Poem

ನಾಕ-ನರಕದ ನಡುವೆ 

ಕವಿ, ಕತೆಗಾರ, ರಾಜಕೀಯ ವಿಶ್ಲೇಷಕ ಕು.ಸ. ಮಧುಸೂದನ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನವರು. ‘ಅಸಹಾಯಕ ಆತ್ಮಗಳು’ ಕತಾ ಸಂಕಲನ ರಚಿಸಿದ್ದು, ’ದುರಿತ ಕಾಲದ ದನಿ’ ಅವರ ಕವನ ಸಂಕಲನ. ಸಮಕಾಲೀನ ಬರಹಗಾರರಿಗೆಂದು ‘ಸಂಗಾತಿ’ ಎಂಬ ಸಾಹಿತ್ಯ ಪತ್ರಿಕೆಯನ್ನು ಡಿಜಿಟಲ್ ಮೂಲಕ ನಾಡಿನಾದ್ಯಂತ ಪಸರಿಸುತ್ತಿದ್ದಾರೆ. ಅವರ ‘ನಾಕ-ನರಕದ ನಡುವೆ’ ಕವಿತೆ ನಿಮ್ಮ ಓದಿಗೆ.

ನಾವಂದುಕೊಂಡ ಹಾಗೆ
ಲೋಕವೇನು ನಾಕವಲ್ಲ
ಪಾಪವೇ ಮಾಡದಷ್ಟು ಪವಿತ್ರಾತ್ಮನೇನಲ್ಲ
ನನ್ನಂತ ಹುಲು ಮಾನವನು

 

ಊರ ತುಂಬಾ ಕದಡಿ ಕೊಚ್ಚೆಯಾದ
ಮೈಮನಸುಗಳ ಜೊತೆಯೇ ಮಿಂದೆದ್ದು
ಗಂಗಾಸ್ನಾನವ ಕನಸಿದ್ದೇನು ಕಡಿಮೆ ತಪ್ಪೇ!

 

ಒಡೆದ ಚೂರುಚೂರುಗಳಾದ ಕನ್ನಡಿಯೊಳಗೆ
ಇಣುಕಿ ಕಂಡದ್ದೇ ಸತ್ಯವೆಂದು ನಂಬಿ
ತನ್ನ ಪ್ರತಿಮೆಯ ತಾನೇ
ಕಡೆದು ನಿಲ್ಲಿಸಿಕೊಂಡಿದ್ದೇನು ಕಡಿಮೆ ತಪ್ಪೇ!

 

ಯಾರದೋ ಬಸುರಿಗೆ
ಇನ್ಯಾರದೊ ಹೆಸರು ಸೇರಿಸಿ

 

ಕೊನೆಗೂ ಗಟ್ಟಿ ಪಿಂಡದ ಪಿತಾಮಹನ್ಯಾರೆಂದು
ಪತ್ತೆಯಾಗದಂತೆ ಜಗವ ಮರುಳು ಮಾಡಿ
ನಿತ್ಯ ಪುರಾಣದೊಳಗಿನಷ್ಟೂ ಮಿಥ್ಯಗಳ ಸತ್ಯವೆಂದು ಸಾರುತ್ತ
ವರ್ತಮಾನದ ಸಂತೆಯೊಳಗೆ
ಬೆತ್ತಲಾಗಿಸಿಕೊಂಡು ತನ್ನನ್ನು ತಾನೇ
ಮಾರಿಕೊಳ್ಳಲು ಬೆಲೆ ಪಟ್ಟಿ ನಿಗದಿ ಮಾಡಿ
ಹರಾಜು ಕೂಗುವ ಹರಾಮಿ ಸಂತತಿಯ ಜನಕರನ್ನೇ
ಪುರಪಿತೃಗಳೆಂದು ಘೋಷಿಸಿ
ಗುಂಡಿ ತೋಡಿ
ಕಣಗಿಲೆಹಾರಗಳನ್ನು ನಾವೇ ಕಟ್ಟಿ
ಕೊರಳಿಗೆ ಹಾಕಿ ನಿಂತ ನಮಗಿಂತ ಪಾಪಾತ್ಮರು
ಯಾರಿಹರು ಇಲ್ಲಿ
ಹೇಳೀಗ ದೊರೆ.

 

ನಾವಂದುಕೊಂಡ ಹಾಗೆ ಜಗವೇನು ನಾಕವೊ
ನರಕವೊ

ಕಲಾಕೃತಿ : ಮಹಾಂತೇಶ ದೊಡ್ಡಮನಿ

ಕು. ಸ. ಮಧುಸೂದನ

ಕವಿ,ಕತೆಗಾರ, ರಾಜಕೀಯ ವಿಶ್ಲೇಷಕ ಕು.ಸ.ಮಧುಸೂದನ ಅವರು 1963ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು. ಮಾತೃಭಾಷೆ ಮಲೆಯಾಳಂ. ಆದರೂ, ಓದಿದ್ದು ಬರೆದಿದ್ದು ಮಾತ್ರ ಕನ್ನಡದಲ್ಲಿಯೇ. ಸರ್ಕಾರಿ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಕರಾಗಿ 30 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ಇದೀಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ರಂಗೇನಹಳ್ಳಿ(ಮುಡುಗೋಡು) ಗ್ರಾಮದಲ್ಲಿನೆಲೆಸಿದ್ದಾರೆ. ’ಅಸಹಾಯಕ ಆತ್ಮಗಳು’ ಕಥಾ ಸಂಕಲನ ರಚಿಸಿದ್ದು, ’ದುರಿತ ಕಾಲದ ದನಿ” ಅವರ ಕವನ ಸಂಕಲನ. ಸಮಕಾಲೀನ ರಾಜಕೀಯ ವಿದ್ಮಮಾನಗಳ ವಿಶ್ಲೇಷಣೆ ಒಳಗೊಂಡ ’ಮಣ್ಣಿನ ಕಣ್ಣು ಭಾಗ - 1 ಮತ್ತು 2' ನ್ನು ಪ್ರಕಟಿಸಿದ್ದಾರೆ

More About Author