ಆಡಿಯೋ
ವಿಡಿಯೋ

ಪ್ರದೀಪ ದೇಶಪಾಂಡೆ

ಗಾಯನ, ಕೀಬೋರ್ಡ್ ವಾದನದ ಜೊತೆಗೆ ಸಾಹಿತ್ಯದ ಓದು, ಬರವಣಿಗೆಯ ಹವ್ಯಾಸ ಹೊಂದಿರುವ ಪ್ರದೀಪ ದೇಶಪಾಂಡೆ ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನವರು. ಶಾಲಾ ಶಿಕ್ಷಣವನ್ನು ರಾಯಚೂರಿನ ಟ್ಯಾಗೋರ್ ಸ್ಮಾರಕ ಶಾಲೆಯಲ್ಲಿ ಮುಗಿಸಿ, ಪದವಿ ಪೂರ್ವ ಶಿಕ್ಷಣವನ್ನು ನೂತನ ವಿದ್ಯಾಲಯ ಪದವಿ ಪೂರ್ವ ಕಾಲೇಜು ಕಲಬುರಗಿಯಲ್ಲಿ ವಿಜ್ಞಾನ ವಿಷಯದಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಬೆಂಗಳೂರಿನ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಮುಗಿಸಿದ್ದು, ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಗೀತ ಮತ್ತು ಸಾಹಿತ್ಯಿಕ ವಾತಾವರಣದಲ್ಲಿ ಬೆಳೆದಿರುವ ಪ್ರದೀಪ ದೇಶಪಾಂಡೆ ಅವರು ಸಂಗೀತದಷ್ಟೇ ಒಲವನ್ನೂ ಸಾಹಿತ್ಯದಲ್ಲೂ ಹೊಂದಿದ್ದಾರೆ. ಇವರ ಕವಿತೆ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿ ಪ್ರಶಂಸೆಯನ್ನು ಪಡೆದಿವೆ. ಅಲ್ಲದೇ ನಾಟಕ, ಕತೆ ರಚನೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author