Poem

ಕನಸುಗಳು ಏನಾಗುತ್ತಿವೆ 

ಕನಸುಗಳು ಛದ್ಮವೇಷಧಾರಿಯಾಗಿ
ಅಲ್ಲಲ್ಲಿ ಹರಡಿ ಬಿಡಾಡಿಯಾಗಿ ಅಲೆದಾಡುತ್ತ
ಇರಬಾರದ ಕಡೆ ಇದ್ದು ಸೊರಗುತ್ತಿವೆ

ಬತ್ತಿದ ಮೊಲೆಯಲಿ
ಚಿಮ್ಮದ ನೊರೆಹಾಲಿಗೆ
ಕಚ್ಚಿ ಕಚ್ಚಿ ರಚ್ಚೆ ಹಿಡಿದಿದೆ
ಹಸಿವೆಯ ಹೆಣದ ಹೆಗಲೇರಿ
ಕನಸು ಕಲ್ಲಾಗಿವೆ.

ಅಹಿಂಸೆಯ ಶವದ ಮೆರವಣಿಗೆ ಹಿಂದೆ
ಗಾಂಧಿಯ ಬಂಟರು ಸರಳುಗಳ ಹಿಂದೆ ಶಾಂತಿ ಬಂದಿ
ಸತ್ಯವೋ.. ಮಂತ್ರಿಗಳ ಮನೆಯ ಒತ್ತಾಯದ ಅತಿಥಿ .

ಹೀಗಿರಲು ಕನಸುಗಳು
ಗೋಣಿ ಚೀಲದಿ
ಗಾಂಧಿ ಪ್ರತಿಮೆಯ ಬುಡದಲಿ ಕೊಳೆಯುತ್ತಿವೆ
ಹಲವು ಹುಳಗಳು,ಕೊಳಕು ನಾತ
ತಿಪ್ಪೆಗೆ ಎಸೆಯುವವ ಇನ್ನೂ ಬಂದಿಲ್ಲ
ಇಲ್ಲೇ ಇಡಬೇಕೋ ಎಸೆಯಬೇಕೋ ಅವನಿಗೂ ಗೊತ್ತಿಲ್ಲ

ಭೂಮಿ ಆಗಸಕ್ಕೆ ನಂಟು ಬೆಸೆದು
ಕನಸು ಬಿತ್ತಿ ನನಸು ಬೆಳೆವೆನೆಂಬ ತೇಜಿಯನೇರಿದವಗೆ
ಕಳಪೆ ಬೀಜ, ಮಳೆ ಗೈರು,
ಪೊಳ್ಳು ತಿಂದು ಗೂಡುಗಟ್ಟಿದ ಎಲುಬಿನಾತ
ಜೊಳ್ಳು ಬೆಲೆಗೆ ಗಟ್ಟಿ ಕಾಳು
ನಾಮ್ ಕೆ ವಾಸ್ತೆ ಸಾಲಮನ್ನಾ ,
ಜೀವಂತ ಶವ
ಕನಸುಗಳು ಸಾಯಲಾರದೆ ಆಕ್ರಂದಿಸುತ್ತಿವೆ.

ಹೊತ್ತು ಹೊತ್ತಿಗೆ ಅನ್ನ ಹಾಕಲು
ತುತ್ತಿನ ಚೀಲಕ್ಕೆ ಕೂಳು ತುಂಬಲು
ಕೆಂಪು ದೀಪದ ಬುಡಕ್ಕೆ
ಮಾಂಸ ತೊಗಲು ತೀಟೆ ತೀರಿ
ಎರಗಿದ ರಣ ಹದ್ದುಗಳ ಸಹಿಸಿ
ನರಳಿ ಹೊರಳಿ ರಕ್ತ ಬಸಿದು
ಕನಸು ಕನಲಿ ವೃಣಗಟ್ಟಿವೆ.

ಪುಟ್ಟ ಕಂದಮ್ಮಗಳ ಕನಸುಗಳು
ಗ್ಯಾರೇಜಿನಲ್ಲಿ ಹತೋಡಿ ಕೆಳಗೆ ಹಾಯ್ ಎಂದೊರಲುತ್ತಿವೆ
ಹೋಟೆಲ್ಲಿನ ಮೇಜು ಸವರುವ ಕೊಳಕು ಬಟ್ಟೆಯಲ್ಲಿ ನಾರುತ್ತಿವೆ
ಹತ್ತಿ ಹೊಲದಿ
ಕಾಮಣ್ಣರ ಮುಟ್ಟಿಯಲಿ ಹಳದಿಗಟ್ಟಿವೆ.
ರೇಶಿಮೆಯ ಗೂಡಲಿ
ಕುದಿಯುತ್ತಿವೆ
ಮೋಟು ಕೈಯಲ್ಲಿ, ಕುರುಡುಗಣ್ಣಲಿ ರೈಲಿನಂಗಳದಿ ದನಿ ಬಿಚ್ಚಿವೆ.
ಹೌದು ಕನಸುಗಳು ನನಸಾಗುವ ಬದಲು ಏನೇನೋ ಆಗುತ್ತಿವೆ

ಚಿತ್ರ : ವೀರಪ್ಪ ತಾಳದವರ

ಸಂಧ್ಯಾ ಹೊನಗುಂಟಿಕರ್

ಸಂಧ್ಯಾ ಹೊನಗುಂಟಿಕರ್ ಅವರು ಜನಿಸಿದ್ದು 1964 ಅಕ್ಟೋಬರ್ 23, ಗುಲಬರ್ಗಾದಲ್ಲಿ. ತಂದೆ - ವಾಸುದೇವರಾವ್ ಕುಲಕರ್ಣಿ, ತಾಯಿ- ಸರೋಜಾಬಾಯಿ ಕುಲಕರ್ಣಿ. ಬಾಲ್ಯ ಕಳೆದಿದ್ದು ಮತ್ತು ವಿದ್ಯಾಭ್ಯಾಸ ಮಾಡಿದ್ದು ಯಾದಗಿರಿಯಲ್ಲಿ. ಎಂ.ಎ. (ಕನ್ನಡ) ಪದವೀಧರೆ ಆಗಿರುವ ಅವರಿಗೆ ಸಮಾಜ ಸೇವೆ, ಅಭಿನಯ ಆಸಕ್ತಿಯ ಕ್ಷೇತ್ರಗಳು. ಕಡಲ ಒಡಲು ಬಗೆದಷ್ಟು (2002), ಹರಿದ ಹಾಸಿಗೆ ಹಂಬಲ (2008), ಹಾರಲಾಗದ ನೊಣ, (ಕತೆಯ ಸಂಕಲನಗಳು) ಯಶಸ್ವಿ ಬದುಕಿಗೆ ಮೆಟ್ಟಿಲು (ಶರಣರ ಹದಿನೈದು ಕತೆಗಳು) (ಮಕ್ಕಳ ಕಥಾ ಸಂಕಲನ) (2009), ಸೂರ್ಯ ಮುಖಿ (ಪ್ರಬಂಧಗಳು) ಸಖಿ ಶಕ್ತಿ (40 ವರುಷ ಸಮಾಜಮುಖಿ ಕೆಲಸದಲ್ಲಿರುವ ಸಂ. ಮ. ಮಂ.ದ ಪರಿಚಯಾತ್ಮಕ ಕೃತಿ) ಒಂದೇ ಕ್ಯಾನ್ವಾಸಿನಲ್ಲಿ (ಕಥಾಸಂಕಲನ) ಮತ್ತು ದಾಸ ದರ್ಪಣ (ಜಿಲ್ಲಾ ಕನ್ನಡ  ಸಾಹಿತ್ಯ ಪರಿಷತ್ತು ಕಲಬುರ್ಗಿ ವತಿಯಿಂದ) ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಅವರ ಕೃತಿಗಳು ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ಧಾರವಾಡದ  ವಿದ್ಯಾವರ್ಧಕದ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಪ್ರಶಸ್ತಿಗಳಿಗೆ ಭಾಜನವಾಗಿವೆ.

ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, “ಸಂಚಯ” ಸಾಂಸ್ಕೃತಿಕ ಪತ್ರಿಕೆಯ ಕಥಾಸರ್ಧೆಯಲ್ಲಿ ಪ್ರಥಮ ಬಹುಮಾನ, ಸಂಚಯ ಕವನ ಸ್ಪರ್ಧೆಯಲ್ಲಿ ಬಹುಮಾನ, ’ಕರವೇ ನಲ್ನುಡಿ ಪತ್ರಿಕೆಯ  ರಾಜ್ಯೋತ್ಸವ ಕಥಾ ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನ, ವಿಜಯವಾಣಿ ಪತ್ರಿಕೆಯ  ದೀಪಾವಳಿ ಕಥಾ  ಸ್ಪರ್ಧೆಯಲ್ಲಿ ಪ್ರಥಮ  ಬಹುಮಾನ, ’ಖರೇವಂದ್ರ ತಪ್ಪು' ಬಾನುಲಿ ನಾಟಕಕ್ಕೆ ರಾಷ್ಟ್ರಮಟ್ಟದ ಮತ್ತು ರಾಜ್ಯ ಮಟ್ಟದ  ಸರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುವ ಅವರಿಗೆ ರಂಗಮಾಧ್ಯಮ ಗುಲಬರ್ಗಾದಿಂದ ಗೌರವ, ರೋಟರಿಕ್ಲಬ್ ಗುಲಬರ್ಗಾದಿಂದ ’ಮಹಿಳಾ ರತ್ನ’ ಗೌರವ, ಕೆ.ಎಂ.ಎಫ್. ಗುಲಬರ್ಗಾದಿಂದ “ಮಹಿಳಾ ಸಾಧಕ” ಗೌರವ ಇವರಿಗೆ ಸಂದಿದೆ.  ಪ್ರಸ್ತುತ ಕಲಬುರ್ಗಿಯಲ್ಲಿ ವಾಸವಾಗಿರುವರು.

 

More About Author