Story

ಮೊಳಕೆ 

ಸುಧಾ ಆಡುಕಳ ಅವರು ಮೂಲತಃ ಉಡುಪಿ ಅವರು. ಅವರ 'ಬಕುಲದ ಬಾಗಿಲಿನಿಂದ' ಲೇಖನ ಸಂಕಲನಕ್ಕೆ 2019ನೇ ಸಾಲಿನ ಅಮ್ಮ ಪ್ರಶಸ್ತಿ ಸಂದಿದೆ. ಮನದಲ್ಲಿನ ತಣ್ಣನೆ ಕ್ರೌರ್ಯವನ್ನು ಅನಾವರಣಗೊಳಿಸುವ ಅವರ ‘ಮೊಳಕೆ’ ಕತೆ ನಿಮ್ಮ ಓದಿಗೆ.

ಝಡಿಮಳೆಯೊಂದು ಭೋರೆಂದು ಸುರಿದು ಇದ್ದಕ್ಕಿದ್ದಂತೆ ನಿಂತು ಹೋದಮೇಲೆ ಉಂಟಾದ ಮೌನ ಮನೆಯನ್ನಿಡೀ ವ್ಯಾಪಿಸಿತ್ತು. ಅಷ್ಟಕ್ಕೂ ಈ ಸದ್ದು ಮನೆಯೊಳಗಿತ್ತೋ ಅಥವಾ ಮನದೊಳಗೋ ಎಂಬುದನ್ನು ಗುರುತಿಸಲಾಗದಷ್ಟು ವ್ಯಸ್ತಳಾಗಿದ್ದಳು ಅಲಕ. ಯಾಕೋ ತಲೆಯಿಡೀ ಸಿಡಿಯುತ್ತಿರುವಂತೆ ಅನ್ನಿಸಿ ಒಂದು ಲೋಟ ಸ್ಟ್ರಾಂಗ್ ಕಾಫಿಯನ್ನು ಮಾಡಿಕೊಂಡು ಹಜಾರದಲ್ಲಿ ಆಸೀನಳಾಗಿ ಕುಡಿಯತೊಡಗಿದಳು. ಇದ್ದಕ್ಕಿದ್ದಂತೆ ತಾನೇನಾದರೂ ಅತಿಯಾಗಿ ಮಾತನಾಡಿದೆನೆ? ಎಂದು
ಯೋಚಿಸತೊಡಗಿದಳು. ಬೆಳಗಿನ ವಿದ್ಯಮಾನಗಳು ಒಂದೊಂದಾಗಿ ಅವಳ ಮನಸ್ಸಿನ ಪರದೆಯ ಮೇಲೆ ಹಾದುಹೋಗತೊಡಗಿದವು.

ಇಂದು ಪರೀಕ್ಷೆಯಿರುವುದರಿಂದ ಬೇಗನೆ ಕಾಲೇಜಿಗೆ ಹೋಗಬೇಕೆಂದು ಮಗ ಚಿಂತನ್ ನಿನ್ನೆಯೇ ಹೇಳಿದ್ದ. ಅವನಿಗಿಷ್ಟವಾದ ಚಪಾತಿ, ಆಲೂಪಲ್ಯ ಮಾಡಿದರೆ ಗಂಡ ಅಮರ್‍ನ ಮಧ್ಯಾಹ್ನದ ಊಟಕ್ಕೂ ಅದೇ ಆದೀತೆಂದು ಯೋಚಿಸಿದಳು ಅಲಕಾ. ಹಾಗಾಗಿ ಸ್ವಲ್ಪ ಬೇಗನೆ ಏಳಬೇಕೆಂದು ಎಣಿಸಿಕೊಂಡೇ ಮಲಗಿದ್ದಳು. ಅದೇಕೋ ಸೆಕೆಯ ಬೇಗೆಗೆ ಬೇಗನೆ ನಿದ್ದೆ ಬಾರದೆ ಎಚ್ಚರಾಗುವಾಗ ತುಸು ತಡವಾಗಿತ್ತು. ಅಮರ್ ಯಥಾಪ್ರಕಾರ ಬೇಗನೆದ್ದು ಯೋಗ, ಧ್ಯಾನ ಅಂತೆಲ್ಲ ಅವನ ನಿತ್ಯಕರ್ಮಗಳನ್ನು ಮುಗಿಸಿ ಬಿಸಿ ಕಾಫಿ ಕುಡಿಯುತ್ತಿದ್ದ. ಅವನು ಇಂಥ ಸನ್ನಿವೇಶಗಳಲೆಲ್ಲ ಹೆಂಡತಿಯ ಸಹಾಯಕ್ಕೆ ಬರುವುದು ಸಾಮಾನ್ಯ ವಿಷಯವೇ ಆಗಿತ್ತು. ಏನು ಸಹಾಯ ಮಾಡಬೇಕೆಂದು ಕೇಳಿದ ಗಂಡನಿಗೆ ಅಲೂಗಡ್ಡೆಯನ್ನು ತೊಳೆದು ಬೇಯಲಿಡುವಂತೆ ಹೇಳಿದ
ಅಲಕಾ ಚಪಾತಿ ಹಿಟ್ಟನ್ನು ಕಲೆಸತೊಡಗಿದಳು. ಅಷ್ಟರಲ್ಲಿಯೇ ಒಂದು ಆಲೂಗಡ್ಡೆ ಮೊಳಕೆಯೊಡೆದಿದ್ದು ನೆನಪಾಗಿ ಅದನ್ನು ತೆಗೆದಿಡುವಂತೆ ಎರಡೆರಡು ಬಾರಿ ಗಂಡನಿಗೆ ನೆನಪಿಸಿದಳು.

ಚಿಂತನ್ ಕಾಲೇಜಿಗೆ ರೆಡಿಯಾಗಿ ಬಂದಾಗ ಬಿಸಿಬಿಸಿಯಾದ ಚಪಾತಿ, ಅಲೂ ಪಲ್ಯ ಅವನಿಗಾಗಿ ಕಾಯುತ್ತಿತ್ತು. ಮೂವರೂ ತಿಂಡಿ ತಿಂದು, ಚಿಂತನ್ ಕಾಲೇಜಿಗೆ ಹೊರಟಾದಮೇಲೆ ಅಮರ್ ಪೇಪರ್ ಹಿಡಿದು ಕುಳಿತ. ಆಗಲೇ ಅಲಕಾಳಿಗೆ ಮೊಳಕೆಯೊಡೆದ ಆಲೂ ನೆನಪಾಗಿ ಬಿಸಿಲು ಬರುವ ಮೊದಲೇ ಟೆರೇಸಿನ ಮೇಲಿರುವ ಕುಂಡದಲ್ಲಿ ಅದನ್ನು ನೆಟ್ಟು ಬರಬೇಕೆಂದು ಹೊರಟಳು. ಎಷ್ಟು ಹುಡುಕಿದರೂ ಮೊಳಕೆಯೊಡೆದ ಆಲೂ ಕಾಣಿಸದೇ ಎಲ್ಲಿರುವುದೆಂದು ಅಮರ್‍ನನ್ನು ಕೇಳಿದಳು. ಅಮರ್ ಅದಕ್ಕೆ
ನಗುತ್ತಾ, “ನಿನ್ನ ಹೊಟ್ಟೆಯಲ್ಲಿರಬಹುದು ನೋಡು. ಮೊಳಕೆಯೊಡೆದು ಗಿಡವಾಗಬಹುದು ಜೋಪಾನ” ಎಂದು ನಕ್ಕ. ಇದ್ದಕ್ಕಿದ್ದಂತೆ ಅಲಕಾಳಿಗೆ ಕೋಪ ನೆತ್ತಿಗೇರಿತ್ತು. “ನಾನು ಹೇಳಿದ್ದೆ ಅದನ್ನು ಬೇಯಿಸಬೇಡಿ ಎಂದು. ನಿಮ್ಮ ಕ್ರೌರ್ಯ ಎಲ್ಲಿಗೆ ಹೋಗತ್ತೆ? ಬಿಳಿಯ ಮೋದಾಳಿಯಂತೆ ಮೊಳೆತಿದ್ದ ಎಳೆಯ ಮೊಳಕೆಯನ್ನು ಮುರಿಯಲು ಮನಸ್ಸಾದರೂ ಹೇಗೆ ಬಂತು?” ಎಂದು ಜೋರಾಗಿ ಹೇಳಿದಳಾದರೂ ಮಾತು ಮುಗಿಸುವಾಗ ಅಳುವೇ ಬಂದುಬಿಟ್ಟಿತ್ತು. ಇದೇನೋ ವಿಕೋಪಕ್ಕೆ ಹೋಗುವ ಲಕ್ಷಣ ಕಾಣಿಸಿದ್ದರಿಂದ ಅಮರ್ ಓದುತ್ತಿದ್ದ ಪೇಪರನ್ನು ಬದಿಗಿಟ್ಟು, “ಅಲ್ಲಾ ಮಾರಾಯ್ತಿ, ಆ ಅಲೂಗಡ್ಡೆಯನ್ನು ಕುಂಡವೆಂಬ ಭೂಮಿಯಲ್ಲಿ ನೆಟ್ಟು ನೀನೇನು ಸಂತೆಯಲ್ಲಿ ಫಸಲು ಮಾರಲಿಕ್ಕಿತ್ತೇನು? ಪಲ್ಯಕ್ಕೆ ಕಡಿಮೆಯಾಗಬಹುದೆಂದು ಅದನ್ನೂ ಬೇಯಿಸಿದೆ ಅಷ್ಟೆ. ಬೇಕಾದರೆ ಇನ್ನೊಮ್ಮೆ ತಂದಾಗ ಬದಿಗಿಟ್ಟು ಮೊಳಕೆ ತರಿಸಿಕೊಂಡರಾಯಿತು ಬಿಡು. ಅದನ್ನೇ ದೊಡ್ಡದು ಮಾಡುವುದಕ್ಕೇನಿದೆ?” ಎಂದ. ಅಲಕಾಗೆ ಅಳುವಿನ ಕಟ್ಟೆಯೊಡೆದಿತ್ತು. “ಬೇರೆ ತಂದು ಮಾಡುವ ವಿಷಯವಲ್ಲ ಅದು. ನಿನ್ನೆ ತಾನೇ ಅದನ್ನು ನೋಡಿದವಳೇ ಮುರಿಯಬಾರದೆಂದು ಬದಿಗೆ ತೆಗೆದಿಟ್ಟಿದ್ದೆ. ಒಂದಲ್ಲ, ಎರಡಲ್ಲ, ನಾಲ್ಕು ಬದಿಯಲ್ಲಿ ಮೊಳಕೆಯೊಡೆದಿತ್ತು. ಅದನ್ನು ನೆಡಲೆಂದು ನಿನ್ನೆಯೇ ಕುಂಡವೊಂದನ್ನು ಸಿದ್ಧಪಡಿಸಿಟ್ಟಿದ್ದೆ. ನಿಮ್ಮ ಹತ್ತಿರ ಹೇಳಿದೆ ನೋಡಿ, ಅದು ನನ್ನ ತಪ್ಪು. ಮೊಳಕೆ ಮುರಿಯುವುದು ನಿಮಗೆ ಕ್ಷಣಮಾತ್ರದ ಕೆಲಸವೆಂದು ನನಗೆ ಅರ್ಥವಾಗಬೇಕಿತ್ತು.” ಎಂದುಕೊಳ್ಳುತ್ತಲೇ ಅವನ ತಿಂಡಿಯ ಡಬ್ಬವನ್ನು ಚೂರು ಹೆಚ್ಚೇ ಶಬ್ದವಾಗುವಂತೆ ಅವನೆದುರು ಇಟ್ಟಿದ್ದಳು. ಇಷ್ಟು ಸಣ್ಣ ವಿಷಯಕ್ಕೆ ಹೀಗೆಲ್ಲ ರಂಪ ಮಾಡುವುದನ್ನು ಕಂಡ ಅಮರ್ ಕೂಡಾ ದನಿಯೇರಿಸಿದ, “ಅಲ್ಲಾ, ಈಗ ಇಷ್ಟು ರಾದ್ಧಾಂತ ಮಾಡೋವಂಥದ್ದು ಏನಾಗಿದೆ ಅಂತ? ನೀನು ಇತ್ತೀಚೆಗೆ ಎಲ್ಲದಕ್ಕೂ ಅತಿಯಾಗಿಯೇ ಆಡುತ್ತಿರುವೆ. ಹಾರ್ಮೋನಲ್ ಇಂಬಾಲೆನ್ಸ್ ಇರಬಹುದು, ಆಸ್ಪತ್ರೆಗೆ ಹೋಗೋಣ ಬಾ ಅಂದರೆ ಅದನ್ನೂ ಕೇಳುತ್ತಿಲ್ಲ. ಈ ಸಲ ಪುಟ್ಟಿ ಬಂದಾಗ ಅವಳ ಹತ್ತಿರವೇ ಹೇಳ್ತೇನೆ. ಅವಳೇ ಸರಿ, ನಿನ್ನನ್ನು ಸರಿಮಾಡಲು” ಎಂದವನೇ ದಡಬಡಿಸಿ ಎದ್ದು ಕಾಲೇಜಿಗೆ ಹೊರಟಿದ್ದ. ಅಲಕಾ ದಿನನಿತ್ಯದಂತೆ ಗೇಟನ್ನು ತೆರೆಯಲೂ ಹೋಗದೇ ಅಡುಗೆ ಮನೆಯಲ್ಲಿಯೇ ನಿಂತಿದ್ದಳು. ಅವಳ ಕೈಯಲ್ಲಿ ಅವನು ಮುರಿದು, ಕಸದ ಡಬ್ಬಿಯಲ್ಲಿ ಎಸೆದಿದ್ದ ಅಲೂವಿನ ಬಿಳಿಯ ಮೊಳಕೆಗಳಿದ್ದವು.

ಅಲಕಾ ಯೋಚಿಸುತ್ತಿದ್ದಳು, ತಾನೇನಾದರೂ ಅತಿಯಾಗಿ ಹೇಳಿದೆನೆ? ಹೌದೆನಿಸಿತು. ಆದರೆ ಇವೆಲ್ಲ ಕೇವಲ ಬೆಳಗಿನ ಘಟನೆಗಳಿಗಾಗಿ ಬಂದ ಮಾತುಗಳಲ್ಲವೆಂಬುದು ಅವಳಿಗೀಗ ಅರಿವಾಗತೊಡಗಿತು. ಎದೆಯೊಳಗೆ ಸುಡುತ್ತಿದ್ದ ಜ್ವಾಲಾಮುಖಿಯೊಂದು ಹೀಗೆ ಹೊರಬಂದಂತೆ ಭಾಸವಾಯಿತು ಅವಳಿಗೆ. ಹೌದು, “ನೀನು ಎಲ್ಲದಕ್ಕೂ ಅತಿಯಾಗಿ ಯೋಚಿಸ್ತೀಯ” ಅಂತ ಆ ದಿನವೂ ಹೇಳಿದ್ದ ಅಮರ್. ಇಪ್ಪತ್ತು ವರ್ಷಗಳೇ ಕಳೆದರೂ ಆ ಒಂದು ರಾತ್ರಿಯ ನೆನಪು ಅವಳ ಮನಸ್ಸಿನಿಂದ ಮರೆಯಾಗುತ್ತಲೇ ಇಲ್ಲ. ಆಗಿನ್ನೂ ಪುಟ್ಟಿ ಹುಟ್ಟಿ ಮೂರು ವರ್ಷ ಕಳೆದಿತ್ತು. ಹೀಗೆಯೇ ಏನೋ ಅವಸರವಿದೆಯೆಂದು ಬೆಳಿಗ್ಗೆ ಬೇಗ ಎದ್ದು ತಿಂಡಿ ಮಾಡುತ್ತಿದ್ದವಳು ಬವಳಿ ಬಂದು ಬಿದ್ದಳು. ಆಸ್ಪತ್ರೆಗೆ ಹೋದಾಗ ಮತ್ತೆ ತಾಯಿಯಾಗುವ ಸುದ್ಧಿ ಸಿಕ್ಕಿತ್ತು. ಹೇಗೂ ಎರಡು ಮಕ್ಕಳು ಬೇಕು ಅಂದುಕೊಂಡಿದ್ದ ಇಬ್ಬರಿಗೂ ಸಂತೋಷವೇ ಆಗಿತ್ತು. ಬಯಕೆ, ಸುಸ್ತುಗಳ ನಡುವೆ ಅಡುಗೆ, ಮನೆಗೆಲಸಗಳನ್ನು ನಿಭಾಯಿಸುತ್ತಿದ್ದ ಅಲಕಾಳಿಗೆ ಸಾಕುಸಾಕಾಗುತ್ತಿತ್ತು. ಇವೆಲ್ಲಕ್ಕಿಂತ ಅವಳನ್ನು ಕಾಡುತ್ತಿದ್ದುದು ಅಮರ್‍ನ ಅನ್ಯಮನಸ್ಕತೆ. ಏನೋ ಕಳಕೊಂಡವನಂತೆ, ಏನೋ ಹೇಳಲು ಹಳಹಳಿಸುವವನಂತೆ ಕಾಣುತ್ತಿದ್ದ ಅವನ ವರ್ತನೆ ಅವಳಿಗೆ ಅಚ್ಛರಿಯನ್ನುಂಟುಮಾಡಿತ್ತು. ಕೆಲವೊಮ್ಮೆ ಇದೇನು ತನ್ನ ಭ್ರಮೆಯೇನೋ ಎಂದು ಕೂಡ ಅನಿಸುತ್ತಿತ್ತು. ತಾನು ಪುಟ್ಟಿಯನ್ನು ಹೊತ್ತಾಗಿನ ಕ್ಷಣಗಳನ್ನವಳು ಮತ್ತೆ ನೆನಪಿಸಿಕೊಳ್ಳುತ್ತಿದ್ದಳು.

ಹಳ್ಳಿಯಲ್ಲಿ ಬೆಳೆದಿದ್ದ ಅಲಕಾಳಿಗೆ ಮದುವೆಯಾದ ಹೊಸದರಲ್ಲಿ ನಾಲ್ಕು ಗೋಡೆಗಳ ನಡುವಿನ ಈ ಜೀವನ ಸ್ವಲ್ಪ ಬೇಸರವನ್ನೇ ತರಿಸಿತ್ತು. ಮನೆಯ ಕೆಲಸಗಳೆಲ್ಲ ತಾಸೆರಡರಲ್ಲಿ ಮುಗಿದು ಹೋಗುವುದರಿಂದ ಅವಳಿಗೆ ಹೊತ್ತೇ ಹೋಗುತ್ತಿರಲಿಲ್ಲ. ಅಮರ್ ಇದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ್ದ. ಎಲ್ಲ ಗಂಡಂದಿರಂತೆ ಟಿ. ವಿ. ನೋಡಲು ಹೇಳಿ ಸುಮ್ಮನಾಗದೇ ಪದವಿ ಮುಗಿಸಿದ ಅವಳನ್ನು ಮುಂದೆ ಓದುವಂತೆ ಪ್ರೋತ್ಸಾಹಿಸಿದ್ದ. ಸಮಾಜಶಾಸ್ತ್ರ ಉಪನ್ಯಾಸಕನಾದ ಅವನು ತನ್ನದೇ ವಿಷಯದಲ್ಲಿ ಅವಳೂ ಓದಿದರೆ ತಾನೇ ಪಾಠ ಹೇಳಿಕೊಡಬಹದೆಂದು ಅದೇ ವಿಷಯನ್ನು ಓದುವಂತೆ ಸಲಹೆ ಕೂಡಾ ನೀಡಿದ್ದ. ಬುದ್ಧಿವಂತೆಯಾದ ಅಲಕಾ ಎಲ್ಲದಕ್ಕೂ ಅವನನ್ನು ಅವಲಂಭಿಸದಿದ್ದರೂ, ಕೆಲವೊಂದು ವಿಷಯಗಳನ್ನು ಇಬ್ಬರೂ ಕುಳಿತು ಚರ್ಚಿಸುತ್ತಿದ್ದರು. ಅಸೈನುಮೆಂಟುಗಳನ್ನು ಬರೆಯುವಲ್ಲಿ, ಟಿಪ್ಪಣಿಗಳನ್ನು ತಯಾರಿಸುವಲ್ಲಿ ಅವಳಿಗಿದ್ದ ಶ್ರದ್ಧೆಯನ್ನು ಅವನು ಯಾವಾಗಲೂ ಶ್ಲಾಘಿಸುತ್ತಿದ್ದ. ಅಂತಿಮ ವರ್ಷದ ಪರೀಕ್ಷೆಗೆ ಇನ್ನೇನು ಆರು ತಿಂಗಳಿದೆಯೆನ್ನುವಾಗ ಅಲಕಾಳ ಒಡಲು ತುಂಬಿಕೊಂಡಿತ್ತು. ಪ್ರಾರಂಭಿಕ ಹಂತದ ಬಸಿರಿನ ತಳಮಳದಲ್ಲಿ ಇನ್ನು ತನ್ನಿಂದ ಓದಲಾಗಲೀ ಅಥವಾ ಪರೀಕ್ಷೆ ಬರೆಯಲಾಗಲೀ ಸಾಧ್ಯವಿಲ್ಲ ಎಂದವಳು ಅಂದುಕೊಳ್ಳುತ್ತಿರುವಂತೆಯೇ ಅಮರ್ ಅವಳಿಗೆ ಒತ್ತಾಸೆಯಾಗಿ ನಿಂತಿದ್ದ. “ಈ ಸಲ ನೀನು ಪರೀಕ್ಷೆ ಬರೆಯದಿದ್ದರೆ ಮತ್ತೆ ಬರೆದಂತೆಯೆ ಬಿಡು. ಮಗು ಹೊಟ್ಟೆಯಲ್ಲಿರುವಾಗಲೇ ಪರೀಕ್ಷೆಗಳನ್ನು ಮುಗಿಸಿಬಿಡು. ಒಮ್ಮೆ ಮಗುವಾಯಿತೆಂದರೆ ಮತ್ತೆ ಇಂಥವುಗಳಿಗೆಲ್ಲ ಸಮಯ ಕೊಡುವುದು ತುಂಬಾ ಕಷ್ಟ.” ಎಂದು ಸಲಹೆ ನೀಡಿದ್ದಷ್ಟೇ ಅಲ್ಲ, ಎಲ್ಲ ಕೆಲಸಗಳಲ್ಲಿ ಸಹಭಾಗಿಯಾಗಿ ಅವಳಿಗೆ ಓದಲು ಅನುಕೂಲ ಮಾಡಿಕೊಟ್ಟಿದ್ದ. ಮಗಳು ಚಿನ್ಮಯಿ ಹುಟ್ಟಿದಾಗಲೇ ಅವಳ ಪರೀಕ್ಷೆಯ ಫಲಿತಾಂಶವೂ ಬಂದು ಸಂತೋಷ ಇಮ್ಮಡಿಗೊಂಡಿತ್ತು.

ಆಗ ಪರೀಕ್ಷೆಯಿದೆಯೆಂಬುದಕ್ಕೆ ಅವನು ವಿಶೇಷ ಕಾಳಜಿ ಮಾಡಿರಬೇಕು ಎಂದು ಎಷ್ಟು ಸಂತೈಸಿಕೊಂಡರೂ ಈಗಲೂ ಮಾಡಬೇಕಿತ್ತಲ್ಲವೇ ಎನ್ನುತ್ತಿತ್ತು ಮನಸ್ಸು. ಅವನ ವರ್ತನೆಯನ್ನು ಮನಃಶಾಸ್ತ್ರದ ಪ್ರಕಾರವೂ ಯೋಚಿಸುತ್ತಿದ್ದಳು ಅಲಕಾ. ಮಗುವಾದ ಮೇಲೆ ಹೆಂಡತಿಯ ಪ್ರೀತಿ ಹಂಚಿಹೋಗುವುದರಿಂದ ಗಂಡಂದಿರು ಅನ್ಯಮನಸ್ಕರಾಗುತ್ತಾರೆ ಎಂದು ಎಲ್ಲೋ ಓದಿದ ನೆನಪಾಯಿತು. ಆದರೆ ಸಮಾಜಶಾಸ್ತ್ರ ಓದಿದ ತನ್ನ ಗಂಡ ಇವೆಲ್ಲವನ್ನೂ ಮೀರಬಲ್ಲ ಎಂದೂ ಅವಳಿಗೆ ಅನಿಸುತ್ತಿತ್ತು.

ಹೀಗೆ ದಿನಗಳೆಯುತ್ತಾ ಮೂರು ತಿಂಗಳಾಗುವಾಗ ಒಂದು ರಾತ್ರಿ ಅಮರ್ ಮೆಲ್ಲನೆ ಅಲಕಾಳಿಗೆ ಹೇಳಿದ, “ನಾಳೆ ನಾನು ಕಾಲೇಜಿನಿಂದ ಬರುವ ಹೊತ್ತಿಗೆ ರೆಡಿಯಾಗಿರು, ಇಲ್ಲೇ ಹತ್ತಿರದಲ್ಲಿ ನನ್ನ ಸ್ನೇಹಿತನೊಬ್ಬನ ಸ್ಕ್ಯಾನಿಂಗ್ ಸೆಂಟರ್ ಇದೆ. ಅಲ್ಲಿಗೊಮ್ಮೆ ಹೋಗಿ ಟೆಸ್ಟ್ ಮಾಡಿಸಿ ಬರೋಣ.” ಇದ್ದಕ್ಕಿದ್ದಂತೆ ಸ್ಕ್ಯಾನಿಂಗ್ ಬಗ್ಗೆ ಯಾಕೆ ಹೇಳುತ್ತಿದ್ದಾನೆಂದು ಅರ್ಥವಾಗದೇ ಅಲಕಾ ಹೇಳಿದಳು, “ಅದು ಐದನೆಯ ತಿಂಗಳ ನಂತರ ಬೇಕಾದರೆ ಮಾತ್ರ ಡಾಕ್ಟರ್ ಮಾಡ್ತಾರೆ. ಈಗಲ್ಲ. ಪುಟ್ಟಿ ಹೊಟ್ಟೆಯಲ್ಲಿರುವಾಗಲೂ ಹಾಗೆಯೇ ಮಾಡಿದ್ದು.” ಅಮರ್ ಅವಳ ಕಣ್ಣು ತಪ್ಪಿಸುತ್ತ ನುಡಿದ, “ಈಗ ಪುಟ್ಟಿ ಇದ್ದಾಳಲ್ಲ, ನಮಗೆ ಮತ್ತೊಂದು ಪುಟ್ಟಿ ಬೇಡ. ಹಾಗಾಗಿ ಸ್ವಲ್ಪ ಬೇಗನೆ ಮಾಡಿಸೋಣ ಅಂತ.” ಅಲಕಾ ಒಮ್ಮೆಲೇ ಕುಸಿದುಹೋದಳು. ಅಮರ್‍ನ ಬಾಯಿಂದ ಇಂಥದೊಂದು ಮಾತು ಬರಬಹುದೆಂಬ ಸಣ್ಣ ನಿರೀಕ್ಷೆಯೂ ಅವಳಿಗೆ ಇರಲಿಲ್ಲ. “ಅಂದರೆ….. ಈ ಸಲ ಗಂಡುಮಗುವೇ ಬೇಕೆಂದು ಹೇಳ್ತಿದ್ದೀರಿ ನೀವು?” ಅವಳ ಧ್ವನಿ ಸ್ವಲ್ಪ ಜೋರಾಗಿಯೇ ಬಂದಿತ್ತು. “ಮೆಲ್ಲನೆ ಮಾತಾಡು ಅಲಕಾ. ಪುಟ್ಟಿಗೆ ಎಚ್ಚರವಾದರೆ ಕಷ್ಟ. ಹೌದು, ಮೊದಲನೆಯದು ಹೆಣ್ಣಾಗಿದೆ. ಅದಕ್ಕಾಗಿ ನಾನು ಖುಶಿಪಟ್ಟಿದ್ದೇನೆ. ಆದರೆ ಮತ್ತೊಂದು ಗಂಡಾಗಲಿ ಅಂತ ಆಶೆಪಡುತ್ತೇನೆ. ಒಂದು ಗಂಡು, ಒಂದು ಹೆಣ್ಣು ಇದ್ದರೇನೆ ಪರಿಪೂರ್ಣ ಕುಟುಂಬ ಅಂತ ಅನಿಸಿಕೊಳ್ತದೆ.” ಅಲಕಾ ತಟ್ಟನೆ ಹೇಳಿದಳು, “ಆದರೆ ಅದು ಸ್ವಾಭಾವಿಕವಾಗಿರಬೇಕು. ಅದಕ್ಕೆಂದು ಮೊದಲೇ ಏರ್ಪಾಡು ಮಾಡಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ.” ಅಮರ್ ಅವಳನ್ನು ಅನುನಯಿಸುತ್ತ ನುಡಿದ, “ಗೊತ್ತು, ಆದರೆ ನಾನೇನು ಹೆಣ್ಣುಮಗುವೇ ಬೇಡ ಎನ್ನುತ್ತಿಲ್ಲ. ಗಂಡು ಕೂಡ ಬೇಕು ಅನ್ನುತ್ತಿದ್ದೇನೆ ಅಷ್ಟೆ.” ಅಲಕಾ ತನ್ನ ವಾದವನ್ನು ಮುಂದುವರೆಸಿದಳು, “ನನ್ನ ಹೊಟ್ಟೆಯಲ್ಲಿ ಗಂಡೇ ಮೊಳೆಯಲಿಲ್ಲ ಅಂದುಕೊಳ್ಳಿ. ಆಗೇನು? ಪ್ರತಿಸಲವೂ ಹೆಣ್ಣನ್ನು ಕೊಲ್ತಾನೆ ಇರ್ತೀರೇನು?” ಆಗಲೂ ಅಮರ್ ಇದೇ ಮಾತನ್ನು ಹೇಳಿದ್ದ, “ಅಲಕಾ, ನೀನು ಎಲ್ಲದರ ಬಗ್ಗೆಯೂ ಅತಿಯಾಗಿ ಯೋಚಿಸ್ತೀಯಾ? ಕೊಲೆಯ ಪ್ರಶ್ನೆ ಇಲ್ಲೆಲ್ಲಿ ಬರತ್ತೆ? ಕಾನೂನನ್ನು ಕತ್ತೆ ಅಂತ ಅನ್ನೋದು ಅದಕ್ಕೆ. ಒಂದು ಕುಟುಂಬ ಒಂದು ಹೆಣ್ಣು ಹುಟ್ಟಿದ ಮೇಲೆ ಮತ್ತೊಂದು ಗಂಡನ್ನು ಬಯಸೋದು ಅಪರಾಧ ಅನಿಸೊಲ್ಲ. ಹಾಗೆ ನೋಡಿದರೆ ನಮ್ಮ ಧಾರ್ಮಿಕ ಕಾನೂನಿನ ಪ್ರಕಾರ ಕುಟುಂಬ ಯೋಜನೆಯೂ ಅಪರಾಧವೆ. ಪ್ರತಿ ಮುಟ್ಟಿಗೂ ಒಂದೊಂದು ಕೊಲೆ ನಡೀತಾನೇ ಇರತ್ತೆ. ನಮ್ಮ ಅನುಕೂಲಕ್ಕೆ ಅಂತ ಆ ಅಪರಾಧದ ವ್ಯಾಪ್ತಿಯನ್ನು ಎಲ್ಲರೂ ಮೀರಿದ್ದೇವೆ ತಾನೆ? ನೋಡೋಣ. ಹೇಗೂ ನನ್ನ ಸ್ನೇಹಿತ ಸಹಕರಿಸಲು ಒಪ್ಪಿದ್ದಾನೆ. ಈಗ ಹೊಟ್ಟೆಯಲ್ಲಿರುವುದರ ಬಗೆಗಷ್ಟೇ ಯೋಚಿಸೋಣ. ಮುಂದಿನದು ಮುಂದೆ. ಗಂಡೇ ಆಗಿದ್ದರೆ ಏನೂ ತೊಂದರೆಯಿಲ್ಲ. ಇಲ್ಲವಾದರೆ ಮುಂದೆ ಯೋಚಿಸಿದರಾಯ್ತು. ಪರೀಕ್ಷೆ ಮಾಡಿಸುವುದರಲ್ಲಿ ಏನು ತಪ್ಪು?” ಅವನಿಗೆ ಏನೆಂದು ಉತ್ತರಿಸುವುದೆಂದೇ ಅಲಕಾಳಿಗೆ ಹೊಳೆಯಲಿಲ್ಲ. ಆದರೂ ಕೊನೆಯ ಪಟ್ಟು ಎಂಬಂತೆ ಹೇಳಿದಳು, “ನಿಮ್ಮ ಹಾಗೆ ನನ್ನ ಅಪ್ಪ-ಅಮ್ಮನೂ ಯೋಚಿಸದ್ದರೆ ನಾನು ಹುಟ್ಟುತ್ತಲೇ ಇರಲಿಲ್ಲ ಅಲ್ಲವೆ?” ಅಮರ್ ನಗುತ್ತಾ ಹೇಳಿದ, “ಆಗ ಇಂಥದೊಂದು ಅನುಕೂಲತೆಯಿದ್ದರೆ ಅವರೂ ಯೋಚಿಸುತ್ತಿದ್ದರು. ಇರಲಿಲ್ಲ ನೋಡು, ಹಾಗಾಗಿ ಸಾಲಲ್ಲಿ ನಾಲ್ಕು ಹೆಣ್ಣು ಮಕ್ಕಳನ್ನು ಹಡೆದರು ಅಷ್ಟೆ. ತಂತ್ರಜ್ಞಾನಗಳು ಇರುವುದೇ ನಮ್ಮ ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು. ಅವಕಾಶವಿರುವಾಗ ಅದನ್ನು ಉಪಯೋಗಿಸಿಕೊಂಡು ಜೀವನವನ್ನು ಸುಖಮಯವಾಗಿಸಿಕೊಳ್ಳಬೇಕು. ನಾಳೆ ಹೋಗಿ ನೋಡೋಣ. ಈಗ ಮಲಗು.” ಇಷ್ಟು ಹೇಳಿ ಗೋಡೆಗೆ ಮುಖ ತಿರುಗಿಸಿ ಮಲಗಿದ ಅಮರ್ ಹೊಸವ್ಯಕ್ತಿಯೆಂಬಂತೆ ಭಾಸವಾಯಿತು ಅಲಕಾಳಿಗೆ.

ನಿದ್ರಿಸಬೇಕೆಂದು ಎಷ್ಟು ಪ್ರಯತ್ನಿಸಿದರೂ ನಿದ್ದೆ ಅವಳ ಹತ್ತಿರ ಸುಳಿಯಲಿಲ್ಲ. ಓದು ಮತ್ತು ಬದುಕು ಇಷ್ಟೊಂದು ಭಿನ್ನವಾಗಿರಬಹುದೆಂದು ಅವಳು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಯಾಕೋ ಶಾಸ್ತ್ರಿ ಮಾಸ್ತರ್ರು ಎದುರು ಬಂದು ತಮ್ಮ ಉಬ್ಬುಹಲ್ಲನ್ನು ಪ್ರದರ್ಶಿಸಿ ನಕ್ಕಂತೆ ಭಾಸವಾಯಿತು. ಕನ್ನಡ ಪಂಡಿತರಾದರೂ ಶಾಸ್ರ್ತಿ ಮಾಸ್ತರ್ರು ತಮ್ಮದೇ ಸ್ವಯಂ ಆಸಕ್ತಿಯಿಂದ ಪ್ರೌಢಶಾಲೆಯಲ್ಲಿ ಗಣಿತವನ್ನು ಬೋಧಿಸುತ್ತಿದ್ದರು. ಬಿಡುವಿನ ವೇಳೆಯಲ್ಲಿ ಶ್ರೀಮಂತರ ಮನೆಗೆ ಹೋಮ, ಹವನ ಸಾಗಿಸಲೂ ಹೋಗುತ್ತಿದ್ದರು. ಕಲಿಕೆಯಲ್ಲಿ ಸದಾ ಮುಂದಿರುವ ಅಲಕಾ ಅವರಿಗೆ ಅಚ್ಚುಮೆಚ್ಚಿನವಳಾಗಿದ್ದಳು. ನೂರಕ್ಕೆ ನೂರು ಅಂಕ ಗಳಿಸುತ್ತಿದ್ದ ಅವಳನ್ನು ತಮ್ಮ ಉಬ್ಬುಹಲ್ಲನ್ನು ಪ್ರದರ್ಶಿಸಿ ಅವರು ಪ್ರಶಂಸಿಸುವಾಗ ಕೆಲವೊಮ್ಮೆ ಅವರ ಉಗುಳು ಮುಂದಿನ ಬೆಂಚಿನವರ ಮೇಲೆಲ್ಲಾ ಸಿಡಿಯುತ್ತಿತ್ತು. ಅವರು ಹೋದ ಕೂಡಲೇ ಕಿಲಾಡಿ ಹುಡುಗರೆಲ್ಲ ಇವಳೆಡೆಗೆ ತಿರುಗಿ, “ಹೊಗಳಿಕೆ ನಿನಗೆ, ಉಗುಳು ಪ್ರೋಕ್ಷಣೆ ನಮಗೆ” ಎಂದು ಕಿಚಾಯಿಸುತ್ತಿದ್ದರು. ಹೀಗಿರುವಾಗ ಒಂಭತ್ತನೇ ತರಗತಿಗೆ ಇವರೆಲ್ಲರಿಗಿಂತ ಐದಾರು ವರ್ಷ ದೊಡ್ಡವಳಾದ ಸುಮಾ ಪ್ರವೇಶ ಪಡೆದಿದ್ದಳು. ಪಕ್ಕದೂರಿನ ಶ್ರೀಮಂತರ ಮಗಳಾದ ಆಕೆ ಎಂಟು ಮತ್ತು ಒಂಭತ್ತನೆಯ ತರಗತಿಯಲ್ಲಿ ತಲಾ ಎರೆಡೆರಡು ವರ್ಷ ನಪಾಸಾಗಿದ್ದರಿಂದ ಅವಳನ್ನು ಹೇಗಾದರೂ ಮಾಡಿ ಮೆಟ್ರಿಕ್‍ಗೆ ದಾಟಿಸಬೇಕೆಂಬ ಅಭಿಲಾಶೆಯಿಂದ ಶಾಸ್ತ್ರಿ ಮಾಸ್ತರರೇ ಇಲಿಗ್ಲೆ ಕರೆಸಿದ್ದಾರೆಂದು ಎಲ್ಲರೂ ಗುಸು, ಗುಸು ಮಾತನಾಡುತ್ತಿದ್ದರು. ಅದಕ್ಕೆ ಸಾಕ್ಷಿಯೆಂಬಂತೆ ಪ್ರತಿಸಲವೂ ಅವಳನ್ನು ಶಾಸ್ತ್ರಿ ಮಾಸ್ತರರು ಅಲಕಾಳ ಪಕ್ಕದ ಸೀಟಿನಲ್ಲಿಯೇ ಕೂರಿಸುತ್ತಿದ್ದರು. ಇವಳೂ ಅವರ ಆಣತಿಯಂತೆ ಅಷ್ಟಿಷ್ಟನ್ನು ಹೇಳಿಕೊಡುತ್ತಿದ್ದಳು. ಆದರೆ ಕೊನೆಯ ಪರೀಕ್ಷೆಯಲ್ಲಿ ಗಣಿತ ಕಲಿಸಲೆಂದೇ ನೇಮಕವಾಗಿ ಬಂದ ಫೆರ್ನಾಂಡಿಸ್ ಸರ್ ಇವರನ್ನೆಲ್ಲ ತಬ್ಬಿಬ್ಬುಗೊಳಿಸಲೆಂದೇ ಕಠಿಣವಾದ ಪ್ರಶ್ನೆಗಳನ್ನು ತೆಗೆದು, ಅವುಗಳನ್ನು ಬಿಡಿಸುವ ಗೋಜಲಿನಲ್ಲಿ ಅಲಕಾಳಿಗೆ ಸುಮಾಳ ಕಡೆಗೆ ನೋಡಲೂ ಬಿಡುವಾಗಿರಲಿಲ್ಲ. ಪರಿಣಾಮವಾಗಿ ಸುಮಾ ಮತ್ತೆ ಅನುತ್ತೀರ್ಣತೆಯ ಕಡೆಗೆ ಸಾಗುವುದು ಖಚಿತವಾದಾಗ ಅವಳ ಮನೆಯ ವೈದಿಕರಾದ ಶಾಸ್ತ್ರಿ ಮಾಸ್ತರರಿಗೆ ತಮ್ಮ ಮಾತನ್ನು ಉಳಿಸಿಕೊಳ್ಳಲಾಗದ ನಿರಾಸೆ ಒತ್ತರಿಸಿ ಬಂದಿತ್ತು. ಅಲಕಾಳನ್ನು ಕರೆದು ಕಠಿಣವಾಗಿಯೇ ನುಡಿದಿದ್ದರು, “ನಿನಗೆ ಬುದ್ಧಿವಂತೆ ಎಂಬ ಸೊಕ್ಕು. ಆದರೆ ನೆನಪಿಡು, ಓದಿದ್ದು ಬದುಕಿಗೆ ಬರುವುದಿಲ್ಲ. ನಿನಗಿಂತ ಬೇಗ ಅವಳ ಮದುವೆಯಾಗ್ತದೆ. ಅವಳಪ್ಪನ ಹತ್ತಿರ ಬೇಕಾದಷ್ಟು ದುಡ್ಡಿದೆ.” ಯಾವಾಗಲೂ ತನ್ನನ್ನು ಹೊಗಳುತ್ತಿದ್ದ ಮಾಸ್ತರರು ಏಕಾಏಕಿ ಹೀಗೆ ರೇಗಿದಾಗ ಅಲಕಾ ತಬ್ಬಿಬ್ಬಾಗಿದ್ದಳು. ಆ ಪ್ರಾಯದಲ್ಲಿ ಅವರು ಹೇಳಿದ್ದು ಏನೊಂದು ಅರ್ಥವಾಗದಿದ್ದರೂ ತನ್ನ ಮನೆಯವರು ಬಡವರೆಂಬುದು ಇವರಿಗೆ ತಿಳಿದಿದೆ ಎಂಬುದಷ್ಟೇ ಅರ್ಥವಾಗಿ ಪೆಚ್ಚಾಗಿದ್ದಳು. ಯಾಕೋ ಶಾಸ್ತ್ರಿ ಮಾಸ್ತರರು ಮತ್ತೆ ಇಂದು ತನ್ನ ಮುಂದೆ ನಿಂತು ನಕ್ಕಂತೆ ಭಾಸವಾಯಿತು ಅಲಕಾಳಿಗೆ. ಕಷ್ಟಪಟ್ಟು ಕಣ್ಣುಮುಚ್ಚಿ ನಿದ್ರಿಸುವ ಪ್ರಯತ್ನ ಮಾಡಿದಳು.

 

ಧೋ ಎಂದು ಎಡೆಬಿಡದೇ ಮಳೆ ಸುರಿಯುತ್ತಿತ್ತು. ಅಲಕಾ ಮನೆಯ ಮಾಡಿನಿಂದ ಬಿದ್ದು ಗುಳ್ಳೆಯಾಗಿ ತೇಲಿಹೋಗಿ ಫಟ್ಟೆಂದು ಒಡೆಯುವ ನೀರ ಹನಿಗಳ ದೃಶ್ಯವನ್ನು ನೋಡುತ್ತಾ ಮೈಮರೆತಿದ್ದಳು. ಹೊಳೆಯ ನೀರು ಕೆಂಪಾಗಿ ಮೇಲೆ ನುಗ್ಗಿ ಗದ್ದೆಗಳನ್ನೆಲ್ಲ ವ್ಯಾಪಿಸಿ, ತೋಟದ ಅಂಚಿನವರೆಗೂ ಬಂದು ನಿಂತಿತ್ತು. ತೋಟದ ಅಂಚಿನಲ್ಲಿ ಎಲ್ಲಿ ನಿಂತು ನೋಡಿದರೂ ಕೆನ್ನೀರು ತನ್ನ ಒಡಲಿಗೆ ಸಿಕ್ಕಿದ್ದೆಲ್ಲವನ್ನೂ ಕೊಚ್ಚಿಕೊಂಡು ಒಂದೇ ವೇಗದಲ್ಲಿ ಹರಿಯುವ ದೃಶ್ಯವೇ ಕಾಣುತ್ತಿತ್ತು. ಜನರೆಲ್ಲ ತಮ್ಮ ತಮ್ಮ ತೋಟಗಳಿಂದ ಬೇಡದ ಕಸಗಳನ್ನೆಲ್ಲ ಹೆಕ್ಕಿ, ಹೆಕ್ಕಿ ನೀರ ಪ್ರವಾಹಕ್ಕೆ ಎಸೆಯುತ್ತಿದ್ದರು. ಇನ್ನೂ ಕೆಲವರು ಹರಿವ ನೀರಿನಲ್ಲಿ ತೇಲಿಬರುವ ಮರದ ದಿಮ್ಮಿಗಳನ್ನು ಮತ್ತು ತೆಂಗಿನ ಕಾಯಿಗಳನ್ನು ಈಜುತ್ತಾ ಹೋಗಿ ದಡಕ್ಕೆ ತಂದು ತಮ್ಮ ಸಾಹಸವನ್ನು ಸಾಬೀತುಮಾಡುತ್ತಿದ್ದರು. ಮತ್ತೆ ಕೆಲವು ತುಡುಗು ಬುದ್ಧಿಯ ಹುಡುಗರು ತಮ್ಮ ಮನೆಗಳಲ್ಲಿ ಇದ್ದ ಬೇಡದ ಬೆಕ್ಕಿನ ಮರಿಗಳನ್ನೂ, ನಾಯಿಯ ಮರಿಗಳನ್ನೂ ನೆಗಸಿಗೆ ಬಿಸಾಡುತ್ತಿದ್ದರು. ಮರಿಗಳು ಪ್ರವಾಹದಲ್ಲಿ ಈಜಲಾರದೇ ತೇಲಿಹೋಗುವುದನ್ನು ನೋಡಿ ಸಂಭ್ರಮಿಸುತ್ತಿದ್ದರು. ಇದ್ದಕ್ಕಿದ್ದಂತೆ ಕೆಂಪುನೀರಲ್ಲಿ ಪುಟ್ಟ ಹುಡುಗಿಯೊಬ್ಬಳು ತೇಲಿಹೋಗುವ ದೃಶ್ಯ ಕಣ್ಮುಂದೆ ಬಂದು, ಹತ್ತಿರ ಬಂದಂತೆ ಅದು ತನ್ನ ಕೂಸು ಪುಟ್ಟಿಯೆ ಎಂದು ಗುರುತು ಸಿಕ್ಕಿ ಅಲಕಾಳ ಎದೆಯೊಡೆದು ಹೋಯಿತು. ಪುಟ್ಟೀ…….. ಎಂದು ಕಿರುಚುತ್ತಾ ಎದ್ದಳು. “ಕೆಟ್ಟ ಕನಸು ಬಿತ್ತೇನು?” ಎಂದು ಅಮರ್ ಅವಳನ್ನು ಸಂತೈಸಿದ.

ಮಾತಿಲ್ಲದೇ ಬೆಳಗಿನ ಕೆಲಸಗಳೆಲ್ಲವೂ ನಡೆಯುತ್ತಿದ್ದವು. ರಾತ್ರಿಯ ತನ್ನ ತೊಳಲಾಟವಾದರೂ ಅಮರ್‍ನನ್ನು ಬದಲಾಯಿಸಿರಬಹುದೆಂಬ ಅವಳ ನಿರೀಕ್ಷೆ ಸುಳ್ಳಾಗಿತ್ತು. ಏನೊಂದೂ ಮಾತನಾಡದೇ ಅಮರ್ ಕಾಲೇಜಿಗೆ ನಡೆದಿದ್ದ. ಅಲಕಾಳ ಮನಸ್ಸು ಮಾತ್ರ ಕಲಕಿದ ಕೊಳದಂತಾಗಿತ್ತು. ಪುಟ್ಟಿಯನ್ನೆತ್ತಿಕೊಂಡು ತವರಿಗೆ ನಡೆದುಬಿಡಲೆ ಎಂದೊಮ್ಮೆ ಯೋಚಿಸಿದಳು ಅಲಕಾ. ಆದರದು ಅಷ್ಟು ಸುಲಭವಲ್ಲವೆಂದು ಮನಸ್ಸು ಹೇಳುತ್ತಿತ್ತು. ಮದುವೆಗೆ ಬೆಳೆದುನಿಂತಿದ್ದ ಇಬ್ಬರು ತಂಗಿಯರ ನೆನಪಾಗಿತ್ತು. ಹೊಟ್ಟೆಯೊಳಗಿರುವುದು ಗಂಡೇ ಆಗಿದ್ದರೆ…. ಅಂದುಕೊಂಡಳು. ಮತ್ತೊಮ್ಮೆ, ‘ಇದರ ಬಗ್ಗೆ ಪೂರ್ಣವಾಗಿ ತೀರ್ಮಾನ ತೆಗೆದುಕೊಳ್ಳಲು ನನಗೇನು ಹಕ್ಕಿದೆ? ಧರಿಸಿದ್ದು ನಾನಾದರೂ ಇದು ಅವನದ್ದೂ ಅಲ್ಲವೆ?’ ಅನಿಸಿತು. ಎಷ್ಟೇ ಯೋಚಿಸಿದರೂ ಯಾವ ತೀರ್ಮಾನಕ್ಕೂ ಬರಲಾಗಲಿಲ್ಲ ಅಲಕಾಳಿಗೆ. ಸಂಜೆ ಸ್ಕ್ಯಾನಿಂಗ್‍ಗೆ ಹೋಗುವುದು, ಮತ್ತೆ ಯೋಚಿಸುವುದು ಅಂದುಕೊಂಡಳು.

ಸ್ಕ್ಯಾನಿಂಗ್ ಮುಗಿಸಿ ಮನೆಗೆ ಬಂದಾಗ ರಾತ್ರಿಯಾಗಿತ್ತು. ಅಲ್ಲಿ ಯಾವ ಮಾತುಕತೆಗಳೂ ನಡೆದಂತೆ ಕಾಣಲಿಲ್ಲ. ರಾತ್ರಿ ಕ್ಲಬ್‍ನಲ್ಲಿ ಭೇಟಿಯಾದಾಗ ವಿವರಗಳು ತಿಳಿಯುವುದೇನೋ ಅಂದುಕೊಂಡಳು ಅಲಕಾ. ಅವಳ ನಿರೀಕ್ಷೆ ಸರಿಯಾಗಿತ್ತು. ರಾತ್ರಿ ಮರಳುವಾಗ ಅಮರ್ ಮಲ್ಲಿಗೆ ಹೂವು ಮತ್ತು ಸಿಹಿಯೊಂದಿಗೆ ಮರಳಿದ್ದ. ಅದನ್ನು ಡೈನಿಂಗ್ ಟೇಬಲ್ ಮೇಲಿಟ್ಟವಳೇ ಸರಸರನೆ ಬೆಡ್ ರೂಮಿನ ಬಾಗಿಲನ್ನು ಹಾಕಿಕೊಂಡು ಬೋರಲಾಗಿ ಬಿದ್ದು ಅತ್ತಿದ್ದಳು ಅಲಕಾ. ಒಂದು ವಾರ ಮಾತಿಲ್ಲದೇ ಕಳೆದು ನಿಧಾನವಾಗಿ ಮನೆಯ ಸ್ಥಿತಿ ಸ್ಥಿಮಿತಕ್ಕೆ ಬಂದಿತ್ತು. ಚಿಂತನ್ ಹುಟ್ಟಿದಾಗ ಯಾಂತ್ರಿಕತೆಯನ್ನು ಮೀರಿದ ಯಾವ ಭಾವವೂ ಅವಳನ್ನು ಆವರಿಸಲಿಲ್ಲ.

ಯಾಕೋ ಅಲ್ಲಿಂದ ಅಲಕಾಳಿಗೆ ಮನೆಯವರೆಲ್ಲರೂ ಅಪರಿಚಿತರಂತೆ ಕಾಣಿಸತೊಡಗಿದರು. ಎಷ್ಟೇ ಅರಿತಿರುವೆ ಎಂದರೂ ಎಲ್ಲಿ, ಯಾವಾಗ ಬದಲಾಗುವರೋ ಎಂಬ ತಳಮಳ ಕಾಡುತ್ತಲೇ ಇತ್ತು. ಬದುಕಿನ ಯಾವ ವಿಸ್ಮಯಗಳೂ ಮನಸ್ಸಿನಲ್ಲೊಂದು ಖುಶಿಯ ಪುಳಕವನ್ನು ತರುತ್ತಲೇ ಇರಲಿಲ್ಲ. ಚಿನ್ಮಯಿ ವೈದ್ಯ ಪದವಿಗೆ ಸೀಟು ಗಿಟ್ಟಿಸಿಕೊಂಡಾಗಲೂ, ಚಿಂತನ್ Sಂಟeಯಲ್ಲಿ ರ್ಯಾಂಕ್ ಪಡೆದಾಗಲೂ ಅವಳು ತಣ್ಣಗೇ ಪ್ರತಿಕ್ರಿಯಿಸಿದ್ದಳು. ಅಮರ್‍ಗೆ ಪ್ರಾಧ್ಯಾಪಕನಾಗಿ ಭಡ್ತಿ ದೊರೆತು ಹೆಚ್ಚಿನ ಅಧ್ಯಯನಕ್ಕೆ ಅವಕಾಶವಾಗಿ, ‘ಲಿಂಗತ್ವ-ಸಾಮಾಜಿಕ ಪರಿಕಲ್ಪನೆ’ ಎಂಬ ವಿಷಯದ ಮೇಲೆ ಡಾಕ್ಟರೇಟ್ ಪಡೆದಾಗ ಅವಳು ಖುಶಿಪಡುವ ಬದಲು ಅವನೆಡೆಗೊಂದು ವಿಷಾದದ ನೋಟ ಬೀರಿದ್ದಳು. ಮಕ್ಕಳಿಬ್ಬರೂ ಕೆಲವೊಮ್ಮೆ ಅವಳನ್ನು ಛೇಡಿಸುವುದಿತ್ತು, ‘ಯಾವಾಗಲೂ ತಲೆಯ ಮೇಲೆ ಆಕಾಶ ಬಿದ್ದಂತೆ ಆಡುವವಳು’ ಎಂದು. ಆಗೆಲ್ಲ ಅವಳು ನೀರಸವಾಗಿ ಒಂದು ನಗು ಬೀರುತ್ತಿದ್ದಳಷ್ಟೆ. ಬಿಡುವಿನ ವೇಳೆಗಳೆಯಲೆಂದು ಅವಳು ಕೆಲಸ ಮಾಡುತ್ತಿದ್ದ ಮಹಿಳಾ ಸಮಾಜದ ಕೆಲಸಗಳು ಮಾತ್ರವೇ ಅವಳಿಗೆ ಸ್ವಲ್ಪಮಟ್ಟಿನ ಚೈತನ್ಯವನ್ನು ನೀಡುತ್ತಿದ್ದವು. ಕೊಲೆಯ ಕಲ್ಪನೆಯೂ ಒಂದು ಅಪರಾಧವಾಗಿ ನಿಲ್ಲುವುದೇನೊ ಎಂದು ಅವಳಿಗೆ ಸದಾ ಅನಿಸುತ್ತಿತ್ತು. ಬೆಳಿಗ್ಗೆ ಅಮರ್ ಮುರಿದ ಆಲೂವಿನ ಮೊಳಕೆ ಹಳೆಯ ಕಲೆಯನ್ನು ಗಾಯವಾಗಿಸಿ, ನೋವಿನ ಅಲೆಯನ್ನೇ ಹುಟ್ಟಿಸಿತ್ತು.

ಫೋನ್ ರಿಂಗಣಿಸಿದ ಸದ್ದಿಗೆ ಅಲಕಾ ವಾಸ್ತವಕ್ಕಿಳಿದಳು. ಹಳ್ಳಿಯ ಗಿರಿಜನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಗಳು ಆ ಬದಿಯಿಂದ ಅತಿ ಉತ್ಸಾಹದಿಂದ ಮಾತನಾಡುತ್ತಿದ್ದಳು, “ಅಮ್ಮಾ, ಮಗು ಎಷ್ಟು ಮುದ್ದಾಗಿದೆ ಅಂತೀಯ. ಒಳ್ಳೆ ಗೊಂಬೆಯ ಹಾಗಿದೆಯಮ್ಮ. ಆದರೆ ಅದರ ಅಮ್ಮನಿಗೆ ಮಾತ್ರ ಇದು ಬೇಡವಾಯ್ತು ನೋಡು. ಇಂಥ ಚೆಂದದ ಮಗುವನ್ನು ಕಸದ ತೊಟ್ಟಿಯಲ್ಲಿಟ್ಟು ಹೋಗಿದ್ದಾಳೆ. ಪಕ್ಕಾ ಅನಕ್ಷರಸ್ಥ ಹೆಂಗಸೇ ಇರಬೇಕು. ಮಗುವನ್ನು ಇಂದು ಮುಂಜಾನೆ ಪ್ರಥಮ ಚಿಕಿತ್ಸೆಗೆಂದು ಆಸ್ಪತ್ರೆಗೆ ತಂದಿದ್ದಾರೆ. ಇಲ್ಲಿಂದ ಮತ್ತೆ ಬಾಲಮಂದಿರಕ್ಕೆ ಕಳಿಸ್ತಾರೆ. ಅಲ್ಲಿಂದ ಯಾರಿಗಾದರೂ ದತ್ತು ಕೊಡ್ತಾರಂತಮ್ಮ. ವಿಶೇಷ ಗೊತ್ತಾ? ಮಗುವಿನ ಆರೋಗ್ಯವನ್ನು ನಾನೇ ತಪಾಸಣೆ ಮಾಡ್ದೆ. ಹಾಗೆ ಪರೀಕ್ಷಿಸುತ್ತಿರೋವಾಗ ಆ ಮಗು ಹಿಡಿದ ನನ್ನ ಕೈಯನ್ನು ಬಿಡಲೇ ಇಲ್ಲ ನೋಡಮ್ಮ. ಎಷ್ಟು ಗಟ್ಟಿಯಾಗಿ ಹಿಡ್ಕೊಂಡಿತ್ತು ಅಂತೀಯಾ? ನನಗಂತೂ ಆ ಕ್ಷಣಕ್ಕೆ ಅದು ನನ್ನ ಮಗು ಅನಿಸಿಹೋಯ್ತು. ಅಮ್ಮಾ, ನಾನು ಆ ಮಗೂನ ದತ್ತು ತಗೋತೀನಮ್ಮ. ಇವತ್ತೇ ಅಪ್ಲೈ ಮಾಡ್ತೇನೆ. ಅದಕ್ಕೆ ನಿನ್ನ ಒಂದು ಮಾತು ಕೇಳೋಣ ಅಂತ ಫೋನ್ ಮಾಡ್ದೆ. ಅಪ್ಪ ಹೇಗೂ ಒಪ್ತಾರೆ. ಫಾರಂ ಎಲ್ಲ ತುಂಬಿ ರೆಡಿಯಿಟ್ಟಿದ್ದೀನಿ. ನೀನು ಯೆಸ್ ಅಂದ್ರೆ ಸಹಿ ಮಾಡೋದೊಂದೇ ಬಾಕಿ. ಬೇಗ ಹೇಳು.” ಅಂತ ಒಂದೇ ಉಸಿರಿನಲ್ಲಿ ಹೇಳಿ ನಿಲ್ಲಿಸಿದಳು. ಅಲಕಾ ಒಂದಿನಿತೂ ಯೋಚಿಸದೇ “ಯೆಸ್” ಎಂದಳು.

ಚಿತ್ರ : ಎಸ್‌. ವಿಷ್ಣುಕುಮಾರ್‌

ಸುಧಾ ಆಡುಕಳ

ಸುಧಾ ಆಡುಕಳ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳ ಗ್ರಾಮದವರಾದ ಶ್ರೀಮತಿ ಸುಧಾ ಆಡುಕಳ ಅವರು ಪ್ರಸ್ತುತ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಧಾ, ನೃತ್ಯಗಾಥಾ, ಆನಂದಭಾವಿನಿ, ಮಾಧವಿ ಮೊದಲಾದ ಏಕವ್ಯಕ್ತಿ ನಾಟಕಗಳನ್ನು, ಮಕ್ಕಳ ರವೀಂದ್ರ, ಕನಕ-ಕೃಷ್ಣ, ಮಕ್ಕಳ ರಾಮಾಯಣ, ಬ್ರಹ್ಮರಾಕ್ಷಸ ಮತ್ತು ಕಥೆ, ಮರ ಮತ್ತು ಮನುಷ್ಯ ಮೊದಲಾದ ಮಕ್ಕಳ ನಾಟಕಗಳನ್ನು ರಚಿಸಿರುತ್ತಾರೆ. ರವೀಂದ್ರನಾಥ ಟ್ಯಾಗೋರರ ಕೆಂಪು ಕಣಗಿಲೆ, ಚಿತ್ರಾ ಮತ್ತು ಅವಳ ಕಾಗದ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಇವರ ‘ಬಕುಲದ ಬಾಗಿಲಿನಿಂದ’ ಕೃತಿಗೆ ರಾಜ್ಯಸಾಹಿತ್ಯ ಅಕಾಡೆಮಿ ಬಹುಮಾನ ದೊರಕಿದೆ. ‘ಒಂದು ಇಡಿಯ ಬಳಪ’ ಪ್ರಕಟಿತ ಕಥಾಸಂಕಲನ. ಇವರು ಅನುವಾದಿಸಿದ ‘ಮಗುವಿನ ಭಾಷೆ ಮತ್ತು ಶಿಕ್ಷಕ’ ಕೃತಿಯು ದೆಹಲಿಯ ನ್ಯಾ಼ಶನಲ್ ಬುಕ್ ಟ್ರಸ್ಟ್ನಿಂದ ಪ್ರಕಟಗೊಂಡಿದೆ. ಕಥೆ, ಕವನ, ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವಧಿ ಸೇರಿದಂತೆ ಹಲವು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದ ಸುಧಾ ಅವರು 'ಬಕುಲದ ಬಾಗಿಲಿನಿಂದ' ಎಂಬ ಲೇಖನ ಸಂಕಲನವನ್ನು ಪ್ರಕಟಿಸಿದ್ದಾರೆ. ಯಶವಂತನ ಯಶೋಗೀತೆ, ಹದಿಹರೆಯದ ಕನಸುಗಳೊಂದಿಗೆ, ಮಗುವಿನ ಭಾಷೆ ಮತ್ತು ಶಿಕ್ಷಕ, ಮಕ್ಕಳ ಟ್ಯಾಗೋರ್ ಅವರ ಮತ್ತಿತರ ಕೃತಿಗಳು. ಅವರಿಗೆ 2019ನೇ ಸಾಲಿನ ಅಮ್ಮ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಕ್ಕಳ ಚಂದಿರ ಪ್ರಶಸ್ತಿ,  ಉಡುಪಿಯ ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಬಕುಲದ ಬಾಗಿಲಿನಿಂದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ

 

 

More About Author