Story

ಕಾಯುತ್ತಿದ್ದ ಮಾಯ್ಕಾರ

ಪ್ರಮುಖ ಲೇಖಕ ಲೂಯೀಸ್‌ ಬೋರ್ಹೆಸ್ ಅವರ ಜನ್ಮದಿನ (ಆಗಸ್ಟ್‌ 24). ಆರನಕಟ್ಟೆ ಕನಕರಾಜ್‌ ಅವರು ಅನುವಾದಿಸಿದ ಬೋರ್ಹೆಸ್‌ ಅವರ ಕತೆ ಇಲ್ಲಿದೆ. ಮನುಷ್ಯನ ಸ್ವಾರ್ಥ- ದುರಾಸೆ, ಸ್ವಜನ ಪಕ್ಷಪಾತಗಳನ್ನು ಹಿಡಿದಿಡುವ ಕತೆಯಿದು.

ಸಾಂತಿಯಾಗೋ ನಗರದ ಚರ್ಚ್‌ವೊಂದರಲ್ಲಿ ಒಬ್ಬ ಪಾದ್ರಿ ಇದ್ದ. ಆತನಿಗೆ ಮಾಟ ಮಂತ್ರವನ್ನು ಕಲಿಯಬೇಕೆಂಬ ಉತ್ಕಟ ಆಸೆಯಿತ್ತು. ಒಬ್ಬ ಒಳ್ಳೆಯ ಮಾಂತ್ರಿಕನಿಗಾಗಿ ಹುಡುಕಾಟ ನಡೆಸಿದ ಆತ ಕೊನೆಗೆ ಟೊಲೆಡೊ ಎನ್ನುವ ನಗರದಲ್ಲಿ ಇಲಾನ್ ಎಂಬ ಪ್ರಖ್ಯಾತ ಮಾಟಗಾರನಿದ್ದಾನೆಂದು ತಿಳಿದು ಆತನನ್ನು ಹುಡುಕಿಕೊಂಡು ಹೊರಟ. ಇಲಾನ್‌ನ ಮಾಟಾಮಂತ್ರದ ಬಗ್ಗೆ ಚಾಲ್ತಿಯಲ್ಲಿದ್ದ ಹತ್ತಾರು ಕಥೆಗಳನ್ನು ಕೇಳಿ ಉತ್ಸುಕನಾಗಿದ್ದ. 
ಅಂತೂ ಇಲಾನ್ ಎಂಬ ಮಾಂತ್ರಿಕನ ಮನೆಯನ್ನು ಪತ್ತೆ ಹಚ್ಚಿ ಪಾದ್ರಿ ಅಲ್ಲಿಗೆ ಹೋದಾಗ ತನ್ನ ಮನೆಯ ಹಿತ್ತಲಲ್ಲಿದ್ದ ಕೋಣೆಯೊಂದರಲ್ಲಿ ಇಲಾನ್ ಪುಸ್ತಕ ಓದುವುದರಲ್ಲಿ ತಲ್ಲೀನನಾಗಿದ್ದ; ಪಾದ್ರಿಯನ್ನು ಕಂಡದ್ದೇ ಎದ್ದು ನಿಂತು ನಮಸ್ಕರಿಸಿದ ಇಲಾನ್ ಆತನನ್ನು ಗೌರವಿಸಿ ಬರಮಾಡಿಕೊಂಡ. ಸಂಜೆಯ ತಿಂಡಿ ಸೇವಿಸಿದ ನಂತರವೇ ತಾವು ಬಂದ ಕಾರಣವನ್ನು ತಿಳಿಸುವಂತೆ ಪಾದ್ರಿಯನ್ನು ಕೇಳಿಕೊಂಡ. ಆತನೂ ಒಪ್ಪಿ ಇಬ್ಬರೂ ಒಳ ಹೋದರು. ತನ್ನ ಮನೆಯ ತಂಪಾದ ಕೋಣೆಗಳೆಲ್ಲವನ್ನೂ ಪರಿಚಯಿಸುತ್ತಾ ತಮ್ಮಂತಹ ಧರ್ಮ ಶ್ರೇಷ್ಟರು ತನ್ನ ಮನೆಗೆ ಆಗಮಿಸಿರುವುದು ತನ್ನ ಜೀವನದ ಪುಣ್ಯ ಎನ್ನುತ್ತಾ ಪಾದ್ರಿಯೊಂದಿಗೆ ಸಂಜೆ ತಿಂಡಿಯನ್ನು ಸೇವಿಸಿದ. ಸಂತುಷ್ಟಗೊಂಡ ಪಾದ್ರಿ ತನ್ನೀ ಆಗಮನಕ್ಕೆ ಕಾರಣವಾದ ವಿಷಯವನ್ನು ಪ್ರಸ್ತಾಪಿಸುತ್ತಾ ತನಗೆ ಮಾಂತ್ರಿಕ ವಿದ್ಯೆಯನ್ನು ಕಲಿಸಿಕೊಡುವಂತೆ ವಿಜ್ಞಾಪಿಸಿದ. ಅದಕ್ಕೆ ಪೂರ್ಣವಾದ ಸಮ್ಮತಿಯನ್ನು ಸೂಚಿಸಿದ ಇಲಾನ್ ಮುಂದುವರೆದು ತಮ್ಮಂತಹ ಮೇಧಾವಿ, ಗೌರವಾನ್ವಿತ ಹುದ್ದೆಯಲ್ಲಿರುವವರು ಮತ್ತು ಉತ್ತಮ ಭವಿಷ್ಯವುಳ್ಳ ವ್ಯಕ್ತಿಯೋರ್ವರು ತನ್ನ ಮನೆಗೆ ಬರುವುದೇ ತನ್ನ ಅದೃಷ್ಟ; ಹೀಗಿರುವಾಗ ತಮಗೆ ಮಾಂತ್ರಿಕ ವಿದ್ಯೆಯನ್ನು ಕಲಿಸಿಕೊಡಲು ಸಾಧ್ಯವಿಲ್ಲ ಎಂದು ನಾನು ಹೇಳಲು ಸಾಧ್ಯವೇ, ಗುರುವರ್ಯರೆ...?! ಎಂದ. ಅಷ್ಟಕ್ಕೇ ತನ್ನ ಮಾತುಗಳನ್ನು ನಿಲ್ಲಿಸದೆ ಮತ್ತೂ ಮುಂದುವರೆದು ಇಲಾನ್ ತಮಗೆ ಆ ವಿದ್ಯೆಯನ್ನು ಕಲಿಸಲು ನನಗೇನೂ ಅಭ್ಯಂತರವಿಲ್ಲ, ಆದರೆ ಕಲಿತಾದ ಮೇಲೆ ತಾವು ನನ್ನಂತಹ ಹುಲು-ಮಾನವನನ್ನು ಮರೆತು ಬಿಡುವಿರೇನೊ ಎಂಬ ಸಣ್ಣ ಅಳುಕು ನನ್ನಲ್ಲಿದೆ ಎನ್ನುತ್ತಾನೆ. ಇದನ್ನು ನಿರಾಕರಿಸಿದ ಪಾದ್ರಿ ಹಾಗೆ ಸಂಭವಿಸಲು ಸಾಧ್ಯವೇ ಇಲ್ಲ ಎನ್ನುತ್ತಾ ತನ್ನ ಉಸಿರಿರುವವರೆಗೂ ನಿನ್ನ ಋಣದಲ್ಲಿರುತ್ತೇನೆ ಎಂದು ಪ್ರಮಾಣೀಕರಿಸಿದರು.   
ಇಬ್ಬರ ನಡುವೆ ಒಡಂಬಡಿಕೆ ಏರ್ಪಟ್ಟು ಪಾದ್ರಿಯ ಕೈಗಳನ್ನು ಹಿಡಿದು "ಗುಪ್ತವಾದ ಜಾಗವೊಂದರಲ್ಲೇ ಮಾಂತ್ರಿಕ ವಿದ್ಯೆಯನ್ನು ಹೇಳಿಕೊಡಬೇಕು" ಎನ್ನುತ್ತಾ ಇಲಾನ್ ಪಾದ್ರಿಯನ್ನು ಒಂದು ಕೋಣೆಗೆ ಕರೆದೊಯ್ಯುತ್ತಿದ್ದ. ಎದುರಾದ ತನ್ನ ಮನೆಗೆಲಸದಾಕೆಯ ನೋಡಿ ರಾತ್ರಿ ಊಟಕ್ಕೆ ಕೌಜುಗವನ್ನು ತಯಾರು ಮಾಡುವಂತೆಯೂ ತಾನು ಹೇಳುವವರೆವಿಗೂ ಅದನ್ನು ಹುರಿಯದಂತೆ ಹೇಳಿ ಪಾದ್ರಿಯನ್ನು ಕೋಣೆಯೊಂದರೊಳಗೆ ಕರೆದೊಯ್ದ. ಆ ಕೋಣೆಯ ನೆಲದಲ್ಲೊಂದು ವೃತ್ತಾಕಾರದ ಕಬ್ಬಿಣದ ಸುರುಳಿ ಇತ್ತು. ಇಬ್ಬರೂ ಸೇರಿ ಅದನ್ನು ಎತ್ತಿ, ಸರಿಸಿ ಪಕ್ಕಕ್ಕೆ ತಳ್ಳಿ, ಒರಟೊರಟಾದ ಮೆಟ್ಟಿಲುಗಳಿದ್ದ ಸುರಂಗದೊಳಕ್ಕೆ ಜಾಗೂರಕತೆಯಿಂದ ಇಳಿಯುತ್ತಾ ತಳಕ್ಕೆ ಹೋದರು. ಎಷ್ಟು ತಳಕ್ಕೆಂದರೆ ಸ್ಪೇನ್ ದೇಶದ ಟಾಗೂಸ್ ನದಿಯ ತಳಕ್ಕಿಂತಲೂ ಇದು ಆಳವಿದೆಯೇನೊ ಎಂದು ಪಾದ್ರಿ ಚಕಿತಗೊಳ್ಳುವಷ್ಟು! ಅಲ್ಲೊಂದು ಚೊಕ್ಕದಾದ ಚಿಕ್ಕ ಕೋಣೆ. ಅಲ್ಲಿದ್ದ ಅಲಮಾರಿಗಳಲ್ಲಿ ನೂರಾರು ಪುಸ್ತಕಗಳನ್ನು, ಹತ್ತು ಹಲವು ಮಾಟ ಮಂತ್ರದ ಸಾಮಾನುಗಳನ್ನು ಒಪ್ಪವಾಗಿ ಜೋಡಿಸಿಡಲಾಗಿತ್ತು. ಆ ಪುಸ್ತಕಗಳನ್ನು ಇಬ್ಬರೂ ತಿರುವಿ ಹಾಕುತ್ತಿರುವಾಗ ದಿಢೀರೆಂದು ಇಬ್ಬರು ವ್ಯಕ್ತಿಗಳು ಮೆಟ್ಟಿಲುಗಳ ಇಳಿದು ಪಾದ್ರಿಯತ್ತ ಬಂದು ಪತ್ರವೊಂದನ್ನು ಆತನಿಗೆ ಕೊಟ್ಟರು. ಅದು ಪಾದ್ರಿಯ ಮಾವನಾದ ಸಾಂತಿಯಾಗೋ ನಗರದ ಬಿಷಪ್‌ರಿಂದ ಬಂದ ಪತ್ರ. ತನ್ನ ಆರೋಗ್ಯ ಸ್ಥಿತಿ ತೀರಾ ಹದೆಗೆಟ್ಟಿದೆಯೆಂದೂ ತಾನು ಸಾಯುವುದರೊಳಗೆ ತನ್ನನ್ನು ನೋಡಬೇಕೆಂಬ ಹಂಬಲವಿದ್ದರೆ ತಕ್ಷಣ ಹೊರಟು ಬರುವಂತೆ ಆ ಪತ್ರದಲ್ಲಿ ಬಿಷಪ್ ಬರೆದಿದ್ದರು. ಇದನ್ನು ಕಂಡದ್ದೇ ಪಾದ್ರಿ ಚಣ ಕೆರಳಿದರು. ಹಾಗೆ ಕೆರಳಲು ಇದ್ದ ಮುಖ್ಯ ಎರಡು ಕಾರಣಗಳೆಂದರೆ ನಗರದ ಬಿಷಪ್ ಆದ ತನ್ನ ಮಾವನವರ ಅನಾರೋಗ್ಯ ಮತ್ತು ತನ್ನೀ ಮಾಂತ್ರಿಕ ಸಂಶೋಧನೆಯನ್ನು ಆರಂಭದಲ್ಲೇ ನಿಲ್ಲಿಸಬೇಕಲ್ಲ ಎಂಬ ಕೊರಗು. ಗೊಂದಲಕ್ಕೀಡಾದ ಪಾದ್ರಿ ನಿಧಾನವಾಗಿ ಯೋಚಿಸಿ ತನ್ನ ಮಾವನವರಾದ ಬಿಷಪ್‌ಗೆ ವಿಷಾದದ ಪತ್ರವೊಂದನ್ನು ಬರೆದು ಆ ಇಬ್ಬರನ್ನು ಕಳುಹಿಸಿಕೊಟ್ಟು ಆತ ಅಲ್ಲೇ ಉಳಿದ. 
ಮೂರು ದಿನಗಳ ತರುವಾಯ, ಶೋಕಭರಿತ ದಿರಿಸುಗಳನ್ನುಟ್ಟ ಕೆಲವರು ಮಗದೊಂದು ಪತ್ರವನ್ನಿಡಿದು ಆಗಮಿಸಿದರು. ತಮ್ಮ ಮಾವ ಮತ್ತು ನಗರದ ಬಿಷಪ್ ನಿಧನ ಹೊಂದಿದರೆಂದೂ, ಅವರ ಸ್ಥಾನಕ್ಕೆ ಹೊಸ ಬಿಷಪ್‌ರನ್ನು ಆಯ್ಕೆ ಮಾಡಲಾಗಿದೆಯೆಂದೂ, ದೈವಾನುಗ್ರಹದಂತೆ, ತಾವೇ ಆ ಹೊಸ ಬಿಷಪ್ ಎಂದು ಆ ಪತ್ರದಲ್ಲಿ ನಮೂದಿಸಲಾಗಿತ್ತು. ಹಾಗೆಯೇ ಮತ್ತೊಂದು ವಿಷಯವನ್ನು ಅಲ್ಲಿ ಪ್ರಸ್ತಾಪಿಸಲಾಗಿತ್ತು. ತಾವು ಮುಖತಃ ಬಂದು ಬಿಷಪ್ ಹುದ್ದೆಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲವೆಂದರೆ ತೊಂದರೆಯೇನಿಲ್ಲ, ತಮ್ಮ ಗೈರುಹಾಜರಿಯಲ್ಲೇ ತಮ್ಮನ್ನು ಬಿಷಪ್ ಹುದ್ದೆಗೆ ಆಯ್ಕೆ ಮಾಡುವುದು ಉಚಿತ ಎಂದೂ ತಿಳಿಸಲಾಗಿತ್ತು. 
ಹತ್ತು ದಿನಗಳು ಕಳೆದವು. ಅಧ್ಯಯನದಲ್ಲಿ ತೊಡಗಿದ್ದ ಪಾದ್ರಿಯನ್ನು ಕಾಣಲು ಈಗ ಸೂಟುಬೂಟು ಧರಿಸಿದ್ದ ಇಬ್ಬರು ವ್ಯಕ್ತಿಗಳು ಆಗಮಿಸಿದರು. ಬಂದದ್ದೇ ಪಾದ್ರಿಯ ಪಾದಾರವಿಂದಗಳಿಗೆ ದೀರ್ಘ ದಂಡ ನಮಸ್ಕಾರ ಹಾಕಿ, ಅವರ ಅಮೃತದ ಕೈಗಳಿಗೆ ಮುತ್ತಿಟ್ಟು "ಮಾನ್ಯ ಬಿಷಪ್ ಅವರೆ..." ಎಂದು ಸಂಬೋಧಿಸಿ ಪಾದ್ರಿಯವರಿಗೆ ಸಿಕ್ಕಿರುವ ಹೊಸ ಪದವಿಯಾದ ಬಿಷಪ್ ಸ್ಥಾನದ ಬಗ್ಗೆ ಮಾತನಾಡುತ್ತಿದ್ದರು. 
ಇವೆಲ್ಲವನ್ನು ಗಮನಿಸುತ್ತಿದ್ದ ಇಲಾನ್ ಬಿಷಪ್ ಪದವಿಗೇರಿರುವ ತನ್ನ ಅತಿಥಿಯನ್ನು ಅಭಿನಂದಿಸುತ್ತಾ ತನ್ನ ಮನೆಗೆ ಇಂತಹ ಶುಭಸುದ್ದಿಯೊಂದನ್ನು ಕಳುಹಿಸಿದ ದೇವರಿಗೆ ಕೃತಙ್ಞತೆ ಸಲ್ಲಿಸಿ ಮಾಜಿ ಪಾದ್ರಿ, ಹೊಸ ಬಿಷಪ್‌ರನ್ನು ನೋಡಿ "ಗುರುವರ್ಯರೆ, ತಾವೀಗ ಬಿಷಪ್ ಪದವಿಗೆ ಉನ್ನತಿಗೊಂಡಿದ್ದೀರಿ. ತಮ್ಮ ಹಳೆಯ ಪಾದ್ರಿ ಸ್ಥಾನ ಖಾಲಿಯಾಗಿದೆ. ಅದನ್ನು ತಾವು ದಯೆಯಿಟ್ಟು ನನ್ನ ಮಕ್ಕಳಲ್ಲಿ ಒಬ್ಬನಿಗೆ ನೀಡಬೇಕೆಂದು ಬಿನ್ನಹಿವಿಸಿಕೊಳ್ಳುತ್ತೇನೆ" ಎಂದ. ಇಲಾನ್‌ನ ಕಡೆ ತಿರುಗಿದ ಪಾದ್ರಿ "ಅಯ್ಯೋ... ಆ ಸ್ಥಾನವನ್ನು ನನ್ನ ಒಡಹುಟ್ಟಿದ ಸೋದರನೊಬ್ಬನಿಗೆ ಮೀಸಲಾಗಿಟ್ಟೀದ್ದೇನಲ್ಲ..." ಎನ್ನುತ್ತಾ "ಖಂಡಿತ ನಿನ್ನ ಮಗನಿಗೆ ಮುಂದೆ ಒಳ್ಳೆಯ ಕೆಲಸ ಕೊಡಿಸುವ, ನಿಧಾನಿಸು" ಎಂದ. ಆ ಕಾರಣಕ್ಕಾಗಿ ಅಪ್ಪ-ಮಗ ಇಬ್ಬರೂ ತನ್ನ ಜೊತೆ ಸಾಂತಿಯಾಗೊ ನಗರಕ್ಕೆ ಬರಬೇಕೆಂದ.  
ಮೂವರೂ ಸಾಂತಿಯಾಗೊಕ್ಕೆ ಹೋದರು. ಅವರನ್ನು ಭವ್ಯವಾಗಿ ಸ್ವೀಕರಿಸಿ ಬಿಷಪ್ ಪದವಿಯಲ್ಲಿ ಪಾದ್ರಿಯನ್ನು ಕೂರಿಸಲಾಯಿತು. ಇದಾದ ಆರು ತಿಂಗಳಿಗೆ ನಮ್ಮ ಮಾಜಿ ಪಾದ್ರಿಗಳಾದ ಹಾಲಿ ಬಿಷಪ್‌ಗೆ ಪೋಪ್‌ರ ದಿವ್ಯ ಸನ್ನಿಧಿಯಿಂದ ಒಂದು ಓಲೆ ಬಂದಿತು. ಅದರಲ್ಲಿ ತೊಲೊಸಾ ಪ್ರಾಂತ್ಯದ ಆರ್ಚ್ ಬಿಷಪ್ ಆಗಿ ತನ್ನನ್ನು ನೇಮಿಸಲಾಗಿದೆಯೆಂದೂ ತೆರವಾಗಲಿರುವ ಬಿಷಪ್ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿಯನ್ನು ತಾನೇ ನೇಮಿಸುವಂತೆ ನಿರ್ದೇಶಿಸಿರುವುದ ಕಂಡು ಹಸನ್ಮುಖಗೊಂಡರು ನಮ್ಮ ಬಿಷಪ್.  
ಈ ವಿಷಯ ಗೊತ್ತಾದುದೇ ಲಗುಬಗೆಯಿಂದ ಓಡಿ ಬಂದ ಇಲಾನ್ ಮಾಜಿ ಬಿಷಪ್‌ರನ್ನು ನೋಡಿ "ಸ್ವಾಮಿ, ತಾವೀಗ ಆರ್ಚ್ ಬಿಷಪ್ ಆಗಲಿದ್ದೀರಿ. ಅಭಿನಂದನೆಗಳು. ಹಾಗೇ ತಾವು ನನಗೆ ಕೊಟ್ಟಿದ್ದ ಮಾತನ್ನು ನೆನಪಿಸಿಕೊಳ್ಳಬೇಕು. ಈ ಬಾರಿಯಾದರೂ ನೀವು ಬಿಷಪ್ ಸ್ಥಾನವನ್ನು ನನ್ನ ಮಗನಿಗೆ ನೀಡುವಂತೆ ಕೋರುತ್ತೇನೆ" ಎಂದ. ಹೊಸ ಆರ್ಚ್ ಬಿಷಪ್ ಇಲಾನ್ ಕಡೆ ತಿರುಗಿ "ನನ್ನ ಚಿಕ್ಕಪ್ಪನಿಗೆ ಈ ಬಿಷಪ್ ಸ್ಥಾನವನ್ನು ಕಾಯ್ದಿರಿಸಿದ್ದೆನಲ್ಲ, ಏನು ಮಾಡುವುದು?... ನನ್ ಜೊತೆ ತೊಲೊಸಾಕ್ಕೆ ನೀವಿಬ್ಬರು ಬನ್ನಿ... ಅಲ್ಲಿ ನಿನ್ನ ಮಗನಿಗೆ ಖಂಡಿತ ಒಂದು ಒಳ್ಳೆಯ ಕೆಲಸವನ್ನು ಕೊಡಿಸುವೆ" ಎಂದ. ಇಲಾನ್‌ಗೆ ಅದನ್ನು ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ. 
ಮೂವರೂ ಈಗ ತೊಲೊಸದತ್ತ ಪ್ರಯಾಣ ಬೆಳೆಸಿದರು. ಅಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಿ, ಸಾಮೂಹಿಕ ಪ್ರಾರ್ಥನೆಗಳನ್ನು ನಡೆಸಿ ಆರ್ಚ್ ಬಿಷಪ್‌ರನ್ನು ಗೌರವಿಸಲಾಯಿತು. ಎರಡು ವರ್ಷಗಳು ಕಳೆದ ನಂತರ ಒಂದು ದಿನ ಪೋಪ್‌ರ ದಿವ್ಯ ಸನ್ನಿಧಿಯಿಂದ ಅವರ ಸಂದೇಶವಾಹಕರು ಇವರನ್ನು ಹುಡುಕಿಕೊಂಡು ಬಂದು ಓಲೆಯೊಂದನ್ನು ನೀಡಿದರು. ಆರ್ಚ್ ಬಿಷಪ್ ಸ್ಥಾನದಿಂದ ತಮಗೆ ಕಾರ್ಡಿನಲ್ ಪದವಿಗೆ ಭಡ್ತಿ ನೀಡಲಾಗಿದೆಯೆಂದೂ ತೆರವಾಗಲಿರುವ ಆರ್ಚ್ ಬಿಷಪ್ ಸ್ಥಾನಕ್ಕೆ ತಾವೇ ಸೂಕ್ತರನ್ನು ನೇಮಿಸಿ ಬರುವಂತೆಯೂ ಅದರಲ್ಲಿ ತಿಳಿಸಲಾಗಿತ್ತು. ಈ ಸುದ್ದಿಯನ್ನು ಕೇಳಿದ್ದೇ ಮಾಜಿ ಆರ್ಚ್ ಬಿಷಪ್‌ರತ್ತ ದೌಡಾಯಿಸಿದ ಇಲಾನ್ ಹಾಲಿ ಕಾರ್ಡಿನಲ್‌ರನ್ನು ನೋಡಿ ಮತ್ತೊಮ್ಮೆ ಹಳೆಯ ಮಾತನ್ನು ನೆನಪಿಸಿ ಈ ಬಾರಿಯಾದರೂ ತಾವು ಬಿಡಲಿರುವ ಆರ್ಚ್ ಬಿಷಪ್ ಸ್ಥಾನಕ್ಕೆ ತನ್ನ ಮಗನನ್ನು ಪರಿಗಣಿಸಬೇಕೆಂದು ಬೇಡಿಕೊಂಡ. ಕಾರ್ಡಿನಲ್ ಉಸುರಿದರು: "ಓ! ಈ ಬಾರಿಯೂ ಸಾಧ್ಯವಿಲ್ಲವಲ್ಲ... ಆರ್ಚ್ ಬಿಷಪ್ ಸ್ಥಾನವನ್ನು ನಾನು ನನ್ನ ಸೋದರಮಾವನಿಗೆ ಮೀಸಲಿಟ್ಟಿದ್ದನಲ್ಲ... ಖಂಡಿತ ಮುಂದೆ ಸಹಾಯ ಮಾಡುತ್ತೇನೆ, ನೀವಿಬ್ಬರೂ ನನ್ನೊಂದಿಗೆ ರೋಮ್‌ಗೂ ಬನ್ನಿ" ಎಂದ. ಇಲಾನ್‌ಗೆ ಬೇರೆ ಆಯ್ಕೆಗಳೇ ಇರಲಿಲ್ಲ.    
ರೋಮ್ ನಗರದಲ್ಲಿ ಇವರನ್ನು ಮೆರವಣಿಗೆಯ ಮುಖೇನ ಸ್ವಾಗತಿಸಿ ಸಾವಿರಾರು ಮಂದಿ ಕೂಡಿ ಸಾಮೂಹಿಕ ಪ್ರಾರ್ಥನೆಗಳನ್ನು ನಡೆಸಿ ಇವರನ್ನು ಗೌರವಿಸಲಾಯಿತು. ಇದಾಗಿ ನಾಲ್ಕು ವರ್ಷಕ್ಕೆ ಅಕಸ್ಮಾತ್ ಆಗಿ ಪೋಪ್ ದೈವಾಧೀನರಾದರು. ತಕ್ಷಣವೇ ಎಲ್ಲಾ ಕಾರ್ಡಿನಲ್‌ಗಳು ಸಭೆ ಸೇರಿ ಒಮ್ಮತದಿಂದ ನಮ್ಮ ಮಾಜಿ ಪಾದ್ರಿ, ಹಾಲಿ ಕಾರ್ಡಿನಲ್‌ರನ್ನು ಧರ್ಮದ ಏಕೈಕ ಉನ್ನತ ಪದವಿಯಾದ ಪೋಪ್ ಸ್ಥಾನದಲ್ಲಿ ಕೂರಿಸಿದರು. ಈ ಶ್ರೇಷ್ಟ ಸುದ್ದಿ ಕೇಳಿದ್ದೇ ಇಲಾನ್ ಹಿರಿಹಿರಿ ಹಿಗ್ಗಿ ಕ್ಷಿಪ್ರವಾಗಿ ಓಡಿ ಪರಮ ಪೂಜ್ಯರ ಪಾದಾರವಿಂದಗಳಿಗೆ ಮುತ್ತಿಟ್ಟು ಎದ್ದು ನಿಂತು ಬೆನ್ನ ಬಗ್ಗಿಸಿ ವಿನಯದಿಂದ ಅವರ ಹಳೆಯ ಮಾತನ್ನು ಮಗದೊಮ್ಮೆ ನೆನಪಿಸಿದ. ತನ್ನ ಮಗನಿಗೆ ಈ ಬಾರಿಯಾದರೂ ತಾವು ತ್ಯಜಿಸಲಿರುವ ಕಾರ್ಡಿನಲ್ ಸ್ಥಾನವನ್ನು ದಯಪಾಲಿಸುವಂತೆ ಬಿನ್ನಹಿವಿಸಿದ. ಈ ಬಾರಿ ಅವನೊಳಗೆ ಅಪರಿಮಿತ ಆಶಾಭಾವನೆಯಿತ್ತು.  
ಇಲಾನ್‌ನ ಈ ಮಾತುಗಳ ಕೇಳಿ ವ್ಯಗ್ರಗೊಂಡ ಪೋಪ್ ಅವನತ್ತ ನೋಟವ ಎಸೆದು "ಹೀಗೇ ನನಗೆ ನೀನು ತೊಂದರೆ ನೀಡುತ್ತಲೇ ಇದ್ದರೆ, ಮಗನೆ, ಜೈಲಿಗಟ್ಟಿಸಿಬಿಡುತ್ತೇನೆ, ಹುಷಾರು. ನೀ ಯಾರೆನ್ನುವುದು ನನಗೆ ಚೆನ್ನಾಗಿ ಗೊತ್ತು. ಟೊಲೊಡೊ ಎಂಬ ಊರಲ್ಲಿದ್ದ ಒಬ್ಬ ಯಕಃಶ್ಚಿತ್ ಕಣ್ಕಟ್ಟು ವಿದ್ಯೆಯವನು, ನೀನು... ಮರೆತೆಯಾ!? ನಿನ್ನ ಯೋಗ್ಯತೆ ನಿನಗೆ ಗೊತ್ತಿದೆ ತಾನೇ!? ಆ ಕಪಟ ಕಣ್ಕಟ್ ವಿದ್ಯೆಯ ಹೊರತು ನಿನಗೋ ನಿನ್ನ ಮಗನಿಗೋ ಏನು ಗೊತ್ತಿದೆ, ಹೇಳೊ ಬದ್ಮಾಶ್... ಥೂ... ನನ್ ಕಣ್ ಎದುರು ನಿಲ್ ಬೇಡ... ತೊಲಗು ಇಲ್ಲಿಂದ" ಎಂದರು. 
ದೈವ ಸಂಭೂತರಾದ ಪೋಪ್ ತನಗೆ ಸಹಾಯ ಮಾಡಲಾರರೆಂದು ಗೊತ್ತಾದುದ್ದೇ ಇಲಾನ್ ಅವರನ್ನು ನೋಡಿ ತಾನು ವಾಪಸ್ ಸ್ಪೇನ್‌ಗೇ ಹೋಗುವುದಾಗಿಯೂ ಆ ದೀರ್ಘ ಪ್ರಯಾಣದಲ್ಲಿ ಉಣ್ಣಲು ತಮಗೆ ರೊಟ್ಟಿಯನ್ನೊ ಅನ್ನವನ್ನೊ ದಯಪಾಲಿಸುವಂತೆ ಪೋಪ್‌ರನ್ನು ಬೇಡಿಕೊಂಡ. ದೈವಾನುಗ್ರಹಿಯಾದ ಪೋಪ್‌ರು ಇಲಾನ್‌ನ ಈ ಕೊನೆಯ ಬೇಡಿಕೆಯನ್ನೂ ತಿರಸ್ಕರಿಸಿದರು. ತಕ್ಷಣವೇ ಇಲಾನ್ (ಅವನ ಮುಖಚಹರೆ ಕೆಂಪು ಬಣ್ಣಕ್ಕೆ ತಿರುಗಿತ್ತು ) ಖಚಿತವಾದ ಧ್ವನಿಯಲ್ಲಿ ಕೂಗಿದ:
"ಹಾಗಾದರೆ ತಯಾರು ಮಾಡಲು ಹೇಳಿದ್ದ ಕೌಜುಗವನ್ನೇ ನಾನು ರಾತ್ರಿಯೂಟವನ್ನಾಗಿ ತಿನ್ನಬೇಕಾಗುತ್ತದೆ, ಅಲ್ಲವೇ!?"
ಮನೆಗೆಲಸದಾಕೆ ತಟ್ಟನೆ ಪ್ರತ್ಯಕ್ಷವಾದಳು, ಇಲಾನ್ ಆಕೆಯ ಕಡೆ ತಿರುಗಿ "ಹೋಗು, ಈಗ ಆ ಕೌಜುಗಳನ್ನು ಹುರಿ" ಎಂದ. ದಿಗ್ಭ್ರಮೆಗೊಂಡು ನಿಂತ ದೈವಸಂಭೂತರಾದ ಪೋಪ್ ಮೆಲ್ಲಗೆ ಸುತ್ತಲೂ ನೋಡಿದರು. ಇದು ರೋಮ್ ಅಲ್ಲ, ಈ ಮಂತ್ರವಾದಿಯ ನೆಲಮಾಳಿಗೆಯೊಳಗಿನ ಒಂದು ಕೋಣೆ ಎನ್ನುವುದು ಗೊತ್ತಾಗಲು ಅವರಿಗೆ ಸ್ವಲ್ಪ ಸಮಯ ಹಿಡಿಯಿತು. ಇಲಾನ್‌ನ ಮುಖವನ್ನು ನೋಡಲು ನಾಚಿಕೆಯೆನಿಸಿತು. ತಾನು ಎಷ್ಟು ಕೃತಘ್ನನಾಗಿ ನಡೆದುಕೊಂಡೆ... ಯಾವ ಮುಖವಿಟ್ಟುಕೊಂಡು ಆತನ ಬಳಿ ಕ್ಷಮೆ ಕೇಳುವುದು... ತಾನೊಬ್ಬ ಕೇವಲ ಪಾದ್ರಿ ಅಷ್ಟೆ... ಅವಮಾನಗೊಂಡು ಕುಸಿದರು. 
"ತಮಗೆ ನೀಡಿದ ಪರೀಕ್ಷೆ ಇಲ್ಲಿಗೇ ಮುಗಿಯಿತು, ಬನ್ನಿ ಸ್ವಾಮಿಗಳೆ" ಎಂದು ಪಾದ್ರಿಯನ್ನು ಮೇಲಂತಸ್ತಿಗೆ ಕರೆದುಕೊಂಡು ಬಂದ ಇಲಾನ್ ತನ್ನ ಕೌಜುಗದ ಔತಣವನ್ನು ಅವರಿಗೆ ನೀಡಲು ನಿರಾಕರಿಸಿ ಬಾಗಿಲವರೆವಿಗೂ ಹೋಗಿ "ತಮ್ಮ ಪ್ರಯಾಣ ಸುಖಕರವಾಗಿರಲಿ" ಎಂದು ಸೌಜನ್ಯಯುತವಾಗಿ ಅವರನ್ನು ಬೀಳ್ಕ್ಕೊಟ್ಟು ಬಂದ. 

Original: “El Brujo Postergado” by Jorge Luis Borges
English Translation: “The Wizard that was made to wait” by Andrew Hurley

ಕನಕರಾಜ್ ಆರನಕಟ್ಟೆ

ಸಮಕಾಲೀನ ಕನ್ನಡ ಗದ್ಯ ಸಾಹಿತ್ಯದಲ್ಲಿ ಹೊಸ ಹಾದಿಯನ್ನು ಹಿಡಿದಿರುವ ಕನಕರಾಜ್ ಆರನಕಟ್ಟೆ ಮೂಲತ: ಚಿತ್ರದುರ್ಗ ಜಿಲ್ಲೆಯವರು. ಕರ್ನಾಟಕ, ಭಾರತ ಮೊದಲ್ಗೊಂಡು ಹಲವಾರು ದೇಶ, ಭಾಷೆ, ಸಂಸ್ಕೃತಿಗಳ ಮುಖಾಮುಖಿಯಾಗಿಸಿ ಓದುಗರಿಗೆ ಹೊಸದಾದ ಅನುಭವ ನೀಡುವ ಇವರ ಲೇಖನ ಮತ್ತು ಕಥೆಗಳು ಕನ್ನಡ ನವ್ಯೋತ್ತರ ಸಾಹಿತ್ಯದ ಯುವ ಫಸಲು. ಸಾಹಿತ್ಯ ಮಾತ್ರವಲ್ಲದೆ ಸಿನಿಮಾದಲ್ಲೂ ಆಸಕ್ತಿ ಹೊಂದಿರುವ ಇವರು ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಇವರ ಮೊದಲನೇ ಕಿರುಚಿತ್ರ “ಬರ್ಮಾ ಎಕ್ಸ್ ಪ್ರೆಸ್” ಹಲವು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಆಯ್ಕೆಗೊಂಡು ನ್ಯೂಯಾರ್ಕ್‍ನ “ಸೌತ್ ಏಷಿಯನ್ ಇಂಟರ್‍ನ್ಯಾಷನಲ್ ಫಿಲ್ಮ್ ಫೆಸ್ಟಿವಲ್” ಮತ್ತು “ರಾಜಸ್ತಾನ ಫಿಲಂ ಫೆಸ್ಟಿವಲ್” ಗಳಲ್ಲಿ ಉತ್ತಮ ಕಿರುಚಿತ್ರ ಎಂಬ ಗೌರವವನ್ನು ಪಡೆದಿದೆ. ತಮಿಳು ಮತ್ತು ಅರೆಬಿಕ್ ಭಾಷೆಗಳಲ್ಲೂ ಇವರು  ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಭಾರತ, ಮಾಲ್ಡೀವ್ಸ್, ಲಿಬಿಯಾ ದೇಶಗಳಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ ಪ್ರಸ್ತುತ ಇವರು ಸೌದಿ ಅರೇಬಿಯಾದ ಪ್ರಿನ್ಸ್ ಸತ್ತಾಮ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಿಸುತ್ತಿದ್ದಾರೆ.

More About Author