Poem

ಜಗಳಗಂಟಿ ಮಲ್ಲಕ್ಕ

ನಲ್ಲಿಯ ಬಳಿಯಲಿ ಜಗಳವ ತೆಗೆದು
ಮುನಿಸಿಕೊಂಡಳು ಮಲ್ಲಕ್ಕ
ತೊಳೆದ ಬಿಂದಿಗೆ ಸೊಂಟಕ್ಕಿಟ್ಟು
ಬಾವಿಗೆ ನಡೆದಳು ಕಾಣಕ್ಕ

ಆಳದ ಬಾವಿಯ ತಳದಲಿ ನೀರು
ಕಿಲಕಿಲ ನಕ್ಕಿತು ಕೇಳಕ್ಕ
ಹಗ್ಗವ ಕಟ್ಟಿ ಬಿಂದಿಗೆ ಇಳಿಸಿ
ಬಿಂಕದಿ ಎಳೆದಳು ಮಲ್ಲಕ್ಕ

ಮೇಲಕೆ ಬಂದ ಬಿಂದಿಗೆಗಾಗಿ
ಬಾಗಿದಳೊಮ್ಮೆಲೆ ನೋಡಕ್ಕ
ಬಾಗಿದಳಿಲ್ಲವೆ ಉಳುಕಿತು ಸೊಂಟ
ಅಯ್ಯೋ! ಎಂದಳು ಮಲ್ಲಕ್ಕ

ಸೊಂಟದ ನೋವಿಗೆ ನರಳುತ ಬಂದಳು
ಹಾಗು ಹೀಗು ಮನೆತನಕ
ಜಗುಲಿಯ ಮೇಲೆ ಬಿಂದಿಗೆ ಇಳಿಸಿ
ಜಗಳವು ಕೆಟ್ಟದು ಅಂದಳಕ್ಕ

- ಸ. ರಘುನಾಥ

ಸ. ರಘುನಾಥ

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು.

1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ನೀಡಿಕೆ. ಆಪ್ತ ಸಮಾಮಾಲೋಚನೆ:ಉಚಿತ ಸಲಹೆ, ಸಹಕಾರ. 2006ರಲ್ಲಿ ಹಸಿರುಹೊನ್ನು ಬಳಗ ಸ್ಥಾಪನೆ: ಗಿಡಮರ ಸಂರಕ್ಷಣೆ. ಗಿಡಮೂಲಿಕೆ  ಸಂಗ್ರಹ, ಗಿಡ ನೆಡುವುದು, ನೀರಾವರಿ ಹೋರಾಟ. ಅದರ ಸ್ಥಾಪಕ ಕಾರ್ಯದರ್ಶಿ. 2015 ರಲ್ಲಿ ಬೊಮ್ಮಲಾಟಪರುದ ತೊಗಲುಗೊಂಬೆ ಕಲಾವಿದರ ಸಂಘಟನೆ. ಶಿಳ್ಳೇಕ್ಯಾತ ಬಂಗಾರಕ್ಕ ತೊಗಲುಗೊಂಬೆ ಕಲಾ ಸಂಘ ಸ್ಥಾಪನೆ. ಅದರ ಅಧ್ಯಕ್ಷತೆ. 2017ರಲ್ಲಿ ಅಲೆಮಾರಿ ನಿರಾಶ್ರಿತರಾಗಿ ನಮ್ಮ ಮಕ್ಕಳು-ಹಸಿರು ಹೊನ್ನೂರು ಗ್ರಾಮ ನಿರ್ಮಾಣ. 22 ಮಂದಿಗೆ ವಸತಿ, ಶೀಕ್ಷಣ, ಉದ್ಯೋಗ ವ್ಯವಸ್ಥೆ. ಇವೆಲ್ಲೂ ಸ ರಘುನಾಥ ಅವರ ಸಮಾಜಮುಖಿ ಕಾರ್ಯಗಳಿಗೆ ಕೆಲವು ಉದಾಹರಣೆಗಳಷ್ಟೆ.

ಸ. ರಘುನಾಥ ಅವರು ಈ ವರೆಗೂ 8 ಕವನ ಸಂಕಲನಗಳು, 3 ಸಣ್ಣ ಕಥೆಗಳು,  9ಲೇಖನ/ವಿಮರ್ಶೆಗಳ ಕೃತಿ, 3ಮಕ್ಕಳ ಸಾಹಿತ್ಯ, 3ಜಾನಪದ ಸಂಗ್ರಹ ಕೃತಿ, 19 ಅನುವಾದಗಳು , 15ಸಂಪಾದನ ಕೃತಿಗಳನ್ನು ಪ್ರಕಟಿಸಿದ್ದಾರೆ.

More About Author