Story

ಮರಳಿ ಮಣ್ಣಿಗೆ

ಕವಿ, ಲೇಖಕಿ ವಿಶಾಲಾ ಆರಾಧ್ಯ ಅವರು ಬೆಂಗಳೂರು ಜಿ. ಆನೇಕಲ್ ತಾಲ್ಲೂಕಿನ ರಾಜಾಪುರದವರು. ಎಂ.ಎ. ಕನ್ನಡ ಸ್ನಾತಕೋತ್ತರ ಪದವೀಧರರು. ಶಿಕ್ಷಕ ತರಬೇತಿ ಪೂರ್ಣಗೊಳಿಸಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಭ್ಯಾಸಿಗಳು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಅವರ ಮರಳಿ ಮಣ್ಣಿಗೆ ಕತೆ ನಿಮ್ಮ ಓದಿಗಾಗಿ.

ಅಮ್ಮ ಅಪ್ಪನನ್ನು ನೋಡಿ ಎರಡು ವರ್ಷವಾಗುತ್ತಾ ಬಂದಿದೆ. ಅವರನ್ನು ಬಿಟ್ಟು ಊರನ್ನು ಬಿಟ್ಟು ಹೊರಟು ಸುಮಾರು ಐದು ವರ್ಷವಾಗಿದೆ. ದೂರದ ಗೋವಾದಲ್ಲಿ ಕೆಲಸ ಸಿಕ್ಕ ಕಾರಣ ಡಿಗ್ರಿ ಮುಗಿಸಿದ ತಕ್ಷಣ ಹೊರಟು ಬಂದಿದ್ದೆ. ಹಿಂದೆ ವರ್ಷದಲ್ಲಿ ಎರಡು ಸಾರಿ ಹೋಗಿ ಕಂಡು ಬರುತ್ತಿದ್ದೆ. ಈಗ ಕೆಲಸದ ಒತ್ತಡ ಮತ್ತು ಅಲ್ಲಿನ ಹುಡುಗಿಯನ್ನೇ ಪ್ರೀತಿಸಿ ಮದುವೆಯಾದ ನಂತರ ಅಪ್ಪ ಅಮ್ಮನ ಮತ್ತು ಊರಿನ ಸಂಪರ್ಕ ಕಡಿಮೆಯಾಗಿತ್ತು. ಅಪ್ಪ ಅಮ್ಮನಿಗೆ ತಿಂಗಳಿಗೆ ಸ್ವಲ್ಪ ಹಣ ಕಳಿಸುತ್ತಿದ್ದೆ. ಊರಿನಲ್ಲಿ ಒಡಹುಟ್ಟಿದ ತಮ್ಮ ತೋಟದ ಕಡೆ ನೋಡಿಕೊಂಡು ಅಪ್ಪನ ಜೊತೆಗೆ ಸಂತೋಷವಾಗಿದ್ದಾನೆ. ಕಳೆದ ಸಾರಿ ಊರಿಗೆ ಹೋದಾಗ ಅವನ ಮದುವೆ ಇತ್ತು. ಅಮ್ಮ ಇದ್ದಿದ್ದರೆ ಎಷ್ಟು ಖುಷಿ ಪಡುತ್ತಿದ್ದಳೋ ಈಗ ತಮ್ಮನಿಗೆ ಒಂದು ಹೆಣ್ಣುಮಗುವಾಗಿದೆ ಬಹುಶ: ಮಗು ಒಂದು ವರ್ಷವೆನಿಸುತ್ತದೆ. ಅದನ್ನು ಈ ಸಾರಿ ನೋಡಿ ಬರಬಹುದು.

ಈಗ ಹೊಸ ಕಂಪನಿ ನಾನೇ ಶುರು ಮಾಡುವ ಇರಾದೆಯಿದೆ. ಕಂಪನಿಯ ಬಾಸ್ ಒಳ್ಳೆಯವನಾದ್ದರಿಂದ ಆಸಕ್ತಿ ಶ್ರದ್ಧೆವಹಿಸಿ ಕೆಲಸ ಮಾಡುವ ಎಲ್ಲರಿಗೂ ಸಪೋರ್ಟ್ ಮಾಡುವ ಅವರ ಗುಣ ಎಲ್ಲರಿಗೂ ಇಷ್ಟವಾಗುತ್ತದೆ. ಕರ್ನಾಟಕದವರೇ ಆದ ಶ್ರೀಕಂಠಮೂರ್ತಿಯವರು ಬಹಳ ಸರಳ ಮತ್ತು ಶಿಸ್ತಿನ ವ್ಯಕ್ತಿಯಾಗಿದ್ದಾರೆ. ಅವರಿಗೆ ನನ್ನ ಮನದಲ್ಲಿದ್ದ ನನ್ನದೇ ಹೊಸ ಕಂಪನಿ ಶುರುಮಾಡಲು ಭಿನ್ನವಿಸಿ ಅವರಲ್ಲಿ ಅರುಹಿದಾಗ ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿ ‘ನನ್ನ ಸಹಕಾರ ನಿನಗೆ ಇರುತ್ತದೆ. ಹೇಗಿದ್ದರೂ ನನ್ನ ಕಂಪನಿಯಲ್ಲೂ ಈಗ ಗ್ಯಾಸ್ ರೆಗ್ಯುಲೇಟರ್ ಗಳಿಗೆ ಹೆಚ್ಚು ಬೇಡಿಕೆ ಇದೆ. ಅದನ್ನು ಪೂರೈಸಲು ಸಹ ವಿಳಂಬವಾಗುತ್ತಿರುವ ಕಾರಣ ನೀನೊಂದು ಘಟಕ ಶುರು ಮಾಡಿದರೆ ನಿನ್ನ ಕಂಪನಿಗೂ ನನಗೆ ಬರುವ ಆರ್ಡರ್ಗಳನ್ನು ಕೊಡಬಹುದು'. ಎಂದು ಹಿತನುಡಿಗಳೊಂದಿಗೆ ಭರವಸೆಯನ್ನು ನೀಡಿದ್ದರು.

ಗೋವಾದಿಂದ ಹೊರಟು ರೈಲಿನಲ್ಲಿ ಬೆಂಗಳೂರು ತಲುಪಿದೆ. ಬೆಂಗಳೂರು ಬಂದ ಕೂಡಲೇ ಮನಸ್ಸಿಗೇನೋ ಹಾಯ್ ಎನ್ನಿಸಿತು. ಕನ್ನಡದ ಗೆಳೆಯರು, ಬಾಲ್ಯದ ಸ್ನೇಹಿತರು ಎಲ್ಲರೂ ನೆನಪಾಗುತ್ತಾರೆ. ಮೊದಲೇ ಕರೆ ಮಾಡಿದ್ದ ಗೆಳೆಯ ರವೀ ಬಂದು ಕಾಯುತ್ತಿದ್ದವನು ನನ್ನ ಕಂಡು ಓಡಿ ಬಂದು ‘ವಿಕಾಸ್...' ಎಂದು ಪ್ರೀತಿಯಿಂದ ಅಪ್ಪಿಕೊಂಡ. ನಾನು ಆತನ ಕುಶಲೋಪರಿ ವಿಚಾರಿಸಿದೆ. ರೈಲುನಿಲ್ದಾಣದಲ್ಲಿ ಕೂಲಿಗಳು ಪ್ರಯಾಣಿಕರು ಅತ್ತಿಂದಿತ್ತ ನಡೆದಾಡುವುದು ಕೆಲವು ಸರಕು ಸಾಗಿಸುವ ಗಾಡಿಗಳನ್ನು ತಳ್ಳಿಕೊಂಡು ಬರುವವರು ‘ದಾರಿ..ದಾರಿ.. ದಾರೈ..' ಎಂದು ಕಿರುಚುವುದು. ಪ್ಲಾಟಫಾರಂನಲ್ಲಿ ರೈಲು ಸಂಚಾರದ ವಿಷಯಗಳನ್ನು ಮೈಕಿನಲ್ಲಿ ಪ್ರಕಟಿಸುವ ಧ್ವನಿಯ ಸೊಗಸು. ವಾತಾವರಣ ಎಲ್ಲವನ್ನೂ ಅನುಭವಿಸುತ್ತಾ ನಗುಮೊಗದಿಂದ ಗೆಳೆಯನ ಕಡೆಗೆ ನೋಡಿದೆ. ಆತ ನಾ ಬಂದ ಖುಷಿಯನ್ನು ಅನುಭವಿಸುತ್ತಿದ್ದ.

ಆತನ ಮನೆ ತಲುಪಿ ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನದ ನಂತರ ರವಿಯ ಹೆಂಡತಿ ನೀಡಿದ ರುಚಿಯಾದ ಬಿಸಿ ಬಿಸಿ ಇಡ್ಲಿ ಚಟ್ಟನಿ ನೀಡಿದ್ದನ್ನು ತಿಂದು ಮತ್ತೆರಡು ಹಾಕಿಸಿಕೊಂಡೆನು. ‘ಅತ್ತಿಗೆ ನಿಮ್ಮ ಕೈ ರುಚಿ ಅಮ್ಮನದೇ ಅನ್ನಿಸಿತು' ಎಂದೆ. ನನ್ನ ಮಾತಿಗೆ ನಕ್ಕು ಪತಿ ಮತ್ತು ನನಗೆ ಬಿಸಿ ಬಿಸಿ ಕಾಫೀ ತಂದಿಟ್ಟರು. ಕಾಫಿ ಕುಡಿಯುತ್ತಾ ಗೆಳೆಯನೊಡನೆ ನನ್ನ ಹೊಸ ಪ್ರಾಜೆಕ್ಟ್ ನ ವಿಷಯ ತಿಳಿಸಿದೆ. ಅವನು ಖುಷಿಯೇನೋ ಪಟ್ಟ ಆದರೆ ‘ಅಲ್ವೋ ಎಲ್ಲೋ ಇರುವ ಗೋವಾದಲ್ಲಿ ಕಂಪನಿ ಶುರು ಮಾಡುವ ಬದಲು ಇಲ್ಲೇ ಬೆಂಗಳೂರಿನ ಸುತ್ತಮುತ್ತ ಯಾವುದಾದರೂ ಕೈಗಾರಿಕಾ ಪ್ರದೇಶದಲ್ಲಿ ಶುರು ಮಾಡಿದರೆ ಮಾಲೂರಿನಲ್ಲಿ ನಿನ್ನ ತವರು ಮನೆಗೆ ಹತ್ತಿರ ಇರುತ್ತದೆ. ತಂದೆ ಮತ್ತು ತಮ್ಮನಿಗೂ ನೀನು ಹತ್ತಿರ ಇರುವ ಖುಷಿ, ಅಪ್ಪನಿಗೆ ಅವರ ಕೊನೆಗಾಲದಲ್ಲಿ ಕಣ್ಣಮುಂದೆ ನೀನಿರುವ ಖುಷಿ ಆಗುತ್ತಿತ್ತು ಅಲ್ವೇನೋ'? ಎಂದು ಸಲಹೆ ಇತ್ತನು. ಗೆಳೆಯನ ಮಾತು ಸತ್ಯವೆನ್ನಿಸಿತು. ಧೀರ್ಘವಾದ ಉಸಿರುಬಿಟ್ಟು ‘ಹೌದು ಕಣೋ...ಆದರೆ ಎಲ್ಲವನ್ನೂ ಸಾಗಿಸುವುದು ಕಂಪನಿಯ ನಿಯಮಗಳನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತರುವುದು, ಕೆಲಸಗಾರರ ನೇಮಕ ಇವೆಲ್ಲವನ್ನೂ ನಿಭಾಯಿಸಲು ಕಷ್ಟವಾಗಬಹುದು. ಮೊದಲು ಅಲ್ಲಿ ಮಾಡಿ ಅನುಭವ ಪಡೆದ ನಂತರ ನೋಡೋಣ ಮುಂದಿನ ವರ್ಷಗಳಲ್ಲಿ ಆ ಯೋಚನೆ. ಎಂದೆನು. ಅಮ್ಮ ಇದ್ದಿದ್ದರೆ ಎಷ್ಟು ಖುಷಿ ಪಡುತ್ತಿದ್ದಳು. ಆಕೆ ನನ್ನನ್ನು ಗೋವಾದಲ್ಲಿ ಸಿಕ್ಕ ಕೆಲಸಕ್ಕೆ ಕಳಿಸಲು ಎಷ್ಟು ಗೋಳಾಡಿದ್ದಳು. ಕೆಲಸ ನಿಧಾನವಾದರೂ ಪರವಾಗಿಲ್ಲ ನಮ್ಮ ಊರಿನ ಸುತ್ತಮುತ್ತ ವಾರಕ್ಕೊಮ್ಮೆ ಬಂದುಹೋಗುವಂತಹ ಹತ್ತಿರದಲ್ಲೇ ಮಾಡು ಕಂದಾ' ಎಂದು ಕೇಳಿಕೊಂಡಿದ್ದಳು. ನಾನು ಹೋಗುವಾಗ ಒಂದೆರಡು ದಿನ ಹಿಂದೆ ಯೋಚಿಸಿ ಯೋಚಿಸಿ ತಲೆಸುತ್ತು ಬಂದು ಮಲಗಿದ್ದಳು. ಆಗ ಇವೆಲ್ಲಾ ನನಗೆ ಅರ್ಥವಾಗಲೇ ಇಲ್ಲ. ‘ಏನೋ ಎಲ್ಲಿ ಕರಗಿಹೋದೆ' ಎಂದು ಗೆಳೆಯ ರವಿ ಎಚ್ಚರಿಸಿದಾಗ ನೆನಪಿನಿಂದ ಹೊರಗಡೆ ಬಂದೆ.

ಸಂಜೆಯ ಐದರ ನಂತರ ಗೆಳೆಯ ರವಿ ಮತ್ತು ನಾನು ಇಬ್ಬರೂ ಅವನ ಕಾರಿನಲ್ಲೇ ಊರಿನತ್ತ ಹೊರಟೆವು. ದಾರಿಯ ಇಕ್ಕೆಲಗಳಲ್ಲಿ ಸೊಗಸಾದ ಕೆಂಪು ಹೂಗಳನ್ನು ಚಪ್ಪರಹಾಕಿದ ಸುಂಕತ್ತಿಮರಗಳು. ಆ ಸುಂಕತ್ತಿಮರದ ಹೂಗಳ ನಡುವೆ ಇರುವ ಶಲಾಕೆಗಳು ಎಷ್ಟು ಚಂದ. ಹೂಗಳು ಮೊಗ್ಗಿದ್ದಾಗ ನಾವೆಲ್ಲರೂ ಅವನ್ನು ತಂದು ‘ಕೋಳಿಪಂದ್ಯ' ಎಂದು ಹಾಡುತ್ತಿದ್ದೆವು ಸಣ್ಣ ನವಿರಾದ ದಾರದಂತಹ ಎಳೆಗೆ ಮುಂಭಾಗದಲ್ಲಿ ಒಂದು ಕೋಳಿ ನೆತ್ತಿಯಲ್ಲಿರುವ ಗುಚ್ಚದಂತೆ ಒಂದು ಭಾಗ. ಅದನ್ನು ಆಟವಾಡುವವರು ಇಬ್ಬರೂ ಒಂದೊಂದು ಪರಸ್ಪರ ಹಿಡಿದುಕೊಂಡು ಕತ್ತಿವರಸೆಯಂತೆ ಆಡಬೇಕು. ಯಾರ ಹೂವಿನ ಗುಚ್ಚ ಮುರಿಯುತ್ತದೋ ಅವರು ಸೋತಂತೆ... ನೆನಪುಗಳು ನನ್ನ ಮುಖದಲ್ಲಿ ಮುಗುಳುನಗು ತಂದವು. ರಘು ಮತ್ತು ಸತೀಶ್ ನಾನು, ಕಿರಣ್ ಎಲ್ಲರೂ ಗೋಲಿ, ಬುಗರಿ, ಚಿನ್ನಿ-ದಾಂಡು ಆಡಿದ ಆಟಗಳು, ಆಟಗಳಲ್ಲಾದ ಜಗಳಗಳು ಒಂದೇ ಎರಡೇ..! ಜಗಳವಾದಾಗ ಅಲ್ಲಿರದೆ ಸರಳ, ನಾಗು, ಮೈಥಿಲಿ, ಶಾಂತ ಹುಡುಗಿಯರು ಆಡುತ್ತಿದ್ದ ಕುಂಟುಬಿಲ್ಲೆ ಮತ್ತು ಹಗ್ಗ ಜಿಗಿತಗಳಿಗೆ ಸೇರಿಕೊಳ್ಳುವುದು. ನಂತರ ಹುಡುಗರು ಬಂದು ಹುಡುಗಿಯರ ಆಟ ಆಡ್ತೀಯಾ ಬಾರೋಲೋ ಎಂದು ಜೋರು ಮಾಡಿ ಮತ್ತೇ ಕರೆದುಕೊಂಡು ಹೋಗಿ ಕೂಡಿಕೊಳ್ಳುವ ಆಟ. ಎತ್ತಹೋದವು ಆದಿನಗಳು? ಕಿಟಕಿಯಾಚೆಗೆ ನೋಡಿದೆ. ಹೊಂಗೆಯ ನೆರಳು ಸಂಜೆಗೆ ತಂಪಿನೊಳು ತಂಪಾಗಿ ಹರಡಿದ್ದವು. ಮನಸ್ಸು ಮೃದುವಾಗಿ ಹಾಯ್ ಎನ್ನಿಸಿತು. ನನಗಿದ್ದ ಆ ದಿನಗಳ ಸೊಬಗು ನನ್ನ ಮಕ್ಕಳು ಅನುಭವಿಸಲಿಲ್ಲವಲ್ಲಾ ಎನ್ನಿಸಿತು. ತಮ್ಮನ ಕರೆ ಬಂದಿತು ‘ಅಣ್ಣಾ ಎಲ್ಲಿರುವೆ ಇನ್ನೂ ಎಷ್ಟುತಾಸು ಆಗುತ್ತದೆ ಬರಲು'.. ಎಂದವನಿಗೆ ಸಮಯ ನೋಡಿದೆ ಇನ್ನು ಏಳಕ್ಕೆ ಹತ್ತುನಿಮಿಷವಿತ್ತು. ‘ಎಂಟರ ಹೊತ್ತಿಗೆ ತಲುಪುವೆ ಎಂದೆ. ವಿಶ್ವಾಸ್ ನನಗಿಂತ ನಾಲ್ಕು ವರ್ಷ ಚಿಕ್ಕವನು. ಅವನು ಸಹ ಮಾಸ್ಟರ್ಸ್ ಮಾಡಿದ್ದರೂ ತಂದೆ ತಾಯಿಯನ್ನು ಬಿಟ್ಟು ಬರಲು ತಯಾರಾಗದೆ ಹಳ್ಳಿಯ ಜಮೀನು ಮತ್ತು ಮನೆಯನ್ನು ನೋಡಿಕೊಂಡು ಸುಖವಾಗಿದ್ದಾನೆ. ಆತನ ಹೆಂಡತಿ ಬಾನುಮತಿ ಹೆಸರಿಗೆ ತಕ್ಕಂತೆ ಚಂದ್ರಮುಖಿಯೇ ಸರಿ. ತಮ್ಮನಿಗೆ ಅನುರೂಪಳಾಗಿ ಎಲ್ಲಾ ರೀತಿಯಲ್ಲೂ ಮನೆಗೆ ಮತ್ತು ಹಳ್ಳಿಗೆ ಹೊಂದಿಕೊಂಡ ಹೆಣ್ಣುಮಗಳು. ಅಪ್ಪ ಅಮ್ಮನಿಗೆ ಹೆಣ್ಣಿಲ್ಲವೆಂಬ ಕೊರಗಿತ್ತು. ನನ್ನ ಹೆಂಡತಿಯನ್ನು ಜೊತೆಯಲ್ಲಿಟ್ಟುಕೊಳ್ಳಲು ತುಂಬಾ ಇಷ್ಟಪಟ್ಟಿದ್ದರು. ಆದರೆ ನನಗೆ ಗೋವಾದಲ್ಲಿ ನೋಡಿಕೊಳ್ಳಲು ಸೊಸೆಯನ್ನು ನನ್ನೊಡನೆ ಕಳಿಸಿದರು. ನಂತರ ಅಮ್ಮ ಮೊಮ್ಮಕ್ಕಳನ್ನು ಕಂಡು ಖುಷಿಪಟ್ಟಿದ್ದಳು. ಆದರೆ ಹಳ್ಳಿಯಲ್ಲೇ ಇರಬೇಕು ಎನ್ನುವ ಅವರಾಸೆ ಈಡೇರದೆ ಬೇಸರವಿತ್ತು. ಅಮ್ಮ ತೀರಿಹೋದ ನಂತರ ತಮ್ಮ ವಿಶ್ವಾಸನ ಮದುವೆಯಾದದ್ದು. ಬಾನುಮತಿ ಸೊಸೆಯನ್ನು ಅಮ್ಮ ಕಂಡಿದ್ದರೆ ಇನ್ನೂ ಹಲವು ವರ್ಷ ಇರುತ್ತಿದ್ದಳೊ ಏನೋ ಆಕೆಗೆ ಇದ್ದ ಉಬ್ಬಸವು ಅವಳನ್ನು ಅಕಾಲ ಮರಣಕ್ಕೆ ತಳ್ಳಿತ್ತು.

ಮನೆ ತಲುಪಿ ಕುಶಲೋಪರಿಯ ನಂತರ ಅಪ್ಪನ ಬಳಿ ಹೋಗಿ ಕುಳಿತೆನು ಅಪ್ಪ ಮಂಚದ ಮೇಲೆ ಚಪ್ಪನಕಾಲು ಹಾಕಿ ಕುಳಿತಿದ್ದರು. ನಾನು ಪಕ್ಕದಲ್ಲಿ ಕುಳಿತು ಅಪ್ಪ ಹೇಗಿದ್ದೀಯ ಈಗ ಜಮೀನಿನಲ್ಲಿ ಏನು ಬೆಳೆ ಇದೆ ಎಂದೆನು. ‘ಏನೈತಪ್ಪ ಮೊದಲಂಗೇ ಕಂಬ್ಳೀಸೊಪ್ಪು ಐತೆ.. ಆಕಡೆ ಮೂಲೇನಾಗ ಪೀಂಚ್ಕಾಯಿ, ಬದ್ನೆಕಾಯಿ, ಚಿಕ್ಕಡಿಕಾಯಿ, ಹಿಂಗೇ ಮನೇಗ್ ಬೇಕಾದ್ದು ಮೆಣಸಿನಗಿಡ, ಈರುಳ್ಳಿ, ಬೆಳ್ಳುಳ್ಳಿ ಹಾಕೈತೆ.. ನಿನ್ನ ತಮ್ಮನು ಪಕ್ಕದ ಜಮೀನ್ ಮಾರಾಟಕ್ಕಿತ್ತಲ್ಲ ಅದ್ನೂ ತಕಾಬೇಕು ಅಂತವ್ನೇ.. ನೋಡಾನಾ ಈ ಸರಿ ಫಸಲು ನೋಡ್ಕಂಡ್ ಡಿಸೇಡ್ ಮಾಡೋಮಾ' ಎಂದು ನೀನೆಂಗಿದೀಯಾ ನನ್ ಸೊಸಿಮಕ್ಳು ಹೆಂಗವೆ ಅವರ್ನೂ ಕರ್ಕಂಬರೀವೂ"? ಎಂದರು. ನಾನು ಅವರ ಮಾತಿಗೆ ಸುಮ್ಮನೆ ಅಪ್ಪನ ತೊಡೆಯ ಮೇಲೆ ಮಲಗಿದೆ. ‘ಯಾಕೋಲೇ` ಎಂದರು ಅಪ್ಪ ನನ್ನ ತಲೆಯನ್ನು ನೇವರಿಸುತ್ತಾ.. ನಾನು ಸುಮ್ಮನೆ ಮೌನವಾದೆ. ತಮ್ಮ ಮತ್ತು ಗೆಳೆಯ ರವೀ ಹೊರಗಡೆ ಅಂಗಳದಲ್ಲಿ ಬೆಳದಿಂಗಳಿದ್ದ ಕಾರಣ ಅಲ್ಲೆ ಹಗ್ಗದ ಮಂಚದ ಮೇಲೆ ಹರಟುತ್ತಾ ಕೂತರು. ನಾನು ಅಪ್ಪನ ಮಡಿಲಲ್ಲಿ ಮಗುವಾಗಿದ್ದೆ. ‘ಅಪ್ಪಾ ನಿನ್ನ ಮಡಿಲು ಸಹ ಅಮ್ಮ ಮಡಿಲಂತೇ ತಂಪು' ಎಂದೆ. ‘ಯಾಕಪ್ಪಾ ಎಸಿನಾಗ ಇರೋರು ನೀವು.. ನಾವೋ ಹಳ್ಳಿಜನಾ ಅಲ್ಲಿ ಸಿಗೋ ತಂಪು ಶೋಕಿ ಇಲ್ಲೇನದೆ" ಎಂದರು. ಆ ಮಾತು ನನ್ನನ್ನು ಹಂಗಿಸಿದಂತಿತ್ತು. ‘ನಂದೇನಪ್ಪ ನಿಮ್ಮಮ್ಮನೂ ಹೋದ್ಲೂ, ನಿಮ್ಮನ್ನ ನನ್ ಮಡ್ಳಾಗಾಕಿ ನಾನೂ ಆಕಾಲಕ್ಕೆ ಕಾಯ್ತಾಯಿದ್ದೀನಿ, ಮಕ್ಳನ್ನ ಯಷ್ಟು ಪ್ರೀತಿ ಮಾಡ್ತಿದ್ಲು ಅವ್ಳು.. ದೇವ್ರು ಬೇಗ ಕರಸ್ಕಂಬುಟ್ಟಾ ಅವ್ಳನ್ನಾ..' ಎಂದು ಅಮ್ಮನ್ನ ನೆನೆಸಿಕೊಂಡು ಅಪ್ಪ ಬೇಸರ ಮಾಡಿಕೊಂಡನು. ಅಷ್ಟರಲ್ಲಿ ಬಾನುಮತಿ ಬಂದು ‘ಭಾವ ಊಟಕ್ಕೆ ಏಳಿ.. ಕೈಕಾಲು ತೊಳೆದು ಅವರನ್ನೂ ಕರೀತೀನಿ' ಎಂದಳು. ‘ಆಗಲಿ ಬಾನು, ರವೀಗೂ ಕರೆ.. ಅಪ್ಪ ಬನ್ನೀ' ಎಂದೆನು. ನಾವು ಹಾಲ್ ಗೆ ಬರುವಷ್ಟರಲ್ಲಿ ರವೀ ‘ವಿಕಾಸ್ ಇವತ್ತು ಅಂಗಳದಲ್ಲೇ ಬೆಳದಿಂಗಳೂಟ ಮಾಡೋಣ' ಎಂದನು. ವಿಶ್ವಾಸ್ ಸಹ ಆಗಲಿ ಎಂದ.

ಮೂರು ಚಾಪೆ ತೆಗೆದುಕೊಂಡು ಹೋಗಿ ಅಂಗಳದಲ್ಲಿ ಹಾಸಿದೆ. ಈ ಹಳ್ಳಿಗೆ ಬಂದು ಎರಡುವರ್ಷವಾದರೂ ನಾನು ಯಾವಾಗ ಬಂದರು ಆ ಎರಡು ವರ್ಷದ ದೂರ ಬಂದ ಕ್ಷಣವೇ ದೂರಾಗುತ್ತದೆ. ಯಾವ ವಸ್ತು ಎಲ್ಲಿರುತ್ತದೆ ಎಂದು ನಾನು ಊಹೆ ಮಾಡಬಲ್ಲೆ. ಮನೆಯ ವಾತಾವರಣವೂ ಎಂದೂ ಬದಲಾಗದು. ಮನೆಯಲ್ಲಿರುವ ತಮ್ಮ ಮತ್ತು ತಂದೆಯ ಮನಸ್ಸು ಸಹ. ನಾನು ಬಂದೊಡನೆ ನನ್ನ ಮನಸ್ಸನ್ನು ಅಪ್ಪುತ್ತಾರೆ.

ಚಾಪೆ ಹಾಸಿದ ನಂತರ ಊಟಕ್ಕೆ ಬೇಕಾಗುವ ತಟ್ಟೆಗಳು, ನೀರು, ಅಡುಗೆ ಪಾತ್ರೆಗಳು ತಂದಿಡಲು ಬಾನುಗೆ ಸಹಾಯ ಮಾಡಿದೆನು ಎಲ್ಲರೂ ಗುಂಡಾಗಿ ಕುಳಿತು ಮಧ್ಯೆ ಪಾತ್ರೆಗಳನ್ನು ಇಡಲಾಯಿತು. ಬಿಸಿ ಬಿಸಿ ಮುದ್ದೆ ಘಮಘಮಿಸುತ್ತಿತ್ತು ಅದರೊಡನೆ ಬೀನ್ಸ್ ಮತ್ತು ಹೆಸರುಕಾಳು, ಬೇಳೆಯೊಂದಿಗಿನ ಬಸ್ಸಾರು ಪಲ್ಯೆ ಸಹ ಮೂಗಿಗೆ ಆಮಂತ್ರಣದಿಂದ ಊಟಕ್ಕೆ ಕರೆದಿತ್ತು. ಅಪ್ಪನಿಗೆ ಸ್ಟೀಲ್ ತಟ್ಟೆ ಇಷ್ಟವಾಗದು. ಅವನಿಗೆಂದೇ ಒಂದು ಕಂಚಿನ ತಟ್ಟೆಯಿದೆ. ಅದನ್ನು ಗಂಗಾಳ ಎನ್ನುತ್ತಾನೆ ಅಪ್ಪ. ಗಂಗಾಳದಲ್ಲಿ ಬಡಿಸಿದ ಮುದ್ದೆ ಸಾರು ಪಲ್ಯೆಯನ್ನು ಅಪ್ಪ ಚಪ್ಪರಿಸಿಕೊಂಡು ತಿನ್ನುತ್ತಿದ್ದ. ನನಗೆ ಅಮ್ಮನೆನಪಾದಳು. ಅಮ್ಮ ಓಡಾಡಿದ ಈ ಮನೆ ಅಂಗಳ, ಊರು, ಅಮ್ಮ ನೀರು ಸೇದುತ್ತಿದ್ದ ಬಾವಿ ಇಲ್ಲೇ ಇದೆ. ‘ಭಾವ ಅನ್ನ ಬಡಿಸಲೇ ಇನ್ನೂ ಸ್ವಲ್ಪ' ಭಾನುಮತಿ ಕೇಳಿದಳು. ವಿಶ್ವಾಸ್ ‘ಬಡಿಸು ಬಡಿಸು.. ರವೀಗೂ ಬಡಿಸು..' ಎಂದನು. ತಮ್ಮನ ಮುಖನೋಡಿದೆ. ಅವನು ಅಮ್ಮನದೆ ರೂಪಹೊತ್ತವನು. ರುಚಿಕರವಾದ ಊಟ ಹಿತವಾಗಿತ್ತು. ತಮ್ಮನ ಮಗಳು ‘ದೊಡ್ಡಪ್ಪ.. ಎಂದು ಎಲೆ ಅಡಿಕೆ ತಟ್ಟೆ ತಂದಿತ್ತಳು' ಅವಳ ಕೈಯಿಂದ ತಟ್ಟೆ ತೆಗೆದುಪಕ್ಕಕ್ಕೀಟ್ಟು ಅವಳನ್ನು ತೊಡೆಯಮೇಲೆ ಕೂಡಿಸಿಕೊಂಡೆ. ಏನು ನಿನ್ನ ಹೆಸರು. ಎಂದೆ ‘ರುಚಿತಾ' ಎಂದಳು. ಅವಳೊಡನೆ ಹರಟುತ್ತಾ ಕಾಲ ಸರಿದದ್ದೇ ತಿಳಿಯಲಿಲ್ಲ. ಗಂಟೆ ಹತ್ತಾಗಿತ್ತು. ನಾನು ರವೀ ಅಂಗಳದಲ್ಲೇ ಮಲಗಲು ಅಣಿಯಾದೆವು. ನಮ್ಮೊಡನೆ ಬಂದ ತಮ್ಮನೂ ಸಹ ಊರಿನ ವಿಷಯ, ಜಮೀನಿನ ನೀರಾವರಿ ವಿಷಯ, ಅಪ್ಪ ತಿಳಿಸಿದ ಪಕ್ಕದ ಜಮೀನಿನವರು ಜಮೀನು ಮಾರಾಟವಿಟ್ಟ ವಿಷಯೆಲ್ಲ ಹೇಳಿದನು. ಜಮೀನು ಇಪ್ಪತ್ತೈದು ಲಕ್ಷಕ್ಕೆ ಮಾರಾಟಬೆಲೆ ಇಟ್ಟಿದ್ದಾರೆ ಅಣ್ಣಾ ಎಂದನು. ಹಳ್ಳಿಯ ಅದೂ ಇದೂ ವಿಷಯ ಮಾತನಾಡಿ ಯಾವಾಗ ನಿದ್ದೆಗೆ ಜಾರಿದೆವೋ ಗೊತ್ತೇ ಆಗಲಿಲ್ಲ.

ಬೆಳಗ್ಗೆ ಐದಕ್ಕೆ ಎಚ್ಚರಾಯಿತು. ಆಗಲೇ ಅಪ್ಪ ಗದ್ದೆಕಡೆಗೆ ಹೋಗಿದ್ದರು. ಅಪ್ಪ ಏಳು ಗಂಟೆಗೆ ಮನೆಗೆ ವಾಪಸ್ಸಾದರು. ಭಾನು ಎಲ್ಲರಿಗೂ ಟೀ ಮಾಡಿ ಬಿಸ್ಕತ್ತಿನೊಡನೆ ಎಲ್ಲರಿಗೂ ಕೊಟ್ಟಳು. ‘ಭಾನುಮತಿ ಬೇಗ ತಿಂಡಿ ಮಾಡಿಕೊಡು. ನಾನು ಸ್ನಾನ ಮಾಡಿಹೊರಡುವೆ'ನೆಂದೆ. ರವಿಯಾದಿಯಾಗಿ ಎಲ್ಲರೂ ನನ್ನೆಡೆಗೆ ನೋಡಿದರು. ‘ಹೌದು' ಎನ್ನುವಂತೆ ತಲೆಯಾಡಿಸಿದೆ. ಅಪ್ಪ ‘ಇದ್ಯಾಕಪ್ಪ ಇದ್ಕಿದ್ದಂಗೆ ಹೊಂಟೆ' ಎಂದರು ನೊಂದು. ಅಪ್ಪನ ಬಳಿ ಹೋಗಿ ಹೆಗಲಿಗೆ ತೋಳು ಬಳಸಿ ‘ಅಪ್ಪ ಬೇಗ ವಾಪಸ್ ಬರುವೆನು. ಪಕ್ಕದ ಜಮೀನು ಯಾರಿಗೂ ಕೊಡಬಾರದೆಂದು ಅವರಿಗೆ ಹೇಳು. ನಾವೇ ತೆಗೆದುಕೊಳ್ಳೋಣ ಎಂದೆ. ಅಪ್ಪ ನಂಬದವರಂತೆ ನನ್ನೆಡೆಗೆ ನೋಡಿದರು. ತಮ್ಮ ಪಕ್ಕ ಬಂದು ನಿಂತ. ಅವನ ಕೈಹಿಡಿದು ಮೃದುವಾಗಿ ಒತ್ತಿದೆ. ‘ನಾವಿಬ್ಬರೂ ಕೂಡಿ ವ್ಯವಸಾಯ ಮಾಡೋಣ, ಇದರಲ್ಲಿರುವ ಸುಖ ಯಾರಿಗಿದೆ. ನನ್ನ ಮಕ್ಕಳಿಗೂ ಹಳ್ಳಿಯ ಸೊಬಗು, ಮರ, ಹಳ್ಳ,ಕೊಳ್ಳ, ನದಿ,ಹೊಲ, ಗದ್ದೆಗಳ ಪರಿಚಯವಾಗಲಿ. ಅಪ್ಪನಿಗೆ ಕೊನೆಗಾಲದಲ್ಲಿ ಅಮ್ಮ ಹೇಳುತ್ತಿದ್ದ ಎರಡು ಕಣ್ಣುಗಳು ನಾವಿಬ್ಬರೂ ಅವರ ಜೊತೆಗಿರೋಣ' ಎಂದೆನು. ರವಿಯ ಬಳಿಗೆ ಸರಿದು ‘ರವಿ ನೀ ಹೇಳಿದಂತೆ ನಾನು ಕಂಪನಿಯನ್ನು ಇಲ್ಲಿಗೆ ತರುವೆನು. ಅದಾಗದಿದ್ದರೆ ಇಡೀ ಜಗತ್ತಿಗೆ ಬೆಳಕಾಗಬಲ್ಲ ಅನ್ನದಾತನಾಗಿ ಈ ಮಣ್ಣಸೇವೆ ಮಾಡುವೆನು'ಎಂದೆನು. ರವಿಯ ಆಶಯವೂ ಅದೆ ಆಗಿದ್ದರಿಂದ ಅವನ ಮೊಗವೂ ಅರಳಿತು. ಅಪ್ಪನ ಕಣ್ಣಲ್ಲಿ ಸಂತೋಷದ ಹೊಳಪಿತ್ತು.

*******

ವಿಶಾಲಾ ಆರಾಧ್ಯ

ಕವಯತ್ರಿ ವಿಶಾಲಾ ಆರಾಧ್ಯ ಅವರು ಬೆಂಗಳೂರು ಜಿ. ಆನೇಕಲ್ ತಾಲ್ಲೂಕಿನ ರಾಜಾಪುರದವರು. ಎಂ.ಎ. ಕನ್ನಡ ಸ್ನಾತಕೋತ್ತರ ಪದವೀಧರರು. ಶಿಕ್ಷಕ ತರಬೇತಿ ಪೂರ್ಣಗೊಳಿಸಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಭ್ಯಾಸಿಗಳು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ತಮ್ಮ ಉತ್ತಮ ಸೇವೆಯಿಂದಾಗಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಶಿಕ್ಷಕ ರತ್ನ ಪ್ರಶಸ್ತಿ, ಕನ್ನಡ ನಿಧಿ ಪ್ರಶಸ್ತಿ, ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ, ಆದರ್ಶ ಅಧ್ಯಾಪಕಿ ಪ್ರಶಸ್ತಿ, ಆದರ್ಶ ಮಹಿಳಾ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. ಕವನ ಕತೆಗಳನ್ನು ಬರೆವ ಅವರು ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ. ಮಕ್ಕಳಿಗಾಗಿ ಎರಡು ಕವನ ಸಂಕಲನಗಳನ್ನು ಪ್ರಕಟಿಸಿರುವ ಅವರು ‘ಗೊಂಬೆಗೊಂದು ಚೀಲ' ಎಂಬ ಮಕ್ಕಳ ಕತಾ ಸಂಕಲನವನ್ನೂ ಪ್ರಕಟಿಸಿದ್ದು, ಈ ಕೃತಿಗೆ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ 2019-2020ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ದೊರೆತಿದೆ.

More About Author