Poem

ಕನಕ ನಮನ

ಬೀರಪ್ಪ ಬಚ್ಚಮ್ಮ ವೀರಸುತ ತಿಮ್ಮಪ್ಪ
ಸಾರಿಹರು ಹರಿದಾಸ ಸಾಹಿತ್ಯವ
ದಾರಿಯನು ತೋರುತ್ತ ಮೇರುತನ ನಿಷ್ಠೆಯಲಿ
ಸೇರಿಹನು ಕೃಷ್ಣನಾ ಹೃದಯದಲ್ಲಿ

ಕ್ರಾಂತಿಯನು ಮಾಡುತ್ತ ಶಾಂತಿಯನು ಸಾರುತ್ತ
ಕಾಂತಿಯನು ನೀಡಿಹರು ಕಣ್ಣು ತೆರೆಸಿ
ಭ್ರಾಂತಿಯನು ಕಿತ್ತೊಗೆದು ಕಾಂತನನು ನೆನೆಯುತ್ತ
ಕಾಂತೆಯನು ಮರೆತಿಹನು ವೈರಾಗ್ಯದಿ

ಉಪ್ಪರಿಗೆ ಮನೆಮೋಹ ಕೊಪ್ಪರಿಗೆ ಹೊನ್ನಿರಲು
ಕುಪ್ಪಳಿಸಿ ನೆಗೆಯದೆಯೆ ದಾನನೀಡಿ
ಅಪ್ಪಿರುವ ಬಡತನಕೆ ಕಪ್ಪುರದ ತೆರದಲ್ಲಿ
ಬಪ್ಪ ದುರಿತವನಾಶ ಮಾಡುತ್ತಲಿ

ಜಾತಿಯಲಿ ಕೀಳೆಂದು ಸೋತಿರುವ ಹೃದಯಗಳ
ಭೀತಿಯನು ಕಳೆದಿಹನು ಕನಕದಾಸ
ಪ್ರೀತಿಯನು ತೋರುತ್ತ ಮಾತಿನಲಿ ನಯವಾಗಿ
ಹೂತಿರುವ ಕುಲಧರ್ಮ ನಾಶಗೈದು

ಮೇರು ಭಕ್ತಿಯ ತೋರಿ ನೇರ ನಡೆಯಲಿ ಸಾಗಿ
ಸಾರಿಹನು ಹರಿದಾಸ ಸಾಹಿತ್ಯವ
ಕೇರಿಕೇರಿಯ ತಿರುಗಿ ಸಾರಸತ್ವವನುಣಿಸಿ
ಪಾರುಮಾಡಲು ಬೇಡಿ ತಾನ್ ಹರಿಯನು

ಕಾಂತ - ಒಡೆಯ ( ಶ್ರೀಹರಿ)
ಕಾಂತೆ - ಮಡದಿ , ಸಂಪತ್ತು.

- ಲಕ್ಷ್ಮೀ ವಿ ಭಟ್ ಮಂಜೇಶ್ವರ

ಲಕ್ಷ್ಮೀ ವಿ ಭಟ್

ಲೇಖಕಿ ಲಕ್ಷ್ಮೀ ವಿ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಜೇಶ್ವರದವರು. ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ. ಎಂ. ಎ, ಬಿ.ಎಡ್ ಪದವೀಧರರು. ಕವನ, ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕನ್ನಡ ಛಂದಸ್ಸು ವಿಶೇಷ ಆಸಕ್ತರು. 

ಕೃತಿಗಳು ; ಹೊಸ ಬರಹಗಾರರ ಕೈಪಿಡಿ

ಪ್ರಶಸ್ತಿಗಳು ; ಸುವರ್ಣ ಕನ್ನಡ ರತ್ನ ಪ್ರಶಸ್ತಿ (ಕೀರ್ತಿ ಪ್ರಕಾಶನ), ಸಾಹಿತ್ಯ ದೀವಿಗೆ ಪ್ರಶಸ್ತಿ ಹಾಗೂ ಕಾವ್ಯ ಕಣಜ ಪ್ರಶಸ್ತಿ ಲಭಿಸಿದೆ.

More About Author