Story

ಸುರಗಿ

‘ಏನನ್ನು ಅಂದುಕೊಂಡಿರಲಿಲ್ಲವೋ ಏನು ಆಗಬಾರದಿತ್ತೋ ಯಾವುದನ್ನು ಊಹಿಸಿಯೂ ಇರಲಿಲ್ಲವೋ ಅದೇ ಆಗ್ತಿದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತೋ ಅದನ್ನು ಬಿಟ್ಟು ಬೇಡದ್ದನ್ನು ಆಯ್ಕೆ ಮಾಡಿಕೊಂಡೆನಾ? ಬೇಡದ್ದರ ಆಕರ್ಷಣೆಯಲ್ಲಿ ಬೇಕಾದದ್ದು ಮಂಕಾಗಿ ಹೋಯ್ತಾ?’ ಅವಳ ಮನಸ್ಸಿನಲ್ಲಿ ಈ ಮಾತುಗಳು. ಗ್ಯಾಸಿನ ಬೆಂಕಿಯನ್ನು ಹೊತ್ತಿಸಿದಳು. ಅದರ ಮೇಲೆ ಸಣ್ಣದಾದ ಟೀ ಮಾಡುವ ಹಿಡಿಯಿರುವ ಪಾತ್ರೆಯನ್ನು ಇಟ್ಟಳು. ಎರಡು ಗ್ಲಾಸಿನಷ್ಟು ನೀರನ್ನು ಅದರೊಳಗೆ ಸುರುವಿದಳು. ಟೀ ಡಬ್ಬಿಯಿಂದ ಟೀ ಪುಡಿಯನ್ನು ಹಾಕಲು ಅದರ ಮುಚ್ಚಳ ತೆರೆದಳು. ಒಂದು ಚಮಚದಷ್ಟು ನೀರನ್ನು ನೀರು ಕುದಿಯುವಾಗ ಹಾಕಿದಳು. ಗ್ಯಾಸ್ ಒಲೆಯ ಸ್ವಿಚ್ಚನ್ನು ಆಫ್ ಮಾಡಿದಳು. ಟೀಯ ಪಾತ್ರೆಗೆ ಒಂದು ಮುಚ್ಚಳವನ್ನು ತೆಗೆದುಕೊಂಡು ಮುಚ್ಚಿದಳು. ಜೇನಿನ ಬಾಟಲಿಯ ಮುಚ್ಚಳವನ್ನು ತೆರೆದು ಒಂದು ಚಮಚವನ್ನು ತೆಗೆದುಕೊಂಡು ಜೇನಿನ ಬಾಟಲಿಯೊಳಗೆ ಇಟ್ಟು ಒಂದು ಚಮಚದಷ್ಟು ಜೇನನ್ನು ಎತ್ತಿಕೊಂಡು ಈಗಾಗಲೇ ತನ್ನ ಮುಂದೆ ಇಟ್ಟುಕೊಂಡಿದ್ದ ಗ್ಗಾಸಿನೊಳಗೆ ಸುರುವಿದಳು. ಮತ್ತೊಂದು ಚಮಚವನ್ನು ಪುನಃ ಜೇನಿನ ಬಾಟಲಿಯೊಳಗಿ ಇಟ್ಟು ಮತ್ತೊಂದು ಚಮಚದಷ್ಟು ಜೇನನ್ನು ಎತ್ತಿಕೊಂಡು ಮತ್ತೊಂದು ಗ್ಲಾಸಿನೊಳಗಿ ಹಾಕಿ, ಚಮಚವನ್ನು ಗ್ಲಾಸಿನೊಳಗೇ ನಿಲ್ಲಿಸಿದಳು ಓರೆಯಾಗಿ. ಟೀ ಪಾತ್ರೆಯ ಮುಚ್ಚಳವನ್ನು ತೆರೆದು, ಪಕ್ಕಕ್ಕೆ ಇಟ್ಟು, ಟೀ ಸೋಸುವ ಜಾಲರದಲ್ಲಿ ಬಿಸಿ ಟೀಯ ಕಪ್ಪು ಬಣ್ಣದ ಡಿಕಾಕ್ಷನ್ನನ್ನು ಎರಡೂ ಗ್ಲಾಸಿನೊಳಗೆ ಸೋಸಿದಳು. ಜೇನಿನ ಜೊತೆ ಬೆರೆಯುತ್ತ ಟೀಯ ಬಣ್ಣ ಬದಲಾಗ ತೊಡಗಿತು. ಒಂದು ನಿಂಬೆಹಣ್ಣನ್ನು ತರಕಾರಿ ಬುಟ್ಟಿಯಿಂದ ಎತ್ತಿಕೊಂಡು, ಕೊಯ್ದು, ಒಂದೊ ಹೋಳಿಕೆಯನ್ನು ಅವೆರಡೂ ಗ್ಲಾಸಿನೊಳಗೆ ಹಿಂಡಿದಳು. ಈಗ ಟೀಯ ಬಣ್ಣ ಬದಲಾಗಿ ಜೀನಿನ ಬಣ್ಣಕ್ಕೆ ತಿರುಗಿತು. ಚಮದಲ್ಲಿ ಎರಡೂ ಗ್ಲಾಸಿನಲ್ಲಿದ್ದ ಟೀಯನ್ನು ಕಲಕಿದಳು.. ಪುದೀನ ಎಲೆಗಳನ್ನು ಅವುಗಳ ಮೇಲ ಹಾಕಿದಳು. ನಿರೀಕ್ಷೆ ಮಾಡಬಾರದು ಅಂದು ಕೊಳ್ಳುವೆ. ಆದರೂ ಈ ಮನಸ್ಸು ಸುಮ್ಮನಿರಬೇಕಲ್ಲ. ಅವಳ ತನಗೆ ತಾನೆ ಮೆಲ್ಲನೆ ಅಂದುಕೊಂಡಳು. ಎರಡೂ ಗ್ಲಾಸುಗಳನ್ನು ಎತ್ತಿ ಒಂದೊಂದು ಕೈಯಲ್ಲಿ ಹಿಡಿದುಕೊಂಡು, ಒಂದನ್ನು ಅಡುಗೆಕೋಣೆಗೆ ಹೊಂದಿಕೊಂಡಿರುವ ವಿಶಾಲವಾದ ಜಾಗದಲ್ಲಿ ಇರುವ ಮರದ ಅಗಲವಾದ ಊಟದ ಮೇಜಿನ ಮೇಲೆ ಇಟ್ಟಳು. ಇಟ್ಟು, ‘ಟೀ’ ಎಂದು ತನ್ನ ಗಾಜಿನ ಲೋಟವನ್ನು ಕೈಯಲ್ಲಿ ಹಿಡಿದುಕೊಂಡು ಹೊರ ನಡೆದಳು. ಹೊರಗೆ ಮನೆಯ ಕಾಂಪೌಂಡಿನ ಅಂಗಳದಲ್ಲಿನ ತೂಗುಯ್ಯಾಲೆಯಲ್ಲಿ ಕುಳಿತಳು. ಒಂದು ಸಿಪ್ಪು ಲೆಮನ್ ಟೀಯನ್ನು ಹೀರಿ, ಎದ್ದು, ಮನೆಯ ಮುಂಭಾಗದ, ಎಡಗಡೆಯ ಸಿಮೆಂಟಿನ ಹಾಸಿನ ಮೇಲೆ ಕುಳಿತಳು. ಟೀ ತನ್ನ ಬಣ್ಣವನ್ನು ಸಂಪೂರ್ಣ ಕಳೆದುಕೊಂಡು ಜೇನಿನ ಬಣ್ಣಕ್ಕೆ ರೂಪಾಂತರಗೊಂಡಿತ್ತು. ಕರಗಿರುವ ನಿಂಬೆಹಣ್ಣಿನ ಹುಳಿ ನಾಲಗೆ ತಂತುಗಳಿಂದ ಒಳಗೆ ಹಬ್ಬಿ ಕ್ಷಣ ಚೈತನ್ಯವನ್ನು ಕೊಡುತ್ತಿತ್ತು. ಆ ಪುಟ್ಟ ಗಾಜಿನ ಲೋಟದಲ್ಲಿ ಅಗಾಧ ಆಕಾಶದಲ್ಲಿ ಎರಡು ತುಂಡು ಮೋಡಗಳು ಅಲೆಯುವಂತೆ ಪುದೀನ ಎಲೆಗಳು ಅಲ್ಲೇ ಅಲುಗಾಡುತ್ತ ನಿಧಾನ ತಿರುಗುತ್ತಿದ್ದವು ಟೀಯ ಮೇಲ್ಪದರದಲ್ಲಿ. ಇವಳು ನೋಡದಿದ್ದರೂ ಇವಳೇ ತನ್ನ ಕೈಯಾರೆ ಬೆಳೆಸಿದ ದಾಸವಾಳ, ಗುಲಾಬಿ, ಜಾಜಿ, ಚದುರಂಗಿ, ಬಸವಿನ ಪಾದ, ಡೇರೆ, ಡ್ಯಾಫೊಡಿಲ್ಸ್, ಲಿಲಿ, ಕೇಪಲ, ಪಾರಿಜಾತ, ಅಂಥೋರಿಯಮ್, ಕೆಲವು ಕ್ಯಾಕ್ಟಸ್‍ನ ಹಳದಿ ಹೂವುಗಳು, ನೋಡುತ್ತಿದ್ದವು. ಕಬ್ಬಿಣದ ತೂಗುಯ್ಯಾಲೆ ಗಾಳಿಗೆ ಸಾಕ್ಷಿಯಾಗಿತ್ತು. ಮನೆಯ ಟೆರೇಸಿನ ಗುಂಟ ಕೆಳಗೆ ಇಳೆ ಬಿದ್ದಿರುವ ಗಂಟೆಯಾಕಾರದ ಹೂವುಗಳು ಅವುಗಳ ಬಳ್ಳಿ ಹೊರಗಡೆಯಿಂದ ನೋಡಿದರೆ ಇಡೀ ಮನೆಗೆ ಹಬ್ಬಿರುವಂತೆ ಕಾಣುತ್ತಿತ್ತು. ಪಕ್ಕದಲ್ಲಿ ಗದ್ದೆ. ಇನ್ನೊಂದು ಪಕ್ಕದಲ್ಲಿ ಮನೆಗಳು. ಎದುರಿಗೆ ಮನೆಗಳು. ಗದ್ದೆಯ ಕಡೆಯಿಂದ ಮುಳುಗುವ ಸೂರ್ಯ ಇವಳ ನತ್ತನ್ನು ಮಂದವಾಗಿ ಬೆಳಗಿಸುತ್ತಿತ್ತು.

ಒಂಬತ್ತು ವರ್ಷದ ಹಿಂದೆ. ಬುದ್ಧ ಪೂರ್ಣಿಮೆಯ ದಿನ. ಇವಳ ಪ್ರಿಯಕರ ರಜನೀಶ್ ಹುಡುಗಿಯ ವೇಷದಲ್ಲಿ ಯಾವುದೋ ವಿಳಾಸ ಕೇಳುವ ನೆಪದಲ್ಲಿ ಬಂದು, ಅವಳಿಗೆ ಈಗಾಗಲೇ ಮುಂಚಿತವಾಗಿ ಯಾವ ಡ್ರಸ್ಸಲ್ಲಿ ಇರುವಳೋ ಅದೇ ಡ್ರಸ್ಸಿನಲ್ಲಿ ರೆಡಿಯಾಗಲು ಹೇಳಿದ್ದುದರಿಂದ ಅವಳು ಅವನು ಬರುವುದನ್ನೇ ಕಾಯುತ್ತಿದ್ದಳು, ಅವನು ಅವಳಾಗಿ ಬಂದು, ಅವಳನ್ನು ಒಂದು ಆಟೋದಲ್ಲಿ ಕರೆದುಕೊಂಡು ಹೋಗಿ, ಸ್ವಲ್ಪದೂರದ ನಂತರ ಮತ್ತೆ ಬೈಕಿನಲ್ಲಿ ಹೋಗಿದ್ದು ಎದುರಿನ ಉಯ್ಯಾಲೆಯಂತೆ ಮನಸ್ಸಿನಲ್ಲಿ ತೂಗಿತು. ಗೇಟಿನ ಕಾಂಪೌಂಡು ಗೋಡೆಗೆ ಹೊಂದಿಕೊಂಡು ಒಂದು ದೇವಗಣಗಿಲೆ ಮರ. ಅದರ ಕೊಂಬೆಯೊಂದರ ಮೇಲೆ ಎರಡು ಗುಬ್ಬಚ್ಚಿಗಳು ಜಗಳವಾಡುತ್ತಿದ್ದವು. ಅವಳಿಗೆ ಅವು ಜಗಳವಾಡುತ್ತಿರುವುದು ಆಕರ್ಷಣೀಯವಾಗಿ ಕಾಣಲಿಲ್ಲ. ಮರದಲ್ಲಿನ ಹೂವುಗಳು, ಅವು ಸೂಸುವ ಮೈಮನ ಕೆರಳಿಸುವ ಪರಿಮಳ ಅವಳನ್ನು ಸೆಳೆಯುತ್ತಿದ್ದವು. ಟೀಯ ಕೊನೆಯ ಗುಟುಕನ್ನು ಹೀರಿ, ಗ್ಲಾಸನ್ನು ಪಕ್ಕದಲ್ಲಿ ಇಟ್ಟು, ಹೂವುಗಳನ್ನೇ ದಿಟ್ಟಿಸತೊಡಗಿದಳು. ಹೂವಿನ ಪರಿಮಳ ಅವಳನ್ನು ಸಂಪೂರ್ಣ ಆವರಿಸಿಕೊಂಡಿತ್ತು. ಗ್ಲಾಸಿನ ಕಂಠದ ಮೇಲೆ ಒಂದು ನೊಣ ಬರುತ್ತ ಹೋಗುತ್ತ ಇತ್ತು. ಮೊನ್ನೆ. ಇದೇ ಸಮಯ ಹೆಚ್ಚು ಕಡಿಮೆ. ಟೀ ಕುಡಿಯುತ್ತ ಕುಳಿತಿದ್ದಳು. ಕಾಲೇಜಿನಿಂದ ಬೇಗ ಬಂದಿದ್ದಳು. ಅವಳ ಕ್ಲಾಸುಮೇಟು ಗೌಡನ ಜೊತೆ ಮೊಬೈಲಿನಲ್ಲಿ ಮಾತಾಡುತ್ತಿದ್ದಳು.

‘ನೀನಂದು ಕೊಂಡಿದಿಯ ಅಷ್ಟೆ, ಆದರೆ ನೀನಂದು ಕೊಂಡಂತೆ ಅಲ್ಲ ಅವನು. ನೀನಂದು ಕೊಂಡಿರುವುದು ಭ್ರಮೆ, ಸುಳ್ಳು. ಆದರೆ ನೀನಂದು ಕೊಂಡಿರುವ ರೀತಿ ನಾವಿದ್ದಿದ್ದರೆ ಎಷ್ಟು ಚೆನ್ನ ಇತ್ತು. ನೆನಪಿಸಿಕೊಂಡರೆ ದುಃಖ, ಕೋಪ ಒಟ್ಟೊಟ್ಟಿಗೆ ಬರುತ್ತವೆ. ಒಮ್ಮೊಮ್ಮೆ ಅನ್ನಿಸತ್ತೆ ಗೌಡ ನಾವು ಜೀವನದಲ್ಲಿ ಸರಿಯಾದ ಸಮಯದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಅಂಥ’
‘ಏನೀಥರ ಹೇಳ್ತಾ ಇದೀಯ, ಸುಮ್ನೆ ಇರು ಏನೇನೋ ಹೇಳಬೇಡ.’

‘ಲೋಕದ ಕಣ್ಣಿಗೆ ಹೇಗೆ ಕಾಣ್ತಿದಿವೋ ಅದರಲ್ಲಿ ಅರ್ಧನೂ ಇಲ್ಲ, ನಿನ್ನ ಹತ್ತಿರ ಮಾತಾಡ್ತ ಇದೀನಲ್ಲ ಈಗ ಅಷ್ಟೊತ್ತು ಮತ್ತೆ ಇಷ್ಟೊಂದು ತೀವ್ರವಾಗಿ ಇಬ್ಬರೂ ಮಾತಾಡಲ್ಲ ಗೊತ್ತ?’

‘ರೂಪ ನೀನು ಹೇಳ್ತಾ ಇರೋದು ನನಗೆ ನಂಬುವುದಕ್ಕೆ ಆಗಲ್ಲ, ಎಂಥ ವಿಚಿತ್ರ!’

‘ಟು ಬಿ ಫ್ರ್ಯಾಂಕ್, ನಿನ್ನ ಹತ್ತಿರ ಮುಚ್ಚುಮರೆ ಯಾಕೆ, ಜೊತೆಗೆ ಮಲಗಿ ಎಷ್ಟೋ ಕಾಲ ಆಯಿತು.’

‘ಮತ್ತೆ ಮಾತಲ್ಲಿ, ನಡೆಯಲ್ಲಿ ನಮ್ಮ ಕಣ್ಣಿಗೆ ಹಾಗೆ ಕಾಣೊದಿಲ್ಲ.’

‘ಅದೆ ಹೇಳಿದಲ್ಲ, ಕಾಣೋದಿಲ್ಲ.’

‘ಯಾರ ಜೊತೆಗಾದರೂ ಅಫೇರ್ ಇದಿಯಾ, ಏನಾದರೂ ಅನುಮಾನ?’

‘ಗೊತ್ತಾಗ್ತಾ ಇಲ್ಲ, ಆದರೆ ಅವನ ಸೈಕಾಲಜಿ ಅರ್ಥ ಆಗ್ತಿಲ್ಲ. ಅವನು ತನ್ನ ಮೊಬೈಲನ್ನು ಟಚ್ ಮಾಡಿಸೊಲ್ಲ. ಅಂದರೆ ಇಷ್ಟೇ ತಿಳಕೋ ಯಾವ ಥರದ ಸಂಬಂಧ ನಮ್ಮದು ಅಂಥ. ಒಂದು ವಸ್ತುವನ್ನು ಮುಟ್ಟುವಷ್ಟೂ ಆತ್ಮೀಯತೆ ಇಲ್ಲ. ಮನಸ್ಸಿನೊಳಗೆ ಪ್ರವೇಶ ನಿಶಿದ್ಧ. ಅವನಿಂದ ಒಂದೇ ಒಂದು ತೀವ್ರವಾದ ಮಾತು ನನ್ನ ಹೃದಯಕ್ಕೆ ಎಷ್ಟು ಖುಷಿಕೊಡುತ್ತೆ ಗೊತ್ತಾ.’

‘ಲವ್ ಮ್ಯಾರೇಜ್ ನಿಮ್ದು, ಮರಿಬೇಡ, ಸಂಬಂಧದಲ್ಲಿ ಫ್ರೀಡಮ್ ಜಾಸ್ತಿ ಇರುತ್ತೆ, ನಿನಗೆ ಅರ್ಥ ಆಗೋಲ್ಲ ಅಂದ್ರೆ?’

‘ನಾನು ಹಾಗೆ ಅಂದುಕೊಂಡಿದ್ದೆ, ನನಗೇನು ಈ ಮದುವೆಯಲ್ಲಿ ಅಂಥ ಖುಷಿ ಸಿಗಲಿಲ್ಲ’

‘ಹೋಗಲಿ ಬಿಡು, ಎಲ್ಲರ ಜೀವನದಲ್ಲೂ ಏನಾರ ಒಂದು ಸಮಸ್ಯೆ ಇದ್ದೇ ಇರುತ್ತೆ.’

‘ಹೌದು ಇರುತ್ತೆ, ನಮ್ಮದು ಸಮಸ್ಯೆ ಏನು ಅಂತಾನೆ ಗೊತ್ತಾಗ್ತಿಲ್ಲ.’

‘ಇಬ್ಬರೂ ಲಕ್ಚರರ್ಸ್, ಕೂತು ಮಾತಾಡಿದರೆ ಯಾವುದು ಬಗೆಹರಿಯೊಲ್ಲ ಹೇಳು, ಇಂಡಿಯಾ ಪಾಕಿಸ್ತಾನ ಸಮಸ್ಯೆನೇ ಬಗೆಹರಿಸಬಹುದು ಎರಡೂ ಕಡೆಯವರು ಕೂತುಕೊಂಡರೆ, ಅಂತದರಲ್ಲಿ..’

‘ಅದೇ ಕೂತುಕೋ ಬೇಕಲ್ಲ, ಅದೇ ಆಗ್ತಿಲ್ಲ.’

ಈ ಮಾತು ಹೊರ ಬರುವಾಗ ಅವಳ ಗಂಡ ರಜನೀಶ್ ಹೊರಗಡೆಯಿಂದ ಸ್ಕೂಟರನ್ನು ಚಲಾಯಿಸಿಕೊಂಡು ಬಂದ. ಅವಳು ಗೇಟನ್ನು ಯಾಂತ್ರಿಕವಾಗಿ ತೆರೆದಳು. ಕಾಲ್ ಯಾರದ್ದು ಅಂಥ ಅವನು ಕೇಳಿದ್ದಿದ್ದರೆ ಗೌಡಂದು ಅಂಥ ಹೇಳುವ ಮಾತು ಅವಳ ನಾಲಗೆಯ ತುದಿಯಲ್ಲಿ ಇತ್ತು. ಆದರೆ ಅವನು ಕೇಳಲಿಲ್ಲ. ಸ್ಕೂಟರನ್ನು ಅಂಗಳದ ಗಿಡಗಳ ನೆರಳಿನಡಿಯಲ್ಲಿ ನಿಲ್ಲಿಸಿ ಒಳಗಡೆ ಹೋದ.

ಮತ್ತೆ ಮುಂದು ವರೆಯಿತು ಫೋನಿನಲ್ಲಿ ಮಾತು.

‘ಬಂದ್ನಾ?’

‘ಹ್ಞೂ.’

‘ಮತ್ತೆ ಫೋನ್ ಮಾಡ್ತೀನಿ.’

‘ಅಡ್ಡಿಯಿಲ್ಲ, ಮಾತಾಡು.’

ಆಚೆ ಬದಿಯಿಂದ ಗೌಡ ಕರೆಯನ್ನು ಕಟ್ ಮಾಡಿದ್ದ.

ಅವಳು ಗ್ಲಾಸನ್ನು ಹಿಡಿದುಕೊಂಡು ಒಳಗಡೆ ಹೋದಳು. ಮೊಬೈಲನ್ನು ಅಡುಗೆ ಕೋಣೆಯ ಮುಂಭಾಗದ ಮೇಜಿನ ಮೇಲೆ ಇಟ್ಟಳು. ಅಲ್ಲಿ ಆಗಲೇ ಮತ್ತೊಂದು ಖಾಲಿ ಟೀ ಗ್ಲಾಸು ಕುಳಿತಿತ್ತು. ವಾಶ್ ರೂಮಿಗೆ ಹೋಗಿ ಬಂದಳು. ಒದ್ದೆಯಾದ ಮುಖ ಅವಳಿಗೆ ಮುದವನ್ನು ಕೊಡುತ್ತಿದ್ದುದು ಅವಳ ಮುಖದ ಭಾವಗಳಲ್ಲಿ ವ್ಯಕ್ತವಾಗುತ್ತಿತ್ತು. ಟಿ.ವಿಯನ್ನು ಆನ್ ಮಾಡಿದಳು. ಸೋಫಾದಲ್ಲಿ ಕುಳಿತು, ಮತ್ತೆ ಎದ್ದು ಮೇಜಿನ ಮೇಲಿದ್ದ ಮೊಬೈಲನ್ನು ಎತ್ತಿಕೊಂಡು ಬಂದಳು. ಮೊಬೈಲಿನ ಸ್ಕ್ರೀನನ್ನು ಮೇಲಿನಿಂದ ಕೆಳಕ್ಕೆ ಜಾರಿಸಿದಳು ತನ್ನ ತೋರು ಬೆರಳಲ್ಲಿ. ಸ್ಮಾರ್ಟ್‍ವ್ಯು ಗುರುತನ್ನು ಒತ್ತಿದಳು. ಟಿ.ವಿಯ ರಿಮೋಟನ್ನು ಎತ್ತಿಕೊಂಡು ನೆಟ್ ಫ್ಲಿಕ್ಸ್ ಎಂದು ತೋರಿಸುವ ಗುರುತಿನ ಮೇಲೆ ಒತ್ತಿದಳು. ಸಿನೆಮಾಗಳನ್ನು ಸರ್ಚ್‍ಮಾಡುತ್ತ ಹೋದಳು. ಅವಳ ಗಂಡ ರಜನೀಶ್ ಅರ್ಧ ತೆರೆಯಲಾಗಿದ್ದ ಮುಂಬಾಗಿಲನ್ನು ಒಳ ಎಳೆದುಕೊಂಡು ಮತ್ತೆ ತನ್ನ ಕಡೆಗೆ ಹೊರಗೆ ಎಳೆದುಕೊಂಡು ಹೋದ. ಫಿಲ್ಮ್ಸ್ ಬೇಡ ಅನ್ನಿಸಿತು. ಯು ಟೂಬ್ ಚಾನಲ್ ಓಪನ್ ಮಾಡಿದಳು. ಅನುಷ್ಕ ಶಂಕರ್ ಸಿತಾರ್ ಎಂದು ಟೈಪಿಸಿದಳು. ಭಾಗೆಶ್ರೀ ಕೇಳಬೇಕೆನ್ನಿಸಿತು. ಅದನ್ನು ಆಯ್ಕೆ ಮಾಡಿಕೊಂಡು ಆಲಿಸುತ್ತ ಕುಳಿತಳು. ಕಣ್ಣ ತಮಗೆ ತಾವೇ ಮುಚ್ಚಿಕೊಂಡವು. ವಿಕಿಪಿಡಿಯಾ ತೆರೆದು ಅನುಷ್ಕ ಶಂಕರ್ ಎಂದು ಟೈಪಿಸಿದಳು. ಪರ್ಸನಲ್ ಲೈಫ್ ಎನ್ನುವುದರ ಹತ್ತಿರ ಹೋಗಿ,ಅದನ್ನು ಓಪನ್ ಮಾಡಿದಳು. ಬಾರ್ನ್ ಇನ್ ಲಂಡನ್, ಗ್ರಿವ್ ಅಪ್ ಇನ ಯು.ಎಸ್., ಯು.ಕೆ., ಅಂಡ್ ಇಂಡಿಯಾ. ಇನ್ ಟುಥೌಸೆಂಡ್ ಟೆನ್ ಶಿ ಮ್ಯಾರೀಡ್ ಬ್ರಿಟಿಷ್ ಡೈರೆಕ್ಟರ್ ಜೋ ರೈಟ್. ದೆ ಹ್ಯಾಡ್ ಟು ಸನ್ಸ್ ಅನದ ದೆನ್ ಡೈವರ್ಸ್ಡ್ ಇನ್ ಟು ಥೌಸಂಡ್ ನೈನ್ಟೀನ್. ಶಿ ಲಿವ್ಸ್ ಇನ್ ಲಂಡನ್ ವಿಥ್ ಹರ್ ಟು ಸನ್ಸ್. ಭಾಗೇಶ್ರಿ ತಾರಕಕ್ಕೆ ಹೋಗ್ತೀ ಇತ್ತು. ಥೂ, ಸಾರಿ ಅನುಷ್ಕ, ನಿನ್ನ ರಾಗದ ಜೊತೆಗೆ ಸಂಸಾರವನ್ನು ಯಾಕೆ ಎಳೆದು ತರಲಿ. ನುಡಿಸು, ನುಡಿಸು ಜೀವದ ತಂತಿಗಳು ಸವೆದು ಹೋಗಬೇಕು ಅಲ್ಲಿಯ ತನಕ ನುಡಿಸು. ಪಾಪ ಮೊನ್ನೆ ಆಪರೇಷನ್ ಮಾಡಿಸಿಕೊಂಡಿದಿಯಾ ಎಲ್ಲ ಮರೆತುಹೋಗಲಿ ನುಡಿಸು. ಸುರು ಇದು ಅವಳ ಅರ್ಲಿ ಪರ್ಫಾರ್ಮೆನ್ಸ್. ಹಾಗಾದರೆ ಆಪರೇಷನ್ ನಂತರ ಯಾವ ರಾಗ, ಯಾವ ಕನ್ಸರ್ಟ್ ನೋಡಬೇಕಲ್ಲ ಎಂದುಕೊಂಡಳು. ಬೇಡ ಅವಳ ರಾಗದ ಜೊತೆ ಎಲ್ಲಿಯಾದರೂ ಕಳೆದು ಹೋಗಬೇಕು ಎಂದುಕೊಂಡಳು. ಪುನಃ ರಾಗ ಭಾಗೇಶ್ರಿಯನ್ನೇ ಆಯ್ಕೆಮಾಡಿಕೊಂಡಳು. ವಾವ್, ಆಹಾ, ವಾಟ್ ಎ ಬ್ಯೂಟಿ! ದೇಹ ಗುರತ್ವಾಕರ್ಷಣೆಯನ್ನೇ ಕಳೆದುಕೊಳ್ಳುತ್ತಿದೆ. ಸ್ಪೇಸಿನಲ್ಲಿ. ಸುರಗಿ ಸುರಗಿ ಹೂವಿನ ದಳದಂತಾಗಿ ಹಾರುತ್ತಿದ್ದಾಳೆ. ಆಕಾಶದಲ್ಲಿ. ಅವಳ ಬೆರಳುಗಳು, ಅವಳ ದೇಹ, ಅವಳ ಸಿತಾರು, ಅವಳ ಅಸ್ತಿತ್ವ ಎಲ್ಲ ಆಕಾಶದಲ್ಲಿ ಲೀನವಾಗಿದೆ. ಸುರಗಿಯ ದಳವನ್ನು ಸಿತಾರಿನ ರಾಗ ಅಲೆಸುತ್ತಿದೆ. ಯಾವ,ಯಾವುದರ ಅಡ್ಡಿಯಿಲ್ಲ. ಸುರಗಿ ಆಕಾಶದಲ್ಲಿ. ಯಪ್ಪಾ ಓ ವಾ ಕುಣಿದಳು. ತೊಡೆಗಳ ಸಂದಿಯಲ್ಲಿ ಒದ್ದಯಾದಂತಹ ಅನುಭವವಾಯಿತು. ರಪ್ಪಂಥ ಭೂಮಿಯ ಮೇಲೆ ಬಿದ್ದಳು. ಕಂಬಳಿ ಹುಳ ಸರಿದಂತಾಯಿತು ಮತ್ತೆ ಅದೇ ಜಾಗದಲ್ಲಿ. ಅನುಷ್ಕ ಟಿ.ವಿ.ಯ ಪರದೆ ಮೇಲೆ ಕೇವಲ ಗೊಂಬೆಯಾಗಿದ್ದಳು. ಎದ್ದಳು ಮೆಲ್ಲನೆ. ವಾಶ್ ರೂಮಿನ ಕಡೆ ಹೋದಳು. ಶೋವರ್ ಆನ್ ಮಾಡಿದಳು. ಸ್ನಾನಮುಗಿಸಿ, ಛೇ ಟವಲ್ ಬೆಡ್ ರೂಮಿನಲ್ಲಿಯೇ ಬಿಟ್ಟು ಬಂದೆ ಅಂದು ಕೊಂಡು, ಕೈಗಳಲ್ಲಿ ಮೈಮೇಲಿನ ನೀರನ್ನು ಒರೆಸಿಕೊಂಡು ಬೆತ್ತಲೆಯಾಗಿಯೇ ಬೆಡ್ ರೂಮಿಗೆ ಹೋದಳು. ಅವಳ ಜೋಡಿ ಪಾದದ ಹೆಜ್ಜೆ, ದೇಹ ಮತ್ತು ಕೂದಲಿಂದ ತೊಟ್ಟಿಕ್ಕುವ ನೀರು ಅವಳ ಹಿಂದೆ. ಟವಲನ್ನು ಎತ್ತಿಕೊಂಡು ಮೈ, ಕೂದಲನ್ನೆಲ್ಲ ಒರೆಸಿಕೊಂಡು, ವಾಡ್ರಬಿನಲ್ಲಿ ಉಡುಪುಗಳನ್ನು ಎತ್ತಿಕೊಂಡಳು. ಅವುಗಳನ್ನು ಧರಿಸಿ, ಟವಲನ್ನು ಕೂದಲಿಗೆ ಬಿಗಿಯಾಗಿ ಕಟ್ಟಿಕೊಂಡಳು. ಹೊರಗಡೆ ನಡೆದಳು. ಅಗುಳಿಯನ್ನು ಹಾಕಿರಲಿಲ್ಲ. ಬಾಗಿಲನ್ನು ಮುಚ್ಚಿತ್ತು ಅಷ್ಟೆ. ಎಡಗಡೆಯ ಪಶ್ಚಿಮದಿಕ್ಕಿನಲ್ಲಿ ಸೂರ್ಯನ ಕಿರಣಗಳು ಅಂಗಳದಲ್ಲಿ ಅವಳ ಗಿಡಬಳ್ಳಿಗಳ ನಡುವೆ ತೂರಿಕೊಂಡು ಚೆಲ್ಲಿತ್ತು. ಬಾಗಿ, ಕೂದಲನ್ನು ಒರೆಸಿಕೊಂಡಳು. ಅರ್ಧಗಂಟೆ ಸುತ್ತಾಡಿ ಅಂಗಳದಲ್ಲಿ ಮತ್ತೆ ಒಳ ಬಂದಳು. ವಾಶ್ ರೂಮಿಗೆ ಹೋದಳು. ಅವಳ ಕೈ ಯಾಂತ್ರಿಕವಾಗಿ ಪ್ಯಾಡಿರುವ ಜಾಗಕ್ಕೆ ಹೋಯಿತು. ಟಿ.ವಿ ಪರದೆ ಕಪ್ಪಾಗಿ ಖಾಲಿ ಕಾಣುತ್ತಿತ್ತು. ಫ್ರಿಡ್ಜಿನ ಕಡೆ ಕಿವ ಕೊಟ್ಟಳು. ಸದ್ದಾಗುತ್ತಿರಲಿಲ್ಲ. ಓ ಕರೆಂಟು ಹೋಗಿದೆ ಎಂದುಕೊಂಡು ನಾಳೆ ಯಾವ ಟಾಪಿಕ್, ಹ್ಞಾ ಜನ್ನನ ಯಶೋದರ ಚರಿತೆ ಎಂದು ಕೊಂಡು ಪುಸ್ತಕವನ್ನು ತೆರೆದು ಅದನ್ನು ಓದಲು ಕುಳಿತಳು. ಕೆಲವು ಪಾಯಿಂಟ್ಸುಗಳನ್ನು ಒಂದು ನೋಟ್ ಪುಸ್ತಕದಲ್ಲಿ ಬರೆದುಕೊಂಡು, ಅಲ್ಲಿಯೇ ಬಿಟ್ಟು, ಅವುಗಳನ್ನೆಲ್ಲ ಅಡುಗೆಕೋಣೆಯಲ್ಲಿಯೇ ಇದ್ದ ಅವಳು ರಾತ್ರಿಯ ಊಟಕ್ಕೆ ಅನ್ನ ಸಾಂಬಾರನ್ನು ಮಾಡಿದಳು. ರೇಡಿಯೋ ಆನ್ ಮಾಡಿದಳು. ಅರ್ಧಗಂಟೆ ಕೇಳಿ ಮತ್ತೆ ಅಡುಗೆಮನೆಗೆ ಹೋಗಿ ತಟ್ಟೆಯಲ್ಲಿ ತನಗೆ ಊಟವನ್ನು ಬಡಿಸಿಕೊಂಡು ಊಟ ಮಾಡಿದಳು. ಊಟದ ಮೇಜಿನ ಮೇಲೆ ಸಾರಿನ ಪಾತ್ರೆ, ಅನ್ನದ ಕುಕ್ಕರ್ ಮತ್ತು ತಟ್ಟೆ ಲೋಟವನ್ನು ಇಟ್ಟು ಹೊರಗೆ ಹೋಗಿ ಗೇಟಿನ ಬೀಗವನ್ನು ಹಾಕಿ, ಒಳಬಂದು, ಅದರ ಕೀಯನ್ನು ಹಾಕಿದಳು. ಕೀಯನ್ನು ಕಿಟಕಿಯ ಹತ್ತಿರ ಇಟ್ಟು ಮಲಗುವ ಕೋಣೆಗೆ ಹೋದಳು.

ಬೆಳಗ್ಗೆ ಎದ್ದಾಗ ಆರು ಗಂಟೆ. ರೇಡಿಯೋ ಆನ್ ಮಾಡಿದಳು. ಅಂದು ಬಿತ್ತರಗೊಳ್ಳುವ ಕಾರ್ಯಕ್ರಮಗಳ ವಿವಿರ ಬರುತ್ತಿತ್ತು. ನಂತರ ಇಂಗ್ಲಿಷ್ ವಾರ್ತೆಗಳು. ಅವಳು ಊಟದ ಮೇಜಿನ ಮೇಲಿದ್ದ ಅರ್ಧ ಕುಡಿದು ಬಿಟ್ಟಿದ್ದ ಲೋಟ, ಊಟ ಮಾಡಿ ಅಲ್ಲಿಯೇ ಬಿಟ್ಟಿದ್ದ ಒಣಗಿದ ತಟ್ಟೆಗಳನ್ನು ಎತ್ತಿ ಸಿಂಕಿನಲ್ಲಿ ಹಾಕಿದಳು. ಕಾಫಿ ಮಾಡಿ, ರಜನಿ ಕಾಫಿ ಎಂದು ಕೂಗಿ, ತಾನು ಒಂದು ಕಪ್ಪನ್ನು ಕುಡಿದು, ಮತ್ತೆ ಬೆಳಗಿನ ಕಾರ್ಯಗಳನ್ನೆಲ್ಲ ಮುಗಿಸಿ, ತಿಂಡಿಯನ್ನು ಮಾಡಿಟ್ಟು, ಸ್ನಾನಮುಗಿಸಿ, ಕಾಲೇಜಿಗೆ ಹೋಗಲು ರೆಡಿಯಾದಳು. ಕನ್ನಡಿಯಲ್ಲಿ ಮತ್ತೊಮ್ಮೆ ಮುಖವನ್ನು ನೋಡಿಕೊಂಡು, ಅಲ್ಲಿಯೇ ಇದ್ದ ತನ್ನ ಬ್ಯಾಗನ್ನು ಎತ್ತಿಕೊಂಡು ಊಟದ ಮೇಜಿನ ಮೇಲೆ ಇಟ್ಟಳು. ರಜನೀಶನ ಕೋಣೆಯ ದಿಕ್ಕಿನಿಂದ ಬಕೇಟಿಗೆ ನೀರು ಬೀಳುತ್ತಿರುವ ಸದ್ದು ಕೇಳುತ್ತಿತ್ತು. ತಿಂಡಿಯನ್ನು ಬಡಿಸಿಕೊಂಡು, ತಿಂದು, ರಜನಿ ಬಾಯ್ ಕಣೋ ಎಂದು ತನ್ನ ಸ್ಕೂಟರನ್ನು ಚಾಲು ಮಾಡಿಕೊಂಡು ತನ್ನ ಕಾಲೇಜಿನ ಕಡೆ ಹೊರಟಳು.

ಸಂಜೆ. ಟೀ ಮಾಡಿದಳು. ಒಂದು ಗ್ಲಾಸನ್ನು ಊಟದ ಮೇಜಿನ ಮೇಲೆ ಇಟ್ಟಳು. ಅವಳ ಬ್ಯಾಗು ಮತ್ತು ಮೊಬೈಲ್ ಅಲ್ಲಿಯೇ ಇದ್ದವು. ರಜನಿ ಟೀ ಎಂದು, ತನ್ನ ಗ್ಲಾಸನ್ನು ಎತ್ತಿಕೊಂಡು ಹೊರ ನಡೆದಳು. ತಾನು ನಿತ್ಯ ಕುಳಿತುಕೊಳ್ಳುವ ಜಾಗದಲ್ಲಿ ಕುಳಿತಳು. ಎದುರಿಗೆ ದೇವಗಣಗಿಲೆ ಮರ. ಅದರಲ್ಲಿ ಹೂವುಗಳು. ಅವಳ ಬಲಗೈ ತನ್ನ ಪಾಡಿಗೆ ತಾನು ಗ್ಲಾಸನ್ನು ಅವಳ ಬಾಯಿ ಹತ್ತಿರ ತೆಗೆದುಕೊಂಡು ಹೋಗುತ್ತ, ಇಳಿಸುತ್ತ ಇತ್ತು. ಆಗೊಮ್ಮೆ ಈಗೊಮ್ಮೆ ದೇವಗಣಗಿಲೆ ಹೂವುಗಳು ಉದುರುತ್ತಿದ್ದವು. ಅವಳ ಮನಸ್ಸು ಯೋಚಿಸುತ್ತಿತ್ತ:

ಮೊದಲು ಎಷ್ಟು ಚೆನ್ನಾಗಿತ್ತು. ಒಂದು ಕ್ಷಣವೂ ಒಬ್ಬರನ್ನು ಒಬ್ಬರು ಬಿಟ್ಟು ಇರುವುದಕ್ಕೆ ಆಗುತ್ತಿರಲಿಲ್ಲ. ಇವನ ಪ್ರೀತಿಯನ್ನು, ಇವನ ಸಾಂಗತ್ಯವನ್ನು ನಂಬಿ, ನಚ್ಚಿ ಎಲ್ಲರನ್ನೂ ತೊರೆದು ಬಂದೆ, ಎಷ್ಟೂ ಅಂಥ ಅಡ್ಜಸ್ಟ್ ಆಗೋದು, ಸಾಕಾಗ್ತಿದೆ ಬದುಕು, ಎಲ್ಲಿಗಾದರೂ ಹೋಗಬೇಕು ಅನ್ನಿಸುತ್ತೆ, ಎಲ್ಲಿಗೆ ಹೋದರೂ ಬದುಕು ಹೀಗೆ ಇರುತ್ತ? ಎಲ್ಲ ಗೋಜಲು ಗೋಜಲು. ಮೊದಲೆಲ್ಲ ಅವನ ಹತ್ತಿರ ಮಾತಾಡಿ ಮಾತಾಡಿ ಸಾಕಾಗ್ತಿತ್ತು, ಕೊನೆಯೇ ಇರುತ್ತಿರಲಿಲ್ಲ. ಈಗ ಒಂದೇ ಒಂದು ಮಾತು. ಛೇ. ಯಾಕೆ ಎಲ್ಲ ಹೀಗಾಯ್ತು.

ದೇವಗಣಗಿಲೆ ಮರದಲ್ಲಿ ಎರಡು ಹಕ್ಕಿಗಳು ಕುಳಿತಿವೆ. ಅವುಗಳನ್ನು ಅವಳು ನೋಡದಿದ್ದರೂ ಅವೇ ಇವಳನ್ನು ನೋಡುತ್ತಿದ್ದವು. ಅವಳ ಸಹೋದ್ಯೋಗಿ ಸುಜಾತಳ ಮಾತು ‘ನೀನು ಇಷ್ಟೊಂದು ತಲೆಕೆಡಿಸಿಕೊಂಡರೆ ಹುಚ್ಚು ಹಿಡಿಯೋದು ಗ್ಯಾರಂಟಿ. ನಿಮಾನ್ಸ್‍ಗೆ ಸೇರಿಸಬೇಕಾಗುತ್ತೆ. ಅಲ್ಲ ನೀನು ಅವನ ಬಗ್ಗೆ ತಲೆಕೆಡಿಸಿಕೊಂಡಷ್ಟು ಅವನು ನಿನ್ನ ಬಗ್ಗೆ ತಲೆಕೆಡಿಸಿಕೊಳ್ಳುತ್ತಾನಾ? ಯೋಚಿಸು. ನಮ್ಮ ಬದುಕಿನ ಬಗ್ಗೆ ಸ್ವಾರ್ಥಿಗಳಾಗದಿದ್ದರೆ ನಮಗೆ ಸುಖ ಎಲ್ಲಿ ಸುರು’ ನೆನಪಾಯಿತು. ದೇವಗಣಗಿಲೆ ಮರದಲ್ಲಿದ್ದ ಹಕ್ಕಿಗಳು ಯಾವುದೋ ಗಳಿಗೆಯಲ್ಲಿ ಹಾರಿಹೋಗಿದ್ದವು. ಒಂದೆರಡು ಮೂರು ದೇವಗಣಗಿಲೆ ಹೂವುಗಳು ನೆಲದ ಮೇಲೆ ಬಿದ್ದವು. ಅವಳು ತನ್ನ ಪಕ್ಕದಲ್ಲಿದ್ದ ಗ್ಲಾಸನ್ನು ಎತ್ತಿಕೊಂಡು ಒಳ ನಡೆದಳು. ಅವಳು ಇಟ್ಟಿದ್ದ ಟೀ ತುಂಬಿದ ಗ್ಲಾಸು ಅಲ್ಲಿಯೇ ಇತ್ತು. ರಜನಿ ಎಂದು ಕೂಗಿದಳು. ಏನಾಯ್ತು ಇವನಿಗೆ? ಟೀ ಅಲ್ಲೆ ಬಿಟ್ಟಿದ್ದಾನಲ್ಲ ಅಂದುಕೊಂಡಳು. ಸ್ವಲ್ಪಹೊತ್ತಿನ ಬಳಿಕ ತನ್ನ ಕೋಣೆಯಿಂದ ಹೊರಬಂದ ರಜನೀಶ ಹಾಲಿಗೆ ಹೋದ. ಅಲ್ಲಿದ್ದ ದಿನ ಪತ್ರಿಕೆಗಳನ್ನು ಎತ್ತಿಕೊಂಡು ಸೋಫಾದಲ್ಲಿ ಕುಳಿತ. ಯಾಕೋ ಟೀ ಬೇಡವಾ?

ಬಡ್ಡಿಮಕ್ಕಳು ಅದೆಂಗೆ ಹೈ ಟೆನ್ಷನ್ ಹಾಕ್ತಾರೆ ನೋಡುತಿನಿ. ಎಲ್ಲ ಕಳ್ಳ ಸೂಳೆ ಮಕ್ಕಳು. ನಯವಂಚಕರು. ದೇಶಭಕ್ತಿ ಮಾತಾಡ್ತಾರೆ, ನಮ್ಮ ದೇಶದ ಕಾಡನ್ನು ಕಡಿತಾರೆ. ಯಾವನೋ ಬಹುರಾಷ್ಟ್ರೀಯ ಕಂಪನಿಯವನಿಗೆ ವಿದ್ಯುತ್ತು ಕೊಡಲು ನಮ್ಮೂರಿನ ಕಾಡು ಯಾಕೆ ನಾಶ ಆಗಬೇಕು, ಪ್ರೊಟೆಸ್ಟ್ ಮಾಡಿಸಬೇಕು, ಅಷ್ಟು ಸುಲಭಕ್ಕೆ ಬಿಡೊಲ್ಲ, ಇವರನ್ನು, ಎಷ್ಟೆಷ್ಟು ಕೋಟಿಗೆ ಡೀಲಾಗಿದೆ ಅಂತ ಯಾರಿಗೆ ಗೊತ್ತಿಲ್ಲ, ಎಂದುಕೊಂಡು, ಇಡೀ ರಾಜ್ಯದಲ್ಲಿನ ಎಲ್ಲ ಸ್ಟೂಡೆಂಟ್ಸ್‍ಗಳಿಂದ ಪ್ರೊಟೆಸ್ಟ್ ಮಾಡಿಸ್ತಿನಿ ಎಂದು ಕೂಗಿಕೊಂಡ.

‘ಟೀ ತಣ್ಣಗಾಗಿದೆ, ಬಿಸಿ ಮಾಡಿಕೊಡಲಾ ಅಥವಾ ಹೊಸದು ಮಾಡಿಕೊಡಲಾ?’ ಎಂದು ಅವಳು ಅಡುಗೆಮೆನೆಯ ಕಿಟಕಿ ಪಕ್ಕ ಪುಸ್ತಕವೊಂದನ್ನು ಓದುತ್ತ ಕೇಳಿದಳು. ಕನ್ನಡಕ ಮೂಗಿನ ಮೇಲೆ ಜಾರುತ್ತಿತ್ತು. ಅದನ್ನು ಮೇಲಕ್ಕೆ ಎತ್ತಿಕೊಳ್ಳುತ್ತಿದ್ದಳು.

ಯಾವನಿಗೆ ಬೇಕು ನಿನ್ನ ಟೀ, ನಿನ್ನ ಅಪ್ಪನಂತವರು ಇದ್ದರೆ ಇನ್ನೇನು?’

ಅವಳು ಗಾಬರಿಗೊಂಡಂತವಳಾಗಿ ‘ನಮ್ಮ ಅಪ್ಪ ಏನು ಮಾಡಿದರು?’ ಎಂದಳು.

‘ನಿಮ್ಮ ಅಪ್ಪನಂತವರು ಸಪೋರ್ಟ್ ಮಾಡದಿದ್ದರೆ ಇವರು ಇಷ್ಟೊಂದು ಮುಂದುವರೆಯುತ್ತಿರಲಿಲ್ಲ. ಎಲೆಕ್ಷನ್ನಿಗೆ ದುಡ್ಡು ಬೇಕಲ್ಲ, ಅದಕ್ಕೆ ಇವರು ಹೇಳಿದಂಗೆ ಅವರು, ಅವರು ಹೇಳಿದಂತೆ ಇವರು ಕುಣಿತಾರೆ’

‘ರಾಜಕೀಯವನ್ನು ಮನೆಯೊಳಗೆ ತರಬೇಡ, ಅಷ್ಟಕ್ಕೂ ಅಪ್ಪ ಎಂದೂ ನಿನ್ನನ್ನು ಪ್ರಶ್ನೆಮಾಡಿಲ್ಲ, ನಿನ್ನ ಲೈಫಲ್ಲಿ ಇಂಟರ್ ಫಿಯರ್ ಆಗಿಲ್ಲ.’

‘ಅರೆ , ಅವರು ಯಾಕೆ ಆಗಬೇಕು?, ಆಗ್ತಾರೆ? ಮೊದಲೇ ಹೇಳಿದ್ದೆ, ಅವರನ್ನು ಎಲ್ಲ ಬಿಡು ಅಂಥ.’

‘ಅವರೇನು ಮಾಡಿದರು ನಿನ್ನ? ಅಷ್ಟಕ್ಕೂ ಅವರ ಮನೆಯಿಂದ ನಾನೇನು ಸಂಸಾರ ಮಾಡ್ತಿಲ್ಲ. ಮಾತಾಡಿಸದೆ ಇರುವುದಕ್ಕೆ ಆಗುತ್ತ ಒಂದೇ ಊರಲ್ಲಿ ಇದ್ದಾಗ, ಸರಿ, ನಾನು ಮಾತಾಡಿಸುವುದು ಬಿಟ್ಟರೆ ಎಲ್ಲ ಸರಿ ಆಗುತ್ತಾ?’

ಅವನು ಏನು ಮಾತಡಲಿಲ್ಲ ಇದಕ್ಕೆ.

‘ನಿಂದೂ ರಾಜಕೀಯನೇ ಅಲ್ಲವಾ, ಅವರೆಂದಾದರೂ ಇದರ ಬಗ್ಗೆ ಕೇಳಿದಾರಾ?’ ರಾಜಕೀಯವನ್ನು ಸಂಸಾರದಲ್ಲಿ ಸೇರಿಸಬೇಡ. ನಮ್ಮ ಲೈಫನ್ನು ರಾಡಿಮಾಡಬೇಡ. ಇತ್ತೀಚೆಗೆ ನೀನು ಯಾವ ಥರ ವರ್ತಿಸುತ್ತಿರುವೆ ಎಂದು ಗೊತ್ತಿದೆಯಾ? ಎಲ್ಲದರಲ್ಲೂ ತಪ್ಪು ಹುಡುಕುತ್ತಿರುವೆ ನೀನು,’ ಎಂದು, ತಣ್ಣಗಾದ ಟೀಯ ಗ್ಲಾಸನ್ನು ಎತ್ತಿಕೊಂಡಳು. ಅದು ತಣ್ಣಗೆ ಅವಳನ್ನು ನೋಡಿತು. ಅದನ್ನು ಸಿಂಕಿನಲ್ಲಿ ನಿಟ್ಟಳು. ತಿರುಗಿ ಬಂದು ಮೇಜಿನ ಮೇಲಿದ್ದ ತನ್ನ ಮೊಬೈಲ್ ಫೋನ್ ಅನ್ನು ಎತ್ತಿಕೊಂಡು ಅವಳ ಅಮ್ಮನ ಮೊಬೈಲ್‍ನಂಬರಿಗೆ ಫೋನ್ ಮಾಡಿದಳು.

‘ಅಮ್ಮ ನಾಳೆಯಿಂದ ನಮ್ಮ ಮನೆಗೆ ನೀವ್ಯಾರು ಬರೋದು ಬೇಡ.’

ಆಚೆ ಬದಿಯಿಂದ, ‘ಯಾಕೆ ಸುರು, ಏನಾತು ಮಗಳೆ?’

ಅದನ್ನೆಲ್ಲ ಹೇಳಕಾಗಲ್ಲ, ನೀವ್ಯಾರು ನಮ್ಮ ಮನೆಗೆ ಬರೋದು ಬೇಡ, ಅಪ್ಪನಿಗೂ ಹೇಳಿ, ರಾಜೀವಣ್ಣನಿಗೂ ಹೇಳಿ.’

ಮೊಬೈಲ್ ಕರೆಯ ಎಂಡ್ ಕಾಲ್ ಅನ್ನು ಒತ್ತಿದಳು.

ಅಡುಗೆ ಮನೆಗೂ ಮತ್ತು ಅಡುಗೆ ಮೆನಯ ಮುಂದಿನ ಜಾಗಕ್ಕೂ ಒಂದು ಪುಟ್ಟದಾದ ಅಡ್ಡ ಗೋಡೆ. ಅದರ ಮೇಲೆ ಮೊಬೈಲನ್ನು ಇಟ್ಟು ಮತ್ತೆ ಪುಸ್ತಕ ಓದಲು ಮುಂದುವರೆಸಿದಳು.

‘ಇತ್ತೀಚೆಗೆ ಯಾವತ್ತಾದರೂ ಮುಖಕ್ಕೆ ಮುಖ ಕೊಟ್ಟು ಮಾತಾಡಿಸಿದ್ದಿಯಾ? ಡ್ಯೂಟಿಗೆ ಹೋಗೋದು, ಬರೋದು, ಮತ್ತೆ ಸಂಜೆ ಹೊರಗೆ ಹೋದರ ಬರೋದು ರಾತ್ರಿ ಹನ್ನೆರಡೋ ಒಂದೋ. ನಿನ್ನ ಜೊತೆಗೆ ಒಂದು ಜೀವ ಇದೆ ಎನ್ನುವ ಒಂದು ಸೆನ್ಸ್ ಇದೆಯಾ? ಅಪ್ಪ ಅಮ್ಮರ ವಿರೋಧದ ನಡುವೆನೂ ನಿನ್ನ ಮದುವೆ ಆಗಿದ್ದಕ್ಕೆ ಸಾರ್ಥಕ ಆಯಿತು.’

‘ಯಾಕಾದೆ?’

‘ಅದೇ ಆ ಪ್ರಶ್ನೆಯನ್ನು ಸಾವಿರ ಸಲ ಕೇಳಿಕೊಂಡಿರುವೆ. ಸರಿ ಅವರನ್ನು ಬಿಟ್ಟು ಹಾಕು. ನಮ್ಮ ಬದುಕನ್ನು ನಾವು ಯಾಕೆ ಡಿಸ್ಟರ್ಬ್ ಮಾಡಿಕೋ ಬೇಕು?’ ಇಡೀ ಮನೆಯಲ್ಲಿ ನಾನು ಯಾರ ಹತ್ತಿರ ಮಾತಾಡ್ಲಿ, ಏನು ಅನ್ನಲ್ಲ, ಎತ್ತ ಅನ್ನಲ್ಲ, ಯಾಕೆ?’

‘ಅವರು ನನ್ನ ಖಾಸಗೀ ಜೀವನದಲ್ಲಿ ಇಂಟರ್ ಫಿಯರ್ ಆಗೋದು ಬೇಡ.’

‘ಅವರು ಯಾಕೆ ಆಗ್ತಾರೆ, ಅವರಿಗೆ ಬೇಜಾನ್ ಕೆಲಸ. ನಾನು ಎಂದಾದರು ನಿಮ್ಮ ಮನೆಯವರ ವಿಷಯದಲ್ಲಿ ಹಾಗೆ ಹೇಳಿದಿನಾ?’

‘ಅರೆ, ನೀನು ಯಾಕೆ ಹಾಗೆ ಹೇಳ್ತೀಯ? ಅವರೇನು ಅಂಥವರಲ್ಲ.’

‘ಅಂದರೆ?!’

ಅವನಿಂದ ಯಾವ ಮಾತು ಬರಲಿಲ್ಲ.

‘ಹೊರಗಡೆ ನೋಡು ನಿಮ್ಮ ಅಪ್ಪನ ಬಗ್ಗೆ ಏನೆಲ್ಲ ಮಾತಾಡ್ತಾರೆ ಅಂಥ.’

‘ನಿನ್ನ ಬಗ್ಗೆನು ಏನೇನು ಮಾತಾಡ್ತ ಇದಾರೆ ಸ್ವಲ್ಪ ಕೇಳು ಅವರು ಇವರನ್ನು.’

‘ಮಾತಾಡ್ಲಿ. ಐ ಡೋಂಟ್ ಕೇರ್.’

‘ಹಾಗೆ ಅವರದೂ.’

ಅವನು ಏನನ್ನೂ ಮಾತಡಲಿಲ್ಲ.

‘ರಜನಿ ಪ್ಲೀಸ್, ಅವರು ಯಾವುದೋ ಪಕ್ಷಕ್ಕೆ ಸಪೋರ್ಟ್ ಮಾಡಿದರೂ ಅಂತ ನೀನು ಯಾಕೆ ತಲೆ ಕಡೆಸಿಕೊಳ್ಳುವೆ. ಅವರು ಎಂದು ನಿನ್ನನ್ನ ಕೇಳಿಲ್ಲ, ಅದರ ಬಗ್ಗೆ ನನ್ನ ಹತ್ತಿರಾನೂ ಪ್ರಸ್ತಾಪ ಮಾಡಿಲ್ಲ.’

ಈ ಮಾತುಗಳು ಆಡಿದ ಮೇಲೆ, ಒಂದು ವಾರ ಅವರಿಬ್ಬರ ನಡುವೆ ಯಾವ ಮಾತುಗಳು ಹರಿಯಲಿಲ್ಲ. ಒಂದು ವಾರದ ಕಳೆದ ಮೇಲೆ ಒಂದು ಬೆಳಗ್ಗೆ ಎಂದಿನಂತೆ ತಿಂಡಿಯನ್ನು ಮಾಡಿ, ಮತ್ತು ಮಧ್ಯಾಹ್ನಕ್ಕೆ ಅನ್ನ ಸಾಂಬಾರನ್ನು ಮಾಡಿ, ಅವನ ಲಂಚ್ ಬಾಕ್ಸಿನಲ್ಲಿ ಅನ್ನ ಸಾಂಬಾರ್ ಹಾಕಿ, ಮುಚ್ಚುಳವನ್ನು ಮುಚ್ಚಿ ಇಟ್ಟಳು. ತನ್ನ ಲಂಚ್ ಬಾಕ್ಸ್ ನಲ್ಲೂ ಹಾಕಿಕೊಂಡಳು. ತಿಂಡಿಗೆ ಇಡ್ಲಿಯನ್ನು ಮಾಡಿದ್ದಳು. ನಾಲಕ್ಕು ಇಡ್ಲಿಯನ್ನು ತನ್ನ ತಟ್ಟೆಗೆ ಬಡಿಸಿಕೊಂಡು, ಚಟ್ನಿಯನ್ನು ಹಾಕಿಕೊಂಡು ತಿಂದು, ರಜನಿ ಲಂಚ್ ಬಾಕ್ಸ್ ಟೇಬಲ್ ಮೇಲಿಟ್ಟಿರುವೆ. ಇಡ್ಲಿ ಹಾಟ್ ಬಾಕ್ಸನಲ್ಲಿ ಇದ್ದಾವೆ ಎಂದು ಹೇಳಿ ಹೆಗಲಿಗೆ ತನ್ನ ಬ್ಯಾಗನ್ನು ಅದರೊಳಗಡೆ ಮೊಬೈಲ್ ಅನ್ನು ಇಟ್ಟುಕೊಂಡು ಹೊರಟಳು. ರಜನೀಶನ ಕೋಣೆಯಿಂದ ಇವೊತ್ತು ಲಂಚ್ ಬಾಕ್ಸ್ ಬೇಡ ಎನ್ನುವ ಧ್ವನಿ ಕೇಳಿ ಬಂತು.

‘ಮೊದಲೇ ಹೇಳಬಹುದಿತ್ತಲ್ಲ.’

‘ಅರೆ ಕೇಳಬಹುದಿತ್ತಲ್ಲ?’

‘ಅರೆ ನನಗೆ ಏನು ಗೊತ್ತು ನಿನಗೆ ಇವೊತ್ತು ಬೇಕೋ ಬೇಡವೋ ಎಂದು?’

‘ಸರಿ’ಎಂದು ಹೊರಡಲು ಅಣಿಯಾದಳು.

‘ಗೌಡ ಫೋನ್ ಮಾಡಿದ್ದ, ನಿಮ್ಮ ಅಪ್ಪ ತೋಟ ಕೊಂಡುಕೊಂಡರಂತೆ ಎಂದ ರಜನೀಶ್ ಹೊರಗಡೆ ಬಂದು.

‘ಆ ವಿಷಯ ನಿನಗೆ ಯಾಕೆ?’

‘ಗೌಡ ಫೋನ್ ಮಾಡಿದ್ದ, ಮಾತಾಡುವಾಗ ಹೇಳಿದ್ದ. ಅಂದರೆ ಅವನಿಗೆ ಗೊತ್ತಿರುವ ವಿಷಯ ನನಗೆ ಗೊತ್ತಿಲ್ಲ ಅಂಥ ಕೇಳಿದೆ,’ ಎಂದ.

‘ನಾನು ಈ ಮನೆಯಲ್ಲಿ ಇದ್ದೇನೆ ಅಂತ ಭಾವಿಸು ಮೊದಲು. ಅವನು ನನಗೂ ಫ್ರೆಂಡು. ನಿನಗೂ ಫ್ರೆಂಡು. ಹೇಳಿದ್ದರಲ್ಲಿ ತಪ್ಪೇನು? ಸದ್ಯ ಇಷ್ಟಾದರೂ ಮಾತಾಡ್ದಲ್ಲ!’

ಮತ್ತೆ ಮುಂದುವರೆಸಿ, ಅವರು ತಗೊಂಡ್ರೆ ನನಗೂ ಏನು ಆಗಬೇಕಿಲ್ಲ, ನಿನಗೂ ಏನು ಆಗಬೇಕಿಲ್ಲ’, ಎಂದಳು.

ಸ್ಕೂಟಿಯನ್ನು ಚಾಲು ಮಾಡಿಕೊಂಡು ಕಾಲೇಜಿನ ಕಡೆ ಹೊರಟಳು. ಹೆಲ್ಮಟ್ ಒಳಗಡೆ ಅವಳ ಕಣ್ಣುಗಳು ಒದ್ದೆಯಾಗಿದ್ದವು.

ಅವೊತ್ತು ಸಂಜೆ ಡ್ಯೂಟಿ ಮುಗಿಸಿಕೊಂಡವಳು ತನ್ನ ಸ್ಕೂಟಿಯನ್ನು ಬಸ್‍ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿ, ನಿಲ್ದಾಣದ ಒಳಗಡೆ ಹೋದಳು. ನಿಲ್ದಾಣದ ಒಳಗಡೆ ಜನಜಂಗುಳಿ ತುಂಬಿ ಹೋಗಿತ್ತು. ಬಸ್ಸುಗಳು ಬರುತ್ತಾ ಹೋಗುತ್ತಾ ಇದ್ದವು. ಬಸ್ಸಿಗಾಗಿ ಕಾಯುತ್ತ ಕುಳಿತಿರುವ ಜನರ ನಡುವೆ ಒಂದು ಖಾಲಿ ಇದ್ದ ಚೇರಿನಲ್ಲಿ ಹೋಗಿ ಕುಳಿತಳು. ಅವಳ ಕಣ್ಣುಗಳು ಒದ್ದೆಯಾಗಿದ್ದವು. ಕೂತೇ ಇದ್ದಳು. ಬಸ್ಸಿನ ಸದ್ದು, ಜನರ ಸದ್ದು ಕೇಳುತ್ತಲೇ ಇತ್ತು. ಸುಮಾರು ಹೊತ್ತು ಕುಳಿತಳು. ಸುಮ್ಮನೆ. ಮೊಬೈಲನ್ನು ಬ್ಯಾಗಿನಲ್ಲಿ ಇಟ್ಟು ಅದನ್ನು ಸೀಟಿನ ಕೆಳಗಿನ ಲಗೇಜ್ ಬಾಕ್ಸಿನಲ್ಲಿ ಇಟ್ಟು ಬಂದಿದ್ದಳು. ವಾಚನ್ನು ನೋಡಿಕೊಂಡಳು. ಗಂಟೆ ಒಂಬತ್ತು ತೋರಿಸುತ್ತಿತ್ತು. ಎದ್ದಳು. ಸ್ಕೂಟರನ್ನು ನಿಲ್ಲಿಸುವ ಜಾಗದ ಕಡೆ ನಡೆದಳು. ಮತ್ತೆ ಯಾಕೋ ಬೇಡ ಅನ್ನಿಸಿತು. ನಡೆದಳು ನಿಲ್ದಾಣದ ಹೊರಗಡೆ. ಎರಡುಮೂರು ಕಿಲೋಮೀಟರ್ ನಡೆದಳು.

ಸುಜಾತಳ ಮನೆಯ ಮುಂದೆ ಬಂದು ನಿಂತಳು. ಮನೆಯ ಮುಂಭಾಗದ ವರಾಂಡದಲ್ಲಿ ಬೆಳಕು ಇತ್ತು. ಅದನ್ನು ಬಿಟ್ಟರೆ ಇಡೀ ಮನೆ ಕತ್ತಲಲ್ಲಿ ಮುಳುಗಿತ್ತು. ಗೇಟನ್ನು ತೆರೆಯಲು ಹೋದಳು. ಅದರ ಬೀಗವನ್ನು ಹಾಕಲಾಗಿತ್ತು. ಸುಜಿ ಎಂದಳು. ವರಾಂಡದ ಬೆಳಕಲ್ಲಿ ಅವಳ ಸ್ನೇಹಿತೆ ಸುಜಾತ ಒಬ್ಬಳೇ ವಾಕ್ ಮಾಡುತ್ತಿದ್ದಳು ಆಕಡೆಯಿಂದ ಈಕಡೆಗೆ ಈಕಡೆಯಿಂದ ಆಕಡೆಗೆ. ಯಾರು ಎನ್ನುತ್ತ ಸುಜಾತ ಗೇಟಿನ ಬಳೀ ಹೋದಳು. ಅರೆ ಸುರಗಿ. ವಾಟ್ ಅ ಸರ್ಪ್ರೈಸ್! ಅವಳ ಮುಖದ ಭಾವವನ್ನು ಕತ್ತಲಲ್ಲಿ ಗುರುತಿಸಲು ಆಗಲಿಲ್ಲ. ವರಂಡದ ಬೆಳಕಲ್ಲಿ ಅವಳ ಮುಖವನ್ನು ನೋಡಿದಳು. ತುಂಬಾ ಸೊರಗಿದಂತೆ ಇತ್ತು. ‘ಸುರು, ಸುರು ಯಾಕೆ ಏನಾಯ್ತು?’

ಸುರಗಿ ಅಳತೊಡಗಿದಳು. ಮಾತಾಡಲಿಲ್ಲ.

‘ತುಂಬಾ ಬೇಜಾರಾಗ್ತಿದೆ. ಈ ಬದುಕೇ ಬೇಡ ಅನ್ನಿಸುತ್ತಿದೆ ಕಣೆ ಸುಜಿ’ ಅಂದಳು ಸುರಗಿ. ದುಃಖ ಉಮ್ಮಳಿಸಿ ಬರುತ್ತಿತ್ತು. ಮತ್ತೆ ಮುಂದುವರೆಸಿ, ನನಗೆ ಇಷ್ಟೊಂದು ಬೇಸರ ಎಂದೂ ಆಗಿರಲಿಲ್ಲ. ಬದುಕು ಸಾಕಿನ್ನಿಸುತ್ತಿದೆ. ಇಷ್ಟಪಟ್ಟವರೇ ಇಷ್ಟಪಡುತ್ತಿಲ್ಲ.’

‘ಜಗಳ ಆಯ್ತಾ?’

‘ನನಗೆ ನನ್ನ ಮನೆ ನನ್ನದು ಅನ್ನಿಸುತ್ತಿಲ್ಲ’.

‘ಹಲೋ, ಅದರಲ್ಲಿ ನಿನ್ನದೂ ಪಾಲಿದೆ, ನೀನು ಬ್ಯಾಂಕಿನಿಂದ ಲೋನ್ ತೆಗೆದಿದ್ದೀಯಾ.’

‘ಇರಬಹುದು, ಆದರೆ ನನಗೆ ಯಾರೂ ಬೇಡ, ಏನೂ ಬೇಡ. ಹ್ಯಾಪಿನೆಸ್ಸೇ ಇಲ್ಲ ಅಂದಮೇಲೆ ಅದನ್ನು ತಗೊಂಡು ಏನು ಮಾಡ್ತೀಯಾ, ನಾನು ಎಲ್ಲರನ್ನೂ ಬಿಟ್ಟು ಯಾರನ್ನು ಇಷ್ಟಪಟ್ಟೆನೋ ಅವರೇ ನನ್ನ ಇಷ್ಟ ಪಡುತ್ತಿಲ್ಲ. ಯಾಕೋ ರಜನೀಶನ ಜೊತೆ ಬದುಕು ತುಂಬಾ ಕಿರಿಕಿರಿ ಅನ್ನಿಸುತ್ತಿದೆ. ಹಿತವಾದ ಅನುಭವವೇ ಆಗ್ತಿಲ್ಲ.’

ಇದೇನು ಹೊಸದಲ್ಲ ಬಿಡು, ಇಂತಹವು ಸಾವಿರ ಆಗಿದ್ದಾವೆ ಆಗಲೆ.

‘ಯಾಕೋ ನನಗೆ ಬೇರೆ ಇರುಬೇಕು ಅನ್ನಿಸುತ್ತಿದೆ.’

‘ಆ ಮಾತೆಲ್ಲ ಇರಲಿ. ಬೆಳಗ್ಗೆ ಮಾತಾಡೋಣ. ಊಟ ಆಯ್ತಾ, ಇಲ್ಲ ಅನ್ನಿಸುತ್ತೆ, ಬಾ ಊಟ ಮಾಡೋಣ ಎಂದು ಒಳ ಕರೆದುಕೊಂಡು ಹೋದಳು ಅವಳನ್ನು. ‘ಇದೇನು ಎಲ್ಲ ಲೈಟ್ಸ್ ಆಫ್ ಆಗಿವೆ. ಎಲ್ಲರೂ ಮಲಗಿದರೂ ಅನ್ನಿಸುತ್ತೆ’ ಎಂದುಕೊಂಡು ಕಿಚನ್ ಗೆ ಹೋದಳು. ‘ಸುರು ವಾಶ್ ರೂಮಿಗೆ ಹೋಗಿ ಫ್ರೆಶ್ ಅಪ್ ಆಗಿ ಬಾ, ಊಟ ಮಾಡಿ ಒಂದು ನಿದ್ದೆ ಮಾಡು ಎಲ್ಲ ಸರಿಯೋಗುತ್ತೆ’ ಎಂದಳು.

ಮರುದಿನ ಬೆಳಗ್ಗೆ ಐದುಗಂಟೆಗೆ ಎಚ್ಚರವಾಯಿತು ಸುರಗಿಗೆ. ವಾಶ್ ರೂಮಿಗೆ ಹೋದಳು. ಇವಳು ಎದ್ದು ವಾಶ್ ರೂಮಿಗೆ ಹೋಗಿದ್ದ ಸದ್ದನ್ನು ಕೇಳಿ ಸುಜಾತ ಎದ್ದು ಬಂದಳು. ‘ಯಾಕೆ ಇಷ್ಟು ಬೇಗ ಎದ್ದೆ, ನಿದ್ದೆ ಬರಲಿಲ್ಲವಾ?’ಎಂದು ರಾತ್ರಿ ಅವಳಿಗೆ ಉಡುಪನ್ನು ಬದಲಾಯಿಸಿಲು ಕೊಟ್ಟಿದ್ದ ಉಡುಪು ಅಲ್ಲೆ ಇದ್ದದ್ದನ್ನು ನೋಡಿ ಯಾಕೆ ಡ್ರಸ್ ಚೇಂಜ್ ಮಾಡಿಲ್ಲ ಎಂದು ಕೇಳಬೇಕೆಂದು ಕೊಂಡವಳು ಕೇಳದೆ ಸುಮ್ಮನಾದಳು. ಅವಳ ಮುಖವನ್ನು ನೋಡಿದಳು. ನಿನ್ನೆ ರಾತ್ರಿ ಬಾಡಿದ್ದ ಮುಖದಲ್ಲಿ ಗೆಲುವು ಕಾಣಿಸುತ್ತಿತ್ತು. ‘ಮತ್ತೆ ಕಾಲೇಜಿನಲ್ಲಿ ಸಿಗುವೆ, ಟೈಮಾಗುತ್ತೆ, ಬರುತ್ತೀನಿ’ ಎಂದಳು ಸುರುಗಿ.

ಸುಜಾತ ಏನನ್ನೂ ಮಾತಡಾಲಿಲ್ಲ. ಕಾಫಿ ಮಾಡ್ತೀನಿ ತಡಿ ಎಂದಳು. ಅವಳು ಕೊಟ್ಟ ಕಾಫಿಯನ್ನು ಕುಡಿದು ಹೊರಗೆ ಬಂದು, ಚಪ್ಪಲಿ ಹಾಕಿಕೊಳ್ಳ ತೊಡಗಿದಳು. ಡ್ರಾಪ್ ಮಾಡುತಿನಿ ತಡೆ, ಸ್ಕೂಟಿದು ಕೀ ತರುವೆ ಎಂದಳು. ಬೇಡ ಪ್ಲೀಸ್ ಎಂದು ಬಸ್ಸು ನಿಲ್ದಾಣದ ಕಡೆ ಹೆಜ್ಜೆ ಹಾಕತೊಡಗಿದಳು. ಬಸ್ ನಿಲ್ದಾಣಕ್ಕೆ ಹೋಗಿ, ತಾನು ನಿಲ್ಲಿಸಿದ್ದ ಸ್ಕೂಟರನ್ನು ಹೊರ ತೆಗೆದುಕೊಂಡು ಬಂದಳು. ಪಾರ್ಕಿಂಗ್ ಗೇಟಿನ ಬಳಿ ಇದ್ದ ಗಾರ್ಡ್‍ಗೆ ಹಣವನ್ನು ಕೊಟ್ಟು, ಸ್ವಲ್ಪ ದೂರ ಸ್ಕೂಟರನ್ನು ಚಾಲು ಮಾಡಿಕೊಂಡು ಬಂದು ಸರ್ಕಲ್ ಬಳಿ ನಿಲ್ಲಿಸಿದಳು. ಆಮೇಲೆ ಸೀಟನ್ನು ಎತ್ತಿ ಅಲ್ಲಿ ಇಟ್ಟಿದ್ದ ಮೊಬೈಲನ್ನು ಎತ್ತಿಕೊಂಡು ಸ್ವಿಚ್ ಆಫ್ ಮಾಡಿದ್ದ ಮೊಬೈಲ್ ಫೋನನ್ನು ಆನ್ ಮಾಡಿದಳು. ಯಾವ ಮಿಸ್ಡ್ ಕಾಲುಗಳು ಬಂದಿರಲಿಲ್ಲ. ಅಟ್ ಲೀಸ್ಟ್ ಒಂದು ಕಾಲಾದರು ಇಲ್ಲ, ಥೂ ಇವನ್ಯಾವ ಸೀಮೆ ಗಂಡನೋ ಏನೋ ಎಂದು ಶಪಿಸಿಕೊಂಡಳು. ಅಲ್ಲ ಒಂದು ಕನ್ಸರ್ನ್, ಥೂ ಹಾಳಾಗಿ ಹೋಗಲಿ ಬಿಡು ಎಂದು ಕೊಂಡು ಮತ್ತೆ ಸ್ಕೂಟರನ್ನು ಚಾಲು ಮಾಡುತ್ತಿದ್ದಳು. ಅಷ್ಟೊತ್ತಿಗೆ ಅವಳ ಬಳಿ ಒಂದು ಹುಡುಗ ಓಡಿ ಬಂದು ಮೇಡಮ್ ಸೊಪ್ಪು ಬೇಕಾ ಸೊಪ್ಪು , ನಿನ್ನೆ ಸಂಜೆ ಕಿತ್ತುಕೊಂಡು ಬಂದಿದ್ದು, ಫ್ರೆಶ್ಶಾಗಿದೆ ಮೇಡಮ್. ನಮ್ಮ ಹೊಲುದ್ದು, ತಗೊಳ್ಳಿ ಮೇಡಮ್ಮ, ಬೋಣಿ ಮಾಡಿ ಮೇಡಮ್ಮ, ಒಂದು ಸಿವುಡು ಹೆಚ್ಚೆ ಕೊಡ್ತಿನಿ ಎಂದನು. ಅವನ ಆಕರ್ಷಕ ಕಣ್ಣುಗಳನ್ನೇ ನೋಡುತ್ತ ನಿಂತಳು. ಮೇಡಮ್ಮ ತಗೊಳಿ ಮೇಡಮ್ ಚೆನ್ನಾಗಿದೆ ಎಂದ ಮತ್ತೆ. ಎಷ್ಟನೇ ಕ್ಲಾಸು ಎಂದು ಕೇಳಿದಳು. ಸೆವೆಂಥ್ ಮೇಡಮ್. ಅಪ್ಪ? ಅಮ್ಮ? ಮೇಡಮ್ಮ ನಮ್ಮ ವಂಸನೇ ಸೊಪ್ಪು ಮಾರೋದು ಮೇಡಮ್ಮ. ಅಪ್ಪ ಅಮ್ಮ ಇಬ್ಬರೂಸೊಪ್ಪು ಮಾರುತ್ತಾರೆ. ಅವರಿಬ್ಬರು ಒಂದೊಂದು ಏರಿಯಾಕ್ಕೆ ಹೋಗಿದ್ದಾರೆ. ನಮ್ಮಜ್ಜಿನೂ ಸೊಪ್ಪು ಮಾರುತ್ತಾಳೆ ಎಂದ. ಅದಕ್ಕೆ ಅವಳು ನಕ್ಕು, ಚೆನ್ನಾಗಿ ಮಾತಾಡ್ತಿಯ ಕಣೋ ಎಂದು ಐವತ್ತು ರುಪಾಯಿದು ಕೊಡು ಎಂದು ನೂರರ ನೋಟನ್ನು ಅವನ ಕೈಗೆ ಇಟ್ಟು ಸ್ಕೂಟರಿನ ಸೀಟನ್ನು ಎತ್ತಿ, ಅದರಿಂದ ಒಂದು ಬಟ್ಟೆಯ ಬ್ಯಾಗನ್ನು ಎತ್ತಿಕೊಂಡು ಅದರಲ್ಲಿ ಸೊಪ್ಪನ್ನು ಇಟ್ಟು ಅದನ್ನು ಅವಳು ಕೂರುವ ಎರಡು ಕಾಲುಗಳ ನಡುವೆ ಇದ್ದ ಬ್ಯಾಗನ್ನು ನೇತುಹಾಕಲು ಮಾಡಿದ್ದ ಕೊಂಡಿಗೆ ಅದನ್ನು ನೇತು ಹಾಕಿದಳು. ಮೇಡಮ್ ಚೇಂಜ್ ಎಂದು ಐವತ್ತರ ನೋಟನ್ನು ಹಿಡಿದು ಕೈ ಚಾಚಿದ. ನಿನ್ನ ಹೆಸರೇನೋ ಮರಿ ಎಂದಳು ರಾಜುಕುಮಾರ ಮೇಡಮ್ ಎಂದ. ಉಳಿದ ಐವತ್ತ ರುಪಾಯಿ ನೀನೆ ಇಟ್ಟುಕೋ, ಏನಾದರು ತಗೊ ಅದಕ್ಕೆ ಎಂದಳು. ಬೇಡ ಮೇಡಮ್ ನಮ್ಮಜ್ಜಿ ಬೈತಾಳೆ. ಜೇಬಲ್ಲಿ ದುಡ್ಡು ಕಂಡರೆ ದುಡ್ಡು ಕದಿಯುವುದು ಯಾವಗ ಸ್ಟಾಟ್ ಮಾಡಿದೆ ಎಂದು ರಂಪ ಮಾಡ್ತಾಳೆ ಎಂದ. ಕದ್ದಿದ್ದಲ್ಲ ಅಂಥ ಹೇಳೋ. ಇವೊತ್ತು ನಿಮ್ಮ ಫ್ರೆಂಡ್ಸ್ ಜೊತೆ ಸೇರಿ ಚಾಕಲೇಟು ತಿನ್ನೋ ಎಂದಳು. ಸರಿ ಮೇಡಮ್ ನಾಳೆ ಮತ್ತೆ ಸೊಪ್ಪು ಕೊಡ್ತಿನಿ ಎಂದ. ನಾಳೆ ಏನೂ ಬೇಡ ಯಾವತ್ತಾದರೂ ತಗಂಡ್ರೆ ಆಯ್ತು ಎಂದು, ಸ್ಕೂಟರನ್ನು ಚಾಲುಮಾಡಿಕೊಂಡು ಹೊರಟಳು. ಅವಳು ಕುಳಿತಿದ್ದ ಗಾಡಿ ಅವಳನ್ನು ತನ್ನ ಪಾಡಿಗೆ ತಾನು ರೂಢಿಗತದಲ್ಲಿ ಅವಳ ಗೇಟಿನ ಮುಂದೆ ತಂದು ನಿಲ್ಲಿಸಿತು. ಸೂರ್ಯ ತನ್ನ ಬೆಳಕನ್ನು ಅವಳು ಬೆಳೆಸಿದ್ದ ಗಿಡಗಳ ಸಂದಿಯಲ್ಲಿ ಕಳುಹಿಸಿ ಕುರುಹುಗಳನ್ನು ಚೆಲ್ಲಿದ್ದ. ಸ್ಕೂಟರಿನ ಕೀ ಬಂಚಿನಲ್ಲಿಯೇ ಇದ್ದ ಕೀಯೊಂದರಲ್ಲಿ ಗೇಟಿನ ಬೀಗವನ್ನು ತೆರೆದಳು. ಸ್ಕೂಟರನ್ನು ಮೆಲ್ಲ ತಳ್ಳಿ ದೇವಗಣಗಿಲೆ ಗಿಡದ ಅಡಿಯಲ್ಲಿ ನಿಲ್ಲಿಸಿದಳು. ನೆಲದ ತುಂಬ ದೇವಗಣಗಿಲೆ ಹೂವುಗಳು ಚೆಲ್ಲಿಕೊಂಡು ಬಿದ್ದಿದ್ದವು. ಗುಲಾಬಿ ಹೂವು ಎರಡು ದಿನದಿಂದ ನಗುತ್ತಲೇ ಇತ್ತು. ಗಿಡದಲ್ಲಿ. ದಾಸವಾಳದ ಮೊಗ್ಗು ಇನ್ನು ಒಂದು ಸ್ವಲ್ಪ ಹೊತ್ತಿನಲ್ಲಿ ಅರಳುತಲಿತ್ತು. ಹುಲ್ಲು ಹಸಿಬಿಸಿಲ ಹಿತವನ್ನು ಅನುಭವಿಸುತ್ತಿದ್ದವು. ಎಲ್ಲ ಗಿಡಗಳನ್ನು ತನ್ನ ಬೆರಳುಗಳಲ್ಲಿ ಸವರುತ್ತ ಅಡ್ಡಾಡಿದಳು. ಮೊಟರ್ ಆನ್ ಮಾಡಿ ನೀರಿನ ಪೈಪನ್ನುಹಿಡಿದು ಎಲ್ಲ ಗಿಡಕ್ಕೂ ನೀರನ್ನು ಬಿಟ್ಟಳು. ಹೊರಗಿನ ಪೊರಕೆಯನ್ನು ತೆಗೆದುಕೊಂಡು ಬಾಗಿಲ ಬಳಿಯ ಕಸವನ್ನು ಗುಡಿಸಿ, ನೀರು ಚಿಮುಕಿಸಿ ಕಾಲಿಂಗ್ ಬೆಲ್ಲು ಹೊತ್ತಿದಳು. ಒಳಗಿಂದ ಯಾವ ಸದ್ದು ಕೇಳಿಸಲಿಲ್ಲ. ಇವನೇನು ಅರಾಮಾಗಿ ಇನ್ನೂಮಲಗಿಕೊಂಡಿದ್ದಾನಲ್ಲ, ಎಂದು ಕೊಳ್ಳುತ್ತ ರಜನಿ, ರಜನಿ ಎಂದಳು. ಅವಳ ಗಂಡ ರಜನೀಶ್ ಬಂದು ಬಾಗಿಲನ್ನು ತೆರೆಯಲಿಲ್ಲ. ತನ್ನಲ್ಲಿದ್ದ ಕೀಯಿಂದ ಬಾಗಿಲ ತೆಗೆದು ತಳ್ಳಿದಳು ಅದು ಹಿಂದಕ್ಕೆ ಹೋಗಲಿಲ್ಲ, ಮೋಸ್ಟ್ಲಿ ಒಳಗಿನ ಅಗುಳಿಯನ್ನು ಹಾಕಿರಬೇಕು ಎಂದು ಕೊಂಡಳು. ಮತ್ತೆ ರಜನಿ ರಜನಿ ಎಂದು ಕೂಗಿದಳು. ಸ್ವಲ್ಪ ಹೊತ್ತಿನ ನಂತರ ರಜನೀಶ್ ಬಾಗಿಲು ತೆರೆದ. ಇನ್ನೂ ಈಗಷ್ಟೇ ಎದ್ದು ಬಂದಿರುವುದು ಅವನ ಮೈಯಿ ಹೇಳುತ್ತಿತ್ತು. ಒಂದು ಫೋನ್ ಮಾಡೋಕೆ ಆಗಲಿಲ್ಲ, ಯಾಕಿಂಗೆ ಮಾಡ್ತೀಯ ಹ್ಞಾ ಎಂದಳು ಸಿಟ್ಟಿನಿಂದ. ನಿಮ್ಮ ಅಮ್ಮನ ಮನೆಗೆ ಹೋಗಿರೋಳು ನೀನೇ ಒಂದು ಫೋನ್ ಮಾಡಿಲ್ಲ, ನಿನಗೆ ನಮ್ಮ ಬದುಕಿನ ಬಗ್ಗೆ ಗ್ಯಾನ ಇದ್ದರೆ ತಾನೆ, ಎಂದ ಮಾತಿಗೆ ಸಿಟ್ಟನ್ನು ತಡೆದುಕೊಳ್ಳಲು ಆಗದೆ ಮೇಜಿನ ಮೇಲಿದ್ದ ನೀರಿನ ಗ್ಲಾಸನ್ನು ಎತ್ತಿಕೊಂಡು ಚಟಾರ್ ಅಂಥ ನೆಲಕ್ಕೆ ಒಗೆದಳು. ಅದರ ಚೂರುಗಳು ಇಡೀ ಹಾಲಿನ ತುಂಬ ಚೆಲ್ಲಿ ಹೋದವು. ಹೋಗಿ ಸೋಫಾದೊಳಗೆ ಬಿದ್ದುಕೊಂಡಳು.

ಗೋಡೆಯ ಮೇಲಿನ ಗಡಿಯಾರ ಓಡುತ್ತಿತ್ತು. ಎದ್ದಳು. ಪೊರಕೆಯನ್ನು ತೆಗೆದುಕೊಂಡು ಮನೆಯೊಳಗಿನ ಕಸವನ್ನು ಗುಡಿಸಿ, ಮತ್ತು ಚೂರಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಗಾಜಿನ ದೊಡ್ಡ ದೊಡ್ಡ ತುಣುಕುಗಳನ್ನು ಎತ್ತಿ ಮೊರದಲ್ಲಿ ಹಾಕಿಕೊಂಡು, ಉಳಿದದ್ದನ್ನು ತುಂಬಾ ಎಚ್ಚರಿಕೆಯಿಂದ ಗುಡಿಸಿಕೊಂಡು ಮೊರದಲ್ಲಿತುಂಬಿಕೊಂಡು ಹೊರಗಿನ ಕಸದ ಬುಟ್ಟಿಯಲ್ಲಿ ಹಾಕಿ ಒಳಬಂದಳು. ಅವಳು ಗ್ಯಾಸಿನ ಒಲೆಗೆ ಲೇಟರಿನ ಕಿಡಿ ತಾಗಿಸಿ ಬೆಂಕಿ ಹಚ್ಚುವುದನ್ನು ಹಳೆಯ ಪುಸ್ತಕಗಳು, ಹೊಸ ಪುಸ್ತಕಗಳು, ಪೆನ್ನು, ನೋಟ್ ಪುಸ್ತಕಗಳು, ಖಾಲಿ ಕಾಗದಗಳು, ಕಾಗದದ ಹೊತ್ತಿಗೆ, ಸೀಸದ ಕಡ್ಡಿ, ಮೆಂಡರ್, ಅಳಿಸುವ ರಬ್ಬರ್, ತೆಂಗಿನ ಹುರಿ, ಕಬ್ಬಿಣದ ಗೋದ್ರೇಜ್ ಬೀರು, ಟಿ.ವಿ. ಫ್ರಿಡ್ಜ್, ಮಿಕ್ಸರ್ ಗ್ರೈಂಡರ್, ಅನ್ನದ ಚಮಚ, ತಿಂಡಿ ತಿನ್ನುವ ಚಮಚಗಳು, ಸಾರನ್ನು ಮಸೆಯುವ ಮರದ ಮಸಗೋಲು, ಚಿಕ್ಕ ಮಜ್ಜಿಗೆ ಕಡೆಯುವ ಕಡಗೋಲು, ಮೂಲೆಯಲ್ಲಿನ ಬುದ್ಧನ ವಿಗ್ರಹ, ಹೂವಿನ ಕುಂಡ, ಮಚ್ಚು, ಊಟದ ತಟ್ಟೆಗಳು, ಅಡುಗೆ ಪಾತ್ರೆಗಳು, ದವಸ ಮಾಡುವ ಜರಡಿ, ಮೊರಗಳು, ಟೀಪಾಯಿ, ಚೇರು, ದವಸ ತುಂಬಿರುವ ಡಬ್ಬಿಗಳು, ಊದುಬತ್ತಿ, ಕಾಯಿ ತುರಿಯುವ ಮಣೆ, ಚಾಕು, ಲೈಟರು , ಅಕ್ವೇರಿಯಮ್ಮಿನಲ್ಲಿ ಆಡುತ್ತಿರುವ ಮೀನುಗಳು, ರೊಟ್ಟಿ ತಟ್ಟುವ ಮಣೆ, ಲಟ್ಟಣಿಗೆ,, ಬಾಣಲೆ, ದೋಸೆ ಹಂಚು, ಚಪಾತಿ ಹೆಂಚು, ಪಡ್ಡಿನ ಹಂಚು, ಮುದ್ದೆ ದುಂಡುಗೆ ಮಾಡುವ ಮರದ ಕೈ ಮಣೆ, ಉಪ್ಪಿನ ಪಿಂಗಾಣಿ ಜಾಡಿ, ಉಪ್ಪಿನ ಕಾಯಿ ಜಾಡಿ, ಹಪ್ಪಳಗಳನ್ನು ತುಂಬಿಕೊಂಡಿರುವ ಕೊಳಗ, ಹಪ್ಪಳ ಒತ್ತುವ ಕಬ್ಬಿಣದ ಪ್ರಸ್ಸರ್, ಶಾವಿಗೆ ಒತ್ತುವ ಮರದ ಶಾವಿಗೆ ಒರಳು, ಚಕ್ಕಲಿ ಒರಳು, ಇಡ್ಲಿ ಪಾತ್ರೆ, ಕುಟ್ಟಣಿಗೆ, ಕೇಕ್ ಮಾಡುವ ಅವನ್, ಸಿಲೆಂಡರ್, ಗಾಜಿನ ಲೋಟಗಳು, ಪಿಂಗಾಣಿ ಕಪ್ಪು ಮತ್ತು ಸಾಸರುಗಳು, ತರಕಾರಿ ಕತ್ತರಿಸುವ ಹಲಗೆ, ಪುಟ್ಟ ಕೊರಡು, ವಾಟರ್ ಫಿಲ್ಟರ್, ಮರದ ಸೋಫಾ ಸೆಟ್, ಮಂಚಗಳು, ಕನ್ನಡಿ, ವಾಡ್ರಾಬ್, ಬಾಚಣಿಗೆಗಳು, ಕೊಡೆಗಳು, ಮೂಲೆಯಲ್ಲಿ ಧೂಳು ತುಂಬಿಕೊಂಡು ಕುಳಿತಿರುವ ಟೇಪ್ ರೆಕಾರ್ಡರ್, ರೇಡಿಯೋ, ಮೊಬೈಲ್, ಲ್ಯಾಪ್ ಟಾಪು, ಟ್ಯಾಬು, ಇನ್ ವರ್ಟರ್, ತಂಬಿಗೆ, ಬಿಂದಿಗೆ, ಲೋಟಗಳು, ಗಡಿಯಾರಗಳು, ಅಡುಗೆ ಕೋಣೆ, ಅದರ ಮುಂದಿನ ವಿಶಾಲ ಜಾಗ, ಅಲ್ಲೇ ಇರುವ ಊಟದ ಮೇಜು, ಮಲಗುವ ಕೋಣೆಗಳು, ಮುಂದಿನ ಸಿಟ್ ಓಟ್, ವೆರೆಂಡಾ, ಗೋಡೆ, ಕಿಟಕಿ, ಬಾಗಿಲುಗಳು, ಫ್ಯಾನುಗಳು, ಚಾಪೆ, ಊಟದ ಮಣೆ, ಮಣ್ಣಿನ ದೀಪ, ಬೆಳ್ಳಿ ದೀಪ, ವಿದ್ಯುತ್ ದೀಪಗಳು, ತರಕಾರಿ ಬುಟ್ಟಿ, ಹಣ್ಣಿನ ಬುಟ್ಟಿ, ಹರಿಶಿಣ ಕುಂಕುವದ ಭರಣಿ, ಅಡಿಕೆ ಕತ್ತರಿಸುವ ಕತ್ತರಿ, ಅಡುಗೆ ಮನೆಯ ಕತ್ತರಿ, ಬಣ್ಣ ಬಣ್ಣದ ಜಮಖಾನಗಳು, ಸೂಜಿ, ದಾರ, ಬಿಳಿಬಣ್ಣದ ಹೊಲಿಗೆಯಂತ್ರ, ನೇತಾಡುತ್ತಿರುವ ಗಾಳಿಘಂಟೆ, ಶೂಗಳು, ಚಪ್ಪಲಿಗಳು, ಗೋಡೆಯ ಮೇಲೆ ನಗುತ್ತಿರುವ ಪುಟ್ಟ ಮಗುವಿನ ಫೋಟೋ, ಶೋಕೇಸಿನಲ್ಲಿ ತಲೆ ಅಲ್ಲಾಡಿಸುತ್ತಿರುವ ಚನ್ನಪಟ್ಟಣದ ಗೊಂಬೆಗಳು ನೋಡುತ್ತಿದ್ದವು. ಬೆಂಕಿ ಉರಿಯುತ್ತಿದ್ದುದನ್ನು ಅವಳು ನೋಡುತ್ತಿದ್ದಳು. ಅವೆಲ್ಲವೂ ಅವಳನ್ನು ನೋಡುತ್ತಿದ್ದವು. ಎಲ್ಲಾ ವಸ್ತುಗಳು ಅವಳನ್ನು ನೋಡುತ್ತಿದ್ದವು. ಬೆಂಕಿ ಉರಿಯುತ್ತಿತ್ತು.

***

 

ಎಚ್‌.ಆರ್‌. ರಮೇಶ

ಹೊಸ ತಲೆಮಾರಿನ ಪ್ರತಿಭಾವಂತ ಕವಿ ಎಚ್.ಆರ್. ರಮೇಶ್ ಮೂಲತಃ ಚಿತ್ರದುರ್ಗದ ಬಳಿಯ ಹರಿಯಬ್ಬೆಯವರು. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ್ ಕೆಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಹೊಸ ತಲೆಮಾರಿನ ವಿಮರ್ಶಕರಾಗಿಯೂ ಗುರುತಿಸಿಕೊಂಡಿರುವ ಇವರು ಸಮಕಾಲೀನ ಲೇಖಕರ ಕೃತಿಗಳ ಕುರಿತು ವಿಮರ್ಶೆಗಳನ್ನು ಬರೆಯುತ್ತಾರೆ, ಕಥೆ, ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. ಮತ್ತೊಂದು ಕೃತಿ ‘ಅದರ ನಂತರ’ ಪ್ರಕಟವಾಗಿದೆ. 

More About Author