Story

ಪ್ರೀತಿಯ ಆಸರೆ

ರಮ್ಯ ನೆಕ್ಕರೆಕಾಡು ಮೂಲತಃ ಮಂಗಳೂರಿನವರು. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜೀವ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ. ಪ್ರಸ್ತುತ ಅವರ ಪ್ರೀತಿಯ ಆಸರೆ ಕತೆ ನಿಮ್ಮ ಓದಿಗಾಗಿ...

ತಿಳಿನೇರಳೆ ಬಣ್ಣದ‌ ಸೀರೆಯುಟ್ಟು, ತುಟಿಯಂಚಿನಲ್ಲಿ ನಗುತ್ತಾ, ಹೊಳಪು ತುಂಬಿದ್ದ ಮುದ್ದಾದ ಕಂಗಳಿಂದ ನೋಡುವ, ಗುಳಿಕೆನ್ನೆಯ ಬೆಡಗಿಯನ್ನು‌ ತನ್ನ ಮೊಬೈಲ್ ಪರದೆಯಲ್ಲಿ ನೋಡಿದಾಗ, ಬಾಲ್ಕನಿಯ ಉಯ್ಯಾಲೆಯಲ್ಲಿ ಕುಳಿತಿದ್ದ ಹೇಮಂತ್ ನ ಕಂಗಳು, ನೋವಿನಿಂದ ತುಂಬಿ ಬಂದವು.

ಅವಳು ತನ್ನ ಮೇಲೆ ತೋರುತ್ತಿದ್ದ ಕಾಳಜಿ, ಅವಳ ನಿಷ್ಕಲ್ಮಶ ಪ್ರೀತಿ, ತನ್ನ ಮುಂದೆ ಪುಟ್ಟ ಮಕ್ಕಳಂತೆ ವರ್ತಿಸುತ್ತಿದ್ದ ರೀತಿ, ಅವಳ ಮುಗ್ಧ ಮನಸ್ಸು, ಆಗೊಮ್ಮೆ ಈಗೊಮ್ಮೆ ತೋರಿಸುವ ಹುಸಿಮುನಿಸು ಎಲ್ಲವೂ ನೆನಪಿಸಿಕೊಂಡಾಗ, ಹೇಮಂತ್ ಮತ್ತಷ್ಟು ಕುಗ್ಗಿದ.

ಉಯ್ಯಾಲೆಯಿಂದ ಎದ್ದು ತನ್ನ ಕೋಣೆಗೆ ಹೋದವನು, ಕಪಾಟಿನಲ್ಲಿ ಭದ್ರವಾಗಿ ಇಟ್ಟಿದ್ದ ಆಲ್ಬಂ ಒಂದನ್ನು ಕೈಗೆತ್ತಿಕೊಂಡು ಮಂಚದಲ್ಲಿ ಕುಳಿತ. ಮದುವೆ ಮಂಟಪದಲ್ಲಿ ಮದುಮಗಳಾಗಿ‌, ತನ್ನ ಜೊತೆ ಕುಳಿತು ನಗುತ್ತಿದ್ದ ಅವಳ ಭಾವಚಿತ್ರವನ್ನು ನೋಡಿ ಪ್ರೀತಿಯಿಂದ ಸ್ಪರ್ಶಿಸಿದ. ಅದು ಅವರಿಬ್ಬರ ಮದುವೆಯ ಭಾವಚಿತ್ರಗಳಾಗಿದ್ದವು..!!

"ಜೀವನದಲ್ಲಿ ಏನೇ ಕಷ್ಟ ಬಂದ್ರೂ‌, ನಾನು ಯಾವತ್ತೂ ನಿನ್ನ ಜೊತೆಯಲ್ಲಿ ಇರ್ತೀನಿ. ನಿನ್ನ ಖುಷಿಯಲ್ಲಿ, ನಿನ್ನ ನೋವಲ್ಲಿ ನಾನೂ ಒಬ್ಬಳಾಗಿರ್ತೀನಿ ಅಂತ ನೀನೆ ಅಲ್ವಾ ಅವತ್ತು ನನ್ನಲ್ಲಿ ಹೇಳಿದ್ದು..!! ಈಗ...??" ಎನ್ನುವಷ್ಟರಲ್ಲಿ ಹೇಮಂತ್ ನ ಗಂಟಲುಕಟ್ಟಿಕೊಂಡಿತು‌, ಕಣ್ಣಿನಿಂದ ಕಂಬನಿ ಜಾರಿತು. ಆಲ್ಬಂ ನ್ನು ಭದ್ರವಾಗಿ ಹಿಡಿದು, ಕಣ್ಮುಚ್ಚಿ ಕುಳಿತವನ ಕಣ್ಮುಂದೆ, ತನ್ನ ಜೀವನದ ದಿಕ್ಕನ್ನೇ ಬದಲಿಸಿದ, ವರ್ಷವೊಂದರ ಹಿಂದೆ ನಡೆದ ಕಹಿ ಘಟನೆ ಹಾಗೆಯೇ ಹಾದು ಬಂತು.

ಆಸ್ಪತ್ರೆಯಿಂದ ಮಡದಿಯ ಜೊತೆ ಕಾರಿನಲ್ಲಿ ಮನೆಗೆ ಬರುತ್ತಾ‌, "ರಾಗ..!! ಇನ್ನು ಕೇವಲ ಎರಡೇ ಎರಡು ತಿಂಗಳಿನಲ್ಲಿ ನಮ್ಮ ಜೀವನಕ್ಕೆ ಹೊಸ ಅತಿಥಿಯ ಆಗಮನ..!! ತುಂಬಾ ಎಗ್ಸೈಟ್ ಆಗಿದ್ದೀನಿ" ಎಂದು ಹೇಮಂತ್ ಹೇಳಿದಾಗ, "ಹೌದು ಹೇಮಂತ್..!! ನಾನು ಕೂಡಾ ನಿಮ್ಮಷ್ಟೇ ಎಗ್ಸೈಟ್‌ ಆಗಿದ್ದೀನಿ" ಎಂದು ತನ್ನ ಹೊಟ್ಟೆಗೆ ಪ್ರೀತಯ ಸ್ಪರ್ಶ ನೀಡುತ್ತಾ ಹೇಳಿದಳು ರಾಗ.

"ಹೇಮಂತ್ ಸ್ಟಾಪ್.. ಸ್ಟಾಪ್.. ಸ್ಟಾಪ್..!! ಐಸ್ಕ್ರೀಮ್ ಶಾಪ್..!! ನನ್ನ ಫೇವರೇಟ್ ಬ್ಲ್ಯಾಕ್ ಕರೆಂಟ್ ಫ್ಲೇವರ್ ಇದೆ ಅಲ್ಲಿ" ಎಂದು ರಾಗ ಕಾರು ನಿಲ್ಲಿಸುವಂತೆ ಹೇಳಿದಾಗ, "ಸರಿ, ಐಸ್ಕ್ರೀಮ್ ತಿನ್ನೋಣ ಆದ್ರೆ ಪಾರ್ಕಿಂಗ್ ಪ್ಲೇಸ್ ಮಾತ್ರ ಸ್ವಲ್ಪ ಮುಂದೆ ಇದೆ. ಅಲ್ಲಿ ಕಾರು ಪಾರ್ಕ್ ಮಾಡಿ ಹೋಗೋಣ" ಕಾರನ್ನು ನಿಧಾನವಾಗಿ ಓಡಿಸುತ್ತಾ ಹೇಳಿದ.

"ನೀವು ಪಾರ್ಕ್ ಮಾಡಿ ಬನ್ನಿ‌, ನಾನು ಇಳಿದು ಹೋಗಿ ಐಸ್ಕ್ರೀಮ್ ಆರ್ಡರ್ ಮಾಡಿರ್ತೀನಿ" ಎಂದು ರಾಗ ಕಾರಿನಿಂದ ಅಲ್ಲಿಯೇ ಇಳಿದಳು. ರಸ್ತೆ ದಾಟಲು ಎಡೆಬಿಡದೆ, ಒಂದೇಸಮನೆ ಆಚೀಚೆ ವಾಹನಗಳು ಓಡಾಡುತ್ತಿದ್ದವು. ದೂರದಿಂದ ಬರುತ್ತಿದ್ದ ಟ್ಯಾಂಕರ್‌, ಹತ್ತಿರವಾಗುವ ಮೊದಲೇ ದಾಟಿ ಬಿಡಬೇಕೆಂದು ರಾಗ ವೇಗವಾಗಿ ರಸ್ತೆ ದಾಟಲು ಹೊರಟಾಗ ಬಲದಕಾಲಿನ ಚಪ್ಪಲಿ ಕಿತ್ತು ಬಂತು, ನಡಿಗೆಯ ವೇಗ ತನ್ನಿಂತಾನೇ ನಿಧಾನವಾಗುವಷ್ಟರಲ್ಲಿ, ಯಮರೂಪಿ ಟ್ಯಾಂಕರ್ ಕಣ್ಮುಚ್ಚಿ ಬಿಡುವಾಗ‌ ವೇಗವಾಗಿ ಬಂದು, ರಾಗಳಿಗೆ‌ ಗುದ್ದಿತು. ಗುದ್ದಿದ ರಭಸಕ್ಕೆ ಟ್ಯಾಂಕರ್ ಜೊತೆಗೆ ತಾನು ನಿಂತ ಜಾಗದಿಂದ ಸುಮಾರು ಹತ್ತು ಹೆಜ್ಜೆಗಳಷ್ಟು‌ ಮುಂದೆ ಬಿದ್ದಳು ರಾಗ.

ಕಾರು ಪಾರ್ಕ್ ಮಾಡಿ ಬಂದ ಹೇಮಂತ್ ಗೆ ತನ್ನ ಕಣ್ಣೆದುರು ನಡೆದ ಘಟನೆ ಹೃದಯವನ್ನೇ ಒಡೆಯುವಂತೆ ಮಾಡಿತು. ಮಾರ್ಗದ ಮಧ್ಯೆ ರಕ್ತದ ಮಡುವಿನಲ್ಲಿ ಬಿದ್ದಿದ್ದವಳ ಸುತ್ತ ಅದಾಗಲೇ ಜನಸಾಗರ ಸೇರಿತು. ಓಡಿ ಬಂದ ಹೇಮಂತ್, ಮಡದಿಯ ಸ್ಥಿತಿ ಕಂಡು ಅಸ್ಥಿತ್ವ ಕಳೆದುಕೊಂಡಂತೆ ನಿಂತು ಬಿಟ್ಟ. ತಲೆ ಒಡೆದು ಮುಖವಿಡೀ‌ ರಕ್ತದಲ್ಲಿ ಮುಳುಗಿದಂತಿತ್ತು. ಅರೆ ಕಣ್ಣು ಮುಚ್ಚಿ, ಬಾಯಿ ತೆರೆದ ಅವಳ ದೇಹ ನಿಶ್ಚಲವಾಗಿ ಮಲಗಿತ್ತು. "ಅಯ್ಯೋ ಸ್ಪಾಟ್ ನಲ್ಲೇ‌ ಹೋಯಿತು ಜೀವ..!!", "ಅವನ್ಯಾವನೋ‌ ಕಣ್ಣಿಲ್ಲದವನು‌..?? ಟ್ಯಾಂಕರ್ ಓಡಿಸೋಕ್ಕೂ ಗೊತ್ತಿಲ್ಲ", "ಟ್ಯಾಂಕರ್ ಬರ್ತಿದ್ರೂ‌, ಬಂಡುಧೈರ್ಯ ಮಾಡಿ ರೋಡ್ ಕ್ರಾಸ್ ಮಾಡಿದ್ಲು ಅನ್ಸುತ್ತೆ", "ಛೇ ಗರ್ಭಿಣಿ ಹೆಂಗಸು", "ಎರಡು ಜೀವ ಅನ್ಯಾಯವಾಗಿ ಹೋಯ್ತು..!" ನೆರೆದಿದ್ದವರ ಮಾತು ಹೇಮಂತ್‌ ನ ಹೃದಯವನ್ನು ಇರಿದಂತಾಯಿತು.

"ಏಯ್ ರಾಗ..!! ಏಳು, ಏನೂ ಆಗಿಲ್ಲ ಆಯ್ತಾ..?? ರಾಗ..?? ರಾಗಾ..." ಜೋರಾಗಿ ಅವಳನ್ನು ಬಿಗಿದಪ್ಪಿ ಅತ್ತವನ ಬಟ್ಟೆಯೆಲ್ಲಾ ನೆತ್ತರಿನಿಂದ ಮಿಂದಂತಾಗಿತ್ತು. ಆ ಸಂದರ್ಭದಲ್ಲಿ ವಾಸ್ತವತೆಯನ್ನು, ಅವಳ ಸಾವನ್ನು ಸ್ವೀಕರಿಸಲು ತಯಾರಿರಲಿಲ್ಲ ಹೇಮಂತ್.

"ಹೇಮಂತ್..!! ಅವಳನ್ನು ಮರೆತುಬಿಡು ಅಂದ್ರೂ ನೀನು ತಯಾರಿಲ್ಲ ಅಲ್ವಾ..!!" ಎಂದು ಹೇಮಂತ್ ನ ಕೈಗಳಲ್ಲಿ ಬಂಧಿಯಾಗಿದ್ದ ಆಲ್ಬಂ ನ್ನು ತೆಗೆದುಕೊಂಡು, ಕಪಾಟಿನಲ್ಲಿ ಯಥಾಸ್ಥಿತಿಯಲ್ಲಿ ಇಡುತ್ತಾ ಹೇಳಿದರು ಅವನ ತಾಯಿ ಲಕ್ಷ್ಮೀ.

ತಾಯಿಯ ಮಾತುಗಳಿಂದ ನೆನಪಿನ ಕೊಂಡಿ ಕಳಚಿ ಇಹಕ್ಕೆ‌ ಬಂದ ಹೇಮಂತ್, "ಅಮ್ಮಾ‌ ಮರೆಯೋದು ಹೇಗೆ..?? ಕೇವಲ ಎರಡೇ ವರ್ಷದ ದಾಂಪತ್ಯ ಜೀವನ ನಮ್ಮದು...!! ಆದರೂ ಜನ್ಮಕ್ಕಾಗುವಷ್ಟು ನೆನಪುಗಳನ್ನು ನನ್ನಲ್ಲಿ ಬಿಟ್ಟು ಹೋಗಿದ್ದಾಳೆ ಅವಳು. ಇನ್ನೇನು ನಮ್ಮಿಬ್ಬರ ಪ್ರೀತಿಯ ಕುಡಿ ಕೈ ಸೇರುವುದರಲ್ಲಿತ್ತು, ನಮ್ಮ ಅರ್ಥಪೂರ್ಣ ಜೀವನ ಪ್ರಾರಂಭವಾಗುವ ಮೊದಲೇ ನನ್ನ ಕಣ್ಣ ಮುಂದೆಯೇ ಬದುಕಿಗೇ ವಿದಾಯ ಹೇಳಿ ಹೋದ್ಲು" ಹೇಮಂತ್ ನ ಕಣ್ಣಂಚು ಇನ್ನೂ ಹಸಿಯಾಗಿಯೇ ಇತ್ತು.

"ನನಗೂ ಅರ್ಥ ಆಗುತ್ತೆ ಮಗನೇ, ಆದ್ರೆ ನೀನು ಈ ರೀತಿ ಸಂಕಟ ಅನುಭವಿಸ್ತಾ‌ ಇರೋದನ್ನು ನೋಡ್ತಾ ಸುಮ್ಮನಿರೋಕ್ಕೆ‌ ನನ್ನಿಂದಲೂ ಸಾಧ್ಯವಿಲ್ಲ. ಅವಳು ಹೋಗಿ ಒಂದು ವರ್ಷ ಕಳೆಯಿತು, ನೀನು ನಿಧಾನವಾಗಿ ಅವಳನ್ನು ಮರಿತೀಯ ಅಂದುಕೊಂಡ್ರೆ, ಊಹ್ಞುಂ..!! ಮತ್ತಷ್ಟು ಕೊರಗುತ್ತಾ ಇದ್ದಿಯಾ..!! ಇನ್ನೊಂದು ಮದುವೆಯಾಗು ಅಂದ್ರೆ ಒಪ್ಪೋದೂ ಇಲ್ಲ. ಪ್ರತಿಷ್ಠಿತ ಕಾಲೇಜಿನ ವಿಜ್ಞಾನ ಶಿಕ್ಷಕ, ಒಳ್ಳೆ ಸಂಬಳ ಇದೆ‌, ವಯಸ್ಸು ಕೂಡಾ ಸಣ್ಣದೇ ಹುಡುಗಿ ಖಂಡಿತ ಸಿಗ್ತಾಳೆ‌. ನೀನೇ ತಯಾರಿಲ್ಲ. ಸಂಗಾತಿ ಇಲ್ಲದೇ ಜೀವನ ನಡೆಸೋದು ಕಷ್ಟ, ಕಾಲ ಇನ್ನೂ ಮೀರಿಲ್ಲ. ಅಪ್ಪ ಬದುಕಿದ್ದಿದ್ದರೆ ಅವರ ಮಾತಾದ್ರೂ ಕೇಳ್ತಿದ್ದೆ‌ ನೀನು" ಮಗನ ಜೊತೆ ಕುಳಿತು ಹೇಳಿದರು ಲಕ್ಷ್ಮೀ.

"ಅಮ್ಮಾ‌ ಪ್ರತಿದಿನ ಇದೇ ಮಾತು ಹೇಳ್ತಿರಿ. ಏನೇ ಹೇಳಿ ನನ್ನ ನಿರ್ಧಾರ ಒಂದೇ. ನನಗೆ ಎರಡನೇ ಮದುವೆಯ ಅಗತ್ಯ ಇಲ್ಲ. ಅವಳು ಈಗ ನನ್ನ ಜೊತೆ ಇಲ್ಲದಿದ್ದರೂ, ಅವಳ ನೆನಪು ನನ್ನಲ್ಲಿ ಹಾಗೆಯೇ ಇದೆ. ಅದು ಸಾಕು ನನ್ನ ಜೀವನದುದ್ದಕ್ಕೂ" ಎಂದು ಎದ್ದು ಹೊರಗೆ ಹೋದ. ಪ್ರತಿದಿನದಂತೆ ಇಂದೂ ಕೂಡಾ ಮಗನ ಮನವೊಲಿಸಲಾಗದೇ ಸೋತರು ಲಕ್ಷ್ಮೀ.

ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರಲ್ಲಿ‌ ವಿಜ್ಞಾನ ಶಿಕ್ಷಕನಾಗಿರುವ ಹೇಮಂತ್‌ ತಾಯಿಯ ಪ್ರೀತಿಯಲ್ಲಿ ಬೆಳೆದವನು. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ. ತಾಯಿಯ ಆಯ್ಕೆಯ ಸೌಂದರ್ಯವತಿಯಾದ ರಾಗ ಎಂಬ ಹುಡುಗಿಯನ್ನು, ಮೆಚ್ಚಿ ಮದುವೆಯಾಗಿದ್ದ. ಮದುವೆಯಾದ ಎರಡೇ ವರ್ಷದಲ್ಲಿ ಪ್ರೀತಿಯ ಮಡದಿಯನ್ನು ಕಳೆದುಕೊಂಡವನಿಗೆ ಅವಳ ನೆನಪೇ ಈಗ ಆಸರೆ. ಎರಡನೇ ಮದುವೆಯ ಆಸಕ್ತಿ ಅವನಿಗಿರಲಿಲ್ಲ.

ಮರುದಿನ ಎಂದಿನಂತೆ ಕಾಲೇಜಿಗೆ ಹೋದ ಹೇಮಂತ್ ನೇರವಾಗಿ ಸ್ಟಾಫ್ ರೂಂ ಸೇರಿದ್ದ. ಕೆಲವು ಶಿಕ್ಷಕರ ಕುರ್ಚಿಗಳು ಇನ್ನೂ ಖಾಲಿಯಾಗಿಯೇ ಇತ್ತು. ಒಂದಷ್ಟು ಶಿಕ್ಷಕರು ಬಂದಿದ್ದರಷ್ಟೇ. ತನ್ನ ಕುರ್ಚಿಯ ಪಕ್ಕದಲ್ಲಿ ಶಿಕ್ಷಕಿಯೊಬ್ಬಳು ಕುಳಿತು, ಪುಸ್ತಕ ಓದುತ್ತಿದ್ದಳು. ಹೊಸ ಮುಖವಾದರೂ ಒಂದು ಬಾರಿ ಅತ್ತ ನೋಡಿ‌ ಮತ್ತೆ ಆ ಕಡೆ ಹೆಚ್ಚು ಗಮನ ಕೊಡಲಿಲ್ಲ. ಅವಳ ಕುತ್ತಿಗೆಯಲ್ಲಿದ್ದ ಒಂದು ತೆಳುವಾದ ಚಿನ್ನದ ಸರವನ್ನು ನೋಡಿ ಅವಳಿನ್ನೂ ಅವಿವಾಹಿತೆ ಎಂದು ಅರಿತ. ಹೆಚ್ಚು ಅವಳ ಬಗ್ಗೆ ಯೋಚಿಸದೆ, ತನ್ನ ಕೆಲಸದಲ್ಲಿ ಮಗ್ನನಾಗಿ ಬಿಟ್ಟ. ಕಳೆದ ಒಂದು ವರ್ಷದಿಂದ ತನ್ನ ಉದ್ಯೋಗ ಜೀವನದಲ್ಲೂ ಗಂಭೀರನಾಗಿಬಿಟ್ಟಿದ್ದ. ತನ್ನ ಕೆಲಸದ ಕಡೆ ಮಾತ್ರ ಗಮನಹರಿಸುತ್ತಿದ್ದ‌.

"ಹಲೋ‌..!! ನಮ್ಮ‌ ಕಾಲೇಜಿಗೆ ಹೊಸದಾಗಿ ಅಪಾಯಿಂಟ್ ಆಗಿರೋ ಇಂಗ್ಲೀಷ್ ಶಿಕ್ಷಕಿ ತನು ಅಲ್ವಾ ನೀವು..!? ವೆಲ್ಕಮ್‌ ಟು ಅವರ್ ಕಾಲೇಜ್" ಸಹಶಿಕ್ಷಕಿಯೊಬ್ಬರು ತನ್ನ ಪಕ್ಕದಲ್ಲಿ ಕುಳಿತವಳನ್ನು ಸ್ವಾಗತಿಸಿದಾಗ ಅವಳು ಹೊಸತಾಗಿ ಸೇರಿರುವ ಶಿಕ್ಷಕಿ ಎಂದು ಹೇಮಂತ್ ಮನದಟ್ಟು ಮಾಡಿಕೊಂಡ.

ಎಲ್ಲರೂ ತನ್ನಲ್ಲಿ ಆತ್ಮೀಯವಾಗಿ ಮಾತನಾಡಿಸಿದರೂ, ಹೇಮಂತ್ ತನ್ನ ಕಡೆಗೂ ನೋಡದಿರುವುದು ವಿಚಿತ್ರವೆನಿಸಿತು ತನುಗೆ‌. ತಾನಾಗಿಯೇ, "ಹಲೋ ಸರ್..!! ತನು ಹೀಯರ್. ಇಂಗ್ಲಿಷ್ ಲೆಕ್ಚರ್ ಆಗಿ ಹೊಸದಾಗಿ ಅಪಾಯಿಂಟ್ ಆಗಿದ್ದೀನಿ" ಎಂದು ಮಾತನಾಡಿಸಿದಾಗ, ಹೇಮಂತ್ ಗೆ ಮಾತನಾಡದೇ ವಿಧಿಯಿರಲಿಲ್ಲ. "ನೈಸ್ ಟು ಮೀಟ್ ಯು..!! ನಾನು ಹೇಮಂತ್ ಅಂತ ಸೈನ್ಸ್ ಲೆಕ್ಚರ್" ಎಂದಾಗ ತನು ಮುಗುಳ್ನಕ್ಕಳು. ಅವಳು ನಕ್ಕಾಗ ಅವಳ ಕೆನ್ನೆ ಮೇಲೆ ಮೂಡಿದ ಗುಳಿ ಹೇಮಂತ್ ಗೆ ರಾಗಳನ್ನು ನೆನಪಿಸಿತು.

"ಓಹ್‌ ನೋಡಿ ಕರುಣಾಕರ್ ಸರ್‌ ಬಂದ್ರು..!! ಹುಟ್ಟುಹಬ್ಬದ ಶುಭಾಶಯಗಳು ಸರ್..!!" ಸಹಶಿಕ್ಷಕರೊಬ್ಬರು‌ ಸ್ಟಾಫ್ ರೂಂ ಗೆ ಪ್ರವೇಶಿಸಿದಾಗ ಶಿಕ್ಷಕಿಯೊಬ್ಬರು ಶುಭಾಶಯ ಕೋರಿದರು. ಅವರ ಧ್ವನಿಗೆ ಇಹಕ್ಕೆ‌ ಬಂದ ಹೇಮಂತ್ ತನುವಿನ ಮುಖದಿಂದ ದೃಷ್ಟಿ ತಪ್ಪಿಸಿ ನೇರವಾಗಿ ಎದ್ದು ತರಗತಿಗೆ ನಡೆದರು.

ಅವಳನ್ನು ನೋಡಿದರೆ ರಾಗಳ ನೆನಪು ಮತ್ತೆ ಮತ್ತೆ ಮರುಕಳಿಸುವಂತಾದ ಕಾರಣ, ಹೇಮಂತ್ ಸ್ಟಾಫ್ ರೂಂ ಗೆ ಹೋಗಲು ಹಿಂದೇಟು ಹಾಕಿದ. ಬಿಡುವಿನ ಸಮಯವನ್ನು ವಾಚನಾಲಯದಲ್ಲಿ ಕಳೆದ. ಮಧ್ಯಾಹ್ನ ಊಟದ ಸಮಯಕ್ಕೆ ಅನಿವಾರ್ಯವಾಗಿ ಸ್ಟಾಫ್‌ ರೂಂ ಗೆ ಹೋಗಬೇಕಾಗಿ ಬಂತು. ತನ್ನಷ್ಟಕ್ಕೆ ಕುಳಿತು ಬುತ್ತಿಯನ್ನು ತೆರೆದಾಗ‌ ಕರುಣಾಕರ್ ಅವರು ಸಣ್ಣ‌ ರಟ್ಟಿನ ಪೆಟ್ಟಿಗೆಯನ್ನು ಮುಂದೆ ಚಾಚಿ, "ನನ್ನ ಬರ್ತ್ಡೇ ಲೆಕ್ಕದಲ್ಲಿ ಎಲ್ಲಾ ಲೆಕ್ಚರ್ಸ್ ಗೂ ಐಸ್ಕ್ರೀಮ್ ಹಂಚಿದೆ‌. ನೀವು ಮತ್ತೆ ತನು ಮೇಡಂ ಮಾತ್ರ ಉಳಿದುಕೊಂಡ್ರಿ. ತಗೊಳ್ಳಿ‌ ಐಸ್ಕ್ರೀಮ್ ಸ್ಟ್ರಾಬೆರಿ, ಬ್ಲಾಕ್ ಕರೆಂಟ್ ಎರಡು ಫ್ಲೇವರ್ ತಲಾ ಒಂದೊಂದು ಉಳಿದುಕೊಂಡಿದೆ, ನೀವೇ ಆಯ್ಕೆ ಮಾಡಿಕೊಳ್ಳಿ" ಎಂದು ಬಾಯಿ ಮುಚ್ಚುವಷ್ಟರಲ್ಲಿ‌ ಹೇಮಂತ್ ಹಾಗೂ ತನು ಇಬ್ಬರೂ ಒಂದೇ ಸಮಯಕ್ಕೆ, "ಬ್ಲಾಕ್ ಕರೆಂಟ್" ಎಂದರು.

"ಓಹ್ ನಿಮ್ಗೂ ಅದೇ ಫ್ಲೇವರ್ ಇಷ್ಟ ಆಯ್ತಾ...!?? ನನ್ನ ಫೇವರೇಟ್ ಅದು, ಇಫ್ ಯು ಡೋಂಟ್‌ ಮೈಂಡ್ ನಾನು ತಗೊಳ್ಳಾ‌ ಅದನ್ನು ಪ್ಲೀಸ್..!??" ತನು ಐಸ್ಕ್ರೀಮ್ ನ್ನು ಕೈಯಲ್ಲಿ ಹಿಡಿದು ಕೇಳಿದಳು‌. ಅವಳ ಇಷ್ಟಗಳು, ನಡವಳಿಕೆ, ನೋಟ ಎಲ್ಲವೂ ತನ್ನ ರಾಗಳನ್ನೇ‌ ಹೋಲುವಂತಿತ್ತು‌. ಹೇಮಂತ್ ಗೆ ಅವಳ ಸಾಮಿಪ್ಯ ಉಸಿರುಗಟ್ಟಿಸಿತು. ಆ ಕ್ಷಣಕ್ಕೆ ಐಸ್ಕ್ರೀಮ್ ತಿನ್ನುವ ಆಸಕ್ತಿ ಇಲ್ಲದಿದ್ದರೂ ಶಿಕ್ಷಕರಿಗೆ‌ ಬೇಸರಿಸಬಾರದೆಂದು‌ ಉಳಿದಿದ್ದ ಒಂದು ಐಸ್ಕ್ರೀಮ್ ನ್ನು ತೆಗೆದುಕೊಂಡು, ಬುತ್ತಿಯ ಜೊತೆ ಕ್ಯಾಂಟಿನ್ ಗೆ‌ ಹೋದ ಹೇಮಂತ್.

ಅವಳ ರೂಪ, ತಾನಾಗಿಯೇ ಮಾತನಾಡಿಸಿಕೊಂಡು ಬಂದ ರೀತಿ, ಅವಳು ಇಷ್ಟಪಟ್ಟಿದ್ದನ್ನು‌ ಪಡೆಯಲು ಮುಜುಗರವಿಲ್ಲದೇ ಮಕ್ಕಳಂತೆ ಕೇಳಿಕೊಂಡ ರೀತಿ ಎಲ್ಲವೂ ರಾಗಳನ್ನು ನೆನಪಿಸಿತು. ಹೇಮಂತ್ ನ ಮನಸ್ಸು ಯಾವುದಕ್ಕೂ ಸಹಕರಿಸದ ಕಾರಣ ಮಧ್ಯಾಹ್ನ ಮೇಲೆ ರಜೆ ಹಾಕಿ ಮನೆಗೆ ಹೋದ‌.

ಕಾಲೇಜಿಗೆ ಹೋದರೆ ಅಲ್ಲಿ ಕಾಲ ಕಳೆಯುವ ಮೂಲಕ, ಮನಸ್ಸಿಗೆ ನೆಮ್ಮದಿ ಬರಬಹುದು ಎಂದುಕೊಂಡಿದ್ದವನಿಗೆ‌, ತನು ಬಂದ ನಂತರ ಕಾಲೇಜಿಗೆ ಹೋಗುವುದೇ ಹಿಂಸೆ ಎನಿಸಿತ್ತು. ಅನಿವಾರ್ಯವಾಗಿ ಹೋದರೂ ಅವಳ ಉಪಸ್ಥಿತಿ ಇರುವಲ್ಲಿ ಇವನು ಇರಲು ಬಯಸುತ್ತಿರಲಿಲ್ಲ. ಅವನ ವಿಚಿತ್ರ ವರ್ತನೆಗಳು ತನುವಿಗೆ‌ ಅಚ್ಚರಿ ಮೂಡಿಸಿತ್ತು.

"ರಾಗ ನಿನ್ನ ನೆನಪು ಮಾತ್ರ ನನ್ನಲ್ಲಿ ಹಸನಾಗಿ ಉಳಿದಿರಲಿ ಅಂತ ನನ್ನ ಆಸೆ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಸಾಧ್ಯ ಆಗ್ತಾ ಇಲ್ಲ. ಅವಳ ಪ್ರತಿಯೊಂದು ನಡವಳಿಕೆಯಲ್ಲೂ‌ ನಿನ್ನನ್ನೇ ಕಂಡ ಹಾಗೆ ಆಗುತ್ತೆ. ಮನಸ್ಸು ಬೇಡ ಅಂದ್ರೂ ಕಂಗಳು ಅವಳನ್ನು ಕಾಣುವ ಹಂಬಲದಲ್ಲಿರುತ್ತೆ" ಹೇಮಂತ್ ರಾಗಳ ಭಾವಚಿತ್ರದ ಜೊತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ಲಕ್ಷ್ಮೀ ಮಗನ ಬಳಿ ಬಂದರು.

"ಹೇಮಂತ್...?? ಯಾರ ಬಗ್ಗೆ ಮಾತಾಡ್ತಾ ಇದ್ದೀಯಾ..??" ಪ್ರಶ್ನಿಸಿದರು. ತನ್ನ ಮನಸ್ಸಿನ ಭಾವನೆಗಳಿಗೆ ಸ್ಪಂದನೆಯಾಗುವುದು ತಾಯಿ ಮಾತ್ರ ಎಂದರಿತ ಹೇಮಂತ್ ತನುವಿನ ಬಗ್ಗೆ ತನ್ನಲ್ಲಾಗುತ್ತಿರುವ ತುಮುಲಗಳನ್ನು ಹೇಳಿಕೊಂಡ.

"ಅವಳು ನನ್ನ ಬಾಳಿನ ಕತ್ತಲಲ್ಲೊಂದು ಬೆಳಕಿನ ರೇಖೆಯ ಹಾಗೆ ಗೋಚರಿಸ್ತಾ ಇದ್ದಾಳೆ ಅಮ್ಮಾ..!! ತನುವಿನಲ್ಲಿ ರಾಗ ಇದ್ದಾಳೆ ಅಂತ ಮನಸ್ಸು ಹೇಳುತ್ತೆ. ನಾನಿನ್ನು ಕಾಲೇಜಿಗೆ ಹೋಗೋದಿಲ್ಲ. ಅವಳಿಂದ ದೂರ ಇರೋದೇ ಒಳ್ಳೆಯದು" ಎಂದು ತಾಯಿಯ ಮಡಿಲಲ್ಲಿ ತಲೆಯಿಟ್ಟು ಮಲಗಿದ ಹೇಮಂತ್.

"ಹೇಮಂತ್ ಒಳ್ಳೆ ಅವಕಾಶ ಕಣೋ. ಅವಳನ್ನು ಮದುವೆಯಾಗು. ನಿನ್ನ ಬಾಳಿಗೆ ಮತ್ತೆ ಬೆಳಕಾಗ್ತಾಳೆ ಅವಳು. ರಾಗಳ‌ ಅನುಪಸ್ಥಿತಿ ಖಂಡಿತ ಭಾಸ‌ ಆಗೋದಿಲ್ಲ ನಿಂಗೆ" ಹೊಸ ಆಶಾಭಾದಿಂದ ನುಡಿದರು ಲಕ್ಷ್ಮೀ.

ಮಲಗಿದವನು ಪುನಃ ಎದ್ದು ಕುಳಿತು, "ಅಮ್ಮಾ‌ ನಾನು ಎರಡು ವರ್ಷ ದಾಂಪತ್ಯ ಜೀವನ ಅನುಭವಿಸಿ ಹೆಂಡತಿಯನ್ನು ಕಳೆದುಕೊಂಡವನು. ಅವಳಿನ್ನೂ ಅವಿವಾಹಿತೆ..!! ಖಂಡಿತ ಸಾಧ್ಯ ಇಲ್ಲ ಅಮ್ಮಾ. ಬೇಡ..!!" ಎಂದಾಗ ಲಕ್ಷ್ಮೀ ಅವರಿಗೆ ನಿರಾಸೆಯಾಯಿತು‌.

ತನ್ನ ನಿರ್ಧಾರದಂತೆ‌ ಹೇಮಂತ್ ಕಾಲೇಜಿಗೆ ಹೋಗಲಿಲ್ಲ‌. ಹೊಸ ಕೆಲಸ ಹುಡುಕುವುದರಲ್ಲಿ ನಿರತನಾಗಿದ್ದ‌. ಕೆಲವು ಸಮಯಗಳ ಬಳಿಕ ಸಂಶೋಧನಾ ಕೇಂದ್ರವೊಂದರಲ್ಲಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡ. ಅಂದು ಹೊಸ ಕೆಲಸಕ್ಕೆ ಹೋಗುವ ಮೊದಲ ದಿನವಾದ್ದರಿಂದ, ತಾಯಿ ಹೇಳಿದಂತೆ ದೇವಸ್ಥಾನಕ್ಕೆ ಹೋಗಿ, ಕೆಲಸಕ್ಕೆ ಹೋಗಲು ನಿರ್ಧರಿಸಿದ.

ವಿಘ್ನನಿವಾರಕ ಗಣಪತಿಯ ದೇವಾಲಯ..! ದೇವಸ್ಥಾನದ ಒಳಗೆ ಹೋಗಿ ಪ್ರದಕ್ಷಿಣೆ ಹಾಕಿ ಕೈಮುಗಿದು, ಸ್ವಲ್ಪ ಹೊತ್ತು ಕುಳಿತುಕೊಂಡು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ‌, "ನಮಸ್ತೆ ಸರ್..!! ಎಲ್ಲಿ ಮಾಯವಾಗಿದ್ರಿ ಇಷ್ಟು ಸಮಯ‌..??" ಅಚ್ಚರಿ ಎಂಬಂತೆ ತನು ತನ್ನ ಬಳಿ ನಿಂತಿದ್ದಳು. ಅವಳ ನೆನಪನ್ನು ಮರೆಯಬೇಕೆಂದರೂ‌ ಅವಳು ಮತ್ತೆ‌ ತನಗೆದುರಾದಾಗ‌ ಹೇಗೆ ಪ್ರತಿಕ್ರಿಯಿಸಬೇಕೋ‌ ತಿಳಿಯಲಿಲ್ಲ ಹೇಮಂತ್ ಗೆ.

"ಹೊಸ ಕೆಲಸ ಗಿಟ್ಟಿಸಿಕೊಂಡ್ರಿ ಅಂತ ಗೊತ್ತಾಯ್ತು ಕಂಗ್ರಾಟ್ಸ್..!! ಆದ್ರೆ ಯಾಕೆ ಕಾಲೇಜು ಬಿಟ್ರಿ..?? ಒಳ್ಳೆಯ ಶಿಕ್ಷಕ ಆಗಿದ್ರಿ ನೀವು. ಯಾರ ಜೊತೆಯೂ ಅನಗತ್ಯ ಮಾತನಾಡದೇ ನೀವಾಯಾತು ನಿಮ್ಮ ಕೆಲಸವಾಯ್ತು‌ ಅಂತ ಇದ್ದ ನಿಮ್ಮ ಗುಣ ತುಂಬಾ ಹಿಡಿಸಿತು ಸರ್. ಯಾಕೆ ನೀವು ಯಾರ ಜೊತೆಯೂ ಹೆಚ್ಚು ಬೆರೆಯೋದಿಲ್ಲ‌..!??" ಪ್ರಶ್ನಿಸಿದಳು ತನು‌.

"ಕಂಗ್ರಾಜ್ಯುಲೇಟ್‌ ಮಾಡಿದ್ದಕ್ಕೆ ಥ್ಯಾಂಕ್ಸ್. ಯಾಕೋ ಬೇರೆ ಕೆಲಸ ಹುಡುಕೋಣ ಅಂತ ಆಯ್ತು ಅಷ್ಟೇ‌. ನಾನು ಮೊದಲಿನಿಂದಲೂ ಎಲ್ಲರ ಜೊತೆ ಮಿಂಗಲ್‌ ಆಗೋದು ತುಂಬಾ ಕಡಿಮೆ‌" ಎಂದು ನಸುನಕ್ಕು‌ ಹೇಳಿದ.

"ಯಾಕೆ ಸರ್ ಸುಳ್ಳು ಹೇಳ್ತೀರಿ‌..?? ನಿಮ್ಮ ಬಗ್ಗೆ ಕಾಲೇಜಿನಲ್ಲಿ ಕೆಲವರಲ್ಲಿ ಕೇಳಿ ತಿಳ್ಕೊಂಡಿದ್ದೆ‌. ಮೊದಲಿದ್ದ ಹೇಮಂತ್ ಸರ್ ಗೂ ಕಳೆದ ಒಂದು ವರ್ಷದಿಂದ ಇರುವ ಹೇಮಂತ್ ಸರ್ ಗೂ ತುಂಬಾ ವ್ಯತ್ಯಾಸವಿದೆ ಅಂತ ಎಲ್ಲರೂ ಉತ್ತರಿಸಿದ್ರು‌. ಸುಮ್ಮನೆ ಕುಳಿತಿದ್ದವರ ಬಳಿ ಹೋಗಿ ತಾವಾಗಿಯೇ ಮಾತನಾಡಿಸುವ ಗುಣದವರು ಈಗೀಗ ತಾವೇ ಸುಮ್ಮನೆ ಕುಳಿತಿರ್ತಾರೆ‌ ಅಂದ್ರು. ಹಾಗಿರುವಾಗ ಈಗ ನೀವು ಹೇಳಿದ ಮಾತನ್ನು ಹೇಗೆ ನಂಬೋದು ನಾನು...!??" ನಗುತ್ತಾ ಕೇಳಿದಳು.

"ಹೌದು ನಿಜ. ನಾನು ತುಂಬಾ ಬದಲಾಗಿದ್ದೀನಿ‌, ವೈಯಕ್ತಿಕ ಕಾರಣಗಳಿವೆ ನಿಮ್ಗೆ ಗೊತ್ತಿಲ್ಲ ಅಷ್ಟೆ..!!" ಎಂದು ನೋವು ತುಂಬಿ ಹೇಳಿದ‌. "ಇಲ್ಲ ಸರ್ ಅದೂ ಗೊತ್ತಿದೆ ನನಗೆ. ಮಲ್ಲಿಕಾ ಮೇಡಂ ಬಳಿ ಕೇಳಿ ತಿಳ್ಕೊಂಡೆ. ಸಾರೀ ನಿಮ್ಮ ವೈಯಕ್ತಿಕ ಜೀವನದ ಕಡೆ ಆಸಕ್ತಿ ತೋರಿಸಿದ್ದಕ್ಕೆ‌. ನಿಮ್ಮ ಜೀವನದಲ್ಲಿ ವಿಧಿ ಕ್ರೂರವಾಗಿ ಆಡಿದೆ ಒಪ್ಪಿಕೊಳ್ತೀನಿ. ಆದ್ರೆ ಸರ್ ಯಾಕೆ ನೀವು ಹಿಂದೆ ನಡೆದ ಘಟನೆಗಳ ಗುಂಗಿನಿಂದ ಹೊರ ಬರುವ ಪ್ರಯತ್ನ ಮಾಡೋದಿಲ್ಲ‌..!? ಜೀವನ ಸವಾಲೊಡ್ಡುವಾಗ ಅಳುಕಿ‌ ಹಿಂದೇಟು ಹಾಕುವ ಬದಲು ಎದುರಿಸುವ ಪ್ರಯತ್ನ ಮಾಡಿ‌. ಅದು ಬಿಟ್ಟು ನೆನಪುಗಳನ್ನೇ‌ ಜೀವನವಾಗಿಸುವುದು ಎಷ್ಟು ಸರಿ‌...!?? ಹೆಣ್ಣಿನ ಮನಸ್ಸು ಸರ್ ನಿಮ್ಮದು‌..!!" ಎಂದಳು ತನು.

"ವಾಟ್ ಡು ಯು ಮೀನ್‌..!?" ಪ್ರಶ್ನಾರ್ಥಕವಾಗಿ ತನುವನ್ನೇ‌ ನೋಡಿದ. "ಮತ್ತಿನ್ನೇನು ಸರ್..? ನಿಮ್ಮ ಸ್ಥಾನದಲ್ಲಿ ಒಬ್ಬಳು ಹೆಣ್ಣು ಇದ್ರೂ ಇಷ್ಟು ಕುಗ್ಗುತ್ತಿರಲಿಲ್ಲ. ಜೀವನವನ್ನು ಸವಾಲಾಗಿ ಸ್ವೀಕರಿಸುತ್ತಿದ್ದಳು‌" ಎಂದಾಗ‌, ತನ್ನನ್ನು ಅವಹೇಳಿಸಿದ ಹಾಗಾಯ್ತು ಹೇಮಂತ್ ಗೆ.

"ಅನುಭವವೇ ನಮಗೆ ದೊಡ್ಡ ಪಾಠ‌..!! ಯಾವುದೇ ಆಗಲಿ ನಮಗೆ ಅನುಭವವಕ್ಕೆ‌ ಬರುವವರೆಗೂ ಊಹೆ ಮಾಡಿ ಹೇಳಲು ಚೆಂದ‌. ಅನುಭವಿಸಿದ ಮೇಲೆಯೇ ನಿಜ ಗೊತ್ತಾಗೋದು‌. ನನ್ನ ಕಷ್ಟ ನಿಮಗೆ ಗೊತ್ತಾಗದು‌ ಬಿಡಿ" ಎಂದು ಯಾಂತ್ರಿಕವಾಗಿ ನಕ್ಕ‌‌.

ಅಷ್ಟರಲ್ಲಿ ಸುಮಾರು ಐವತ್ತರ‌ ಮಹಿಳೆ ಕೈಯಲ್ಲಿ ಎರಡರಿಂದ ಮೂರು ವರ್ಷದ ಹೆಣ್ಣುಮಗುವನ್ನು‌ ಎತ್ತಿಕೊಂಡು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ, ತನುವಿನ ಬಳಿ ಬಂದು, "ಎಲ್ಲಿ ಹೋದೆ ಅಂತ ನೋಡಿದ್ದು ನಾನು. ಯಾರಿವರು ‌..!??" ಎಂದು ಹೇಮಂತ್ ನನ್ನು ನೋಡಿ ಕೇಳಿದರು.

"ಅಮ್ಮಾ ಇವರು‌ ನನ್ನ ಕೊಲೀಗ್‌ ಆಗಿದ್ರು‌ ಹೇಮಂತ್ ಅಂತ‌. ಸರ್ ಇವರು ನನ್ನ ಅಮ್ಮ‌" ತನ್ನ ತಾಯಿಯನ್ನು ಪರಿಚಯಿಸಿ‌, ಅವರ ಕೈಯಲ್ಲಿದ್ದ ಮಗುವನ್ನು ತನ್ನ ಕೈಗೆತ್ತಿಕೊಳ್ಳುತ್ತಾ‌ ಹೇಳಿದಳು ತನು‌.
ತನುವಿನ ತಾಯಿಯನ್ನು ನೋಡಿ ಮುಗುಳ್ನಕ್ಕು, ಮುದ್ದಾದ ಮಗುವಿನ ಕೆನ್ನೆ ಸವರಿ, "ಯಾರದ್ದು ಮಗು‌..!? ಮುದ್ದಾಗಿದೆ" ಎಂದ.

"ನನ್ನ ಮಗಳು ಸರ್..! ಶ್ರೇಯಾ ಅಂತ" ಎಂದಾಗ ಅಚ್ಚರಿಯಾಯಿತು ಹೇಮಂತ್ ಗೆ. ಕೊರಳಿನಲ್ಲಿ ಕರಿಮಣಿ ಇರಲಿಲ್ಲ‌. ಆದರೆ ಅವಳ ಕಾಲಿನಲ್ಲಿ ಕಾಲುಂಗುರ ಗಮನಿಸಿದ ಹೇಮಂತ್. ಕಾಲೇಜಿಗೆ ಬರುವಾಗ ಪಾದ ಮುಚ್ಚುವ ಚಪ್ಪಲಿ ಧರಿಸಿದ್ದರಿಂದ ಅದನ್ನು ಗಮನಿಸಿರಲಿಲ್ಲ ಅವನು. ಈಗಿನ ಹೆಣ್ಣುಮಕ್ಕಳು ಕಾಲಕ್ಕೆ ತಕ್ಕಂತೆ ಬದಲಾಗಿ ಮಾಂಗಲ್ಯ ಸರ ಹಾಕಿಕೊಳ್ಳುವುದಿಲ್ಲ ಎಂದುಕೊಂಡು "ಓಹ್ ನಿಮ್ಗೆ ಮದುವೆ ಆಗಿದೆಯಾ‌..???" ಆಶ್ಚರ್ಯದಿಂದ ಕೇಳಿದ‌.

"ಹೌದು ಸರ್ ಮದುವೆಯಾಗಿ ಎರಡೂವರೆ ವರ್ಷದ ಮಗಳಿದ್ದಾಳೆ‌. ಆದರೆ ಗಂಡ ಮಾತ್ರ ಇಲ್ಲ‌" ನೋವಿನಿಂದ ‌ಹೇಳಿಕೊಂಡರೂ ಅದನ್ನು ತೋರ್ಪಡಿಸಲಿಲ್ಲ ಅವಳು. "ವಾಟ್‌..!??" ಆಘಾತದಿಂದ ಕೇಳಿದ.

"ಹೌದು ಇನ್ನೂ ಸರಿಯಾಗಿ ಹೇಳಬೇಕಿದ್ದರೆ ವಿಧವೆ‌‌. ಮಗಳು ಹುಟ್ಟಿದ ಒಂದು ವರ್ಷಕ್ಕೆ ಗಂಡನನ್ನು ಕಳೆದುಕೊಂಡೆ‌. ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ ಅಂತ ಖಿನ್ನತೆಗೆ ಒಳಗಾಗಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ರು‌. ಅನುಭವಕ್ಕೇನು ಸರ್ ನಿಮಗಿಂತ ಎರಡರಷ್ಟು ನೋವು ಕಂಡಿದ್ದೇನೆ‌. ತಂದೆಯಿಲ್ಲದೇ ಮಗಳನ್ನು ಸಾಕುವ ಕಷ್ಟ, ಗಂಡನಿಲ್ಲದೇ ಸಮಾಜದಲ್ಲಿ ಬಾಳುವ ಕಷ್ಟ‌, ಮದುವೆಯಾಗಿ ತಾಯಿ ಮನೆಯಲ್ಲಿ ಅವರಿಗೆ ಹೊರೆಯಾಗಿರುವ ಕಷ್ಟ..!! ಹ್ಞ್ಂ ಹಣೆಬರಹ ಅಷ್ಟೇ" ಎಂದವಳು ಅನುಭವಿಸುತ್ತಿರುವ ನೋವನ್ನು ಅವಳ ಮಾತೇ ಹೇಳಿತ್ತು‌.

"ನಿಜವಾಗಿಯೂ ನಾನು ಊಹೆ ಕೂಡಾ ಮಾಡಿರ್ಲಿಲ್ಲ‌..!! ಒಬ್ಬ ಹೆಣ್ಣಾಗಿ ಇಂತಹ ಸಂದಿಗ್ಧ ಸ್ಥಿತಿಯಲ್ಲೂ ನೀನು ಜೀವನ ನಡೆಸುತ್ತಿರುವ ರೀತಿ ಮೆಚ್ಚುವಂತದ್ದೇ. ಆದ್ರೆ ನೀನು ಇನ್ನೊಂದು ಮದುವೆಯಾಗಬಹುದಿತ್ತಲ್ಲ‌..??" ಕುತೂಹಲದಿಂದ ಪ್ರಶ್ನಿಸಿದ.
"ಆಗಬಹುದಿತ್ತು ಸರ್‌‌..!! ನನ್ನನ್ನು ಸ್ವೀಕರಿಸಲು ಕೆಲವರು ಮುಂದೆ ಬಂದರು‌, ಆದ್ರೆ ನನ್ನ ಮಗುವನ್ನೂ ಜೊತೆಯಾಗಿ ಸ್ವೀಕರಿಸಲು ಯಾರೂ ತಯಾರಿರಲಿಲ್ಲ ಅಷ್ಟೇ‌. ಹೇಳಿದೆ ಅಲ್ವಾ ಎಲ್ಲಾ ನನ್ನ ಹಣೆಬರಹ..!! ಈಗ ಗೊತ್ತಾಯ್ತಾ‌ ನಿಮ್ಮದು ಹೆಣ್ಣಿನ ಮನಸ್ಸು ಅಂತ ಯಾಕೆ ಹೇಳಿದೆ ಅಂತ‌..!?? ನೋವಾಗಿದ್ರೆ ದಯವಿಟ್ಟು ಕ್ಷಮಿಸಿ. ನನ್ನ ಜೀವನವನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಇನ್ನಾದರೂ ಬದಲಾಗಿ‌, ಹಳೆ ನೆನಪುಗಳನ್ನೇ ಬಲವಾಗಿಸಿ ಹೊಸ ಬದುಕಿನ ಕಡೆಗೆ ಸಾಗಿ. ಆಲ್ ದ ಬೆಸ್ಟ್" ಎಂದವಳು ತಾಯಿ ಹಾಗೂ ಮಗಳ ಜೊತೆ ದೇವಸ್ಥಾನದಿಂದ ಹೊರ ನಡೆದಳು‌.

ಇದಾಗಿ ಎರಡು ದಿನ ಕಳೆದಿತ್ತು. ತನು‌ ಎಂದಿನಂತೆ ಕಾಲೇಜಿಗೆ ಹೊರಟವಳು ಮನೆಯಿಂದ ಹೊರಟಾಗ ಅಚ್ಚರಿ ಕಾದಿತ್ತು. ಹೇಮಂತ್ ತನ್ನ ತಾಯಿಯ ಜೊತೆ ಬಂದಿದ್ದ‌. "ಸರ್ ನೀವು‌..!??" ಅಚ್ಚರಿಯಿಂದ ನೋಡಿ ಮನೆಯೊಳಗೆ ಸ್ವಾಗತಿಸಿದಳು‌.

"ನಿನ್ನ ಕಷ್ಟಗಳ ಮುಂದೆ ನನ್ನ ನೋವು ಏನೂ ಅಲ್ಲ‌. ಬದುಕಿನ ನೋವಿಗೆ, ಕುಗ್ಗದೇ ಜೀವನವನ್ನು ಛಲದಿಂದ ಎದುರಿಸುತ್ತಿರುವ ನೀನು ನಿಜವಾಗಿಯೂ ಎಲ್ಲರಿಗೂ ಆದರ್ಶಳು‌. ನಿನ್ನ ಮೊದಲ ಭೇಟಿಯಲ್ಲೇ ನನ್ನ ಮಡದಿಯನ್ನು ನಿನ್ನಲ್ಲಿ ಕಂಡಿದ್ದೆ‌. ನೀನು ಅವಿವಾಹಿತೆ ಎಂದು ಭಾವಿಸಿದ್ದ ನಾನು ನಿನ್ನಿಂದ ದೂರವಾಗಲು ಯೋಚಿಸಿ ಕೆಲಸ ಬಿಟ್ಟೆ‌. ಆದರೆ‌ ಒಳ್ಳೆಯ ಸ್ಥಳದಲ್ಲೇ ನಿನ್ನ ಜೀವನದ ಬಗ್ಗೆ ನೀನೇ ಹೇಳಿದೆ‌. ನನ್ನ ಬದುಕು ಕತ್ತಲಿನಿಂದ ತುಂಬಿದೆ ಅಂದುಕೊಂಡಿದ್ದೆ‌. ಆದರೆ ನಿನ್ನ ಬದುಕಿನ ಅಂಧಕಾರ ಮತ್ತಷ್ಟು ಕ್ರೂರವಾಗಿ ಇದೆ. ನಿನಗೆ ಗಂಡನಾಗಿ, ನಿನ್ನ ಮಗಳಿಗೆ ತಂದೆಯಾಗಿ ನಿನ್ನ ಅಂಧಕಾರ ತುಂಬಿದ ಬದುಕಿಗೆ‌, ನಾನು ಬೆಳಕಿನ ರೇಖೆಯಾಗಬೇಕು ಅಂದುಕೊಂಡಿದ್ದೇನೆ. ಪ್ರೀತಿಯ‌ ಆಸರೆಯಾಗಬೇಕು ಅಂದುಕೊಂಡಿದ್ದೇನೆ. ನಿನ್ನ ಒಪ್ಪಿಗೆಯಿದ್ದರೆ..!???" ತನುವನ್ನು‌ ಮದುವೆಯಾಗಲು ನಿರ್ಧರಿಸಿ, ಅವಳ ಪ್ರತಿಕ್ರಿಯೆಯನ್ನು ಎದುರು ನೋಡಿದ.

ತನುವಿನ ಕಣ್ಣಂಚಲ್ಲಿ ಮೂಡಿದ ಆನಂದಭಾಷ್ಪ ಹೇಮಂತ್ ನ ಮಾತುಗಳಿಗೆ ಹಸಿರುನಿಶಾನೆಯಾಗಿತ್ತು.

-ಶುಭಂ-

ರಮ್ಯ ನೆಕ್ಕರೆಕಾಡು

ರಮ್ಯ ನೆಕ್ಕರೆಕಾಡು ಮೂಲತಃ ಮಂಗಳೂರಿನವರು.  ಇವರು ನೆಕ್ಕರೆಕಾಡಿನಲ್ಲಿರುವ ನೆಡ್ಲೆ‌ ಈಶ್ವರ ಭಟ್ ಹಾಗೂ ನಳಿನಿ ದಂಪತಿಯ ಪುತ್ರಿ ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜೀವ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ.

More About Author