Poem

ಮಹಾಪರಿತ್ಯಾಗ

ನಾನು ಹೊರಡಲೇ ಬೇಕು ಚನ್ನ
ಹಠಮಾಡದೆ ಬಿಟ್ಟು ಬಾ ನನ್ನ!
ನಿನ್ನ ತಲೆಗೆ ಯಾವ ಪಾಪವೂ ಸುತ್ತದು
ಜಂಬೂ ದ್ವೀಪವ ಬೆಳಗುವ ದೀಪಕ್ಕೆ
ತೈಲವಾಗುವ ಪುಣ್ಯ ನಿನ್ನದು
ಏಳೇಳು ನಡೆ ಹೊರಡು ಚನ್ನಾ...

ಹಡೆದು ಮಲಗಿದ ಮಡದಿಯ ಹಣೆಗೆ
ತೊಟ್ಟಿಲಲಿ ನಗುತಿದ್ದ ಮಗನ ಹಾಲುಗೆನ್ನೆಗೆ
ಕನವರಿಸುತಿದ್ದ ತಂದೆಯ ಪಾದಗಳಿಗೆ
ಮೆತ್ತಗೆ ಹೂಮುತ್ತನಿತ್ತು ಬಂದೆ
ಇದೋ ವಿದಾಯದ ಕಾಣಿಕೆಯೆಂದು!

ಜಗದೆದೆಯ ತೆರೆಸಲು
ತೊರೆಯುವುದು ಅನಿವಾರ್ಯ
ಬಿಟ್ಟೆದ್ದು ಹೊರಟವಗೆ ತೊಡರುಗಾಲೊಡ್ಡದಿರು
ಸದ್ದಾಗದಂತೆ ರಥವ ಸಿದ್ಧಗೊಳಿಸು ಚನ್ನ
ಹೊತ್ತು ಮೂಡುವ ಮುನ್ನ
ಈ ಕಲಹದ ಕತ್ತಲೆ ದಾಟಬೇಕಿದೆ ನಾನು
ಪೂರ್ಣಿಮೆಯ ಹಾಲುದಿಂಗಳ ಬೆಳಕಿನಲಿ...!

ಏನು!?
ಸಾವು- ನೋವು- ಮುಪ್ಪಿಗೆ
ಹೆದರಿ ವೈರಾಗ್ಯತಾಳಿದನು
ಅಳ್ಳೆದೆಯ ಸಿದ್ಧಾರ್ಥನೆಂದು
ನೀನೂ ನಂಬುವೆಯ ಗೆಳೆಯ
ಸಾಕು ಮಾಡು ನಿನ್ನೀ ಕಟ್ಟುಕಥೆಯ!

ಕೇಳಿಲ್ಲಿ;
ಶತಶತಮಾನಗಳಿಂದ
ಕುಲ ಮತ್ಸರದ ಕುಲುಮೆಯಲಿ ಬೆಂದರೂ
ಕರುಣೆ ಮೂಡದು ಮೂಢ ಜನಕೆ
ಹರಿವ ನದಿಯ ಮೇಲೆ
ಹಕ್ಕು ಸ್ಥಾಪಿಸುವ ಹುಚ್ಚು ಮೇಲಾಟಕ್ಕೆ
ನಿತ್ಯ ಬಲಿಯಾಗುತ್ತಲೇ ಇವೆ
ಅರೆಬೆಂದ ಮನಸ್ಸುಗಳು!
ನಲುಗಿವೆ ಬುಡಕಟ್ಟಿನ ಮೊಗ್ಗುಗಳು!!

ಕಾಣಿಲ್ಲಿ;
ಬೀಸುವ ಗಾಳಿಗೆ
ಹಾರುವ ಹಕ್ಕಿಗೆ
ಸರಹದ್ದುಗಳ ಸುಂಕವಿಕ್ಕಿ
ಬಯಲಿಗೆ ಕೊತ್ತಲಗಳ ಕಟ್ಟಿ
ಬಡಪಾಯಿಗಳ ಕೈಗೆ ಕತ್ತಿಯ ಕೊಟ್ಟು
ಹರಿವ ನೆತ್ತರಲೂ ನಿಷ್ಠೆಯ ಹುಡುಕುವ
ರಣಹದ್ದುಗಳ ಸನಾತನ ಕಣ್ಣಿಗೆ
ಕರುಣೆಯ ಕಂದೀಲು ಮುಡಿಸಬೇಕಿದೆ ಈಗ!...

ಬಾಯಿಲ್ಲಿ;
ಮರುಳನಂತೆ ಮರುಗಬೇಡವೋ ಚನ್ನಾ
ಇದು ನನಗೆ ನಾನೇ ವಿಧಿಸಿಕೊಂಡ ಶಿಕ್ಷೆ
ನನ್ನೆದೆಯ ಪ್ರಶ್ನೆಗಳಿಗೆ ನಾನೇ ಪರೀಕ್ಷೆ
ಉತ್ತರದ ಪಥ ಬಹು ದೀರ್ಘವಿಹುದು...
ತುಸುದೂರಕೆ ಸಾರಥಿಯಾಗೈ ಸಂಗಾತಿ

ನೋಡಿಲ್ಲಿ;
ಹೆಣದ ರಾಶಿಯ ಮೇಲೆ
ಗೆಲುವಿನ ಪತಾಕೆ!
ನೆಮ್ಮದಿಯ ಸಮಾಧಿಯ ಮೇಲೆ
ಪುರುಷಾರ್ಥಗಳ ಹೆಗ್ಗಳಿಕೆ!
ಯಜ್ಞ-ಯಾಗಗಳ ನೆಪದಲಿ
ಪಶು-ಪಕ್ಷಿಗಳ ಮಾರಣಹೋಮ!
ಕಣ್ಣೆಂದಿಗೂ ತೆರೆಯದಂತೆ
ಸುತ್ತಲೂ ಕವಿದಿದೆ ಕಮಟು ಧೂಮ!
ಕಾಯ್ವ ಹೆಸರಲಿ ಲೂಟಿಯಾಗುತಿದೆ
ಹೆಂಗಳೆಯರ ಮೈ ಮಾನ!
ಹಾಲುಣಿಸುವ ತಾಯ್ಮೊಲೆಯನು ಕಚ್ಚಿ
ರಕ್ತಹೀರುವ ಲೋಕ ವಿಲಕ್ಷಣ...!!

ಈಗ ಕಣ್ಣೀರೇತಕೆ ಚನ್ನ
ಜಗವು ಅನುದಿನವು ನಗಬೇಕಾದರೆ
ಯಾರಾದರೂ ನೋವು ನುಂಗಲೇಬೇಕಲ್ಲ...!
ನಿತ್ಯವಸಂತದ ಮಹಾಚೈತ್ರದುದಯಕ್ಕೆ
ಹಾಸಿ ನನ್ನೆದೆಯ ಹಿಂಡುವೆನು ಸಹೃದಯ...
ಸಿದ್ಧಾರ್ಥನ ಬಾಳಪುಟ
ಸೂತ್ರಹರಿದು ಪಣಕ್ಕಿಟ್ಟ ಗಾಳಿಪಟ!

ಬೇಗ ಹೊರಡು ಚನ್ನ
ಮುಂಗೋಳಿ ಕೂಗುತಿದೆ
ದೇಶ ಕೋಶಗಳ ಪರಿಭ್ರಮಣೆಗೆ
ಬಾಳಕಾಲ ತಡವಾಗುತಿದೆ...

ಧನ್ಯವಾದಗಳು ಚನ್ನ
ಹೋಗಿಬರುವೆ
ಅಗಮ್ಯದೆಡೆಗೆ...

ದಟ್ಟಕಾನನಕಂಜಿ ಸುಕುಮಾರ
ಮರಳಿ ಬರಬಹುದೆಂದು
ಚನ್ನ ಹಾಕಿದನಲ್ಲೇ ಶತಪಥ...
ದಿಟ್ಟ ಹೆಜ್ಜೆಗಳಿಡುತ
ನಡೆದೇ ನಡೆದನು
ಮಹಾಪರಿತ್ಯಾಗಿ ತಥಾಗತ!..!

ರತ್ನಾಕರ ಸಿ. ಕುನುಗೋಡು

ಡಾ.ರತ್ನಾಕರ ಸಿ. ಕುನುಗೋಡು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಎರೆಕೊಪ್ಪದವರು. ತಾಯಿ-ನಿಂಗಮ್ಮ, ತಂದೆ- ಚನ್ನಬಸಪ್ಪ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಸ್ತುತ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸ.ಪ್ರ.ದ.ಕಾಲೇಜು, ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿನಿಂದಲೂ ಸಾಹಿತ್ಯ, ರಂಗಭೂಮಿ, ಸಂಘಟನೆ, ಸಾಮಾಜಿಕ ಪರಿವರ್ತನೆಗಳತ್ತ ಒಲವು ಮೂಡಿಸಿಕೊಂಡು ಕ್ರಿಯಾಶೀಲರಾಗಿರುವ ಅವರು ಕವಿತೆಗಳು ಮತ್ತು ಸಂಶೋಧನಾ ಲೇಖನಗಳ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಪಿಹೆಚ್ ಡಿ ಗಾಗಿ ಬೇರು ಬಿಳಲು ಎಂಬ ಸಂಶೋಧನಾ ಮಹಾಪ್ರಬಂಧವನ್ನು ರಚಿಸಿ ಪ್ರಕಟಿಸಿದ್ದಾರೆ.

More About Author