Poem

ಓಟದ ಯುಗಧರ್ಮ 

ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಎನ್. ಎಸ್. ಶ್ರೀಧರಮೂರ್ತಿ ಅವರು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ‘ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ’ ಅವರ ಪ್ರಮುಖ ಕೃತಿಗಳು. ಅವರ ‘ಓಟದ ಯುಗಧರ್ಮ’ ಕವಿತೆ ಇಲ್ಲಿದೆ.

 

ರಾಹುಲ್ ಎಂಬ ಹುಡುಗ
ಪುಟಿದೆದೆದ್ದು ಬಂದ ಚೆಂಡನ್ನು
ತದೇಕ ಚಿತ್ತದಿಂದ ಕಾದು-
ಅದಕ್ಕೆ ಸಲ್ಲಿಸ ಬೇಕಾದ ಗೌರವ ಸಲ್ಲಿಸುತ್ತಿದ್ದ
ಈ ರಾಹುಲ್ ಎಂಬ ಹುಡುಗ
ಈಗ ಬ್ಯಾಟ್ ಬೀಸಿ ರನ್‍ನ ಹೊಳೆ
ಹರಿಸುವ ಹಬ್ಬಕ್ಕೆ ದೂಡಲ್ಪಟ್ಟಿದ್ದಾನೆ.
ಒಂದೊಂದೇ ಇಟ್ಟಿಗೆಯ ಕಟ್ಟಿ
ಮಹಲನ್ನು ಕಟ್ಟುವ ಕಲೆಯಲ್ಲಿ
ಪರಿಣಿತನಾದವನಿಗೀಗ
ಗಾಳಿ ಗೋಪುರ ಕಟ್ಟುವ ಕಾಯಕ.

ಇರುವುದೇ ಇಪ್ಪತ್ತು-
ಕೊಂಚ ಆಯ ತಪ್ಪಿದರೂ ಅಪತ್ತು
ಸುಳಿಯ ಸೆಳೆತದ ನಡುವೆ
ಹುಡುಗ ಧ್ಯಾನಿಸುವುದಾದರೂ ಹೇಗೆ
ಬೀಸುವುದೇ ಅಭ್ಯಾಸವಾಗಿ
ಧ್ಯಾನ ಮರೆತಾಗ-
ಬಿಳಿಚೆಂಡು ಮೇನೆಕೆಯಾಗಿ ಕಾಡಿದ ಇತಿಹಾಸವೂ ಇದೆ.
ಅದಕ್ಕಾಗಿ ಹುಡುಗನನ್ನು ಹೊರ ದಬ್ಬಲಾದ ಪ್ರಸಂಗವೂ
ಪುಟ ತಿರುಗಿಸಿ ನೋಡಿದರೆ ಸಿಕ್ಕುತ್ತದೆ.

ಮತ್ತೆ ಹಗ್ಗ ಜಗ್ಗಾಟದಲ್ಲಿ ಗೆದ್ದಿದ್ದಾನೆ ಹುಡುಗ
ನಾಯಕನಾಗಿ ಮುನ್ನೆಡೆಸಿದ್ದಾನೆ ಹಡಗ.
ಬೇಡ ಎಂದವರಿಗೂ ಬೇಕು ಎನ್ನಿಸಿದ್ದಾನೆ
ಮತ್ತೆ ಅಂಕದ ಪರದೆ ಮೇಲೇಳುತ್ತಿದೆ.

ಆದರೂ
ಈ ಓಟದ ಬದುಕು
ಎಷ್ಟೊಂದು ರಾಹುಲನಂತಹ
ಧ್ಯಾನಸ್ಥ ಮನಸ್ಸುಗಳನ್ನು ಬಲಿ ಕೇಳುತ್ತದೆ?
ಕೊಂಚ ನಿಂತು ಯೋಚಿಸಲು ನಮಗೂ ಬಿಡುವಿಲ್ಲ
ಏಕೆಂದರೆ
ಓಟವೇ ಈಗ ಯುಗಧರ್ಮ!

ಕಲಾಕೃತಿ : ಎಸ್. ವಿ. ಹೂಗಾರ್‌

 

ಎನ್.ಎಸ್. ಶ್ರೀಧರಮೂರ್ತಿ

ಎನ್.ಎಸ್.ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು  'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ.

‘ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ’ ಅವರ ಪ್ರಮುಖ ಕೃತಿಗಳು. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ಅಧ್ಯಯನ' ಇವರ ಸಂಶೋಧನಾ ಕೃತಿ. ವಿವಿಧ ವಾಹಿನಿಗಳ ಮೂಲಕ, ಬಾನುಲಿ ನಿಲಯಗಳ ಮೂಲಕ ಚಿತ್ರಗೀತೆಗಳನ್ನು ಕುರಿತು ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ನೂರಕ್ಕೂ  ಹೆಚ್ಚು ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿರುವ ಇವರಿಗೆ ಆರ್.ಎನ್.ಆರ್ ಪುರಸ್ಕಾರ, ಸುವರ್ಣ ಕರ್ನಾಟಕ ಪುರಸ್ಕಾರಗಳೂ ಸೇರಿದಂತೆ ಹಲವು ಗೌರವಗಳು ಲಭಿಸಿವೆ. 

More About Author