Poem

ಸಾಮರಸ್ಯದ ನೇತಾರ 

ಮಹಾಲಿಂಗಪುರವಾಸಿ ಕನ್ನಡದ ವಾಕ್ಚತುರ
ಸೂಫಿ ಸಂತರನು ನೆನೆಯಬೇಕು
ಭಾವೈಕ್ಯ ಬೆಸೆವಂಥ ಸಾಮರಸ್ಯದ ಹರಿಕಾರ
ಇಬ್ರಾಹಿಂ ಸುತಾರಗೆ ನಮಿಸಬೇಕು

ಅಲ್ಪವಿದ್ಯಾಭ್ಯಾಸ ಮೇರು ಜ್ಞಾನದ ಶಿಖರ
ಕರುನಾಡ ಕಬೀರರೆಮ್ಮ ಹೆಮ್ಮೆ
ಧರ್ಮ ಸೂಕ್ಷ್ಮವನರಿತು ಪ್ರವಚನದಿ ಹೊಸೆದು
ಮಾನವತೆ ಬೋಧಿಸಿದ ಕೇಳಿರೊಮ್ಮೆ

ನೇಕಾರ ವೃತ್ತಿಯಲಿ ಬಾಳ ಪಯಣವ ಗೈದು
ಸರ್ವಧರ್ಮಗಳಲ್ಲಿ ಬಂಧ ಬೆಸೆದು
ತತ್ವಪದಗಳ ಪಾಡಿ ಬಾಳ ಸತ್ಯವನೊರೆದ
ಮರ್ಮವೊಂದೇ ಕೇಳಿ ಮನವ ತೆರೆದು

ಭಜನೆ ಪ್ರವಚನವಿರಲಿ ಸಂವಾದವೇ ಇರಲಿ
ವೇದ ಶಾಸ್ತ್ರದ ಶ್ಲೋಕ ನಾಲಿಗೆಯಲಿ
ವಚನಗಳ ಉಚ್ಚರಿಸಿ ಸಚ್ಚರಿತ ಸಂಸ್ಕಾರ
ಬಿತ್ತುವರು ಕೇಳುಗರ ಹೃದಯದಲ್ಲಿ..

ಸಾಮರಸ್ಯದ ಕೊಂಡಿ ಸೌಹಾರ್ದತೆಯ ದೂತ
ಕೃಷ್ಣೆಯ ನಾಡಿನ ಪದ್ಮಶ್ರೀ ಪುರಸ್ಕೃತ
ಮಾತಿನ ಮುತ್ತನು ಉದುರಿಸಿ ಪೋಣಿಸಿ
ಒಂದೆಂಬ ನೀತಿಯ ಬೋಧಿಸಿದರೀತ..

- ಹರಿನರಸಿಂಹ ಉಪಾಧ್ಯಾಯ

ಹರಿ ನರಸಿಂಹ ಉಪಾಧ್ಯಾಯ

ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಿವಾಸಿ ಹರಿ ನರಸಿಂಹ ಉಪಾಧ್ಯಾಯ ಅವರ ತಂದೆ ಪಿ ನಾರಾಯಣ ಉಪಾಧ್ಯಾಯ ಹಾಗೂ ತಾಯಿ ಕೆ ಕಮಲಾಕ್ಷಿ.ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ವಾಸವಾಗಿದ್ದು ಸುಮಾರು 24 ವರ್ಷಗಳಿಂದಲೂ ಮಿತವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾವಗೀತೆ, ಕವನ, ಕಥೆ,ಲೇಖನ, ಗಝಲ್, ಮುಕ್ತಕ, ಛಂದೋಬದ್ಧ ಷಟ್ಪದಿ ಮುಂತಾದ ರಚನೆಗಳಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ.

ಬಿಡುಗಡೆಗೊಂಡ ಕವನ ಸಂಕಲನ : ಭಾವಶರಧಿ (2020)

2020 ರಲ್ಲಿ ನವಪರ್ವ ಫೌಂಡೇಶನ್ ನಿಂದ "ನವಪರ್ವ ಸವ್ಯಸಾಚಿ" ಪ್ರಶಸ್ತಿ, ಚಂದನ ಸಾಹಿತ್ಯ ವೇದಿಕೆಯಿಂದ " ಚಂದನ ಸಾಹಿತ್ಯ ರತ್ನ" ಪ್ರಶಸ್ತಿ, 2021 ರ ಬೆಳಕು ಸಾಹಿತ್ಯ ಸಮ್ಮೇಳನದಲ್ಲಿ " ಬಸವಶ್ರೀ " ಪ್ರಶಸ್ತಿ.

More About Author