Poem

ರುಡಾಲಿಯ ಸ್ವಗತ

ಉರಿದ ಊದುಕಡ್ದಿ ಹೆಣೆದ ಹೊಗೆಯ ತೆರೆಹಿಂದೆ
ಮಿಣುಕುವ ಒಂಟಿಬತ್ತಿಯ ದೀಪ.
ನಡುಗಿ ಅತ್ತಿತ್ತ ವಾಲಿ ತೋರಿದ
ಅಂತಿಮ ಸತ್ಯದ ದರ್ಶನ - ನಿಶ್ಚಲವೇಷ್ಟಿತ ಕಳೇಬರ.

ಬಾಡಿಗೆಗೆ ತಂದ ಕಣ್ಣೀರಿನೊಡನೆ
ಆತ್ಮಕ್ಕೊಂದು ವಿದಾಯದ ಪ್ರಹಸನ.
ಯಾರವನು? ಯಾರವಳು, ಯಾರದು,
ಇವರ ಬಿಟ್ಟು ಹೋದವರು? ಇಲ್ಲಿದ್ದು ಎದ್ದು ಹೋದವರು?

ಅವರಿಗಾಗಿ ಇವರಲ್ಲಿಲ್ಲ ಕಣ್ಣೊಳಗೊಂದು ಹನಿ!
ಕೋಡಿಯೊಡೆದಿಲ್ಲ ವಿಲಾಪ, ನಡುಗಲಿಲ್ಲ ಎದೆ.
ಎಲ್ಲೋ ಒಂದೆರಡು ಬಿಕ್ಕು, ಸಾಕೇ? ಸುತ್ತ ಮುಕುರಿದ
ಮುಖಗಳಲ್ಲಷ್ಟು ಕರುಣೆ,ಮುಗಿದ ಕತೆಯ ಮಾತು.

ಹೋ!ನನಗಿಲ್ಲ ನಾಚಿಕೆ ಎದೆಹೊಡೆದು ಗುದ್ದಿ
ಭೋರಾಡಿ- ಪಂಚಮ, ಷಡ್ಜ, ತಾರಕಗಳೆಲ್ಲ ಇಳಿದ
ಘೋರ ಅಳು, ಸತ್ತ ಎಮ್ಮೆಗೆ ಸೇರು ಹಾಲು!
ಸದ್ಗುಣಗಾಥೆ ಪ್ರವಾಹ, ಹೊಗಳಿದಷ್ಟೂ ಮರುಕದೆರೆ,
ತಪ್ಪಿಲ್ಲ ಏನೂ, ಇದ್ದದ್ದೇ ಇಳಿದು ಬಂದ ಶೋಕಾವತರಣ.

ಎತ್ತೆತ್ತಿ ಲಕ್ಷಣಗಳ ಗುಡ್ಡದ ನೆತ್ತಿಗೊಯ್ದು
ಬಾರದ ದಾರಿ ನಡೆದ ಜೀವದ ಚರಮ ಸ್ತುತಿಗಾನ.
ನಾಲಿಗೆ ತು೦ಬಿದ ಜೊಲ್ಲು ಒತ್ತಿ ಒಳಗಿಳಿಸಿ
ಕಣ್ಣೀರ ಜಲಪಾತ ಧುಮ್ಮಿಕ್ಕಿದ ನಟನೆ.
ಓಯ್! ಚoದ ಅಳುವಳಲ್ಲ ತರಪೇತು ಗಟ್ಟಿ ಇದೆ!

ಬೊಂಬು, ಚಾಪೆ, ಮಡಕೆ, ಬೂದಿ
ದಿನದಿನದ ಊಟ! ಅದೇ ಜೀವದಾಟ. ಅತ್ತು ದಣಿದು
ಸೋತ ಮನ ಇನ್ನಳಲಾರೆ ಅಂತಳುವಾಗ
ಅದಕ್ಕೊಂದು ತಪರಾಕಿ! ನಾಳೆ ಬೇಡವೆ ಹೊಟ್ಟೆಗೆ ಹಿಟ್ಟು?

ಅವರಳದಿದ್ದರೆ ನಾನಳಬೇಕು
ಮಸಣದ ಮನೆದೀಪದುರಿ ನನ್ನ ಮನೆದೀಪದ ದೊಂದಿ!
ದಿಟ್ಟಿನೆಟ್ಟು ದೂರ ಚಿತ್ತ, ಒಸಗೆ ಬ೦ತೆ? ಸಾವಿನೊಸಗೆ
ಅಲ್ಲ ನನ್ನ ಅನ್ನದೊಸಗೆ.

ಕಾದು ಚಾತಕ ಸಾವ ಸುದ್ದಿಗೆ
ಅಣಿಮಾಡಬೇಕು ದನಿಪೆಟ್ಟಿಗೆ! ರಾಗ ಕಟ್ಟಿ
ಹರಿಸಬೇಕು ಅವರ ನೋವಿನ ನನ್ನ ಹಾಡು,
ಏಕೆಂದರೆ,
ಬುದ್ಧನಿಲ್ಲ ಅಲ್ಲಿ- ಸಾಸಿವೆಯ ಕತೆ ಹೇಳಲು!

ಜಯಶ್ರೀ ದೇಶಪಾಂಡೆ

 

ವಿಡಿಯೋ
ವಿಡಿಯೋ

ಜಯಶ್ರೀ ದೇಶಪಾಂಡೆ

ಲೇಖಕಿ ಜಯಶ್ರೀ ದೇಶಪಾಂಡೆ  ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ. 

ಕೃತಿಗಳು : ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ, ಸ್ಥವಿರ ಜಂಗಮಗಳಾಚೆ ಹಾಗೂ ಉತ್ತರಾರ್ಧ (ಕಥಾ ಸಂಕಲನಗಳು), ಯತ್ಕಿಂಚಿತ್ (ಕವನ ಸಂಕಲನ),ಮಾಯಿ   ಕೆಂದಾಯಿ  ಸ್ಮೃತಿ ಲಹರಿ (ಲಲಿತ ಪ್ರಬಂಧ ಸಂಕಲನ)  ಹೌದದ್ದು ಅಲ್ಲ‌ ಅಲ್ಲದ್ದು ಹೌದು (ಹಾಸ್ಯಲೇಖನ ಸಂಕಲನ), ಕಾಲಿಂದಿ (ಮಯೂರ), ಕೆಂಪು ಹಳದಿ ಹಸಿರು (ತರಂಗ), ದೂರ ದಾರಿಯ ತೀರ (ತರಂಗ) , ಬೇವು‌ (ವಿಜಯ ಕರ್ನಾಟಕ),  ಚಕ್ರವಾತ (ನೂತನ), ಸರಸ್ವತಿ ಕಾಯದ ದಿನವಿಲ್ಲ. (ಉದಯವಾಣಿ)   ಇವು ಧಾರಾವಾಹಿಯಾಗಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿತ ಕಾದಂಬರಿಗಳು.:ಪ್ರಥಮ್ ಬುಕ್ಸ್ ಸಂಸ್ಥೆಗಾಗಿ ಸ್ವಂತ  ಕಥೆಗಳಲ್ಲದೆ ಮರಾಠೀ ಮತ್ತು ಇಂಗ್ಲಿಷ್ಶ್ ಭಾಷೆಗಳಿಂದ ಕನ್ನಡಕ್ಕೆ  ಭಾವಾನುವಾದ ಮಾಡಿದ ನಲವತ್ತರಷ್ಟು ಪುಸ್ತಕಗಳು  ಪ್ರಕಟವಾಗಿವೆ. 

ಪ್ರಶಸ್ತಿ-ಗೌರವ: ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ , ದೂರದರ್ಶನ, ಉದಯ ಟಿವಿ  ವಾಹಿನಿಗಳಲ್ಲಿ  ಸಂದರ್ಶನ, *ಅಕ್ಷರ ಪ್ರತಿಷ್ಠಾನದ ಮಕ್ಕಳ  "ಕಲಿಕಾ ಏಣಿ" ಯೋಜನೆಯ ಮಾರ್ಗದರ್ಶಕರಾಗಿದ್ದರು.  ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ. (ಯತ್ಕಿಂಚಿತ್- ಕವನ ಸಂಕಲನಕ್ಕೆ ),  ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ 'ಸುಧಾ ಮೂರ್ತಿ ತ್ರಿವೇಣಿ ಸಾಹಿತ್ಯ ಪ್ರಶಸ್ತಿ'  (ಸ್ಥವಿರ ಜಂಗಮಗಳಾಚೆ' ಕಥಾ ಸಂಕಲನಕ್ಕೆ),  ಅತ್ತಿಮಬ್ಬೆ ಪ್ರಶಸ್ತಿ.  (ಹೌದದ್ದು ಅಲ್ಲ ಅಲ್ಲದ್ದು ಹೌದು- ಲಲಿತ ಪ್ರಬಂಧ ಸಂಕಲನಕ್ಕೆ), ಗೋರೂರು ಪ್ರತಿಷ್ಠಾನದ 'ಶ್ರೇಷ್ಠ ಪುಸ್ತಕ'  ಪ್ರಶಸ್ತಿ.( ಮೂರನೆಯ ಹೆಜ್ಜೆ- -ಕಥಾಸಂಕಲನಕ್ಕೆ), ರಾಜ್ಯಮಟ್ಟದ ಕಾದಂಬರಿ ವಿಮರ್ಶಾ ಪ್ರಶಸ್ತಿ.  ಅತ್ತಿಮಬ್ಬೆ ಪ್ರತಿಷ್ಠಾನದಿಂದ.  (ಬೆಳಗಾಂವಕರ್ ನಾಸು- ಕಾದಂಬರಿ‌ ಸುನಂದಾ -  ವಿಮರ್ಶೆ),  ದಿ. ಸಿ ಎನ್ ಜಯಲಕ್ಷ್ಮೀದೇವಿ (ಕಥಾಪ್ರಶಸ್ತಿ) 
         

 

More About Author