Poem

ಜರೂರತ್ತು

ಏನಿದೆ ಎಂದು ನಿನ್ನಿರುವಿಕೆ ಇರಬೇಕಿದೆ
ನನ್ನ ಬಾಳವ್ಯಾಪ್ತಿಯಲಿ?;
ಹುಟ್ಟುತಲೇ ಸಾಯುವ ನಿನ್ನ
ಜವಾಬುಗಳಿಗೆ ನಸೀಬಿಲ್ಲ ಬಿಡು
ನನ್ನ ಸವಾಲುಗಳೆದುರು ನಿಲ್ಲಲು...

ಇದ್ದು ಬಿಡಬೇಕೆ ಮನದ ಮನೆ
ನಿನ್ನದೇ ನೆನಪ ಸೂತಕದಲ್ಲಿ...?
ಹಿಂದೊಮ್ಮೆ ಹೀಗೆ ಪರಿಚಯದ
ನೆಪದಲ್ಲಿ ಬದುಕಿಗೆ ಬಂದು ನಗಿಸಿ ನಗುತ
ನಗುವ ಕೊಂದು ಹೋದವನೆಂದು...!

ಭರವಸೆಯ ಬೆಳಕ ಕಿರಣ
ತಾಗುವ ಮಂಚೆಯೆ;
ನೆನೆಗುದಿಯ ಕತ್ತಲ ಹೊದಿಸಿ
ಹೋದವನು ನೀನು...

ವಾಸ್ತವದ ನರಳಿಕೆಗೆ ಭವಿಷ್ಯದಲ್ಲೂ ಚೇತರಿಕೆಯಿರುವುದಿಲ್ಲ ಎಂದು,
ಒಮ್ಮೆಯಾದರೂ ಭೂತದಲ್ಲೇ
ಹೇಳಿಬಿಡಬೇಕಿತ್ತು...

ಉಸಿರುಗಟ್ಟಿಸಿ ಕೊಂದ ನಿನ್ನೊಳಗಿನ
ಮಾತು ಕೊಳೆತು,
ನನ್ನೊಳಗೆ ಎಬ್ಬಿಸಿದ ನೋವಿನ ವಾಸನೆ;
ಅಂದಿನ ನಿನ್ನ ಆ ತಿರಸ್ಕಾರದ ಮೂಗಿಗೆ ಈ ಕೊಂಚ
ಮೊದಲೇ ಬಡಿಯಬೇಕಿತೇನೊ...

ಮಳೆಬಿದ್ದ ತಡರಾತ್ರಿಯಲಿ ಎದ್ದು ಕೂತು
ಮರದೆಲೆಯ ಹನಿಗಳಿಗೆ
ಪ್ರತಿಸ್ಪಧಿಯಾದ ನನ್ನ
ಕಂಬನಿಗಳ ಕೂಗು ಅಂದೇ ಏಕೆ
ಕೇಳಿಸದಾಯ್ತು...

ಪ್ರೀತಿ ಮತ್ತು ಪ್ರೀತಿಯನಷ್ಟೇ
ಉಣಿಸಿದವಳಿಗೆ;
ನೆನಪ ಕೋಣೆಯಲಿ ಕೂಡಿಟ್ಟು
ಅಳುವ ಇಕ್ಕಿದವನು ನೀನು...!

ಸವಿಕ್ಷಣಗಳ ಮೆಲುಕುತ್ತ ಅರೆಸತ್ತ
ಜೀವಂತ ಕಳೇಬರಕ್ಕೆ;
ನಿನ್ನಾವ ತಪ್ಪೊಪ್ಪಿಗೆಯ
"ಜರೂರತ್ತು ಈಗಿಲ್ಲ ಬಿಡು"....

- ಪ್ರಣವ ಲೇಖಾ

ಪಾಪಣ್ಣ

ಪಾಪಣ್ಣ ಅವರು ಮೂಲತಃ ಮೈಸೂರಿನವರು. ಬಾಲ್ಯದಿಂದಲೂ ಸಾಹಿತ್ಯ, ಕಲೆ, ನಟನೆಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಚೈತ್ರಾಕ್ಷಿ ರಂಗಭೂಮಿಯಲ್ಲಿ ಹವ್ಯಾಸಿ ರಂಗಭೂಮಿ ಕಲಾವಿದನಾಗಿ ಜಲಗಾರ ನಾಟಕದಲ್ಲಿ ನಟಿಸಿದ್ದು ರಂಗ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಕಾವ್ಯ ಪ್ರಾಕಾರಗಳಾದ ಮುಕ್ತಕ, ಹಾಯ್ಕು, ಟಂಕಾಗಳಲ್ಲಿ ಹಲವು ಕವಿತೆಗಳನ್ನು ಪ್ರಕಟಿಸಿದ್ದು, ನವ್ಯ ನವೋದಯದ ಕವಿತೆಗಳನ್ನು ರಚಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನ ಹೋಟೆಲ್ ಒಂದರಲ್ಲಿ ವೇಟರ್ ಆಗಿದ್ದಾರೆ.

More About Author