Poem

ನಾನೇಕೆ ಬರೆಯುತ್ತೇನೆ

ಹೌದು ನಾನೇಕೆ ಬರೆಯುತ್ತೇನೆ
ಎಂಬ ದ್ವಂದ್ವಕ್ಕೆ ಸಿಕ್ಕಿ ಗುಕ್ಕು ಮುಕ್ಕಾಡದೆ ಜಗುಲಿಯ ಮೇಲೆ ಕೂತು
ಆಲೋಚನೆಗಳಲ್ಲಿ ಹಾರಲು ಹವಣಿಸುತ್ತಿದ್ದೆ...

ಅಷ್ಟರಲ್ಲೆ ಅಲ್ಲೊಂದು ಹಸಿವಿನ
ಚೀತ್ಕಾರದ ಧ್ವನಿ ಅಂಗಳದ ತುಂಬೆಲ್ಲ
ಹರಡಿ ಅಳುತ್ತಿತ್ತು
ಲೋಕದ ಕಿವಿಗಳು ಕಿವುಡಾಗಿ ಸತ್ತಿದ್ದವು

ಚರಂಡಿಯ ಕಿನಾರೆಯಲ್ಲಿ
ಕಣ್ಣೀರು ಮಾತಾಡಲು ಚಡಪಡಿಸುತ್ತಿತ್ತು
ಮಾತಿಗೆ ಸಹಕರಿಸಿದವರ ನೋಡಿ
ಚರಂಡಿಯೊಡನೆ ಸಂಗಮಿಸಿ ಹರಿಯಿತು

ಇಲ್ಲಿ ಸತ್ತ ಎಷ್ಟೋ ಶವಗಳಿಗೆ
ಅವರ ಸಾವಿನ ಸತ್ಯವೆ ಗೊತ್ತಿಲ್ಲದೆ
ಗೋಳಾಡುತ್ತಿವೆ
ಆ ಗೋಳಿನ ಕಥೆ ಕೇಳುವವರಿಲ್ಲ

ಕತ್ತಲ ರಾತ್ರಿಗಳಲ್ಲಿ ಬೆತ್ತಲಾಗುತ್ತಿರುವ
ಅದೆಷ್ಟೋ ಕಟುಸತ್ಯಗಳನ್ನು ನೋಡಿ ನೋಡಿ
ಸಿಡಿಮಿಡಿಗೊಂಡ ಗೋಡೆಗಳು
ಈಗ ಬಿರುಕು ಬಿಡುತ್ತಿವೆ

ನನ್ನ ಆಲೋಚನೆಗಳಲ್ಲಿ ಅನಾವರಣ
ಗೊಂಡು ಧಾವಿಸಿ ಬಂದ ಆ
ಪದಪುಂಜಗಳೆಲ್ಲ
ಈಗ ಪಲಾಯನವಾಗಿದ್ದಾವೆ.

ಪಲಾಯನವಾದ ಪದಗಳನ್ನು
ಹಿಡಿದು ಪೋಣಿಸುವಾಗ
ನನಗನಿಸುತ್ತಿದೆ ನಾನ್ಯಾಕೆ ಬರೆಯುತ್ತೇನೆ
ನಿಮಗೂ ಹಾಗೆ ಅನಿಸಿದರೆ ಹೇಳಿ
ನಾನ್ಯಾಕೆ ಬರೆಯುತ್ತೇನೆ?

- ಎನ್.ಕೆ.ಇಬ್ಬನಿ ನಡಂಪಲ್ಲಿ

ಎನ್.ಕೆ.ಇಬ್ಬನಿ ನಡಂಪಲ್ಲಿ

ಎನ್.ಕೆ.ಇಬ್ಬನಿ ನಡಂಪಲ್ಲಿ ಕಾವ್ಯನಾಮದಿಂದ ಬರೆಯುತ್ತಿರುವ ಲೇಖಕ ಎನ್.ಕೆ. ಮಂಜುನಾಥ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರಂ ಹೋಬಳಿಯ ನಡಂಪಲ್ಲಿ (ಜನನ: 14-05-1984) ಗ್ರಾಮದವರು. ತಂದೆ ಕೆಂಚಪ್ಪ, ತಾಯಿ ನಂಜಮ್ಮ. ಸಂಘಟನೆಯೊಂದಿಗೆ ಬದುಕು ರೂಪಿಸಿಕೊಳ್ಳುತ್ತಾ ಸಾಹಿತ್ಯಾಸಕ್ತಿ ಬೆಳೆಸಿಕೊಂಡವರು. ಕೃಷಿಕರು. 2008ರಲ್ಲಿ ಕಾವ್ಯಾಮೃತಾ-ಸಂಪಾದಿತ ಕವನಗಳ ಸಂಕಲನ ಹಾಗೂ 2010ರಲ್ಲಿ ತಮ್ಮದೇ ಕವನ ಸಂಕಲನ-ಆ ದಿನಗಳು; ಪ್ರಕಟಗೊಂಡಿವೆ.

More About Author