Poem

ಮುಸ್ಸಂಜೆಯ_ಮುಂಗಾರು

ಪ್ರತಿ ಮುಂಗಾರಿಗು ಮುಖವೊಡ್ಡಿ
ಮುಗ್ಗದೆ ಮೊಗ್ಗಾಗಿ ಅರಳಿದ ನಾನು
ಅದೆಷ್ಟು ಬಾರಿ ಇದೇ ಗದ್ದೆಗೆ
ಅಗೆ ಹಾಕಿಲ್ಲ...
ಸಸಿ ಕಿತ್ತು ನೆಟ್ಟಿ ಮಾಡಿ
ಕಂಬಳದೂಟ ಉಂಡಿಲ್ಲ...
ಕಳೆ ಕಿತ್ತು ಕೊಯ್ಲು ಮಾಡಿ
ಕಣಹಬ್ಬದಿ ಕಣಜ ತುಂಬಿಲ್ಲ...

ಕೆಸರು ಕಲಸಿ ಮೊಸರುಣಿಸಿದ ಕೈಗಳು
ಈ ಮುಂಗಾರಿಗ್ಯಾಕೋ ನಡುಗುತ್ತಿವೆ...!

ಅಂಬರಕ್ಕೆ ತೂತು ಬಿದ್ದಿದೆಯೇನೊ
ಹನಿ ತುಂಡಾಗುತ್ತಿಲ್ಲ
ಸೂಡಿದ ಕಂಬಳಿಕೊಪ್ಪೆ
'ಅವರ' ನೆನಪು ಸೂಸುತ್ತಿದೆ
ಆಸೆಗಣ್ಣಿನ ಕರಿಯ ಮೂಸಿ ಮೂಸಿ
ಕುಂಯ್ ಗುಟ್ಟುತಾ ಸುತ್ತುತಿದೆ
ಒಂಟಿ ಬೋಳು ಮರದ ಮೇಲೆ
ಒಂದೇ ಸಮನೆ ಕಾಗೆ ಕಿರುಚುತಿದೆ...

ಹದಮುಡಿಗೆ ಮೊಳಕೆ ಬತ್ತವ ಹರಡುವಾ ಕೈಗಳು
ಈ ಮುಂಗಾರಿಗ್ಯಾಕೋ ನಡುಗುತ್ತಿವೆ...!

'ನಾವೇನು ಊರಿಗನ್ನ ಹಾಕಬೇಕಾ
ಇಲ್ಲೆ ಇದ್ದಿದ್ರಲ್ಲೇ ಗೆಯ್ಮೆ ಮಾಡು ಮಗಾ'
'ನನ್ನೊಟ್ಟಿಗೆ ಅಲ್ಲಿಗೆ ಬಾ,ಇಲ್ಲ
ಇಲ್ಲೇ ಬಿದ್ದು ಸಾಯಿ'
ಮಗ ಕಡ್ಡಿ ತುಂಡು ಮಾಡಿ ಹೊರಟ!
'ಅವ್ವಾ ಇದೇನು ದೊಡ್ಡ ಸಾಮ್ರಾಜ್ಯನಾ
ಹೋದಷ್ಟಕ್ಕೆ ಮಾರಿ ತಮ್ಮನಿದ್ದಲ್ಲಿ ಹೋಗು'
ಗಂಡನಮನೆ ಮಗಳ ನಿತ್ಯ ವರಾತ!

ಪೋನು ರಿಂಗಾದರೆ ಸಾಕು
ಮುದುಕಿಯ ಜೀವ ಬಾಯಿಗೆ ಬಂದು
ನೆರಿಗೆಗಟ್ಟಿದ ಕೈಗಳು ನಡುಗುತ್ತವೆ...!

ಹೊಟ್ಟೆ ಬಟ್ಟೆ ಕಟ್ಟಿ ಬೆಳೆಸಿದ
ತೋಟ ತುಡಿಗೆ
ತುಂಬಿದ ಕೊಟ್ಟಿಗೆ
ಬಸಳೆ ತೊಂಡೆ ಅವರೆ ತೂಗುವ
ಚಪ್ಪರಗಳ ಹಿತ್ತಿಲು
ಗದ್ದೆ ಬ್ಯಾಣ ಅಂಗಳ ತಬ್ಬಿರುವ
'ಅವರ' ಬೆವರಿನ ಘಮಲು....

ಎಲ್ಲಾ ಮಾರಿಕೊಂಡು
ಎಲ್ಲೋ ಹೋಗಿ
ಬದುಕುವುದೆಂದರೆ...!?!

✍️ಡಾ. ರತ್ನಾಕರ ಸಿ ಕುನುಗೋಡು

ರತ್ನಾಕರ ಸಿ. ಕುನುಗೋಡು

ಡಾ.ರತ್ನಾಕರ ಸಿ. ಕುನುಗೋಡು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಎರೆಕೊಪ್ಪದವರು. ತಾಯಿ-ನಿಂಗಮ್ಮ, ತಂದೆ- ಚನ್ನಬಸಪ್ಪ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಸ್ತುತ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸ.ಪ್ರ.ದ.ಕಾಲೇಜು, ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿನಿಂದಲೂ ಸಾಹಿತ್ಯ, ರಂಗಭೂಮಿ, ಸಂಘಟನೆ, ಸಾಮಾಜಿಕ ಪರಿವರ್ತನೆಗಳತ್ತ ಒಲವು ಮೂಡಿಸಿಕೊಂಡು ಕ್ರಿಯಾಶೀಲರಾಗಿರುವ ಅವರು ಕವಿತೆಗಳು ಮತ್ತು ಸಂಶೋಧನಾ ಲೇಖನಗಳ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಪಿಹೆಚ್ ಡಿ ಗಾಗಿ ಬೇರು ಬಿಳಲು ಎಂಬ ಸಂಶೋಧನಾ ಮಹಾಪ್ರಬಂಧವನ್ನು ರಚಿಸಿ ಪ್ರಕಟಿಸಿದ್ದಾರೆ.

More About Author