Poem

ಸಂತೈಸಲೆಂದೆ ಜಿನುಗುವ ಉಸಿರು

ಕವಿ ಆರನಕಟ್ಟೆ ರಂಗನಾಥ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆರನಕಟ್ಟೆಯವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಿಂದ ‘ಕನ್ನಡ ಮತ್ತು ತಮಿಳು ದಲಿತ ಕತೆಗಳಲ್ಲಿ ಪ್ರತಿಭಟನೆ’ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದು 2016ನೇ ಸಾಲಿನ ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಅವರ ‘ಸಂತೈಸಲೆಂದೆ ಜಿನುಗುವ ಉಸಿರು’ ಕವಿತೆ ಇಲ್ಲಿದೆ.

ನೀರಡಿಕೆಗೆ ಕೊರಳೊಡ್ಡಿದ ಕರುಳಿಗೆ

ಬೊಗಸೆಗೆ ಸುರಿವ ಗುಟುಕು ನೀರನು

ಆಲಂಗಿಸಿ ಹನಿ ಚೆಲ್ಲದಂತೆ

ಕೈ ಜೋಡಿಸಿ ಗಂಟಲೊಳಗಿಳಿಸುವ

ನಡುವಿನ ಬೆವರು

ಅಂಗಾಲಿನ ಆಸರೆಗೆ ಜಾರಿ

ತುದಿಯಿರದ ಬೇರಿಗೆ ಹನಿದು

ನರ ನಾಡಿಗೆ ಉಸಿರುಣಿಸಿದೆ

 

 

ನೂಲುವ ನಾರಿಗೆ ರಕುತವು

ನಾಡಿಯೊಳಗೆ ಸಂಚರಿಸಿ

ಹನಿದ ಹನಿ ಹನಿಯು

ತಳವೂರಿದ ತಾಯಿಬೇರಾಗಿ

ಜಿನುಗುವ ಬೆವರಿಗೆ

ಮಡಿದಿರುವ ನಾಡಿಗೆ

ತಬ್ಬಿ ತಲ್ಲಣಿಸಿರುವ ಕಳ್ಳುಬಳ್ಳಿಗೆ

ಜೀವದಾನ ನೀಡಿದೆ

 

 

ಧರೆಯ ಮೀಟಿದ ಮೊಳಕೆಗೆ

ಕೊರಳ ದನಿಯಿಲ್ಲ

ಬಾಡಿದ ಬಳ್ಳಿಗೆ ನೆರಳಾಗಿರಲು

ಉಸಿರೇ ಆವಿಯಾಗಿ

ಮರಳಿ ಹನಿದಿರಲು

ಕಾಮನಬಿಲ್ಲಿಗೆ ಧಾರೆಯೆರೆದ

ಬಣ್ಣಗಳು ಬಲಹೀನವಾಗಿರಲು

ಬಸಿದ ಬೆವರೆಲ್ಲವು ಮೋಡ ಕಟ್ಟಿಲ್ಲ

 

 

ರಾಸುಗಳ ಗೊರಸಿನಲ್ಲಿ

ಗೋಧೂಳಿಯ ಮಣ್ಣಿಲ್ಲ

ಕೆಚ್ಚಲಿನಲ್ಲಿ ಕಂಪನಿಗಳ ಹೆಸರು

ಅತ್ತು ಕರೆವ ಹಾಲುಗಲ್ಲದ ಕಂದನಿಗಾಗಿ

ಫ್ರಿಜ್ಜಿನಲ್ಲಿನ ಹಾಲು ಕುದಿಯುತ್ತಿದೆ

ಬೆವರೆಲ್ಲವು ಮಿನರಲ್ಲುಗಳಾಗಿ

ಕೊಳ್ಳುವವರಿಗೆ ಮಾತ್ರ ದಕ್ಕುತ್ತವೆ

 

ಹೊಲ ಗದ್ದೆಗಳಲ್ಲಿ

ನೀರೋಡುವ ಜಾಡಿನಲ್ಲಿ

ಮುಳುಗಿದ ಮೊಣಕಾಲಿನ

ಬೊಕ್ಕೆಯೆದ್ದ ಅಡಿಪಾದಕ್ಕೆ

ಮಿಡಿವ ಕಣ್ಣ ಹನಿ

ಅಂಗಾಲಿಗೆ ಜಾರಿ ಬೊಬ್ಬೆಗಳ ಸವರಿ

ಸಂತೈಸಲೆಂದೇ ಜಿನುಗುತ್ತಿದೆ ಜೀವಾಳವಾಗಿ

ಆರನಕಟ್ಟೆ ರಂಗನಾಥ

ಕವಿ ಆರನಕಟ್ಟೆ ರಂಗನಾಥ ಅವರು 1985 ಜುಲೈ 15ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆರನಕಟ್ಟೆಯಲ್ಲಿ ಜನಿಸಿದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಿಂದ ‘ಕನ್ನಡ ಮತ್ತು ತಮಿಳು ದಲಿತ ಕತೆಗಳಲ್ಲಿ ಪ್ರತಿಭಟನೆ’ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಕೊಪ್ಪಳ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ವೃತ್ತಿ ಆರಂಭ.
ಪ್ರಜಾವಾಣಿ, ವಿಜಯ ಕರ್ನಾಟಕ, ಸಂವಾದ, ಅನಿಕೇತನ( ಸಾ.ಅಕಾಡೆಮಿ ಪತ್ರಿಕೆ), ಅವಧಿ, ಮೊದಲಾದ ಪತ್ರಿಕೆಗಳಲ್ಲಿ ಇವರ ಪದ್ಯಗಳು ಪ್ರಕಟಣೆ ಕಂಡಿವೆ. ತಮಿಳಿನಿಂದ ಕನ್ನಡಕ್ಕೆ ಅನೇಕ ಲೇಖನಗಳು, ಕವಿತೆಗಳನ್ನು ಅನುವಾದಿಸಿದ್ದು ನಾಡಿನ ಹಲವು ಪತ್ರಿಕೆ ಮತ್ತು ವೆಬ್ಸೈಟ್ ಗಳಲ್ಲಿ ಪ್ರಕಟಗೊಂಡಿವೆ. 2016ನೇ ಸಾಲಿನ ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.

More About Author