Poem

ಮೂಕಿ ಇವಳು

ಪ್ರಶ್ನೆ- ಗಿಶ್ನೆ ಕೇಳಬಾರದು
ಕಣ್ಣು ಕೀರೀ ನೋಡುತ್ತಾರೆ
ಒಡೆಯ'ನಲ್ಲ'ವೆ !!!
ನೂರಾರು ಒತ್ತಡಗಳು
ಕೈತುಂಬ ಕೆಲಸಗಳು
ಭ್ರಮೆಗಳು.......
ಮೂಕಿ ಇವಳು
ಕೆಲಸಗಳ ಪಟ್ಟಿಮಾಡುವುದೇಯಿಲ್ಲ!!

ಯಾಕೆ -ಎಲ್ಲಿ ಏನು -ಯತ್ತ ?
ಅವನ ಜಾತಿಗಲ್ಲ
ಜಡೆಜಾತಿಗಷ್ಟೇ!
ಹಗಲೆಲ್ಲ ಮಾತಾಡಿಸಬಾರದು
ರಾತ್ರಿಯಲ್ಲಿ ಮಾತ್ರ ಮಾತುಸಾಧ್ಯ
ಇಬ್ಬಗೆಯ ಪೌರುಷ !
ಈ ಬಗೆಯು ಭಾಗ್ಯವೆಂದು
ಬಗೆದವರು ಅದೆಷ್ಟೋ .......

ರಾತ್ರಿಯೂ ಮಾತಾಡಿಸದವರಿಗೆ
ಜಲ ನಿರ್ಜಲ ಮಂಡಲಗಳ
ಅಗ್ನಿ ವರ್ಷಗಳ ಆಣೆಯಿಡುತ್ತ
ಸತತ ನಿಟ್ಟುಸಿರ ಹಡೆವ ಸೃಷ್ಟಿ
ಪರಿ-ತಪಿಸುವಳು
ಹನಿಗಣ್ಣಾಗದೇ........
ಒಂದು ಹನಿ ಪ್ರೀತಿಗಾಗಿ

ಶತ ಶತಮಾನಗಳ ದಾಟಿ
ಗತ ಇತಿಹಾಸಗಳ ಮೀಟಿ
ಸಂಭಂದಗಳ ಭಾಷ್ಯ
ಸ್ವ- ಭಾವಗಳ ಸಂಕೀರ್ಣ
ಸಮೀಕರಣಗಳು
ಹೊಸ ಅರ್ಥದಲಿ
ಚಿಗಿಯುತ್ತಿವೆ ಜಿಗಿಯುತ್ತಿವೆ

ವಿಭಾ ಪುರೋಹಿತ

ವಿಭಾ ಪುರೋಹಿತ

ಕವಯತ್ರಿ ವಿಭಾ ಪುರೋಹಿತ, ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ಸದ್ಯ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡತೇರರಿಗೆ ಕನ್ನಡ ಕಲಿಕಾ ತರಬೇತಿ ನೀಡುತ್ತಿದ್ದಾರೆ. ಚಂದನ ವಾಹಿನಿಯಲ್ಲಿ ವಾರ್ತಾವಾಚಕಿಯಾಗಿ ಮತ್ತು ಹಾಸನದ ಎಫ್.ಎಂ. ಕೇಂದ್ರದಲ್ಲಿ ಉದ್ಘೋಷಕಿಯಾಗಿ ಕೆಲಸ ಮಾಡಿದ್ದಾರೆ. ಕವನ -ಪ್ರಬಂಧ ಬರೆಯುವುದು, ಅನುವಾದ ಮಾಡುವುದು ಇವರ ಹವ್ಯಾಸ. 'ಮಲ್ಲಿಗೆ ಮತ್ತು ಇತರೆ ಕವಿತೆಗಳು' ಹಾಗೂ  'ದೀಪ ಹಚ್ಚು' ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ.  ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಸೇರಿದಂತೆ ರಾಜ್ಯ ಹಲವಾರು ಕನ್ನಡ ಪರ ಮತ್ತು ಸಾಹಿತ್ಯಕ ಸಂಘ ಸಂಸ್ಥೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಸೇವೆಗೆ 'ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ' ಮತ್ತು ಹುಬ್ಬಳ್ಳಿಯ ಚೇತನ ಸಾಹಿತ್ಯ ಪ್ರಕಾಶನದ 'ಚೇತನ ಸಾಹಿತ್ಯ ಸಮ್ಯಾನ್' ದೊರತಿವೆ. 'ಕಲ್ಲೆದೆ ಬಿರಿದಾಗ' ಅವರ ಮೂರನೆ ಕವನ ಸಂಕಲನ.

More About Author