Story

ಮರಳಿ ಮಣ್ಣಿನೆಡೆಗೆ 

ದೇಶದಲ್ಲಿ ಈಗ ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡಿದೆ. ಹಾಗೆ ನೋಡಿದರೆ ಸಿರಿಪುರಕ್ಕೆ 15-20 ವರ್ಷಗಳ ಹಿಂದೆಯೇ ಭಾಳ ಜೋರಾದ ಆರ್ಥಿಕ ಹೊಡೆತ ಬಿದ್ದಿತ್ತು. ಸಿರಿಪುರದ ಸೀರೆಗಳು ಮತ್ತು ಇಲ್ಲಿ ತಯಾರಾಗುವ ಚಕ್ಕಡಿಗಳು ಲೋಕಪ್ರಸಿದ್ಧಿಯನ್ನು ಪಡೆದಿದ್ದವು. ಕೈಮಗ್ಗದಲ್ಲಿ ಇಲ್ಲಿನ ಕುಶಲ ನೇಕಾರರಿಂದ ತಯಾರಾಗುತ್ತಿದ್ದ ಸೀರೆಗಳು ಹೊರರಾಜ್ಯಕ್ಕೆ ರಫ್ತಾಗುತ್ತಿದ್ದವು. ಭಗವಂತಪ್ಪ ಕಮ್ಮಾರ ಮತ್ತು ಅವನ ಮಕ್ಕಳು ಕಟ್ಟಿಗೆಯಲ್ಲಿ ತಯಾರಿಸುತ್ತಿದ್ದ ಬಂಡಿಗಳು ನೋಡುವುದಕ್ಕೆ ಮಾತ್ರ ಪಸಂದಾಗಿರಲಿಲ್ಲ ಬಾಳಿಕೆಯಲ್ಲೂ ಸಹ ಗಟ್ಟಿಮುಟ್ಟಾಗಿರುತ್ತಿದ್ದವು. ಬೇರೆ ಜಿಲ್ಲೆಯ ರೈತರು ಬಂದು ಇಲ್ಲಿ ಬಂಡಿ ಮಾಡಲಿಕ್ಕೆ ಹಾಕುತ್ತಿದ್ದರು. ಊರಲ್ಲಿ ಭಗವಂತಪ್ಪನ ಆರು ಅಡ್ಡೆಗಳಿದ್ದವು. ಅಲ್ಲಿ ಅವನ ಮಂದಿಯಷ್ಟೇ ಅಲ್ಲದೇ ಬೇರೆ ಜನಾಂಗದವರು ಸಹಿತ ಉಳಿ ಕೊಡತಿ ಹಿಡಿದು ಭಗವಂತಪ್ಪನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ನೇಕಾರಿಕೆಯು ಅಷ್ಟೇ. ಇಲ್ಲಿ ಸೀರೆಯನ್ನು ನೇಯುವವರು ನೇಕಾರರು ಮಾತ್ರವಾಗಿರಲಿಲ್ಲ. ಮುಸ್ಲಿಮರು, ಕುರುಬರು ಸಹಿತ ನೇಯ್ಗೆ ನೇಯುತ್ತಿದ್ದರು ಊರಲ್ಲಿ ಏನಿಲ್ಲವೆಂದರು ಸುಮಾರು ಮುನ್ನೂರು ಕೈಮಗ್ಗಗಳಿದ್ದವು.

ಪಕ್ಕದ ಜಿಲ್ಲೆಯಲ್ಲಿ ಕಬ್ಬಿಣದಲ್ಲಿ ಚಕ್ಕಡಿಗಳನ್ನು ತಯಾರು ಮಾಡತೊಡಗಿದರು. ಇವು ಕಟ್ಟಿಗೆ ಬಂಡಿಗಳಿಗಿಂತ ಹಗೂರ ಮತ್ತು ಬೆಲೆ ಕಡಿಮೆಯಾಗಿದ್ದರಿಂದ ಭಗವಂತಪ್ಪನ ಬಂಡಿಗಳಿಗೆ ಬೇಡಿಕೆ ಕುಸಿಯತೊಡಗಿತು. ಸೀರೆಯದು ಅಷ್ಟೇ. ಮಹಾರಾಷ್ಟ್ರದಲ್ಲಿ ಪವರ್‍ಲೂಮ್‍ನಲ್ಲಿ ಸಿರಿಪುರದ ಬಾರ್ಡರ್ ಡಿಸೈನ್, ಸೆರಗಿನ ತರಹದ್ದೇ ಸೀರೆಗಳು ತಯಾರತೊಡಗಿದವು ಹೆಣ್ಮಕ್ಕಳು ಈ ಸೀರೆಯ ಬೆಲೆ ಕಡಿಮೆ ಅಂತ ಅವನ್ನೆ ಉಡತೊಡಗಿದರು. ಇಲ್ಲಿಗೇ ಸಿರಿಪುರದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿತು. ಸೀರೆ ನೇಯುವುದು, ಕಟ್ಟಿಗೆ ಜೋಡಿಸುವುದು ಬಿಟ್ಟು ಬೇರೆ ಕೆಲಸವೇ ಇಲ್ಲಿನ ಬಹಳಷ್ಟು ಮಂದಿಗೆ ಗೊತ್ತಿರಲಿಲ್ಲ ಇವರೆಲ್ಲ ಕಂಗಲಾಗಿ ಹೋದರು.

***

ಸೀರೆ ನೇಯ್ದವರ, ಚಕ್ಕಡಿ ಜೋಡಿಸಿದವರ ಮಕ್ಕಳಿಗೆಲ್ಲ ಈಗ ಪಕ್ಕದ ಪಟ್ಟಣ ಬದುಕನ್ನು ಕಟ್ಟಿಕೊಟ್ಟಿತ್ತು. ಪಟ್ಟಣಕ್ಕೆ ದಿನವೂ ಕೆಲಸಕ್ಕೆ ಹೋಗುವ ಸಿರಿಪುರದ ಮಂದಿ ಕಟ್ಟಡ ಕಾರ್ಮಿಕರಾಗಿ, ಬಾರ್ ಬೈಂಡರ್ಸ್ ಆಗಿ, ಬಿಲ್ಡಿಂಗ್ ಪೇಂಟರ್ ಆಗಿ, ಖಾಸಗಿ ಆಫೀಸಿನಲ್ಲಿ-ಅಂಗಡಿಗಳಲ್ಲಿ ಸೇಲ್ಸ್‍ಬಾಯ್ ಆಗಿ ಕೆಲಸವನ್ನು ಮಾಡುತ್ತಿದ್ದರು. ಪ್ರತಿಯೊಬ್ಬರ ತಿಂಗಳ ಸಂಬಳ ಹತ್ತು ಸಾವಿರವನ್ನೇನೂ ದಾಟುತ್ತಿರಲಿಲ್ಲ. ಅವರುಗಳ ವಯಸ್ಸು ಅಷ್ಟೇ, ಮುವತ್ತು-ಮುವ್ವತ್ತೈದರ ಆಸು-ಪಾಸು. ಶ್ರೀಶೈಲನಿಗೆ ಪಗಾರ ಮನೆಯಲ್ಲಿ ಕೊಡಲೇಬೇಕೆಂಬ ದರ್ದು ಏನಿರಲಿಲ್ಲ. ಸ್ಟೈಲಾಗಿ ಬೈಕ್‍ನಲ್ಲಿ ಅಡ್ಡಾಡಬೇಕೆನಿಸಿತು. `ಕೂದಲಾ ತುಂಬುವವರು ಸೈತ ಬೈಕ್ ಮ್ಯಾಲ ಅಡ್ಡಾಡತಾರ.. ನಾನೂ ತಗೊಂಡೇ ತಿರತೇನಿ’ ಅಂತ ಹಠ ಮಾಡಿ ಅವನು ಕಂತಿನಲ್ಲಿ ಒಂದು ಮೋಟರ್‍ಸೈಕಲ್ ತಗೊಂಡನು. ಅವನ ಕಂಡು ಒಬ್ಬರಾದ ನಂತರ ಒಬ್ಬರು ಸಮೂಹ ಸನ್ನಿಗೆ ಒಳಗಾದವರಂತೆ ಫೈನಾನ್ಸ್‍ನಲ್ಲಿ ಲೋನ್ ಮಾಡೋದು ಮೋಟರ್‍ಸೈಕಲ್ ತಗೊಳ್ಳೊದು ಮಾಡತೊಡಗಿದರು. ಐದಾರು ಸಾವಿರರುಪಾಯಿ ಪಗಾರ ತಗಳ್ಳೋನು ಸಹ ಕಡೇಪಕ್ಷ ಟಿ ವ್ಹಿ ಎಸ್ ಎಕ್ಷೆಲ್ ಸುಪರ್ರಾದರೂ ಸರಿ ಒಟ್ಟೂ ಮೋಟರ್‍ಸೈಕಲ್ ಹೊಂದಲೇಬೇಕೆಂಬ ಹುಚ್ಚಿಗೆ ಬಿದ್ದರು. ಪಟ್ಟಣದ ವಿಜಯ್ ಮೋಟರ್ಸ್‍ನ ಶೋರೂಂಗೆ ಅದು ಸುಗ್ಗಿ ಕಾಲವಾಗಿತ್ತು. ಸಿರಿಪುರದಲ್ಲಿ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅವರು ಮೊದಲೇ ಬೈಕುಗಳನ್ನು ಹೊಂದಿದ್ದರು. ಮತ್ತಷ್ಟು ಟೂ ವ್ಹೀಲರ್‍ಗಳು ಸಿರಿಪುರಕ್ಕೆ ಬರತೊಡಗಿದ್ದರಿಂದ ಬಿಳಿಯಂಗಿಶೆಟ್ಟಿ ಊರಿನ ತುದಿಗೆ ಒಂದು ಪೆಟ್ರೋಲ್ ಬಂಕ್‍ನ್ನು ಸ್ಥಾಪಿಸಿದನು.

ಐದಾರು ತಿಂಗಳು ಕಳೆಯುತ್ತಲೇ ಮೋಟರ್‍ಸೈಕಲ್ ಕೊಂಡಿದ್ದ ಮಂದಿ ಖರ್ಚಿಗಾಗಿ ಕೈಬಾಯಿ ಸವರತೊಡಗಿದರು. ಸತತ ಮೂರು ಕಂತು ಡ್ಯೂ ಆದರೆ ಗಾಡಿಯನ್ನ ಫೈನಾನ್ಸನವರು ಎಳೆದುಕೊಂಡು ಹೋಗುತ್ತಾರೆಂಬ ಭೀತಿಯಿಂದ ಕಂತೂ ತಪ್ಪಿಸುವಂತಿಲ್ಲ, ಮನೆ ಖರ್ಚಿಗೆ ಹಣಾನೂ ಕಡಿಮೆ ಮಾಡುವಂತಿರಲಿಲ್ಲ. ಎರಡರ ನಡುವೆ ಸಿಕ್ಕು ಅವರ ಸ್ಥಿತಿ ಅಡಕೊತ್ತಿನ ಅಡಕೆಯಂತಾಯ್ತು. ಇಂಥ ದಿನಗಳಲ್ಲೇ ಒಮ್ಮೆ ಆಕಸ್ಮಿಕವಾಗಿ ಒಬ್ಬರು ದಾರಿಯಲ್ಲಿ ಶ್ರೀಶೈಲನ ಮೋಟರ್‍ಸೈಕಲ್‍ಗೆ ಕೈ ಮಾಡಿ ಸಿರಿಪುರಕ್ಕೆ ಬಂದಿದ್ದರು. ಬಿಳಿಯಂಗಿ ಬಿಳಿಲುಂಗಿಯುಟ್ಟಿದ್ದ ಅವರ ಮುಖದಲ್ಲಿ ಕುರುಚಲು ಗಡ್ಡವಿದ್ದರೂ ಸೌಮ್ಯಕಳೆ ಎದ್ದು ಕಾಣುತ್ತಿತ್ತು. ಮಾತುಗಳು ಬಹು ಆತ್ಮೀಯವಾಗಿಯೂ ಮತ್ತು ಆ ಕೆಲಸಗಾರರ ಸಧ್ಯದ ತುರ್ತನ್ನು ಸಂಭಾಳಿಸುವಂತಿದ್ದವು. ಹಂಗಾಗಿ ಶ್ರೀಶೈಲ, ಶಿವು, ಚನ್ನಬಸವ, ಪ್ರಶಾಂತ, ರೆಹಮಾನ್, ಪರಸು.. ಪಟ್ಟಣಕ್ಕೆ ಕೆಲಸಕ್ಕ ಹೋಗುವ ಎಲ್ಲಾ ಮಂದಿಗೂ ಅವರು ಇಷ್ಟವಾದರು. ಕೆಲ ದಿವಸ ಇಲ್ಲೇ ಇರ್ತಿನಿ ಅಂತಂದರು. ಇವರು ಅವರನ್ನು ಗುರೂಜೀ ಅನ್ನತೊಡಗಿದರು. ಬಸ್‍ಸ್ಟ್ಯಾಂಡ್ ಸಮೀಪದ ಬಸವಣ್ಣನ ಗುಡಿಯಲ್ಲಿ ಗುರೂಜಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದರು. ಅವರದು ಒಂದೇ ಹೊತ್ತು ಊಟ. ಪ್ರತಿದಿನ ಒಬ್ಬೊಬ್ಬರು ತಮ್ತಮ್ಮ ಮನೆಗೆ ಕರೆದೊಯ್ಯುತ್ತಿದ್ದರು.

`ನಾವು ಇನ್ನೊಬ್ಬರಂತೆ ಬದುಕುವುದರಲ್ಲಿ ಅರ್ಥವಿಲ್ಲ, ನಮ್ಮಂತೆ ನಮಗಾಗಿ ಬದುಕುಬೇಕು. ನನ್ನ ಪ್ರಕಾರ ಸಂತೋಷ-ಆನಂದ ನೆಮ್ಮದಿ ಇದೆಲ್ಲ ಎಲ್ಲಿದೆಯೆಂದರೆ ಸರಳತೆಯಲ್ಲಿದೆ, ಸಹಜವಾಗಿ ಇರುವುದರಲ್ಲಿದೆ’ ಅವರು ನುಡಿಯುತ್ತಿದ್ದರು. ಅದು ಸ್ವಾಮಿಗಳ ಪ್ರವಚನವಲ್ಲ, ಮಾಸ್ತರರ ಪಾಠವೂ ಅಲ್ಲ ಮತ್ತು ಹೌದು. ಅವರು ಸಿರಿಪುರದ ಹೊರಗಿನ ಬಯಲಲ್ಲಿ ಮರವೊಂದರ ಕೆಳಗೆ ಕುಳಿತಿದ್ದರು ಅವರ ಮುಂದೆ ಶ್ರೀಶೈಲನ ಗೆಳೆಯರು ಇದ್ದರು. `ನಾವು, ಜೀವನ ಆರಾಮಗೊಳಿಸಕೊಳ್ಳಬೇಕು ಅಂತ ಹೋಗಿ.. ಬಹಳಷ್ಟು ಇಕ್ಕಟ್ಟಿಗೆ ಸಿಕ್ಕಿಕೊಳ್ತೆವೆ. ಈಗ ಉದಾಹರಣೆಗೆ ಶ್ರೀಶೈಲನ್ನ ನೋಡ್ರಿ.. ಆತ ಬಸ್‍ನ್ಯಾಗ ಒದ್ದಾಡೂದು ಬೇಡ ಆರಾಮ ಹೋಗಬೇಕಂತ ಒಂದು ಟೂವ್ಹೀಲರ್ ತಗೊಂಡ. ಅವನಿಗೆ ಬರೋದು ಎಂಟ ಸಾವಿರ ರುಪಾಯಿ ಸಂಬಳ. ಅದರಲ್ಲೀಗ ಮನೆಗೂ ಕೊಟ್ಟು ಗಾಡಿ ಕಂತನ್ನು ಕಟ್ಟಬೇಕು. ಸಂಬಳ ಸಾಲದೇ ಒಂದೇ ಸಮ ಒದ್ದಾಡತಿದ್ದಾನ.’ ಶ್ರೀಶೈಲ ಹೌದು ಗುರೂಜಿ ಅಂದ.

ಸಂಜೆ ಹೊತ್ತು ದಿನವೂ ಅವರೆಲ್ಲ ಗುರೂಜೀಯ ನೇತೃತ್ವದಲ್ಲಿ ಊರ ಹೊರಗಿನ ಮರದ ಕೆಳಗೆ ಕೂಡುತ್ತಿದ್ದರು. ಇವರೆಲ್ಲ ತಮ್ಮ ಸಂದೇಹಗಳನ್ನು ಕೇಳುತ್ತಿದ್ದರು ಗುರೂಜಿ ಅದಕ್ಕೆಲ್ಲ ತಕ್ಕ ಪರಿಹಾರ ಹೇಳುತ್ತಿದ್ದರು. ಅವರ ಎಲ್ಲ ಉತ್ತರಗಳೂ ಸಹಜತೆ ಮತ್ತು ಸರಳತೆಯೆಡೆಗೆ ಬಂದು ನಿಲ್ಲುತ್ತಿದ್ದವು. ಹೀಗಾಗಿ ಅವರನ್ನು ಕೆಲವರು ಸರಳಾನಂದ ಸ್ವಾಮಿ ಎಂದೂ ಕರೆಯತೊಡಗಿದರು. ಮೋಟರ್ ಸೈಕಲ್ ತಗೊಂಡ ಮೇಲೆ ನೀವೆಲ್ಲ ಎಷ್ಟು ಸೋಮಾರಿಗಳಾಗಿದ್ದೀರಿ ಎಂದು ಹೇಳುತ್ತ ಗುರೂಜೀ `ನೀವು ಸಂಡಾಸಕ್ಕೂ ಸಹಿತ ಅದರ ಮೇಲೆಯೇ ಹೋಗ್ತೀರಿ..’ ಅಂತ ಆಕ್ಷೇಪವೆತ್ತಿದರು. ಅದಕ್ಕೆ ಮಾರುತಿ `ಇಲ್ಲ ಗುರೂಜಿ ಊರು ಭಾಳ ದೊಡ್ಡದಾಗೇತಿ ಸಂಡಾಸಕ್ಕ ಭಾಳ ದೂರ ಹೋಗ್ಬೇಕು ಹಂಗಾಗಿ ಬೈಕ್ ಮ್ಯಾಲೆ ಹೋಗ್ತಿವಿ..’ ಅಂದ. ಅದಕ್ಕವರು ಸುಮ್ಮನೆ ಮುಖವರಳಿಸಿದರು. `ಐವತ್ತೋ-ಅರವತ್ತೋ ಸಾವಿರ ಕೊಟ್ಟು ಬೈಕ್ ತಗೊಳ್ತಿರಿ, ಆದ್ರ.. ಹತ್ತೋ-ಹನ್ನೆರಡ ಸಾವಿರ ಖರ್ಚು ಮಾಡಿ ಪಾಯಖಾನಿ ಕಟ್ಟಸಲಿಕ್ಕೆ ಹಿಂದ್‍ಮುಂದ್ ನೋಡ್ತಿರಿ..’ ಗುರೂಜಿ ಮತ್ತೆ ಮೆಲ್ಲಗೆ ನಗತೊಡಗಿದರು. ಸುತ್ತಲಿದ್ದವರು ಸಹ ತಮ್ಮ ಅನಾದಿತನಕ್ಕೆ ತಾವೇ ನಗತೊಡಗಿದರು. `ಬೈಕು ನಿಮ್ಮೊಬ್ಬರ ಉಪಯೋಗಕ್ಕ ಬರ್ತದ, ಪಾಯಖಾನಿ ಮನಿ ಮಂದಿಗೇ ಉಪಯೋಗ ಆಗ್ತದ ನೋಡ್ರಿ ಯೋಚನಾ ಮಾಡ್ರಿ..’ ಅಂದರು ಗುರೂಜಿ. `ನೀವೆಲ್ಲ ಮೊದಲ ಹೆಂಗ್ ಬಸ್ಸಿನಾಗ ಸಂಚಾರ ಮಾಡತಿದ್ದಿರೋ ಮತ್ತೆ ಹಂಗ್ ಮಾಡೋದು ಭಾಳ ಒಳ್ಳೇದು. ಇದು ನಿಮಗ ಆರ್ಥಿಕವಾಗಿಯಷ್ಟೇಯಲ್ಲದೇ ಪರಿಸರಕ್ಕೂ ಒಳ್ಳೇ ಕೊಡುಗೆ ಕೊಟ್ಟಂತೆ ಆಗುತ್ತ’ ಅಂದರು.

ಆ ತಿಂಗಳಲ್ಲಿ ಮೂರನೇ ಬಾರಿ ಪೆಟ್ರೋಲ್ ರೇಟು ಹೆಚ್ಚಾಗಿಬಿಟ್ಟಿತು. ಪಟ್ಟಣಕ್ಕೆ ಹೋಗುವವರಿಗೆ ಗಾಡಿ ಮೇಂಟೈನ್ ಮಾಡುವುದಕ್ಕಿಂತ ಬಸ್ಸಿನಲ್ಲಿ ಅಡ್ಡಾಡುವುದೇ ಬೆಸ್ಟು! ಅನ್ನಿಸಿ ಗುರೂಜೀ ಮಾತು ಅಗ್ಗದಿ ಖರೆವೈತಿ ಅಂದುಕೊಂಡರು. ಕೆಲವು ಕೆಲಸಗಾರರ ಬಾಡಿಗೂ ಸಂಜೆಹೊತ್ತು ತಪ್ಪದೇ ಎಣ್ಣೆ ಹಾಕಬೇಕಿತ್ತು. ಅಂಥವರು ಈ ಗಾಡಿಯ ಸಹವಾಸವೇ ಬೇಡವೆಂದು ಅದನ್ನು ಮಾರಿಬಿಡುವುದಕ್ಕೆ ತಯಾರಾದರು. ಪಟ್ಟಣದ ಸಂಡೇ ಬಜಾರಿನಲ್ಲಿ ಐದೋ-ಹತ್ತೋ ಸಾವಿರ ಕಡಿಮೆ ಮಾಡಿ ಕೊಟ್ಟು ಆರಾಮಾಗಿ ಅಲ್ಲೇ ಒಂದು ನೈಂಟಿ ಹೊಡೆದು ಬರತೊಡಗಿದರು. ಉಳಿದವರು ಒಬ್ಬೊಬ್ಬರಾಗಿ ಹಾಗೇ ಮಾಡತೊಡಗಿದರು. ಈ ಗಾಡಿಗಳನ್ನ ಇಟ್ಟುಕೊಂಡು ಗುದ್ದಾಡುವುದಕ್ಕಿಂತ ಕೊಟ್ಟು ಆರಾಮಾಗಿ ಇರೋದು ಚುಲೋ ಅನ್ನಿಸಿ ಅದೇ ಸಂಡೇ ಬಜಾರಿನಲ್ಲಿ ಇಕ್ಕರಿಸಿ ಕೈ ತೊಳೆದುಕೊಳ್ಳತೊಡಗಿದರು.

ತಿಂಗಳೊಪ್ಪತ್ತಿನಲ್ಲಿ ಆ ಕೆಲಸಗಾರರೆಲ್ಲ ತಮ್ಮ ಮೋಟರ್‍ಸೈಕಲ್‍ಗಳನ್ನೆಲ್ಲ ಮಾರಿ ಬಸ್ಸಿನಲ್ಲಿ ಸಂಚರಿಸತೊಡಗಿದರು. ಬಸ್ಸುಗಳು ಭರಪೂರ ತುಂಬಿಕೊಂಡು ಸಿರಿಪುರದಿಂದ ಪಟ್ಟಣಕ್ಕೆ ಹೋಗುವುದನ್ನು ಬಿಳಿಯಂಗಿಶೆಟ್ಟಿ ತನ್ನ ಪೆಟ್ರೋಲ್ ಬಂಕ್‍ನಲ್ಲಿ ಸುಮ್ಮನೆ ಕುಂತು ನೋಡತೊಡಗಿದ. ಬಹುತೇಕವಾಗಿ ಊರಿನ ಮೋಟರ್‍ಸೈಕಲ್‍ಗಳ ಹೊಟ್ಟೆಗೇನೆ ಎಣ್ಣೆ ಹೊಯ್ಯುತ್ತಿದ್ದ ಅವನ ಬಂಕು ಈಗ ಖಾಲಿಖಾಲಿ ಹೊಡೆಯುತ್ತಿತ್ತು. ಶೆಟ್ಟಿಯು ಹೊಟ್ಟೆ ಉರಿದುಕೊಳ್ಳುತ್ತ `ಎತ್ತಲಾಗಿನಿಂದ ಬಂದನೋ ಆ ಮಳ್ಳ ಸ್ವಾಮಿ..’ ಅಂತ ಗುರೂಜಿಯನ್ನ ಬೈಯತೊಡಗಿದ.

ಮತ್ತೊಂದು ಸಂಜೆ ಅವರೆಲ್ಲ `ಗುರೂಜಿ, ಬಸ್ಸು ಭಯಂಕರ ರಶ್ಶು! ಹೋಗಾಕ-ಬರಾಕ ಭಾಳ ತ್ರಾಸ್ ಆಗೇತಿ’ ಅಂದರು. ಗುರೂಜೀ ಆವಾಗಲೂ ಸಹಜವಾಗಿ ನಕ್ಕರು. ಮತ್ತೆ `ಪಟ್ಟಣದ ಬಸ್ ಡಿಪೋ ಮ್ಯಾನೆಜರ್‍ನ್ನ ಭೆಟ್ಟಿಯಾಗಿ ಇನ್ನೆರಡು ಬಸ್ ಎಕ್ಸ್‍ಟ್ರಾ ಬಿಡೋದಕ್ಕ ವಿನಂತಿ ಮಾಡಿಕೊಳ್ರಿ’ ಅಂತೊಂದು ಮಾತು ಹೇಳಿದರು. ಅವರೆಲ್ಲ ಅರೇ ಹೌದಲ್ಲ! ಅಂದುಕೊಂಡರು.

ಪ್ರತಿ ಸಂಡೇಯೂ ಸಿರಿಪುರದ ಮಂದಿ ಆ ಬಜಾರಿನಲ್ಲಿ ಕಳೆದ ಎರಡು-ಮೂರು ತಿಂಗಳಿನಿಂದ ಮೋಟರ್‍ಸೈಕಲ್‍ನ್ನು ತಂದು ತಂದು ಕಡಿಮೆ ರೇಟಿಗೆ ಮಾರುತ್ತಿದ್ದರಿಂದ ಸುತ್ತಮುತ್ತಲಿನ ಊರುಗಳ ಜನ ಯಾರೂ ಹೊಸ ಟೂವ್ಹೀಲರ್‍ನ್ನು ಕೊಳ್ಳಲು ಶೋರೂಂನತ್ತ ಸುಳಿಯಲೇ ಇಲ್ಲ. ವಿಜಯ್ ಮೋಟರ್ಸ್‍ನ ಮಾಲೀಕನಿಗೆ ಚಿಂತೆಯಾಯಿತು. ಅದು ಬೈಕ್‍ಗಳ ಶೋರೂಂ ಇದ್ದದ್ದು ಬರಬರುತ್ತಾ ಸ್ಟೋರ್‍ರೂಂ ಆಗತೊಡಗಿತು. ಅವನ ಪಕ್ಕಕ್ಕೇ ಇದ್ದ ಗೂಡ್ಸ್ ಗಾಡಿಗಳ ಶೋರೂಂನಲ್ಲಿ ವ್ಯಾಪಾರ ಸಂಪೂರ್ಣ ನಿಲ್ ಆಗಿದ್ದರಿಂದ ಅದು ಆಗಲೇ ಬಾಗಿಲು ಮುಚ್ಚಿಕೊಂಡಿತ್ತು. ಆಗೊಂದು ಈಗೊಂದು ಮೋಟರ್‍ಸೈಕಲ್ ಮಾರುತ್ತಿದ್ದದ್ದವು ಈಗ ಈ ಸಂಡೇ ಬಜಾರಿನ ಹಾವಳಿಯಲ್ಲಿ ಅದು ನಿಂತು ಹೋಗಿತ್ತು.

ಗಾಜಿನಗೋಡೆಗಳ ಹಿಂದೆ ಬಣ್ಣ ಬಣ್ಣದ ಕಾರು, ಸ್ಕೂಟರ್, ಗಾಡಿಗಳನ್ನು ನಿಲ್ಲಿಸಿಕೊಂಡು ತಮ್ಮ ಐಸಿರಿಯನ್ನು ತೋರುತ್ತಿದ್ದ ಕಾಟನ್‍ಪೇಟೆಯ ಎಲ್ಲಾ ವಾಹನಗಳ ಶೋರೂಂಗಳು ಈಗ ಬಾಗಿಲ ಶಟರ್‍ನ್ನು ಎಳೆದುಕೊಂಡು ಬಿಕೋ ಅನ್ನುತ್ತಿದ್ದವು. ಶೋರೂಂ ಒಳಗಿರುವ ಗಾಡಿಗಳ ಅವತಾರ ಇನ್ನು ಮುಗಿಯಿತೆಂಬಂತೆ ಅವುಗಳನ್ನು ಅಣಕಿಸುತ್ತ ಶಟರ್ ಮೇಲಿದ್ದ ಗಾಡಿಯ ಚಿತ್ರಗಳು ಓಡಲು ಹವಣಿಸುತ್ತಿದ್ದವು.

ಆ ದಿನ ಸಂಜೆ ಎಲ್ಲರೂ ಸೇರಿದಾಗ ಗುರೂಜಿ ತಾನು ಬಂದ ಕೆಲಸ ಮುಗಿಯಿತು, ಮುಂದಿನ ಊರಿಗೆ ಹೋಗುವುದಾಗಿ ಹೇಳಿದರು. ತಕ್ಷಣ ಎಲ್ಲರೂ ಇಲ್ಲೇ ಇರಬೇಕು ನಿಮಗೊಂದು ಮಠ ಕಟ್ಟಿಸಿಕೊಡ್ತೆವೆ ಅಂದರು. ಅದಕ್ಕೆ ನಸುನಕ್ಕು ಅವರು `ನಾನು ಸಾಗಬೇಕಾದ ಹಾದಿ ಭಾಳ ದೊಡ್ಡದೈತಿ. ಒಂದೇ ಕಡೆ ನಿಂತು ಬಿಟ್ಟರ.. ನಾನು ಜಡಾ ಆಗಿಬಿಡ್ತಿನಿ. ಅದಕ್ಕ ಅಪ್ಪಣಿ ಮಾಡ್ರಿ..’ ಅಂತ ಹೊರಟುನಿಂತರು. ವಿಜಯ್ ಮೋಟರ್ಸನ ಮಾಲೀಕ `ಸಂಜಯ್ ಡೆವಲಪ್‍ರ್ಸ’ನ ಮೂಲಕ ವಿಜಯಪುರದ ಬಳಿಯಿದ್ದ ತನ್ನ ಇಪ್ಪತ್ತು ಎಕರೆ ಹೊಲದಲ್ಲಿ ಪ್ಲಾಟು, ಅಪಾರ್ಟಮೆಂಟು ಮಾಡುವ ಸ್ಕೀಮ್ ಹಾಕಿ ವರ್ಷಗಳಿಂದ ಆ ಹೊಲವನ್ನು ಬೀಳುಗೆಡವಿದ್ದನು. ಇಂಡಿಯಾದಲ್ಲಿ ಕುಸಿದ ಆರ್ಥಿಕತೆ ಮೇಲೆಳುವಂತೆಯೇ ಕಾಣಲಿಲ್ಲ. ಶೋರೂಂ ಬಾಗಿಲು ಪರ್ಮನೆಂಟಾಗಿ ಮುಚ್ಚಿ ವಿಜಯ್ ಮೋಟರ್ಸ ಮಾಲೀಕ ತನ್ನ ರಿಯಲ್ ಎಸ್ಟೇಟ್ ಸ್ಕೀಮ್ ಕ್ಯಾನ್ಸಲ್ ಮಾಡಿಬಿಟ್ಟನು. ಹೊಲಕ್ಕೆ ಹೋಗಿ ಬೇಕಾಬಿಟ್ಟಿ ಬೆಳೆದಿದ್ದ ಮುಳ್ಳು ಕಂಟಿಗಳನ್ನು ಬುಲ್‍ಡೋಜರ್‍ನಿಂದ ಸ್ವಚ್ಛಗೊಳಿಸಿದನು. ಬಳಿಕ ತಾನೇ ನಿಂತು ನೇಗಿಲಿಗೆ ಪೂಜೆ ಮಾಡಿದನು. ಆಮೇಲೆ ಅದು ಹದವಾಗಿ ನೆಲವನ್ನು ಉಳುವುದನ್ನು ನೋಡುತ್ತ ನಿಂತನು.

ಚಿತ್ರ : ವಿಷ್ಣು ಕುಮಾರ್‌

ಲಕ್ಷ್ಮಣ ಬಾದಾಮಿ

ಲಕ್ಷ್ಮಣ ಬಾದಾಮಿ ಅವರ ಮೂಲ ಹೆಸರು ಲಕ್ಷ್ಮಣ ತುಕಾರಾಮ ಬಾದಾಮಿ. ಇವರು ಮೂಲತಃ ಬಾಗಲಕೋಟ ಜಿಲ್ಲೆ ಸಿರೂರು ಗ್ರಾಮದವರು. ಕಲಾ ವಿಭಾಗದಲ್ಲಿ ಎಂ.ಎಫ್.ಎ., ಎ.ಎಂ., ಜಿ.ಡಿ.(ಆರ್ಟ್) ಪೂರ್ಣಗೊಳಿಸಿದ್ದು, 2008ರಿಂದ ಸರಕಾರಿ ಪ್ರೌಢಶಾಲೆ ಕುರುಕುಂದದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಕಲೆ ಹಾಗೂ ಸಾಹಿತ್ಯ ವೇದಿಕೆ, ಸಿರೂರದ ಮೂಲಕ ಕಳೆದ 15 ವರ್ಷಗಳಿಂದ ಸಾಹಿತ್ಯ, ಜಾನಪದ ಕಲೆಗಳ ಪುನರುತ್ಥಾನಕ್ಕಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಕಲೆಯೊಂದಿಗೆ ಸಾಹಿತ್ಯದತ್ತರು ಆಸಕ್ತಿಹೊಂದಿರುವ ಅವರ ‘ಭವ’, ‘ಬೇರು ಮತ್ತು ಬೆವರು’, ‘ಒಂದು ಚಿಟಿಕೆ ಮಣ್ಣು’ ಎಂಬ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಮನುಷ್ಯರು ಬೇಕಾಗಿದ್ದಾರೆ’ ಅವರ ಪ್ರಕಟಿತ ಕವನ ಸಂಕಲನ. ‘ರೂಪ ನಿರೂಪ’ ಪೇಂಟಿಂಗ್ಸ್ ಗಳ ಕುರಿತ ಕೃತಿಯಾಗಿದೆ. ‘ಬಿಸಿಲ ಸೀಮೆಯ ಜಾನಪದ ಸಿರಿ’ ಅವರ ಸಂಪಾದಿತ ಕೃತಿ. ಅವರ ‘ಬೇರು ಮತ್ತು ಬೆವರು’ ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ, ‘ಒಂದು ಚಿಟಿಕೆ ಮಣ್ಣು’ ಕಥೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಚಿನ್ನದ ಪದಕ ದೊರೆತಿದ್ದು, ಇದೇ ಶೀರ್ಷಿಕೆಯ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ. 

More About Author