Poem

ಪದಗಳು ಪಾದಗಳಾಗಿ

ಬರೀ ಎರಡು ಪದಗಳು
ಕರ್ತೃ ಕರ್ಮ ಕಳೆದ
ಸರಪಳಿಯಂಥ ಹುರಿ ಪದಗಳು
ಅರೆಗಾಂವಿನಲಿ ಕುದ್ದ ರಾಳದಂತಹ ಪದಗಳು

ಬರೀ ಎರಡು ಪದಗಳು
ನಾನೆಂಬ ಹೆಮ್ಮೆಯ ಪದರ ಪದರವ
ಪರಪರ ಸುಲಿದು ಚುರುಗಟ್ಟಿಸಿತು
ಹೊಟ್ಟು ಕಳಚಿತು ಹೆಣ್ತನದ ಮದ

ಚಡಪಡಿಕೆ ...ಬಯಲಲಿ ಬೆತ್ತಾಲದಂತೆ
ಚಡಪಡಿಕೆ..ಸೂಳೆಗೆಸೆದ ಸೆಳ್ಳೆ ಬೆನ್ನಹುರಿ ಸೀಳಿ
ಚಡಪಡಿಕೆ .. ಅಡ್ಡಡ್ಡ ಉದ್ದುದ್ದ ನೆತ್ತರೊಕ್ಕಿದಂತೆ
ಚಡಪಡಿಕೆಯ ಈ ದರ್ದಿನಲ್ಲೇ

ಅಯಾಜಿತ್ ಮೂಡುತ್ತಾರೆ ಇದಿರು
ಬಾಳೆಕಾಯಿ ಗಂಟಿನಲಿ ಉಡಿ ಸಿಗಿಸಿ
ಬಾಳುವೆಗೈದ ಅವ್ವಂದಿರು
ನೆನಪು.. ಅವರ ಗಂಟಲಲಿ ಗೊಳಗಾಡುತ್ತಿದ್ದ
ಉಪ್ಪುನೀರು ಗಂಜಿ ಬಟ್ಟಲಲಿ ಕಲಸಿ
ನನ್ನ ಹೊಟ್ಟೆಗಿಳಿದಿತ್ತು

ದದ್ದರಿಸಿವೆ ಕಣ್ಣೆವೆ, ಆಚೆ ತೂಗುತಿದೆ ಹಣತೆ
ನಾನೇ ಕೈಮುಟ್ಟಿ ಹೊಸೆದ ಬತ್ತಿ
ತಟಕು ಎಣ್ಣೆ ಚೀಪಿ ಬೆಳಗುತ್ತಿದೆ
ಹಸುಗೂಸಿನಂತೆ ತುಡುರು ಗಾಳಿಯ ಹಂಗಿಲ್ಲದೆ
ಎಷ್ಟುದ್ದ ನಿಲುಕಿಯೇನೆಂಬ ಶಂಕೆಯಿಲ್ಲದೆ

ಶಿವೆಯೇ, ಇನ್ನೂ ಎಷ್ಟು ತರಬೇತಾಗಬೇಕು?
ಆತ್ಮಲಿಂಗವ ಮುಟ್ಟುವ ತಾಲೀಮಿಗೆ
ಚೂರು ಉಗುರಾಡಿದರೂ
ಪಾಣಿಪೀಠವೆಲ್ಲ ರಾಮಾರಗುತವಾಡಿ
ಊರ ಜಾತ್ರೆಯೂ ನಂದಿ
ಓಹ್, ಯಾಕೆ ಬೇಕಾ ಉಸಾಬರಿ?

-ವಿನಯಾ ಒಕ್ಕುಂದ

ವಿನಯಾ ಒಕ್ಕುಂದ

ವಿನಯಾ- ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ, ಕುಮಟಾ ತಾಲೂಕಿನ ನಾಡುಮಾಸ್ಕೇರಿಯಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ 1990ರಲ್ಲಿ ಕನ್ನಡ ಎಂ.ಎ, 1992ರಲ್ಲಿ ಎಂ.ಫಿಲ್. ಹಾಗೂ 1996ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದು, ಸವಣೂರು, ನರಗುಂದದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಧ್ಯ ಧಾರವಾಡ ಜಿಲ್ಲೆಯ ಅಳ್ಳಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ವಿನಯಾ ಅವರ ಕವನ ಸಂಕಲನಗಳು: ಬಾಯಾರಿಕೆ, ನೂರು ಗೋರಿಯ ದೀಪ, ಹಸಬಿ, ಇನ್ನೂ ಕಥಾ ಸಂಕಲನಗಳು: ಊರ ಒಳಗಣ ಬಯಲು, ಉರಿ.

ಸಾಹಿತ್ಯ ಕ್ಷೇತ್ರದ ಇವರ ಸಾಧನೆಗಾಗಿ ಪು.ತಿ.ನ. ಕಾವ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕೆಡಮಿ ಪುಸ್ತಕ ಬಹುಮಾನ, ಸಾರಂಗಮಠ ದತ್ತಿ ಬಹುಮಾನ, ರತ್ನಮ್ಮ ಹೆಗ್ಗಡೆ ದತ್ತಿ ಪ್ರಶಸ್ತಿ, ಎಚ್. ವಿ. ಸಾವಿತ್ರಮ್ಮ ದತ್ತಿ ಬಹುಮಾನ, ಅಂಡಾಳ್ ಸನ್ಮಾನ್, ಛಂದ ಪುಸ್ತಕ ಬಹುಮಾನ, ಲಂಕೇಶ್ ಕಥಾ ಬಹುಮಾನ, ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ ಬಹುಮಾನಗಳು, ಕ್ರೈಸ್ತ ಕಾಲೇಜು ಕನ್ನಡ ಸಂಘದ ಬೇಂದ್ರೆ ಸತಿ ಕಾವ್ಯ ಬಹುಮಾನ, ಸಕಾಲಿಕ ಕಾವ್ಯ, ಸಂಕ್ರಮಣ ಕಾವ್ಯ ಬಹುಮಾನ ಮುಂತಾದವು ಲಭಿಸಿವೆ.

More About Author