Poem

ಇಷ್ಟೊಂದು ಸುಲಭ ಹೇಗೆ

ದ್ವೇಷಿಸುವುದು ಸುಲಭ
ಗೆಳೆಯಾ
ಹೆಚ್ಚೇನಿಲ್ಲ
ಒಬ್ಬರ ಫಲಗಳನ್ನು
ಮತ್ತೊಬ್ಬರು ಕೊಚ್ಚಿ
ಗುಂಡಿಗೆಗಳ
ಚುಚ್ಚಿದರೆ ಆಯಿತು

ಕತ್ತಿ ಗುರಾಣಿಗಳ ಲೆಕ್ಕ
ದಾಖಲೆಯಾಗುತ್ತಲೇ ಇದೆ
ಕಾಲದ ಸ್ಮೃತಿಯಲ್ಲಿ

ದ್ವೇಷಿಸುವುದೇನೋ ಬಹಳ ಸುಲಭ
ಹೊಲ ಹೊಕ್ಕು ಮೇಯುವ
ದನಗಳನ್ನು ಹೊಡೆದು
ಅಂಗಳ ಸೋಕಿದ
ನೆರೆಯವರ ಬಳ್ಳಿಬಾಹುಗಳ ಸವರಿ
ತೆನೆ ಮುರಿದರೆ ಮುಗಿಯಿತು

ಹದುಳವೇ ಎಂದು ಕೇಳುವಷ್ಟು
ಸಿರಿಯೂ ಈಗಿಲ್ಲ

ಅಕ್ಕ..
ದ್ವೇಷಿಸುವುದೆನೋ ಸುಲಭವೇ
ನೆತ್ತಿಯನು ಬರಿದು ಮಾಡಿ
ಹಣೆಯನ್ನು ಬೋಳು ಮಾಡಿ
ಮುಳ್ಳ ಚಪ್ಪಲಿಯನು
ಒಬ್ಬರಿಗೊಬ್ಬರು ತೊಡಿಸಿಕೊಂಡಮೇಲೆ

ಅಷ್ಟೇ!
ಮುಗಿಯುವುದು ಕಥೆ

ದ್ವೇಷದ ಕಿಡಿಯೇನೊ
ಬೇಗನೆ ಧಗಧಗಿಸುವುದು
‌ಸಾಮರಸ್ಯದ ಒಲೆಗೆ ಮಾತ್ರ
ಪುಪ್ಪುಸ ಬರಿದಾಗುವಂತೆ
ಉದುಗೊಳವಿಯಿಂದ ಊದಲೇಬೇಕು

ಈಗೆಲ್ಲಾ ಆಲಸಿಗಳಿಗೆ
ಪ್ರೀತಿಸುವುದೇ ಕಷ್ಟ ನೋಡು
ದ್ವೇಷಿಸುವುದು ಮಾತ್ರ ಹೇಗೆ
ಇಷ್ಟೊಂದು ಸುಲಭವಾಯಿತೋ?
ಆ ಭಗವಂತನೆ ಬಲ್ಲ

- ಚೈತ್ರಾ ಶಿವಯೋಗಿಮಠ

ಚೈತ್ರಾ ಶಿವಯೋಗಿಮಠ

ಕವಯತ್ರಿ ಚೈತ್ರಾ ಶಿವಯೋಗಿಮಠ ಮೂಲತಃ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದವರು. ಪ್ರಸ್ತುತ ಬೆಂಗಳೂರಿನ ವಾಸವಿದ್ದಾರೆ.  ವಿಟಿಯು ವಿಶ್ವವಿದ್ಯಾಲಯದಿಂದ ಎಂಟೆಕ್ ಪದವೀಧರರು. ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಓದು ಬರಹ, ನಿರೂಪಣೆ ಅವರ ಹವ್ಯಾಸ. ನಾಡಿನ ಮುದ್ರಣ ಹಾಗೂ ಡಿಜಿಟಲ್ ಪ್ರತ್ರಿಕೆಗಳಲ್ಲಿ ಇವರ ಕವನ-ಬರಹಗಳು ಪ್ರಕಟವಾಗಿವೆ. 

 

More About Author