Story

ಕೊರಳೊಡ್ಡುವ ಮುನ್ನ

“ಕವಿ, ಲೇಖಕ ದಿಲೀಪ್ ಎನ್ನೆ ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದವರು. ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪಿಹೆಚ್‌.ಡಿ ಪದವಿಯನ್ನು ಪಡೆದುಕೊಂಡಿರುತ್ತಾರೆ. ಸಾಹಿತ್ಯದ ಓದು-ಬರವಣಿಗೆಯಲ್ಲಿ ಅತೀವವಾದ ಆಸಕ್ತಿ- ಆಸ್ಥೆ ಹೊಂದಿರುವ ಹೊಸ ತಲೆಮಾರಿನ ನುರಿತ ಬರಹಗಾರರಲ್ಲಿ ಒಬ್ಬರೆನಿಸಿರುವ ಇವರ ‘ಕೊರಳೊಡ್ಡುವ ಮುನ್ನ’ ಕತೆ ನಿಮಗಾಗಿ.

ಹೆಚ್ಚು ಕಡಿಮೆ ಮೂವತ್ತು ಮಿಶ್ರ ಒಕ್ಕಲುಗಳಿರುವ ಹೊಳೆತಡಿಯ ಊರು ಹೊಳೆಯೂರು, ನಡುವೆ ಪುರಾತನ ಹಾದಿ ಹಾದು ಸೀಳಿದಂತಿದೆ. ಒಂದೆರಡು ಮಾತ್ರ ರೆಕ್ಕೆ ಹರಿವಂತೆ ಹರಡಿರುವ ಮಂಗಳೂರು ಹೆಂಚಿನ ಹಟ್ಟಿಗಳು. ಬಹುಸಂಖ್ಯಾತರು ಆಗಾಗ್ಗೆ ಅಟ್ಟುತ್ತಿದ್ದ ಕಷಾಯದಿಂದಾಗಿ ದುಡಿಯುವವರಿದ್ದರಲ್ಲವೇ ಧಣಿ ಎಂಬುದನ್ನರಿತು ಇವುಗಳು ನೆರೆಯವರೊಟ್ಟಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸುತ್ತಿದ್ದವು. ಇವರೋ ನಾಳೆಗಳ ಅವತಾರ ಬಲ್ಲವರಾರೆಂದು ಅವರ ಕಂಡೊಡನೆ ಸೆರಗ ತಲೆ ಮೇಲೆ ಏರಿಸುತ್ತಿದ್ದರು, ಪೇಟ ಕಳಚಿ ಕಂಕುಳಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದರು.

ದೊಡ್ಡ ಅಂಚಿನ ಪಿಲ್ಲಪಂಚೆ, ಅಂಗಿ ತೊಟ್ಟು ಕಿರುಬೆರಳ ನಡುವೆ ಸಿಜರ್ ಸಿಗರೇಟ ಹಿಡಿದಂತೆಯೇ ಇರುತ್ತಿದ್ದ ಸಾಹುಕಯ್ಯ ಊರ ಸಾಹುಕಾರ. ಹಿಂದಿನವರು ನೆಟ್ಟು ಪೋಷಿಸಿ, ಮರವಾಗಿಸಿದ್ದರ ಆಶ್ರಯದಲ್ಲಿದ್ದವನು. ಬಿಸಿಲ ಕಾಣದವನು. ಹತ್ತಿರದ ಹತ್ತೂರ ಹದ್ದಿನಲ್ಲಿದ್ದ ಹಿರೇಮನೆಗೆ ಹೆಣ್ಣು ನೋಡಲೆಂದು ಕುಂಕುಮ ಅಳಿಸಿ 261 ವರುಷ ಏಳಾಗಿದ್ದ ತನ್ನ ತಾಯಿಯ ಜೊತೆ ಹೋಗಿದ್ದವನು, ತನ್ನರ್ಧ ವಯಸ್ಸಿನ ಮಲ್ಲಿಗೆ ಮುಡಿದು ಮೆಲ್ಲಗೆ ಬಂದವಳ ಒಮ್ಮೆ ಒಮ್ಮೆಲೆಗೇ 'ನೀಮು ಯಾನ್ನುವ ಕ್ವಡದು ಬ್ಯಾಡ, ಬುಡದೂ ಬ್ಯಾಡ. ಆದ್ರೆ ಯೆಣಾತ್ರ ಕ್ವಡ್ಡಿಡಲ್ಲ ಅನ್ಸಾಡಿ' ಎಂದಿದ್ದನಂತೆ. ಅಂತಹ ಅಂದದ ಶ್ರೀಮಂತಗಿತ್ತಿ ಅವನ ಶ್ರೀಮತಿ, ಅನುಭವಗಳ ದೊಡ್ಡ ಗಂಟನ್ನೇ ಹೊತ್ತಿದ್ದ ಹೆತ್ತವ್ವ, ಮೂರು ಮತ್ತೊಂದು ಲಜ್ಜೆ ಸ್ವಭಾವದ ಗೆಜ್ಜೆಗಳು ಇವಿಷ್ಟು ಅವನ ಸಂಸಾರ.

ಅದಾಗಲೇ ಮತ್ತೋರ್ವ ಇಳೆಯ ಸಾಮ್ರಾಟ ಇರುಳನು ಧ್ವಜ ನೆಟ್ಟು ತಾಸುಗಳೇ ಮಾಸಿಹೋಗಿವೆ. ಆತ ಸಮಾನತೆ ಬಯಸಿದ ಆದಿಪುರುಷ ನಾನು ತಾನೆಂದು ಕೆಮ್ಮದೆ ಸುತ್ತಲು ಆತನೆದುರು ಮಂಡಿಯೂರಿ ಬಟಾಬಯಲಿನಂತಾಗಿದೆ. ಅಪಶಕುನದ ಮುನ್ಸೂಚನೆಯೋ ಏನೋ ಒಂದೂ ತಿಳಿಯುತ್ತಿಲ್ಲ. ದೂರದಲ್ಲೆಲ್ಲೋ ನಂಬಿಗಸ್ತಿಕೆಯ ಬಿರುದುದಾರರು ವೂವೂವೂ...ಎಂದು ಒಂದೇ ಸಮನೆ ಕಹಳೆ ಊದುತ್ತಿರುವ ಸದ್ದು. ಈ ಮಧ್ಯೆ ಸಾಹುಕಾರನ ಮನೆ ದೀಪದ ಸರಮಾಲೆಗಳಿಂದ ಸಾಂಗವಾಗಿ ಸಿಂಗಾರಗೊಂಡಿದೆ.

ಎಷ್ಟೋ ದಿನಗಳ ನಂತರ ಬಟ್ಟೆ ಬದಲಿಸಿ ಲವಲವಿಕೆಯಿಂದಿರುವ ತೊಲೆ, ಕಂಬ, ಕಿಟಕಿ, ಬಾಗಿಲು, ಗೋಡೆಗಳು. ನಗೆ ಬೀರುತ ಮೊಗ ಅರಳಿಸುತ್ತಿರುವ ಸುಮ ತೋರಣಗಳು. ದೊಡ್ಡಾಟಕ್ಕೆ ಅಣಿಗೊಳ್ಳಲು ವಿರಮಿಸುತ್ತಿರುವ ವಾದ್ಯ ಪರಿವಾರ, ತಿರುಗಲು ತಿಣುಕಾಡುವಂತೆ ಎಲ್ಲೆಂದರಲ್ಲಿ ಭಂಗಿಯಲ್ಲದ ಭಂಗಿಯಲ್ಲಿ ಕೆಡವಿರುವ ಬಂಧು ಬಳಗ, ಅವರ ಗೊರ್‌‌್ರ್ರ‌... ಪುಶ್‌ಶ್‌ಶ್... ಸರಣಿ ಗೊರಕೆಗೆ ನಾನೇನು ಕಮ್ಮಿ ಇಲ್ಲ ಎಂಬಂತೆ ಆಗಾಗ ದನಿಗೂಡಿಸುತ್ತಿರುವ ಪು‌ಗ್ರೆ‌ ... ಪುಂಯ್‌ಯ್‌ಯ್‌... ವಾಯುವಿನ ಮೊರೆತ.

ಮಂದ ಬೆಳಕಿನ ಒಂದು ಕೋಣೆ, ಮೌನ, ಮೌನ, ಮೌನ, ಅದಕ್ಕೆ ಅಪವಾದವೆಂಬಂತೆ ಕಾಲನ ಹೆಜ್ಜೆ ಸಪ್ಪಳ, ಮೂಲೆಯಲ್ಲಿ ಎಷ್ಟೋ ಕೆತ್ತನೆಗೆ ಆತಿಥ್ಯ ವಹಿಸಿದ ಖುಷಿಯಲ್ಲಿ ಬೀಗುತ್ತಿರುವ ಮಂಚ. ಮೇಲೆ ಕುತ್ತಿಗೆವರೆಗೆ ಕಂಬಳಿ ಹೊದ್ದು ಹೊರಳಿರುವ ಒಬ್ಬಾಕೆ. ಕೈಗಳಿಂದ ಕಾಲುಗಳ ಬಳಸಿ ಮಂಡಿಯ ಮೇಲೆ ಗಲ್ಲವನ್ನಿಟ್ಟು ಕುಳಿತ ಮತ್ತೊಬ್ಬಳು. ಕಣ್ಣಗುಡ್ಡೆ ನೆತ್ತಿ ಏರಿ ಅಚಲಗೊಂಡಿದೆ. ಕಾಡಿ ಬೇಡಿ ಪಡೆದ ಕುಡಿ ಸಂತೆಯಲ್ಲಿ ಕೈ ತಪ್ಪಿದ ತಾಯಿಯಂತೆ ಆಕೆಯ ಮನಸ್ಸು ಚಡಪಡಿಸುತ್ತಿರುವುದನ್ನು ಅವುಗಳು ಸಾರಿ ಸಾರಿ ಹೇಳುತ್ತಿವೆ. ಆ ಮನಸ್ಸಿಗಿಡಿದ ಕನ್ನಡಿಯೇ ಎದುರಿನ ಗೋಡೆ.

ತಕ್ಕಡಿಯ ಚಿತ್ರಣ ಮಿಂಚಿ ಮಿಂಚಿ ಮಿಂಚುಹುಳದಂತೆ ಮಂಗರಮಾಯ ವಾಗುತ್ತಿದೆ. ಒಂದೆಡೆ ವಾಲಿರುವ ತಕ್ಕಡಿ ಸಮತೋಲನದ ಮಾತು ಈ ಕ್ಷಣಕ್ಕೆ ವ್ಯರ್ಥವಷ್ಟೆ ಎಂದೋ ಮಾಡಬೇಕಿದ್ದ ಕೆಲಸವದು. ನನ್ನವರ ಜೊತೆಗಿನ ಬಲಾಬಲದ ಪ್ರದರ್ಶನದಲ್ಲಿ ನನ್ನವನೇ ಮೇಲೇರಿದ. ಅದಕ್ಕೆ ಒಂದು ರೀತಿಯಲ್ಲಿ ನಾನೇ ಕಾರಣಳು.

ಜೀವನದ ಪ್ರಥಮಗಳ ಬೆಚ್ಚಗಿನ ನೆನಪುಗಳೇ ಹಾಗೆ. ಸದಾ ಕಣ್ಣಿಗೆ ಕಟ್ಟಿದಂತಿರುತ್ತದೆ. ಅದರ ಒಂದು ಎಳೆಯೂ ಅಷ್ಟು ಸುಲಭವಾಗಿ ಜಾರುವುದಿಲ್ಲ. ಅವು ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಸಾಂತ್ವನ ಹೇಳಿ ಧೈರ್ಯ ತುಂಬುವ ಸುಗುಣಿಯೂ ಹೌದು, ಕ್ಷಣಕ್ಷಣವು ಕೊಲ್ಲದೇ ಕೊಲ್ಲುವ ನಿಷ್ಕರುಣಿಯೂ ಹೌದು. ಅದಕ್ಕೆ ಸಾವಿಲ್ಲ, ಸಾಯುವವರಿಲ್ಲದಿದ್ದರಷ್ಟೇ. ಜಂಭಕ್ಕಾಗಿ ಹೇಳುತ್ತಿಲ್ಲ. ಬೆನ್ನು ಹತ್ತಿದವರು, ಹೇಳಿದವರು, ಹೇಳಿಸಿದವರು, ಕೇಳಿದವರು, ಕೇಳಿಸಿದವರೂ ಇದ್ದಾರೆ. ಮುಖ ಪರಿಚಯವೇ ಇಲ್ಲದವರು ನನಗಾಗಿ ಕೈ ಕೈ ಮಿಲಾಯಿಸಿದ್ದೂ ಉಂಟು. ಯಾರಿಗೂ ಸೋಲದ ನನ್ನ ಗೆದ್ದು ದಾಹ ತಂದಿತ್ತವನು ಒಬ್ಬನೇ. ಯುಗ ನಾಳೆಗಳಿಗೂ ಅವನೇ ಬೇಕೆಂದು ನನ್ನ ಮನಸ್ಸು ರಚ್ಚೆ ಹಿಡಿವಂತೆ ಮಾಡಿದ್ದು ಅವನೊಬ್ಬನೇ. ಆತ ಪ್ರಥಮಿಗ ನನ್ನ ಜೀವನಕ್ಕೂ, ಹೆಣ್ಣನಕ್ಕೂ...

ಅದು ನಮ್ಮಿಬ್ಬರ ಮೊದಲ ಭೇಟಿ, ವಿದ್ಯಾಲಯದಲ್ಲಿ. ಎಷ್ಟು ಹೇಳಿದರೂ ಕೇಳದ ನನ್ನ ಮನಸ್ಸು ಎಳೆದೊಯ್ದು ಅವನ ಮುಂದೆ ನಿಲ್ಲಿಸಿಯೇ ಬಿಟ್ಟಿತು. 'ನೋಡು ಚನ್ನಗಿದ್ದಯಿ, ಚನ್ನಗೋಡ್ತಿದಯಿ, ಮೇಲಾಗಿ ಮ್ಯಾಲೋರ್‌ಬ್ಯಾರೆ. ನನ್ನಂಗ ನಿಂಗ್ಯಾಕ, ನಡನ್ಯಡ... ಯಲ್ಲ ಇತ್ತಗೆ ನೋಡ್ತಾವ' ಎಂದು ನಡೆಯುತ್ತಲೇ ಇದ್ದನು. ನನ್ನ ದಾರಿ ಬದಲಾದರೂ ಮನಸ್ಸು ಅವನ ಹಿಂದೋಡಿತು. ಅವತ್ತಿಗೆ ಸೋತದ್ದು ನಾನೇ. ನಂತರದ ಪ್ರಯತ್ನಗಳಲ್ಲಿ ಅವನು. ಇಂದಿಗೆ ಇಬ್ಬರೂ... ದೇಹ, ನಾಲಗೆ ಒಂದಕ್ಕಿಂತ ಒಂದು ಒರಟು ಒರಟು ದೇಹದೊಳಗಣ ಹಲಸಿನ ತೊಳೆಯಂತೆ ಅವನ ಮನಸ್ಸು ಎಂಬುದು; ಕಂಡಾಗ, ಕಾಲುಬಿಟ್ಟಾಗ ಅರಿವಾಗದುದು ಮಿಂದಾಗಲೇ ಅರಿವಾದುದು. ಬೆರೆತೆವು ಅಂತರದ, ಭವಿಷ್ಯದ ಅರಿವಿಲ್ಲದೇ..

ಅಷ್ಟರಲ್ಲಿ ಮಗ್ಗಲು ಬದಲಿಸುತ್ತ ಪಕ್ಕದಾಕೆ ಎಚ್ಚರಗೊಂಡಳು. ಅರೆಗಣ್ಣಿನಿಂದ ಏನೋ ಮೆಟ್ಟಿಕೊಂಡಂತೆ ಕುಳಿತಿದ್ದವಳ ಕಂಡು, 'ಇದ್ಯಾಕ್ಷ... ನಿದ್ದೆ ಬತ್ತಿಲ್ವ? ನಿದ್ದ ಮಾಡ್ಲಿಲ ಅಂದ್ರ ಮೈಕ ಕಂಗೆಟ್ಟೋದಂಗ ಕಾಣಿರುತ್ತ ಬಿದ್ದ ಸುಮ್ಮ. ಯಂಗುವ ನಾಳಯಿಂದಾಚ್ಚ ಜಾಗ‌ ಇದ್ದುದ್ದೇ ಹ...ಹ...... ಎಂದು ನಗುತ್ತ ನಿದ್ರೆಗೆ ದಾಸಿಯಾಗುತ್ತಾಳೆ. ಈಕೆ ತುಂಬಾ ಹೊತ್ತಿನಿಂದ ಒಂದೇ ಭಂಗಿಯಲ್ಲಿ ಕುಳಿತು ಕುಳಿತು ಜುಂ ಹಿಡಿದಿದ್ದ ಕಾಲನ್ನು ನೋವಿನ ಮುಖಭಾವನೆಯಲ್ಲಿ ಮುಂದಕ್ಕೆ ಚಾಚಿ ಗೋಡೆಗೊರಗುತ್ತಾಳೆ. ನಿಟ್ಟುಸಿರು ಬಿಡುತ್ತ ರೆಪ್ಪೆಗಳನ್ನು ಮುಚ್ಚಿದ್ದೇ, ಹೊತ್ತು ಹಾಗೇ ಹರಿಯುತ್ತದೆ. ಗೆಳತಿಯ ನಗು ತಲೆ ತುಂಬಿ ಅದನ್ನೇ ತೇಯುತ್ತ ತೇಯುತ್ತಿದ್ದಂತೆ, ಸಿಡಿಲು ತಟ್ಟಿದಂತಾಗಿ ದಡಬಡ ಎದ್ದು ಇಲ್ಲ... ಇಲ್ಲ... ಈ ದೇಹ, ಮನಸ್ಸು ನನ್ನವನದು. ನನ್ನವನಿಗಷ್ಟೇ...ಎಂದು ಸದ್ದಿಲ್ಲದೇ ಬಾಯಿ ತೆರೆದು ಚೀರುತ್ತ, ಅಲುಗದೇ ಬಿದ್ದು ಒದ್ದಾಡುತ್ತ ದಿಕ್ಕುತೋಚದಂತಾಗಿ ಕಾಲಿಗೆ ಹಿತ್ತಲ ಮನೆಯ ವಿಳಾಸ ನೀಡುತ್ತಾಳೆ.

ಕು......ಯ್ಕ ಎಂದು ಗೊಣಗುತ್ತ ತೆರೆದುಕೊಂಡ ಬಾಗಿಲನ್ನು ಒಳನಡೆದು ಅದರ ಬಾಯಿಯ ಅದಮಿ ಮುಚ್ಚಿ ನಿಲ್ಲುತ್ತಾಳೆ. ತೆಳುವಾಗಿ ಹರಡಿರುವ ಚಿಮಣಿ ಇಲ್ಲದ ಲಾಟೀನ ಬೆಳಕು. ದೃಷ್ಟಿ ನಿಧಾನವಾಗಿ ಇಂಚಿಂಚ ಬಿಡದೆ ಸ್ಪರ್ಶಿಸುತ್ತ ಗಸ್ತು ಹೊರಟಿತು. ಆರೇಳು ತಟ್ಟೆಗಳ ಹೊತ್ತ ರೇಷ್ಮೆ ಹುಳ ಸಾಕಣೆಯ ಮೇಜ ಹಿಪ್ಪುನೇರಳೆ ಸೊಪ್ಪಿನ ಗುಡ್ಡೆ, ಚಂದ್ರಿಕೆ, ಹತ್ತಾರು ಮೂಟೆಗಳ ದಾಟಿ ಮುಂದೆ ಹರಿದ ದೃಷ್ಟಿ ಹೋದ ಹಾದಿಯಲ್ಲೇ ಹಿಂದೆ ಬಂದು ಮೂಟೆಗಳ ತಳದಲ್ಲಿ ಇಣುಕುತ್ತಿದ್ದ ಮಿಳಿ ಹಗ್ಗದ ಮೇಲೆ ನಾಟಿತು. ನೋಡ ನೋಡುತ್ತಿದ್ದಂತೆಯೇ ಎದೆಯ ಕುಪ್ಪಳಿಕೆ ಹೆಚ್ಚಾಗಿ, ಬೆವರು ಮೂಡಿ ಅಸ್ತಿತ್ವ ಕಳಕೊಳ್ಳುತ್ತಿದೆ. ಭಾರವಾದ ಹೆಜ್ಜೆ ಕಿತ್ತು ಅಲುಗುವ ಕೈಗಳಿಂದ ಅದನ್ನು ಮುಟ್ಟಿ ತೆಗೆದು, ನನಗೆಂದೇ ಹೊಸೆಯಲ್ಪಟ್ಟೆಯಾ...ನನಗೆಂದೇ ಬಂದಿಲ್ಲಿ ಹೊಕ್ಕಿರುವೆಯಾ... ನನಗೆಂದೇ ಹಾತೊರೆಯುತ್ತಿದ್ದೆಯಾ...ಎನ್ನುತ ಅಸಹಾಯಕ ನಗು ಬೀರುತ್ತಾಳೆ.

ಇಇಇಲ್ಲ ನಿನಿನೀನಂದುಕೊಳ್ಳುತ್ತಿರುವುದು ತಪ್ಪು, ಬಬಬಹುತೇಕರ ಮನಸ್ಥಿತಿಯೂ ನಿನ್ನಂತೆಯೇ. ಯಯಯಾರೋ ಮಾಡೋ ತಪ್ಪಿಗೆ ಯಾರನ್ನೋ ಹೊಣೆಯಾಗಿಸುವುದು ಎಷ್ಟು ಸರಿ? ಯಯಯಾರು ನಂಬುವರೋ ಬಿಡುವರೋ ಗೊತ್ತಿಲ್ಲ; ನನಗದು ಬೇಕಾಗಿಲ್ಲ. ನಿನಿನೀ ಬರುವೆ ಎಂಬುದ ನಾ ತಿಳಿದಿದ್ದೆ ಇಲ್ಲವೆಂದಲ್ಲ, ಆದರೆ ಕಾಯುತ್ತಿರಲಿಲ್ಲ. ಬಬಬಾಗಿಲು ಸದ್ದಾದೊಡನೆ ನನ್ನ ಗುಂಡಿಗೆ ಝಲ್ ಎನ್ನುತ್ತಿತ್ತು. ನಿನಿನೀನಲ್ಲದಿದ್ದಾಗ ದೀರ್ಘದುಸಿರ ತೇಲಿಸುತ್ತಿದ್ದೆ. ನಿನಿನೀ ಬಂದೆ. ಬಬಬಂದೆ ಎನ್ನುವುದಕ್ಕಿಂತ ಕರಕೊಂಡು ಬಂದಿತು. ಮುಮುಮೂಟೆ ತಳದಲ್ಲಿದ್ದ ನಾನು ಕಾಣದಿದ್ದರೆ ಸಾಕೆಂದು ಬೇಡುತ್ತ ಕಣ್ಣುಮುಚ್ಚಿ ಹೆದರಿ ಕುಳಿತಿದ್ದೆ. ನೊನೊನೋಡು ನನ್ನ ಮಾತು ಕೇಳು. ಯಯಯಾರೂ ಮಾಡದ್ದನ್ನೇನೂ ನೀ ಮಾಡಿಲ್ಲ. ಎಎಎಂಥೆಂಥವರೇ ಎಂಥೆಂಥದೋ ಮಾಡಿ ಎಂತೆಂತೋ ಬದುಕುತ್ತಿದ್ದಾರೆ. ತತತಪ್ಪಿಗೆ ಶಿಕ್ಷೆ ಪ್ರಾಯಶ್ಚಿತ್ತ, ನಿನ್ನ ನೀ ಕೊಲುವುದಲ್ಲ. ಇಇಇಡೀ ವಿಶ್ವಕ್ಕೆ ವಿಶ್ವವೇ ಛೀಮಾರಿ ಹಾಕುತ್ತದೆ. ದುದುದುಡುಕಬೇಡ ದುಡುಕಿ ಮತ್ತೊಂದು ಪಾಪವ ನನ್ನ ಕುಲದ ಹೆಗಲೇರಿಸಬೇಡ, ನಿನಿನಿನ್ನ ಕೈ ಮುಗಿಯುವೆ... ಎಂದು ಗದ್ಗದಿಸಿ ನುಡಿಯುತ್ತದೆ.

ಅರಳಿದ ಕಂಗಳಿಂದ ಭಾವುಕಳಾಗಿ ಹಾಗೆಂದೆ, ಕ್ಷಮೆಯಿರಲಿ, ಒಂದಂತು ನಿಜ ನಿನ್ನ ಮಾತಿಗೆ ವಿಸ್ಮಯಳಾಗಿ ಅದೆಷ್ಟೋ ಬಾರಿ ಮನಸ್ಸಿನಲ್ಲೇ ನಮಿಸಿರುವೆ. ಮೆಟ್ಟಿದ್ದಾಯಿತು ಬೇರೆ ದಾರಿಯ ಪ್ರಮೇಯವೇ ಇಲ್ಲ. ನನ್ನ ಬೇಗೆ ನಿನಗೆ ಏನೇನೂ ಅಲ್ಲವಾಗಿರಬಹುದು. ನನಗಂತೂ ಹಿರಿದೇ, ಸಾಧ್ಯವಾದರೆ ಹೆಚ್ಚು ನೋವುಣಿಸದೆ ಆದಷ್ಟು ಬೇಗ ನಿನ್ನ ಕೆಲಸಕ್ಕೆ ಪೂರ್ಣವಿರಾಮ ಹಾಕು; ಎನ್ನುತ್ತ ಪಕ್ಕದಲ್ಲಿದ್ದ ಬಣ್ಣದ ಡಬ್ಬಿಯ ತಲೆಕೆಳಗು ಮಾಡಿ ಹತ್ತಿ ತೊಲೆಗೆ ಹಗ್ಗ ಬೀಸಿ ಬಿಗಿದು ಕುಣಿಕೆ ಹಾಕುತ್ತಾಳೆ. ಕುಣಿಕೆಯನ್ನೇ ದಿಟ್ಟಿಸುತ್ತಿದ್ದಂತೆ ತನ್ನವರು ಕಣ್ಣಮುಂದೆ ಬಂದಂತಾಗುತ್ತದೆ. ಕಡೇದಾಗಿ ಎಲ್ಲರ ಕಾಣಬೇಕೆಂಬ ಹಂಬಲಿಕೆ. ಇಳಿದವಳೇ ಅವರ ಕೋಣೆಯಲ್ಲಿಗೆ ಬಂದು ಕಿಟಕಿಯ ಸರಿಸಿ ನಿಲ್ಲುತ್ತಾಳೆ. ಸ್ಪಷ್ಟತೆಗೆ ಮಂದ ಬೆಳಕು ಅಡ್ಡಗಾಲು ಹಾಕಿದೆ. ಆದರೂ ಬಿಡುವಂತಿಲ್ಲ. ತಂದೆಯನ್ನು ನೋಡುತ್ತ ನನ್ನನ್ನು ಮನ್ನಿಸು. ಲಜ್ಜೆಗೆಟ್ಟು ಅವರಾಗಿದ್ದು ಅವರೇ ಒಪ್ಪಿ ಮಾಡುವಂತೆ ಮೂಡಲ ಸೀಮೆಗೆ ಹೋಗಿ ಮಾಡಿಸು ಎಂದು ನಾಲಗೆ ನುಡಿವಂತೆ ಮಾಡಿದ್ದು ಈ ಪ್ರೀತಿ. ನೀನು ಸತ್ತರೆ ಒಂದಾಗಬಹುದೆಂಬ ಆಲೋಚನೆ ತರಿಸಿದ್ದು ಈ ಪ್ರೀತಿ, ಅಯ್ಯೋ... ಅಯ್ಯೋ... ನಾನೆಂಥಾ ಪಾಪಿ ಎಂದು ಕಿಟಕಿಯ ಕಂಬಿಗೆ ಹಣೆಯ ಒತ್ತುತ್ತಾಳೆ. 'ನೀನು ನನ್ನಗ್ಗು ಅನ್ನಕಿಂತೆಚ್ಚಗ ನನ್ಗಲ್ಲಿ' ಎನ್ನುತ್ತಿದ್ದ ತಾಯಿ. 'ನಿನ್ನಟ್ಟಲಿ ಉಟ್ಟಿಲ್ಲ ಅಷ್ಟೇ, ನೀನೂ ನಮ್ಮವ್ವನೇ' ಎನ್ನುತ್ತಿದ್ದ ತಂಗಿಯರು. 'ನನ್ ದ್ವ3⁄4ಸ್ಟು ಕಾರ ಮುಗ್ಧಗಂಟ ದಂಡ್ಕೊಂಡು ಬಂದಿಂದಮ್ ಅಂತ ಆ ಯಮುನ್ನ ಒಂದುರ ಎರಿನಿ ಕಡ ಕೂಸು' ಎನ್ನುತ್ತಿದ್ದ ಅಜ್ಜಿ. ಎಲ್ಲರ ನೀರು ಏರಿದ ಕಣ್ಣಲ್ಲಿ ತುಂಬಿಕೊಂಡು ತುಳುಕಿಸದೇ ಹತ್ತಿರವಿದ್ದ ಚಿಕ್ಕವಳ ಮುಟ್ಟಲೆತ್ನಿಸಿ, ಕುಣಿಕೆ ಕರೆದಂತಾಗಿ ಹಿಂದಿರುಗತ್ತಾಳೆ. ಬಂದವಳೇ ಕೊಕ್ಕೊಕೋಕೋ.. ಸದ್ದಿಗೆ ಗಾಬರಿಯಾಗಿ ಕುಣಿಕೆಗೆ ಕೊರಳೊಡ್ಡಿ ಊರಿ, ಕಲಿಗಾಲದ ಪ್ರೀತಿಗೆ ನಿದರ್ಶನವಾಗಲಿಲ್ಲವೆಂಬ ತೃಪ್ತಿ ನನಗಿದೆ... ಎನ್ನುತ ಕಣ್ಣು ಮುಚ್ಚುತ್ತಾಳೆ.

ದಿನಪ ಚೈತನ್ಯ ತಂದಿದ್ದಾಯಿತು. ಎಲ್ಲರೂ ಕಾಲುಗಳಿಗೆ ಚಕ್ರ ಕಟ್ಟಿದ್ದಾರೆ. ಗಡಿ ಬಿಡಿ, ಗಡಿ ಬಿಡಿ, ಗಡಿ ಬಿಡಿ, ವಾದ್ಯದ ಹಾರಾಟ. ಸದ್ದು ಗದ್ದಲದ ನಡುವೆ ಎಣ್ಣಂತ್ಯ ...! ಯಾನ ...! ಅಸ್ಪಷ್ಟ ಮಾತುಗಳು, ಏರುದನಿಯಲ್ಲಿ 'ಹೆಣ್ಣನ್ನು ಕರಕೊಂಡು ಬನ್ನಿ' ಮೊಳಗಿತು. ಹೆಣ್ಣು... ಹೆಣ್ಣು... ? ಮುತ್ತೈದೆಯರ ನಡುವೆ. ತಲೆಬಾಗಿ... ಒಳಗುಣುಗುತ... ಒಂದು, ಒಂದೇ ಒಂದು ಕ್ಷಣವೂ ಹೆತ್ತವರ ಕೊರಗ ತರಿಸದ ನನ್ನವರೆನಿಸಿಕೊಂಡವರಿಗೆ ದ್ರೋಹವೆಸಗುವುದು ಸರಿ ತೋರಲಿಲ್ಲ. ಒಂದು ವೇಳೆ ನಾ ನಿನ್ನಿಂದೆ; ಇಲ್ಲ, ಸಾವಿನಿಂದೆ ನಡೆದದ್ದೇ ಆಗಿದ್ದರೆ ನನ್ನಂಥ ಅನಾಥ ಹೆಣ್ಣು ಕುಡಿಗಳ ಸಾಕಲು ಇಚ್ಛಿಸುವ ಕೆಲವೇ ಕೆಲವು ಮನಸ್ಸುಗಳು ಎಲ್ಲಿ ಬದಲಾಗಿ ಬಿಡುತ್ತದೋ, ಎಲ್ಲಿ ನನ್ನಂಥವರು ಬೀದಿಗೆ ಬೀಳುವರೋ ಎಂದೆಂಬ ಭಯ ಆತಂಕ ಯಾಂತ್ರಿಕ ಜೀವನಕ್ಕೆ ನನ್ನ ಕಾಲಿಡುವಂತೆ ಮಾಡಿತು.

ನೀನೆಂದೆಂದಿಗೂ ನನ್ನವನೇ...

ನೀ ನನ್ನಲ್ಲಿಯೇ ಇರುವಾತನು... ಭವವಿದ್ದರೆ ಪಡೆದೇ ತೀರುವೆ..

- ದಿಲೀಪ್ ಎನ್ಕೆ

ದಿಲೀಪ್ ಎನ್ಕೆ

ದಿಲೀಪ್ ಎನ್ನೆ ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದವರು. ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪಿಹೆಚ್‌.ಡಿ ಪದವಿಯನ್ನು ಪಡೆದುಕೊಂಡಿರುತ್ತಾರೆ. ಇವರ ಪಿಹೆಚ್.ಡಿ ಮಹಾಪ್ರಬಂಧದ ವಿಷಯ 'ಕನ್ನಡ ದಲಿತ ಕಥಾಸಾಹಿತ್ಯ : ಅಕ್ಷರಸ್ಥ ದಲಿತರ ತಲ್ಲಣಗಳು. ಸಾಹಿತ್ಯದ ಓದು-ಬರವಣಿಗೆಯಲ್ಲಿ ಅತೀವವಾದ ಆಸಕ್ತಿ- ಆಸ್ಥೆ ಹೊಂದಿರುವ ಹೊಸ ತಲೆಮಾರಿನ ನುರಿತ ಬರಹಗಾರರಲ್ಲಿ ಒಬ್ಬರೆನಿಸಿರುವ ಇವರು - ಋತುಮಾನಕ್ಕಷ್ಟೇ ಪ್ರೀತಿ (ಕವನ ಸಂಕಲನ), ಬಲಿಷ್ಠ (ಕಥಾಸಂಕಲನ), ಚೆಗ್ಗಿ (ಕವನ ಸಂಕಲನ) ಕೃತಿಗಳನ್ನು ಹೊರತಂದಿರುತ್ತಾರೆ.

More About Author