Poem

ಕೊನೆಗೆ ಒಂದಿಷ್ಟು ಪರ್ಸನಲ್...

ನಮ್ಮನ್ನೆಂದೂ ಕಾಣಲಾರದಂತೆ
ನಮ್ಮನ್ನೆಂದೂ ಸೋಕಲಾರದಂತೆ
ಬಂಧಿಯಾಗಿಸಿದ್ದಾರವನ ಗುಡಿಗಳಲ್ಲಿ.

ಪಾಪ! ಕಾಣಲಾರರವರು.....

ನಮ್ಮ ಅಶುದ್ಧ ಕಾಯ
ನಿತ್ಯ ನದಿಗಳಲ್ಲಿ
ಮಿಂದ ನೀರಿನಲ್ಲೇ,
ಮಿಯುವ ಅವನು
ಸದಾ ಪುಳಕಿತ.

ನಮ್ಮ ಕಲುಷಿತ ದೇಹ
ನಿತ್ಯ ಉಸಿರಾಡಿದ ಗಾಳಿ
ಅವನ ನಾಸಿಕದಿಂದ
ನಾಭಿಯವರೆಗೂ ಇಳಿದು
ಅವನ ಜೀವ ವಿಕಸಿತ.

ನಮ್ಮ ಅಪವಿತ್ರ ಕೈಗಳಿಂದ
ಕಟ್ಟಿದ ಹೂಮಾಲೆ
ನಿತ್ಯ ಅವನನಲಂಕರಿಸುವ
ಸುಗಂಧದಿಂದ ಮತ್ತ
ಅವನು ಮಂದಸ್ಮಿತ.

ಅಮಂಗಳೆಯರು ನಾವೇ
ಹೊಸೆದ ಬತ್ತಿಯಲಿ
ನಿತ್ಯ ದೀಪಾರತಿಗೊಳುವ ಅವನು
ಸದಾ ಪ್ರಸನ್ನಚಿತ್ತ.

ಪ್ರತಿಕ್ಷಣ ಹೀಗವನ ಸೋಕಿ.....
ಪವಿತ್ರರಾಗುವ ನಾವು
ನಿತ್ಯವೂ ಮಡಿ!
ಅವನು ಮೈಲಿಗೆ!

ಇಂತಿಪ್ಪ...
ಶಿವಶಿವೆಯರ ಸಮ್ಮಿಲನದ
ಕುರುಹುಗಳು ಇಳೆಯೊಳಗಿವೆ
ಹೆಜ್ಜೆಹೆಜ್ಜೆಗೆ.....

- ರೂಪಾ ಹಾಸನ

ರೂಪ ಹಾಸನ

ರೂಪ ಹಾಸನ ಅವರು ಮೂಲತಃ ಮೈಸೂರಿನವರು. ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಗಳಿಗೆ ಬಟ್ಟಲ ತಿರುವುಗಳಲ್ಲಿ (ಕಿರುಪದ್ಯಗಳ ಸಂಕಲನ)  , ಕಡಲಿಗೆಷ್ಟೊಂದು ಬಾಗಿಲು, ಲಹರಿ ,  ಮಹಿಳೆ ಮತ್ತುಆಧುನಿಕತೆಯ ಸವಾಲುಗಳು,  ಹೇಮಯೊಡಲಲ್ಲಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಡಾ. ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ 2000, ಶಿವಮೊಗ್ಗದ ಕರ್ನಾಟಕ ಸಂಘ, ನೀಲಗಂಗಾದತ್ತಿ ಪ್ರಶಸ್ತಿ 2010, ಕನ್ನಡ ಸಾಹಿತ್ಯ ಪರಿಷತ್ತು. ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ 2000, ಹರಿಹರ ಶ್ರೀ ಪ್ರಶಸ್ತಿ 2010, ಸೇಡಂನ ಅಮ್ಮ ಪ್ರಶಸ್ತಿ 2010, ಡಿ.ವಿ.ಜಿ. ಸಾಹಿತ್ಯ ಪ್ರಶಸ್ತಿ 2001, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ 2001, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ 2000 ಗೊರೂರು ಸಾಹಿತ್ಯ ಪ್ರತಿಷ್ಠಾನ, ಸುಶೀಲಾ ಎಸ್.ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, 2005, ಕಾವ್ಯಾನಂದ ಪ್ರಶಸ್ತಿ 2005, ಹಾ.ಮಾ.ನ. ಪ್ರಶಸ್ತಿ 2008 ಶಿವಮೊಗ್ಗ ಕರ್ನಾಟಕ ಸಂಘದಿಂದ ಪ್ರಶಸ್ತಿ ದೊರಕಿದೆ.

 ಹಲವು ಭಾಷೆಗಳಿಗೆ ಕವಿತೆಗಳು ಭಾಷಾಂತರಗೊಂಡಿವೆ. ಮಹಿಳೆ ಮಕ್ಕಳು ಶಿಕ್ಷಣ ಪರಿಸರ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯದ ನೆಲೆ ಹಾಸನ.

More About Author