Story

ಕನಸುಗಳು ಕೈಗೂಡಿದಾಗ

ಕವಯಿತ್ರಿ ಮಾಲಾ ಚೆಲುವನಹಳ್ಳಿ ಅವರು ಕಥೆ, ಲೇಖನ, ಪ್ರಬಂಧ, ಕವಿತೆ, ಲಲಿತ ಪ್ರಬಂಧ ಬರಹದಲ್ಲಿ ಆಸಕ್ತಿ ಹೊಂದಿದವರು. ಪ್ರಸ್ತುತ ಅವರು ಬರೆದಿರುವ “ಕನಸುಗಳು ಕೈಗೂಡಿದಾಗ” ಕತೆ ನಿಮ್ಮ ಓದಿಗಾಗಿ....

"ಚಂದ್ರಾ ಚಂದ್ರಾ.."" ಒಂದೇ ಸಮನೆ ಕೂಗುತ್ತಿದ್ದ ಗಂಡನ ಕರೆಗೆ ಬೆಚ್ಚಿ ಬಿದ್ದು ಎಚ್ಛೆತ್ತು ತಡಬಡಿಸಿ ನೋಡಲು ಘಂಟೆ ಸಂಜೆ 5:30 ಆಗಿ ಬಿಟ್ಟಿತ್ತು ಇದ್ಯಾವಾಗ ಇಷ್ಟೋತ್ತಾಯ್ತು ಈಗ ತಾನೇ ಮನೆ ಕೆಲಸಗಳೆಲ್ಲಾ ಮುಗಿಸಿ ಸಲ್ಪ ಸುಧಾರಿಸಿಕೊಳ್ಳೋಣ ಅಂತ ಕೂತಿದ್ದೆನಲ್ಲ ಅಷ್ಟು ಬೇಗ ಗಡಿಯಾರದ ಮುಳ್ಳು 3 ರಿಂದ 5:30ಗೆ ಹೋಯಿತು ಎಂದು ಅಂದುಕೊಳ್ಳುತ್ತಿರುವಾಗಲೇ ಗಂಡ ದಿನಕರ್ ""ಬೇಗ ಕಾಫಿ ಮಾಡು ಕುಡಿದು ಸಲ್ಪ ಹೊರಗಡೆ ಹೋಗಬೇಕಾಗಿದೆ ""ಎಂದಾಗ ಸರಿ ಎನ್ನುತ್ತಾ ಅಡಿಗೆ ಕೋಣೆಗೆ ತೆರಳಿದವಳಿಗೆ ಮತ್ತದೇ ಹಳೆಯ ಗುಂಗು......ಪಟ್ಟಣದಲ್ಲಿ ನಾಜುಕಾಗಿ ಬೆಳೆದವಳಿಗೆ ಮದುವೆ ಎಂಬ ತಿರುವು ಒಂದು ಕುಗ್ರಾಮದ ರೈತಾಪಿ ಮನೆತನದ ಸೊಸೆಯಾಗುವಂತೆ ಮಾಡಿತ್ತು.....ಅಲ್ಲಿನ ವಾತಾವರಣಕ್ಕೂ ಇಲ್ಲಿಯ ವಾತಾವರಣಕ್ಕೂ ಅಜಗಜಾಂತರ ವ್ಯತ್ಯಾಸ... ಹೊಂದಿಕೊಳ್ಳಲಾರದೆ ಹೆಣಗಾಡುತ್ತಾ ಕಳೆವ ಒಂದೊಂದು ದಿನವೂ ಮುಳ್ಳಿನ ಮೇಲೆ ನಡೆದಂತೆ....

ಮದುವೆಯಾಗಿ ತಿಂಗಳಿಗೆ ತವರಿಗೆ ಹೋಗಿ ಹಿಂದಿರುಗುವಾಗ ನೀರಿನಿಂದ ಹೊರ ತೆಗೆದ ಮೀನಿನ0ತೆ ವಿಲಪಿಸುತ್ತಿದ್ದ ಜೀವವನ್ನು ಸಂತೈಸಿಕೊಳ್ಳಲಾಗದೆ ಪ್ರಯಾಣದುದ್ದಕ್ಕೂ ಅಳುತ್ತಲೇ ಬಂದು ಮನೆಗೆ ಬಂದ ಮೇಲೆಯೂ ಒಂದೇ ಸಮನೆ ಬಿಕ್ಕಿ ಬಿಕ್ಕಿ ಅಳುತ್ತಿದ್ದವಳನ್ನು ಕಂಡು ಪಟ್ಟಣದ ಹುಡುಗಿಯ ಭಾವನೆಗಳಿಗೆ ಸ್ಪಂದಿಸದ ಧೂರ್ತತನ ಮೆರೆವ ಭಾವನದೊಂದು ಮಾತಿನ ಚಾಟಿ ಏಟು ""ಇಲ್ಲಿ ಪೇಟೆ, ಪಟ್ಟಣ, ಪಿಚ್ಚರ್ ಅಂತ ಯಾವ ಶೋಕಿಯೂ ಮಾಡುವ ಹಾಗಿಲ್ಲ ತಿನ್ನುವಷ್ಟು ಕೂಳು ಮಾಡುವಷ್ಟು ಕೆಲಸ......ಅಷ್ಟೇ...."ಎಂದಾಗ ಒಸರುತ್ತಿದ್ದ ಕಣ್ಣೀರೂ ಕೇಕೆ ಹಾಕಿ ನಕ್ಕಂತ ಅನುಭೂತಿ.

ಚಂದ್ರಳಿಗೆ ಶಾಲಾ ಕಾಲೇಜು ದಿನಗಳಲ್ಲಿ ಅದೇನೋ ವಾರ ಪತ್ರಿಕೆ, ಮಾಸ ಪತ್ರಿಕೆಗಳನ್ನ ಅದರಲ್ಲಿ ಬರುವ ಲೇಖನ, ಕಥೆ , ಧಾರಾವಾಹಿಗಳನ್ನು ಹಾಗೂ ಗ್ರಂಥಾಲಯದಿಂದ ಕಾದಂಬರಿಗಳನ್ನು ತಂದು ಓದುವುದು, ಸಂಗೀತ, ರಂಗೋಲಿ, ಕಸೂತಿ, ನೇಯ್ಗೆ, ಉಲ್ಲನ್ ಹೆಣಿಗೆ, ಅಡಿಗೆ ಕೆಲಸಗಳಿರಲಿ ಅದೇನು ಹುರುಪೋ, ತಾಯಿಯಿಂದ ಬಂದ ರಕ್ತದ ಗುಣವೋ, ಸಂಸ್ಕಾರವೋ ಒಟ್ಟಿನಲ್ಲಿ ಅದೇನೋ ನೋಡುನೋಡುತ್ತಲೇ ಕಲಿತು ಬಿಡುತ್ತಿದ್ದಳು.

ಜೊತೆಗೆ ಕಥೆ ಕಾದಂಬರಿ,ವಾರಪತ್ರಿಕೆ, ಮಾಸ ಪತ್ರಿಕೆ ಯಾವುದೇ ಇರಲಿ ಓದುವ ಹುಚ್ಚು..

ಆದರೆ ಹಣೆಬರಹಕ್ಕೆ ಹೊಣೆ ಯಾರು * ಎಂಬ ಗಾದೆ ಮಾತು ""ಮದುವೆ " ಎಂಬ ಮೂರಕ್ಷರ ಅವಳ ಬದುಕಿನಲ್ಲಿ ವಿಪರ್ಯಾಸದ ತಿರುವನ್ನೇ ಪಡೆದುಕೊಂಡಿತು.ಪಕ್ಕಾ ರೈತ ಮನೆತನದಲ್ಲಿ ಹುಟ್ಟಿಬೆಳೆದ ದಿನಕರನೊಂದಿಗೆ ಇಡೀ ಅವನ ಕುಟುಂಬಕ್ಕೆ ಹೊಲ,ಮನೆ, ದನ, ಕರು ಕೆಲಸಗಳನ್ನು ಬಿಟ್ಟರೆ ಬೇರ್ಯಾವುದರ ಮೇಲೂ ಆಸಕ್ತಿಯಿಲ್ಲದೆ ಅವರ ಸಂಸ್ಕೃತಿ, ಸಂಸ್ಕಾರಗಳಿಗೂ ಇವಳ ಸಂಸ್ಕಾರ, ಸಂಸ್ಕೃತಿಗಳಿಗೂ ತಾಳೆಯೇ ಹೊಂದದಂತಾಯ್ತು. ಜೊತೆಗೆ ಹಳ್ಳಿ ಜೀವನ, ಕೂಡು ಕುಟುಂಬದಲ್ಲಿ, ಹಂಗಿನ ಮಾತುಗಳು, ಅಸಡ್ಡೆ, ಅಸಮಾಧಾನ ಎಲ್ಲವನ್ನು ಅನುಭವಿಸಬೇಕಾದ ಪರಿಸ್ಥಿತಿ.

ಪಟ್ಟಣದಲ್ಲಿ ಹುಟ್ಟಿಬೆಳೆದ ಚಂದ್ರಾಳ ಮನಸ್ಸನ್ನು ಗಂಡನಾಗಲಿ ಅತ್ತೆ ಮಾವಂದಿರಾಗಲೀ ಯಾರೂ ಅರ್ಥಮಾಡಿಕೊಳ್ಳದೆ ಅವಳ ಆಸೆ ಕನಸುಗಳು ಕ್ರಮೇಣ ನಶಿಸಿ ಹೋದವು ಓದು ಬರೆಯುವುದನ್ನೇ ಮರೆತ ಚಂದ್ರಾ ತನ್ನ ಸ್ವಂತಿಕೆಯನ್ನೇ ತೊರೆದು ಕೇವಲ ಗಂಡನ ಮನೆಯವರ ಕಷ್ಟ ಇಷ್ಟಗಳಿಗೆ ಸ್ಪಂದಿಸುವ ಯಂತ್ರವಾದಳು.ವಾರಗಿತ್ತಿಯ ಕಿರುಕುಳ, ಭಾವನ ವ್ಯಂಗ್ಯ, ಮನೆಯ ಗುಟ್ಟು ಹೊರಗೆ ಬಿಟ್ಟು ಕೊಡಬಾರದೆ0ಬ ಒಡಂಬಡಿಕೆ.. ನೋವು ನುಂಗಿ ನಗುವಿನ ಮುಖವಾಡ ಹೊತ್ತು ಬದುಕು ನಡೆಸುವ ಪರಿ ಹೆಣ್ಣಿಗೆ ಒಲಿದು ಬಂದಿರುವ ಅಮೂಲ್ಯ ವಿದ್ಯೆಯೇ ಎನ್ನಬೇಕು.

ಹಾಗೆಯೇ ಮಗ ಹುಟ್ಟಿ ನಾಲ್ಕಾರು ವರ್ಷಗಳ ನಂತರ ಅಣ್ಣ ತಮ್ಮಂದಿರು ಪಾಲಾಗಿ ಬೇರೆ ಬಂದ ಮೇಲೆ ಮತ್ತೂ ಕೆಲಸದ ಹೊರೆ ಹೆಚ್ಚಾಯ್ತು, ಗಂಡ ಹೊರಗೆ ಹೋದಾಗ ಹಸುಗಳನ್ನು ಮೇಯಿಸುವುದು, ಸಗಣಿ ತೆಗೆಯುವುದು, ತೋಟದಲ್ಲಿ ಕಂಡ ಕೆಲಸಗಳನ್ನು ಮಾಡುತ್ತಾ, ರೇಷ್ಮೆ, ತರಕಾರಿ, ಕಾಳು, ಬೇಳೆಗಳನ್ನು ಬೆಳೆಯುವುದು ಇವೇ ಅವಳ ಬದುಕಿನಲ್ಲಿ ಹಾಸು ಹೊಕ್ಕಾದವು.

ಎಷ್ಟೋ ಸಾರಿ ತನ್ನನ್ನೇ ತಾನು ನಂಬದಂತ ಪರಿಸ್ಥಿತಿ ಹಾಗಿದ್ದವಳು ನಾನು ಹೇಗೆ ಹೀಗಾಗಲು ಸಾಧ್ಯ ಇದೇನು ಅಪ್ಪ ಅಮ್ಮನಿಂದ ಬಂದ ಸಂಸ್ಕಾರವೇ ಸರಿ ತನ್ನಿಂದ ಮೂಕವಾಗಿ ಇಷ್ಟೆಲ್ಲಾ ಕೆಲಸಗಳನ್ನು ಮಾಡಿಸುತ್ತಿದೆ ಎಂದು ತನ್ನ ಬಗ್ಗೆ ತಾನೇ ಹೆಮ್ಮೆ ಪಟ್ಟುಕೊಳ್ಳುತ್ತಿದ್ದಳು. ಹೇಗಾದರಾಗಲಿ ತವರಿಗೆ ಅಪಕೀರ್ತಿ ತರದಂತೆ ಬಾಳಿ ಬದುಕಬೇಕು ಎಂದು ಪ್ರತೀ ಕ್ಷಣವೂ ಚಿಂತಿಸುತ್ತಾ ಯಾರಿಗೂ ಕಾಣದಂತೆ ಮೂಕವಾಗಿ ಒಳಗೊಳಗೇ ಬೇಗುದಿ ಅನುಭವಿಸಿ ರೋಧಿಸುತ್ತಿದ್ದಳು.ಓದಬೇಕೆಂಬ ಆಸೆಯಿದ್ದರೂ ಪುಸ್ತಕ ಸಿಗದು, ಯಾವ ಮನೋರಂಜನೆಯೂ ಇರದ ಬದುಕು ಹೇಗೋ ಸಾಗುತ್ತಿತ್ತು.

20 ವರ್ಷಗಳಲ್ಲಿ ಬದುಕಿನ ಸ್ಥಿತಿಯೂ ಸುಧಾರಿಸಿತ್ತು ದನಕರುಗಳ ಸಂಖ್ಯೆ, ಕೆಲಸವೂ ಕಡಿಮೆಯಾಗಿತ್ತು ಗಂಡ ದಿನಕರನಿಗೂ ಸಲ್ಪ ಪ್ರಪಂಚ ಜ್ಞಾನ ಬಂದಿತ್ತು. ಸ್ಮಾರ್ಟ್ ಫೋನ್ ಉಪಯೋಗ ಶುರುವಾದ ಕಾರಣ ಚಂದ್ರಳಿಗೆ ಜಾಲತಾಣಗಳಲ್ಲಿ ಹಳೆಯ ಸ್ನೇಹಿತರ ಸಂಪರ್ಕ ದೊರಕಿ ಅವರ ಸಲಹೆಯ0ತೆ ಕೆಲವು ಸಾಹಿತ್ಯದ ಬಳಗಗಳಲ್ಲಿ ಸೇರ್ಪಡೆಯಾದಳು, "ಚಂದ್ರಾ ನಿನ್ನಲ್ಲೂ ಏನೋ ಪ್ರತಿಭೆ ಇದೆ ಅದನ್ನು ಜಾಗೃತಗೊಳಿಸು, ಸಮಯ ಸಿಕ್ಕಾಗ ಏನಾದರೂ ಬರೆಯಲು ಪ್ರಯತ್ನಿಸು" ಎಂಬ ಅವರ ಪ್ರೇರಣೆಯಿಂದ ಅಂದಿನ ದಿನಗಳಲ್ಲಿ ಕಲಿತ ಅವಳ, ವಿದ್ಯೆ,ಜ್ಞಾನ ಕೈ ಹಿಡಿದು ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಾಳೆ.

ಅನೇಕ ಬಳಗಗಳಲ್ಲಿ ಕವಿ, ಸಾಹಿತಿಯಾಗಿ ಚಿರಪರಿಚಿತಳಾದಾಗ ಉನ್ನತ ಸ್ಥಾನ ಮಾನಗಳನ್ನೂ ಅಲಂಕರಿಸಿ, ಕನ್ನಡದ ಸೇವೆ ಸಾಹಿತ್ಯ ಸೇವೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳೂ ಅವಳನ್ನರಸಿ ಬಂದಾಗ ಅವಳನ್ನ ಅಸಡ್ಡೆಯಿಂದ ಕಂಡು ವ್ಯಂಗ್ಯವಾಡಿದವರಿಗೆ ತನ್ನ ಸಾಧನೆಯ ಮೂಲಕವೇ ಉತ್ತರ ಕೊಡುತ್ತಾಳೆ.

ಯಾವ ಹೆಣ್ಣೊ ಅಸಮರ್ಥಳಲ್ಲ ಅವಳ ಪರಿಸ್ಥಿತಿ, ವಾತಾವರಣಗಳೂ, ಸುತ್ತಮುತ್ತಲಿನ ಜನರ ಒಡನಾಟವೇ ಅವಳ ಯಶಸ್ಸಿಗಾಗಲೀ, ಅವನತಿಗಾಗಲೇ ಕಾರಣ ಎಂದು ಯೋಚಿಸಿ ತಾನು ಅಜ್ಞಾನಿಯಂತೆ ಕಳೆದುಕೊಂಡ ಆ 20 ವರ್ಷಗಳ ಅವಧಿಯಲ್ಲಿ ಏನೇನು ಕಳೆದುಕೊಂಡೆ ಎಂದು ಚಿಂತಿಸಿ ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ*ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೆಚ್ಚಿನ ಸಾಧನೆಯೇಡೆಗೆ ಗಮನಕೊಡಬೇಕು ಹಿಂದಿನ ಎಲ್ಲದನ್ನು ಕೆಟ್ಟ ಕನಸoತೆ ಮರೆತು ಮುಂದೆ ಸಾಗಬೇಕು ಎಂದು ನಿಟ್ಟುಸಿರಿಡುತ್ತಾಳೆ.

- ಮಾಲಾ ಚೆಲುವನಹಳ್ಳಿ

ಮಾಲಾ ಚೆಲುವನಹಳ್ಳಿ

ಕವಯಿತ್ರಿ ಆಗಿರುವ ಮಾಲಾ ಚೆಲುವನಹಳ್ಳಿ ಅವರು ಗಜಲ್‌ ಸಂಕಲನಗಳ ಮೇಲೆ ಅಪಾರ ಒಲವು ಹೊಂದಿರುವವರು. ಅನೇಕ ಪತ್ರಿಕೆ ಸೇರಿದಂತೆ ಜಾಲತಾಣಗಳಲ್ಲಿ ಅವರ ಕವನ,ಅಂಕಣಗಳು ಪ್ರಕಟವಾಗಿದೆ.

More About Author