Poem

ಸಿಡಿಲು

ತಂಗಾಳಿ ಬೀಸಿ ನನ್ನ ಮನದ ನೋವುಗಳೆಲ್ಲವನ್ನೂ ಹೊತ್ತೊಯ್ಯಬಾರದೇ ಎನಿಸಿತು
ಗಂಗಾಳಿಗೆ ಮಾಡಿದ ಮೋಸಕ್ಕೆ ಪ್ರತಿಫಲವು ಚಿತ್ತವಿಕಲವಾಗಿ ಬರಬಾರದೇ ಎನಿಸಿತು

ರಂಗು ರಂಗಿನ ಕನಸು ಕಂಡಿದ್ದ ಚೆಲುವೆ ಪೆದ್ದಿಯಾದರೂ ಮುದ್ದುಮುಖದಲ್ಲಿ ನಗುವಿತ್ತು
ಮಂಗಳನ್ನಾಗಿಸಿ ನಾನವಳನ್ನು ಕಿತ್ತು ನನ್ನಡಿಯಾಳಾಗಿ ಮಾಡಿಕೊಂಡಿರಬಹುದೇ ಎನಿಸಿತು

ಬಾ ಎಂದು ಕರೆದು ಕಲಿಸಿದವರ ವಿರುದ್ಧ ದ್ವೇಷವದೇಕೆ ನನ್ನ ಮಂಡೆ ಮೆಲ್ಲುತಿದೆ ತಿಳಿಯೆ
ಥೂ ನಿನ್ನ ಜನ್ಮಕಿಷ್ಟು ಬೆಂಕಿ ಇರಲೆಂದು ಎಲೆಯಡಿಕೆಯನಗಿದು ತುಪ್ಪಬಾರದೇ ಎನಿಸಿತು

ರಥಬೀದಿಯಲ್ಲಿ ಹೆಣವೆಷ್ಟು ಉರುಳಿರೆ ಮಸಣದಂತೆ ಹೂಳುವರೇನು ದಡ್ಡನೇ ನಾನು.
ತಥಾಕಥಿತ ಹೊಗಳಿಕೆಗೆ ಬಲಿಯಾಗಿ ಬಳಗದೊಳು ಬಿದ್ದು ಬಲಿಯಾಗಬಾರದೇ ಎನಿಸಿತು

ಹೊನ್ನಬೀದಿಯ ತುಂಬ ನನ್ನದೇ ಶವಯಾತ್ರೆ ಹೊರಟರೂ ಹೂಳುವುದು ಮಸಣದಲಿ
ಮಸಣಕೂ ಮನೆಗೂ ಭಿನ್ನತೆಯನರಿಯದವರ ಕಂಡು ಸಿಡಿಲ ನಗಬಾರದೇ ಎನಿಸಿತು

ವೈಲೇಶ್ ಪಿ ಎಸ್ ಕೊಡಗು

ವೈಲೇಶ್ ಪಿ. ಎಸ್

ಲೇಖಕ ವೈಲೇಶ್ ಪಿ. ಎಸ್ ಅವರು ಮೂಲತಃ ಕೊಡಗಿನವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರಾಗಿದ್ದಾರೆ. 

 ಕೃತಿಗಳು: ಅಮ್ಮ ನಿನಗಾಗಿ (2018) , ಕಣ್ಮರೆಯಾದ ಹಳ್ಳಿ(2020), ಬೊಮ್ಮಲಿಂಗನ ಸಗ್ಗ(2021) (ಕವನಸಂಕಲನ)

More About Author