Poem

ಮಿನುಗು

ಮಿಂಚುಹುಳುವಿನ ಮಿನುಗು
ನಿನ್ನ ನಗು
ಕತ್ತಲ ಮುಳುಗುವಿಕೆಯಲ್ಲೂ
ಹೊಳೆವ ಮುಗುಳು

ಪ್ರಕ್ಷುಬ್ಧ ಸಾಗರ ನಮ್ಮ
ಏದುಸಿರ ತಾಳಕೆ ಉಕ್ಕಿಳಿಯುವಾಗ
ಕಪ್ಪೆಚಿಪ್ಪಿನ ಮುತ್ತುಗಳು
ಮೇಲೆದ್ದು ನಿನ್ನ ತುಟಿಯಲೇ
ಕುಳಿತು ಕಾಯುತ್ತಿದ್ದವಲ್ಲ

ಕೊಳಗ ಪ್ರೀತಿಯ ಸುರಿಸಿ
ಬೆಳೆಸಿಟ್ಟ ಬಯಕೆ ನವಿಲುಗರಿ
ಮೊಳಕೆಯೊಡೆದದ್ದ
ಕಣ್ಣಗಲಿಸಿ ನೀ ನೋಡುವ
ಪರಿಗೆ ನವಿಲುಗಳೇ ಬೆರಗಾಗಿ
ನರ್ತನ ವಿರಾಮ ಘೋಷಿಸಿದ್ದವಲ್ಲ

ಬಿಸಿಯಪ್ಪುಗೆಯಡಿ ನಲುಗಿದ
ಮರಳ ಹೊಟ್ಟೆಯುರಿಯೋ
ಉದುರಿದ ಆರಿದ ಮುತ್ತುಗಳ
ಮುದ್ದೆ ಮನದ ತಳಮಳವೋ
ಅಲೆಯೊಂದು ಎದೆ ತಾಕಿ
ಇನ್ನೆಂದೂ ಮರಳದಂತೆ
ನೀ ಬರದಂತೆ ಯಾರೋ ಕಟ್ಟಿದ
ಕಟ್ಟ ನೀ ಒಡೆಯಬೇಕಿತ್ತು
ಆ ಮುರುಕು ಒಂಟಿ ಮರದಾಚೆ
ಬೆಚ್ಚನೆಯ ಸಾಗರದ
ಸಡಗರದ ವಾದ್ಯಕೆ
ಚಂದ್ರಮನ ಸೊಕ್ಕು ಉಕ್ಕೇರಿದಾಗ
ಚೆಲ್ಲು ಚಕೋರಗಳ
ಉತ್ಕಟ ಕೂಟ ಬೇಟವ
ಒಮ್ಮೆಯಾದರೂ ನೀ
ತಿರುಗಿ ನೋಡಬೇಕಿತ್ತು

ನೀ ಚಾಚಿದ ಕೈಯದು
ಅದೇಕಷ್ಟು ನಯ ನುಣುಪು
ಬೆಣ್ಣೆ ಸವರಿದ ಕೈ ಚಾಚಿ
ಕಂದರವ ಹತ್ತಿಸಬಹುದೇನು
ಬೆಂದ ಕರುಳ ಇನ್ನಷ್ಟು ಸುಡುವ
ಇರುಳ ಸಹ್ಯಗೊಳಿಸುವ
ರಹಸ್ಯ ದೊರೆಯಬಹುದೇನು

ಹೃದಯ ಹೂವಲ್ಲ ಬಾಡಿತೆಂದು
ಎತ್ತಿ ಬಿಸಾಕಲಿಕೆ
ಹಣ್ಣಲ್ಲ ಹೆಚ್ಚು ಮಾಗಿತೆಂದು
ಮೂಗು ಮುರಿಯಲಿಕೆ
ಮದ್ದಿರದ ಗಾಯ ಸದ್ದಿಲದೆ
ಗುಣವಾಗಬೇಕು

ತಿಳಿಯುತ್ತಿಲ್ಲ ಇಂದು
ಮಾಯವಾಗುವ ಹುಳುವೊಂದು
ಮಿನುಗುವುದ ಎದೆ ಡಬ್ಬ ತೆರೆದು
ಮತ್ತೆ ಕಾಯಬೇಕೋ
ಇಲ್ಲ ನಾನೇ ಮಿನುಗಿ
ಮಾಯವಾಗಬೇಕೋ!

- ಕವಿತಾ ಹೆಗಡೆ ಅಭಯಂ

ಕವಿತಾ ಹೆಗಡೆ

ಉತ್ತರ ಕನ್ನಡದ ಕುಮಟಾ ತಾಲೂಕಿನ ಕತಗಾಲದಲ್ಲಿ ಜನನ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಹುಟ್ಟೂರಿನಲ್ಲಿ. ಕುಮಟಾದ ಡಾ. ಎ ವಿ ಬಾಳಿಗಾ ಮಹಾವಿದ್ಯಾಲಯದಲ್ಲಿ ಪದವಿ. ಮೈಸೂರಿನಲ್ಲಿ ಡಿಪ್ಲೊಮಾ ಇನ್ ಫ್ಯಾಷನ್ ಟೆಕ್ನಾಲಜಿ. ಹುಬ್ಬಳ್ಳಿಯಲ್ಲಿ ಎಂ ಎ (ಇಂಗ್ಲಿಷ್ ) ಹಾಗೂ ಬಿ ಎಡ್ ಪದವಿ. ಬಾಲ್ಯದಿಂದಲೂ ಪ್ರಥಮ ಸ್ಥಾನದೊಂದಿಗೆ ತರ‍್ಗಡೆ. ಸಾಹಿತ್ಯದಲ್ಲಿ ಆಸಕ್ತಿ ಹಾಗೂ ರಚನೆ. ಪ್ರಸ್ತುತ ಹುಬ್ಬಳ್ಳಿಯ ಕೆ ಎಲ್ ಇ ಆಂಗ್ಲ ಮಾಧ್ಯಮ (ಸಿಬಿಎಸ್ಇ) ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. 2020ರಲ್ಲಿ ಹೊರಬಂದ "ದ ನೆಸ್ಟೆಡ್ ಲವ್" ಇವರ ಪ್ರಥಮ ಇಂಗ್ಲಿಷ್ ಕಥಾ ಸಂಕಲನ. ಕವನ ಹಾಗೂ ಕಥಾ ಸಂಕಲನಗಳು ಹಾಗೂ ಅನುವಾದಿತ ಕೃತಿಗಳು ಕನ್ನಡದಲ್ಲಿ ಶೀಘ್ರದಲ್ಲೇ ಹೊರಬರಲಿವೆ. ಇಂಗ್ಲಿಷ್ -ಕನ್ನಡ ಕಥೆ ಕವನಗಳ ಅನುವಾದ, ಸ್ವಂತ ಕಥೆ-ಕವನಗಳು, ವ್ಯಕ್ತಿತ್ವ ವಿಕಸನ ಲೇಖನಗಳು, ಪುಸ್ತಕ ಪರಿಚಯ, ವಿರ‍್ಶೆ, ಅಂಕಣ ಬರಹಗಳು, ಇತ್ಯಾದಿಗಳು ಪತ್ರಿಕೆಗಳು ಹಾಗೂ ಬ್ಲಾಗುಗಳಲ್ಲಿ ನಿಯಮಿತವಾಗಿ ಪ್ರಕಟಣೆ. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರವಣಿಗೆ.

More About Author