Poem

ಪಾಪದ ಮೀನಿನಂಥ ಅಮ್ಮ

Charles Bukowski ಯ
'A smile to remember'
ಪದ್ಯದ ಅನುವಾದದ ಪ್ರಯತ್ನ...
***
ನಮ್ಮ ಮನೆಯ
ದೊಡ್ಡ ಕಿಟಕಿಗೆ ಅಡ್ಡಲಾಗಿದ್ದ
ನೇರಳೆ ಪರದೆಯ ಸಮೀಪವಿದ್ದ
ಮೇಜಿನ ಮೇಲಿಟ್ಟಿದ್ದ ಬೋಗುಣಿಯಲ್ಲಿ
ಗೋಲ್ಡ್ ಫಿಷ್ ಸದಾ
ಸುತ್ತು ಹೊಡೆಯುತ್ತಲೇ ಇರುತ್ತಿದ್ದವು
ನನ್ನ ಅಮ್ಮ, ಪಾಪದ ಮೀನಿನಂಥವಳು,
ಸದಾ ಹಸನ್ಮುಖಿ,
ಖುಷಿಯಲ್ಲಿರುವಂತೆ ತೋರಿಸಿಕೊಳ್ಳಲು
ಬಯಸುವವಳು, ಯಾವಾಗಲೂ ಹೇಳುತ್ತಿದ್ದಳು
'ಹೆನ್ರಿ, ಖುಷಿಯಾಗಿರು'.
ಅವಳು ಹೇಳಿದ್ದು ಸರಿಯೇ ಇತ್ತು:
ಸಂತೋಷದಿಂದಿರಲು ಸಾಧ್ಯವಾದರೆ
ಹಾಗಿರುವುದೇ ಒಳ್ಳೆಯದು.

ಆದರೆ ನನ್ನಪ್ಪ ವಾರಕ್ಕೆರಡು ಮೂರು ಬಾರಿ
ಅವಳನ್ನು ಹೊಡೆಯುತ್ತಿದ್ದ,
ತನ್ನ ಆರಡಿ ಎರಡಿಂಚಿನ
ದೇಹದುದ್ದಕ್ಕೂ ರೊಚ್ಚಿಗೆದ್ದು...
ಏಕೆಂದರೆ ಅವನೊಳಗೆ ದಾಳಿ ನಡೆಸುತ್ತಿದ್ದುದನ್ನು ಸೋಲಿಸುವುದು ಅವನಿಗೆ ಅಸಾಧ್ಯವಾಗಿತ್ತು
ನನ್ನ ಅಮ್ಮ, ವಾರಕ್ಕೆ ಎರಡು ಮೂರು ಬಾರಿ ಹೊಡೆಸಿಕೊಳ್ಳುತ್ತಲೂ
ಸಂತೋಷದಿಂದಿರಲು ಬಯಸುವವಳು, ನನಗೆ ಸಂತೋಷದಿಂದಿರಲು ಹೇಳುತ್ತಿದ್ದಳು:
'ಹೆನ್ರಿ, ನಗು!
ನೀನೇಕೆ ನಗುವುದಿಲ್ಲ?'
ಹಾಗೆನ್ನುತ್ತಲೇ ತನ್ನ ಮುಖದಲ್ಲಿ ನಗು ತಂದುಕೊಳ್ಳುತ್ತ ನಗುವುದು ಹೇಗೆಂದು ತೋರಿಸಲೆತ್ನಿಸುತ್ತಿದ್ದಳು.
ಅದು ನಾನು ಇಡಿ ಭೂಮಿಯಲ್ಲಿ ಕಂಡ
ಅತ್ಯಂತ ದುಃಖದ ನಗುವಾಗಿತ್ತು...

ಒಂದು ದಿನ,
ಎಲ್ಲ ಗೋಲ್ಡ್ ಫಿಷ್‌ಗಳೂ ತೀರಿಕೊಂಡವು,
ಐದೂ ಮೀನುಗಳು,
ನೀರಿನ ಮೇಲೆ ಪಾರ್ಶ್ವಕ್ಕೆ ಹೊರಳಿ ತೇಲಿದವು, ಅವುಗಳ ಮೇಲ್ಭಾಗದ ಕಣ್ಣುಗಳೆಲ್ಲ
ಇನ್ನೂ ತೆರೆದೇ ಇದ್ದವು
ಅಪ್ಪ ಮನೆಗೆ ಬಂದವನೇ ಅವುಗಳನ್ನೆತ್ತಿ
ಅಡುಗೆಮನೆಯ ನೆಲದ ಮೇಲೆಸೆದ,
ಬೆಕ್ಕುಗಳಿಗೆ ಆಹಾರವಾಗಿ.
ನಾವದನ್ನೇ ನೋಡಿದೆವು,
ಅಮ್ಮ ನಗುತ್ತಿದ್ದಳು...

- ಭಾರತಿ ಬಿ.ವಿ

ಭಾರತಿ ಬಿ ವಿ

ಭಾರತಿ ಬಿ ವಿ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ. 

ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು 'ಸಾಸಿವೆ ತಂದವಳು', 'ಮಿಸಳ್ ಭಾಜಿ', 'ಕಿಚನ್‌ ಕವಿತೆಗಳು', 'ಜಸ್ಟ್‌ ಮಾತ್‌ ಮಾತಲ್ಲಿ', 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ', 'ಎಲ್ಲಿಂದಲೋ ಬಂದವರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಸಾಸಿವೆ ತಂದವಳು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ ಇಂದಿರಾ ಪ್ರಶಸ್ತಿ ಹಾಗೂ 'ಮಿಸಾಳ್ ಬಾಜಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.

More About Author