Poem

ಖುದಾ ಹಫೀಜ್

ಬನ್ನಿ ಹುಡುಗಿಯರೇ,
ಇಗೋ ಇದು ನಿಮಗೆ ಸ್ವಾಗತ
ನಿಮ್ಮ ಆವಾಸ ಸುಖಕರವಾಗಿರಲಿ ಎಂದು ಆಶಿಸುತ್ತೇವೆ
ಹಾಗೇ ನೀನು ನೀನಾಗಿರಬಹುದು
ಯಾವ ಸಂಕೋಚವೂ ಬೇಡ
ಹಾಂ,
ನೆನಪಿರಲಿ ಇರುವಿಕೆ ಕೂಡ
ನಮ್ಮದೇ ರೀತಿಗನುಗುಣವಾಗಿರಲಿ

ಹುಳುವಿನಿಂದ ಚಿಟ್ಟೆಯಾದ ನಿನ್ನದೇ
ಬಣ್ಣದ ಕಣ್ಣನ್ನು ಪ್ರೀತಿಸಲು ಮರೆಯದಿರು
ಹಾಂ,
ಈಟೀಟೇ ಅಕ್ಕರೆ ತೋರಿಸಿರಿ ಅಷ್ಟೇ
ಹುಷಾರ್!
ಮುಗಳ್ನಕ್ಕರೆ ಚುಡಾಯಿಸುವರು
ಮುಖಸಿಂಡರಿಸಿದರೆ
ಅಯ್ಯೋ, ಮೂದೇವಿ ಅಂತ ಬೇರೆ

ಯಾರೊಂದಿಗಾದರೂ ಮೋಹದಲ್ಲಿ ಬೀಳಬಹುದು
ಮತ್ತೆ ಅದು ನಾವೇ ಆಯ್ಕೆ ಮಾಡುವವರೊಂದಿಗೆ
ಅಭಿಮತಕ್ಕೆ ಅವಕಾಶವಿದೆ ಬಿಡಿ
ನಮ್ಮದೇ ವಿಚಾರಕ್ಕೆ ತಕ್ಕಂತೆ ತಿದ್ದಿ ತೀಡಬೇಕು ಅಷ್ಟೇ
ಬರೆಯಿರಿ, ಓದಿರಿ
ಧ್ವನಿ ಮಾತ್ರ ಸೂರೊಳಗೆ ಸುರುಳಿ ಹೊಡೆಯಲಿ ಶಬ್ದದಲೆಯೇನಾದರೂ ಹೊರಗಲೆದರೆ
ಕೆಲಸಕ್ಕೆ ಬಾರದ್ದು ಬೇವರ್ಸಿ
ಶ್... ಸದ್ದು!

ಖಂಡಿತ ಹಾದಿ ತಪ್ಪುವುದಿಲ್ಲ
ನಿಮ್ಮ ಹೆಜ್ಜೆ ಮಾತ್ರ
ನಮ್ಮ ಕಿರುಬೆರಳ ಇಶಾರೆಯಲಿರಲಿ

ಬನ್ನಿ ಹುಡುಗಿಯರೇ,
ಇಗೋ ಇದು ನಿಮಗೆ ಸು-ಸ್ವಾಗತ
ಆದರೆ ಒಂದು ಶರತ್ತು
ಇಲ್ಲಿಗೆ ಬಂದ ನೀವು ಈ ಸಿಸಿಟಿವಿಯ
ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ!

ಖುದಾ ಹಫೀಜ್...

- ಚೈತ್ರಾ ಶಿವಯೋಗಿಮಠ

ವಿಡಿಯೋ
ವಿಡಿಯೋ

ಚೈತ್ರಾ ಶಿವಯೋಗಿಮಠ

ಕವಯತ್ರಿ ಚೈತ್ರಾ ಶಿವಯೋಗಿಮಠ ಮೂಲತಃ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದವರು. ಪ್ರಸ್ತುತ ಬೆಂಗಳೂರಿನ ವಾಸವಿದ್ದಾರೆ.  ವಿಟಿಯು ವಿಶ್ವವಿದ್ಯಾಲಯದಿಂದ ಎಂಟೆಕ್ ಪದವೀಧರರು. ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಓದು ಬರಹ, ನಿರೂಪಣೆ ಅವರ ಹವ್ಯಾಸ. ನಾಡಿನ ಮುದ್ರಣ ಹಾಗೂ ಡಿಜಿಟಲ್ ಪ್ರತ್ರಿಕೆಗಳಲ್ಲಿ ಇವರ ಕವನ-ಬರಹಗಳು ಪ್ರಕಟವಾಗಿವೆ. 

 

More About Author