Story

ಪತ್ರೀಗೌಡ ಮತ್ತು ಬಾಸಿನ ನಾಯಿ

 

ಗಡಿಬಿಡಿಯಿಂದ ಓಡಿಬಂದು ನೀಲಿ ಬಿಳಿ ಬಣ್ಣದ ಮೂರಂತಸ್ತಿನ ಕಟ್ಟಡದೊಳಗೆ ಹೊಕ್ಕು ಕಾರ್ಡು ಸ್ವೈಪ್ ಮಾಡಿ ತನ್ನ ಹಾಜರಾತಿಯ ಮುದ್ರೆ ಒತ್ತಿ ಒಳಹೊಕ್ಕುವ ಮುನ್ನ ಆ ಪುಶ್ ಡೋರಿನ ಸ್ಪ್ರಿಂಗ್ ಬಾಗಿಲು ಬೆನ್ನ ಹಿಂದಕ್ಕೆ ಗುದ್ದಿಕೊಳ್ಳದಂತೆ ಜಾಗರೂಕನಾಗಿ ಪುಟುಕ್ಕನೆ ಮುಂದೋಡಿದರೂ ಒಂಬತ್ತು ಗಂಟೆ ಆಗೇ ಹೋಗಿರುವ ಪ್ರಜ್ಞೆಯ ಅರಿವಿನಲ್ಲಿ, ಅಲ್ಲಿ ತನ್ನ ಚೇಂಬರಿನಲ್ಲಿ ತನ್ನ ಉರಿಮೋರೆಯನ್ನು ಇನ್ನಷ್ಟು ಕಪ್ಪಗಾಗಿಸಿ ಕೂತಿರಬಹುದಾದ ಬಾಸ್‌ನ ನೆನಪು ಪತ್ರಿಗೆ.

ಒಂಬತ್ತಾಗಿ ಎರಡೇ ನಿಮಿಷ ಆಗಿದ್ದರೂ ತನ್ನ ದರಿದ್ರ ವಾಚಿನ ಎಡಗೈ ಮುಂದೆ ಚಾಚಿ "ವಾಟ್? ವಾಟೀಸ್ ಧಿಸ್.. ಇದು ಆಫೀಸಾ ಧರ್ಮಛತ್ರನಾ ಇಷ್ಟ ಬಂದಾಗ ಬರಕ್ಕೆ?" ಎನ್ನುವ ಆಶಿರ್ವಾದದ ಜೊತೆಗೆ ಕಳೆದ ವಾರದ ಅಕೌಂಟಿಂಗ್ ಟ್ಯಾಲಿಯಲ್ಲಿ ಈಜಾಡಿ ಹುಡುಕಿ ತೆಗೆದ ತನ್ನ ತಪ್ಪುಗಳ ಮೇಲೆ ಮಾರ್ಕರ್ ಪೆನ್ನು ತೀಡಿ " ಈ ಜನ್ಮದಲ್ಲೇ ಕೆಲಸ ಕಲಿತುಕೋಳೋ ಮನಸು ಮಾಡ್ರೀ...ಮುಂದಿನ ಜನ್ಮಕ್ಕೆ ಏನಾಗಿ ಹುಟ್ತೀರೋ ಯಾರಿಗ್ಗೊತ್ತು.." ಬೈಗುಳು ಅದರ ಹಿಂದೆ ವಕ್ರ ನಗೆ..ಎರಡೂ ಕಳೆದ ಎಂಟು ವರ್ಷಗಳಿಂದ ಉಂಡುಂಡು ದಡ್ಡು ಬಿದ್ದು ಹೋಗಿತ್ತು. ಅವನ ಆ ಮಾತು ಕಿವಿಗೆ ಬಿದ್ದಾಗಲೆಲ್ಲ ಬಾಸು ಈ ಕಾರ್ಪೊರೇಟ್ ಆಫೀಸಿಗೆ ಬರುವ ಮೊದಲು ಹನ್ನೆರಡು ವರ್ಷ ಸರಕಾರೀ ದಪ್ತರಿನಲ್ಲಿ ಹೊರಳಾಡಿ ಬಂದವ ಎನ್ನುವ ನೆನಪು! ಹಳೇ ಜನ್ಮದ ವಾಸನೆ, ಅಭ್ಯಾಸ ಹೋದೀತಾದರೂ ಎಲ್ಲಿ? ಎಲ್ಲೆಲ್ಲೋ ಈಜಿ ಬಂದು ಕೊನೆಗೆ ವೈಟ್ ಕಾಲರಿನಡಿಗೆ ತನ್ನ ಹೆಡ್ ಆಫ್ ದಿ ಸೆಕ್ಷನ್ ಕಾರ್ಡು ನೇತಾಡಿಸಿಕೊಂಡಿದ್ದೇ ಇವನ ಬದುಕಿನ ಪರಮೋಚ್ಚ ಸಾಧನೆ.‌

ಅವನೋ ಆಫೀಸಿಗೆ ಮೂರು ಮೈಲಿ ದೂರದ ಮನೆಯಲ್ಲಿದ್ದುಕೊಂಡು ಜುಮ್ಮಂತ ಕಾರಿನಲ್ಲಿ ಬಂದಿಳಿದು ಚೇಂಬರ್ ಹೊಕ್ಕು ಉಳಿದವರ ಮೇಲೆ ಸರ್ಪಗಾವಲಿಡ್ತಾನೆ. ತಾನು ಆರಕ್ಕೇ ಎದ್ದರೂ ತಮ್ಮ ಅವಳಿ ಜವಳಿಗಳ ನೂರು ಕಿರಿಚುಗಳ ನಡುವೆ ಒದ್ದಾಡುತ್ತ ತನ್ನ ಕೋಮಲೆ ಮಾಡಿಕೊಡುವ ಒಂದಿಷ್ಟು ಕೂಳು, -ಅದೂ ಅವಳ ಆರೋಗ್ಯ ಮೂಡು ಎರಡನ್ನೂ ಅವಲಂಬಿಸಿರುತ್ತದೆ- ಗಬಗಬ ತಿಂದು ಮೆಟ್ರೋ ಹಿಡಿದು ಕೆಳಗಿಳಿದು ಅರ್ಧ ತಾಸು ಕಳೆದರೂ ಬಾರದ ನೂರಾಮೂರು ನಂಬರಿನ ಬಸ್ಸನ್ನು ಇನ್ನಿಲ್ಲದಂತೆ ಶಪಿಸಿ ಪಕ್ಕಕ್ಕೆ ಮುಖ ತಿರುಗಿಸಿ ಉಗುಳುತ್ತಿದ್ದಾಗ ಸೆಲೀನಾ ಅದೇ ಬಸ್ಸು ಏರಲು ಧಾವಿಸಿ ಬರ್ತಾಳೆ. ತನಗೆ ಬೀಳುವಷ್ಟು ಬೈಗಳು ಇವಳಿಗೆ ಯಾಕೆ ಬೀಳುವುದಿಲ್ಲ ಎಂಬ ಕಿರಿಕಿರಿ ಆಗ ಕಾಡುತ್ತದೆ.

ಅಂದಾನಲ್ಲೂರು ಪತ್ರಿಬೀಡಿಗೌಡ ಎನ್ನುವ ತನ್ನ ಹೆಸರಿನ ಚಂದವೂ ಇದಕ್ಕೆ ಕಾರಣ ಇರಬಹುದೇ? ಅವಳು ಸೆಲೀನಾ ತಾನು ಪತ್ರಿ...ಹಾಹಾಹಾ..ತಾಳಮೇಳ ಉಂಟೆ?
ಅಲ್ಲಿಗೆ ಕುದಿಯುವ ತಳಮಳಕ್ಕೆ ಯಾವ ತಣ್ಣೀರು ಹಾಕುವುದೋ ಗೊತ್ತಾಗದೆ ಸಾಹೇಬನ ಕ್ಯಾಬಿನ್ನಿನಿಂದ ಹೊರಬಿದ್ದು ತನ್ನ ಕಂಪ್ಯೂಟರ್ ನ ಕಿವಿ ಹಿಂಡಿ ಅದರ ಆಂಗಲ್ ಸರಿಪಡಿಸಿಕೊಳ್ಳುತ್ತಿರುವಾಗ ಒಂದು ಕುಹಕದ ನಗೆ ಸೆಲೀನಾದು, 'ಆಯ್ತೇ ಇವತ್ತಿನ ಪೂಜೆ?'
'ನಿನಗೆ ಸಮಾಧಾನವಾ?' ಎನ್ನುವ ಕಹಿನೋಟವನ್ನವಳೆಡೆ ಕಳಿಸುವಾಗ ಅವಳ ಗುಳ್ಳೆಗಣ್ಣುಗಳು ನಕ್ಕ ಹಾಗನಿಸಿ‌ ಅವಳು ಮೈ ಮುರಿದದ್ದು ಬಾಸಿನ ನಾಯಿಯ ನೆನಪು ತರಿಸಿ...ಹಾ, ಅದು ಈಗ ಇರುವ ಹೊಸ ನಾಯಿ‌.
ಈ ಬಾಸಿನ ಮನೆಯಲ್ಲಿ ಮೊದಲೊಂದು ನಾಯಿ ಇತ್ತು, ಪೊಮೇರಿಯನ್ ಬಿಳಿಬಿಳೀ ಮುದ್ದು ಮುದ್ದು.ಮೊದಲನೇ ದಿನ ತನ್ನ ಕಂಡಾಗಲೇ ಬಾಲ ಅಲ್ಲಾಡಿಸಿ, ಪ್ರೀತಿ ತೋರಿ ಫ್ರೆಂಡ್ ಆಗಿತ್ತು.ಬಾಸು ಕರೆದ ದಿನ ತಾನಲ್ಲಿಗೆ ಹೋದಾಗಲೆಲ್ಲ ಅದೇ..ಗೇಟು ತೆರೆದು ಒಳಗೆ ಹೊಕ್ಕಾಕ್ಷಣ ಬಿಳಿ ಬಿಳೀ ಬಾಲವನ್ನು ಕಿತ್ತು ಹೋಗುವಷ್ಟು ಜೋರಿನಲ್ಲಿ ಅಲ್ಲಾಡಿಸಿ ಮುಂಗಾಲುಗಳನ್ನೆತ್ತಿ ತನ್ನ ತೊಡೆಗಿಟ್ಟೇ ಖರೆ.. ಬಿಸ್ಕತ್ತು ಇರ್ತಿತ್ತಲ್ಲ ತನ್ನ ಕೈಯಲ್ಲಿ? ಆ ನಾಲ್ಕು ಬಿಸ್ಕತ್ತುಗಳೂ ಮುಗಿಯುವ ವರೆಗೆ ಬಾಲದ ಚಾಮರ ಬೀಸಿ ಬೀಸಿ.. ಮೂತಿ ಕೊಂಕಿಸಿ ಕಣ್ಣಲ್ಲಿ ಪ್ರೀತಿ ಸುರಿಸಿ ಎಷ್ಟು ಮುದ್ದು? ಅಯ್ಯೋ ಒಂದಿನ ಇದ್ದಕ್ಕಿದ್ದಂತೆ ಸತ್ತೇ ಹೋಯ್ತು. ಛೇ,ಮತ್ತೆ ಬಾಸಿನ ಮನೆಗೆ ಹೋದರೆ ಮನಸ್ಸು ಭಣಭಣ.. ಅದೇ ಇರಬೇಕಿತ್ತು ಇನ್ನೂ.
ಆದರೆ ಅ ಇಚ್ಛೆ ಪೂರ್ಣ ಆಗದೆ ಮತ್ತೊಂದು ಬಾರಿ ಹೋದಾಗ- ಹಾ ಬಾಸ್ ಗೆ ಆಗೀಗ ತನ್ನ ಕೆಲಸದ ಪ್ರಿಂಟೆಡ್ ಶೀಟುಗಳನ್ನು ಮನೆಗೇ ಹೊತ್ತೊಯ್ಯುವ ಕಾರ್ಯ ಮಾಡಬೇಕಾಗಿದ್ದದ್ದು ಒಂದು ಅನಿವಾರ್ಯತೆ, ಯಾಕೆ ಎನ್ನುವ ಹಾಗಿಲ್ಲ. ಬಾಸಿನ ಮರ್ಜಿ! ತನಗೆ ನೌಕರಿಯ ಅಗತ್ಯ ಅಷ್ಟೇ.
ಒಮ್ಮೆ ಹೀಗೆ ಅವನ ಗೇಟು ತೆರೆದು ಒಳಗೆ ಕಾಲಿಟ್ಟಾಗ ಧರಾಕ್ಕ್ ಎಗರಿ ಬಂದಿತ್ತು ಅವನ ಹೊಸಾ ನಾಯಿ. ಕರೀ ಮುಸುಡಿಯ ದ್ರಾಬೆಯಂಥದು...ಆಳೆತ್ತರದ ಅದರ ಶರೀರಕ್ಕೆ ಭೂತದಂಥ ಧ್ವನಿ. ಮೈ ಮೇಲೆ ಗುಮ್ಮ ಹೊಕ್ಕಂತೆ ಎಗರಾಡಿ ಸರಪಳಿ ಕಿತ್ತಕೊಳ್ಳುವ ಆವೇಶ ಭರಿಸುತ್ತ ಕೆಕ್ಕರಿಸಿ ಕಚ್ಚಲು ನೆಗೆಯುವ ಅದನ್ನು ಕಟ್ಟಿ ಹಾಕಿರುತ್ತಾರೆಂದೇ ತಾನಿನ್ನೂ ಬದುಕಿರುವುದು ಇಲ್ಲವಾದರೆ ಎಂದೋ ತನ್ನ ಇತಿಶ್ರೀ ಆಗಿಹೋಗಿರೋದು.

ಅದು ಹೋಗಲಿ ಈ ಬಾಸು ತನ್ನ ಮೇಲೆ ಯಾಕಿಷ್ಟು ಗುರಕಾಯಿಸುತಾನೋ? ದೂರ್ವಾಸನ ಹಾಗೆ ಎಗರೆಗರಿ- ನಾನು ನಿಮಗಿಂತ ಸುಪೀರಿಯರ್ ಎನ್ನುವ ಛಾಪನ್ನು ಕೈ ಕೆಳಗೆ ದುಡಿಯುವ ತಮ್ಮಂಥ ಬಡಪಾಯಿಗಳ ಮೇಲೆ ಬಿಂಬಿಸುವ ಭರದಲ್ಲಿ ನಾಲಿಗೆಗೆ ಒಂದು ಸ್ಪೀಡ್ ಬ್ರೆಕರ್ ಇಡಬೇಕೆನ್ನುವುದನ್ನು ಮರೆತುಬಿಡ್ತಾನೆ. ಅದರಲ್ಲೂ ತಾನು... ಪತ್ರಿಬೀಡೀಗೌಡನೆಂಬ ಮೂವತ್ತು ವರ್ಷದ ಮನುಷ್ಯನ ಮೇಲೆ ಬಾಸಿನ ವಿಶೇಷ ಜ್ವಾಲಾಮುಖಿ ಯಾವಾಗೆಂದರಾಗ ಆಸ್ಫೋಟಿಸುವುದಕ್ಕೆ ವಿಶೇಷ ಕಾರಣ ಏನಾದರೂ ಇದ್ದೀತಾ?

ಇದು ಖಾಸಗಿ ಕಂಪನಿ, ಈ ಬಾಸು ಕೂಡ ಇಲ್ಲೊಬ್ಬ ಅಷ್ಟೇ, ಆದರೂ ಆಫೀಸ್ ಸೂಪರಿಂಟೆಂಡೆಂಟ್ ಎನ್ನುವ ಪದಕವನ್ನು ಕೊರಳಿಗೆ ತೂಗು ಹಾಕಿಕೊಂಡು ತಾನೇ ತನ್ನಪ್ಪನ ಮನೆಯಿಂದ ಎಲ್ಲರಿಗೂ ಜಾಬು ಕೊಟ್ಟ ಠೀವಿಯಲ್ಲಿ "ಐ ಡೋಂಟ್ ಟಾಲರೇಟ್ ಇಂಡಿಸಿಪ್ಲಿನ್..ಐ ಡೋಂಟ್ ಟಾಲರೇಟ್ ಲೇಟ್ ಎಂಟರಿಂಗ್ " ಅನ್ನತ್ತ ತನ್ನಿಂದ ಮಾತ್ರ ಕಂಪನಿಯ ಉದ್ಧಾರ ಎನ್ನುವ ಭ್ರಮೆಯಲ್ಲಿ ಇಲ್ಲಿರುವ ಎಲ್ಲರ ಅದರಲ್ಲೂ ವಿಶೇಷವಾಗಿ ತನ್ನ ಪ್ರಾಣ ಹಿಂಡುವುದಕ್ಕೆ ಬೇರೊಂದು ಕಾರಣ ಇರಲೇಬೇಕು. ಒಂದೊಂದು ಸಲವೂ ತನ್ನ ಕೆಲಸದ ಶೀಟುಗಳಲ್ಲಿ ಸಾಲು ಸಾಲು ತಪ್ಪು ಕಾಣಿಸಿ " ಇದೇನ್ರೀ? ಯಾವ ಸಾಫ್ಟ್‌ವೇರ್ ರೀ ನೀವು ಕಲಿತಿದ್ದು? ಇಲ್ಲಿ ಕಂಡ್ತಾ ನೋಡಿ ಇದನ್ನು ಇಷ್ಟಕ್ಕೇ ನಿಲ್ಸಿದ್ದೀರಲ್ಲ ಉಳಿದದ್ದನ್ನ ನಿಮ್ಮಪ್ಪ ಬಂದು ಆಡ್ ಮಾಡ್ತಾನೇನ್ರೀ? " ಅಂತಲೋ‌ ಅಥವಾ "ಇಷ್ಟು ಇಂಗ್ಲೀಷೂ ಬರಲ್ಲವಾ ನಿಮಗೇ..ಪಂಕ್ಚುವೇಶನ್ ಅನ್ನೋ ಪದವಾದ್ರೂ ಕೇಳಿದ್ದೀರಾ?" ಎಂದೋ‌ " ಮೂರು ದಿನ ಆಯ್ತಲ್ರೀ ನಿಮಗೆ ಅಂಬ್ರೋಲಿ ಫೈಲು ಕೊಟ್ಟು... ಇನ್ನೂ ಆಗಿಲ್ಲ ಅಂದ್ರೆ ಇಲ್ಲೇನು ನಿದ್ದೆ ಹೊಡಿಯಕ್ ಬರ್ತೀರಾ?...ಥೋ..ನಿಮ್ಮಂಥೋರೆಲ್ಲ ಯಾಕ್ರೀ ನಮ್ಮ ಪ್ರಾಣ ತಿನ್ನೋಕೆ ನೌಕ್ರಿಗೆ ಬರ್ತೀರ್ರೀ..."

ಇವನದು ಬಾಯೋ ಗಟಾರವೋ‌ಅನಿಸಿಬಿಡುವಷ್ಟು ಅಸಹ್ಯ ಉಕ್ಕಿ ಬರುತ್ತದೆ ತನಗೆ.ಎಷ್ಟೇ ನೀಟಾಗಿ, ಸರಿಯಾಗಿ ಕಣ್ಣಲ್ಲಿ ಕಣ್ಣಿಟ್ಟು ಮಾಡಿದ ಕೆಲಸಕ್ಕೂ ಎಲ್ಲೋ ಒಂದು ಕೊಂಕು ಹುಡುಕಿ ಜನ್ಮ ಜಾಲಾಡ್ತಾನೆ ರಾಕ್ಷಸ."ಅಲ್ರೀ ನಿಮಗೆ ಪಾಠ ಹೇಳಿಕೊಟ್ಟ ‌ಮೇಷ್ಟ್ರನ್ನ ಹಗ್ಗದಿಂದ ಕಟ್ಹಾಕಿ ಬಾರಿಸ್ಬೇಕು..ಥೋ.." ಒಂದೇ ಎರಡೇ ಕೆಂಡ ಕಾರುವ ಬಗೆಗಳು? ಇಲ್ಲ, ಇವನು ತನ್ನನ್ನು ಇಷ್ಟು ಪ್ರಮಾಣದಲ್ಲಿ ದ್ವೇಷಿಸುವುಕ್ಕೆ ಬೇರೇನೋ ಕಾರಣ ಇರಬೇಕು.
ಬಾಸಿನ ರೋಷ ಬಗೆಹರಿಯದ ಸಮಸ್ಯೆಯಾಗಿ ಪತ್ರಿಬೀಡೀಗೌಡನ ತಲೆ ಹಗಲಿರುಳು ಧಿಂ ಅನ್ನುತ್ತಲಿದ್ದ ಹಾಗೆ ಇನ್ನಿದರ ಮೂಲಕ್ಕೇ ಇಳಿದು ಆ ರಹಸ್ಯದ ಬುಡವನ್ನು ಕೆತ್ತಿ ತೆಗೆಯಬೇಕೆಂದು ಅದಮ್ಯ ಕುತೂಹಲ ಹುಟ್ಟಿ ಕಾಡತೊಡಗಿತ್ತು. ಏನಿರಬಹುದು? ಏನು? ಏನು?
ಕೈಯೊಳಗಿನ ಫೋನು ಕಿರಿಗುಟ್ಟಿದಾಗ ಬೆದರುತ್ತಲೇ ಆನ್ ಮಾಡಿ- ಫೋನಿನಲ್ಲಿ ಮಾತಾಡೋದು ನಿಷೇಧಿಸಿ ಆಜ್ಞೆ ಆಗಲೇ ಮಾಡಿಯಾಗಿದೆ ಬಾಸು- " ಕೆಲಸದ ಟೈಮ್ ಮನೆಗಿನೆ ಅಂತ ಪರ್ಸನಲ್ ಫೋನ್ ನಲ್ಲಿ ಮುಳುಗಿದ್ರೆ ಟಾಲರೇಟ್ ಮಾಡಲ್ಲ.." ಈ ಟಾಲರೇಟ್ ಅನ್ನುವುದು ಇವನ ಖಾಸಗೀ ಪ್ರೀತಿಯ ಶಬ್ದ.. ಇವನನ್ನು ತಾವೆಲ್ಲ‌ ಟಾಲರೇಟ್ ಮಾಡ್ಲಿಕ್ಕೆ ನೌಕರಿ ಮಾತ್ರ ಕಾರಣ.. ಅಯ್ಯೋ ಈ ಹೀನ ಬದುಕೇ..

ಸೆಲೀನಾ ನಕ್ಕಳು, " ಮಾತಾಡಿ ಮಾತಾಡಿ..ಬಾಸು ಆಗ್ಲೇ ಎಲ್ಲೋ ಹೋದ ಹಾಗಾಯ್ತು" ಉಪಕಾರ ಮಾಡುವವಳ ಹಾಗೆ ಕಿಸಕ್ಕಂದು" ಅಲ್ರೀ ಪತ್ರೀ ಏನು ತಲೆ ಕೆಡಿಸಿಕೊಂಡಿದ್ದೀರಿ, ಅಂಥಾ ಪ್ರಾಬ್ಲೆಮ್ ಏನಾದ್ರೂ ಇದ್ದರೆ ಹೇಳೀಪಾ..ನಾವೂ ಏನಾದ್ರೂ ಸಹಾಯ ಮಾಡೋಣ ಬಗೆ ಹರ್ಸೋಣ ಬಿಡಿ..." ಅವಳ ಕಪಾಳಕ್ಕೊಂದು ಬಾರಿಸುವ ಮನಸಾಯ್ತು. ತಾನೆಷ್ಟು ಝಾಡಿಸಿಕೊಂಡ್ರೂ
ತನ್ನ ಉಬ್ಬುಗಣ್ಣು ಕಿಸಿದುಕೊಂಡೇ ತಿಂದು ಹಾಕುವ ಹಾಗೆ ನೋಡುವ ಅದಳ ನೋಟದಲ್ಲಿ‌ ಬೇರೇನೋ ಇರುವ ವಾಸನೆ ತನಗೆ ಬಡಿಯುತ್ತಿರುವುದು ಸುಳ್ಳಲ್ಲ. ಕೆಲವು ಪ್ರಶ್ನೆಗಳಿಗೆ ಉತ್ತರ ಅಷ್ಟು ಕಷ್ಟವೇನಲ್ಲ, ಇವಳಿಗೆ ಮೂವತ್ತೈದು, ಮದುವೆ ಇಲ್ಲ.. ಮೂರು ವರ್ಷದ ಹಿಂದೆ ಸೆಬಾಸ್ಟಿನ್ ಅನ್ನೋ‌ ಅವಳ ಬಾಯ್ ಫ್ರೆಂಡಿನ ಜೊತೆಗಿನ ಅವಳ ಅಫೇರ್ ಆಫೀಸಿನ ಎಲ್ಲರ ಬಾಯೊಳಗೆ ಹಾದು ಹೋಗಿ ಕೊನೆಗೆ ಅವನು ಒಂದು ವಾಟ್ಸಾಪ್ ಮೆಸೇಜಿನಲ್ಲಿ ಇವಳಿಗೆ ಗುಡ್ ಬೈ ಹೇಳಿ ಆಗಿತ್ತು.‌ ತನ್ನ ಕೋಮಲೆ‌, ತನಗಿರೋ ಅವಳಿಜವಳಿ ಮಕ್ಕಳ ಸಂಸಾರ ಎಲ್ಲ ಗೊತ್ತಿದ್ದೂ ಕಣ್ಣುಗಳಲ್ಲಿ ಯಾವಾಗಲಾದರೊಮ್ಮೆ ಸೆಕ್ಸ್ ಪರವಾಗಿಲ್ಲ ಎನ್ನುವ‌ ಸಂದೇಶ ತೂರಲು ಕಾರಣವನ್ನು ಬಹಳ ದೀರ್ಘ ವಾಗಿ ಕೆದಕಬೇಕಿಲ್ಲ.

" ನೀವು ಸಿನಿಮ ಫೀಲ್ಡಿಗಿಳಿದಿದ್ದರೆ ಇರೋ ಹೀರೋಗಳನ್ನೆಲ್ಲ ಅತ್ಲಾಗ್ ಸರಿಸಿ ನಂಬರ್ ಒನ್ ಹೀರೋ ಆಗ್ತಿದ್ರಿ...ನನ್ನ ನಸೀಬು, ಹೋಗಿಲ್ಲ" ಅಂತ ನಕ್ಕು ತನ್ನನ್ನು ತೋಳಿನೊಳಗೆ ಬಿಗಿಯಾಗಿ ಎಳೆದುಕೊಳ್ಳುವ ಕೋಮಲೆ ಮೂಡು ಬಂದಾಗ ತನ್ನ ಆರಡಿ ಎತ್ತರ,ಕಡೆದ ಗ್ರೀಕ್ ಮೂರ್ತಿಯಂಥ ಹ್ಯಾಂಡ್ಸಮ್ ಗಂಡನನ್ನು‌ ಡೆಬೆನೇರ್ ಚಾಪ್ ಮುಂತಾಗಿ ವರ್ಣಿಸಿದ್ದೂ ಉಂಟು.
ಇರಬಹುದೇ? ಯಾರನ್ನು ಹೋಲ್ತೀನಿ ನಾನು? ರಿತಿಕ್ ರೋಶನ್? ಸಲ್ಮಾನ್? ...
ಇಲ್ಲ, ಅವರೆಲ್ಲ ಮುದಿಯಾದ್ರು.ತಾನೇ ಸುಂದರ.ಅನುಮಾನವೇ ಇಲ್ಲ. ಸೆಲೀನಾ ಅಷ್ಟೇ ಯಾಕೆ ಬಿಲ್ಲಿಂಗ್ ನ ಮೋಷಿ, ಡೆಲಿವರಿ ಸೆಕ್ಷನ್ನಿನ ಅರುಣಾ ಸಹ "ಛೇ ಅನ್ಯಾಯ, ನೀ ಮದುವೆ ಆಗೋಕ್ಮುಂಚೆ ನನಗೊಂದು ಮೆಸೇಜ್ ಹಾಕ್ಬಾರ್ದಿತ್ತಾ ...ಕಿಡ್ನಾಪ್ ಮಾಡಿಕೊಂಡಾದ್ರೂ ಹೋಗ್ತಿದ್ದೆ ನಿನ್ನ " ಅಂದು‌ ಬಿದ್ದು ಬಿದ್ದು ನಕ್ಕು ' ಪರವಾಗಿಲ್ಲ ಕೋಮಲೆ ನಿನ್ನ ಬಿಟ್ಟು ಹೋದ್ರೆ ಹೇಳು' ಅಂದು ಅಕ್ಕಪಕ್ಕದ ಗಂಡು ಡೆಸ್ಕುಗಳಿಗೆ ಒಂಥರಾ ಕೀಳರಿಮೆ ಹುಟ್ಟಿಸಿದ್ದೂ ಸುಳ್ಳಲ್ಲ.

ಇಷ್ಟಕ್ಕೇ ನಿಲ್ಲಲಿಲ್ಲ ಇದು, " ಅಯ್ಯೋ ನಿಮ್ಮ ಹೆಸರು ಹೀಗ್ಯಾಕಿದೇರೀ ಪತ್ರೀಗೌಡ್ರೇ.. ನಿಮ್ಮ ರೂಪಕ್ಕೆ ಹೊಂದಲ್ಲ ಬಿಡಿ ಚೆಚೆ..ಎಂಥದಾದ್ರೂ ಕುಮಾರನೋ, ದತ್ತ ಪಿತ್ತನೋ, ಖನ್ನನೋ ಇದ್ದಿದ್ರೆ ಸಖತ್ತಾಗಿರ್ತಿತ್ತು ಈಗೇನಂತೆ ಒಂದು ನೋಟರಿ ಅಫಿಡವಿಟ್ ಮಾಡಿಸ್ಕೊಂಡು ಹೊಸಾ ಹೆಸರು ತೊಗೊಂಡುಬಿಡಿ.. ಫಾರ್ ಎಕ್ಸಾಂಪಲ್ ಪಿ. ಬಿ ಗೌಡ್ ಅಂತ" ಸೆಲೀನಾ ಖಿಖ್ಖಿಖ್ಖಿ ನಗೆ ಉಉಕ್ಕಿಸಿ ಹೇಳಿ ಅದನ್ನೂ ತಾನು ಕಾಂಪ್ಲಿಮೆಂಟಾಗಿ ಸ್ವೀಕರಿಸಿ ಆಫೀಸಿನ ಹೆಣ್ಣುಗಳ ಮೆಚ್ಚುಗೆ ಗಂಡುಗಳ ಅಸೂಯೆ, ಈರ್ಷ್ಯೆ ಎಲ್ಲ ಒಳಗೊಂಡವನು.

ಅದೇಕೆ ತನ್ನಪ್ಪ ಅಮ್ಮನಿಗೆ ತನ್ನ ತಾತನ ಪೂರ್ಣ ಹೆಸರನ್ನೇ ಇಡುವ ಹುಕಿ ಬಂತೋ ದೇವರಿಗೆ ಗೊತ್ತು.ಹೋಗಲಿ ಕರೆಯುವುದಕ್ಕಾದರೂ ಒಂದು ಪೆಟ್ ನೇಮ್ ಇಡಬಾರದೇ, ಪತ್ರಿ ಪತ್ರಿ ಎಂದೇ ತನ್ನ ಕರೆದರೂ ಮೊದಲೆಲ್ಲ ತನಗೇನೂ ಮುಜುಗುರ ಆಗ್ತಿರಲಿಲ್ಲ. ತನ್ನ ಕಣ್ಣು, ಮೂಗು, ಗುಲಾಬಿ ಮಿಶ್ರಿತ ಬಿಳಿ ಬಣ್ಣ ಅಲೆಯಲೆಯಾದ ದಟ್ಟ ಕೂದಲು ಎಲ್ಲಾ ತನಗೆ ತುಂಬ ತುಂಬ ಪ್ರೀತಿಯವು. ಚೆಲುವ ಅಂದರೆ ಚೆಲುವ..
ಈ ಬಾಸಿಗೆ ತನ್ನ ಮೇಲೆ ಇಷ್ಟು ಈರ್ಷ್ಯೆ- ದ್ವೇಷ ಇರಲಿಕ್ಕೆ ತನ್ನ ಹ್ಯಾಂಡ್ಸಮ್ ರೂಪವೇ ಕಾರಣ. ಅದು ಖಚಿತವಾದಂತೆ ಒಳಗೊಳಗೇ ನಗು ಉಕ್ಕಿ ಬರ್ತಿತ್ತು. ಕಣ್ಣೆದುರು ಬಾಸಿನ ರೂಪ ತೇಲಿ ಬಂದು ಆಹಾ!! ಐದೂಕಾಲಡಿ ಎತ್ತರದ ದೇಹ, ಒಡಕು ತಂಬಿಗೆಯೊಂದನ್ನು ಕತ್ತಿನ ಮೇಲೆ ಕವುಚಿ ಹಾಕಿದಂತೆ ಕಾಣುವ ತಲೆಯಲ್ಲಿ‌ ಎಣಿಸಬಹುದಾದ ಹನ್ನೆರಡು ಕೂದಲು, ಸುಟ್ಟ ಹಪ್ಪಳದಂಥ ಮುಖದ ಚರ್ಮ, ಎರಡಿಂಚಿನ ನೆರಿಗೆಭರಿತ ಹಣೆಯಡಿಯ ಒಂದಿಂಚಿನ ಹೊಂಡದಲ್ಲಿ ಹೊರಳಾಡುವ ಎರಡು ಸೆಂಟಿಮೀಟರ್ ಕ್ಷೇತ್ರಫಲದ ಗುಲಗಂಜಿ ಕಣ್ಣುಗಳು, ಕಿವಿಗಳ ಮಧ್ಯದ ಸೇತುವೆ ಆಗಿರುವ ಬಾಯಿ, ದೊಣ್ಣೆ ಮೂಗು..ಎಲ್ಲಕ್ಕೂ ಕುಂದಣವಿಟ್ಟಂತೆ ಎಮ್ಮೆಯ ಚರ್ಮದ ಬೂದುಗಪ್ಪು ಬಣ್ಣ! ಒಂದೇ ಎರಡೇ ಅವನ ರೂಪಕ್ಕೆ ಕಾಂಟ್ರಿಬ್ಯೂಟ್ ಮಾಡಿದ ಸಂಗತಿಗಳು?
ಮತ್ತೆ ನಗೆ ನುಸುಳಿ ಬಂದಿತ್ತು, ಬಾಸಿಗಿರುವುದು ತನ್ನ ರೂಪ, ಫಿಸಿಕ್ ನಮೇಲಿರುವ ದ್ವೇಷ; ಅದರ ಹೊರತಾಗಿ ಇನ್ನಾವ ಕಾರಣವೂ ಇಲ್ಲ. ತಾನು ಮಾಡುವಷ್ಟು ಸಣ್ಣ ಪುಟ್ಟ ತಪ್ಪುಗಳನ್ನು ಕೆಲಸದಲ್ಲಿ ಎಲ್ಲರೂ ಮಾಡುತ್ತಾರೆ ಆದರೆ ಎಲ್ಲರ ಬದಲಾಗಿ ಇವನ ಜ್ವಾಲಾಮುಖಿ ಸ್ಫೋಟಿಸುವದು ತನ್ನ ಮೇಲೆ. ಇದು ಅವನ ರೂಪದ - ಅಲ್ಲ ಕುರೂಪದ-ಮೇಲಿರುವ ಅಸಮಾಧಾನ, ಅದರಿಂದಾಗಿ ಉಕ್ಕುವ ಕೋಪಕ್ಕೆ ಸಿಕ್ಕುವವ ತಾನು.

ಇವನ ಹೆಂಡತಿಯಾದರೂ ಹೇಗೆ ಇವನನ್ನು ಮದುವೆ ಆದಳೋ? ಯಕ್ಷಪ್ರಶ್ನೆ! ಅವಳು ಕಾಣಲಿಕ್ಕೆ ಚೆನ್ನಾಗೇ ಇದ್ದಾಳೆ, ಆಗೀಗ ಫೈಲು ಒಪ್ಪಿಸಲು ಅವನ ಮನೆಗೆ ಹೋದಾಗ ಒಳಗಿನ ಕಿಟಕಿಯಿಂದ ತನ್ನನ್ನೆ ದಿಟ್ಟಿಸಿ ನೋಡ್ತಿದ್ದ ಅವಳು ಕಂಡಳು..ಇದು ಬಾಸಿನ ಗಮನಕ್ಕೆ ಬಂತು.. ಅವಳ ಕಣ್ಣುಗಳಲ್ಲಿದ್ದ ಮೆಚ್ಚುಗೆ ಅವನ‌ ಎದೆ‌ಸೀಳಿದ್ದೀತು.ಇನ್ನೇನು?
ಹೆಣ್ಣುಗಳ ಮೆಚ್ಚುಗೆ ತನಗೆ ಅಪರೂಪ ಅಲ್ಲ. ಅದಕ್ಕೆ ಫೋನಿನಲ್ಲಿ ಬರುವ ಮೆಸೇಜುಗಳೇ‌ ಸಾಕ್ಷಿ..

ಈ ಬಾಸು ಬಂದು ಅದಾಗಲೇ ಐದು ವರ್ಷಗಳಾಗಿ ಹೋಗಿವೆ. ಶನಿ ಪಿಶಾಚಿ.. ಹೋಗಬಾರದೇ ಬೇರೊಂದು ಬ್ರಾಂಚಿಗೆ ಇವನು ಟ್ರಾನ್ಸ್‌ಫರ್ ತೊಗೊಂಡು?ಅನಿಸುತ್ತದೆ.. ಈ ಮೊದಲಿದ್ದ ಬಾಸು‌ ಇಂಥವನಾಗಿರಲೇ ಇಲ್ಲ. ಇವನಷ್ಟು‌ ಕುರೂಪಿಯಲ್ಲ, ಬೈಯುವುದು ಗೊತ್ತೇ ಇರಲಿಲ್ಲ.ಯಾಕಾದರೂ ಆ ಪುಣ್ಯಾತ್ಮ‌ ಹೋಗಿ‌ ಈ ಗೂಬೆ ವಕ್ಕರಿಸಿದನೋ?

ಇವನು ಬಂದ ಮೇಲೆಯೇ ಇದೆಲ್ಲ ಶುರು ಆಗಿರುವುದು.ಎಷ್ಟು ದಿನ ಇವನ ಕೈಯಲ್ಲಿ ಹೀಗೆ ಹೀನಾಮಾನ ಬೈಸಿಕೊಳ್ತಾ ಇರೋದು? ತಾನು ಚೆನ್ನಾಗಿರೋದು ಇವನು ಅಷ್ಟಾವಕ್ರನಾಗಿರೋದರಲ್ಲಿ‌ತನ್ನ ತಪ್ಪೇನಿದೆ?
ಇನ್ನು ತಡ್ಕೊಳ್ಳೋದೇ ಕಷ್ಟವಾಗ್ತಿದೆ, ಇನ್ನೂ ಮೇಲಿನವರನ್ನು‌ ಅಪ್ರೋಚ್ ಮಾಡುವಷ್ಟು‌ ತಾಕತ್ತು ತನ್ನಲ್ಲಿಲ್ಲ. ಇವನೇ ಮೇಲಿನವರನ್ನೆಲ್ಲ ತನ್ನ ಬುಟ್ಟಿಗೆ ಹಾಕ್ಕೊಂಡಿದ್ದಾನೆ.‌ ಅದರಲ್ಲೂ ಕಂಪೆನಿಯ ವಿ ಪಿ ಇವನ‌ ಸೋದರತ್ತೆಯ ಮಗ...ಇನ್ನೇನು?

ತಾನೇ ಕೆಲಸ ಬಿಟ್ಟು ಹೋಗಲೇ ಎಂದನಿಸಿದ್ದು ಸಾವಿರಾರು ಬಾರಿ, ಆದರೆ ಈ ಕೆಲಸವೇ ಸಿಗಲಿಕ್ಕೆ ಹರಸಾಹಸ ಮಾಡಿ ಆಗಿದೆ. ಎಲ್ಲಿ ಹೋದರೂ ಕ್ವಾಲಿಫಿಕೇಶನ್, ಎಕ್ಸ್ಪೀರಿಯನ್ಸ್ ಅಂತ ಬಡ್ಕೊಳ್ತಾರೆ. ಎರಡೂ ನಾಸ್ತಿ ತನಗೆ. ಇನ್ನುಳಿದಿರೋದು ಯಾರದಾದರೂ ರೆಫರೆನ್ಸ್! ಎಲ್ಲಿಂದ ತರಲಿ?
ಇರುವ ಇಪ್ಪತ್ತೆಕರೆ ಬೇಸಾಯ ಮಾಡಿಕೊಂಡು ಊರಲ್ಲಿ ಚೆಡ್ಡಿಯಲ್ಲೇ ತಿರುಗುವ ತನ್ನಪ್ಪ. ಬಂಧು ಬಳಗ,‌ಅಧಿಕಾರದಲ್ಲಿರುವವರು‌ ಎಂದು ಒಂದೇ ಒಂದು ಪಿಳ್ಳೆಯ ಬಳಗವಿಲ್ಲ..ಪರಿಚಯವಿಲ್ಲ ಛೇ...

ಒಂದು ಸೀದಾ ಪ್ಯಾಂಟು ಶರ್ಟಿನಲ್ಲಿ ಆಫೀಸಿಗೆ ಬಂದ್ರೂ " ರೀ..ಫ್ಯಾಶನ್ ಕ್ರಿಯೇಟ್ ಮಾಡ್ಲಿಕ್ಕೆ ಬರ್ತೀರಾ ಆಫೀಸಿಗೆ? ಹಂಗಿದ್ರೆ ಯಾವ್ದಾದ್ರೂ ಆಡ್ ಕಂಪನಿಗೆ ಹೋಗ್ರೀ..." ಎಂದು ಅರಚುವ ಅವನ‌ ಅಗಲ ಬಾಯಿಯೊಳಗಿಂದ ಅಲ್ಲಾಡುವ ನಾಲಿಗೆ ಥೇಟ್ ಅವನ ಈಗಿನ ಕರೀ ದ್ರಾಬೆ ನಾಯಿಂಥದ್ದೇ..ಅವನ ನಾಲಿಗೆ ಎಂತಾದರೂ ಹಾಳಾಗಲಿ ಅವನ ಅಸೂಯೆ‌, ಕೀಳರಿಮೆಗೆ ತನ್ನದು ನಾಯಿಪಾಡಾಗ್ತಾ ಇರುವುದಂತೂ ನಿಜ.

ಬೋರ್ಡ್ ಆಫ್ ಫೈನಾನ್ಸ್ ಮ್ಯಾನೆಜ್‌ಮೆಂಟ್‌ ನ ಮೀಟಿಂಗಿಗಾಗಿ ಕಳೆದ ಐದು ತಿಂಗಳ ಮಾರ್ಕೆಟಿಂಗ್ ಡಾಟಾ ಅಂದಿದ್ದ - ಅದು ಬರೀ ತನ್ನೊಬ್ಬನ ಜವಾಬ್ದಾರಿ ಅಲ್ಲ, ಸೋಮಶೇಖರ್, ಎಂಜೆಲಿಕಾ ಇಬ್ಬರೂ ಕರ್ನಾಟಕ, ಮದರಾಸು ವಿಭಾಗ ನೋಡಿಕೊಂಡು ಲೆಕ್ಕಾಚಾರದ ಡಾಟಾ ಅಂಶಗಳನ್ನು ಸೇರಿಸಬೇಕು...ತನ್ನ ದುರಾದೃಷ್ಟ ಅಂದರೆ ಅವರ ತಪ್ಪುಗಳಿಗೂ ಏಟು ತಿನ್ನುವವ ತಾನು.
ಆಗಿದ್ದು ಅದೇ. ಹಿಂದಿನ ದಿನ ಫೈಲ್ ಚೆಕ್ ಮಾಡಿ ನೋಡಿ ಕಂಪ್ಯೂಟರನ್ನು ದರಕ್ಕಂತ ಇತ್ತ ತಿರುಗಿಸಿ "ಬೋರ್ಡ್ ನೋರ ಮುಂದೆ ನನ್ನ ಮಾನ ಹರಾಜಾಕಬೇಕೇನ್ರೀ ನಿಮಗೇ.. ನೀವೇನು ಕೆಲ್ಸಕ್ ಬರ್ತೀರೋ ಫ್ಯಾಶನ್ ಮಾಡೋಕೋ? ಯಾಕಾದ್ರೂ ನನ್ನ ಪ್ರಾಣ ತಿಂತೀರಿ...ನಿಮ್ಮಿಂದ ನಾನೂ ಕೆಲ್ಸ ಕಳಕೋಬೇಕಷ್ಟೇ. ಥೂ ನಿಮ್ಮ.."

ತಲೆ ದಿಮ್ಮಂದಿತ್ತು ಅಸ್ವಸ್ಥತೆ ಉಕ್ಕಿ ಬಂದಂತೆನಿಸಿ ಕಣ್ಣು ಕತ್ತಲಿಟ್ಟ ಅನುಭವದಲ್ಲಿ ಬೀಳದಿರಲು ಬಾಸಿನದೇ ಮೇಜು ಆಧರಿಸಿ ನಿಂತುಕೊಂಡ..ಬಾಸು ಬೈಯುತ್ತಿರುವುದು ಅವನ ಕರೀ ದ್ರಾಬೆ ನಾಯಿಯೇ ತನ್ನ ಮುಖಕ್ಕೆಗರಿ ‌‌ ಭುರ ಭುರ ಬೊಗಳಿದ ಹಾಗನಿಸಿ ಒಂದು ಕ್ಷಣ ಬಾಸಿನ ಮುಖವೂ ಇನ್ನೊಮ್ಮೆ ಕರೀ ದ್ರಾಬೆ ನಾಯಿಯೂ ಥೈ ಥೈ ಕುಣಿಯುತ್ತಿರುವ‌ಂತೆ ಕಂಡಾಗ ಜಿಲ್ಲನೆ ಬೆವರು ಕಿತ್ತುಕೊಂಡು ಬಂತು.
" ಹೋಗ್ರೀ ನಿಮ್ ಸೀಟಿಗೆ..ಕೇಳಿಸ್ಲಿಲ್ಲ್ವಾ. ಗೆಟ್ ಲಾಸ್ಟ್... "
ಕರ್ಕಶತೆ ಕುಣಿದ ಆ ದನಿ ಹೇಸಿಗೆ ತರಿಸಿ ಅಲ್ಲಿಂದ ದರದರ ಹೊರನಡೆಯುವಾಗ ಬಾಸಿನ ಚೇಂಬರಿನ ಪುಶ್ ಡೋರು ತೆರೆದು ಮುಚ್ಚುವಾಗ ದಬಕ್ಕನೆ ಹಿಂದೆ ಕುಂಡೆಗಪ್ಪಳಿಸಿ ಮುಗ್ಗರಿಸಿದಾಗ ಕೈಯಲ್ಲಿ ಕಾಫಿಯ ಮಗ್ ಎತ್ತಿಕೊಂಡು ಹೊರಟಿದ್ದ ಸೆಲೀನಾ ಕಿಸಕ್ಕೆಂದಳು..
" ಪತ್ರೀಗೌಡ್ರೇ ನಿಧಾನ..ನಿಧಾನ.ಐ ದಿಲ್ ಹೈ ಮುಷ್ಕಿಲ್ ಜೀನಾ ಯಂಹಾ..ಯೆ ಹೈ ಬೆಂಗ್ಳೂರ್ ಯೇ ಹೈ ಬೆಂಗ್ಳೂರ್ ಮೆರಿ ಜಾನ್.." ಅಂದು ' ಟೇಕಿಟೀಸಿ.. ಹೋತ್ತಾ ಹೈ..ಕಾಫಿ ಬೇಕಾ?' ಅಂತಾಳೆ.

ಉಪವಾಸ ಬಿದ್ರೂ ಚಿಂತೆಯಿಲ್ಲ ಈ ಕೆಲಸಕ್ಕೆ ರಾಜೀನಾಮೆ ಬಿಸಾಕಿ ಮನೆಗೆ ನಡೆಯಲೇ? ಆವೇಶ ಎಷ್ಟೋ ಬಾರಿ ಉಕ್ಕಿ ಬರುತ್ತದೆ. ಸ್ಕ್ರೀನಿನಲ್ಲಿ‌ ರಿಸೈನ್ ಲೆಟರಿನ ಅಕ್ಷರಗಳನ್ನು‌ ಕುಟ್ಟುವಾಗ ತನ್ನ ಕೋಮಲೆ, ಮತ್ತೆರಡು ಹೆಣ್ಣು ಪಾಪುಗಳ ಮುಖ ತೇಲಿ ಬಂತು. ತನ್ನ ಬೆನ್ನಿಗೆ ಜೋತುಕೊಂಡಿರುವ ಬೋಗಿಗಳು. ಕೆಲಸ ಬಿಟ್ಟರೆ ಅವರ ಹೊಟ್ಟೆಗೇನು ತುಂಬುವೆ?
ಥತ್ ಎಂದಂದು ಬರೆದದ್ದೆಲ್ಲ ಡಿಲಿಟ್ ಮಾಡಿ ಕುರ್ಚಿಯ ಹಿಂದಕ್ಕೊರಗಿ ಗಟ್ಟಿಯಾಗಿ ಕಣ್ಣು ಮುಚ್ಚಿ ಕೊಂಡು ಬೆರಳುಗಳ ನೆಟಿಗೆ ಮುರಿದ. ನಿಟ್ಟುಸಿರು ಹೊರಬೀಳುವುದರೊಟ್ಟಿಗೆ ತಲೆ ವಿಪರೀತ ಸಿಡಿಯತೊಡಗಿತು. ರಜೆ ಬಿಸಾಕಿ ಮನೆ ಸೇರಬೇಕೆನಿಸಿದರೂ ನಾಳೆ ಮ್ಯಾನೇಜ್ಮೆಂಟ್ ಮೀಟಿಂಗ್ ಇರುವಾಗ ಬಿಟ್ಟಾನೆಯೇ ಸೂ...ಮಗ.. ಯಾವ ಜನ್ಮದ ವೈರಿಯೋ ತನಗಿವನು??
ಇದ್ದಕ್ಕಿದ್ದಂತೆ ವಾತಾವರಣ ತಿಳಿಯಾದ ಹಾಗನಿಸಿತು. ಬಾಸು ತನ್ನ ದ್ರಾಬೆ ಮುಖ ಹೊತ್ಕೊಂಡು ಆಫೀಸಿನಿಂದ ಹೊರಬೀಳ್ತಾ ಇದ್ದ. " ಇವತ್ತು ಬರಲ್ಲ.. ಇನ್ನು ನಾಳೆಯೇ" ಏಂಜೆಲಿಕಾ ಯಾರ ಹತ್ತಿರವೋ ಪಿಸುಗುಟ್ಟಿ‌ಆ ದಿನಕ್ಕೆ ಬಾಸು ರವಾನೆಯಾಗಿ ಆಫೀಸು ಫ್ರೀ ಅನಿಸಿದ್ದನ್ನು ಸಾರಿ ಆಯಿತು. ಪತ್ರೀಗೌಡ ಎದೆ ಹಗುರವಾಗಿ ಖುಶಿಯಾದ.

ನಾಲ್ಕೂವರೆ ಆಗುತ್ತಿದ್ದ ಹಾಗೆ ಸೆಕ್ಷನ್ ಸೂಪರ್ವೈಸರಿಗೆ "ಹುಶಾರಿಲ್ಲ‌ ಅನಿಸ್ತಾ ಇದೆ" ಅಂತ ಮನದಟ್ಟು ಮಾಡಿಸಿ ಹೇಳಿ ಹೊರಬಿದ್ದ,ನೇರ ಮನೆಗೇ ಹೋಗಲೇ ಅನಿಸುತ್ತಿರುವಾಗ ನೆನಪಾಯ್ತು, ಕೋಮಲೆ ಇಲ್ಲ, ನಿನ್ನೆಯೇ ಅಮ್ಮನ ಮನೆ- ಬನ್ನೇರುಘಟ್ಟ ರೋಡಿನಲ್ಲಿರೋ ಮನೆ- ಹೋಗಿದ್ದಾಳೆ. ಅಲ್ಲೂ ಇನ್ಯಾರಿಲ್ಲ. ಅತ್ತೆಗೆ ಆಗೀಗ ಏನೋ ಒದ್ದಾಡಿಕೊಂಡು ಒಂದಿಷ್ಟು ದುಡ್ಡು ಹೊಂದಿಸಿ ಕೊಟ್ಟು ಬರೋದು ತಾನೇ. ಮಾವ ಸತ್ತು ಸ್ವರ್ಗ ಸೇರಿ ಹೆಂಡತಿಗೆ ಬರೀ ಹದಿನಾಲ್ಕು ಸಾವಿರ ಪೆನ್ಶನ್... ಅದರಲ್ಲಿ ಬದುಕೋಕೆ ಸಾಧ್ಯವಾ?
ತನ್ನ ಎರಡೂ ಮುದ್ದು ಚಿಳ್ಳೆಗಳ ನೆನಪು. ಅವೆರಡೇ ಇದೆಲ್ಲ ಕಾಷ್ಠವ್ಯಸನದ ಪಡಿಪಾಟಲಿನ ನಡುವೆ ಒಂದಿಷ್ಟು ತಂಪು ಹನಿ ಸಿಂಪಡಿಸುವ ಕಾರಂಜಿಗಳು...
ಹೋಗಿ ಕರ್ಕೊಂಡು ಬರಲೇ ಅನಿಸಿ ಬನ್ನೇರುಘಟ್ಟ ರಸ್ತೆಗೆ ಹೋಗುವ ಬಸ್ ಏರಿದನಾದರೂ ಹತ್ತು ನಿಮಿಷದಲ್ಲಿ ಯಾಕೋ ಬೇಡ ಕೋಮಲೆ ಬಂದಾಗ ಬರಲಿ ಅನಿಸಿಬಿಟ್ಟಿತು. ಡೈರಿ ಸರ್ಕಲ್ ಸ್ಟಾಪ್ ಕಾಣಿಸಿ ತಟಕ್ಕನೆ ಕೆಳಗಿಳಿದು ಬಿಟ್ಟ..
ಉದ್ವಿಗ್ನ ಮನಸ್ಸು ಏನೂ ತೋಚದೆ ಬ್ಲಾಂಕ್ ಹಾಳೆಯ ಥರ ಆಗಿ ಅಲ್ಲೇ ಸ್ಟಾಪಿನ ಬೆಂಚಿನಲ್ಲಿ ಕೂತು ಅತ್ತಿತ್ತ ಓಡಾಡುವ ಜನ ಎಷ್ಟು ಸುಖಿಗಳೋ ತನ್ನಂಥ ರಾಕ್ಷಸ ಬಾಸಿನ‌ ಕಿರಿಕಿರಿ ಇಲ್ಲದೆ ಎಂಥ ಸುಖಿಗಳೋ‌ ಅನಿಸಿ‌ ತನ್ನನ್ನೇ ನೋಡಿದ ಒಂದಿಬ್ಬರಿಗೆ "ಏನ್ರೋ‌ ನಾನಿಲ್ಲಿ ಕೂತ್ರೆ ನಿಮ್ಮಪ್ಪನ ಗಂಟೇನಾದ್ರೂ ಖರ್ಚಾಯ್ತಾ " ಅಂತ ಮನಸ್ಸಿನಲ್ಲೇ ಬೈಕೊಂಡು ಮುಖ ಸಿಂಡರಿಸಿಕೊಳ್ತಿದ್ದಾಗ ಆಕಾಶ ಕ್ಕೆ ಎಲ್ಲಿಂದಲೋ‌ ಕರೀ ಕಪ್ಪು ಮೋಡಗಳು ನುಗ್ಗಿ ಬಂದು ಕರೀ ತೆರೆ ಹಾಸಿ‌ ಇಷ್ಟೊತ್ತು ಸುಮ್ಮನಿದ್ದ ಗಾಳಿ ಬರ್ರೋ‌ಅಂತ ಬೀಸಿ ಮಳೆ ಇಳಿಯಿತು. ತಂಪು ತಂಪಾದ ಹವೆಯಲ್ಲಿ ಕೋಮಲೆಯ ಮೆದುವಾದ ಎದೆಯೊಳಗೆ ಮುಖ ಇಟ್ಟು ಮಲಗಿ ಎಲ್ಲ ಮರೆಯಬೇಕು ಅನಿಸಿದರೂ ಮನೆ‌ಖಾಲಿ, ಅವಳಿಲ್ಲ..ಛೇ. ಹೋಗಿ ಮಾಡೋದಾದರೂ ಏನು?
ಎಡಭಾಗಕ್ಕೆ ಕಣ್ಣು ತಿರುಗಿದಾಗ ಬಾರ್ ಕಣ್ಣು ಮಿಟುಕಿಸಿತು. ಅರೆ, ಇಲ್ಲೇ ಇದೆಯಲ್ಲ.. ಚಲೋ ಅಂದ.
ಮಧುಶಾಲಾ ನೆನಪು.. ಅಮಿತಾಭ್ ಸರಿಯಾಗೇ ಹೇಳ್ತಾನೆ. 'ಈ ಸ್ವರ್ಗದಲ್ಲಿ ಎಲ್ಲಾ ಮರೆಯೋ ಜಾದೂ ಉಂಟು'...

ಗ್ಲಾಸಿನ ಜೇನುಬಣ್ಣದ ದ್ರವಕ್ಕೆ ಜೀವ ಬಂತು. ಇವನ ಮಾತಾಡಿಸತೊಡಗಿತು.. ಏನೋ ಏನೋ ನಿನ್ನ ಗೋಳು..ಗಂಡ್ಸಾಗಿ ಅಳ್ತೀಯಾ?' ಅಣಕಿಸಿತು. ಅದಕ್ಕೆ ಇನ್ನಷ್ಟು ಮನಸ್ಸು ಕುಗ್ಗಿ 'ಅಲ್ಲ ಛೀ ಥೂ ಇದೇ ಜೀವನ ಆಗಿದ್ರೆ ಇನ್ನೇನು? ಮರುಕಪಡ್ದೇ ಇನ್ನೇನು? ತಿರುಗೇಟು ಕೊಟ್ಟ.

ತಾನೇ ಬಾಸಾಗಿ ಬಾಸು ಪತ್ರಿಬೀಡಿ ಗೌಡ ಆಗಿದ್ರೆ ತಾನೂ ಹೀಗೇ ಮಾಡ್ತಿದ್ದನಾ? ಖಂಡಿತ ಇಲ್ಲ.ನನಗೆ ದೇವರು ರೂಪ ಅವನಿಗೆ ಕುರೂಪ ಕೊಟ್ಟಿದ್ರೆ ಅದು ಪಡೆದು ಬಂದಿದ್ದು...ಬುದ್ಧಿ ಬೇಡ್ವಾ ಅವನಿಗೆ?
ಬೇಡವೆಂದರೂ ಮಧ್ಯಾಹ್ನದ ನೆನಪು..ಕಣ್ಣು ಕೆಕ್ಕರಿಸಿ, ಹಲ್ಲು ಕಚ್ಚಿ ಎಗರಾಡ್ತಿದ್ದ ಬಾಸು, ಅವನ ಮುಖದಿಂದ ಚಿಮ್ಮಿದ ಉಗುಳಿನ ಹನಿಗಳು.."ಕಣ್ಣೂ ಮೂಗು ನೇರವಾಗಿದೆ ಅಂತ ಡೌಲು ಬಡೀತೀರೇನ್ರೀ ಡೌಲು? ಹಾಂ? ನಿಮ್ಮ ಪರಫಾರ್ಮೆನ್ಸ್ ನೆಗೆಟಿವ್ ರಿಪೋರ್ಟ್ ಮಾಡ್ಲಾ?"
ಅವನ ಹೀಯಾಳಿಕೆಯೊಡನೆ ಸುಟ್ಟ ಹಪ್ಪಳದಂಥ ಆ ಮುಖ‌ ಇನ್ನೂ ವಿಕಾರವೆನಿಸಿ ಅವನ ಹೊಸಾ ನಾಯಿಯೇ ಕಾಣಿಸಿದಂತಾಯ್ತು. ಒಂದು ಪಿಸ್ತೂಲೇನಾದ್ರೂ ಸಿಕ್ಕಿದರೆ ಈ ಬಾಸೂ ಅವನ ನಾಯಿ ಇಬ್ಬರನ್ನೂ ಢಮಾರ್ ಅನಿಸಿಬಿಡಬೇಕು ಅನಿಸಿ ಮನದಲ್ಲಿ ಏನೋ ಖುಶಿ ಮೂಡಿತು... ಕರೀ ಬಾಸು...ಕರಿ ಕರೀ ನಾಯಿ ಓಡಿ ಬರ್ತಾ ಬರ್ತಾ..ಹ್ಹಾ.. ಇದೇನಿದು ತನ್ನ ಕೈಯೊಳಗೊಂದು ಗನ್! ಅದೆಲ್ಲಿಂದ ಬಂತು?..ಅಬ್ಬಾ ಏನು ಭಾರ ಇದೆ! ಲೋಡೆಡ್ ಗನ್..ಪಳಪಳ ಹೊಳೀತಿದೆ ಗಾಡ್, ಯಾಕೆ ಸಿಕ್ಕಿತು ಗೊತ್ತಾ?!

ಅಗೋ ಅಲ್ಲಿ ಯಾರದು? ಕಂಬದ ಹಿಂದಿಂದ ಬಾಸಿನ ನಾಯಿ‌ ಇಣುಕಿ ನೋಡ್ತಿದೆ..ಅಲ್ಲಲ್ಲ ಬಾಸು ಕೂಡ ಇಣುಕಿ ನೋಡ್ತಾನೆ. ಲೋ ಸೂ...ಮಗ ಬಾಸು ನೀನು ನಿನ್ನ ನಾಯಿ ಇಬ್ರೂ ಸೂ.. ಮಕ್ಕಳು! ಏನೊ? ನಂದು ನೆಗೆಟಿವ್ ರಿಪೋರ್ಟು ಹಾಕ್ತೀಯಾ? ನೌಕರಿ ಕಳೀತೀಯಾ? ನಾನೂ ನನ್ನ ಹೆಂಡ್ತಿ ಮಕ್ಕಳು ಉಪವಾಸ ಸಾಯ್ಬೇಕೇನೋ ಬಡ್ಡಿ ಮಗನೇ...ಬಾರೋ ಮೊದಲು ನಿನ್ ಎದೆಗೊಂದು, ನಿನ್ನ ನಾಯಿಗೊಂದು ಗುಂಡು‌ ಹಾರಿಸಿ ಕೊಲ್ತೇನೆ ಬಾರೋ...ಇಕಾ..ಢಾಂ ಢಾಂ..ಢಾಂ!
ಅರೇ..ಇಡೀ ಕೋಣೆ ಗಿರಗಿರ ಸುತ್ತುತಾ ಇದೆ..ಬಾಸ್ ಎಲ್ಲಿ? ಹಾ ಗುಂಡಿಗೆ ಹೆದರಿ ಓಡಿ ಹೋದ್ನಾ? ಲೋ ಬಾಸೂ..ನಿನ್ನ ನಾನು ಬಿಡಲ್ಲ ಕಣೋ.ನೀನೂ ನಿನ್ನ ಕರೀ ಮುಸುಡಿ ನಾಯಿ ಇಬ್ರೂ ಈ ಪ್ರಪಂಚದಲ್ಲಿರೋಕೆ ಲಾಯಕ್ಕಿಲ್ಲ...ನೀವಿಬ್ರೂ ಸಾಯ್ಬೇಕು.ಇದು ನನ್ನಾಜ್ಞೆ.. ಢಾಂ ಢಾಂಡಡ ಢಾಂ. ಓಕೆ ಅಯ್ತಾ? ವೆರಿ ಗುಡ್. ಇಬ್ಬರೂ ನೆಗೆದುಬಿದ್ದು ಹೋದ್ರಿ, ಇನ್ನು ನಾ ಉಳ್ಕೊಂಡೆ. ಸಾಕು. ಈಗ ಮನೆಗೆ ಹೋಗಿ ಕೋಮಲೆಗೆ ಈ ಸಂತೋಷದ ಸುದ್ದಿ ಕೊಡ್ತೀನಿ..
ಪತ್ರೀಗೌಡ ಬಾರಿನಿಂದ ಹೊರಬಿದ್ದ.. ಖಾಲಿ ಆಟೋ ಒಂದು ಅಲ್ಲೇ ನಿಂತಿತ್ತು..ಮನೆ ಸೇರಲು ಒಂದು ಗಂಟೆ ಹಿಡಿದಿದ್ದೂ ತಿಳಿಯದ ಮಯಕದ ನಿದ್ದೆ. "ಸಾರ್ ಇಳೀರಿ ನಿಮ್ಮ ಲೊಕೇಶನ್ ಬಂತು" ಅಂದ ಆಟೊ ಡ್ರೈವರ್..
" ದೇವರೇ..ಇದೇನಿದು ಇಷ್ಟು ಕುಡಿದಿದೀರಿ.. ಮೈ ಮೇಲೆ ಎಚ್ಚರವೇ ಇಲ್ವಲ್ಲ.. " ಚೀರಿದ್ದು ಕೋಮಲೆ .
"ಹಾಹಾ..ಕೋಮ್ಲಾ..ಬಂದ್ಬಿಟ್ಯಾ.ಇವತ್ತು ಎಂಥಾ ಖುಶಿ ಹೇಳ್ತೀನಿ ಕೇಳು..ಅವನನ್ನು ಮುಗಿಸ್ಬಿಟ್ಟೆ... ಬಾಸು ಅವನ ನಾಯಿ‌ ಇಬ್ರೂ ನೆಗೆದುಬಿದ್ದೋದ್ರು..ಹ್ಹಾಹ್ಹಾ. ನನ್ನ ನೌಕರಿ ಕಳಿತಾನಂತೆ, ಅದ್ಹೇಗೆ ಕಳೀತಾನೆ ನೋಡ್ತೀನಿ..ದ್ರಾಬೇನ ನರಕಕ್ಕೆ ಕಳಿಸಿದೆ. ಬಾ ಇಲ್ಲಿ ನನಗೊಂದು ಮುತ್ತು ಕೊಡು. ನಿನ್ನ ಗಂಡ ಘನಂದಾರಿ ಕೆಲಸ ಮಾಡಿ ಆಯ್ತು..ಬಾ ತಬ್ಕೋ ಹೀಗೆ.‌ ಇವತ್ತು ನನಗೆ ಸಾವಿರ ಮುತ್ತು ಬೇಕು, ಇಲ್ಲ ನಾನೇ ತಬ್ಕೋತೀನಿ ಬಾ. ಇವತ್ ನನಗೆ ಸ್ವರ್ಗಸುಖ ಕೊಡು ಬಾ"
" ಮೊದ್ಲು ಮಲ್ಕೊಳ್ಳಿ."
*************
ಮರುದಿನ ಬೆಳಗಾಗ್ಲಿ ಎನ್ನುವ ಆಜ್ಞೆ ಸೂರ್ಯ ಕೊಟ್ಟು ಆರು ತಾಸು. ನೀಲಿ ಬಿಳಿ ಬಿಲ್ಡಿಂಗ್ ಒಳಗೆ ಹೊಕ್ಕವರ ಎಂಟ್ರಿ ಕಾರ್ಡ್ ಸ್ವೈಪ್ ಮಾಡಿಸಿಕೊಳ್ತಿತ್ತು , ಪತ್ರಬೀಡೀಗೌಡನದೂ ಮಾಡಿಸಿಕೊಂಡಿತು.
ಅರ್ಧ ಆಫೀಸು ಖಾಲಿ.
ಏನಾಗಿದೆ....?
'ಏಂಜೆಲಿಕಾ ಏನಾಗಿದೆ? ಯಾಕ್ ಯಾರೂ ಬಂದಿಲ್ಲ?'
" ನಿನಗೆ ಎಂಟಾದ್ರೂ ಮೆಸೇಜು ಬಂದಿರ್ಬೇಕು ಒಂದೂ ನೋಡ್ಲಿಲ್ವಾ? ನಾನೇ ಎರಡು ಕಳಿಸಿದ್ದೆ.."
ಹೌದಲ್ಲ, ಬೆಳಿಗ್ಗೆ ಹುಚ್ಚು ಹಿಡಿವಷ್ಟು ಹ್ಯಾಂಗೋವರ್..ತಲೆ ಯೋಚಿಸಲೂ ಆಗದಷ್ಟು ತತ್ತರ.
ಫೋನು ತೆರೆದ, ಏಂಜೆಲಿಕಾ ನಿರ್ಲಿಪ್ತೆ.

"ವೆರಿ ಸ್ಯಾಡ್ ಟು ಇನ್ ಫಾರ್ಮ್ ದ್ಯಾಟ್ ಅವರ ಸೂಪರಿಂಟೆಂಡೆಂಟ್ ಮಿಸ್ಟರ್ ಚಂದ್ರಶೇಖರ ಮೆಟ ವಿಥ್ ಆನ್ ಆಕ್ಸಿಡೆಂಟ್ ಅಂಡ ಹೀ ಎಕ್ಸಪೈರ್ಡ್ ಆನ್ ಸ್ಪಾಟ್... ದಿ ಆಫೀಸ್ ಕನ್ವೇಸ್ ಡೀಪ್ ಕಂಡೋಲೆನ್ಸಸ್ ಟು ಹಿಸ್ ಬಿರೇವ್ಡ್ ಫ್ಯಾಮಿಲಿ" ಮೊದಲ ಮೇಸೇಜು ಹೇಳಿತು.

ಅಂಥವೇ ಸಂತಾಪಸೂಚಕ ಇನ್ನೂ ಆರು‌ ಮೆಸೇಜು.
" ಅವರ ನಾಯಿ ಸಹ ಕೂತಿತ್ತಂತೆ ಕಾರಲ್ಲಿ.. ಬ್ರಿಜ್ ಗೆ ಡಿಕ್ಕಿ ಕಾರು, ಇಬ್ಬರೂ ಅಲ್ಲೇ.."

ಏಳು ಸುತ್ತಿನ ಕೋಟೆಯಿಂದ ತನ್ನ ಜೀವ ಉಳಿದು ಬಂತೆ?
ಏಂಜೆಲಿಕಾ ಮುಖದಲ್ಲಿರುವುದು ಏನು‌? ಓದಬೇಕೀಗ..

ಕಲಾಕೃತಿ: ಪಿ. ಪರಶುರಾಮ

ಜಯಶ್ರೀ ದೇಶಪಾಂಡೆ

ಲೇಖಕಿ ಜಯಶ್ರೀ ದೇಶಪಾಂಡೆ  ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ. 

ಕೃತಿಗಳು : ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ, ಸ್ಥವಿರ ಜಂಗಮಗಳಾಚೆ ಹಾಗೂ ಉತ್ತರಾರ್ಧ (ಕಥಾ ಸಂಕಲನಗಳು), ಯತ್ಕಿಂಚಿತ್ (ಕವನ ಸಂಕಲನ),ಮಾಯಿ   ಕೆಂದಾಯಿ  ಸ್ಮೃತಿ ಲಹರಿ (ಲಲಿತ ಪ್ರಬಂಧ ಸಂಕಲನ)  ಹೌದದ್ದು ಅಲ್ಲ‌ ಅಲ್ಲದ್ದು ಹೌದು (ಹಾಸ್ಯಲೇಖನ ಸಂಕಲನ), ಕಾಲಿಂದಿ (ಮಯೂರ), ಕೆಂಪು ಹಳದಿ ಹಸಿರು (ತರಂಗ), ದೂರ ದಾರಿಯ ತೀರ (ತರಂಗ) , ಬೇವು‌ (ವಿಜಯ ಕರ್ನಾಟಕ),  ಚಕ್ರವಾತ (ನೂತನ), ಸರಸ್ವತಿ ಕಾಯದ ದಿನವಿಲ್ಲ. (ಉದಯವಾಣಿ)   ಇವು ಧಾರಾವಾಹಿಯಾಗಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿತ ಕಾದಂಬರಿಗಳು.:ಪ್ರಥಮ್ ಬುಕ್ಸ್ ಸಂಸ್ಥೆಗಾಗಿ ಸ್ವಂತ  ಕಥೆಗಳಲ್ಲದೆ ಮರಾಠೀ ಮತ್ತು ಇಂಗ್ಲಿಷ್ಶ್ ಭಾಷೆಗಳಿಂದ ಕನ್ನಡಕ್ಕೆ  ಭಾವಾನುವಾದ ಮಾಡಿದ ನಲವತ್ತರಷ್ಟು ಪುಸ್ತಕಗಳು  ಪ್ರಕಟವಾಗಿವೆ. 

ಪ್ರಶಸ್ತಿ-ಗೌರವ: ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ , ದೂರದರ್ಶನ, ಉದಯ ಟಿವಿ  ವಾಹಿನಿಗಳಲ್ಲಿ  ಸಂದರ್ಶನ, *ಅಕ್ಷರ ಪ್ರತಿಷ್ಠಾನದ ಮಕ್ಕಳ  "ಕಲಿಕಾ ಏಣಿ" ಯೋಜನೆಯ ಮಾರ್ಗದರ್ಶಕರಾಗಿದ್ದರು.  ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ. (ಯತ್ಕಿಂಚಿತ್- ಕವನ ಸಂಕಲನಕ್ಕೆ ),  ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ 'ಸುಧಾ ಮೂರ್ತಿ ತ್ರಿವೇಣಿ ಸಾಹಿತ್ಯ ಪ್ರಶಸ್ತಿ'  (ಸ್ಥವಿರ ಜಂಗಮಗಳಾಚೆ' ಕಥಾ ಸಂಕಲನಕ್ಕೆ),  ಅತ್ತಿಮಬ್ಬೆ ಪ್ರಶಸ್ತಿ.  (ಹೌದದ್ದು ಅಲ್ಲ ಅಲ್ಲದ್ದು ಹೌದು- ಲಲಿತ ಪ್ರಬಂಧ ಸಂಕಲನಕ್ಕೆ), ಗೋರೂರು ಪ್ರತಿಷ್ಠಾನದ 'ಶ್ರೇಷ್ಠ ಪುಸ್ತಕ'  ಪ್ರಶಸ್ತಿ.( ಮೂರನೆಯ ಹೆಜ್ಜೆ- -ಕಥಾಸಂಕಲನಕ್ಕೆ), ರಾಜ್ಯಮಟ್ಟದ ಕಾದಂಬರಿ ವಿಮರ್ಶಾ ಪ್ರಶಸ್ತಿ.  ಅತ್ತಿಮಬ್ಬೆ ಪ್ರತಿಷ್ಠಾನದಿಂದ.  (ಬೆಳಗಾಂವಕರ್ ನಾಸು- ಕಾದಂಬರಿ‌ ಸುನಂದಾ -  ವಿಮರ್ಶೆ),  ದಿ. ಸಿ ಎನ್ ಜಯಲಕ್ಷ್ಮೀದೇವಿ (ಕಥಾಪ್ರಶಸ್ತಿ) 
         

 

More About Author