Poem

ಪ್ರೇಮವೆಂದರೆ....

ಪ್ರೇಮವೆಂದರೆ...
ಅಕ್ಕ ಮಹಾದೇವಿಗೆ ಚೆನ್ನಮಲ್ಲಿಕಾರ್ಜುನ
ಮೀರಾ ಬಾಯಿಗೆ ಶ್ರೀ ಕೃಷ್ಣ ಪರಮಾತ್ಮ
ಅದೆಂಥ ಅಪೂರ್ವ ಲೀಲೆ
ಪ್ರೀತಿಯ ಸಕಲರೂಪ, 'ಹೆಣ್ಣು'
ಬಯಸಿದ್ದೆಲ್ಲಾ ದೈವದಿಂದಲೇ!

ಪವಿತ್ರ, ಪ್ರಾಮಾಣಿಕ,
ನಿಶ್ಕಲ್ಮಶ, ನಿಸ್ವಾರ್ಥ,
ದೈವೀ ಸ್ವರೂಪದ ಹೋಲಿಕೆಗೆ
ಲೌಕಿಕ ಲಜ್ಜೆ ಏತಕೆ?
ಲೋಪ-ದೋಷಗಳಿಲ್ಲದ
ಅದೊಂದು ಅಮರ ಲವಲವಿಕೆ!!

ಒಳಿತಿಗೆ ಒಡೆಯನಾಗಿ
ಪ್ರಣಯದಲೂ ಪೂಜಿಸಿ
ಸಂತಸದಲಿ‌ ಸಂಭ್ರಮಿಸುವ
ಮನದಾಸೆಗಳನು ಮನ್ನಿಸುವ
ಅಮೂರ್ತ ಅನುಸಂಧಾನಕೆ
ಸಾಮಾಜಿಕ ಅಪ್ಪಣೆ ಬೇಕೇ?

ಒಲಿದಾಗ ದೈವ ಭಕುತಿ
ಸಿಗುವುದಾದರೆ ಮುಕುತಿ,
ಪ್ರೇಮದಮೃತ ಸವಿಯಲು
ಸಂಸಾರಿಕ ಸಂಕಲೆ ಏತಕೆ?
ಸಾಕಲ್ಲವೇ ಕಲ್ಪನೆಗಳ ಕಾಯವೇ!

ಇದ್ದರೂ ಇಲ್ಲದಂತೆ
ಬಿಟ್ಟರೂ ಬಿಡದಂತೆ
ಬಯಸುವ ಬಯಕೆಯೇ ಶ್ರೇಷ್ಠ!
ಅದೆಂಥ ಶಕ್ತಿ, ಅದ್ಯಾವ ಒಮ್ಮತಿ?
ಸಕಲ ಸಂಶಯಗಳನ್ನು ಮೆಟ್ಟಿ
ದೈವದ ಸನಿಹ ಸೇರುವ ಬಾಳೇ ಉತ್ಕೃಷ್ಟ!

ಸುಖ-ದುಃಖಗಳನು ಜಯಿಸಿ
ನೋವೆಲ್ಲಾ ನಲಿವಾಗಿಸಿ
ಪ್ರಶಾಂತ ಸಾಗರದಂತೆ
ದೈವದಲಿ ಲೀನನಾದಾಗ
ಅಮರ್ತ್ಯ ಅವಳ ಪ್ರೇಮದ ಹೊನ್ನು
ಹೆಣ್ಣಿನ ಶ್ರದ್ಧೆಗೆ ಶರಣು ಶರಣು!

- ಫರ್ಹಾನಾಜ್ ಮಸ್ಕಿ

ಫರ್ಹಾನಾಜ್ ಮಸ್ಕಿ

ಕವಯತ್ರಿ ಫರ್ಹಾನಾಜ್ ಮಸ್ಕಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಪ್ರಸ್ತುತ , ಹುಳಿಯಾರಿನ ಬಿಎಂಎಸ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ. ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಚೊಚ್ಚಲ ಕೃತಿ ಯೋಜನೆ ಅಡಿ, ಅವರ ‘ಮೌನ ಮನದ ಮಾತುಗಳು ’ (ಕವನ ಸಂಕಲನ)  ಪ್ರಕಟಗೊಂಡಿದೆ. ವಿದ್ಯಾರ್ಥಿ ಜೀವನದಿಂದಲೇ ಆಲ್ ಇಂಡಿಯಾ ರೇಡಿಯೋ ದಲ್ಲಿ ಕವನ, ಲೇಖನ, ರೆಕಾರ್ಡಿಂಗ್ ಮತ್ತು ಅಗ್ನಿ ಅಸ್ತ್ರ ಪತ್ರಿಕೆಯಲ್ಲೂ ಅಂಕಣಗಾರ್ತಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಹಲವು ಆನ್‌ಲೈನ್‌ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. 

ಕೃತಿಗಳು: ಮೌನ ಮನದ ಮಾತುಗಳು (ಕವನ ಸಂಕಲನ)

More About Author