Poem

ನಿಲ್ಲಲಾಗಲಿಲ್ಲ ನಾನು ಸಾವಿಗಾಗಿ, ಹಾಗಾಗಿ

ನಿಲ್ಲಲಾಗಲಿಲ್ಲ ನಾನು ಸಾವಿಗಾಗಿ, ಹಾಗಾಗಿ,
ಆತನೇ ಕನಿಕರಿಸಿ ನನಗಾಗಿ ನಿಂತ,
ಆತನ ಗಾಡಿಯಲೀಗ ನಾವಿಬ್ಬರು ಮತ್ತು ಅಮರತ್ವ ಮಾತ್ರ.

ನಮ್ಮ ಚಲನೆ ನಿದಾನ, ಆತನಿಗವಸರವೇ ಇಲ್ಲ,
ಆತನ ಸೌಜನ್ಯಕ್ಕೆ ಪ್ರತಿಯಾಗಿ,
ಇಟ್ಟೆ ಪಕ್ಕಕೆ ನನ್ನ ದುಡಿಮೆಯನು, ವಿರಾಮವನೂ.

ಮಕ್ಕಳಾಡುತ್ತಿದ್ದ ಶಾಲೆಯ ದಾಟಿದೆವು,
ಮುಗಿದಿಲ್ಲವಿನ್ನೂ ಅವರ ಪಾಠಗಳು,
ತೂಗುತ್ತ ನಿಂತ ಪೈರ ಹೊಲಗಳ ದಾಟಿದೆವು,
ಅಸ್ತಮಿತ ರವಿಯ ದಾಟಿದೆವು.

ನೆಲ ಉಬ್ಬಿದಂತೆ ಕಾಣ್ವ
ಮನೆಯ ಮುಂದೆ ನಿಲುಗಡೆ ;
ಚಾವಣಿಯೇ ಇಲ್ಲವದಕೆ,
ಮಣ್ಣ ಒತ್ತರಿಕೆಯೆ ಸಿಂಗಾರವದಕೆ.

ಇದಾಗಿ ಶತಮಾನಗಳೇ ಸಂದಿವೆ, ಆದರೂ ಪ್ರತಿಯೊಂದೂ ದಿನವೊಂದಕಿಂತ ಕಡಿಮೆಯೇ,
ನನಗೋ ಮೊದಲು ಗೋಚರಿಸಿದ್ದು,
ಅಶ್ವಗಳ ಓಟ ಅಮರತ್ವದೆಡೆಗೆ.

-ನಟರಾಜ್. ಎಸ್. ಮೈಸೂರು

ನಟರಾಜ್. ಎಸ್

ಲೇಖಕ ನಟರಾಜ್. ಎಸ್ ಅವರು ಮೂಲತಃ ಹಾಸನ ಜಿಲ್ಲೆಯ ಬೇಲೂರಿನವರು. ಎಂ.ಎ(ಇಂಗ್ಲಿಷ್) ಮತ್ತು ಬಿ.ಎಡ್ ಪದವೀಧರರಾಗಿರುವ ಅವರು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರಾಂಕ್ ಮತ್ತು ಚಿನ್ನದ ಪದಕ ವಿಜೇತರು. ಸಾಹಿತ್ಯ, ಕಲೆ, ವಿಜ್ಞಾನ ಅವರ ಆಸಕ್ತಿಕರ ವಿಚಾರವಾಗಿದ್ದು ಕತೆ, ಕವನ, ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕನ್ನಡ ಮತ್ತು ಇಂಗ್ಲಿಷ್ ಅನುವಾದ ಕಾರ್ಯದಲ್ಲೂ ತೊಡಗಿಸಿಕೊಂಡಿರುವ ಅವರ ಕೆಲವು ಕವಿತೆಗಳು, ಕತೆಗಳು, ಬರಹಗಳು ವಿವಿಧ ಪತ್ರಿಕೆಗಳು ಹಾಗು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಮೈಸೂರಿನಲ್ಲಿ ಇಂಗ್ಲಿಷ್ ಭಾಷಾ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

More About Author