Story

ಕೊಪಿನಾ

ಕಾ.ವಿ. ರಮೇಶ್ ಕುಮಾರ್ ಅವರು ಬೆಂಗಳೂರಿನವರು. ಪದವಿ ಶಿಕ್ಷಣವನ್ನು ಪಡೆದಿರುತ್ತಾರೆ. ಬೆಂಗಳೂರಿನ ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ನಲ್ಲಿ ಚೀಫ್ ಆಫೀಸ್ ಸುಪೆರಿಂಟೆಂಡಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಪ್ರಸ್ತುತ ಅವರು ಬರೆದಿರುವ ‘ಕೊಪಿನಾ' ಕತೆ.

"ಅತ್ಯಂತ ಕಿರಿಯ ವಯಸ್ಸಿನಲ್ಲಿ ಮಹಾನಗರಪಾಲಿಕೆ ಮೇಯರ್ ಆಗಿ ಅಧಿಕಾರ ಪಡೆದುಕೊಂಡ ಮೊದಲ ಸ್ತ್ರೀ ನೀವೆ. ಹೊರಗಡೆ ಅಭಿಮಾನಿಗಳ ಜಯಘೋಷ, ಕೆಳವರ್ಗದ ಹೆಣ್ಣುಮಗಳಾಗಿ ಇಂತಹ ದೊಡ್ಡ ಜವಾಬ್ದಾರಿ ಹುದ್ದೆ ಅಲಂಕರಿಸಿದ್ದೀರಿ. ಈ ಮಹಾಸಾಧನೆಯ ಬಗ್ಗೆ ಪತ್ರಕರ್ತೆಯಾಗಿ ತಿಳಿದು ಕೊಳ್ಳಬೇಕೆನ್ನುವ ಕುತೂಹಲ ನನಗೂ ಇದೆ. ಮೇಡಂ ನಾಗರತ್ನ ರವರು ದಯವಿಟ್ಟು ತಿಳಿಸಿಕೊಡಬೇಕು."

ಅಧಿಕಾರದ ಮೊದಲ ದಿನದ ಮೊದಲ ಪ್ರೆಸ್ ಮೀಟನಲ್ಲಿ ಪತ್ರಕರ್ತೆಯ ಪ್ರಶ್ನೆಗೆ ಮುಗುಳು ನಗುತ್ತಲೆ ಮೇಯರ್ ನಾಗರತ್ನ ಉತ್ತರಿಸತೊಡಗಿದರು.

"ಪ್ರತಿ ಹೆಣ್ಣು ತನ್ನ ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಳ್ಳಬೇಕು. ಸಾಧಿಸಲೇ ಬೇಕೆನ್ನುವ ಛಲ ಅವಳಲ್ಲಿ ದೃಢವಾಗಿರಬೇಕು. ಇವೆಲ್ಲದಕ್ಕೂ ಮಿಗಿಲಾಗಿ ಹೆತ್ತವರ ಪ್ರೋತ್ಸಾಹವಿರಬೇಕು, ಆಗಲೇ ಆಕೆಯ ಕಾಯಕಕ್ಕೆ ಪ್ರತಿಫಲ ಸಿಗುವುದು. ಅಂದು ನನ್ನ ತಂದೆಯವರ ಒಂದು ದಿಟ್ಟ ನಿರ್ಧಾರ ಜೊತೆಗೆ ನನ್ನ ಪ್ರೀತಿಯ ಗುರುಗಳ ಪ್ರೋತ್ಸಾಹ

ಇಂದು ನನಗೆ ಈ ಸ್ಥಾನ ಪಡೆಯಲು ಸಾಧ್ಯವಾಯಿತು."

"ಮೇಡಂ ನಿಮ್ಮ ತಂದೆಯವರ ಆ ದಿಟ್ಟ ನಿರ್ಧಾರದ ವಿಷಯವನ್ನು ತಿಳಿಸಿದರೆ, ಅದು ಬೇರೆಯವರಿಗೆ ಮಾರ್ಗದರ್ಶನ ಆಗಬಹುದು ದಯವಿಟ್ಟು ತಿಳಿಸಿಕೊಡಿ."

"ನನ್ನ ಜೀವನದಲ್ಲಿ ಮರೆಯಲಾಗದ ದಿನ ಅದನ್ನು ನಾನು ಮರೆಯುವ ಮಾತೆ ಇಲ್ಲ. ಆ ದಿನ ನೆನಪಾದಾಗಲೆಲ್ಲ ನನ್ನಲ್ಲಿ ಹೊಸ ಹುರುಪು ಉತ್ಸಾಹ ಇಮ್ಮಡಿಸುತ್ತದೆ. ಸಿಗುವ ಅವಕಾಶಗಳನ್ನು ಪ್ರತಿಯೊಬ್ಬರೂ ಉಪಯೋಗಿಸಿಕೊಳ್ಳಬೇಕು.. ಸಾಕ್ಷರತೆ ಹೆಣ್ಣಿಗೆ ದೊರೆತರೆ ಮನೆಯೊಂದು ಬೆಳಕಾಗುವದರೊಂದಿಗೆ ದೇಶದ ಪ್ರಗತಿಗೂ ಮುನ್ನುಡಿಯಾಗಿರುತ್ತಾಳೆ ಅನ್ನುವುದಕ್ಕೆ ನನ್ನ ಜೀವನ ಚರಿತ್ರೆ ಉತ್ತಮ ಉದಾಹರಣೆ."

ಪತ್ರಕರ್ತೆಯ ಬೇಡಿಕೆಗೆ ಮೇಡಂ ಮೇಯರ್ ನಾಗರತ್ನ ತಮ್ಮ ನೆನಪಿನಾಳದ ಮಾತನ್ನು ಹೇಳತೊಡಗಿದರು.

------------

ಸುತ್ತಮುತ್ತಲಿನ ಹಳ್ಳಿಗಳಿಗೆಲ್ಲ ಜನಜನಿತವಾದ ಹಾಗೂ ಜನಜಂಗುಳಿಯೊಂದಿಗೆ ಗಿಜುಗುಡುತ್ತಿರುವ ಭಾನುವಾರದ ದೇವನಗೊಂದಿ ಸಂತೆಯೆಂದರೆ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಹಬ್ಬದ ಸಡಗರವಿದ್ದಂತೆ. ವೀಳ್ಯದ ಎಲೆ, ಅಡಿಕೆ, ಕಡ್ಡಿಪುಡಿ ಮಾರಾಟ ಮಾಡಿಕೊಂಡು ಜೀವನವನ್ನು ಕಟ್ಟಿಕೊಂಡಿದ್ದ ಕೆಳವರ್ಗದ ಚಡ್ಡಿ ಪಿಳ್ಳಪ್ಪ ತನ್ನ ಹೆಂಡತಿ ನಾರಾಯಣಿಯೊಂದಿಗೆ ಭಾನುವಾರದ ಸಂತೆಯ ವ್ಯಾಪಾರವನ್ನು ಯಾವುದೇ ಕಾರಣಕ್ಕೂ ತಪ್ಪಿಸುತ್ತಿರಲಿಲ್ಲ.

ಗುಣವಂತಳು ಮತ್ತು ಬುದ್ದಿವಂತೆಯಾದ ಚಡ್ಡಿ ಪಿಳ್ಳಪ್ಪನ ಒಬ್ಬಳೇ ಮಗಳು, ತಂದೆಯ ವ್ಯಾಪಾರದಲ್ಲಿ ಕೈ ಜೋಡಿಸುವ ಆಸಕ್ತಿಯ ಜೊತೆಯಲ್ಲಿ ಶ್ರದ್ಧಾಭಕ್ತಿಯಿಂದ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಳು, ಎಲ್ಲರನ್ನು ಗೌರವದಿಂದ ಕಾಣುವ ಆಕೆ ಊರಿನ ಪ್ರೀತಿಯ ಹೆಣ್ಣು ಮಗಳಾಗಿದ್ದಳು. ಓದಿನಲ್ಲಿ ಎಲ್ಲರಿಗಿಂತಲೂ ಮುಂದಾಗಿದ್ದ ಆ ಹೆಣ್ಣು ಮಗಳನ್ನು ಊರಿನ ಹಿರಿಯರೆಲ್ಲರೂ ಪ್ರೀತಿಯಿಂದ 'ಕೊಪಿನಾ' ಎಂದೇ ಕರೆಯುತ್ತಿದ್ದರು.

ಆಗತಾನೆ ದ್ವಿತೀಯ ಪಿ ಯು ಸಿ ಪರೀಕ್ಷೆಯನ್ನು ಮುಗಿಸಿದ್ದ ಕೊಪಿನಾ ಪರೀಕ್ಷೆಯಲ್ಲಿ ತಾನು ಓದುತ್ತಿದ್ದ ಇಡೀ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿ ಪಾಸಾಗುವದರೊಂದಿಗೆ . ಮುಂದಿನ ಉನ್ನತ ವ್ಯಾಸಂಗದ ಕನಸುಗಳನ್ನು ಕಟ್ಟಿಕೊಂಡಿದ್ದಳು ಆದರೆ ಮನೆಯಲ್ಲಿ ಬಡತನದ ರೇಖೆ ಅಡ್ಡಗೆರೆಯಾಗಿತ್ತು. ಹೇಗಾದರೂ ಪ್ರಯತ್ನಿಸಿ ಓದಬೇಕೆಂಬ ಮನೋ ನಿರ್ಧಾರದಲ್ಲಿ ಅಚಲವಾಗಿದ್ದಳು.

ಭಾನುವಾರದ ಸಂತೆಗೆ ವ್ಯಾಪಾರಕ್ಕೆಂದು ಸರಕನ್ನು ಸಿದ್ಧಪಡಿಸಿಕೊಳ್ಳುತ್ತಿದ್ದ ಗಂಡನಿಗೆ ನಾರಾಯಣಿ ಸಹಾಯ ಮಾಡುತ್ತಿದ್ದಳು. ಕೊಪಿನಾ ತಾಯಿಯ ಹಿಂದೆ ನಿಂತು ಒಮ್ಮೊಮ್ಮೆ ಸೀರೆಯ ಸೆರಗನ್ನು ಹಿಡಿದು ಮೆಲ್ಲನೆ ಜಗ್ಗುತ್ತಾ ತನ್ನ ಪರವಾಗಿ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಕೇಳುವಂತೆ ಅಮ್ಮನಿಗೆ ಸನ್ನೆ ಮಾಡುತ್ತಾ ಪುಸಲಾಯಿಸುತ್ತಿದ್ದಳು.

"ಅಯ್ಯಾ, ಏನಾ ಕೇಳಿಸ್ತಾ , ಮಗಳು ಅದ್ಯಾವುದೋ ಇಂಜಿನ್ ಕೆಂಪೊದು ಅಂತೆ ಅದನ್ನ ಓದಬೇಕು ಅಂತ ಕೇಳ್ತಾವಳೆ ಏನಾರ ಹೇಳು ಸುಮ್ಕೆ ನನ್ನ ಪಾಣ ಹಿಂಡುತವಳೇ. "

ಮಗಳ ಕಾಟವನ್ನು ತಾಳಲಾರದೆ ಗಂಡನಿಗೆ ವರದಿಯನ್ನು ಒಪ್ಪಿಸಿಬಿಟ್ಟಳು ನಾರಾಯಣಿ.

"ಅಮ್ಮಾ ಅದು ಇಂಜಿನ್ ಕೆಂಪೊದು ಅಲ್ಲ., ಇಂಜಿನಿಯರಿಂಗ್ನಲ್ಲಿ ಕಂಪ್ಯೂಟರ್ ಕೋರ್ಸ್"

ತನ್ನ ತಾಯಿಯ ಮಾತುಗಳನ್ನು ಸರಿಪಡಿಸಿದಳು ಕೊಪಿನಾ.

"ನಿಮ್ಮ ಅಮ್ಮನು ಐದನೇ ಕ್ಲಾಸು ಫೇಲ್ ಆಗವಳೆ ಅದೆಲ್ಲ ಅವಳಿಗೆಲ್ಲಿ ಹೇಳಾಕೆ ಬತಾದೆ ? ಅದು ಒಂದುಕಡೆ ಇರ್ಲಿ ನಿನ್ನ ಅಷ್ಟೊಂದು ದೊಡ್ಡ ಓದು ಓದಿಸೋ ಅಷ್ಟು ಕಾಸು ನನ್ನ ಹತ್ರ ಇಲ್ಲ ಮಗಳೇ. ನಾನು ಓದಿದ್ದು ಏಳನೇ ಕ್ಲಾಸ್ ಗಂಟ. ನಿನ್ನ ಅಂಗೋ ಇಂಗೋ ಮಾಡಿ ಪಿ ಯು ಸಿ ತನಕ ಓದಿಸಿದ್ದೀನಿ, ಸಾಕು ಮಗಳೇ ಇನ್ಮುಂದಕ್ಕೆ ನನ್ನ ಕೈಲಿ ಸಾಧ್ಯ ಇಲ್ಲ."

"ಅಪ್ಪಯಾ, ನನ್ನ ಸ್ನೇಹಿತರೆಲ್ಲ ಮುಂದಕ್ಕೆ ಓದ್ತಾ ಅವ್ರೆ, ನಾನು ಇಂಜಿನಿಯರಿಂಗ್ ಓದಬೇಕು ಇದೊಂದಪ ಎಂಗಾರ ಮಾಡಿ ಓದಿಸು ಅಪ್ಪಯಾ." ಕೊಪಿನಾ ದಂಬಾಲು ಬೀಳುವಂತೆ ಕೇಳಿದಳು.

"ಅಮ್ಮಿ ನೋಡು ಅದೆಲ್ಲ ನಿಂಕ ಅರ್ಥ ಆಗಾಕಿಲ್ಲ, ಹೋದ ವರ್ಷ ಗೌಡನು ಅವರ ಮಗನ್ನ ನಿನೇಳೋ ಓದು ಓದಾಕ ಸೇರಿಸವನೆ, ಒಂದು ವರ್ಷಕ್ಕ ಒಂದೂವರೆ ಲಕ್ಷ ಅತದಂತೆ, ನಾಲ್ಕು ವರ್ಷ ಓದಬೇಕಂತೆ ಒಟ್ಟು ಆರು ಲಕ್ಷ ಆತದೆ, ತಮಾಷೇನಾ? ಎಲ್ಲಿಂದ ತರೋದು ಆಟೊಂದು ದುಡ್ಡು?. ನಮ್ಮಂತೋರ್ಗೆಲ್ಲ ಅವೆಲ್ಲ ಆಗಕಿಲ್ಲ ಬಡವ ನೀ ಮಡಿಗಿದಂಗೆ ಇರು ಅಂತ ನಾವು ಇರಬೇಕು. ಈ ವರ್ಷ ಅಂಗೆ ಕಳೀಲಿ ಮುಂದಿನ ವರ್ಷ ಒಳ್ಳೆ ಗಂಡು ನೋಡಿ ದೇವಸ್ತಾನದಾಗ ಮಾಡುವೆ ಮಾಡಿ ಕೊಡ್ತೀನಿ ಸುಮ್ಕಿರು."

"ಅಮ್ಮ ನೀ ಹೇಳೇ ಅಪ್ಪಂಗೆ ನಂಗೆ ಮದುವೆ ಬೇಡ ನಾನು ಇನ್ನೂ ಓದಬೇಕೋ." ರಚ್ಚೆ ಹಿಡಿದವಳಂತೆ ಅಮ್ಮನ ಸೆರಗನ್ನು ಜೋರಾಗಿ ಹಿಡಿದೆಳೆಯುತ್ತಾ ಕೊಪಿನಾ ಅಳತೊಡಗಿದಳು.

"ಬಾರುಕೋಲು ಎತ್ಕಂಡು ನಾಲ್ಕು ಬಾರಿಸಿಬಿಟ್ಟೇನು, ಹೇಳಿದರೆ ಅರ್ಥ ಮಾಡ್ಕಂನಂಗಿಲ್ಲ. ನಾನು ಏನೋ ಅಂಕಂಬುಟ್ಟಿದ್ದೆ, ಊಹೂ ಎಲ್ಲದೆ ಆಟೊಂದು ಗಂಟು ಓದಕಾ? ಏನೋ ಓದ್ತಾಳಂತೆ, ಹೋಗೋಗು."

ನಾರಾಯಣಿ ಗಂಡನ ಮಾತನ್ನು ಪುರಸ್ಕರಿಸುತ್ತ ಮೈಮೇಲಿನಿಂದ ಜಾರಿ ಹೋದ ಸೆರಗನ್ನು ಸರಿಪಡಿಸಿಕೊಳ್ಳುತ್ತ ಮಗಳನ್ನು ಗದರಿಸಿದಳು. ಅಮ್ಮನ ಮಾತನ್ನು ಕೇಳಿದ ಕೊಪಿನಾ ಇನ್ನೂ ಜೋರಾಗಿ ಅಳುತ್ತಾ ಮಂಡು ಹಿಡಿದವಳಂತೆ ನಿಂತಳು.

"ಓದಿದ್ದೀಯ ಅರ್ಥ ಮಾಡ್ಕಂದಿರ ಅಳ್ತಿಯಾ ಮಗಳೆ. ಊರೋರೆಲ್ಲ ನಿನ್ನ ಬುದ್ದಿವಂತಳು ಅಂತಾರೆ ಇದೇನಾ ನಿನ್ನ ಬುದ್ದಿ?. ನಮ್ಮತ್ರ ಆಸ್ತಿನೊ ಅಥವಾ ಜಮೀನೂ ಏನಾದ್ರು ಐತಾ ಮಾರಿ ಓದ್ಸನ ಅನ್ನಾಕ. ನನಗೂ ಓದಿಸಬೇಕು ಅನ್ನೋ ಆಸೆ ದೊಡ್ಡದಾಗೇ ಐತಿ, ಆದ್ರೆ ನಂಗೆ ಅಷ್ಟು ಶಕ್ತಿ ಇಲ್ಲಮ್ಮ, ವೀಳ್ಯದ ಎಲೆ, ಅಡಿಕೆ, ಕಡ್ಡಿಪುಡಿ ಮಾರ್ಕಂಡು ಜೀವನ ಮಾಡ್ತಾ ಇರೋದು. ಸಂಪಾದನೆ ಆಗೋ ಕಾಸು ಊಟ ಬಟ್ಟೆಗೆ ಸರಿಹೋಗತೈತೆ."

ಅಪ್ಪನ ಮಾತಿಗೆ ನಿರುತ್ತರಳಾದ ಕೊಪಿನಾ ಕುಸುಕುತ್ತಲೇ ನಿಂತಿದ್ದಳು. ಅಸ್ಟೊತ್ತಿಗೆ ಸರಿಯಾಗಿ ಊರಿನ ಹಿರಿಯ ವ್ಯಕ್ತಿಗಳು ಮತ್ತು ಕೊಪಿನಾ ಓದಿದ ಕಾಲೇಜಿನ ಉಪನ್ಯಾಸಕರು ಆದ ಶಂಕರಪ್ಪನವರು ಚಡ್ಡಿ ಪಿಳ್ಳಪ್ಪನ ಮನೆಗೆ ಆಗಮಿಸಿದರು. ಗುರುಗಳಿಗೆ ವಂದಿಸುತ್ತಾ ಅವರನ್ನು ಕರೆದು ಚಾಪೆಯನ್ನು ಹಾಸಿ ತಾಂಬೂಲವನ್ನು ಕೊಟ್ಟು ದಂಪತಿಗಳಿಬ್ಬರು ಆಧರಿಸಿದರು. ಅವರ ಅತಿಥಿ ಸತ್ಕಾರದ ಸಂಸ್ಕಾರವನ್ನು ಕಂಡು ಗುರುಗಳು ಸಂತಸಭರಿತರಾದರು.

"ಏನಯ್ಯ ಪಿಳ್ಳಪ್ಪ, ನಿನ್ನ ಮಗಳು ಬಹಳ ಬುದ್ದಿವಂತೆ ಕಣಯ್ಯ, ದ್ವಿತೀಯ ಪಿ ಯು ಸಿ ನಲ್ಲಿ ಚೆನ್ನಾಗಿ ಓದಿ ನಮ್ಮ ಕಾಲೇಜಿಗೆ ಫಸ್ಟ್. ಬಂದಿದ್ದಾಳೆ ಅದಕ್ಕೆ ಅಭಿನಂದನೆಗಳನ್ನು ಹೇಳೋಣ ಅಂತ ಬಂದೆ. ಇಂತಹ ಮಕ್ಕಳಿಗೆ ಪಾಠ ಹೇಳಿದ್ದಕ್ಕೆ ನಮಗೂ ಹೆಮ್ಮೆ ಅನ್ನಿಸುತ್ತೆ. ಗುರುವಾಗಿದ್ದಕ್ಕೂ ಸಾರ್ಥಕವಾಯಿತು ಅಂತ ಅನಿಸುತ್ತೆ."

"ಎಲ್ಲ ತಮ್ಮಂತಹ ಹಿರಿಯರ ಆಶೀರ್ವಾದ, ದೇವರ ದಯೆ, ನಮ್ಮ ಮಗಳು ಎರಡು ಅಕ್ಷರ ಚೆಂದಾಗಿ ಕಲಿತು ಕೊಂಡಳು. ನಾವು ಇಂತಹ ಮಗಳನ್ನ ಪಡೆಯೋದಕ್ಕೆ ಪುಣ್ಯ ಮಾಡಿದ್ವಿ ಅಂತ ಸಂತೋಷ ಆಗುತ್ತೆ ಗುರುಗಳೇ.."

"ಎಲ್ಲದಕ್ಕಿಂತಲೂ ಮಿಗಿಲಾಗಿ ಅದು ಆಕೆಯ ಪರಿಶ್ರಮ ಪಿಳ್ಳಪ್ಪ ಮುಂದೆ ಏನು ಓದ್ತಾಳಂತೆ ಮಗಳು?."

"ನನಗೆ ಇಂಜಿನಿಯರಿಂಗ್ನಲ್ಲಿ ಕಂಪ್ಯೂಟರ್ ಕೋರ್ಸ ಓದಬೇಕು ಅನ್ನೋ ಆಸೆ ಆದ್ರೆ ಅಪ್ಪಯ್ಯ ಆಗಕಿಲ್ಲ ನನ್ನ ಹತ್ತಿರ ಕಾಸು ಇಲ್ಲ ಅಂತಾರೆ ಸಾರ್ "

ಅವಕಾಶಕ್ಕೆಂದೇ ಕಾಯುತ್ತಿದ್ದ ಕೊಪಿನಾ ಮಾತಿನ ಮದ್ಯೆ ತಡ ಮಾಡದೇ ತಟ್ಟನೆ ತನ್ನ ಮನದ ಇಂಗಿತವನ್ನು ಹೇಳಿಬಿಟ್ಟಳು.

"ಯಾಕೆ ಪಿಳ್ಳಪ್ಪ? ಓದುವ ಮಗಳಿಗೆ ಅಡ್ಡಗಾಲು ಹಾಕ್ತಿಯ, ಇರೋದು ಒಬ್ಬ ಮಗಳು ಓದುತ್ತೇನೆ ಅಂದಾಗ ಓದಿಸಬೇಕು, ಈದಿನ ಕಷ್ಟ ಪಟ್ಟರೆ ನಾಳೆ ಅದರ ಪ್ರತಿಫಲ ಸಿಕ್ಕೇ ಸಿಗುತ್ತೆ ಕಣಯ್ಯ."

" ನಂಗೂ ಆಸೆ ಐತಿ ಗುರುಗಳೇ, ನಿಮಗೆ ಗೊತ್ತಿಲ್ದೆ ಇರೋದು ಏನೈತಿ, ನಾನು ವೀಳ್ಯದ ಎಲೆ ಮಾರಿ ಜೀವನ ಸಾಗಿಸ್ತಾ ಇರೋದು. ಅವಳು ಓದೋ ಓದು ಓದಿಸಬೇಕೆಂದ್ರೆ ಲಕ್ಷ ಲಕ್ಷ ಬೇಕು ಎಲ್ಲಿಂದ ತರೋದು?. ಅದರಲ್ಲೂ ನಾವು ಹೊಲೆಯರು ನಮಗ್ಯಾಕೆ ಬೇಕು ಅಷ್ಟು ದೊಡ್ಡ ಓದೆಲ್ಲಾ. ಏನೋ ಕಷ್ಟ ಪಟ್ಟು ಪಿ ಯು ಸಿ ಓದಿಸಿದೆ, ಅಷ್ಟು ಸಾಕು ಬಿಡಿ. ಮುಂದಿನ ವರ್ಷ ಒಳ್ಳೆ ಹುಡುಗನ್ನ ನೋಡಿ ಮದುವೆ ಮಾಡಿ ಕಳಿಸ್ಬಿಡ್ತೀನಿ."

"ಅದೇ ನೀವು ಮಾಡೋ ತಪ್ಪು. ವಿದ್ಯೆ ಯಾರ ಅಪ್ಪನ ಸ್ವತ್ತು ಅಲ್ಲ. ಅದಕ್ಕೆ ಜಾತಿ ಧರ್ಮದ ಭೇದವಿಲ್ಲ. ಶ್ರದ್ದೆ, ಭಕ್ತಿ ಆಸಕ್ತಿ,, ಶಿಸ್ತು, ಪರಿಶ್ರಮ ಯಾರಲ್ಲಿ ಇರುತ್ತೋ ಅವರಿಗೆ ಸರಸ್ವತಿ ದೇವಿ ಒಲಿದು ಬರುತ್ತಾಳೆ. ಇವೆಲ್ಲವೂ ನಿನ್ನ ಮಗಳಲ್ಲಿ ಇದೆ, ಕಲಿಕೆಯ ಆಸೆಯೂ ಇದೆ ಆಕೆಯನ್ನು ತಡೆಯಬೇಡ ಓದಲಿ."

ತಟ್ಟೆಯಲ್ಲಿ ಇಟ್ಟಿದ್ದ ತಾಂಬೂಲವನ್ನು ಸೇವಿಸುತ್ತಾ ಶಂಕರಪ್ಪನವರು ಮತ್ತೆ ತಮ್ಮ ಮಾತನ್ನು ಮುಂದುವರೆಸಿದರು.

"ಓದಿಸುವುದಕ್ಕೆ ನೀನು ಹಣ ಇಲ್ಲ ಅಂತೀಯ ಅಲ್ವೇ, ನಿಮ್ಮಂತ ಬಡವರಿಗಾಗಿಯೇ ಸರ್ಕಾರ ಒಳ್ಳೆಯ ಯೋಜನೆಗಳನ್ನು ತಂದಿದೆ, ಕೇಂದ್ರ ಸರ್ಕಾರದ ಪ್ರಿ ಮೆಟ್ರಿಕ್ ಸ್ಕಾಲರ್ಷಿಪ್, ರಾಜ್ಯ ಸರ್ಕಾರದ ತಾಲೂಕ ಸೋಶಿಯಲ್ ವೆಲ್ಫೇರ್ ಕಡೆಯಿಂದ ಮೆರಿಟ್ ಸ್ಕಾಲರ್ಷಿಪ್ ಅಂತ ನೀವು ಕಟ್ಟಬೇಕಾಗಿರುವ ಪೂರ್ತಿಯಾದ ಫೀ ಮೊತ್ತವನ್ನು ಸರ್ಕಾರದ ವತಿಯಿಂದಲೇ ಕೊಡ್ತಾರೆ. ಹಾಸ್ಟೆಲ್ ನಲ್ಲಿ ಉಳಿದುಕೊಂಡು ಓದುವುದಾದರೆ ಹಾಸ್ಟೆಲ್ಲಿನ ಹಣವನ್ನು ಅದರ ಜೊತೆಗೆ ಊಟಕ್ಕೂ ಸಹ ಹಣವನ್ನು ಕೊಡುತ್ತಾರೆ. ನಿನ್ನ ಜೇಬಿನಿಂದ ಒಂದು ರೂಪಾಯಿಯನ್ನು ಸಹ ಖರ್ಚು ಮಾಡದೇ ನಿಶ್ಚಿಂತೆಯಿಂದ ನಿರಾತಂಕವಾಗಿ ನಿನ್ನ ಮಗಳು ಓದಲು ಬಯಸುತ್ತಿರುವ ಅವಳಿಷ್ಟದ ಇಂಜಿನಿಯರಿಂಗ್ನಲ್ಲಿ ಕಂಪ್ಯೂಟರ್ ಕೋರ್ಸ್ ಓದಿಸಬಹುದು." .

"ಅಂಗಾದ್ರೆ ಸರಿ ಗುರುಗಳೇ ನೀವು ಇಷ್ಟು ಹೇಳಿದ ಮೇಲೆ ನಾನೇನು ಅಡ್ಡಿ ಮಾಡಾಕಿಲ್ಲ, ಆ ಹುಡಿಗಿ ಎಷ್ಟು ಓದಬೇಕೋ ಅಷ್ಟೂ ಓದ್ಲಿ."

ತನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಅಪ್ಪನ ಕಡೆಯಿಂದ ಅಪ್ಪಣೆ ಸಿಕ್ಕ ಕೂಡಲೇ ಕೊಪಿನಾ ತನ್ನ ಅಳುವನ್ನು ನಿಲ್ಲಿಸಿ, ಹೆತ್ತವರಿಗೆ ಅರಿವನ್ನು ಮೂಡಿಸಿದ ಗುರುಗಳ ಪಾದಗಳನ್ನು ಮುಟ್ಟಿ ನಮಸ್ಕರಿಸಿಕೊಂಡಳು. ಕೊಪಿನಾಳ ಕಣ್ಣುಗಳಲ್ಲಿ ಆನಂದ ಭಾಷ್ಪ ಕಂಡ ಶಂಕರಪ್ಪನವರು ಪ್ರೀತಿಯಿಂದ ಅವಳ ತಲೆಯನ್ನು ನೇವರಿಸಿದರು.

"ನೋಡಮ್ಮ ಇಂಜಿನಿಯರಿಂಗ್ ಸೇರಿಕೊಳ್ಳಬೇಕೆಂದರೆ ಅದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಹತಾ ಪರೀಕ್ಷೆಯನ್ನು ನಡೆಸುತ್ತೆ, ಅದರ ಕೋಚಿಂಗ್ ಕ್ಲಾಸ್ಸನ್ನು ನಮ್ಮ ಕಾಲೇಜಿನಲ್ಲೇ ನಡೆಸ್ತಾ ಇದ್ದಿವಿ, ನಾಳೆಯಿಂದಲೇ ನೀನು ಬಂದು ಕ್ಲಾಸಿಗೆ ಸೇರಿಕೋ ನಾನು ಪ್ರಾಂಶುಪಾಲರ ಹತ್ತಿರ ಮಾತನಾಡುತ್ತೇನೆ. ಚೆನ್ನಾಗಿ ಓದಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಯಲ್ಲಿ ನೀನು ಒಳ್ಳೆಯ ರಾಂಕ್ ಪಡೆದು ಕೊಂಡರೆ ನಿನಗೆ ಇನ್ನು ಒಂದು ಒಳ್ಳೆಯ ಅವಕಾಶವಿದೆ. ಸೂಪರ್ ನ್ಯೂಮರೆರಿ ಕೋಟ ( ಎಸ್ ಎನ್ ಕ್ಯೂ ) ಅಡಿಯಲ್ಲಿ ಮೆರಿಟ್ ಮತ್ತು ವಾರ್ಷಿಕ ಆಧಾಯದ ಆದಾರದ ಮೇಲೆ ಸೀಟ್ ಸಿಗುತ್ತೆ. ಅಂದರೆ ನೀನು ನಿನ್ನ ಓದಿನ ಸಲುವಾಗಿ ಒಂದೇ ಒಂದು ರೂಪಾಯಿಯನ್ನೂ ಸಹ ಕಟ್ಟುವ ಹಾಗಿಲ್ಲ, ಒಟ್ಟು ಫೀಸ್ ಮೊತ್ತವನ್ನು ಸರ್ಕಾರವೇ ಭರಿಸುತ್ತೆ. ಚೆನ್ನಾಗಿ ಓದುವ ಮಕ್ಕಳಿಗೆ ಸರ್ಕಾರವು ಇಷ್ಟೊಂದು ಸವಲತ್ತುಗಳನ್ನು ಮಾಡಿಕೊಟ್ಟಿದೆ. ಅದನ್ನು ನಾವುಗಳು ಎಲ್ಲರೂ ಉಪಯೋಗ ಪಡಿಸಿ ಕೊಳ್ಳಬೇಕಷ್ಟೆ."

ತಮ್ಮ ಮಾತನ್ನು ಅರ್ಧಕ್ಕೆ ನಿಲ್ಲಿಸಿ ಗುರುಗಳು ಪಿಳ್ಳಪ್ಪನ ಕಡೆ ತಿರುಗಿ:

"ಏನು ಚಡ್ಡಿ ಪಿಳ್ಳಪ್ಪನವರೇ ನನ್ನ ಮಾತುಗಳು ಅರ್ಥವಾಯಿತೇ? ನಾಳೆಯಿಂದ ನಿಮ್ಮ ಮಗಳನ್ನು ಕೋಚಿಂಗ್ ಕ್ಲಾಸಿಗೆ ಕಳುಹಿಸುತ್ತಿರಲ್ಲವೆ ."

"ಗುರುಗಳೇ ನೀವು ಇಷ್ಟೊಂದು ಬುದ್ದಿಮಾತು ಹೇಳಿದ ಮೇಲೆ ಕಳುಹಿಸದೇ ಇರೋಕೆ ಆಗುತ್ತಾ, ಖಂಡಿತ ಕಳುಹಿಸ್ತೀನಿ."

"ನೋಡಮ್ಮ ಕೊಪಿನಾ ನಾಳೆ ಕಾಲೇಜಿಗೆ ಬಂದು ನನ್ನನ್ನು ನೋಡು, ನಿನಗೆ ಅವಶ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಸಿ ಕೊಡುತ್ತೇನೆ ಅದರ ಜೊತೆಗೆ ಎಲ್ಲ ರೀತಿಯ ಮಾರ್ಗದರ್ಶನ ಸಹ ಕೊಡಿಸುತ್ತೇನೆ."

"ಖಂಡಿತ ಕಾಲೇಜಿಗೆ ಬಂದು ನಿಮ್ಮನ್ನು ಕಾಣುತ್ತೇನೆ ಗುರುಗಳೇ." ಕೊಪಿನಾ ಗುರುಗಳ ಮಾತಿಗೆ ಸಮ್ಮತಿಸಿದಳು.

"ನಾನಿನ್ನು ಬರುತ್ತೇನೆ ಪಿಳ್ಳಪ್ಪ, ನಾಳೆ ಮಗಳನ್ನು ತಪ್ಪದೆ ಕಾಲೇಜಿಗೆ ಕಳುಹಿಸಿ ಕೊಡು."

ಶಂಕರಪ್ಪನವರು ಚಡ್ಡಿ ಪಿಳ್ಳಪ್ಪನ ಮನೆಯಿಂದ ಹೊರಟರು.

ಅಪ್ಪನ ಒಪ್ಪಿಗೆಯನ್ನು ಕೇಳಿದ ಕೊಪಿನಾ - ಕೊರಳೂರು ಪಿಳ್ಳಪ್ಪನ ಮಗಳು ನಾಗರತ್ನ ಆನಂದದಿಂದ ಮನೆಯ ತುಂಬೆಲ್ಲಾ ಕುಪ್ಪಳಿಸಿ ಕುಣಿದಾಡತೊಡಗಿದಳು.

------------

ಮೇಯರ್ ಮೇಡಂ ನಾಗರತ್ನ ರವರ ಮಾತುಗಳನ್ನು ಕೇಳುತ್ತಿದ್ದ ಪತ್ರಕರ್ತರೆಲ್ಲರೂ ಜೋರಾದ ಕರತಾಡನ ಮಾಡತೊಡಗಿದರು, ಪತ್ರಿಕಾಗೋಷ್ಠಿಯ ಸಭಾಂಗಣದ ಹೊರಗಡೆಯಿಂದ ಅಭಿಮಾನಿಗಳ ಜಯಘೋಷ ಮುಗಿಲು ಮುಟ್ಟಿತ್ತು.

ತನ್ನ ತಂದೆ ಮತ್ತು ಗುರುಗಳ ಪ್ರೋತ್ಸಾಹದಿಂದ ಇಂಜಿನಿಯರಿಂಗ್ ಸೇರಿಕೊಂಡ ಕೊಪಿನಾ ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿ ಸಂಘದ ಸಹಾಯದಿಂದ ಎತ್ತರಕ್ಕೆ ಬೆಳೆದಳು. ಅವಳ ಪ್ರೀತಿ ವಿಶ್ವಾಸ ಮೇಯರ್ ಸ್ಥಾನದವರೆವಿಗೂ ಬೆಳಸಿ ಬಿಟ್ಟಿತ್ತು.

- ಕಾ ವಿ ರಮೇಶ್ ಕುಮಾರ್

ಕಾ.ವಿ. ರಮೇಶ್ ಕುಮಾರ್

ಕಾ.ವಿ. ರಮೇಶ್ ಕುಮಾರ್ ಅವರು ಬೆಂಗಳೂರಿನವರು. ತಂದೆ ಕೆ ಎಸ್ ವಿಶ್ವೇಶ್ವರಯ್ಯ ಶಾಸ್ತ್ರಿ, ತಾಯಿ ವಿಜಯಲಕ್ಷ್ಮಮ್ಮ. 1970 ಜುಲೈ 21 ರಂದು ಜನನ. ಪದವಿ ಶಿಕ್ಷಣವನ್ನು ಪಡೆದಿರುತ್ತಾರೆ. ಬೆಂಗಳೂರಿನ ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ನಲ್ಲಿ ಚೀಫ್ ಆಫೀಸ್ ಸುಪೆರಿಂಟೆಂಡಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More About Author