Story

ಕಣ್ಮರೆ

ಕತೆಗಾರ ಶಿವರಾಜ್ ಡಿ.ಎನ್.ಎಸ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ದಾಸನಹುಂಡಿಯವರು. ಬರಹ-ಓದು-ನಟನೆ ಹಾಗೂ ಛಾಯಾಗ್ರಹಣ ಅವರ ಹವ್ಯಾಸವಾಗಿದ್ದು, ಸಾಹಿತ್ಯಕ್ಷೇತ್ರದಲ್ಲಿಯೂ ವಿಭಿನ್ನ ಬರವಣಿಗೆಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅವರ ‘ಕಣ್ಮರೆ’ ಕತೆ ನಿಮ್ಮ ಓದಿಗಾಗಿ...

ಇನ್ನೇನೊ ಮೂರುಗಂಟೆಯ ಬಸ್ಸು ಬರುವಂತಹ ಹೊತ್ತಾಗಿತ್ತು, ಒಂದಷ್ಟು ಮಂದಿ ಅಂಗಡಿಯ ಬಳಿ ಹರಟುತ್ತ ಬೀಡಿ ಸೇದುತ್ತ ಕೂತು ನಿಂತಿದ್ದವರು ಕೆಳಗಲ ಬೀದಿಕಡೆಗೆ ತಿರುಗಿ ಒಬ್ಬರ ಹಿಂದೆ ಒಬ್ಬರು ಓಡುವುದನ್ನ ನೋಡಿ ಅವರಿಂದೆ ಇವರು ಇವರ ಹಿಂದೆ ಮತ್ತೆ ಕೆಲವರು ಹೀಗೆ.. ಬಂಡಿ ಹೊಡೆದು ತಿರುಗುತ್ತಿದ್ದ ಸಣ್ಣ ಮಕ್ಕಳ ಜೊತೆಗೆ ಬೀದಿನಾಯಿಗಳೂ ಸೇರಿ ಆತಂಕದಿ ಓಡಿದರು. ಲಲಿತಮ್ಮನ ಗುಡಿಸಲು ಬಳಿಯ ಗುಂಪುಕಂಡು ಲಲ್ಲಿಯ ಅವ್ವ ಕೆಂಪಮ್ಮ ತಿರಿಕೊಂಡಳೇನೊ ಅಂದುಕೊಳ್ಳುತ್ತಲೆ ಸಾಗುತ್ತಿರುವಾಗ ಕೆಂಪಮ್ಮನ ಗೋಳಾಟ ಗುಂಪಿನಿಂದಾಚೆಗು ಕೇಳುತಿದ್ದು ಅವಳಿಗೇನು ಆಗಿಲ್ಲ ಎನ್ನುವುದು ಖಾತರಿಯಾಗಿ ಮತ್ತೇನಾಗಿರಬಹುದು ಎನ್ನುವ ಆಲೋಚನೆಯಲ್ಲೆ ಗುಂಪಾದರು. ಅಷ್ಟು ಮಂದಿ ಹಿಂದೆಂದೂ ಆ ಗುಡಿಸಲ ಬಳಿ ಕಾಣಿಸಿ ಕೊಂಡವರಲ್ಲ, ಇದ್ದಕ್ಕಿದ್ದಂತೆ ಕೆಂಪಮ್ಮ ಲಬಲಬೋ ಎಂದು ಬಾಯಿ ಬಡಿದುಕೊಳ್ಳುವ ಸದ್ದು ಕೇಳುತ್ತಿದ್ದಂತೆ ಊರಿನರ್ಧ ಮಂದಿ ಆ ಗುಡಿಸಲಮುಂದೆ ತುಂಬಿ ತುಳುಕಲು ಕಾರಣ ಲಲ್ಲಿ.

ಕೆಂಪಮ್ಮ : ಅಪ್ಪೋಯ್.. ಯಾನಾಯ್ತಮೆʼ ಯಾಕಿಂಗ್ ಮಾಡ್ಕಂದಮೆ, ಲಿಲ್ಲ್ಯೇ.. ಎದ್ದ್ರಮೆ ನಾ ನಿಮ್ಮ್ ಅವ್ವ್ ಬಂದಿನಿ ಎದ್ದ್ರಮೇ' ಎಂದು ಗೋಳಾಡುತ್ತಿದ್ದಳವನ್ನ ಬಂದಿದ್ದ ಒಂದಿಬ್ಬರು : ಯಾಕಕೈ ಯಾನಾಯ್ತು ಏನ್ಮಾಡ್ಕದಿಂದಳು, ಎಂದಾಗ ಗೋಳಾಡುತ್ತಲೆ, ಔಂಷ್ದಿ ಕುಡ್ಕಂದಳ ಕಪ್ಪೋಯ್ ಇವ್ಳನಾಯ್ಸ್ ತೊಡ್ದೋಗವಾ..ಅದ್ಯಾಕ್ ಇಂಗ್ ಮಾಡ್ಕಂಡ್ಳೊ ಮುಂಡಾ.. ಎಂದು ಗೋಳಾಡುತ್ತಲೇ ಉತ್ತರಿಸಿದಳು, ಅಲ್ಲಿಯ ವಾತವರಣದಲ್ಲಿದ್ದ ದುರ್ವಾಸನೆ ಹಾಗೂ ಬಿದ್ದಿದ್ದ ಬಾಟಲಿಯೆ ಆಗಿರುವಂತ ಅನಾಹುತವನ್ನ ಸಾರುವಂತಿದ್ದರೂ ಮತ್ತೊಮ್ಮೆ ಎಲ್ಲರು ಖಚಿತ ಪಡಿಸಿ ಕೊಂಡರಷ್ಟೆ. ಪಾಲಿಡಾರ್ ಕುಡಿದು ಜ್ಞಾನವಿಲ್ಲದೆ ಬಿದ್ದಿದ್ದ ಲಲ್ಲಿಯನ್ನ ತಬ್ಬಿಗೋಳಾಡುತಿದ್ದ ಮುದುಕಿ ಕೆಂಪಮ್ಮನನ್ನ ಒಂದಿಬ್ಬರು ಹೆಂಗಸರು ಬದಿಗೆಳೆದು ಕೂರಿಸಿ ನೀರು ಕುಡಿಸುತ್ತ ಸಮಾಧಾನಿಸುತ್ತಿದ್ದರೇ.. ಇತ್ತ ಗಂಡಸರೊಂದಿಬ್ಬರು : ಏ ಗಾಳಿಬುಡಿ ಗಾಳಿಬುಡಿ ಯಾನು ಇಲ್ಲ ನೆಡ್ರೆಯಾ ಅತ್ತಗ, ಗಾಡಿ ನೊಡ್ರೆಯಾ ಯಾರದ್ನಾರುವ, ಎಂದು ಮಂದಿಯನ್ನ ಅತ್ತಿತ್ತ ಸರಿಸಿ ಲಲ್ಲಿಯ ಸತ್ಕರಿಸಲು ಮುಂದಾದರು. ಆಕೆಯ ಅಕ್ಕ ಮುತ್ತಮ್ಮ ಅಳುತ್ತಲೆ ಗೊಟರುತ್ತಿದ್ದ ಲಲ್ಲಿಯನ್ನ ತೊಡೆಯಮೇಲೆ ಹಾಕಿಕೊಂಡು ಗಾಳಿ ಬೀಸುತ್ತಿದ್ದಳು, ಅಷ್ಟರಲ್ಲಿ ಲಲ್ಲಿಯ ಅಣ್ಣ ಅತ್ತಿಗೆ ಮತ್ತೊಬ್ಬ ಅಕ್ಕನುಬಂದು ಆಕೆ ಸತ್ತೇ ಹೋದಳೆನ್ನುವಂತೆ ಸೋಕಾಡಲಾರಂಬಿಸಿದರು. ಆ ಹೊತ್ತಿಗೆ ಸರಿಯಾಗಿ ಸೂಲಗಿತ್ತಿ ಚನ್ನಮ್ಮ ಬಂದದ್ದನ್ನ ಕಂಡು ಎಲ್ಲರು ಜಾಗಮಾಡಿಕೊಟ್ಟು ನಿಶಬ್ದರಾಗಿ ಆಕೆಯ ಆಜ್ಞೆಗೆ ಕಾದು ನಿಂತರು, ಹುಟ್ಟಿಗೆ ಸಾಕ್ಷಿಯಾಗುತ್ತಿದ್ದ ಚನ್ನಮ್ಮ ಊರಿನ ಹಲವಾರು ಸಾವಿಗೂ ಸಾಕ್ಷಿಯಾಗಿದ್ದವಳು, ಆ ಊರಿನ ನೂರಾರು ಹೆರಿಗೆ ಮಾಡಿಸಿದ್ದಂತ ಸೂಲಗಿತ್ತಿ ಒಳಿತು ಕೆಡಕಿನ ಪ್ರಥಮ ಚಿಕಿತ್ಸೆಗೂ ಮುಂದಾಗುತ್ತಿದ್ದವಳು. ಲಲ್ಲಿಯ ಪರಿಸ್ಥಿತಿ ತಿಳಿಯುತ್ತಿದ್ದಂತೆ, ಸಗಣಿ ಕಲಸಿದ ನೀರು ಕುಡಿಸುವುದು ಉಪ್ಪಿನ ನೀರು, ಜೊತೆಗೆ ಮೈ ಸೊಪಿನ ನೊರೆ ಕದರಿದ ನೀರನ್ನ ಕುಡಿಸುತ್ತ ಆಕೆ ಕುಡಿದಿದ್ದ ವಿಷ ಹೊರಕಕ್ಕಿಸಿ, ಕೈ ವುಜ್ಜಿ ಕಾಲುಜ್ಜಿ ಕೆನ್ನೆತಟ್ಟುವಂತಹ ಪ್ರಯತ್ನಗಳನ್ನ ಮಾಡಿದನಂತರದಲ್ಲಿ, ಲಲ್ಲಿ ಪಿಳಿ ಪಿಳಿ ಕಣ್ಬಿಡುತ್ತ ಮರು ಜೀವ ಪಡೆದವಳಂತಾದಳು, ಅವಳ ಅಣ್ಣ ಹಾಗು ಮತ್ತೊಂದಿಬ್ಬರು ಜೊತೆಯಾಗಿ ಸಿಕ್ಕ ಯಾರ ಯಾರದ್ದೊ ಸ್ಕೂಟರಿನಲ್ಲಿ ಆಕೆಯನ್ನ ಆಸ್ಪತ್ರೆಗೆ ಹೊತ್ತೋದರು . ವಾತಾವರಣ ಈಗಷ್ಟೆ ಜಿಟಿ ಮಳೆಬಿದ್ದು ತಟ್ಟಂತ ನಿಂತು ತಟಸ್ಥವಾದ ಸ್ಥಳದಂತಾಗಿತ್ತು.

ಬಹುತೇಕ ಎಲ್ಲರು ಲಲ್ಲಿ ಎಂದೆ ಸಂಬೋದಿಸುತ್ತಿದ್ದ ಲಲಿತಮ್ಮ ಆ ಗುಡಿಸಲಲ್ಲಿ ಅವಳವ್ವ ಕೆಂಪಮ್ಮನ ಜೊತೆ ಜೀವನ ಸಾಗಿಸುತ್ತಿದ್ದ ಇಪ್ಪತ್ತೊಂಬತ್ತು ಮೂವತ್ತರ ತುಂಬು ಯೌವ್ವನದ ಹೆಂಗಸು. ಸ್ವಲ್ಪ ಕುಳ್ಳಾದರೂ ನೋಡಲು ಸಹಜ ಸುಂದರಳಾಗಿದ್ದು ಎಲ್ಲರಿಗೂ ಇರುವಂತ ಯೌವನದ ಹೆಬ್ಬಯಕೆಗಳ ಉಗ್ರಾಣದಂತ ಮನಸ್ಸುಳ್ಳವಳು. ಹೊಸದಾಗಿ ದಕ್ಕಿದ್ದ ಊರಿನ ಪ್ರಾಥಮಿಕ ಶಾಲೆಗೆ ಬರುವ ಸಣ್ಣ ಮಕ್ಕಳ ಮೂತಿಯಮೇಲೆ ಸೋರುವ ಗೊಣ್ಣೆ ಒರಿಸುವುದು, ಕಕ್ಕಮಾಡಿಕೊಂಡವರ ಕುಂಡಿ ತೊಳೆಯುವುದರ ಜೊತೆಗೆ ಶಾಲ ಕೊಠಡಿ ಬೀಗತೆಗೆದು ಕಸಾಗೂಡಿಸುವ ಆಯ ಕೆಲಸ ದೇವರು ತನಗೆ ಕೊಟ್ಟಿರುವಂತ ವರವೆಂದೇ ಭಾವಿಸಿ ತಾನಾಯ್ತು ತನ್ನ ಕೆಲಸವಾಯಿತು ಎಂದು ಎಲ್ಲ ಮಕ್ಕಳೊಂದಿಗೂ ಪ್ರೀತಿಯಿಂದ ಮಾತನಾಡುತ್ತ, ಮಾಸ್ಟರ್ ಮೇಡಂ ತಡವಾಗಿ ಬರುವಂತ ದಿನಗಳಲ್ಲಿ ಗಲಾಟೆ ಮಾಡದಂತೆ ಗುಂಪಾಗಿ ಕೂರಿಸಿಕೊಂಡು ಬೆಣ್ಣೆ ತೂಗುವ ಕೋತಿ, ಮುರ್ಖ ಮೊಸಳೆಯ ಅತಿ ಆಸೆಯ ಸಣ್ಣಕಥೆಗಳನ್ನ ಅವಳಿಗೆ ಬರುವಂತ ರೀತಿಯಲ್ಲಿ ಹೇಳುತ್ತಿದಳು. ಶಾಲೆಗೆ ಬಾರದ ಮಕ್ಕಳನ್ನ ಮನೆಗೆ ಹೋಗಿ ಕರೆತಂದು ಕೂರಿಸುವುದು ಜೊತೆಗೆ ಇದ್ದೊಬ್ಬ ಶಿಕ್ಷಕ ಶಿಕ್ಷಕಿಯರು ಹೇಳಿದೆಲ್ಲಾ ಕೆಲಸವನ್ನ ಚಾಚುತಪ್ಪದೆ ಮಾಡುತ್ತ ಬರುತಿದ್ದ ಮೂರ್ಕಾಸು ಸರ್ಕಾರಿ ಸಂಬಳದಲ್ಲಿ ಸಾಮಾನ್ಯಬದುಕು ಕಟ್ಟುಕೊಂಡಿದ್ದಳು. ಅವಳ ಅವ್ವ ಕೆಂಪಮ್ಮ ಮಗ ಮತ್ತಿಬ್ಬರು ಹೆಣ್ಣುಮಕ್ಕಳ ಮನೆಗೆ ಆಗಾಗೋಗಿ ಬರುತ್ತಿದ್ದರೂ ಇನ್ನೂ ಲಲ್ಲಿಯ ಮದುವೆಯಾಗಿರದ ಕಾರಣ ಲಲ್ಲಿಯೊಂದಿಗೆ ಉಳಿದಿದ್ದಳು.

ಕೆಂಪಜ್ಜಿಯ ಕಿರಿಮಗಳು ಲಲ್ಲಿಯ ಬದುಕು ಇಂತಿಪ್ಪಿರುವಾಗ, ಪಾಲಿಡಾರ್ ಕುಡಿದದ್ದು ಅವಳೊಬ್ಬಳೆಯಾದರೂ ಅವಳ ಆತ್ಮಹತ್ಯೆ ಪ್ರಯತ್ನದ ಪ್ರಕರಣಕ್ಕೆ ಕಾರಣವೇನು ಎಂಬುದು ಅವರವ್ವ ಅಣ್ಣ ಅಕ್ಕಂದಿರಿಗಿಂತಲೂ ಹೆಚ್ಚಾಗಿ ಊರಾದ ಊರಮಂದಿಗೆಲ್ಲಾ ಕಾಡುವಂತ ಬಹುದೊಡ್ಡ ಪ್ರಶ್ನೆಯಾಗಿತ್ತು, ಊಹಾಪೋಹಗಳು ಬೀದಿಗೊಂದರಂತೆ ಬಳ್ಳಿಯಂತೆ ಹಬ್ಬುತ್ತಿತ್ತು. ಸರ್ಕಾರ ಬೀಳಲು ಕಾರಣವೇನು ಎನ್ನುವ ದಿಲ್ಲಿಯ ರಾಜಕಾರಣದಿಂದಿಡಿದು, ಆ ಬಚ್ಚಲಿನ ನೀರು ರಸ್ತೆಗೆ ಹರಿದು ಬಂದು ಗುಂಡಿ ತುಂಬಲು ಕಾರಣವೇನು ಎನ್ನುವ ಹಳ್ಳಿಯ ಗಲ್ಲಿ ಸಮಸ್ಯೆಯ ಕುರಿತಾದ ಮಾತುಗಳಾಡುವಂತ ಸಾರ್ವತ್ರಿಕ ಸಭಾಸ್ಥಳಗಳಾದ ಅರಳಿಕಟ್ಟೆ, ದೊಡ್ಡಟ್ಟಿ ಪಡಸಾಲೆ, ಟೀ ಅಂಗಡಿ, ಸರಾಯಿ ಗಡಾಂಗು ಹಾಗೆ ಹೆಂಗಸರು ನೀರಿಗೆ ಬಂದು ನಿಲ್ಲುತ್ತಿದ್ದ ಬೋರ್ವೆಲ್ ಹೀಗೆ ಎಲ್ಲಾಕಡೆಯು ಲಲ್ಲಿಯ ಹೆಸರಿನೊಂದಿಗೆ ಯಾರ್ಯಾರದೊ ಹೆಸರು ಸೇರಿಸಿ ಬಾಯಿಗೆ ಬಂದಂತೆ ಮಾತನಾಡಲಾರಂಬಿಸಿದರು : ಅವ್ಳ್ನ ಯಾರ ಮಾನ್ಭಂಗ ಮಾಡುದ್ನಂತ ಕಯೋ.. ಏ ಅವ್ಳೆ ಕಾಸ್ನಾಸ್ಗಾ ಯಾರ್ಗೊ ಸೆರಗಾಸಿರ್ಬೇಕು ಬಾ. ಪಾಪ ಅವ್ನೆ ಅವಳುನ್ ನಂಬ್ಸಿ ಕೈಬುಟ್ಟ್ನಂತ ಕಕೈ.. ಅಯ್ಯಾ ಅದೇನಾಗಿತ್ತೊ ಬಾ ಮೂರ್ತಿಂಗ್ಳಾಗಿತಂತ ಕಣಾ.. ಇನ್ನು ಜನ್ಕೆಲ್ಲ ಗೊತ್ತಾಗಿ ಮಾನೋಯ್ತಲ್ಲಾ ಅಂತ ಇಂಗ್ ಮಾಡ್ಕಂದಳ ಕಣಾ ಕಳ್ಮುಂಡ ಹ್ಮಮ್.. ಎಂದು ಹಸಿ ಬಿಸಿ ಮಾತುಗಳನ್ನ ಪಿಸು ಪಿಸು ಮಾತನಾಡುತ್ತ, ಅವರಿಷ್ಟಬಂದಂತೆ ವಾದ ವಿವಾದಗಳನ್ನ ಮಂಡಿಸುವಾಗ ಆ ವಿಚಾರದಲ್ಲಿ ಯಾರೊ ದೊಡ್ಡ ವ್ಯಕ್ತಿಯ ಮಗನ ಹೆಸರು ಕೇಳಿಬಂದು ವಿಷಯ ತಣ್ಣಗಾಯ್ತಾ ಬಂತು. ಅಸಲಿಗೆ ಲಲ್ಲಿಯ ಸೋದರ ಮಾವ ಊರ ಗೌಡನ ಮಗನೂ ಆದ ಚಂದ್ರನೇ ಅದಕ್ಕೆ ಕಾರಣ ಎನ್ನುವ ವಿಚಾರ ತಿಳಿದ ಮಂದಿ ಯಾವುದೇ ರೀತಿಯ ತೀರ್ಪೂ ನೀಡಲಾಗದೆ ತೆಪ್ಪಗಾದರು.

ಈ ಎಲ್ಲಾ ಪ್ರಕರಣಗಳು ತಣ್ಣಗಾಗಿ ಲಲ್ಲಿಯ ಪರಿಸ್ಥಿತಿ ಸುಧಾರಿಸಿ ಕೆಲದಿನಗಳು ಕಳೆದನಂತರದಲ್ಲಿ, ಆಕೆಗೆ ಮದುವೆ ಮಾಡಬೇಕೆಂದು ತೀರ್ಮಾನಕ್ಕೆ ಬಂದ ಅವಳ ಅಣ್ಣ ಸೋದರಮಾವ ಹಾಗೂ ಸಂಬಂದಿಕರೆಲ್ಲ, ದೂರವು ಅಲ್ಲಾ ಹತ್ತಿರವು ಅಲ್ಲದ ಊರಿನ ನಲವತ್ತು ನಲವತ್ತೈದರ ಈರಣ್ಣ ಎನ್ನುವವನಿಗೆ ಕೊಟ್ಟು ಶಾಸ್ತ್ರ ಸಂಪ್ರದಾಯದ ಪ್ರಕಾರ ಬೋರೆ ಗುಡ್ಡದ ಹನುಮಂತಪ್ಪನ ಗುಡಿಯಲ್ಲಿ ತಾಳಿಕಟ್ಟಿಸಿ ಮದುವೆ ಮಾಡಿ ಮುಗಿಸಿ ಬಿಟ್ಟರೂ. ಈ ಈರಣ್ಣನಿಗೆ ಇದು ಎರಡನೆಯ ಮದುವೆ, ಮೊದಲ ಹೆಂಡತಿ ತೀರಿಕೊಂಡಿದ್ದು ಇಬ್ಬರು ಎದೆಯೆತ್ತರಕೆ ಬೆಳೆದಿರುವ ಮಕ್ಕಳಿದ್ದರೂ ಈರಣ್ಣನ ವಯಸ್ಸು ಚಿಕ್ಕದೆಂದು ವರದಕ್ಷಿಣೆ ವರೋಪಚಾರ ವಿಲ್ಲದೆ ಲಲ್ಲಿಕೊಟ್ಟು ಮದುವೆ ಮಾಡಿದ್ದರು. ಅವನೊ.. ಅವನ ಹಿರಿಮಗನ ಮದುವೆಯ ನಂತರ ಸೊಸೆಯ ಅವ್ವ ಅಂದರೆ ಆತನ ಬೀಗತಿಯಾದ ಚಿಕ್ಕೆಣ್ಣಮ್ಮನ ಮೇಲೆ ಮನಸ್ಸಾಗಿ ಅವಳೊಂದಿಗೆ ಸಂಬಂಧ ಹೊಂದಿದ್ದ, ಅದು ಮೊದಲಿಗೆ ಅವರ ಹತ್ತಿರದ ಕೆಲವೇ ಕೆಲವು ಬಂಧುಗಳ ಹೊರತಾಗಿ ಮತ್ಯಾರಿಗೂ ಗೊತ್ತಿರದ ಗುಟ್ಟಾಗಿತ್ತು ಆದರೆ.. ಈ ಲಲ್ಲಿಯೊಂದಿಗೆ ಮದುವೇಯಾದ ನಂತರದಲ್ಲಿ ಊರ ಮಂದಿಗೆಲ್ಲಾ ವಿಚಾರ ಜಗತ್ಜಾಹೀರಾಗಿ, ಈ ಈರಣ್ಣ ಹಾಗೂ ಚಿಕ್ಕೆಣ್ಣಮ್ಮನ ಸಂಬಂಧಕ್ಕೆ ಅದೇನು ಹೆಸರು ಕೊಡುವುದು ಎಂದುʼ ಎರಡು ಮೂರೂರ ಜನರು ಕಕ್ಕಾ ಬಿಕ್ಕಿಯಾಗಿದ್ದರು. ಚಿಕ್ಕೆಣ್ಣಮ್ಮನಿಗೂ ಬುಜದೆತ್ತರಕ್ಕೆ ಬೆಳೆದ ಮಗಳು ಮಗನಿದ್ದರೂ ಗಂಡತೀರಿಕೊಂಡ ಮೇಲೆ ಏಕಾಂಗಿಯಾಗಿ ಯಾಕೆ ಬದುಕಬೇಕು ಅಂತಲೊ ಗಂಡಸು ದಿಕ್ಕಿಲ್ಲದ ಮನೆ ಎನ್ನುವ ಕಾರಣಕ್ಕೊ ವಯಸ್ಸಲ್ಲದ ವಯಸ್ಸಲ್ಲಿ ಸಮಾಜ ವಿಜ್ಞಾನ ಯಾವುದರ ಬಗ್ಗೆಯೂ ಕಿಂಚಿತ್ತು ಚಿಂತಿಸದೆ ಈರಣ್ಣನೊಂದಿಗೆ ಸಂಬಂಧ ಬೆಳೆಸಿಳಿದ್ದಳು. ಅಕ್ರಮ ಎನಿಸಿಕೊಳ್ಳುವ ಆ ಸಂಬಂದ ಕೆಲವರಿಗೆ ಘೋರ ಎನಿಸಿ ಈರಣ್ಣನಿಗೆ ಬುದ್ದಿಮಾತೇಳಿದ್ದರೂ ಅದರ ಬಗ್ಗೆ ಕಿಂಚಿತ್ತು ಯೋಚಿಸರಲಿಲ್ಲ, ಆದರೆ : ಲಲ್ಲಿ ತವ್ ಇಲ್ಲದ್ದ ಅವಳ್ತವ್ ಏನ್ ಕಂಡಿದನು ಬಡ್ಡೈದ. ಎಂದು ಊರಿನ ಹಿರಿಯ ಮಂದಿ ಮಾತಾಡಿಕೊಳ್ಳುವುದಲ್ಲದೆ ಪಂಚಾಯ್ತಿಮಾಡಿ ಈರಣ್ಣನು ಲಲ್ಲಿಯೊಬ್ಬಳೊಂದಿಗೆಯೇ ಬಾಳಬೇಕು ಎನ್ನುವ ತೀರ್ಮಾನಗಳಾದವು, ಈರಣ್ಣನು ಒಪ್ಪಿಕೊಂಡಿದ್ದ ಆದರೆ ಕೆಲದಿನಗಳ ನಂತರ ನಾಯಿ ಬಾಲ ಡೊಂಕೆ ಎನ್ನುವ ಗಾದೆ ಮಾತಿನಂತೆ ಈರಣ್ಣ ಚಿಕ್ಕೆಣ್ಣುಮ್ಮನ ಸಹವಾಸ ತೊರಯದೆಯೆ ಅಲ್ಲೆರಡು ದಿನ ಇಲ್ಲೆರಡುದಿನ ಕಾಲ ಕಳೆಯುತ್ತಿದ್ದ.

ಹೀಗೆ ಲಲ್ಲಿಯ ಬದುಕು ಆಡಿಕೊಳ್ಳುವವರ ಬಾಯಿಗೆ ಮಾತಾಗಿತ್ತೆ ವಿನಹಃ ಜೀವನದ ಯಾವುದೇ ರೀತಿಯ ಸುಖ ಸಂತೋಷಕ್ಕೆ ದಾರಿಯಾಗರಲಿಲ್ಲ.. ಅವಳ ಬದುಕೊಂದು ಪಾಪಸ್ ಕಳ್ಳಿಗುತ್ತಿಯಲ್ಲಿ ಹರಳಿದ ಡೇರಿ ಹೂವಿನಂತಾಗಿತ್ತು, ಮನಸ್ಸು ಕೊಟ್ಟವನು ಕೈ ಹಿಡಿಯಲಿಲ್ಲಾ, ಕೈ ಹಿಡಿದವನು ಮನಸ್ಸು ಕೊಡಲಿಲ್ಲ. ಅವಳಿಗೂ ಮನಸಿದೆ ಆಸೆ ಕನಸಿದೆ ಎನ್ನುವ ವೇದನೆಯಿರಲಿ ಭಾವನೆಯೆ ಯಾರಿಗೂ ಅರ್ಥವಾಗಲಿಲ್ಲ. ಮದುವೆಯಾಗಿ ವರ್ಷಗಳೆ ಕಳೆದರು ಲಲ್ಲಿಯ ಬದುಕಲಿ ಯಾವುದೇ ರೀತಿಯ ಕಳೆಕಟ್ಟದಂತಿತ್ತು. ಬರುತ್ತಿದ್ದ ಸಂಬಳದ ದೆಸೆಯಿಂದಲೊ ಏನೋ ಈರಣ್ಣ ಆಗೀಗೊಮ್ಮೆ ಜಾತ್ರೆ ತೇರಿನಂತೆ ತೇಲಿಬಂದು ನಶಾ ಇಳಿಸಿಕೊಂಡು ಜೇಬು ತುಂಬಿಕೊಂಡು ಹೋಗುತ್ತಿದ್ದನೆ ಹೊರತು ಪ್ರೀತಿಯ ಮಾತುಗಳಾಗಲಿ ಮಧುರ ಬಂಧವಾಗಲಿ ಸುಳಿಯಲಿಲ್ಲ. ಯಾರಿಗೂ ಬೇಡವಾದಂತ ಬದುಕು ಅವಳದ್ದಾಗಿ.. ಒಂದೇ ಊರಲ್ಲಿದ್ದರೂ ಎಂದೋ ದೂರವಾಗಿರುವ ಅಣ್ಣ ಅತ್ತಿಗೆ, ಆಗೀಗ ಬಂದೊಗೊ ಅಕ್ಕಂದಿರು, ವಯಸ್ಸಾದ ಅವ್ವನೊಂದಿಗೆ ಹೇಳಿಕೊಳ್ಳಲಾಗದಂತ ಒಂದಷ್ಟು ವೇದನೆ ಮನಸಿನಲಿ ಮರಗಟ್ಟುತ್ತಲಿತ್ತು. ಆಗೀಗ ಶಾಲೆಯಲ್ಲಿ ಮಂಕುಬಡಿದಂತೆ ಕೂತಾಗ : ಯಾಕ್ ಲಲಿತಮ್ಮ ಬೇಜಾರಿದ್ದೀ ಆರಾಮಿದ್ದೀಯಿಲ್ಲೊ ಎಂದು ಮಾತನಾಡಿಸುತ್ತಾ ಆಕೆಯ ನೋವು ಹಂಚಿಕೊಳ್ಳುತ್ತಿದ್ದ ಚಂಚಲ ಟೀಚರ್ಗೂ ಟ್ರಾನ್ಸವರ್ ಆರ್ಡರ್ ಬಂದಿತು, ಲಲ್ಲಿ ಮದುವೆಯಾದಾ ಹೊಸದರಲ್ಲಿ ಶಾಲೆಗೆ ದೂರದ ಚಳ್ಳಕೆರೆಯಿಂದ ಟ್ರಾನ್ಸವರ್ ಆಗಿ ಬಂದಿದ್ದ ಚಂಚಲಾ ಮೇಡಂ, ಬಹಳ ಆಪ್ತರು ಎನಿಸಿ ಒಂದಷ್ಟು ವಿಚಾರಗಳನ್ನ ಹಂಚಿಕೊಳ್ಳುತ್ತಿದ್ದಳು, ಆದರೇ ಈಗ ಅವರೂ ಟ್ರಾನ್ಸವರ್ ಆದರಲ್ಲ ಎಂದು ಚಿಂತಿಸುವಾಗಲೇ.. ಮೂರ್ನಾಲ್ಕು ದಿನಗಳಿಂದ ಸೂಲು ದಮ್ಮು ಎಂದು ಆಸ್ಪತ್ತ್ರೆಗೆ ಹೋಗಿಬಂದು ಮಗನ ಮನೆಯಲ್ಲಿ ಮಲಗಿದ್ದ ಕೆಂಪಮ್ಮ ಮಧ್ಯರಾತ್ರಿ ಒಮ್ಮೆಯೊನೊ ಇದ್ದಕ್ಕಿಂದಂತೆ ಉಬ್ಬಸ ಹೆಚ್ಚಾಗಿ ತೀರಿಕೊಂಡಳು.

ಆ ಘಟನೆ ಲಲಿತಮ್ಮನನ್ನ ಮತ್ತಷ್ಟು ಚಿಂತಾಜನಕ ಸ್ಥಿತಿಗೆತಳ್ಳಿತು..ವಯೋಸಹಜ ಮರಣಹೊಂದಿದ ಕೆಂಪಮ್ಮನಿಗೆ ಮಾಡಬೇಕಿದ್ದ ಎಲ್ಲಾ ಕಾರ್ಯಗಳು ಮುಗಿದವು, ಚಂಚಲ ಮೇಡಂ ಕೂಡ ಲಲ್ಲಿಯಿಂದ ದೂರವಾದರೂ, ಲಲಿತಮ್ಮ ನಿಜಕ್ಕೂ ಏಕಾಂಗಿಯಾಗಿಯಾದಳು, ದಿನಗಳು ಕಳೆದಂತೆ ಖಿನ್ನತೆಗೆ ಒಳಗಾಗುತ್ತ ಜೀವನುತ್ಸಾಹವನ್ನೆ ಕುಗ್ಗಿದಳು. ಸ್ಥಿತಿ ಒಡೆಯನಿಲ್ಲದ ಕುಂಟು ಕುದುರೆಯ ಒಂಟಿ ಜೀವನದಂತಾಯ್ತ, ಯಾರೊಂದಿಗೂ ಎಲ್ಲೂ ಹೆಚ್ಚು ಮಾತನಾಡದೆ ಮೌನಿಯಾಗಿರುತ್ತಿದ್ದ ಲಲಿತಮ್ಮನಿಗೆ ತನ್ನೆಲ್ಲ ಘಟ್ಟದ ನೋವಿನ ಪರಿಸ್ಥಿಗಳು ಕಾಡತೊಡಗಿದವು, ಒಮ್ಮೊಮ್ಮೆ ಮನೆ ಶಾಲೆಗೆ ಮಗು ಕರೆತರಲು ಹೋದ ಯಾರದೋ ಮನೆಯ ಪಡಸಾಲೆಗಳಲ್ಲಿ ಕೂತಲ್ಲೆ ಕೂತು ನಿಂತಲ್ಲೆ ನಿಂತು ಕಳೆದು ಹೋಗುತ್ತಿದ್ದಳು, ಅವಳ ಬದುಕಲ್ಲಿ ಇಷ್ಟೆಲ್ಲ ಘಟನೆಗಳು ನೆಡೆದ ಆ ನಂತರದ ದಿನಗಳಲ್ಲಿ ಅವಳು ಬದಲಾಗಿ ಶಾಲೆಯ ಮಕ್ಕಳ ಸದ್ದು ಆಕೆಗೆ ಸಂತೆಯ ಸದ್ದುಗದ್ದಲಗಳಿಗಿಂತಲೂ ಹೆಚ್ಚಾಗಿ ಕೇಳುವಂತೆನಿಸಿ ಸಿಡುಕುತ್ತಿದ್ದಳು. ಜನರೊಂದಿಗೆ ಮಾತು ನಿಲ್ಲಿಸಿ, ಶಾಲೆಯ ಆವರಣಕ್ಕೆ ಬರುತಿದ್ದ ದನಕರು ಆಡು ಕುರಿ ನಾಯಿಮರಿಗಳೊಂದಿಗೆ ಮಾತನಾಡುವುದನ್ನ ನೋಡಿ ಮಕ್ಕಳು ನಗುತ್ತಿದ್ದರು.

ಪ್ರತಿನಿತ್ಯದಂತೆಯೆ ಆ ದಿನ ಲಲಿತಮ್ಮ ತನ್ನ ಗುಡಿಸಲ ಅಜಾರಾದಲ್ಲಿ ಯಾರಿಗೊ ಕಾದು ಕುಂತವಳಂತೆ ಜಡ್ಡು ನೋಟ ಬೀರುತ್ತ ಕತ್ತಲಾದರೂ ಕೂತಲ್ಲೆ ಕೂತ್ತಿದ್ದಳು, ದಾರಿಯಲ್ಲಿ ಹೋಗುತ್ತ್ತಿದ್ದ ಚನ್ನಮ್ಮ ಕಂಡವಳೆ ಬಂದು - ಲಿಲ್ಲ್ಯೆ ಇದ್ಯಾಕ ಈಗ್ ನೆಟ್ಕಲ್ಲಂಗ್ ಕೂತಿದೈ ವಲ ಅಸ್ಸಿದಯಾ..? ಲಲ್ಲಿಗೆ ಕಣ್ಣೀರು ಒತ್ತಿರಿಸಿ ಬಂದಾಂತದರು ಬಿಗಿ ಹಿಡಿದು ಮ್ ಇನ್ನೂ ಇಲ್ಲ ಕಣ್‌ ಬಕ್ಕೈ ಸುಮ್ಮುನ್ ಕೂತ್ಕಂದಿಕಣ. ಎಲ್ಯಾ ಈರಣ್ಣ ಕಾಣದೇ ಇತ್ತಿತ್ಲಗ, ಬಿಡು ನಿಂಗ್ಯಾಕ್ ನೋ ಮಾಡದು, ನೋಡು ಬಂದ್ರ ಒಂದೊತ್ತಿಕ್ಕು ಇಲ್ವ ನಿನ್ನಪಾಡುಗ್ ನಿನ್ನ ಕಥ ಮಾಡು. ಲಲ್ಲಿಗೆ ಕಣ್ಣಿರ ಕೋಡಿ ಅರಿಯುತ್ತಾ , ಅಕ್ಕೈ ಚೆನ್ನಕ್ಕ ಯಾತಿಕಾಗ್ಯಾ..?. ಅವ್ವೈ ಅಂಗಂದ್ರೇನಾ..?, ಥೋ ಯಾಕವ್ವ. ಚನ್ನಕ್ಕ ನೀ ಯಾಕ್ ನನ್ನ ಉಳಿಸ್ದ್ಯವ್ವೈ, ಯಾತಿಕ್ಯಾ ಈ ಬದುಕು. ಬೇಡ ಕವ್ವೈ ಈ ಜಲ್ಮ, ಥೂ ಬುಡ್ತು ಅನ್ನು, ಸಮಾಧನ ಮಾಡ್ದ. ಬದ್ಕು ಅಂದ್ರ ಇಂಗೆಕಣಾ ಒಬ್ಬೊಬ್ರುದೊಂತರ, ಈಗ ನನ್ನೇ ನೋಡು ಕಟ್ಕಂದವ ಹೊಟ್ಟಲೊಂದು ಉಳಬುಟ್ಟು ಅದುಟ್ಟಕೂ ಮುಂಚೆ ಕಣ್ಮುಚ್ಕಂದ, ನಾನು ಅವ್‌ ಒದ್ನಾ ಅಂತ ಸುಮ್ಮುನ್‌ ಕೂತ್ಕಂದಿದ್ರ ಆಗದ, ಊರ್‌ ಮಂದಿ ರತ್ತನೆಲ್ಲ ಮೊಳ್‌ ಗಂಟಿಸ್ಕಂದು, ಹುಟ್ಟ ಕೂಸ್ಗಳ ಅಂಗೈಲ್‌ ಆತ್ಗತಾ ಕಳ್ಳ್‌ ಕೂದ್‌ ಗಂಟಾಕ್ದಾ ಭಗವಂತ ತೋರ್ಸುದ್‌ ದಾರಿಲಿ ನೆಡ್ಕ ಬರ್ನಿಲ್ವ ನಾನು, ಅವ್‌ ಕೊಟ್ಟಿರ ಜಲ್ಮ, ಅವ್ನಾಗಿದ್‌ ಅವಾ ಕರೆಯಗಂಟ ನಮ್ಮ ಕಥ ನಾವ್‌ ನಾವ್‌ ನೋಡ್ಕಂದ್‌ ಬಂದಂಗ್‌ ಬದ್ಕಬೇಕು ಅಷ್ಟೆ. ಅವತ್ತು ಅವಾ ಕರ್ದಿದ್ದ ಅನ್ಸುತ್ತ ಕವೈ ನೀಯಾಕ್‌ ನನ್‌ ತಡ್ದಾ. ಪುನಾ ನೋಡು ಅವ್ಳ.. ಬತ್ತಿನ್‌ ತಾಡಿ ದೀಪ ಅಸ್ಸಿಲ್ಲ, ಉಳ್ಳಿ ಉದ್ಕ ಮಾಡಿನಿ ತತೀನ್‌ ತಾಡು. ಎಂದು ಮಂಡಿ ಮೇಲೆ ಕೈ ಊರಿ ಎದ್ದು ಹೊರಟಳು.

ಕವಳದಲ್ಲಿ ಊರು ತನ್ನಪಾಡಿಗೆ ತನ್ನಂತಿತ್ತು, ಚಂದಿರನು ಕಣ್ತೆರೆದು ಎಲ್ಲವನ್ನೂ ನೋಡುತ್ತ ನಿಂತಿದ್ದರೇ ಕಾರ್ಮೋಡಗಳೆಲ್ಲ ಎತ್ತಲೋ ಓಡುತ್ತಿದ್ದವು. ಚನ್ನಮ್ಮ ಲಲ್ಲಿಯನ್ನ ನೆನದೆ ಅವಳ ಕಷ್ಟಸುಖಕ್ಕೆ ಅಂತ ಯಾರಾದ್ರೂ ಇದ್ದಿದ್ದಿದ್ರ ಚೆನ್ನಾಗಿರದು, ಎಲ್ಲಾ ಅವನಾಟ. ಎಂದುಕೊಳ್ಳುತ್ತ ಇಂದು ತಾ ಕಂಡ ಲಲ್ಲಿಗೆ ಸಮಾಧಾನಿಸುವುದಲ್ಲದೇ ತಾನು ಮಾಡಿದ್ದ ಅಡಿಗೆಯನ್ನು ಅವಳಿಗೆ ಕೊಟ್ಟು ಒಂದಷ್ಟತ್ತೊ ಕೂತು ಮಾತಾಡಿಸಿ ಸಮಾಧನಿಸುವ ಎಂದು ತಟ್ಟೆಯೊಂದನ್ನ ಕೈಯಲ್ಲಿಡಿದು ಅರ್ದ ರಾಗಿಮುದ್ದೆ ಒಂದು ಲೋಟದಲ್ಲಿ ಉಳ್ಳಿ ಉದಕವ ಸೆರಗು ಮುಚ್ಚಿ ತಂದಳು. ಲಲ್ಲಿ.., ಏ ಲಲ್ತಿ.., ಎಂದೂ ಕೂಗಿದರೂ ಸದ್ದಾಗಲಿಲ್ಲ, ತೆರೆದೇ ಇದ್ದ ಬಾಗಿಲ ಗುಡಿಸಲ ಒಳಬಾಗಕ್ಕಿಟ್ಟು ಬಾಗಿಲೆಳೆದು ಕೊಳ್ಳುತ್ತ, ಬಾಗುಲ್ನೂ ಆಕ್ದೆ ಇತ್ತಲ್‌ ದಿನ್ಕೇನ ಹೋಗಳಲ ಮುಂಡ, ಎಂದು ಕೊಳ್ಳುತ್ತ ಹಿಂದಿರುಗಿದಳು. ನಂತರದ ದಿನ ಬೆಳಿಗ್ಯೆ ಎದ್ದು ಕೈಯಲ್ಲಿ ಚಂಬು ಹಿಡಿದು ಹಾಲು ತರಲು ಹೊರಟಿದ್ದ ಚನ್ನಮ್ಮ, ಲಲ್ಲಿಯ ಗುಡಿಸಲ ಬಳಿ ಬಂದವಳೆ ಲಲ್ಲಿ ಎಂದೂ ಕೂಗಿದಳು, ಉತ್ತರ ಬರದೆ ಇದ್ದಾಗ ಗುಡಿಸಲ ಬಳಿ ಹೋಗಿ ಬಾಗಿಲು ತಳ್ಳಿದಳು, ರಾತ್ರಿ ಆಕೆ ಇಟ್ಟಿದ್ದ ಜಾಗದಲ್ಲಿ ಹಿಟ್ಟಿದ್ದು ಇರುವೆ ಮುತ್ತಿದ್ದವು. ಎನಾ ಇದೇನವ ಇದು, ಅಂತ ಗುಡಿಸಲನ ಹುಡಿಕಿದರೂ ಲಲ್ಲಿಯ ಕಾಣಲಿಲ್ಲ.

ಆ ಊರಲ್ಲಿ ಹುಟ್ಟಿ ಬೆಳೆದ ಲಲಿತಮ್ಮ ಹೀಗೆ ಒಂದು ದಿನ ಇದ್ದಕ್ಕಿದ್ದಂತೆ ಕಾಣೆಯಾದಳು. ಆಕೆ ಅದೆಲ್ಲಿ ಮಾಯವಾದಳೊ ಅಡಗಿಕೊಂಡದ್ದಾಳೊ ಬದುಕಿದ್ದಾಳೊ ಇಲ್ಲವೊ ಎಂಬುದೆ ಯಾರಿಗೂ ತಿಳಿಯದಂತ ವಿಸ್ಮಯ ವಿಚಾರವಾಗಿ ಹೋಯ್ತು, ಆದರೆ ಈ ಘಟನೆ ನೆಡೆದು ಎಷ್ಟೊ ವರ್ಷಕಳೆದು ಹೋಗಿದ್ದರು ಇಂದಿಗೂ ಒಂದಷ್ಟು ಮಂದಿ.. ಹೀಗೆ ಕಳೆದುಹೋದ ಲಲಿತಮ್ಮ ನಾಲೇಗೆ ಜಿಗಿದು ತೀರಿಕೊಂಡಳಂತೆ. ಇಲ್ಲಾ ಆಕೆ ಚಂಚಲಾ ಟೀಚರ್ ಊರಿನಲ್ಲೆಲ್ಲೊ ಹೊಸ ಬದುಕು ಕಟ್ಟಿಕೊಂಡಿದ್ದಾಳಂತೆ ಎನ್ನುತ್ತಾರೆ. ಇನ್ಕೆಲವರು ಇಲ್ಲಾ ಆಕೆ ಬೆಂಗಳೂರಿನಲೆಲ್ಲೊ ಬದುಕಿದ್ದಾಳಂತೆ ಎನ್ನುವ ಅಂತೆಕಂತೆಗಳ ಮಾತನಾಡುತ್ತಾರೆ.. ನಿಜಕ್ಕೂ ಅಂದಿನಿಂದ ಇಂದಿನವರೆಗೂ ಲಲಿತಮ್ಮ ಳನ್ನ ಕಣ್ಣಾರೆ ಕಂಡವರಂತು ಯಾರು ಇಲ್ಲ. ಆದರೆ ಹೀಗೆ ಯಾರಿಗೂ ಬೇಡವಾದ ಕಿರುಗ್ರಾಮದ ಸರ್ಕಾರಿ ಶಾಲೆಯ ಆಯಾ ಲಲಿತಮ್ಮ ಆ ಊರಿನ ಟೀ ಅಂಗಡಿಯಲ್ಲೊ ಅರಳಿಕಟ್ಟೆಯಲ್ಲೊ ಹೊಲಗದ್ದೆಯ ಕೆಲಸದಲ್ಲೊ ತಲೀನರಾಗಿ ಮಾತುಮೇಯೊ ಗಂಡಸು ಹೆಂಗಸರ ಮಾತಿನಲ್ಲಿ ಇಂದಿಗೂ ಕಣ್ಮರೆಯಾಗಿದ್ದರೂ ಕಾಣಿಸಿಕೊಳ್ಳುತ್ತಾಳೆ.

ಶಿವರಾಜ್ ಡಿ.ಎನ್.ಎಸ್

ಶಿವರಾಜ್ ಡಿ.ಎನ್.ಎಸ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ದಾಸನಹುಂಡಿಯವರು. ಬರಹ-ಓದು-ನಟನೆ ಹಾಗೂ ಛಾಯಾಗ್ರಹಣ ಅವರ ಹವ್ಯಾಸ. ಕಲರ್‍ಸ್ ಕನ್ನಡದ ‘ಕಾಮಿಡಿ ಕಂಪನಿ’ಶೋ ನಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ಅವರ ಆಸಕ್ತಿ ಕ್ಷೇತ್ರ.

More About Author